ಸ್ಲೋ ಬೌಲಿಂಗ್​​ನ ಬೆಂಕಿ... ಈ ವೆಂಕಿ.. !

ಪಿ.ಆರ್​​.ಬಿ

0

ಭಾರತೀಯ ಕ್ರಿಕೆಟ್ ತಂಡದಲ್ಲಿ ಕನ್ನಡಿಗರು ದರ್ಬಾರ್ ನಡೆಸುತ್ತಿದ್ದ ಕಾಲವದು.. ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಅವರಂತ ಮಹಾನ್ ಕ್ರಿಕೆಟಿಗರು ಅದಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಕನ್ನಡದ ಡಿಂಡಿಮ ಸಾರಿದ್ರು. ಈ ರೀತಿ ವೈಯುಕ್ತಿಕ ಪ್ರತಿಭೆಯಿಂದಲೇ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ ಮತ್ತೊಬ್ಬ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್.. ವೇಗದ ಬೌಲರ್ ಆಗಿ ಮಿಂಚಿದ ಪ್ರಸಾದ್, ಒಂದು ಕಾಲದಲ್ಲಿ ಭಾರತೀಯ ತಂಡದ ಪ್ರಮುಖ ಅಸ್ತ್ರವಾಗಿ ಗುರುತಿಸಿಕೊಂಡವರು..

ಅಂತರಾಷ್ಟ್ರೀಯ ಕ್ರಿಕೆಟ್ ಗೆ 1996ರಲ್ಲಿ ಪಾದಾರ್ಪಣೆಗೈದ ವೆಂಕಟೇಶ್ ಪ್ರಸಾದ್ ಗೆ ಎರಡೂ ಕಡೆ ಸ್ವಿಂಗ್ ಮಾಡುವ ಸಾಮರ್ಥ್ಯವಿತ್ತು. ಅಲ್ಲದೆ ಡೆತ್ ಓವರ್ ಗಳಲ್ಲಿ ನಿಧಾನಗತಿಯ ಎಸೆತಗಳನ್ನು ಪ್ರಯೋಗಿಸಿ ವಿಕೆಟ್ ಗಳನ್ನು ಪಡೆಯೋದ್ರಲ್ಲಿ ಯಶಸ್ಸು ಕಂಡಿದ್ರು. ಸ್ಲೋ ಬೌಲಿಂಗ್ ಬೌಲಿಂಗ್ ಮೂಲಕ ಬ್ಯಾಟ್ಸ್ ಮನ್ ಗಳ ಆಕ್ರಮಣಕ್ಕೆ ಕಡಿವಾಣ ಹಾಕುವ ಪ್ರಯತ್ನ ಮೊದಲು ಶುರುವಾಗಿದ್ದೇ ಪ್ರಸಾದ್​​ರಿಂದ ಅಂದ್ರೂ ಅದು ತಪ್ಪಲ್ಲ. ದೇಸೀ ಪಿಚ್ ಗಳಿಗೆ ಹೊಂದಿಕೊಳ್ಳುತ್ತಿದ್ದ ವೆಂಕಿ, ವಿದೇಶೀ ಪಿಚ್ ಗಳಲ್ಲೂ ಪ್ರಭಾವೀ ಬೌಲಿಂಗ್ ಮಾಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.

ಟೆಸ್ಟ್ ಹಾಗೂ ಏಕದಿನದಲ್ಲಿ ಉತ್ತಮ ದಾಖಲೆ

ಭಾರತದ ಪರ 33 ಟೆಸ್ಟ್ ಪಂದ್ಯಗಳನ್ನ ಆಡಿರುವ ವೆಂಕಟೇಶ್ ಪ್ರಸಾದ್, 96 ವಿಕೆಟ್ ಗಳನ್ನ ಪಡೆದಿದ್ದಾರೆ. 1999ರಲ್ಲಿ ಚೆನ್ನೈನಲ್ಲಿ ಪಾಕಿಸ್ತಾನ ವಿರುದ್ಧ 33 ರನ್ ಗಳಿಗೆ 6 ವಿಕೆಟ್ ಗಳನ್ನ ಪಡೆದಿರೋದು ಇವರ ಶ್ರೇಷ್ಠ ಬೌಲಿಂಗ್.. ವಿಶೇಷ ಆ ಪಂದ್ಯದಲ್ಲಿ ಯಾವುದೇ ರನ್ ನೀಡದೆ ಮೊದಲ 5 ವಿಕೆಟ್ ಗಳನ್ನ ಕಬಳಿಸಿದ್ರು. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ 1996ರಲ್ಲಿ ಡರ್ಬನ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಗಳನ್ನ ಪಡೆದಿರೋದು ಮತ್ತೊಂದು ಸಾಧನೆ. ಇದಿಷ್ಟೇ ಅಲ್ಲ 1996ರಲ್ಲಿ ಇಂಗ್ಲೆಂಡ್, 1997ರಲ್ಲಿ ವೆಸ್ಟ್ ಇಂಡೀಸ್, 2001 ರಲ್ಲಿ ಶ್ರೀಲಂಕಾ ವಿರುದ್ಧ ಒಂದು ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಗಳನ್ನ ಪಡೆದ ಸಾಧನೆ ಮಾಡಿದ್ದಾರೆ.

ಏಕದಿನ ಕ್ರಿಕೆಟ್ ನಲ್ಲಿ ವೆಂಕಿ ಸಾಧನೆ ಉತ್ತಮವಾಗಿದೆ. ಒಟ್ಟು 161 ಏಕದಿನ ಪಂದ್ಯಗಳನ್ನು ಆಡಿರುವ ಪ್ರಸಾದ್, 196 ವಿಕೆಟ್ ಗಳನ್ನ ಕಬಳಿಸಿದ್ದಾರೆ. 27 ರನ್ ಗಳಿಗೆ 5 ವಿಕೆಟ್ ಪಡೆದಿರೋದು ಏಕದಿನ ಕ್ರಿಕೆಟ್ ನಲ್ಲಿ ಇವರ ಬೆಸ್ಟ್ ಬೌಲಿಂಗ್.

ಅಮೀರ್ ಸೊಹೈಲ್ ಗರ್ವಭಂಗ.. !

ವೆಂಕಟೇಶ್ ಪ್ರಸಾದ್ ಅಂದ್ರೆ ಕ್ರಿಕೆಟ್ ಅಭಿಮಾನಿಗಳ ಕಣ್ಮುಂದೆ ಬರೋದು 1996ರ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ. ಬೆಂಗಳೂರಿನಲ್ಲೇ ನಡೆದಿದ್ದ ಈ ಪಂದ್ಯ ಕ್ರಿಕೆಟ್ ಪ್ರೇಮಿಗಳಲ್ಲಿ ರೋಮಾಂಚನ ಮೂಡಿಸಿತ್ತು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಭಾರತದ 288ರನ್ ಗಳ ಗುರಿ ಬೆನ್ನತ್ತಿತ್ತು. ಪಾಕ್ ನ ಅಮಿರ್ ಸೊಹೈಲ್ ಭಾರತದ ಬೌಲರ್ ಗಳ ಮೇಲೆ ಸವಾರಿ ನಡೆಸಿದ್ರು. ಈ ಪಂದ್ಯದಲ್ಲಿ ವೆಂಕಟೇಶ್ ಪ್ರಸಾದ್ ಎಸೆದಿದ್ದ ಓವರ್ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಪ್ರಸಾದ್ ಎಸೆತವೊಂದನ್ನ ಬೌಂಡರಿಗಟ್ಟಿದ್ದ ಸೊಹೈಲ್ , ವೆಂಕಿಯನ್ನು ಕೆಣಕಿದ್ರು.. ಮತ್ತೆ ಬೌಂಡರಿ ಹೊಡೆಯುವುದಾಗಿ ಅಬ್ಬರಿಸಿದ್ರು.. ಆದ್ರೆ ವೆಂಕಿ ಸೊಹೈಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಗರ್ವ ಭಂಗ ಮಾಡಿದ ರೀತಿ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಈಗಲೂ ಅಚ್ಚೊತ್ತಿ ನಿಂತಿದೆ.

ವರ್ಲ್ಡ್​​​ಕಪ್​​ನಲ್ಲಿ ಪ್ರಸಾದ್..

ಟೀಂ ಇಂಡಿಯಾದಲ್ಲಿ ಪ್ರಭಾವೀ ಬೌಲರ್ ಆಗಿ ಮಿಂಚಿದ್ದ ಪ್ರಸಾದ್ ತನ್ನದೇ ಆದ ವಿಭಿನ್ನ ಬೌಲಿಂಗ್ ನಿಂದ ಗಮನ ಸೆಳೆದಿದ್ದರು. 1996 ಹಾಗೂ 1999ರ ವಿಶ್ವಕಪ್ ಟೂರ್ನಿಗಳಲ್ಲಿ ಟೀಂಇಂಡಿಯಾ ಪರ ಆಡಿ ಉತ್ತಮ ಸಾಧನೆ ಮಾಡಿದ್ದಾರೆ. 1996ರಲ್ಲಿ 7 ಪಂದ್ಯಗಳಿಂದ 8 ವಿಕೆಟ್ ಹಾಗೂ 1999ರ ವರ್ಲ್ಡ್ ಕಪ್ ನಲ್ಲೂ 9 ವಿಕೆಟ್ ಗಳನ್ನ ಪಡೆದಿರೋದು ಇವ್ರ ಸಾಧನೆಯಾಗಿದೆ.

ವೆಂಕಿಗೆ ಬೌಲಿಂಗ್ ಕೋಚ್ ಹೊಣೆ

ವೆಂಕಿ ಅತ್ಯುತ್ತಮ ಬೌಲಿಂಗ್ ವೆರೈಟಿ ಹೊಂದಿದ್ರೂ, ಎಲ್ಲಾ ವೇಗದ ಬೌಲರ್ ಗಳಂತೆ ಫಿಟ್ನೆಸ್ ಸಮಸ್ಯೆ ಎದುರಿಸಿದ್ರು. 2001ರಲ್ಲಿ ಶ್ರೀಲಂಕಾ ವಿರುದ್ಧದ ಸರಣಿ ನಂತ್ರ ವೆಂಕಿಯನ್ನ ತಂಡದಿಂದ ಕೈಬಿಡಲಾಯ್ತು. ಬಳಿಕ ಪ್ರಸಾದ್ ತಂಡಕ್ಕೆ ಕಂ ಬ್ಯಾಕ್ ಮಾಡಲಾಗದೆ 2005ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದರು. ಇದಾದ ಬಳಿಕ ಕೋಚಿಂಗ್ ಕಡೆ ಗಮನ ಹರಿಸಿದ ಈ ಕನ್ನಡಿಗ, ಅಂಡರ್ 19 ತಂಡವನ್ನ ಕೂಡಿಕೊಂಡ್ರು. ಇಲ್ಲಿ ತಮ್ಮ ಅನುಭವ ತೋರಿದ ಪ್ರಸಾದ್ 2006ರಲ್ಲಿ ತಂಡ ವಿಶ್ವಕಪ್ ರನ್ನರ್ ಅಪ್ ಆಗುವುದರಲ್ಲಿ ಪ್ರಮುಖ ಪಾತ್ರವಹಿಸಿದ್ರು.

2007ರಲ್ಲಿ ಭಾರತ ವಿಶ್ವಕಪ್ ನಲ್ಲಿ ತೋರಿದ ಹೀನಾಯ ಪ್ರದರ್ಶನದಿಂದಾಗಿ ತಂಡದಲ್ಲಿ ಹಲವು ಬದಲಾವಣೆ ಮಾಡಲು ಬಿಸಿಸಿಐ ನಿರ್ಧರಿಸಿತ್ತು. ಅಲ್ಲದೆ ತಂಡಕ್ಕೆ ಹೆಚ್ಚುವರಿ ವಿಶೇಷ ತರಬೇತುದಾರರನ್ನ ನೇಮಿಸಲು ಮುಂದಾಯ್ತು. ಹೀಗಾಗಿ ಅಂಡರ್ 19 ಟೀಂನಲ್ಲಿ ಗಮನ ಸೆಳೆದಿದ್ದ ವೆಂಕಟೇಶ್ ಪ್ರಸಾದ್ ಗೆ ಟೀಂಇಂಡಿಯಾದ ಬೌಲಿಂಗ್ ಕೋಚ್ ಹೊಣೆ ನೀಡಲಾಯ್ತು. ಈ ಅವಕಾಶವನ್ನೂ ಪ್ರಸಾದ್ ಉತ್ತಮವಾಗೇ ಬಳಸಿಕೊಂಡ್ರು. ಇದೀಗ ಐಪಿಎಲ್ ನಲ್ಲೂ ತೊಡಗಿಸಿಕೊಂಡಿರುವ ಪ್ರಸಾದ್, ಯುವ ಬೌಲರ್ ಗಳ ಕೌಶಲ್ಯಹೆಚ್ಚಿಸಲು ತರಬೇತಿ ಅಕಾಡೆಮಿಯನ್ನೂ ಶುರುಮಾಡಿದ್ದಾರೆ. ವೃತ್ತಿ ಬದುಕಿನಲ್ಲಿ ಸಿಕ್ಕ ಅವಕಾಶಗಳನ್ನ ಬಳಸಿಕೊಂಡು ಪ್ರತಿಭೆಯನ್ನ ಸಾಬೀತು ಪಡಿಸಿರೋ ವೆಂಕಟೇಶ್ ಪ್ರಸಾದ್ ಕನ್ನಡಿಗರ ಹೆಮ್ಮೆಯ ಕ್ರಿಕೆಟಿಗ.