ಕಡಿಮೆ ಶುಲ್ಕ, ಉತ್ತಮ ವೈದ್ಯರ ಹುಡುಕಾಟದಲ್ಲಿದ್ದೀರಾ? ನಿಮಗಾಗೇ ಇದೆ ಡಾಕ್ಟರ್ ಕ್ವಿಕ್

ಟೀಮ್​ ವೈ.ಎಸ್​. ಕನ್ನಡ

ಕಡಿಮೆ ಶುಲ್ಕ, ಉತ್ತಮ ವೈದ್ಯರ ಹುಡುಕಾಟದಲ್ಲಿದ್ದೀರಾ? ನಿಮಗಾಗೇ ಇದೆ ಡಾಕ್ಟರ್ ಕ್ವಿಕ್

Sunday December 20, 2015,

3 min Read


ಆಸ್ಪತ್ರೆಗೆ ಹೋಗೋದು ತಲೆ ನೋವಿನ ಕೆಲಸ. ಗಂಟೆಗಟ್ಟಲೆ ಕುಳಿತರೂ ವೈದ್ಯರು ಸಿಗೋದು ಕಷ್ಟ. ಡಾಕ್ಟರ್ ಶುಲ್ಕ ಕೇಳಿದ್ರೆ ರೋಗ ಕಡಿಮೆ ಆಗುವ ಬದಲು ಜಾಸ್ತಿಯಾಗುತ್ತೆ. ಆಸ್ಪತ್ರೆಗೆ ಹೋಗಿ ಪರದಾಡುವ ಬದಲು ನರಳಾಡೋದು ವಾಸಿ ಎನ್ನುವ ಭಾರತೀಯರ ಸಂಖ್ಯೆಯೇ ಜಾಸ್ತಿ. ಭಾರತದಲ್ಲಿ ಅತ್ಯುನ್ನತ ಆಸ್ಪತ್ರೆ ಹಾಗೂ ಅತ್ಯುತ್ತಮ ವೈದ್ಯರಿದ್ದಾರೆ. ಆದರೆ ಜನರಿಗೆ ಅವರ ಬಗ್ಗೆ ಮಾಹಿತಿಯಾಗಲಿ, ಅವರ ಸೇವೆಯಾಗಲಿ ಸರಿಯಾಗಿ ಸಿಗ್ತಾ ಇಲ್ಲ.

ಜನಸಾಮಾನ್ಯರ ಸಮಸ್ಯೆ ಗಮನದಲ್ಲಿಟ್ಟುಕೊಂಡು ಹೊರಬಂದಿದ್ದೇ` ಡಾಕ್ಟರ್ ಕ್ವಿಕ್.’ ಭಾರತದಲ್ಲಿ ರೋಗಿಗಳಿಗೆ ಉತ್ತಮ ಡಾಕ್ಟರ್ ಬಳಿ ಹೋಗಲು ಸಾಧ್ಯವಾಗುವುದಿಲ್ಲ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಡಾಕ್ಟರ್ ಕ್ವಿಕ್ ಆರಂಭಿಸಿರುವುದಾಗಿ ಸಿಇಓ ಆಶಿಶ್ ಕುಮಾರ್ ಹೇಳ್ತಾರೆ. ಆನ್ಲೈನ್, ಫೋನ್, ಮೊಬೈಲ್ ಆ್ಯಪ್ಸ್, ವಾಟ್ಸಪ್ ಮೂಲಕ ಜನರು ಡಾಕ್ಟರ್ ಸಂಪರ್ಕ ಹಾಗೂ ಸಹಾಯ ಪಡೆಯಬಹುದಾಗಿದೆ. ಇದೊಂದು ಹಲ್ಪ್ತ್ ಲೈನ್ ಮಾತ್ರ ಅಲ್ಲ, ಡಾಕ್ಟರ್, ಆಸ್ಪತ್ರೆ, ಲ್ಯಾಬ್, ಔಷಧಿ ಅಂಗಡಿಗಳ ಬಗ್ಗೆ ಗೂಗಲ್ ಮ್ಯಾಪ್ ತರ ಕೆಲಸ ಮಾಡುತ್ತದೆ. ಇದರ ಸೇವೆಯನ್ನು ಗ್ರಾಹಕರು ಉಚಿತವಾಗಿ ಪಡೆಯಬಹುದಾಗಿದೆ.

image


ಕೇವಲ ಮಾಹಿತಿ ನೀಡುವುದೊಂದೇ ಅಲ್ಲ, ಡಾಕ್ಟರ್ ಕ್ವಿಕ್ ಭಾರತದಲ್ಲಿರುವ ಬಡವರಿಗೆ ನೆರವಾಗ್ತಾ ಇದೆ. ವೈದ್ಯರು,ಆಸ್ಪತ್ರೆ ಹಾಗೂ ಔಷಧಾಲಯಗಳಿಂದ ಬಡವರಿಗೆ ಗರಿಷ್ಠ ರಿಯಾಯಿತಿ ನೀಡುತ್ತಿದೆ. `ದೊಡ್ಡ ಆಸ್ಪತ್ರೆ, ವೈದ್ಯರುಗಳ ಜೊತೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಈ ಮೂಲಕ ಬಡವರಿಗೆ ರಿಯಾಯಿತಿ ನೀಡುತ್ತಿದ್ದೇವೆ. ಡಾಕ್ಟರ್ ಕ್ವಿಕ್ ವೆಬ್ ಸೈಟ್ ಮೂಲಕ ಹೋಗುವ ರೋಗಿಗಳಿಗೆ ಶುಲ್ಕದಲ್ಲಿ ಶೇಕಡಾ 10-15ರಷ್ಟು ರಿಯಾಯಿತಿ ಸಿಗುತ್ತಿದೆ. ಶೀಘ್ರದಲ್ಲಿ ಇನ್ನಷ್ಟು ಆಸ್ಪತ್ರೆ ಹಾಗೂ ವೈದ್ಯರು, ಔಷಧಿ ಅಂಗಡಿಗಳು ನಮ್ಮ ಜೊತೆ ಕೈಜೋಡಿಸಲಿವೆ’ ಎನ್ನುತ್ತಾರೆ ಆಶಿಶ್.

ಡಾಕ್ಟರ್ ಕ್ವಿಕ್ ನಲ್ಲಿ ರೋಗಿಗಳು ತಮಗೆ ಬೇಕಾದ ವೈದ್ಯರನ್ನು ಆಯ್ಕೆ ಮಾಡಿಕೊಳ್ಳಬಹುದು. ಹಾಗೆಯೇ ಆನ್ ಲೈನ್ ಮೂಲಕ ವೈದ್ಯರ ಅಪಾಯಿಂಟ್ಮೆಂಟ್ ಪಡೆಯಬಹುದಾಗಿದೆ. ಡಾಕ್ಟರ್ ಕ್ವಿಕ್ ವೆಬ್ ಸೈಟ್ ಅಥವಾ ಟೋಲ್ ಫ್ರೀ ನಂಬರ್ ಮೂಲಕ ರೋಗಿಗಳನ್ನು ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಈ ಮೂಲಕ ನಿಮ್ಮ ಅಥವಾ ನಿಮ್ಮ ಕುಟುಂಬದ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದಾಗಿದೆ. ವೈದ್ಯರನ್ನು ಭೇಟಿ ಮಾಡುವುದು ರೋಗಿಗಳಿಗೆ ಒಂದು ಕಷ್ಟದ ಕೆಲಸ. ಆದರೆ ಡಾಕ್ಟರ್ ಕ್ವಿಕ್ ಮೂಲಕ ವೈದ್ಯರ ಭೇಟಿ ಸುಲಭವಾಗುತ್ತದೆ. ಇದರಿಂದ ರೋಗಿಗಳು ಉಳಿದ ಸಮಯವನ್ನು ವಿಶ್ರಾಂತಿಗಾಗಿ ಬಳಸಬಹುದಾಗಿದೆ. ರೋಗಿಗಳ ಮನೆ ಬಾಗಿಲಿಗೆ ಔಷಧ, ಉತ್ತಮ ಆಸ್ಪತ್ರೆ ಮತ್ತು ವೈದ್ಯರನ್ನು ಒದಗಿಸುವ ಸೇವೆಯನ್ನು ಡಾಕ್ಟರ್ ಕ್ವಿಕ್ ಮಾಡ್ತಾ ಇದ್ದು, ಇನ್ನಷ್ಟು ಸೇವೆಗಳನ್ನು ಸದ್ಯದಲ್ಲಿಯೇ ಕೊಡುವುದಾಗಿ ಆಶಿಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಲ್ಲಿಯವರೆಗೆ ಉತ್ತಮ ವೈದ್ಯರು, ಆಸ್ಪತ್ರೆಗಳನ್ನು ಹುಡುಕುವುದು ಬಹದೊಡ್ಡ ಸಾಹಸವಾಗಿತ್ತು. ಮನೆ ಪಕ್ಕದಲ್ಲಿ ವೈದ್ಯರಿದ್ದರೂ ನಮಗೆ ತಿಳಿಯುತ್ತಿರಲಿಲ್ಲ. ಯಾವ ವೈದ್ಯರು ಯಾವುದರಲ್ಲಿ ಹೆಚ್ಚು ಪರಿಣಿತರು ಎಂಬುದನ್ನು ಹುಡುಕುತ್ತ ಹೋಗಬೇಕಿತ್ತು. ಅಕ್ಕ-ಪಕ್ಕದವರ ಬಳಿ ಮಾಹಿತಿ ಕೇಳಬೇಕಿತ್ತು. ಹೊಸದಾಗಿ ಆ ಪ್ರದೇಶಕ್ಕೆ ಬಂದವರಿಗಂತೂ ಇದೊಂದು ಕಷ್ಟದ ಕೆಲಸ. ಆರೋಗ್ಯ ಸರಿ ಇಲ್ಲದ ಸಮಯದಲ್ಲಿ ವೈದ್ಯರನ್ನು ಹುಡುಕುತ್ತ ಹೋಗುವುದು ಸುಲಭವಲ್ಲ. ಆದರೆ ಕ್ವಿಕ್ ವೆಬ್ ಸೈಟ್ ಜನರ ಕೆಲಸವನ್ನು ಸುಲಭ ಮಾಡಿದೆ. ಮಕ್ಕಳ ಆಟದಂತೆ ಅತಿ ಬೇಗ ನಮಗೆ ಬೇಕಾದ ವೈದ್ಯರು,ಆಸ್ಪತ್ರೆಯನ್ನು ಪತ್ತೆ ಹಚ್ಚಿ, ಅಪಾಯಿಂಟ್ಮೆಂಟ್ ಪಡೆಯಬಹುದಾಗಿದೆ. ವಾರದ ಏಳೂ ದಿನ, 24 ಗಂಟೆಯಲ್ಲಿ ಯಾವುದೇ ಸಮಯದಲ್ಲಿ ಬೇಕಾದರೂ ಡಾಕ್ಟರ್ ಅಪಾಯಿಂಟ್ಮೆಂಟ್ ಪಡೆಯಬಹುದಾಗಿದೆ. ರೋಗಿಗಳು ತಮ್ಮ ಆರೋಗ್ಯ ದಾಖಲೆ ಕಾಪಾಡುವ ಹಾಗೂ ಅದನ್ನು ಯಾವಾಗ ಬೇಕಾದರೂ ನೋಡುವ ಅವಕಾಶವನ್ನು ಡಾಕ್ಟರ್ ಕ್ವಿಕ್ ಉಚಿತವಾಗಿ ನೀಡುತ್ತಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಡಿಜಿಟಲ್ ಇಂಡಿಯಾ ಮಾದರಿಯಲ್ಲಿಯೇ ಡಿಜಿಟಲ್ ಹೆಲ್ತ್ ಸೇವೆಯನ್ನು ಪರಿಚಯಿಸಲಾಗಿದೆ. ಈ ಮೂಲಕ ರೋಗಿಗಳಿಗೆ ವೈದ್ಯರು, ಆಸ್ಪತ್ರೆಗಳು, ಪ್ರಯೋಗಾಲಯಗಳು ಮತ್ತು ಔಷಧಾಲಯಗಳ ಬಗ್ಗೆ ಆಯ್ಕೆಗಳನ್ನು ನೀಡಲಾಗುತ್ತದೆ. ರೋಗಿಗಳು ವೈದ್ಯರ ಆಯ್ಕೆಯಲ್ಲಿ ಮುಕ್ತ ಅವಕಾಶ ಹೊಂದಿದ್ದಾರೆ. ವೈದ್ಯರು ಏನು ಓದಿದ್ದಾರೆ? ಮನೆಯಿಂದ ಆಸ್ಪತ್ರೆ ಎಷ್ಟು ದೂರವಿದೆ.? ವೈದ್ಯರ ಅನುಭವವೇನು? ಚಿಕಿತ್ಸೆಗೆ ಬೆಲೆ ಎಷ್ಟು? ಎಂಬುದನ್ನು ಗ್ರಾಹಕರು ಪಡೆಯಬಹುದು. ಇದರ ಜೊತೆಗೆ ನಾಲ್ಕು ವೈದ್ಯರನ್ನು ಒಂದೇ ಬಾರಿ ತುಲನೆ ಮಾಡಿ ನೋಡಬಹುದು. ನಂತರ ನಮಗೆ ಯೋಗ್ಯವೆನಿಸಿದ ವೈದ್ಯರನ್ನು ಬುಕ್ ಮಾಡಬಹುದು. ಅಲ್ಲದೆ ಡಾಕ್ಟರ್ ಕ್ವಿಕ್, ರೋಗಿಗಳ ಇ-ಆರೋಗ್ಯ ದಾಖಲೆಗಳನ್ನು ಹೊಂದಿರುತ್ತದೆ. ಆನ್ಲೈನ್ ಮೂಲಕ ರೋಗಿಗಳು ತಮ್ಮ ಆರೋಗ್ಯ ದಾಖಲೆಯನ್ನು ಎಲ್ಲಿ ಬೇಕಾದರೂ ನೋಡಬಹುದಾಗಿದೆ.

image


ಸದ್ಯ ದೆಹಲಿ ಎನ್ ಸಿಆರ್ ಹಾಗೂ ಮುಂಬೈನಲ್ಲಿ ಮಾತ್ರ ಡಾಕ್ಟರ್ ಕ್ಲಿಕ್ ಸೇವೆ ನಿರ್ವಹಿಸುತ್ತದೆ. ಸದ್ಯದಲ್ಲಿಯೇ ಇಡೀ ದೇಶದಾದ್ಯಂತ ಸೇವೆ ನೀಡುವ ಉದ್ದೇಶವನ್ನು ವೆಬ್ ಸೈಟ್ ಹೊಂದಿದೆ. ಆ ನಿಟ್ಟಿನಲ್ಲಿ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ.


ಲೇಖಕರು: ಅನ್ಮೋಲ್​

ಅನುವಾದಕರು: ರೂಪಾ ಹೆಗಡೆ