ದೇಶ ಆಳುವವರಿಗೆ ಬಿಹಾರ ಪಾಠ

ಟೀಮ್​​ ವೈ.ಎಸ್​​

0

ಬಿಹಾರದ ಫಲಿತಾಂಶ ಇಡೀ ದೇಶದಲ್ಲೇ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಫಲಿತಾಂಶದ ಪರಿಣಾಮ ಬಹುವಿಧವಾಗಿ ಕಾಣಲಿದೆ. ಭಾರತವು ಅತ್ಯಂತ ಸಂಕೀರ್ಣ ಪರಿಸ್ಥಿತಿಯಲ್ಲಿ ಹಾದು ಹೋಗುತ್ತಿರುವ ವೇಳೆಯಲ್ಲೇ ಈ ಚುನಾವಣೆ ನಡೆದಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಸ್ವತಂತ್ರ, ಅಧುನಿಕ, ಜಾತ್ಯತೀತ, ಬಹುಸಂಖ್ಯಾತ ವ್ಯವಸ್ಥೆಯ ಭಾರತವು ಅಪಾಯದಲ್ಲಿದೆ. ಭಾರತವು ಸ್ವತಂತ್ರ, ಸರ್ವಹಿತ ರಾಷ್ಟ್ರವಾಗಿ ಉಳಿಯುವುದೇ ಅಥವಾ ಮೂಲಭೂತವಾದಿ, ಸಂಪ್ರದಾಯವಾದಿ ಶಕ್ತಿಗಳ ಕೈಗೆ ಹೋಗುವುದೇ ಎನ್ನುವ ಪ್ರಶ್ನೆಗಳು ಎದ್ದಿವೆ. ದಾಳಿಯು ಕ್ರೂರವಾಗಿತ್ತು. ಬಹುಶ: ಮೊತ್ತಮೊದಲ ಬಾರಿಗೆ ಭಾರತದಲ್ಲಿ ಆಹಾರ ಪದ್ಧತಿ ಮತ್ತು ಆಹಾರ ಸೇವನೆಯ ಕಾರಣಕ್ಕೆ ಕೊಲೆಯಾಗಿದೆ. ಒಬ್ಬರ ವಿಚಾರವನ್ನು ಪಾಲಿಸುತ್ತಿಲ್ಲ ಎನ್ನುವ ಕಾರಣಕ್ಕೆ ಮತ್ತೊಬ್ಬರ ಹತ್ಯೆಯಾಗಿದೆ.

ಪ್ರಜಾಪ್ರಭುತ್ವ ರಾಷ್ಟ್ರವಾಗಿ, ನಮಗೆ ತುಂಬಾ ಸಮಸ್ಯೆಗಳಿವೆ. ಆದರೆ, ಭಾರತವು ಮೂಲಭೂತವಾಗಿ, ಸೈದ್ಧಾಂತಿಕವಾಗಿ ಜಾತ್ಯತೀತವಾಗಿದ್ದು, ವೈವಿಧ್ಯತೆಯಲ್ಲೂ ಏಕತೆ ಬಯಸುವ ದೇಶ ಎಂದು ನಾವು ನಂಬಿದ್ದೇವೆ. ಬಹುಸಂಖ್ಯಾತ ಸಿದ್ದಾಂತವು ನಮ್ಮ ದೇಶದ ಹಾಲ್​ಮಾರ್ಕ್ ಆಗಿದೆ. ಭಾರತವು ಎಂದಿಗೂ ಕೋಮುವಾದಿ ಅಜೆಂಡಾವನ್ನು ಬೆಂಬಲಿಸಿಲ್ಲ ಅಥವಾ ಭಾರತದ ಮೂಲ ತತ್ವಗಳನ್ನು ವಿರೋಧಿಸುವ ಯಾವುದೇ ಶಕ್ತಿಗಳನ್ನು ಸಹಿಸಿಕೊಂಡಿಲ್ಲ.

ಆದರೆ ಕಳೆದ ಕೆಲವು ತಿಂಗಳುಗಳಿಂದ ಆಳುವ ವರ್ಗವು ಕೆಲವು ಅನಪೇಕ್ಷಿತ ಘಟನೆಗಳಿಗೆ ಮೌನವಾಗಿದೆ ಅಥವಾ ದೇಶವನ್ನು ಮಧ್ಯಕಾಲೀನ ಯುಗಕ್ಕೆ ಕೊಂಡೊಯ್ಯಲು ಇಚ್ಚಿಸುತ್ತಿರುವ ಶಕ್ತಿಗಳ ಜೊತೆ ಸೇರಿಕೊಂಡಂತಿದೆ. ಭಾರತವು ಎಂದಿಗೂ ಸಹಿಷ್ಣುತೆಗೆ ಹೆಸರುವಾಸಿಯಾಗಿದೆ. ಇಷ್ಟೊಂದು ವೈವಿಧ್ಯಮಯ ಸಮಾಜದಲ್ಲೂ ಪ್ರಜಾಪ್ರಭುತ್ವವನ್ನು ಯಶಸ್ವಿಯಾಗಿ ಅಳವಡಿಸಿ, ಮುಂದುವರಿಸಿಕೊಂಡು ಹೋಗುತ್ತಿರುವುದಕ್ಕೆ ವಿಶ್ವಸಮುದಾಯದಿಂದ ಶ್ಲಾಘನೆಗೆ ಪಾತ್ರವಾಗಿದೆ. ಆದರೆ, ಅಲ್ಪಸಂಖ್ಯಾತರನ್ನು ಎರಡನೇ ದರ್ಜೆ ನಾಗರಿಕರನ್ನಾಗಿಸುವ ಪ್ರಯತ್ನ ಕೈಗೂಡಿದಲ್ಲಿ, ಆಗ ಅದಕ್ಕೆ ಜನಾದೇಶ ಇದೆಯೋ ಇಲ್ಲವೋ ಎಂಬುದನ್ನು ನಾವು ಪ್ರಶ್ನಿಸಬೇಕಾಗುತ್ತದೆ.

ಬಿಹಾರದ ಫಲಿತಾಂಶವು, ಈ ಎಲ್ಲದಕ್ಕೂ ತಕ್ಕ ಉತ್ತರ ಕೊಟ್ಟಿದೆ. ಇದರ ಫಲಿತಾಂಶವು ತುಂಬಾ ಸ್ಪಷ್ಟವಾಗಿದೆ. ಭಾರತದ ಜಾತ್ಯತೀತ ತಳಹದಿಯನ್ನು ಅಸ್ತವ್ಯಸ್ಥಗೊಳಿಸುವ ಯಾವುದೇ ಪ್ರಯತ್ನ ಸಹಿಸಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದೆ. ಭಾರತವು ಆಧುನಿಕ ಪ್ರಜಾಸತ್ತಾತ್ಮಕ ಸ್ವತಂತ್ರ ದೇಶವಾಗಿದೆ. ಇದು ಹಾಗೆಯೇ ಉಳಿಯಲಿದೆ. 21ನೇ ಶತಮಾನದಲ್ಲಿ ಒಡೆದು ಆಳುವುದಕ್ಕೆ ಅವಕಾಶವಿಲ್ಲ. ಇದೇ ಆಧಾರದಲ್ಲಿ ನಿತೀಶ್-ಲಾಲೂ ಜೋಡಿ ಗೆದ್ದಿದೆ. ಇದು ಭರ್ಜರಿ ವಿಜಯ. ಅವರ ಸಾಮಾಜಿಕ ತಳಹದಿ, ಅದರ ಸ್ವರೂಪವು ಭಾರತದ ಮೂಲತತ್ವಗಳ ಜೊತೆ ಹೊಂದಾಣಿಕೆಯಾಗಿದ್ದು, ಇದು ಮನುಕುಲಕ್ಕೆ ದೊಡ್ಡ ಕೊಡುಗೆಯಾಗಿದೆ. ಇವರೆಲ್ಲರಿಗೂ ಭಾರತದ ಸಂವಿಧಾನವು ಜೀವನ ಕಲ್ಪಿಸಿದೆ. ಶತಮಾನಗಳ ಕಾಲ ಈ ಸಮುದಾಯಗಳನ್ನು ಸಮಾನವಾಗಿ ಕಂಡಿರಲಿಲ್ಲ. ಒಂದು ನಿರ್ಣಾಯಕ ಬಟನ್ ಒತ್ತುವ ಮೂಲಕ, ತಾವು ದೇಶದ ಅತ್ಯಂತ ಶಕ್ತಿಶಾಲಿ ಸಮುದಾಯಗಳಿಗೆ ಸಮಾನರೆಂದು ಘೋಷಿಸಿಕೊಂಡಿದ್ದಾರೆ. ದಲಿತರು ಮತ್ತು ಹಿಂದುಳಿದ ವರ್ಗಗಳು ತಮ್ಮ ಸಂಖ್ಯಾಬಲದಿಂದ ದೊಡ್ಡ ಸಮುದಾಯವಾಗಿದ್ದು, ಅವರು ಯಾವುದೇ ಗುಂಪಿನೊಂದಿಗೆ ಗುರುತಿಸಿಕೊಂಡಿರಲಿಲ್ಲ. ಬಿಹಾರ ಚುನಾವಣೆಯು, ಸಾಮಾಜಿಕವಾಗಿ ಅಸಮಾನರಾಗಿರುವ, ಸಮಾಜದ ಚಾಲಕ ಶಕ್ತಿಯಾಗಲು ಹವಣಿಸುತ್ತಿರುವ, ಅವರದ್ದೇ ಆದ ಮುಖ್ಯವಾಹಿನಿ ರಚಿಸಲು ಯೋಚಿಸುತ್ತಿರುವ ಸಮುದಾಯಗಳ ವಿಜಯೋತ್ಸವವಾಗಿದೆ.

ಲಾಲೂ ಅವರನ್ನು ನೋಡಿ ಯಾರು ಬೇಕಾದರೂ ಕಿಚಾಯಿಸಬಹುದು. ಆದರೆ, ಅವರು ನಿಸ್ಸಂಶಯವಾಗಿ, ಕ್ರಾಂತಿಕಾರಿ ವಿಚಾರಗಳನ್ನು ಪ್ರತಿಪಾದಿಸುವ ನಾಯಕತ್ವ ಹೊಂದಿದ್ದಾರೆ. ಧ್ವನಿಯೇ ಇಲ್ಲದ ಲಕ್ಷಾಂತರ ಮಂದಿಗೆ ಧ್ವನಿ ನೀಡಿದ್ದಾರೆ. ಮಂಡಲ್ ಆಯೋಗದ ಶಿಫಾರಸ್ಸು ಜಾರಿಯಾದ ಬಳಿಕ, ಅವಕಾಶ ವಂಚಿತ ಮುಖ್ಯವಾಹಿನಿಯಿಂದ ದೂರ ಉಳಿದ ವರ್ಗಗಳನ್ನು ಒಗ್ಗೂಡಿಸಲು ನೆರವಾಯಿತು. ಆದರೆ, ನಾವು, ಉನ್ನತ ವರ್ಗಕ್ಕೆ ಸೇರಿದ ಮಂದಿ ಈ ಸತ್ಯವನ್ನು ಅರಿಯುವಲ್ಲಿ ವಿಫಲರಾದೆವು. ಇಂತಹ ಶೋಷಿತ ಸಮುದಾಯವನ್ನು ಮುಖ್ಯವಾಹಿನಿಗೆ ಸೇರಿಸದೇ ಹೋದರೆ, ಭಾರತದ ಪ್ರಜಾಪ್ರಭುತ್ವವು ಅಸಂಪೂರ್ಣವಾಗಿರುತ್ತದೆ. ಈ ನಿಟ್ಟಿನಲ್ಲಿ ಲಾಲೂ ಅವರು ಮಹತ್ವದ ಭೂಮಿಕೆ ನಿಭಾಯಿಸಿದರು. ಆದರೆ, ಅವರ ಸಮಸ್ಯೆಯೇನೆಂದರೆ, ಅವರು ಈ ಸಮುದಾಯಗಳನ್ನು ಆರ್ಥಿಕವಾಗಿ ಬಲಿಷ್ಟಗೊಳಿಸುವ ದೂರದೃಷ್ಟಿಹೊಂದಿರಲಿಲ್ಲ.

ನಿತೀಶ್ ಅವರು ಹೊಸ ಮಾದರಿಯನ್ನು ಅಳವಡಿಸಿದರು. ಶೋಷಿತ ವರ್ಗಕ್ಕೆ ಸಂಖ್ಯಾಬಲದ ಜೊತೆ ಆರ್ಥಿಕ ಶಕ್ತಿ ಬೇಕು ಎನ್ನುವುದನ್ನು ನಿತೀಶ್ ಮನಗೊಂಡರು. ಅವರು ಈ ವರ್ಗಗಳಿಗೆ ನೇರ ಲಾಭ ಕೊಡುವ ಹೊಸ ಯೋಜನೆಗಳನ್ನು ಆರಂಭಿಸಿದರು. 9 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರೂ, ಅವರ ವಿರುದ್ಧ ವೈಯುಕ್ತಿಕವಾಗಿ ಅಥವಾ ಸರ್ಕಾರಿ ಮಟ್ಟದಲ್ಲಿ ಯಾವುದೇ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗದಿರುವುದೇ ಅಚ್ಚರಿ. ಅವರು ಮಹಾಮೈತ್ರಿಕೂಟದ ಮುಖ್ಯಸ್ಥರಾಗಿದ್ದಾರೆ. ಬಿಹಾರಕ್ಕೆ ನಿತೀಶ್ ಸಾಮರ್ಥ್ಯದ ಮೇಲೆ ಭರವಸೆ ಇತ್ತು ಮತ್ತು ನಂಬಿಕೆ ಇತ್ತು. ಇದಕ್ಕೆ ಪ್ರತಿಯಾಗಿ ಬಿಜೆಪಿಗೆ ಯಾವುದೇ ಮುಖವಿರಲಿಲ್ಲ. ಅಂದ, ಹಾಗೆ ಬಿಜೆಪಿ ವಿಚಾರಕ್ಕೆ ಬಂದರೆ ಅವರ ಅಭಿವೃದ್ಧಿ ಅಜೆಂಡಾವು ಕೋಮುವಾದಿ ಪ್ರಕ್ರಿಯೆಗಳ ಮುಂದೆ ಗೌಣವಾಗಿ ಕಂಡವು. ಮೋದಿಯವರು ಖುದ್ದಾಗಿ ಪ್ರಚಾರ ಸಾರಥ್ಯ ವಹಿಸಿದ್ದರೂ, ಪ್ರಧಾನಿಯಾಗಿ ಅವರ ಕಾರ್ಯವೈಖರಿ ಕಂಡ ಜನ ನಿತೀಶ್ರಿಗಿಂತ ಉತ್ತಮ ಸರ್ಕಾರವನ್ನು ಅವರ ಬಿಜೆಪಿ ಕೊಡಲು ಸಾಧ್ಯವಿಲ್ಲ ಎನ್ನುವ ನಿರ್ಣಯಕ್ಕೆ ಬಂದಿದ್ದರು.

ಬಿಹಾರದ ಜನತೆ ಬಡವರಾಗಿರಬಹುದು, ಹೆಚ್ಚಿನ ಶಿಕ್ಷಣ ಪಡೆಯದೇ ಇರಬಹುದು, ಆದರೆ ಅವರ ಮಣ್ಣು ಎಂದಿಗೂ ಕ್ರಾಂತಿಕಾರಿ ಮಣ್ಣಾಗಿದೆ. ಇದೇ ಬಿಹಾರ 70ರ ದಶಕದಲ್ಲಿ ಇಂದಿರಾಗಾಂಧಿಯವರ ಸರ್ವಾಧಿಕಾರಿ ಧೋರಣೆ ವಿರುದ್ಧ ಸಿಡಿದೆದ್ದಿತ್ತು. ಇದೇ ನೆಲದಲ್ಲಿ ಲಾಲ್ಕೃಷ್ಣ ಅಡ್ವಾಣಿಯವರ ಕೋಮು ನಿರ್ದೇಶಿತ ರಥಯಾತ್ರೆಯು ಸ್ಥಗಿತಗೊಂಡಿತ್ತು. ಈ ಮಣ್ಣಿನಲ್ಲಿ ಕಳೆದ 30 ವರ್ಷಗಳಲ್ಲಿ ಯಾವುದೇ ದೊಡ್ಡ ಪ್ರಮಾಣದ ಕೋಮುಗಲಭೆ ಸಂಭವಿಸಿಲ್ಲ. ಈ ಫಲಿತಾಂಶವು ಒಂದನ್ನಂತೂ ಸ್ಪಷ್ಟವಾಗಿ ಹೇಳಿದೆ. ಈ ದೇಶ ಸೂಪರ್ ಪವರ್ ಆಗಿ ಹೊರಹೊಮ್ಮಬೇಕಾದರೆ, ಭಾರತದ ವೈವಿಧ್ಯತೆಯನ್ನು ಗೌರವಿಸಲೇಬೇಕು, ದೇಶದ ಜಾತ್ಯತೀತ ನಿಲುವುಗಳನ್ನು ನಂಬಲೇಬೇಕು. ಸುದೀರ್ಘಕಾಲದಿಂದ ತುಳಿತಕ್ಕೊಳಗಾಗಿರುವ ಸಮುದಾಯಗಳನ್ನು ಜೊತೆಗೆ ಕೊಂಡೊಯ್ಯಬೇಕು. ಜನರು ಭಯ ಮತ್ತು ಅವರ ಮನಸ್ಸು ಸ್ವತಂತ್ರವಾಗಿ ಇರದೇ ಹೋದರೆ, ಆರ್ಥಿಕ ಅಭಿವೃದ್ಧಿ ಸಾಧ್ಯವೇ ಇಲ್ಲ. ಇದು ಬಿಹಾರ ಚುನಾವಣೆಯ ಅತಿಮುಖ್ಯ ಸಂದೇಶವಾಗಿದೆ. ಈಗ ಚುನಾವಣೆ ಮುಗಿದು ಸಂದೇಶ ಸಿಕ್ಕಿರುವುದರಿಂದ ದೇಶವನ್ನು ಮುನ್ನಡೆಸುತ್ತಿರುವವರು, ಜನರ ಮನಸ್ಸನ್ನು ಅರಿತುಕೊಂಡು ಕೆಲಸ ಮಾಡಬೇಕಾಗಿದೆ.