ಮನೆ+ ರೂಂ ಮೇಟ್ಸ್​​= ಗ್ರ್ಯಾಬ್​​ಹೌಸ್​​​.ಕಾಂ..!

ಟೀಮ್​​ ವೈ.ಎಸ್​​.

ಮನೆ+ ರೂಂ ಮೇಟ್ಸ್​​= ಗ್ರ್ಯಾಬ್​​ಹೌಸ್​​​.ಕಾಂ..!

Tuesday October 20, 2015,

3 min Read

ವೃತ್ತಿಪರ ಪರಿಣಿತರು ಬೇರೆ ಬೇರೆ ಭಾಗಗಳಿಂದ ಮೆಟ್ರೋ ನಗರಗಳಿಗೆ ವಲಸೆ ಬರುವುದು ಸಾಮಾನ್ಯವಾಗಿದೆ. ಇಲ್ಲಿ ಅವರಿಗೆ ಎದುರಾಗುವ ಆರಂಭಿಕ ಮೂಲಭೂತ ಸಮಸ್ಯೆ ಉತ್ತಮ ಮನೆಯೊಂದನ್ನು ಹುಡುಕಿಕೊಳ್ಳುವುದು. ಇದಕ್ಕೆ ರಿಯಲ್ ಎಸ್ಟೇಟ್ ದಲ್ಲಾಳಿಗಳನ್ನು ಅಥವಾ ಇನ್ಯಾರೋ ಸ್ನೇಹಿತರೋ, ಸಂಬಂಧಿಗಳನ್ನೋ ಆಶ್ರಯಿಸಬೇಕಾಗಿದೆ. ಆದರೆ ಈ ದಿನಗಳಲ್ಲಿ ಆನ್‌ಲೈನ್ ರಿಯಲ್ ಎಸ್ಟೇಟ್ ಪೋರ್ಟಾಲ್‌ಗಳು ಮಹತ್ತರ ಸೇವಾ ಕೇಂದ್ರಗಳಾಗಿ ಪರಿವರ್ತನೆಗೊಂಡಿವೆ.

ಪಂಖುರಿ ಶ್ರೀವಾಸ್ತವ್ ತಮ್ಮ ಪದವಿ ಮುಗಿಸಿಕೊಂಡು ಮುಂಬೈಗೆ ಟೀಚ್ ಇಂಡಿಯಾ ಫೆಲೋ ಶಿಪ್‌ಗೆ ಬಂದಾಗ ಈ ರೀತಿಯ ರಿಯಲ್ ಎಸ್ಟೇಟ್ ಸಮಸ್ಯೆ ಅವರಿಗೂ ಎದುರಾಗಿತ್ತು. ಉಳಿದ ಉದ್ಯಮಿಗಳಂತೆ ಪಂಖುರಿ ಹಾಗೂ ಆಕೆಯ ಸಹಸಂಸ್ಥಾಪಕರಾದ ಪ್ರತೀಕ್ ಶುಕ್ಲಾ ಹಾಗೂ ಅಂಕಿತ್ ಸಿಂಘಾಲ್ ಈ ನಿಟ್ಟಿನಲ್ಲಿ ಹೊಸ ನಿರ್ಧಾರವೊಂದನ್ನು ಕೈಗೊಂಡಿದ್ದರು.

image


ಮುಂಬೈನಲ್ಲಿ ಸಾಕಷ್ಟು ವೆಬ್ ಪೋರ್ಟಲ್ ರಿಯಲ್ ಎಸ್ಟೇಟ್ ಸಂಸ್ಥೆಗಳು ಮನೆಗಳನ್ನು ಹುಡುಕಿಕೊಡುತ್ತಿದ್ದವು. ಆದರೆ ಆ ಮನೆಗಳ ಗುಣಮಟ್ಟ ಚೆನ್ನಾಗಿರುತ್ತಿರಲಿಲ್ಲ. ಮುಖ್ಯವಾಗಿ ಅವೆಲ್ಲವೂ ದಲ್ಲಾಳಿಯ ಕಮಿಷನ್ ಆಧಾರದಲ್ಲಿ ಮಾತ್ರ ನಡೆಯುವಂತದ್ದಾಗಿತ್ತು. ಹಾಗಾಗಿ ಮುಂಬೈನಲ್ಲಿ ಪ್ರತೀಕ್‌ರನ್ನು ಭೇಟಿ ಮಾಡಿದ ಪಂಖುರಿ ಈ ವಿಚಾರದಲ್ಲಿ ಪರಿಹಾರ ಕಂಡುಹಿಡಿಯಲು ನಿರ್ಧರಿಸಿದರು. ಪ್ರತೀಕ್ ಈ ತಂಡಕ್ಕೆ ತಮ್ಮ ಬಾಲ್ಯದ ಗೆಳೆಯ ಅಂಕಿತ್‌ರನ್ನು ಕರೆತಂದರು. ಈ ಮೂವರು ಆರಂಭಿಸಿದ ಸಂಸ್ಥೆಯೇ ಗ್ರ್ಯಾಬ್ ಹೌಸ್.ಕಾಮ್. ಅಂಕಿತ್ ದೆಹಲಿ ಐಐಟಿಯಲ್ಲಿ ಕಲಿತು ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲ ಕಾಲ ಕೆಲಸ ಮಾಡಿದ್ದ ಅನುಭವ ಹೊಂದಿದ್ದರು. ಪ್ರತೀಕ್ ಸಹ ಖಾನ್‌ಪುರ ಐಐಟಿಯಲ್ಲಿ ಕಲಿತವರಾಗಿದ್ದು, ಬ್ಲೂ ಗ್ಯಾಪ್ ಎಂಬ ಆನ್‌ಲೈನ್ ವ್ಯಾಪಾರಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದರು.

ಕಳೆದ ಜುಲೈನಲ್ಲಿ ಗ್ರ್ಯಾಬ್ ಹೌಸ್ ಆರಂಭಿಸಿದ ಇವರು ಹೊಸತೊಂದು ಸೇವೆಯನ್ನು ಆರಂಭಿಸಿದ್ದಾರೆ. ನಿಮ್ಮ ರೂಮ್ ನಲ್ಲಿ ನಿಮಗೊಬ್ಬರು ಸಹವಾಸಿ ಬೇಕೆಂದರೆ, ಅವರು ನಿಮ್ಮಂತೆ ಅಭಿರುಚಿ ಹಾಗೂ ಹವ್ಯಾಸಗಳನ್ನು ಹೊಂದಿರಬೇಕು ಜೊತೆಗೆ ನಿಮ್ಮ ಏಕಾಂತ ಬದುಕಿಗೆ ಜೊತೆ ಬೇಕೆಂದರೆ ನಿಮ್ಮ ಹೆಸರನ್ನು ಈ ವೆಬ್‌ಸೈಟ್‌ನಲ್ಲಿ ರಿಜಿಸ್ಟರ್ ಮಾಡಿಸಬಹುದು. ಪರಿಣಾಮವಾಗಿ ನಿಮ್ಮ ಆಲೋಚನೆಯ ಹಾಗೂ ನಿಮಗೆ ಹೊಂದಿಕೆಯಾಗಬಲ್ಲ ರೂಂ ಮೇಟ್‌ ಅನ್ನು ವೆಬ್‌ಸೈಟ್ ಒದಗಿಸುತ್ತದೆ. ಅಂತೆಯೇ ಮಹಾನಗರಗಳಲ್ಲಿ ಉಳಿದುಕೊಳ್ಳಲು ರೂಂ ಹುಡುಕುವವರು ತಮ್ಮ ಪ್ರೊಫೈಲ್‌ ಅನ್ನು ಈ ವೆಬ್‌ಸೈಟ್‌ನಲ್ಲಿ ರಿಜಿಸ್ಟರ್ ಮಾಡಿಸಬಹುದು.

ಇದು ದಲ್ಲಾಳಿಯಿಂದ ಮುಕ್ತಿ ಹೊಂದಲು ಇರುವ ಅತ್ಯುತ್ತಮ ಮಾರ್ಗ. ಗ್ರ್ಯಾಬ್ ಹೌಸ್ ವೆಬ್‌ಸೈಟ್ ಸೂಕ್ತವಾದ ಹಾಗೂ ಸಮರ್ಥವಾದ ಆಶ್ರಯತಾಣಗಳನ್ನು ಬ್ರೋಕರೇಜ್ ಕಮಿಷನ್ ಇಲ್ಲದೇ ಒದಗಿಸುತ್ತದೆ ಎನ್ನುತ್ತಾರೆ ಪ್ರತೀಕ್. ಯಾವುದೇ ವ್ಯಕ್ತಿಗಳಿಂದಲೂ ಕಮಿಷನ್ ತೆಗೆದುಕೊಳ್ಳುವುದಿಲ್ಲ. ಹಾಗಂತ ಬ್ರೋಕರೇಜ್ ಇಲ್ಲದೇ ರಿಯಲ್ ಎಸ್ಟೇಟ್ ಉದ್ಯಮ ಸಾಧ್ಯವಿಲ್ಲ. ಆದರೆ ಅದನ್ನು ಗ್ರಾಹಕರಿಂದ ಪಡೆಯುವ ಬದಲು ನೇರವಾಗಿ ವೃತ್ತಿಪರವಾಗಿ ಗಳಿಸಿಕೊಳ್ಳುವುದೇ ಬುದ್ಧಿವಂತಿಕೆ ಎಂದು ಗ್ರ್ಯಾಬ್ ಹೌಸ್ ಸಂಸ್ಥಾಪಕರು ಹೇಳುತ್ತಾರೆ. ಮಾರುಕಟ್ಟೆಯಲ್ಲಿ ವಿಭಿನ್ನ ಉದ್ಯಮ ಹೊಂದುವುದು ಹಾಗೂ ಗ್ರಾಹಕರಿಗೆ ಸಹಾಯ ಮಾಡುವುದೇ ಸಂಸ್ಥೆಯ ಮುಖ್ಯ ಉದ್ದೇಶ ಎನ್ನುವುದು ಪಂಖುರಿಯವರ ಸ್ಪಷ್ಟೀಕರಣ. ಅವರೇ ಹೇಳುವಂತೆ ಅವರ ಆದಾಯ ಜಾಹೀರಾತುಗಳು ಹಾಗೂ ವೆಬ್ ತಾಣಗಳ ಪಟ್ಟಿ ಮಾಡುವುದರಿಂದ ಸಿಗುತ್ತದೆ.

ಈ ಸಂಸ್ಥೆ ಶೀಘ್ರದಲ್ಲೇ ಮೊಬೈಲ್ ಆ್ಯಪ್ ಲಾಂಚ್ ಮಾಡಲು ಈ ಮೂಲಕ ಸಾಮಾಜಿಕ ಜಾಲತಾಣದ ಸಾಮರ್ಥ್ಯ ಪಡೆದುಕೊಳ್ಳಲು ಯೋಜನೆ ರೂಪಿಸಿದೆ. ಗ್ರ್ಯಾಬ್ ಹೌಸ್ ಸಾಮಾಜಿಕ ಜಾಲತಾಣದ ಮೂಲಕ ಮಾರ್ಕೆಟಿಂಗ್ ಮಾಡುವುದಷ್ಟೇ ಅಲ್ಲದೇ ಜನಗಳೊಂದಿಗೆ ಬೆರೆಯುವ ತೀರ್ಮಾನ ಕೈಗೊಂಡಿದೆ. ಯಾವುದೇ ವ್ಯಕ್ತಿಯ ವೈಯಕ್ತಿಕ ಸಂಪರ್ಕವನ್ನು ಸಂಸ್ಥೆ ನೀಡುವುದಿಲ್ಲ. ಬದಲಿಗೆ ಮೆಸೇಜ್ ಸೌಕರ್ಯದಲ್ಲಿ ಅವರ ಅವಶ್ಯಕತೆಗಳನ್ನು ಅರಿತು ಪೂರೈಸುವುದರತ್ತ ಗಮನಹರಿಸುತ್ತದೆ. ಅವರ ಸರ್ಚ್ ಇಂಜಿನ್‌ನಲ್ಲಿ ಎರಡು ಪ್ರೊಫೈಲ್‌ಗಳ ಮಧ್ಯೆ ಸಾಮ್ಯತೆ ಕಂಡುಬಂದರೆ ಆ ಬಳಿಕವಷ್ಟೇ ಸಂಪರ್ಕ ಕಲ್ಪಿಸಿಕೊಡಲಾಗುತ್ತದೆ. ಇಷ್ಟ, ಅಭಿರುಚಿ, ಹವ್ಯಾಸ, ವ್ಯಕ್ತಿತ್ವ ಮುಂತಾದ ಸಾಮ್ಯತೆಗಳ ಆಧಾರದಲ್ಲಿ ರೂಂ ಮೇಟ್ಸ್ ಹೊಂದಿಸಿಕೊಡುವ ಕೆಲಸ ಗ್ರ್ಯಾಬ್ ಹೌಸ್ ಮಾಡುತ್ತಿದ್ದು, ನೋಂದಣಿ ಸಮಯದಲ್ಲಿ ನಿಖರ ಮಾಹಿತಿ ಪಡೆದುಕೊಳ್ಳಲಾಗುತ್ತದೆ.

ಪ್ರತೀಕ್ ಹೇಳುವಂತೆ ನವೀಮುಂಬೈ ಎಲ್ಲಾ ವ್ಯವಹಾರಗಳಿಗೂ ಅತ್ಯುತ್ತಮ ಕಾರ್ಯಕ್ಷೇತ್ರ. ಈ ಪ್ರದೇಶದಲ್ಲಿ ಸಾಕಷ್ಟು ವ್ಯಾವಹಾರಿಕ ಸಂಸ್ಥೆಗಳು, ಬೃಹತ್ ಉದ್ದಿಮೆಗಳು ಕಾರ್ಯನಿರತವಾಗಿವೆ. ಹಾಗಾಗಿ ಇಲ್ಲಿ ಅವಕಾಶಗಳೂ ಸಾಕಷ್ಟಿವೆ.

ಗ್ರ್ಯಾಬ್ ಹೌಸ್, ಮುಂಬೈನಲ್ಲಿ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿರುವ ಟಾಪ್ 10 ಸಂಸ್ಥೆಗಳ ಪಟ್ಟಿಯಲ್ಲಿದೆ. ಈ ಸೈಟ್‌ನಲ್ಲಿ ಈಗಾಗಲೇ 750ಕ್ಕೂ ಹೆಚ್ಚು ನೋಂದಾಯಿತ ಬಳಕೆದಾರರಿದ್ದು, 35 ಹೊಸ ರಿಯಲ್ ಎಸ್ಟೇಟ್ ಲಿಸ್ಟಿಂಗ್ ಮತ್ತು 65 ರೂಂ ಅನ್ವೇಷಕರ ಪ್ರೊಫೈಲ್‌ಗಳಿವೆ. ಲಾಂಚ್ ಆದ 15 ದಿನದಲ್ಲೇ ಗ್ರ್ಯಾಬ್ ಹೌಸ್ ಸುಮಾರು 10 ಬಳಕೆದಾರರಿಗೆ ಸುವ್ಯವಸ್ಥಿತ ಮನೆಗಳನ್ನೂ ಹಾಗೂ ಸಹವಾಸಿಗಳನ್ನು ಹುಡುಕಿಕೊಟ್ಟಿದ್ದಲ್ಲದೇ 96,000 ರೂ. ಹಣವನ್ನು ಉಳಿಸಿತು ಎಂದು ಪ್ರತೀಕ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಈ ರೀತಿಯ ಮೌಲ್ಯಾಧಾರಿತ ಸೇವೆಗಳನ್ನು ಗ್ರಾಹಕರಿಗೆ ಸದಾ ನೀಡಲು ಗ್ರ್ಯಾಬ್ ಹೌಸ್ ಸಿದ್ಧವಿದೆ ಎಂದು ಅವರು ಹೇಳಿದ್ದಾರೆ.

10 ಲಕ್ಷ ರೂ. ಮೂಲ ಬಂಡವಾಳದೊಂದಿಗೆ ಆರಂಭವಾದ ಗ್ರ್ಯಾಬ್ ಹೌಸ್ ಮಹಾನಗರಗಳಲ್ಲಿ ಸ್ನೇಹಿತರನ್ನು ಹಾಗೂ ಉತ್ತಮ ಸಹವಾಸಿಗಳನ್ನು ಹುಡುಕಿಕೊಡಲು ನೆರವಾಗುತ್ತಿದೆ. ಭಾರತದ ಬೇರೆ ಮೆಟ್ರೋಪಾಲಿಟನ್ ನಗರಗಳಿಗೂ ಪ್ರವೇಶ ಪಡೆದುಕೊಳ್ಳುವ ಯೋಜನೆ ಗ್ರ್ಯಾಬ್ ಹೌಸ್‌ನದ್ದಾಗಿದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಸುಮಾರು 50 ಲಕ್ಷ ರೂ. ಹೆಚ್ಚುವರಿ ಬಂಡವಾಳ ಹೂಡಿ ಸಂಸ್ಥೆಯ ವಿಸ್ತರಣೆಗೆ ಯೋಜನೆ ರೂಪಿಸಲಾಗಿದೆ.