ತಿಂಡಿ ತಿನ್ನಿ, ಆರೋಗ್ಯದಿಂದಿರಿ..!

ಟೀಮ್​ ವೈ.ಎಸ್​​.

0

ದಿ ಬ್ರೇಕ್‍ಫಾಸ್ಟ್ ಬಾಕ್ಸ್. ಕಛೇರಿಗೆ ಹೋಗಲು ಟೈಮ್ ಆಯ್ತು, ಅಡುಗೆ ಮಾಡಲು ತರಕಾರಿ, ಬೇಳೆಯಿಲ್ಲ, ಹುಷಾರಿಲ್ಲ ಅಡುಗೆ ಹೇಗೆ ಮಾಡೋದು ಅಂತ ಚಿಂತೆ ಇರೋರಿಗೆ ಇಲ್ಲಿ ಕೆಲವರು ಮನೆಬಾಗಿಲಿಗೇ ಉಪಹಾರ ಡೆಲಿವರಿ ಮಾಡಲು ರೆಡಿಯಾಗಿದ್ದಾರೆ. ಹೌದು, ಕೆಲಸದ ಬಿಸಿಯಲ್ಲಿ ತಿಂಡಿ ತಿನ್ನಲಾಗದೇ ಒದ್ದಾಡುತ್ತಿದ್ದ ಮಂದಿಗೆ ದಿ ಬ್ರೇಕ್‍ಫಾಸ್ಟ್ ಬಾಕ್ಸ್ ಪರಿಹಾರ ನೀಡಲು ಮುಂದಾಗಿದೆ.

ಜೈ ಓಝಾ, ಅವನೀಶ್ ಜೈಸ್ವಾಲ್, ಮೃಗ್‍ನಯನ್ ಕಾಮ್‍ತೇಕರ್ ಹಾಗೂ ಮಹರ್ಷಿ ಉಪಾಧ್ಯಾಯ ಅವರಿಂದ ಪ್ರಾರಂಭವಾದ ಕಂಪನಿ. ಮನೆಬಾಗಿಲಿಗೇ ಬೆಳಗಿನ ಉಪಹಾರ ಒದಗಿಸುವ ಗುರಿಯೊಂದಿಗೆ ಪ್ರಾರಂಭಿಸಿದ ಸಂಸ್ಥೆಯೇ ಈ ಬ್ರೇಕ್‍ಫಾಸ್ಟ್ ಬಾಕ್ಸ್.

ದಿ ಬ್ರೇಕ್‍ಫಾಸ್ಟ್ ಬಾಕ್ಸ್ ಆರಂಭ

‘ಕೆಲಸಕ್ಕಾಗಿ ಮನೆಯಿಂದ ದೂರ ಹೋಗಿ, ಹೊರ ರಾಜ್ಯಗಳಲ್ಲಿ ವಾಸವಿದ್ದಾಗ, ನಮಗೆ ಆರೋಗ್ಯಕರ ಉಪಹಾರ ಹಾಗೂ ಊಟದ ವ್ಯವಸ್ಥೆ ಇರುತ್ತಿರಲಿಲ್ಲ’ ಅಂತಾರೆ ಮಹರ್ಷಿ. ಎಲ್ಲರೂ ಸರಿಯಾದ ಸಮಯಕ್ಕೆ ತಿಂಡಿ ಸೇವಿಸಬೇಕು ಅಂದ್ರೆ ಅವರ ಮನೆಬಾಗಿಲಿಗೇ ಆಹಾರ ಸಾಗಿಸುವುದೇ ಅದಕ್ಕೆ ಉತ್ತಮ ದಾರಿ ಅನ್ನೋದು ಗೊತ್ತಾಯ್ತು. ‘ಆಗ ಪೌಷ್ಠಿಕತಜ್ಞರೊಬ್ಬರನ್ನು ನಮ್ಮೊಂದಿಗೆ ಸೇರಿಸಿಕೊಂಡು ಪ್ರತಿದಿನ ಆರೋಗ್ಯಕರ ಉಪಹಾರಗಳ ಒಂದು ತಿಂಗಳ ಮೆನು ಸಿದ್ಧ ಮಾಡಿಕೊಂಡೆವು’ ಅಂತ ದಿ ಬ್ರೇಕ್‍ಫಾಸ್ಟ್ ಬಾಕ್ಸ್ ಪ್ರಾರಂಭದ ಕುರಿತು ಮಾಹಿತಿ ಹಂಚಿಕೊಳ್ತಾರೆ ಮಹರ್ಷಿ.

ದಿ ಬ್ರೇಕ್‍ಫಾಸ್ಟ್ ಬಾಕ್ಸ್ ಪ್ಯಾಕ್ ಮಾಡಿದ ರುಚಿಕರ ಹಾಗೂ ಆರೋಗ್ಯಯುತ ಆಹಾರವನ್ನು ಮನೆಬಾಗಿಲಿಗೇ ತಂದು ವಿತರಿಸುತ್ತದೆ. ಕಂಪನಿ ಶುರುವಾದ ಪ್ರಾರಂಭದ ದಿನಗಳಲ್ಲಿ, ಗ್ರಾಹಕರಿಗೆ ಕೆಲವೊಂದು ಅನಿವಾರ್ಯ ದಿನಗಳಲ್ಲಿ ಮಾತ್ರ ಈ ರೀತಿ ತಿಂಡಿ ಅಥವಾ ಉಪಾಹಾರ ಬೇಕಾಗುತ್ತೆ ಅನ್ನೋದು ದಿ ಬ್ರೇಕ್‍ಫಾಸ್ಟ್ ಬಾಕ್ಸ್ ತಂಡಕ್ಕೆ ಗೊತ್ತಾಯ್ತು. ಹೀಗಾಗಿ ಅವರು ಇದನ್ನು ಮುಕ್ತ ಮಾರುಕಟ್ಟೆಗೂ ವಿಸ್ತರಿಸಲು ಪ್ರಾರಂಭಿಸಿದರು.

ಮೊದಲ ತಿಂಗಳು 300 ಬಾಕ್ಸ್​​​ಗಳನ್ನು ವಿತರಣೆ ಮಾಡುವ ಮೂಲಕ ದಿ ಬ್ರೇಕ್‍ಫಾಸ್ಟ್ ಬಾಕ್ಸ್ ಸೇವೆ ಪ್ರಾರಂಭಿಸಿತು. ಈಗ ಕಳೆದ ನಾಲ್ಕು ತಿಂಗಳಿಂದ ಸರಿಸುಮಾರು 1200ರಿಂದ 1500 ಬಾಕ್ಸ್‍ಗಳವರೆಗೂ ಪುಣೆಯ ಮನೆಗಳಿಗೆ ತರಹೇವಾರಿ ಉಪಹಾರಗಳನ್ನು ಸರಬರಾಜು ಮಾಡಲಾಗ್ತಿದೆ. ಇವರ ಈ ಪ್ರಯತ್ನಕ್ಕೆ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರಕುತ್ತಿರುವ ಹಿನ್ನೆಲೆಯಲ್ಲಿ, ಕಂಪನಿಯ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಯೋಜನೆ ಕುರಿತು ಮಾಹಿತಿ ನೀಡ್ತಾರೆ ಮಹರ್ಷಿ.

‘ಕೆಲ ಖಾಸಗೀ ಹೂಡಿಕೆದಾರರು ಹಾಗೂ ಸ್ಥಳೀಯ ಉದ್ಯಮಿಗಳು ನಮ್ಮೊಂದಿಗೆ ಕೈಜೋಡಿಸಲು ಮುಂದೆ ಬಂದರು. ಆದ್ರೆ ಲಾಭ ಹೆಚ್ಚಿಸಿಕೊಳ್ಳೋದಷ್ಟೇ ನಮ್ಮ ಗುರಿಯಲ್ಲ. ಬದಲಿಗೆ ನಮ್ಮ ಕಲ್ಪನೆ ಮತ್ತು ದೂರದೃಷ್ಟಿಯನ್ನು ಅರ್ಥ ಮಾಡಿಕೊಂಡು ಬೆಂಬಲವಾಗಿ ನಿಲ್ಲುವ ಗುರುಗಳು ನಮಗೆ ಬೇಕು’ ಅನ್ನೋದು ಮಹರ್ಷಿ ಮಾತು.

ಸವಾಲುಗಳು

ಮಹರ್ಷಿ ಅವರೇ ಹೇಳುವ ಪ್ರಕಾರ ದಿ ಬ್ರೇಕ್‍ಫಾಸ್ಟ್ ಬಾಕ್ಸ್ ತಂಡಕ್ಕೆ ಸರಿಯಾದ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುವುದೇ ದೊಡ್ಡ ಸವಾಲಾಗಿತ್ತಂತೆ. ಯಾವ ರೀತಿಯ ಅಡುಗೆ ಉಪಹಾರಗಳನ್ನು ಒದಗಿಸಬೇಕು ಎಂಬುದರ ಕುರಿತು ಕಿಂಚಿತ್ತೂ ಯೋಚನೆಯಿಲ್ಲದೆ, ಅವರು ಮೊದಲಿಗೆ ಮನೆ ಅಡುಗೆ ಮಾಡುವವರನ್ನು ಕೆಲಸಕ್ಕೆ ಸೇರಿಸಿಕೊಂಡರು. ಕ್ರಮೇಣ ಜೈ, ಅಡುಗೆ ಮಾಡುವವನಿಗೆ ಇವರ ಆಹಾರ ಶೈಲಿಗೆ ಅನುಗುಣವಾಗಿ ಕೆಲ ತಿಂಡಿಗಳನ್ನು ಚೆನ್ನಾಗಿ ಮಾಡುವಂತೆ ಅಡುಗೆಯಾತನಿಗೆ ಸಹಾಯ ಮಾಡಿದರು.

ದಿನಕಳೆದಂತೆ ದಿ ಬ್ರೇಕ್‍ಫಾಸ್ಟ್ ಬಾಕ್ಸ್​​ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕ ಕಾರಣ, ಆಹಾರವನ್ನು ಡೆಲಿವರಿ ಮಾಡಲು ಬೆಳಗ್ಗೆ 7ರಿಂದ 11 ಗಂಟೆಯವರೆಗೆ ಕೆಲಸ ಮಾಡಲು ಅರೆಕಾಲಿಕ ಉದ್ಯೋಗಿಗಳನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡರು. ಹಾಗೇ ಬೇಡಿಕೆ ಬೆಳೆದಂತೆ ಒಬ್ಬ ಒಳ್ಳೆ ಬಾಣಿಸಗನನ್ನೂ ಕೆಲಸಕ್ಕೆ ಸೇರಿಸಿಕೊಳ್ಳಲಾಯ್ತು. ಸದ್ಯ ಒಬ್ಬ ಪ್ರಧಾನ ಬಾಣಸಿಗ ಹಾಗೂ ಇಬ್ಬರು ಸಹಾಯಕರು ದಿ ಬ್ರೇಕ್‍ಫಾಸ್ಟ್ ಬಾಕ್ಸ್​​ನ ಅಡುಗೆ ತಂಡದಲ್ಲಿದ್ದಾರೆ.

ಮಹರ್ಷಿ ಅವರು ಹೇಳುವ ಪ್ರಕಾರ, ’ಈಗ ನಾವು ನಮ್ಮ ಹಣದಲ್ಲೇ ಉದ್ಯಮವನ್ನು ಮುಂದುವರಿಸುತ್ತಿದ್ದೇವೆ. ನಾವು ಪ್ರಾರಂಭಿಸಿದ ನಾಲ್ಕೇ ತಿಂಗಳಲ್ಲಿ ಹೂಡಿದ್ದ ಬಜೆಟ್‍ಅನ್ನು ಮತ್ತೆ ಗಳಿಸುವುದರಲ್ಲಿ ಯಶಸ್ವಿಯಾದೆವು. ಆಗಲೇ ಕೆಲ ಹೂಡಿಕೆದಾರರು ನಮ್ಮ ಉದ್ಯಮದಲ್ಲಿ ಬಂಡವಾಳ ಹೂಡಲು ಮುಂದೆ ಬಂದರು’ ಅಂತ ಹೇಳ್ತಾರೆ ಮಹರ್ಷಿ.

ಮುಂದಿನ ನಾಲ್ಕು ತಿಂಗಳ ಕಾಲ ಪುಣೆಯಲ್ಲಿಯೇ ಆರೋಗ್ಯಪೂರ್ಣ ಆಹಾರ ವಿತರಣೆ ಮಾಡುವ ಯೋಜನೆ ದಿ ಬ್ರೇಕ್‍ಫಾಸ್ಟ್ ಬಾಕ್ಸ್ ತಂಡದ್ದು. ನಂತರ ಕ್ರಮೇಣ ಎರಡು, ಮೂರು ವರ್ಷಗಳಲ್ಲಿ ಇನ್ನೂ 8 ಪ್ರಮುಖ ನಗರಗಳಿಗೆ ವಿಸ್ತರಿಸುವ ಯೋಜನೆ ಹಾಕಿಕೊಂಡಿದ್ದಾರೆ.

ಯುವರ್‍ಸ್ಟೋರಿ ಏನ್ ಹೇಳುತ್ತೆ?

ಆಹಾರೋದ್ಯಮದಲ್ಲಿ 50 ಬಿಲಿಯನ್ ಡಾಲರ್‍ನಷ್ಟು ಮಾರುಕಟ್ಟೆಯಿದೆ. ಹೀಗಾಗಿಯೇ ನಾನೂ ಒಬ್ಬ ಕಂಪನಿ ಮಾಡ್ತೀನಿ ಎನ್ನುವಂತೆ ಹಲವು ಸಂಸ್ಥೆಗಳು ಈ ವಲಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಫುಡ್‍ಪಾಂಡಾ ಮತ್ತು ಟಿನಿಔಲ್ ಕಂಪನಿಗಳು ನಷ್ಟಕ್ಕೊಳಗಾದ ಕಾರಣ, ಹೆಚ್ಚು ಖರ್ಚು ಮತ್ತು ಶ್ರಮವಿದೆ ಎಂದು ಹಲವು ಹೂಡಿಕೆದಾರರು ಇಲ್ಲಿಗೆ ಕಾಲಿಡಲು ಎರಡು ಬಾರಿ ಚಿಂತಿಸುವಂತಾಗಿದೆ.

ಕೈತುಂಬಾ ಹಣವಿದ್ದ ಕಾರಣ ಹತ್ತಾರು ಸ್ಟಾರ್ಟಪ್‍ಗಳು ಭಾರೀ ರಿಯಾಯಿತಿ ಹಾಗೂ ಉಡುಗೊರೆ ಕೂಪನ್‍ಗಳನ್ನು ಕೊಟ್ಟು ಕೈ ಸುಟ್ಟಿಕೊಂಡವು ಅನ್ನೋದು ಹಲವು ತಜ್ಞರ ಅಭಿಪ್ರಾಯ. ಹೀಗಾಗಿಯೇ ಗ್ರಾಹಕರನ್ನು ಸೆಳೆಯುವುದೇ ಈ ಉದ್ಯಮದ ಅತಿ ದೊಡ್ಡ ಸವಾಲು. ಇನ್ನು ಮೂಲಗಳ ಪ್ರಕಾರ ಫುಡ್‍ಪಾಂಡಾ ಕೇವಲ ಒಬ್ಬ ಗ್ರಾಹಕನನ್ನು ಸೆಳೆಯಲು ಬರೊಬ್ಬರಿ 400 ರಿಂದ 500 ರೂಪಾಯಿ ಖರ್ಚು ಮಾಡಿದೆ ಎನ್ನಲಾಗಿದೆ.

Related Stories

Stories by YourStory Kannada