ವ್ಯಾಯಾಮ ಮಾಡಿ ವಿದ್ಯುತ್ ಉತ್ಪಾದಿಸಿ:ಭಾರತದ ಹಳ್ಳಿಗಳಿಗೆ ಕೋಟ್ಯಾಧಿಪತಿಯ ಕೊಡುಗೆ

ಟೀಮ್​ ವೈ.ಎಸ್​​. ಕನ್ನಡ

0

ಮನೋಜ್ ಭಾರ್ಗವ ಒಬ್ಬ ಇಂಡಿಯನ್-ಅಮೆರಿಕನ್ ಉದ್ಯಮಿ. ಅಗತ್ಯಕ್ಕಿಂತ ಹೆಚ್ಚು ಹಣವನ್ನೇ ಸಂಪಾದಿಸಿದ್ದಾರೆ. ಅವರ ಬಳಿ 4 ಬಿಲಿಯನ್ ಡಾಲರ್‍ನಷ್ಟು ಹಣವಿತ್ತು. ತಮಗದರ ಅವಶ್ಯಕತೆ ಇಲ್ಲ ಅನ್ನೋದು ಅವರ ನೇರ ನುಡಿ. ಆ ಮೊತ್ತದಲ್ಲಿ ಶೇ. 99ರಷ್ಟನ್ನು ಮಾನವ ಕುಲಕ್ಕೆ ಉಪಯೋಗವಾಗುವಂತಹ ಒಂದೊಳ್ಳೆ ಯೋಜನೆಗಾಗಿ ಮನೋಜ್ ಭಾರ್ಗವ ವಿನಿಯೋಗಿಸಿದ್ದಾರೆ. ಇಡೀ ವಿಶ್ವವನ್ನೇ ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆಗಳಲ್ಲೊಂದು ವಿದ್ಯುತ್ ಕೊರತೆ. ಭಾರತದಲ್ಲಂತೂ ಅದೆಷ್ಟೋ ಗ್ರಾಮಗಳು ಇಂದಿಗೂ ಕತ್ತಲಲ್ಲೇ ಕಾಲಕಳೆಯುತ್ತಿವೆ. ನಗರಗಳಲ್ಲೂ ವಿದ್ಯುತ್ ಕಣ್ಣಾ ಮುಚ್ಚಾಲೆ ಸರ್ವೇ ಸಾಮಾನ್ಯವಾಗ್ಬಿಟ್ಟಿದೆ. ವಿದ್ಯುತ್ ಕೊರತೆಯಿಂದ ಜನಸಾಮಾನ್ಯರು ಅನುಭವಿಸ್ತಾ ಇರೋ ತೊಂದರೆ ಅಷ್ಟಿಷ್ಟಲ್ಲ. ಇದನ್ನು ಅರಿತ ಮನೋಜ್ ಭಾರ್ಗವ, ಈ ಸಮಸ್ಯೆಗೆ ಪರಿಹಾರವೊಂದನ್ನು ಹುಡುಕಿದ್ದಾರೆ.

ಮನೋಜ್ ಭಾರ್ಗವ ಮೊದಲು ನಾಲ್ವರು ವಿಜ್ಞಾನಿಗಳ ತಂಡವನ್ನು ಕಟ್ಟಿದ್ರು. ಅವರ ಜೊತೆಗೂಡಿ ನಿಂತಲ್ಲೇ ನಿಲ್ಲುವಂತಹ ಸ್ಥಿರವಾದ ಬೈಕ್ ಒಂದನ್ನು ತಯಾರಿಸಿದ್ದಾರೆ. ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿರುವ ಮನೆಗಳಿಗೆ ಬೆಳಕು ನೀಡುವುದು ಅವರ ಉದ್ದೇಶ. ಈ ಬೈಕ್ ಬಹುಪಯೋಗಿಯೂ ಹೌದು. ಕೇವಲ ವಿದ್ಯುತ್ ಉತ್ಪಾದನೆಗೆ ಮಾತ್ರವಲ್ಲ, ವ್ಯಾಯಾಮ ಮಾಡಲು ಕೂಡ ಇದನ್ನು ಬಳಸಬಹುದು. ಒಂದು ಗಂಟೆ ನೀವು ಈ ಸೈಕಲ್‍ನಲ್ಲಿ ವರ್ಕೌಟ್ ಮಾಡಿದ್ರೆ ಒಂದು ಮನೆಗೆ ಸತತ 24 ಗಂಟೆ ವಿದ್ಯುತ್ ಒದಗಿಸಬಹುದು. ಈ ಸೈಕಲ್‍ನಲ್ಲಿ ಕೇವಲ ಒಂದು ಗಂಟೆ ವ್ಯಾಯಾಮದಿಂದ ಒಂದು ಮನೆಗೆ ಬೇಕಾಗುವಷ್ಟು ವಿದ್ಯುತ್ ಉತ್ಪಾದನೆಯಾಗುತ್ತದೆ. ಅಂಧಕಾರದಲ್ಲಿರುವ ಮಿಲಿಯನ್‍ಗಟ್ಟಲೆ ಕುಟುಂಬಗಳಿಗೆ ವಿದ್ಯುತ್ ಪೂರೈಸುವುದು ಮನೋಜ್ ಭಾರ್ಗವ ಅವರ ಕನಸು. ಪಿಟಿಐ ಮಾಹಿತಿಯ ಪ್ರಕಾರ ಸದ್ಯ ವಿದ್ಯುತ್ ಉತ್ಪಾದಿಸಬಲ್ಲ ಇಂತಹ 10,000 ಸೈಕಲ್‍ಗಳನ್ನು ಅವರು ಭಾರತಕ್ಕೆ ಕೊಡುಗೆಯಾಗಿ ನೀಡಲಿದ್ದಾರೆ. ಈ ಬೈಕ್‍ಗಳಲ್ಲಿ ಎಲೆಕ್ಟ್ರಿಕ್ ಬ್ಯಾಟರಿಗಳನ್ನು ಅಳವಡಿಸಲಾಗಿದ್ದು, ನೀವು ಪೆಡಲ್ ತುಳಿದಂತೆಲ್ಲ ವಿದ್ಯುತ್ ಉತ್ಪಾದನೆಯಾಗುತ್ತದೆ. ಕೇವಲ 100 ಡಾಲರ್ ವೆಚ್ಚದಲ್ಲಿ ಬೈಕ್‍ಗಳನ್ನು ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಸೈಕಲ್ ರಿಪೇರಿ ಮಾಡುವ ವ್ಯಕ್ತಿ ಕೂಡ ಈ ಬೈಕನ್ನು ಮನೆಮನೆಗೆ ಅಳವಡಿಸಬಲ್ಲ. ಮೊದಲು 50 ಬೈಕ್‍ಗಳನ್ನು ಉತ್ತರಾಖಂಡ್‍ನ 15-20 ಹಳ್ಳಿಗಳಲ್ಲಿ ಪ್ರಯೋಗಾತ್ಮಕವಾಗಿ ಅಳವಡಿಸಲಾಗುತ್ತದೆ.

`ನ್ಯಾಶನಲ್ ಜಿಯೋಗ್ರಾಫಿಕ್' ವಾಹಿನಿಯಲ್ಲೂ ಮನೋಜ್ ಭಾರ್ಗವ ಅವರ ಬಗ್ಗೆ ವಿಶೇಷ ಕಾರ್ಯಕ್ರಮ ಪ್ರಸಾರವಾಗಿದೆ. ಅವರ ಸಾಮಾಜಿಕ ಕಳಕಳಿಯನ್ನು ವಿಶ್ವವೇ ಕೊಂಡಾಡುತ್ತಿದೆ. 14 ವರ್ಷದವರಿದ್ದಾಗ ಮನೋಜ್ ಭಾರತವನ್ನು ತೊರೆದಿದ್ದರು. ತಮ್ಮ ಹೆತ್ತವರೊಂದಿಗೆ ಅಮೆರಿಕದಲ್ಲಿ ನೆಲೆಯೂರಿದ್ದರು. ಪ್ರಿನ್ಸ್‍ಟನ್ ಯೂನಿವರ್ಸಿಟಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಮನೋಜ್, ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿದ್ರು. ಕಾಲೇಜಿಗೆ ಹೋಗುತ್ತಿರಲಿಲ್ಲ. ಕಾರಣ ಏನ್ ಗೊತ್ತಾ? ಮನೋಜ್ ಅವರಿಗೆ ಓದು ಬೇಸರ ತರಿಸಿತ್ತು. ಅರ್ಧದಲ್ಲೇ ವ್ಯಾಸಂಗ ಮೊಟಕುಗೊಳಿಸಿ ಭಾರತಕ್ಕೆ ಬಂದ ಮನೋಜ್, ಆಶ್ರಮ ಸೇರಿದ್ದರು. 12 ವರ್ಷಗಳ ಕಾಲ ಆಶ್ರಮದಲ್ಲೇ ನೆಲೆಸಿದ್ದರು.

ನಂತರ ಅವರಲ್ಲಿ ಕೋಟ್ಯಾಧಿಪತಿಯಾಗಬೇಕೆಂಬ ಕನಸು ಚಿರಗುರೊಡೆದಿತ್ತು. `ಲಿವಿಂಗ್ ಎಸ್ಸೆನ್ಷಿಯಲ್ಸ್' ಸೇರಿದಂತೆ ಹಲವು ಕಂಪನಿಗಳನ್ನು ಮನೋಜ್ ಕಟ್ಟಿ ಬೆಳೆಸಿದ್ದಾರೆ. ದೊಡ್ಡ ಸಮಸ್ಯೆಗಳಿಗೆ ಸರಳ ಪರಿಹಾರ ಅನ್ನೋ ತತ್ವದಲ್ಲಿ ಮನೋಜ್ ನಂಬಿಕೆ ಇಟ್ಟಿದ್ದಾರೆ. ತಮ್ಮ ಜೊತೆಯಿರುವ ವಿಜ್ಞಾನಿಗಳ ತಂಡ ಇಷ್ಟಕ್ಕೇ ಸುಮ್ಮನಾಗುವುದಿಲ್ಲ ಎನ್ನುತ್ತಾರೆ ಮನೋಜ್. ಉಪ್ಪು ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಅವರು ಸದ್ಯ ಸಂಶೋಧನೆ ನಡೆಸುತ್ತಿದ್ದಾರೆ. ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಿಸುವುದು, ಶುದ್ಧವಾದ ಅಪಾರ ಪ್ರಮಾಣದ ಭೂಶಾಖದ ಭದ್ರತೆ ಬೆಗೆಗೂ ಸಂಶೋಧನೆಯಲ್ಲಿ ತೊಡಗಿದ್ದಾರೆ. ಬರಗಾಲಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಗಂಟೆಗೆ 1000 ಗ್ಯಾಲನ್‍ಗಳಂತೆ ಎಲ್ಲ ಬಗೆಯ ನೀರನ್ನೂ ಕುಡಿಯುವ ನೀರನ್ನಾಗಿ ಪರಿವರ್ತಿಸಲು ಒಂದು ವ್ಯವಸ್ಥೆಯನ್ನು ನಿರ್ಮಿಸುವ ಪ್ರಯತ್ನದಲ್ಲಿದ್ದಾರೆ.

ನಿಮ್ಮ ಬಳಿ ಸಂಪತ್ತು ಇದೆ ಅಂತಾದ್ರೆ, ಅಗತ್ಯವಿರುವವರಿಗೆ ಸಹಾಯ ಮಾಡುವುದು ನಿಮ್ಮ ಕರ್ತವ್ಯ ಎನ್ನುತ್ತಾರೆ ಮನೋಜ್. ಕೇವಲ ಮಾತನಾಡುವುದಲ್ಲ, ಜನರ ಬದುಕಿನಲ್ಲಿ ಭಿನ್ನತೆಯನ್ನು ಸೃಷ್ಟಿಸಿ ಅನ್ನೋದು ಅವರ ಸಲಹೆ. ಸದ್ಯ ಮಿಚಿಗನ್‍ನಲ್ಲಿ ನೆಲೆಸಿರುವ 62ರ ಹರೆಯದ ಮನೋಜ್ ಅವರ ಬಗ್ಗೆ ಸಾಕ್ಷ್ಯಚಿತ್ರವೊಂದನ್ನು ಕೂಡ ಮಾಡಲಾಗಿದೆ. ಬಡವರ ಬದುಕಲ್ಲಿ ಬೆಳಕಾಗಿ ಬರುತ್ತಿರುವ ಈ ಕೋಟ್ಯಾಧಿಪತಿಯ ಸಾಮಾಜಿಕ ಕಳಕಳಿ ನಿಜಕ್ಕೂ ಮೆಚ್ಚುವಂಥದ್ದು. ಸಂಪತ್ತು ಇರುವವರೆಲ್ಲ ಕೊಡುಗೈ ದಾನಿಗಳಾದ್ರೆ ಜಗತ್ತನ್ನೇ ಕಾಡುತ್ತಿರುವ ಬಡತನದ ಸಮಸ್ಯೆಯನ್ನು ಹೊಡೆದೋಡಿಸಬಹುದು.

ಅನುವಾದಕರು: ಭಾರತಿ ಭಟ್​​​