ನೌಕರರಿಗೆ ಉದ್ಯಮಿಯ ದೀಪಾವಳಿ ಗಿಫ್ಟ್ : 400 ಫ್ಲಾಟ್, 1260 ಕಾರ್ ಉಡುಗೊರೆ  

ಟೀಮ್ ವೈ.ಎಸ್.ಕನ್ನಡ 

0

ಸಾಮಾನ್ಯವಾಗಿ ಬಾಸ್ ಅಂದಾಕ್ಷಣ ಗತ್ತು, ಗೈರತ್ತು, ನೌಕರರ ಮೇಲೆ ದರ್ಪ ತೋರೋದು ಸಾಮಾನ್ಯ. ಕೆಲವು ಕಡೆ ಮಾಲೀಕರು ಸರಿಯಾಗಿ ಸಂಬಳ ಕೊಟ್ರೆ ಅದೇ ದೊಡ್ಡ ವಿಚಾರ. ಆದ್ರೆ ಸೂರತ್​ನ ಉದ್ಯಮಿಯೊಬ್ಬರದ್ದು ನಿಜಕ್ಕೂ ದೊಡ್ಡ ಮನಸ್ಸು. ಹರೇ ಕೃಷ್ಣ ಎಕ್ಸ್​ಪೋರ್ಟ್ಸ್​ ಕಂಪನಿಯ ಮಾಲೀಕರು ಧಾರಾಳ ಮನಸ್ಸಿನಿಂದ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆ ಕೊಟ್ಟಿದ್ದಾರೆ. ಅದೇನ್ ಗೊತ್ತಾ? 400 ಫ್ಲಾಟ್ಗಳು ಮತ್ತು 1260 ಕಾರುಗಳು.

ಸೂರತ್​ನ ಸಾವ್ಜಿ ಢೋಲಕಿಯಾ ವಜ್ರ ಮತ್ತು ಬಟ್ಟೆ ವ್ಯಾಪಾರಿ, ಉದ್ಯಮದಲ್ಲಿ ಭಾರೀ ಯಶಸ್ಸು ಕಂಡಿರೋ ಅವ್ರು ಬಿಲಿಯನೇರ್. ದೀಪಾವಳಿ ಬೋನಸ್ ಅಂತಾ ನೌಕರರಿಗೆ ಫ್ಲಾಟ್ ಮತ್ತು ಕಾರುಗಳನ್ನು ಕೊಟ್ಟಿದ್ದಾರೆ. ``ಈ ವರ್ಷ ಉತ್ತಮವಾಗಿ ಕಾರ್ಯನಿರ್ವಹಿಸಿದ 1726 ನೌಕರರನ್ನು ಆಯ್ಕೆ ಮಾಡಿದ್ದೆವು. ಯಾರ ಬಳಿ ಕಾರು ಇದೆಯೋ ಅವರಿಗೆ ಫ್ಲಾಟ್ ಕೊಡುತ್ತಿದ್ದೇವೆ. ಯಾರ ಬಳಿ ಮನೆಯಿದ್ದು, ಕಾರ್ ಇಲ್ಲವೋ ಅವರಿಗೆ ಕಾರ್ ಗಿಫ್ಟ್ ಕೊಡುತ್ತಿದ್ದೇವೆ'' ಅಂತಾ ಸಾವ್ಜಿ ತಿಳಿಸಿದ್ದಾರೆ. ಉದ್ಯೋಗಿಗಳಿಗೆ ಬಂಪರ್ ಗಿಫ್ಟ್ ಕೊಡಲು ಕಾರಣ ಈ ವರ್ಷ ಕಂಪನಿ ಸ್ವರ್ಣ ಮಹೋತ್ಸವದ ಸಂಭ್ರಮದಲ್ಲಿದೆ.

ನೌಕರರಿಗೆ ದೀಪಾವಳಿ ಬೋನಸ್ ಕೊಡಲು ಸಾವ್ಜಿ ಢೋಲಕಿಯಾ 51 ಕೋಟಿ ರೂಪಾಯಿ ಖರ್ಚು ಮಾಡ್ತಿದ್ದಾರೆ. ಮುಂದಿನ 5 ವರ್ಷಗಳವರೆಗೆ ಪ್ರತಿ ತಿಂಗಳು 5000 ರೂಪಾಯಿಯಂತೆ ಕಂತಿನಲ್ಲಿ ಹಣ ಕಟ್ಟಬೇಕು. ಇದರಲ್ಲಿ ಅರ್ಧದಷ್ಟನ್ನು ಹರೇ ಕೃಷ್ಣ ಎಕ್ಸ್​ಪೋರ್ಟ್ಸ್​ ಕಂಪನಿ ಪಾವತಿಸಲಿದೆ. ಸಾವ್ಜಿ ಅವರ ಬಗ್ಗೆ ನೌಕರರಿಗೆ ಅತಿಯಾದ ವಿಶ್ವಾಸವಿದೆ, ಅವರನ್ನು ಎಲ್ರೂ ಕಾಕಾ ಎಂದೇ ಕರೆಯುತ್ತಾರೆ. ``ಫ್ಲಾಟ್ಗಳು ಅತ್ಯಂತ ಕಡಿಮೆ ದರಕ್ಕೆ ಅಂದ್ರೆ 15 ಲಕ್ಷ ರೂಪಾಯಿಗೆ ಸಿಗುತ್ತಿವೆ. ತಿಂಗಳ ಕಂತಿನಲ್ಲಿ ಹಣ ಕಟ್ಟಬೇಕು. 5 ವರ್ಷಗಳ ನಂತರ ನೌಕರರು ಹಣ ಕಟ್ಟಲು ಆರಂಭಿಸ್ತಾರೆ, ಅದು ಕೂಡ 11,000 ರೂಪಾಯಿ.

ಸಾವ್ಜಿ ಢೋಲಕಿಯಾ ಅವರ ಹರೇ ಕೃಷ್ಣ ಎಕ್ಸ್​ಪೋರ್ಟ್ಸ್​ನಲ್ಲಿ 5500 ಉದ್ಯೋಗಿಗಳಿದ್ದಾರೆ. ಕಂಪನಿಯ ವಾರ್ಷಿಕ ವಹಿವಾಟು 6600 ಕೋಟಿ ರೂಪಾಯಿ. ಕಳೆದ ವರ್ಷ ಕೂಡ ಸಂಸ್ಥೆ ತನ್ನ ನೌಕರರಿಗೆ ದೀಪಾವಳಿ ಉಡುಗೊರೆಯಾಗಿ 491 ಕಾರ್​ಗಳು ಮತ್ತು 200 ಫ್ಲಾಟ್ಗಳನ್ನು ನೀಡಿತ್ತು. ``ವಜ್ರ ಪಾಲಿಶ್ ಮಾಡುವವರನ್ನು ನಾವು ನೌಕರರಂತೆ ನೋಡುವುದಿಲ್ಲ, ಬದಲಾಗಿ ನಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತೇವೆ. ಅವರೆಲ್ಲರೂ ನಮ್ಮವರೇ, ನಮ್ಮದೇ ಏರಿಯಾದವರು. ಕಂಪನಿಯಲ್ಲಿ ಅವರ ಕಾರ್ಯತತ್ಪರತೆಗೆ ಅನುಗುಣವಾಗಿ ಗಿಫ್ಟ್ ಕೊಟ್ಟಿದ್ದೇವೆ'' ಅಂತಾ ಸಾವ್ಜಿ ಖುಷಿಯಿಂದ ಹೇಳಿಕೊಂಡಿದ್ದಾರೆ. ನಿಜಕ್ಕೂ ಸಾಹುಕಾರ ಹೇಗಿರ್ಬೇಕು ಅನ್ನೋದಕ್ಕೆ ಇವರೇ ಸಾಕ್ಷಿ. 

ಇದನ್ನೂ ಓದಿ...

ಐಟಿ-ಬಿಟಿಗೆ ಮಾತ್ರವಲ್ಲ- ಸ್ಟಾರ್ಟ್​ಅಪ್​ಗೂ ಇಲ್ಲಿದೆ ಪ್ಲೇಸ್​

ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಹೊಸ ಕನಸು- ಬಜೆಟ್​ನಲ್ಲಿ ನಿಮ್ಮ ಐಡಿಯಾಗಳಿಗೂ ಇದೆ ಬೆಲೆ