ವಿಪತ್ತು ನಿರ್ವಹಣಾ ಪರಿಸ್ಥಿತಿಗಳನ್ನೆದುರಿಸುವ ಸ್ಟಾರ್ಟ್‌ಅಪ್​ಗಳ ಕಾರ್ಯವೈಖರಿ

ಟೀಮ್​ ವೈ.ಎಸ್​. ಕನ್ನಡ

ವಿಪತ್ತು ನಿರ್ವಹಣಾ ಪರಿಸ್ಥಿತಿಗಳನ್ನೆದುರಿಸುವ ಸ್ಟಾರ್ಟ್‌ಅಪ್​ಗಳ ಕಾರ್ಯವೈಖರಿ

Tuesday December 22, 2015,

5 min Read

image


ಚೆನ್ನೈ ನಗರಕ್ಕೆ ಅಪ್ಪಳಿಸಿದ ನೆರೆ ಹಾವಳಿ, ವಿಪತ್ತು ನಿರ್ವಹಣೆ ಕುರಿತಾದ ಹಲವು ಅಂಶಗಳ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟಿದೆ. ಕಳೆದ ಹಲವು ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಹಲವು ಸ್ಟಾರ್ಟ್‌ ಅಪ್‌ಗಳು ಆರಂಭವಾಗಿವೆ. 2013ರ ಉತ್ತರಾಖಂಡ್ ನೆರೆಹಾವಳಿ ಮತ್ತು ನೇಪಾಳ್ ಭೂಕಂಪ ಸಂದರ್ಭಗಳಲ್ಲಿ ಈ ಸ್ಟಾರ್ಟ್ ಅಪ್‌ಗಳು ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ನೆರೆ ಹಾವಳಿಯಂತಹ ಪರಿಸ್ಥಿತಿಗಳನ್ನು ನಿಭಾಯಿಸುತ್ತಿವೆ. ರಕ್ಷಣಾ ತಂಡಗಳು, ವಿಪತ್ತು ಪರಿಹಾರ ಮತ್ತು ಇದಕ್ಕೆ ಸಂಬಂಧಿಸಿದ ಇತರ ಯೋಜನೆಗಳಿಗೆ ಸಂಬಂಧಿಸಿದಂತೆ ಆರಂಭವಾಗಿರುವ ಸ್ಟಾರ್ಟ್ ಅಪ್​ಗಳ ಕುರಿತು ಯುವರ್‌ಸ್ಟೋರಿ ಮಾಡಿರುವ ಅವಲೋಕನ ಇಲ್ಲಿದೆ.

ನಿರ್ದಿಷ್ಟ ಕಾರಣಕ್ಕಾಗಿ ಸ್ವಯಂ ಸೇವೆ

ವಿಮಾನಯಾನ ಸಂಸ್ಥೆಗಳು ಇತ್ತೀಚಿನ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಭದ್ರತಾ ಪಡೆಗಳಿಗೆ ಸಾಕಷ್ಟು ಸಹಕಾರ ನೀಡಿವೆ. ಸಾಂಪ್ರದಾಯಿಕ ಹೆಲಿಕಾಪ್ಟರ್‌ಗಳು ಎಲ್ಲೆಡೆಯಲ್ಲೂ ಲ್ಯಾಂಡ್ ಆಗಲು ಸಾಧ್ಯವಾಗುವುದಿಲ್ಲ. ಉಪಗ್ರಹಗಳ ಮೂಲಕ ಪರಿಸ್ಥಿತಿಯ ಸಮಗ್ರ ಚಿತ್ರಣ ಸರಿಯಾಗಿ ದೊರಕದಿದ್ದ ಪಕ್ಷದಲ್ಲಿ ಕಾರ್ಯಾಚರಣೆಗಿಳಿಯುವ ಡ್ರೋಣ್‌ ವಿಮಾನಗಳು ವಾಸ್ತವಸ್ಥಿತಿಗೆ ಹತ್ತಿರವಾದ ಚಿತ್ರಣಗಳನ್ನು ಪಡೆಯುತ್ತವೆ. “ಡ್ರೋಣ್‌ ವಿಮಾನಗಳು ವಿಪತ್ತು ನಿರ್ವಹಣಾ ಸಂದರ್ಭಗಳಲ್ಲಿ ಸಾಕಷ್ಟು ಸಹಾಯಕ್ಕೆ ಬರುತ್ತವೆ. ಇದರಿಂದ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಕರಿಸುತ್ತವೆ” ಎಂದಿದ್ದಾರೆ ಮುಂಬೈ ಮೂಲದ ಡ್ರೋಣ್ ಸೊಲ್ಯುಷನ್ ಸಂಸ್ಥೆ ಏರ್‌ಪಿಕ್ಸ್‌ನ ಸಹ ಸಂಸ್ಥಾಪಕ ಶಿನಿಲ್ ಶೇಖರ್.

“ನಾವು 2013ರ ಉತ್ತರಾಖಂಡ್‌ನ ನೆರೆ ಹಾವಳಿ ಸಂದರ್ಭದಲ್ಲಿ ಡ್ರೋಣ್‌ಗಳ ನಿರ್ವಹಣೆಗಾಗಿ 2 ತಂಡಗಳನ್ನು ಕಳಿಸಿಕೊಟ್ಟಿದ್ದೆವು. ಏಕೆಂದರೆ ಪರಿಸ್ಥಿತಿಯ ಅವಲೋಕನಕ್ಕೆ ರಾಜ್ಯದ ಏಜೆನ್ಸಿಗಳು ಸೀಮಿತ ಮಟ್ಟದ ಮೂಲಗಳನ್ನು ಮಾತ್ರ ಹೊಂದಿದ್ದವು. ಅವುಗಳಿಂದಲೇ ಪರಿಸ್ಥಿತಿಯನ್ನು ಗಮನಿಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ನಾವು ನೆರೆ ಪ್ರದೇಶದ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಸಂಪೂರ್ಣವಾಗಿ ತಿಳಿಯಬಲ್ಲವರಾಗಿದ್ದೆವು” ಎಂದಿದ್ದಾರೆ ಐಡಿಯಾಫೋರ್ಜ್ ಸಂಸ್ಥೆಯ ಸಹಸಂಸ್ಥಾಪಕ ಅಂಕಿತ್ ಮೆಹ್ತಾ. ಈ ಸಂಸ್ಥೆ ಉತ್ತರಾಖಂಡ್ ನೆರೆ ಸಂದರ್ಭದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯೊಂದಿಗೆ ಸೇರಿ ಸ್ವಯಂಸೇವೆಯನ್ನು ಒದಗಿಸಿತ್ತು.

“ಇಂತಹ ತಂತ್ರಜ್ಞಾನಗಳು ಸಮಯ ಉಳಿಸಲು ಮತ್ತು ಮಾನವ ಪ್ರಯತ್ನವನ್ನು ಕಡಿಮೆಗೊಳಿಸಲು ಸಹಕಾರಿಯಾಗಿರುತ್ತವೆ. ಸ್ಥಳೀಯ ಆಡಳಿತಗಳು ವಿಭಿನ್ನ ಏಜೆನ್ಸಿಗಳೊಂದಿಗೆ ಸೇರಿ ಕಾರ್ಯನಿರ್ವಹಿಸುತ್ತಿರುತ್ತವೆ. ಆದರೆ ಇಲ್ಲಿ ಇನ್ನೂ ಹೆಚ್ಚಿನ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುವುದು ಅವಶ್ಯಕವಾಗಿರುತ್ತದೆ. ನಮ್ಮ ಡ್ರೋಣ್‌ಗಳು ವಿಪತ್ತಿನ ಸಂದರ್ಭಗಳಲ್ಲಿ ಬದುಕುಳಿದವರನ್ನೂ ಸಹ ಗುರುತಿಸುತ್ತವೆ. ಒಮ್ಮೆ ಡ್ರೋಣ್‌ಗಳು ಗುರುತಿಸಿದ ನಂತರ ಅಲ್ಲಿಗೆ ಹೆಲಿಕಾಪ್ಟರ್‌ಗಳನ್ನು ಕಳುಹಿಸಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಬಹುದು” ಎಂದು ವಿವರಿಸಿದ್ದಾರೆ ಈ ಮೊದಲು ಐಡಿಯಾ ಫೋರ್ಜ್ ಸಂಸ್ಥೆಯಲ್ಲಿದ್ದ ಅಮರ್‌ದೀಪ್ ಸಿಂಗ್(ಪ್ರಸ್ತುತ ಇವರು ನೆಕ್ಸ್ ಗೇರ್ ಸಂಸ್ಥೆಯ ಸಹಸಂಸ್ಥಾಪಕರು)

2014ರೊಳಗೆ ಎನ್‌ಡಿಆರ್‌ಎಫ್‌ ತಮ್ಮ ಉತ್ಪನ್ನವನ್ನು ಹೊರತಂದಿತ್ತು. ಪುಣೆಯ ಮಲಿನ್ ಎಂಬ ಹಳ್ಳಿಯಲ್ಲಿ ನಡೆದ ಭೂಕುಸಿತದ ಸಂದರ್ಭದಲ್ಲಿ ಎನ್‌ಡಿಆರ್‌ಎಫ್‌ ಜೊತೆ ಐಡಿಯಾಫೋರ್ಜ್ ಸಂಸ್ಥೆಯೂ ಕಾರ್ಯನಿರ್ವಹಿಸಿತ್ತು. ಈ ದುರಂತದಲ್ಲಿ 200 ಮಂದಿ ಸಿಲುಕಿದ್ದರು.

ಇನ್ನು ವಿಪತ್ತು ನಿರ್ವಹಣಾ ಸಂದರ್ಭಗಳಲ್ಲಿ ಡ್ರೋಣ್‌ಗಳ ಪಾತ್ರದ ಕುರಿತು ಅಮರ್‌ದೀಪ್‌ ಅವರ ಅಭಿಪ್ರಾಯವನ್ನು ಡ್ರೋಣಾ ಏವಿಯೇಶನ್‌ ಸಂಸ್ಥೆಯ ಸಿಇಓ ಅಪೂರ್ವ ಗೋಡ್‌ಬೋಲೆ ಸಮರ್ಥಿಸುತ್ತಾರೆ. ಇಲ್ಲಿಯವರೆಗೂ ಡ್ರೋಣಾ ಸಂಸ್ಥೆ ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ಕಾರ್ಯನಿರ್ವಹಿಸಿಲ್ಲ. ಆದರೆ ಈ ಸಂಸ್ಥೆ ಆಗಾಗ ಮುಂಬೈ ಅಗ್ನಿಶಾಮಕದಳದ ಜೊತೆ ಕಾರ್ಯನಿರ್ವಹಿಸುತ್ತಿರುತ್ತದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಯಾವ ರೀತಿಯಲ್ಲಿ ತಮ್ಮ ಸಂಸ್ಥೆ ತೊಡಗಿಕೊಳ್ಳಬಹುದು ಎಂಬುದರ ಕುರಿತು ಈ ಸಂಸ್ಥೆ ಸರ್ಕಾರದ ಇಲಾಖೆಗಳೊಂದಿಗೆ ಮಾತುಕತೆ ನಡೆಸುತ್ತಿದೆ. ವಿಪತ್ತು ನಿರ್ವಹಣಾ ಸಂದರ್ಭಕ್ಕಾಗಿ ಇನ್ನೂ ಹೆಚ್ಚಿನ ಆ್ಯಪ್‌ಗಳು ಅಗತ್ಯವಿದೆ ಎನ್ನುತ್ತಾರೆ ಅಪೂರ್ವ. ಡ್ರೋಣ್ ಸಂಸ್ಥೆಯ ಅಗ್ನಿಶಾಮಕದಳದ ಕೆಲವರಿಗೆ ತಮ್ಮ ಯುಎವಿಗಳನ್ನು ಬಳಸಲು ತರಬೇತಿ ನೀಡಿದೆ. ಇದಕ್ಕೆ ಸಂಬಂಧಿಸಿದ ಕಾನೂನು ಸ್ಪಷ್ಟವಾಗುವವರೆಗೂ ಸರ್ಕಾರಿ ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತಿರುತ್ತೇವೆ ಎಂದಿದ್ದಾರೆ ಅಪೂರ್ವ. ಡ್ರೋಣ್ ಸಂಸ್ಥೆ ಈಗ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದೆ.

ತಂತ್ರಜ್ಞಾನದಲ್ಲಿರುವ ಸಮಸ್ಯೆಗಳು

ಉತ್ತರಾಖಂಡ್‌ ಪ್ರವಾಹ ಸಂದರ್ಭದಲ್ಲಿ ಏರ್‌ಪಿಕ್ಸ್ ಸಂಸ್ಥೆಯ ಡ್ರೋಣ್‌ಗಳು ಮಾಹಿತಿ ಸಂಗ್ರಹಣೆಯಲ್ಲಿ ಸಾಕಷ್ಟು ಸಹಕಾರ ಮಾಡಿದ್ದವು. ಒಂದು ಹಂತದ ನಂತರ ಮಾಧ್ಯಮಗಳ ಗಮನವೂ ಕಡಿಮೆಯಾಗಲಾರಂಭಿಸಿತು. ಹೀಗಾಗಿ ಎನ್‌ಜಿಓಗಳಿಗೆ ಪರಿಹಾರಕ್ಕಾಗಿ ಹರಿದುಬರಬೇಕಿದ್ದ ಫಂಡಿಂಗ್‌ ಕೂಡ ಲಭಿಸಲಿಲ್ಲ. ಹೀಗಾಗಿ ನಾವು ಕಾರ್ಯಾಚರಣೆಗಿಳಿದು ತೀರಾ ಸಣ್ಣ ಸಣ್ಣ ಗಲ್ಲಿಗಳ ಬಗ್ಗೆಯೂ ಮಾಹಿತಿ ಲಭಿಸುವಂತೆ ಮಾಡಿದೆವು ಎಂದಿದ್ದಾರೆ ಶಿನಿಲ್.

ಆದರೂ ಮಳೆ ಸುರಿಯುತ್ತಿರುವ ಸಂದರ್ಭದಲ್ಲಿ ಯುಎವಿಗಳಿಂದ ಸಾಕಷ್ಟು ಸಹಾಯ ನಿರೀಕ್ಷಿಸಲಾಗದು. ಏಕೆಂದರೆ ಈ ಯುಎವಿಗಳಿಂದ ಲಭ್ಯವಾಗುವ ದೃಶ್ಯಗಳ ಗುಣಮಟ್ಟ ಕಡಿಮೆಯಾಗಿರುತ್ತದೆ. ಮಳೆ ನಿಂತ ಬಳಿಕದ ದೃಶ್ಯಾವಳಿಗಳಿಂದಷ್ಟೇ ಸಾಕಷ್ಟು ಸಹಾಯವಾಗುತ್ತದೆ. ಆಗಷ್ಟೇ, ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಕುರಿತು ಮಾಹಿತಿ ದೊರಕುತ್ತದೆ. ಒಂದು ಪ್ರದೇಶದ ಮರುರಚನೆಗೆ ಸಂಬಂಧಿಸಿದಂತೆ 3ಡಿ ಚಿತ್ರಗಳನ್ನು ತೋರಿಸಬಹುದು ಮತ್ತು ಡ್ರೈನೇಜ್ ಪ್ಲಾನ್‌ಗೆ ಸಂಬಂಧಿಸಿದ ಮಾಹಿತಿಯನ್ನು ನೀಡಬಹುದು ಎಂದಿದ್ದಾರೆ ಶಿನಿಲ್.

ಎಲ್ಲಾ ರೀತಿಯ ಮುಂದುವರಿದ ತಂತ್ರಜ್ಞಾನಗಳಿದ್ದರೂ ಸಹ ಚೆನ್ನೈನ ಪ್ರಸ್ತುತ ಪರಿಸ್ಥಿತಿಯಂದ ಸ್ಟಾರ್ಟ್‌ ಅಪ್‌ಗಳು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು, ಯಾವುದರ ಕುರಿತು ಹೆಚ್ಚು ಗಮನಹರಿಸಬೇಕೆಂಬುದರ ಕುರಿತು ತಿಳಿಸಿಕೊಟ್ಟಿದೆ. ಈ ಕ್ಷೇತ್ರದ ಹಲವು ಸಂಸ್ಥೆಗಳು ತಮ್ಮ ತಂತ್ರಜ್ಞಾನವನ್ನು ಸುಧಾರಿಸಿಕೊಳ್ಳುವತ್ತ ಕೆಲಸ ಮಾಡುತ್ತಿವೆ. ಉದಾಹರಣೆಗೆ ಏರ್‌ಪಿಕ್ಸ್‌ ಸಂಸ್ಥೆ ಕಸ್ಟಮೈಸ್ಡ್ ಸೊಲ್ಯುಷನ್‌ಗಳನ್ನು ಒದಗಿಸಲು ಶ್ರಮಿಸುತ್ತಿದೆ ಮತ್ತು ಐಡಿಯಾ ಫೋರ್ಜ್ ಸಂಸ್ಥೆ ತಮ್ಮ ಇನ್ನೊಂದು ಉತ್ಪನ್ನ ನೇತ್ರಾದ ಮೂಲಕ ಇನ್ನೂ ಹೆಚ್ಚಿನ ಪ್ರದೇಶಗಳನ್ನು ಕವರ್ ಮಾಡುವ ಕುರಿತು ಕೆಲಸ ಮಾಡುತ್ತಿದೆ.

ಐಡಿಯಾ ಫೋರ್ಜ್ ಸಂಸ್ಥೆಯ ಸಹಸಂಸ್ಥಾಪಕ ಅಂಕಿತ್ ಮೆಹ್ತಾ ಹೇಳುವಂತೆ ಪ್ರಸ್ತುತ ಐಡಿಯಾ ಫೋರ್ಜ್ ಸಂಸ್ಥೆಯ ಯುಎವಿಗಳು 5 ಕಿಮೀವರೆಗೆ ಸಂಚರಿಸಬಹುದಾದ ತಾಕತ್ತು ಹೊಂದಿವೆ. ಅಲ್ಲದೇ 50 ನಿಮಿಷಗಳ ಕಾಲ ನಿರಂತರವಾಗಿ ಹಾರಾಡುವ ಸಾಮರ್ಥ್ಯ ಹೊಂದಿವೆ. ಪ್ರಸ್ತುತ ಪೊಲೀಸ್ ಫೋರ್ಸ್‌ಗಳಿಗೆ ಸಹಕಾರಿಯಾಗುವಂತಹ ಚಿತ್ರಸಹಿತ ಗುಪ್ತಚರ ಮಾಹಿತಿಯ ತಂತ್ರಜ್ಞಾನವನ್ನು ವೈಮಾನಿಕ ಮತ್ತು ನೆಲದ ಮೇಲಿನ ದೃಷ್ಟಿಕೋನದಲ್ಲಿ ನಿರ್ಮಿಸುವ ಕೆಲಸ ಮಾಡುತ್ತಿದೆ. ಚೆನ್ನೈ ನೆರೆಹಾವಳಿಯಂತಹ ಪರಿಸ್ಥಿತಿಗಳ ಬಗ್ಗೆ ಹೇಳುವುದಾದರೆ ಯಾವುದೇ ರೀತಿಯ ಎಸ್‌ಓಪಿ(ಸ್ಟ್ಯಾಂಡರ್ಡ್ ಆಪರೇಶನಲ್ ಪ್ರೊಸೆಸ್- ಉತ್ತಮ ದರ್ಜೆಯ ಕಾರ್ಯನಿರ್ವಹಣಾ ವಿಧಾನಗಳು)ಗಳು ಅನುಸರಿಸಲಾಗುವುದಿಲ್ಲ. ಒಂದು ಪ್ರದೇಶದಲ್ಲಿ ಎಸ್‌ಓಪಿ ಇಲ್ಲದಿದ್ದಾಗ ತುರ್ತು ಪರಿಸ್ಥಿತಿಯ ಸಂದರ್ಭಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಕಷ್ಟವಾಗುತ್ತದೆ.

ಅದರಲ್ಲೂ ವಿಪತ್ತುಗಳು ಎದುರಾದ ಸಂದರ್ಭಗಳಲ್ಲಿ ಸಂಪರ್ಕದ ಸಮಸ್ಯೆಯೂ ಎದುರಾಗುತ್ತದೆ. ಇದರಿಂದ ಭದ್ರತಾಪಡೆಗಳನ್ನು , ರಕ್ಷಣಾ ತಂಡಗಳನ್ನು ಸರಿಯಾಗಿ ನಿರ್ವಹಿಸುವುದು ಕಷ್ಟವಾಗುತ್ತದೆ. ಮೊಬೈಲ್‌ ಟವರ್‌ಗಳನ್ನು ಶೀಘ್ರದಲ್ಲಿ ನಿರ್ಮಿಸುವ ಮೂಲಕ ಮತ್ತು ಒಂದು ಕಮ್ಯುನಿಕೇಶನ್ ಸೆಂಟರ್‌ ಗೆ ಉತ್ತಮವಾದ ಸಿಗ್ನಲ್‌ಗಳು ಲಭಿಸುವಂತೆ ಮಾಡುವ ಮೂಲಕ ಟೆಲಿಕಾಂ ಸಂಸ್ಥೆಗಳು ಈ ಸಮಸ್ಯೆಯನ್ನು ಪರಿಹರಿಸಬಹುದು ಎಂಬ ಸಲಹೆ ನೀಡಿದ್ದಾರೆ ಅಮರ್‌ದೀಪ್.

ನಾವು ಕಲೆಕ್ಟ್ ಎಂಬ ಆ್ಯಪ್‌ ಒಂದನ್ನು ಅಭಿವೃದ್ಧಿಪಡಿಸಿದ್ದೇವೆ. ಇದು ಇಂಟರ್‌ನೆಟ್‌ನ ಅವಶ್ಯಕತೆ ಇಲ್ಲದೇ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ ಹೆಚ್ಚಿನ ಮೆಮೋರಿಯ ಅವಶ್ಯಕತೆ ಸಹ ಇಲ್ಲ. ಇದು ಕಡಿಮೆ ಬೆಲೆಯ ಫೋನ್‌ಗಳಲ್ಲೂ ಕೆಲಸ ಮಾಡುತ್ತದೆ. ಇದರ ಮೂಲಕ ತೀರಾ ರಿಮೋಟ್ ಪ್ರದೇಶಗಳ ಮಾಹಿತಿಯೂ ಲಭಿಸುತ್ತದೆ ಎಂದಿದ್ದಾರೆ ಸೋಶಿಯಲ್ ಕಾಪ್ಸ್ ಸಂಸ್ಥೆಯ ಸಹ ಸಂಸ್ಥಾಪಕ ಪುರುಕಲ್ಪ ಶಂಕರ್.

ಇದಲ್ಲದೇ ಮತ್ತೊಂದು ದೊಡ್ಡ ಸಮಸ್ಯೆಯ ಕುರಿತು ಪುರುಕಲ್ಪ ಅವರು ಗಮನ ಸೆಳೆಯುತ್ತಾರೆ. ಅದೆಂದರೆ ಪರಿಹಾರ ಸಾಮಗ್ರಿಗಳ ಸರಬರಾಜು. “ನಾವು ದೇಶದಲ್ಲಿ ಅತ್ಯುತ್ತಮವಾದ ಇ-ಕಾಮರ್ಸ್ ಲಾಜಿಸ್ಟಿಕ್ಸ್ ಸರಪಳಿಯನ್ನು ಹೊಂದಿದ್ದೇವೆ. ಉದಾಹರಣೆಗೆ ಮಹಾರಾಷ್ಟ್ರದ ಅತ್ಯಂತ ಸಣ್ಣ ಪ್ರದೇಶಗಳಿಗೂ ಕೂಡ ಅಮೇಜಾನ್‌ ಸಂಸ್ಥೆ ತನ್ನ ಉತ್ಪನ್ನಗಳನ್ನು ವಿತರಿಸುತ್ತದೆ. ವಿತರಣಾ ಸರಪಳಿಯನ್ನು ಸರಿಯಾಗಿ ಸಂಘಟಿಸಲು ಸಮರ್ಥವಾದ ನಿಯಂತ್ರಣ ಇರಬೇಕಾಗುತ್ತದೆ” ಎಂದಿದ್ದಾರೆ ಪುರುಕಲ್ಪ. ಸರ್ಕಾರಿ ಏಜೆನ್ಸಿಗಳು, ಎನ್‌ಜಿಓಗಳು ಮತ್ತು ತೀರಾ ಸಣ್ಣ ಪ್ರದೇಶಗಳಲ್ಲೂ ವಿತರಣೆ ನಡೆಸುವ ಕಾರ್ಪೋರೇಟ್ ಸಂಸ್ಥೆಗಳು ಸೇರಿದಂತೆ 120 ಸಂಘಟನೆಗಳೊಂದಿಗೆ ಸೋಶಿಯಲ್ ಕಾಪ್ಸ್ ಸಂಸ್ಥೆ ಕಾರ್ಯನಿರ್ವಹಿಸುತ್ತದೆ. ಉತ್ತಮ ಗುಣಮಟ್ಟದಿಂದ ನಾವು ಸರಿಯಾದ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಅಪ್‌ಡೇಟೆಡ್ ಡಾಟಾ ಹೊಂದಲು ಮತ್ತು ಹುಡುಕಲು ಸಾಧ್ಯವಾಗುತ್ತದೆ.

ಚೆನ್ನೈ ನೆರೆ ಹಾವಳಿ ಸಂದರ್ಭದಲ್ಲಿ ಸೋಶಿಯಲ್ ಕಾಪ್ ಸಂಸ್ಥೆ ತನ್ನ ಡಾಟಾ ಸಂಗ್ರಹಣಾ ವೇದಿಕೆಯನ್ನು ನಿಯೋಜಿಸಿತ್ತು. ಇದರಿಂದ ಸ್ವಯಂಸೇವಕರು ಎಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂಬುದನ್ನು ತಿಳಿಯಬಹುದಾಗಿತ್ತು. ಭೂಮಿ ಎಂಬ ಎನ್‌ಜಿಓ ಜೊತೆ ಸೇರಿ ಕಾರ್ಯನಿರ್ವಹಿಸಿದ ಈ ಸಂಸ್ಥೆ ಹಾನಿಗೊಳಗಾದ ಪ್ರದೇಶಗಳ ಕುರಿತು ಸಮರ್ಥ ಡಾಟಾ ಸೌಲಭ್ಯ ಒದಗಿಸಿತ್ತು.

ಯುವರ್‌ಸ್ಟೋರಿ ಆಶಯ

ಸ್ಥಳೀಯ ಮಟ್ಟದಲ್ಲೂ ನೂತನ ತಂತ್ರಜ್ಞಾನಗಳು ಲಭಿಸುವಂತಾಗಿ ಅವುಗಳು ವಿಸ್ತಾರವಾಗಿ ಕಾರ್ಯನಿರ್ವಹಿಸುವಂತಾಗಬೇಕು. ಕೇವಲ ಎನ್‌ಡಿಆರ್‌ಎಫ್‌ನ ಹೆಡ್‌ಕ್ವಾರ್ಟರ್ಸ್‌ನಲ್ಲಿ ಕಾರ್ಯನಿರ್ವಹಿಸಿದರೆ ಸಾಕಾಗುವುದಿಲ್ಲ ಎಂದಿದ್ದಾರೆ ಅಮರ್‌ದೀಪ್. ಪುಣೆ ಮೂಲದ ವಿಪತ್ತು ನಿರ್ವಹಣಾ ಮತ್ತು ಉಪಕರಣಗಳ ಸಮಾಲೋಚಕ ರಾಜೇಂದ್ರ ಲಡ್‌ಕಟ್‌ ಹೇಳುವಂತೆ ವಿಪತ್ತು ಸಂದರ್ಭಗಳಲ್ಲಿ ಮಕ್ಕಳು ಸಹ ತಮ್ಮ ರಕ್ಷಣೆಗೆ ಉಪಯೋಗಿಸಲು ಸಾಧ್ಯವಾಗುವಂತಹ ಉಪಕರಣಗಳು ಲಭಿಸುವಂತಾಗಬೇಕು. ಅದರ ಬಗ್ಗೆ ಸರಿಯಾದ ಮಾಹಿತಿ, ಜಾಗೃತಿ ಮೂಡಿಸಬೇಕು. ಭೂಕುಸಿತ ಮತ್ತು ಭೂಕಂಪದ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂಬುದರ ಕುರಿತು ಶಾಲೆಗಳಲ್ಲಿ ಮತ್ತು ಕಚೇರಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಒಂದು ಇಂತಹ ಮಾಹಿತಿಯನ್ನು ಚೆನ್ನೈ ಪ್ರವಾಹ ಪರಿಸ್ಥಿತಿಗೂ ಮುಂಚೆಯೇ ನೀಡಿದ್ದರೆ ಜನರು ಪ್ರವಾಹದಿಂದ ಇಷ್ಟೊಂದು ದೊಡ್ಡ ದುರಂತಕ್ಕೀಡಾಗಬೇಕಾದ ಪರಿಸ್ಥಿತಿ ಎದುರಾಗಬೇಕಿರುತ್ತಿರಲಿಲ್ಲ. ಉಪಕರಣಗಳ ಕುರಿತು ಮಾಹಿತಿ ಮೊದಲೇ ಇದ್ದಿದ್ದರೆ ಅದನ್ನು ಮನೆಯಲ್ಲೇ ತಂದಿಟ್ಟುಕೊಂಡು ವಿಪತ್ತಿನಿಂದ ಸ್ವಲ್ಪ ಮಟ್ಟಿಗಾದರೂ ಪರಿಹಾರ ಕಂಡುಕೊಳ್ಳಬಹುದಾಗಿತ್ತು.

ರಾಜೇಂದ್ರ ಅವರ ಸಂಜೀವಿನಿ ಕಿಟ್ ನಾಸಿಕ್ ಕುಂಭಮೇಳ, ಉತ್ತರಾಖಂಡ ನೆರೆಹಾವಳಿ ಮತ್ತು ನೇಪಾಳ ಭೂಕಂಪದ ಸಂದರ್ಭದಲ್ಲಿ ಸಾಕಷ್ಟು ಸಹಕಾರಿಯಾಗಿ ಬಳಕೆಯಾಗಿತ್ತು. ಈ ಕಿಟ್ ನಲ್ಲಿ ಆಕ್ಟಿವೇಟೆಡ್ ಕಾರ್ಬನ್ ಮಾಸ್ಕ್, ನೆಕ್ ಬೆಲ್ಟ್ ಮತ್ತು ಹೀರಿಕೊಳ್ಳುವ ಉಪಕರಣಗಳ ಕಿಟ್‌ ಸೇರಿದಂತೆ ಇತರ ವಸ್ತುಗಳು ಇದ್ದು ಇದನ್ನು ಸ್ವಯಂಸೇವಕರು ಬಳಸಿದ್ದರು. ಇವರ ಬಳಿ ತೇಲುವ ಸ್ಟ್ರೆಚರ್‌ಗಳೂ ಸಹ ಲಭ್ಯವಿದೆ. ಇವು ಶವಗಳ ಸಾಗಾಣೆಯಲ್ಲಿ ಉಪಯೋಗಕ್ಕೆ ಬರುತ್ತದೆ. ಇಂತಹ ಸಾಮಗ್ರಿಗಳ ಬಗ್ಗೆ ಹೆಚ್ಚು ಅರಿವು ಮೂಡಬೇಕು ಮತ್ತು ಅವುಗಳನ್ನು ಬಳಸುವ ವಿಧಾನದ ಕುರಿತು ಜಾಗೃತಿ ಮೂಡಿಸಬೇಕು. ವಿಪತ್ತು ನಿರ್ವಹಣೆಯಲ್ಲಿ ಇಂತಹ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಕೇವಲ ಸರ್ಕಾರಿ ಏಜೆನ್ಸಿಗಳು ಇಂತಹ ವಿಧಾನಗಳನ್ನು ಜಾರಿಗೆ ತರುವ ಅಧಿಕಾರವಿರುತ್ತದೆ ಮತ್ತು ವಿಪತ್ತು ಸಂಭವಿಸಿದ ಸ್ಥಳಕ್ಕೆ ಇವುಗಳನ್ನು ತಲುಪಿಸುವ ಜವಾಬ್ದಾರಿ ಇರುತ್ತದೆ. ಸ್ಟಾರ್ಟ್ ಅಪ್‌ಗಳೇನೋ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಲು ಶ್ರಮಿಸುತ್ತಿವೆ. ಈಗ ಸರ್ಕಾರದ ಸರದಿ. ಸರ್ಕಾರಗಳು ವಿಪತ್ತು ನಿರ್ವಹಣೆ ಪರಿಸ್ಥಿತಿಯನ್ನು ಯಾವ ಕ್ಷಣದಲ್ಲಾದರೂ ಎದುರಿಸಲು ಸಿದ್ಧವಿರುವ ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆ ಖಂಡಿತ ಇದೆ.


ಲೇಖಕರು: ಅತಿರಾ ಎ ನಾಯರ್​​

ಅನುವಾದಕರು: ವಿಶ್ವಾಸ್​​​​