ಕ್ರಯೋನ್ ಡಾಟಾದ ‘ಮಾಯಾ’ ಜಾಲಕ್ಕೆ ಮಾರು ಹೋದ ರತನ್ ಟಾಟಾ - ವೈಯಕ್ತಿಕ ನೆಲೆಯಲ್ಲಿ ಭಾರೀ ಹೂಡಿಕೆ

ಟೀಮ್​​ ವೈ.ಎಸ್​​. ಕನ್ನಡ

0

ಉದ್ಯಮಿ ರತನ್ ಟಾಟಾ ದೇಶದ ಚಿರಪರಿಚಿತ ಹೆಸರಲ್ಲಿ ಒಬ್ಬರು. ಉದ್ಯಮ ಬ್ರಹ್ಮ. ಕನಸುಗಾರ. ಟಾಟಾ ಸನ್ಸ್ ಎಮಿರೇಟ್ಸ್​​ನ ಅಧ್ಯಕ್ಷ. ಪ್ರತ್ಯೇಕವಾಗಿ ಅವರನ್ನು ಪರಿಚಯಿಸಬೇಕಾದ ಅಗತ್ಯ ಇಲ್ಲ. ದೇಶದ ಪ್ರತಿಯೊಬ್ಬರಿಗೂ ರತನ್ ಟಾಟಾ ಹೆಸರು ಅಷ್ಟು ಚಿರಪರಿಚಿತ. ಇಂತಹ ಮೇರು ಮಟ್ಟದ ಉದ್ಯಮಿ ಸದ್ದಿಲ್ಲದೇ ಹೊಸ ಕನಸಿನ ಯೋಜನೆ ಸ್ಟಾರ್ಟ್ ಅಪ್​​ನಲ್ಲಿ ವೈಯಕ್ತಿಕ ನೆಲೆಯಲ್ಲಿ ಹಣ ಹೂಡಿದ್ದಾರೆ. ಕ್ರಯೋನ್ ಡಾಟಾದ ಸಾಧನೆ ಮೆಚ್ಚಿ ಬಂಡವಾಳ ಹೂಡಿದ್ದಾರೆ. ಶ್ರೀಕಾಂತ್ ಶಾಸ್ತ್ರಿ ಮತ್ತು ಸುರೇಶ್ ಶಂಕರ್ 2012ರಲ್ಲಿ ಇದನ್ನು ಸ್ಥಾಪಿಸಿದರು. ವಿಶ್ವದ ಆಯ್ಕೆಯನ್ನು ಸರಳಗೊಳಿಸುವ ಕಲ್ಪನೆ ಇವರದ್ದು.

ಕ್ರಯೋನ್ ಡಾಟಾ Crayon Data ಪ್ರಸಕ್ತ 90 ಮಂದಿ ನೌಕರರನ್ನು ಹೊಂದಿದೆ. ಇದರಲ್ಲಿ 60 ಮಂದಿ ಭಾರತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ, 30 ಮಂದಿ ಸಿಂಗಾಪುರದಲ್ಲಿ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿದ್ದಾರೆ. ದುಬೈ, ಲಂಡನ್ ಮತ್ತು ನ್ಯೂಯಾರ್ಕ್ ನಲ್ಲಿ ಬ್ಯುಸಿನೆಸ್ ಟೀಂ ಕಾರ್ಯಾಚರಿಸುತ್ತಿದೆ. ನಾಲ್ಕರಿಂದ ಐದು ಮಂದಿ ಈ ತಂಡದಲ್ಲಿದ್ದಾರೆ. ಹೀಗೆ ಸಂಸ್ಥೆಯ ಮಾನವ ಸಂಪನ್ಮೂಲದ ಮಾಹಿತಿ ನೀಡುತ್ತಾರೆ ಸಂಸ್ಥೆಯ ಬ್ಯುಸಿನೆಸ್ ಹೆಡ್ ಆಗಿರುವ ಆರತಿ ರಾಮಕೃಷ್ಣನ್.

ಕ್ರಯೋನ್ ಡಾಟಾದ ಮಾರುಕಟ್ಟೆ ಸದ್ಯಕ್ಕೆ ಅಮೆರಿಕ ಕೇಂದ್ರೀಕೃತವಾಗಿದೆ. ಸಂಸ್ಥೆಯ ಸಂಸ್ಥಾಪಕರಾಗಿರುವ ಶ್ರೀಕಾಂತ್ ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿ ಕಾರ್ಯ ವೈಖರಿಯ ಮೇಲ್ನೋಟ ವಹಿಸಿದ್ದರು. ಕ್ರಯೋನ್ ಡಾಟಾದ ಮೊದಲ ಬಳಕೆದಾರ ಇಂಗ್ಲೆಂಡ್ ಮೂಲವಾಗಿದೆ. ಅತೀ ದೊಡ್ಡ ಗ್ರಾಹಕ ದುಬೈಗೆ ಸೇರಿದ ಸಂಸ್ಥೆಯಾಗಿದೆ. ಹೀಗೆ ವಿಶ್ವದ ವಿವಿಧ ರಾಷ್ಟ್ರಗಳು ಕ್ರಯೋನ್ ಡಾಟಾದ ಆಕರ್ಷಣೆಗೆ ಒಳಗಾಗಿವೆ. ಸಿಂಗಾಪುರ , ಇಂಡೋನೇಷ್ಯಾ ಸೇರಿದಂತೆ ಏಷ್ಯಾದ ಇತರ ರಾಷ್ಟ್ರಗಳತ್ತ ಕೂಡ ಕ್ರಯೋನ್ ಗಮನ ಹರಿಸಿದೆ.

ಕ್ರಯೋನ್ ಡಾಟಾದ ಅತೀ ಶ್ರೇಷ್ಠ ಉತ್ಪನ್ನದ ಹೆಸರೇ ಮಾಯಾ..! ಇದು ವೈಯಕ್ತಿಕ ಶೋಧ ಎಂಜಿನ್. ಯಾರಿಗೆ ವಸ್ತುಗಳು ಅಥವಾ ಉತ್ಪನ್ನಗಳು ನಿಖರವಾಗಿ ತಲುಪಬೇಕೋ ಅವರನ್ನು ಗುರುತಿಸಿ ವಸ್ತು ಪೂರೈಕೆ ಇದರ ಹೆಗ್ಗಳಿಕೆ. ಮುಖ್ಯವಾಗಿ ಬ್ಯಾಂಕಿಂಗ್, ಹೋಟೆಲ್, ಡಿಜಿಟಲ್ ಮೀಡಿಯಾ ಈ ಕ್ಷೇತ್ರದಲ್ಲಿ ಈ ತಂತ್ರಜ್ಞಾನ ಈಗಾಗಲೇ ಸಂಚಲನ ಮೂಡಿಸಿದೆ. ಕ್ರಯೋನ್ ದತ್ತಾಂಶಗಳ ಮಾಲಿಕತ್ವ ವೇದಿಕೆಯ ತಳಹದಿಯಲ್ಲಿ ಮಾಯಾ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಬಳಕೆದಾರರ ಅಭಿರುಚಿ ನಿರ್ಧರಿಸಲು ತನ್ನದೇ ಆದ ಮಾನದಂಡ ಅನುಸರಿಸಲಾಗಿದೆ. 14 ಶಿಫಾರಸು ವ್ಯವಸ್ಥೆ ಅಂತರ್ಗತವಾಗಿದ್ದು, ಆಂತರಿಕ ಮತ್ತು ಬಾಹ್ಯ ದತ್ತಾಂಶಗಳ ಮೇಲೆ ಅಭಿರುಚಿ ಗ್ರಾಫ್ ನಿರ್ಧರಿಸಲಾಗಿದೆ. ಪ್ರಸಕ್ತ 15 ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬಳಕೆದಾರರ ಅಭಿರುಚಿ ನಿರ್ಣಯ ಕೈಗೊಳ್ಳಲಾಗಿದೆ.

ಭರ್ಜರಿ ಬಂಡವಾಳ ಸಂಗ್ರಹ

ಬಂಡವಾಳ ಸಂಗ್ರಹದಲ್ಲಿ ಕೂಡ ಕ್ರಯೋನ್ ಹಿಂದೆ ಬಿದ್ದಿಲ್ಲ. ಜಂಗಲ್ ವೆಂಚರ್ಸ್ ಮತ್ತು ಸ್ಪ್ರಿಂಗ್ ಸೀಡ್ಸ್ ಸಾಂಸ್ಥಿಕ ಹೂಡಿಕೆದಾರರು ಈಗಾಗಲೇ ಬಂಡವಾಳ ಹೂಡಿದ್ದಾರೆ. ಈಗಾಗಲೇ ಶೇಕಡಾ 10 ಮಿಲಿಯನ್ ಡಾಲರ್ ಸಂಗ್ರಹಿಸಲಾಗಿದೆ. ರತನ್ ಟಾಟಾ ಕೂಡ ಇದರೊಂದಿಗೆ ಕೈ ಜೋಡಿಸಿದ್ದಾರೆ. ವಿಶೇಷ ಸಲಹೆಗಾರರ ರೂಪದಲ್ಲಿ ಅವರು ತಮ್ಮ ಜ್ಞಾನಧಾರೆ ಎರೆಯಲು ಮುಂದೆ ಬಂದಿದ್ದಾರೆ. ಜಂಗಲ್ ವೆಂಚರ್ಸ್ ನ ಅನುರಾಗ್ ಶ್ರೀವಾಸ್ತವ ಅವರು ಈ ರೀತಿ ಹೇಳುತ್ತಾರೆ.

ಕ್ರಯೋನ್ ಸಾಮರ್ಥ್ಯದ ಮೇಲೆ ನಮ್ಮಗೆ ಅಪರಿಮಿತ ನಂಬಿಕೆ ಇದೆ. ಶ್ರೀಕಾಂತ್ ಮತ್ತು ಸುರೇಶ್ ತಮ್ಮ ಹಲವು ವರ್ಷಗಳ ಅನುಭವದ ಹಿನ್ನೆಲೆಯಲ್ಲಿ ಸ್ಪಷ್ಟ ದೃಷ್ಟಿಕೋನ ಹೊಂದಿದ್ದಾರೆ. ಬಳಕೆದಾರರ ಪ್ರೀತಿಯ ಉದ್ಯಮವಾಗಿ ಇದು ಮೂಡಿ ಬರಲಿದೆ. ಕ್ರಯೋನ್ ಡಾಟಾದ ಸಂಸ್ಥಾಪಕ ಸುರೇಶ್ ಶಂಕರ್, ಬಿಗ್ ಡಾಟದ ಬಗ್ಗೆ ತಮ್ಮದೇ ರೀತಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ.

ಕ್ರಯೋನ್ ಜಾಗತಿಕ ಮನ್ನಣೆ ಗಳಿಸಿದೆ. 2014ರಲ್ಲಿ ಅತ್ಯಂತ ಯಶಸ್ವಿ ಮತ್ತು ವಿನೂತನ ಪ್ರಯತ್ನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಟೈಕೋಮ್, ಸಿಇಬಿಐಟಿ, ಐಬಿಎಂ ವಾಟ್ಸನ್, ಒರೆಂಜ್ ಫ್ಯಾಬ್​​ನ ಮನ್ನಣೆಗೆ ಪಾತ್ರವಾಗಿದೆ.

ವಲಯ ವಿಮರ್ಶೆ ಮತ್ತು ಭವಿಷ್ಯದ ಯೋಜನೆ

ಬದಲಾವಣೆ ದಿನನಿತ್ಯದ ಮಾತಾಗಿದೆ. ವಿಶ್ವದ ಎಲ್ಲೆಡೆ ಕೂಡ ಪ್ರತಿಯೊಬ್ಬರೂ ಹೊಸ ಹೊಸ ಆಲೋಚನೆ, ಚಿಂತನೆಗಳ ಹುಡುಕಾಟದಲ್ಲಿರುತ್ತಾರೆ. ಪ್ರತಿ ಮೈಕ್ರೋ ಸೆಂಕಡ್​​ಗೆ ಮಾಹಿತಿ ಹರಿವು ವಿಶಾಲವಾಗುತ್ತದೆ. ಇದರೊಂದಿಗೆ ಉದ್ಯಮ ಕೂಡ ಬೆಳೆಯುತ್ತದೆ. ಮಾಹಿತಿ ಕೊರತೆಯ ಆಧಾರದಲ್ಲಿ ನಿರ್ಧಾರ ಕೈಗೊಳ್ಳುವ ಕಾಲ ಹೊರಟು ಹೋಯಿತು. ಇದೀಗ ನಿಖರ ಮಾಹಿತಿ ತಳಹದಿಯಲ್ಲಿ ಭವಿಷ್ಯದ ಯೋಜನೆಗಳನ್ನು ರೂಪಿಸುವ ಸಮಯ , ಕಾಲ ಕೂಡಿ ಬಂದಿದೆ.

ಭಾರತದಲ್ಲಿ ಮಾಹಿತಿ ವಿಶ್ಲೇಷಣೆ ಮಾರುಕಟ್ಟೆ ಕೂಡ ವಿಸ್ತಾರವಾಗುತ್ತಿದೆ. ಬ್ಲೂ ಓಶಿಯನ್ ಮಾರ್ಕೆಟ್ ಇಂಟೆಲಿಜೆನ್ಸಿ ಏಜೆನ್ಸಿ ಜೊತೆ ಜಂಟಿಯಾಗಿ ಸರ್ವೆ ನಡೆಸಿರುವ ನಾಸ್ಕಾಂ ಈ ಮಾಹಿತಿ ಬಹಿರಂಗಪಡಿಸಿದೆ. ಪ್ರಸಕ್ತ 1 ಬಿಲಿಯನ್ ಮಾರುಕಟ್ಟೆ ಹೊಂದಿರುವ ಈ ಕ್ಷೇತ್ರ 2017- 18ರ ಹೊತ್ತಿಗೆ 2.3 ಬಿಲಿಯಯನ್ ಡಾಲರ್​ಗೆ ತಲುಪುವ ನಿರೀಕ್ಷೆಯಿದೆ.

2004ರಲ್ಲಿ ಬೆಂಗಳೂರಿನ ಎಂ ಯು ಸಿಗ್ಮಾ ಸಂಸ್ಥೆ ಇದಕ್ಕೆ ಅತ್ಯುತ್ತಮ ನಿದರ್ಶನ. ಧೀರಜ್ ರಾಜಾರಾಮ್ ಸ್ಥಾಪಿಸಿದ ಈ ಸಂಸ್ಥೆಯ ಈ ಕ್ಷೇತ್ರದ ರೂವಾರಿ ಸಂಸ್ಥೆ ಎಂದೇ ಪರಿಗಣಿತವಾಗಿದ್ದು, ಬಿಲಿಯನ್ ಡಾಲರ್ ಮೌಲ್ಯ ಹೊಂದಿದೆ.

ಸಂಸ್ಥೆಯ ಪ್ರಸಕ್ತ ಗುರಿ ಬಗ್ಗೆ ಮಾತನಾಡಿದ ಆರತಿ ಇದೀಗ ಉದ್ಯಮ ಶೀಲತೆಯತ್ತ ಗಮನ ಕೇಂದ್ರಿಕರಿಸಿದ್ದೇವೆ. ಆದರೆ ಮುಂದಿನ ದಿನಗಳಲ್ಲಿ ಕಟ್ಟಕಡೆಯ ಬಳಕೆದಾರನಿಗೆ ಅನುಕೂಲವಾಗುವ ಬಿ2ಸಿ ತಂತ್ರಜ್ಞಾನದತ್ತ ಗಮನ ಹರಿಸುತ್ತೇವೆ ಎನ್ನುತ್ತಾರೆ ಆರತಿ. ಇದೀಗ ಉದ್ಯಮಗಳಿಗೆ ಸೇವೆ ಮತ್ತು ವೇದಿಕೆ ರೂಪದಲ್ಲಿ ಮಾಯಾ ತಂತ್ರಜ್ಞಾನ ಲಭಿಸುತ್ತದೆ ಎನ್ನುತ್ತಾರೆ ಆರತಿ. 2016ರಲ್ಲಿ ಮಾಯಾ ತಂತ್ರಜ್ಞಾನದ ವೆಬ್ ಮತ್ತು ಮೊಬೈಲ್ ಅ್ಯಪ್ ಬಿಡುಗಡೆ ಮಾಡಲು ಸಂಸ್ಥೆ ನಿರ್ಧರಿಸಿದೆ.

ಯುವರ್ ಸ್ಟೋರಿ ಅನಿಸಿಕೆ

ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಶೀಲ ಮಾರುಕಟ್ಟೆಗಳಲ್ಲಿ ಮಾಯಾ ಸದೃಢವಾಗಿ ಬೇರೂರಿದೆ. ವಿವಿಧ ರಾಷ್ಟ್ರಗಳಲ್ಲಿ ಜನ ಮನ್ನಣೆ ಗಳಿಸಿದೆ. ಡಾಟಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಹೂಡಿಕೆದಾರರ ಮನಸ್ಸನ್ನು ಗೆದ್ದಿದೆ. ಜಂಗಲ್ ವೆಂಚರ್ಸ್, ಸ್ಪ್ರಿಂಗ್ ಸೀಡ್ ಹೂಡಿಕೆಯ ಜೊತೆ ಜೊತೆಗೆ ಖ್ಯಾತ ಉದ್ಯಮಿ ರತನ್ ಟಾಟಾ, ಸಂಸ್ಥೆಯೊಂದಿಗೆ ಕೈ ಜೋಡಿಸಿರುವುದು ಎಲ್ಲರ ವಿಶ್ವಾಸಗಳಿಸಿದೆ.

ಕ್ರಯೋನ್ ಡಾಟದ ಸಂಸ್ಥಾಪಕ ಶ್ರೀಕಾಂತ್ ಶಾಸ್ತ್ರಿ ಅತ್ಯಂತ ವಿನಯದಿಂದ ಈ ರೀತಿ ಹೇಳುತ್ತಾರೆ. ನಾವು ಭಾವಪರವಶರಾಗಿದ್ದೇವೆ. ಹೆಮ್ಮೆಯೆನಿಸುತ್ತಿದೆ. ರತನ್ ಟಾಟಾ ರಂತಹ ಮುತ್ಸದ್ದಿಯನ್ನು ಭೇಟಿ ಮಾಡುವುದು ಮತ್ತು ಅವರು ನಮ್ಮ ಆಲೋಚನೆಗಳಿಗೆ ಭೇಷ್ ಹೇಳುವುದು ಥ್ರಿಲ್ ಮೂಡಿಸಿದೆ ಎನ್ನುತ್ತಾರೆ ಶಾಸ್ತ್ರಿ.

ಲೇಖಕರು: ಹರ್ಷಿತ್​​ ಮಲ್ಯ
ಅನುವಾದಕರು: ಎಸ್​​.ಡಿ.


Related Stories