ನಾವು ಮರೆತ ನಮ್ಮ ನೆಲದ ಗ್ರೇಟೆಸ್ಟ್ ಗಣಿತಜ್ಞ ವಶಿಷ್ಟ ನಾರಾಯಣ್ ಸಿಂಗ್

ಟೀಮ್​ ವೈ.ಎಸ್​. ಕನ್ನಡ

1

1972ರಲ್ಲಿ ಭಾರತೀಯರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ವೀಸಾ ಪಡೆದುಕೊಳ್ಳಲು ಹಾತೊರೆಯುತ್ತಿದ್ದರೆ, ಒಬ್ಬ ಪ್ರಬುದ್ಧ ಗಣಿತಶಾಸ್ತ್ರದ ಪರಿಣಿತ ಮಾತ್ರ ಭಾರತಕ್ಕೆ ವಾಪಾಸು ಬರುತ್ತಾರೆ. ಅವರು ಬೇರೆ ಯಾರು ಅಲ್ಲ, ಅವರೇ ಸರ್ವಶ್ರೇಷ್ಟ ಗಣಿತಶಾಸ್ತ್ರಜ್ಞ ವಸಿಷ್ಟ ನಾರಾಯಣ್ ಸಿಂಗ್. ಕೇವಲ ಭಾರತದ ಶೈಕ್ಷಣಿಕ ವಾತಾವರಣವನ್ನು ಅಭಿವೃದ್ಧಿಗೊಳಿಸಬೇಕು ಅನ್ನುವ ನಿಸ್ಪೃಹ ಉದ್ದೇಶದಿಂದ ಭಾರತಕ್ಕೆ ಮರಳಿದವರು ವಸಿಷ್ಟ ನಾರಾಯಣ್ ಸಿಂಗ್. ಆದರೆ ಏನೋ ಆಗಬೇಕಿದ್ದ ಮಹತ್ವಾಕಾಂಕ್ಷಿ ತಮ್ಮ ಬದುಕಿನಲ್ಲಿ ಎದುರಾದ ತೀವ್ರ ಸಂಕಷ್ಟವೊಂದರ ಕಾರಣ ಸರಿಸುಮಾರು ಒಂದಿಡೀ ದಶಕದಷ್ಟು ಕಾಲ ನೇಪಥ್ಯಕ್ಕೆ ಸರಿದರು. ಎರಡುಮೂರು ವರ್ಷ ಅಜ್ಞಾತವಾಸವನ್ನೂ ಅನುಭವಿಸಿದರು. ಅವರ ಜೀವನವೇ ಒಂದು ಸಂಘರ್ಷ.

ವಸಿಷ್ಟ ನಾರಾಯಣ್ ಸಿಂಗ್ ಜನಿಸಿದ್ದು 1942ರ ಏಪ್ರಿಲ್ 2ರಂದು, ಬಿಹಾರದ ಭೋಜಪುರ ಜಿಲ್ಲೆಯ ಬಸಂತಪುರ ಅನ್ನುವ ಗ್ರಾಮದಲ್ಲಿ. ಅವರ ತಂದೆ ಲಾಲ್ ಬಹದ್ದೂರ್ ಸಿಂಗ್ ತಾಯಿ ಲಹಾಸೋ ದೇವಿ. ನೆಟರ್ಹಟ್ ರೆಸಿಡೆನ್ಷಿಯಲ್ ಸ್ಕೂಲ್​ನಲ್ಲಿ ಹಾಗೂ ಪಾಟ್ನಾ ಸೈನ್ಸ್ ಕಾಲೇಜಿನಲ್ಲಿ ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸವನ್ನು ಸಿಂಗ್ ಪೂರ್ಣಗೊಳಿಸ್ತಾರೆ. ವಸಿಷ್ಟ್ ನಾರಾಯಣ್ ಸಿಂಗ್ ಯಾಕೆ ಲೆಜೆಂಡ್ ಎಂದರೆ, ಪಾಟ್ನಾ ಯೂನಿವರ್ಸಿಟಿಯಲ್ಲಿ ಗಣಿತಶಾಸ್ತ್ರದ ಮೇಲಿನ ತಮ್ಮ ಬಿಎಸ್ಸಿ ಮೂರು ವರ್ಷಗಳ ವಿದ್ಯಾಭ್ಯಾಸವನ್ನು ಕೇವಲ ಒಂದೇ ವರ್ಷದಲ್ಲಿ ಮುಗಿಸಿ ಜಗತ್ತನ್ನೇ ನಿಬ್ಬೆರಗಾಗಿಸ್ತಾರೆ. ಕ್ಯಾಲಿಫೋರ್ನಿಯಾ ವಿವಿಯಲ್ಲಿ ಅವರು ಪಿಹೆಚ್​ಡಿಗಾಗಿ ಬರೆಯುವ ಥೀಸಿಸ್ ಅತ್ಯಂತ ಕಠಿಣ ವಿಷಯವಾದ "ರಿಪ್ರೊಡ್ಯೂಸಿಂಗ್ ಕೆರ್ನೆಲ್ಸ್ ಎಂಡ್ ಆಪರೇಟರ್ಸ್ ವಿತ್ ಎ ಸೈಕ್ಲಿಕ್ ವೆಕ್ಟರ್". ವಸಿಷ್ಟ ನಾರಾಯಣ್ ಸಿಂಗ್​ರಿಗೆ ಸಂಶೋಧನಾ ಮಾರ್ಗದರ್ಶಿಯಾಗಿದ್ದಿದ್ದು ಅಮೇರಿಕಾದ ಹೆಸರಾಂತ ಗಣಿತ ಶಾಸ್ತ್ರಜ್ಞ ಜಾನ್ ಎಲ್ ಕೆಲ್ಲಿ.

ಇದನ್ನು ಓದಿ: "ಕಾಮಿಡಿ ಕಿಲಾಡಿ" ಶಿವರಾಜ್ ಕೆ.ಆರ್.ಪೇಟೆ

1961ರಲ್ಲಿ ಬಿಹಾರ ಬೋರ್ಡ್​ನಲ್ಲಿ ಮೆಟ್ರಿಕ್ಯುಲೇಶನ್ ಪಾಸ್ ಮಾಡಿದ ವಸಿಷ್ಟ ನಾರಾಯಣ್ ಸಿಂಗ್, ಅದೇ ವರ್ಷ ಪಾಟ್ನಾದ ಸುಪ್ರಸಿದ್ಧ ಸೈನ್ಸ್ ಕಾಲೇಜು ಸೇರುತ್ತಾರೆ. ಬಳಿಕ 1963ರಲ್ಲಿ ಬರ್ಕ್ಲೀಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಜಾನ್ ಎಲ್ ಕೆಲ್ಲಿ ಅವರ ಬಳಿ ಗಣಿತಶಾಸ್ತ್ರ ಅಭ್ಯಾಸ ಮಾಡಲು ತೆರಳುತ್ತಾರೆ. ಅಲ್ಲಿ 1963ರಿಂದ 1969ರವರೆಗೆ ಗಣಿತದಲ್ಲಿ ವಿಶೇಷ ಎಂಎಸ್ ಸಿ ಕಲಿಯುತ್ತಾರೆ. 1969ರಲ್ಲಿ ಕ್ಯಾಲಿಫೋರ್ನಿಯಾ ವಿವಿಯಲ್ಲಿಯೇ ಪಿಹೆಚ್​ಡಿ ಕೂಡ ಮುಗಿಸುತ್ತಾರೆ. ಯುಎಸ್ಎನ ವಾಷಿಂಗ್ಟನ್ ಡಿಸಿಯಲ್ಲಿರುವ ಪ್ರತಿಷ್ಟಿತ ನಾಸಾ ಸಂಸ್ಥೆಯಲ್ಲಿ ಸಹಾಯಕ ವಿಜ್ಞಾನಿ ಹಾಗೂ ಪ್ರಾದ್ಯಾಪಕರಾಗಿ ನೇಮಕರಾಗ್ತಾರೆ. ಅಲ್ಲಿಂದ 1972ರವರೆಗೂ ನಾಸಾದಲ್ಲಿ ಸೇವೆ ಸಲ್ಲಿಸುವ ವಸಿಷ್ಟ ನಾರಯಾಣ್ ನಂತರ ಭಾರತಕ್ಕೆ ಮರಳುತ್ತಾರೆ. 1972ರಲ್ಲಿ ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುವ ಅವರು, ಐದಾರು ವರ್ಷಗಳ ಕಾಲ ಕಾನ್ಪುರ ಐಐಟಿ, ಬಾಂಬೆಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಕೋಲ್ಕತ್ತಾದ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್​ಗಳಲ್ಲಿ ಸೇವೆ ಸಲ್ಲಿಸುತ್ತಾರೆ.

ಮಹತ್ತರವಾದ ಗುರಿ ಹಾಗೂ ಉದ್ದೇಶ ಹೊಂದಿದ್ದ ವಸಿಷ್ಟ ನಾರಾಯಣ್ ಸಿಂಗ್​ರ ಬದುಕಿನಲ್ಲಿ ಅದೃಷ್ಟ ಅತಿ ದೊಡ್ಡ ಹೊಡೆತ ನೀಡುತ್ತದೆ. 1977ರಲ್ಲಿ ಸ್ಕೀಝೋಫ್ರೇನಿಯಾ ಅನ್ನೋ ಮಾನಸಿಕ ವ್ಯಾಧಿಗೆ ತುತ್ತಾಗುವ ಸಿಂಗ್, ಈಗಿನ ಜಾರ್ಖಂಡ್ ರಾಜಧಾನಿ ರಾಂಚಿಯ ಮಾನಸಿಕ ಚಿಕಿತ್ಸಾ ಆಸ್ಪತ್ರೆಗೆ ದಾಖಲಾಗುತ್ತಾರೆ. 1977ರಿಂದ 1988ರ ನಡುವಿನ ಸುದೀರ್ಘ 11 ವರ್ಷ ರಾಷ್ಟ್ರದ ಒಬ್ಬ ಅತ್ಯುತ್ತಮ ಮೇಧಾವಿ ಗಣಿತ ಶಾಸ್ತ್ರಜ್ಞ ಪ್ರಪಂಚದ ವ್ಯವಹಾರಗಳೇ ತಿಳಿಯದೆ ಹುಚ್ಚನಂತೆ ಬದುಕುತ್ತಾರೆ. ಅದಕ್ಕಿಂತ ಬೇಸರದ ಸಂಗತಿ ಅಂದರೆ 1988ರಲ್ಲಿ ಅವರು  ಮನೆಯಲ್ಲಿ ಯಾರ ಗಮನಕ್ಕೂ ಬಾರದಂತೆ ತೊರೆದು ಹೋಗುತ್ತಾರೆ. ಸುಮಾರು 1992ರ ವರೆಗೆ ಅವರ ಬಗ್ಗೆ ಯಾವ ಸುಳಿವೂ ಸಿಗುವುದಿಲ್ಲ. 1992ರ ಫೆಬ್ರವರಿ ತಿಂಗಳಿನಲ್ಲಿ ಬಿಹಾರದ ಸಿವಾನ್​ನಲ್ಲಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಸಿಂಗ್ ಪತ್ತೆಯಾಗುತ್ತಾರೆ. ಅದಾದ ಬಳಿಕ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ಮುಂದುವರೆಸಲಾಗಿದೆ. 1974ರಲ್ಲಿ ಸಿಂಗ್ ಮದುವೆಯಾಗುತ್ತಾರಾದರೂ ಅವರಿಗಿದ್ದ ಮಾನಸಿಕ ವ್ಯಾದಿಯ ಕಾರಣ ಅವರ ಪತ್ನಿ ಅವರನ್ನು ತೊರೆಯುತ್ತಾರೆ.

ವಸಿಷ್ಟ ನಾರಾಯಣ ಸಿಂಗ್, ಖಂಡಿತವಾಗಿಯೂ ರಾಷ್ಟ್ರ ಕಂಡ ಅಪ್ರತಿಮ ಮೇಧಾವಿ ಅನ್ನೋದರಲ್ಲಿ ಎರಡನೇ ಮಾತಿಲ್ಲ. ವಸಿಷ್ಟ, "ಸೈಕ್ಲಿಕ್ ವೆಕ್ಟರ್ ಸ್ಪೇಸ್" ಎನ್ನುವ ವಿಷಯದಲ್ಲಿ ಅವರ ಪಾಂಡಿತ್ಯ ಅಗಾಧ. ಕೇವಲ ಹದಿನೆಂಟು ತಿಂಗಳಲ್ಲಿ ಎಮ್.ಎಸ್ಸಿ. ಮತ್ತು ಪಿಎಚ್​ಡಿ ಎರಡನ್ನೂ ಸಾಧಿಸಿದ, ತನ್ಮೂಲಕ ಇದುವರೆಗೂ ಯಾರಿಂದಲೂ ಮುರಿಯಲಾಗದ ದಾಖಲೆಯನ್ನು ಅವರು ಬರೆದಿದ್ದರು. ಈಗ್ಗೆ ಎರಡ್ಮೂರು ವರ್ಷಗಳ ಹಿಂದಷ್ಟೇ, ತನ್ನ ಮಾನಸಿಕ ಸಮಸ್ಯೆಯಿಂದ ಹೊರಬಂದು ಮತ್ತೆ ಕಾಲೇಜೊಂದರಲ್ಲಿ ಗಣಿತ ಪ್ರಾಧ್ಯಾಪಕರಾಗಿ ಸೇರಿದ್ದರು. 2014ರ ನಂತರ ಮಾಧೇಪುರದ ಭೂಪೇಂದ್ರ ನಾರಾಯಣ್ ಮಂಡಲ ಯೂನಿವರ್ಸಿಟಿಯಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಸಿಷ್ಟ ನಾರಾಯಣ್ ಸಿಂಗ್ ಬದುಕಿನ ಕುರಿತು 'ಏಳು ಸಾವಿರ ವರ್ಷ ಬದುಕಿದ ಮನುಷ್ಯ' ಅನ್ನೋ ಪುಸ್ತಕದಲ್ಲಿ ನುಡಿಚಿತ್ರ ಹೊರಬಂದಿದೆ.

ವಸಿಷ್ಟ ನಾರಾಯಣ್ ಸಿಂಗ್, ಯಾವುದೇ ಸೆಲೆಬ್ರಿಟಿ ಅಲ್ಲ, ಕ್ರಿಕೆಟರ್ ಅಥವಾ ಸಿನಿಮಾ ತಾರೆಯಲ್ಲ. ಹಾಗಾಗಿ ನಮ್ಮ ಘನ ಸರ್ಕಾರ ಯಾವುದೇ ನೆರವು, ಪ್ರಶಸ್ತಿ, ಪುರಸ್ಕಾರ ನೀಡಿಲ್ಲ. ಇನ್ನು ಅವರು ಟಿಆರ್​ಪಿ ಸರಕಲ್ಲ ಅನ್ನೋ ಕಾರಣಕ್ಕಾಗಿ ನಮ್ಮ ಸೋ ಕಾಲ್ಡ್ ಸಾಮಾಜಿಕ ಕಳಕಳಿಯಿರುವ ಮಾಧ್ಯಮಗಳ ಕಣ್ಣಿಗೆ ಇವರ ಸಾಧನೆ ಬೀಳುವುದೇ ಇಲ್ಲ. ಜಗದ್ವಿಖ್ಯಾತ ಸೈಂಟಿಸ್ಟ್ ಆಲ್ಬರ್ಟ್ ಐನ್​ಸ್ಟೈನ್​ರ ಮಹತ್ಸಾಧನೆ "E=MC2" ಅನ್ನುವ ಫಾರ್ಮುಲಾವನ್ನು, ಸಾಪೇಕ್ಷತಾ ಸಿದ್ದಾಂತವನ್ನು ಚಾಲೆಂಜ್ ಮಾಡಿದ್ದು ನಮಗಾರಿಗೂ ಸಾಧನೆ ಅಂತ ಅನ್ನಿಸಲೇ ಇಲ್ಲ. ಪ್ರಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್​ಸ್ಟೈನ್​ರ ಥಿಯರಿಗಳಿಗೆ ಪ್ರತಿಸವಾಲು ಹಾಕಿದ ಗಣಿತಜ್ಞ ವಸಿಷ್ಟ ನಾರಾಯಣ್ ಸಿಂಗ್ ಬದುಕನ್ನು ತೆರೆಯ ಮೇಲೆ ತರಲು ಬಾಲಿವುಡ್​ನ ಅನುರಾಗ್ ಕಷ್ಯಪ್ ಪ್ರಯತ್ನಿಸ್ತಿದ್ದಾರೆ. ಒಂದರ್ಥದಲ್ಲಿ ನಮ್ಮ ನಡುವಿನ ಮರೆತು ಹೋಗಿರುವ  ಹೀರೋ ವಸಿಷ್ಟ ನಾರಾಯಣ್ ಸಿಂಗ್ ಸಾಧನೆ ಹೀಗಾದರೂ ಬಹಿರಂಗವಾಗುತ್ತಿದೆ ಅನ್ನುವುದೇ ಸಮಾಧಾನಕರ ಸಂಗತಿ.

ಇದನ್ನು ಓದಿ:

1. ಫರ್ನಿಚರ್​ ಕೊಳ್ಳುವ ಕನಸು ಬಿಟ್ಟುಬಿಡಿ- ಬಾಡಿಗೆ ವಸ್ತುಗಳನ್ನು ಎಂಜಾಯ್​ ಮಾಡಿ..!

2. ಕಲಿಯುವ ಹಠ, ಛಲ ಬಿಡಲಿಲ್ಲ- ಗಿನ್ನೆಸ್​ ದಾಖಲೆ ಬರೆದ ಕನ್ನಡ ನೃತ್ಯಗಾರ್ತಿ..!

3. "ಸಾಂಸ್ಕೃತಿಕ ನಗರಿಯಿಂದ ಸಾಗರದ ಸಂಗಮದವೆರೆಗೆ"


Related Stories