ಬೆಂಗಳೂರಿನಲ್ಲೊಬ್ಬ ಅಪ್ಪಟ ಕ್ರಿಕೆಟ್ ಅಭಿಮಾನಿ...

ಎನ್​ಎಸ್​ಆರ್​

0

ಕ್ರಿಕೆಟ್​ನಲ್ಲಿ ಹಲವು ತರಹದ ಅಭಿಮಾನಿಗಳಿರುತ್ತಾರೆ. ಆದರೆ ಇಲ್ಲೊರ್ವ ಅಭಿಮಾನಿಯಿದ್ದಾನೆ, ಎಲ್ಲರಿಗಿಂತ ವಿಭಿನ್ನ. ಇವರ ಮನೆಗೆ ಹೋದರೆ ಯಾವುದೋ ಕ್ರಿಕೆಟ್ ಸಂಗ್ರಹಾಲಯಕ್ಕೆ ಹೋದಂತ್ತಾಗುತ್ತದೆ. ನಮಗೆ ತಿಳಿದಿರುವಂತಹ ಅನೇಕ ಕ್ರಿಕೆಟ್ ದಂತಕತೆಗಳಿಗೆ ಈ ಹುಡುಗನ ಪರಿಚಯವಿದೆ. ಕ್ರಿಕೆಟಿಗರ ಆಟೋಗ್ರಾಫ್ ಸಂಗ್ರಹ ಮಾಡುವುದು, ಬ್ಯಾಟ್ ಮೇಲೆ ಸಹಿ ಹಾಕಿಸುವುದು ಮತ್ತು ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವುದು ಕ್ರಿಕೆಟ್ ಅಭಿಮಾನಿಗಳ ಕ್ರೇಜ್. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಹವ್ಯಾಸ. ಆದರೆ ಬೆಂಗಳೂರಿನ ಪ್ರಣವ್ ಜೈನ್ ಹವ್ಯಾಸವಂತೂ ಅದ್ಭುತ. ಕ್ರಿಕೆಟ್ ಅಭಿಮಾನಿ ಹೇಗೆಲ್ಲ ಕ್ರಿಕಟಿಗರ ಅಮೂಲ್ಯ ವಸ್ತುಗಳು ಮತ್ತು ಅವರ ಸಹಿಯನ್ನು ಸಂಗ್ರಹ ಮಾಡಲು ಸಾಧ್ಯವೋ ಎಲ್ಲ ರೀತಿಯಲ್ಲಿ ಅವರು ಸಂಗ್ರಹಿಸಿದ್ದಾರೆ... ಕ್ರಿಕೆಟ್​ಗೆ  ಸಂಬಂಧಿಸಿದ ಹಲವು ಬಗೆಯ ಸಂಗ್ರಹ ಇವರಲ್ಲಿದೆ..

ಮಹೇಂದ್ರ ಸಿಂಗ್ ಧೋನಿ ಆಟದ ಪರಿ ನೋಡಿ ಅವರ ಭಕ್ತನಾದ, ಕ್ರಿಕೆಟ್ ಲೋಕದ ವಿಭಿನ್ನ ಅಭಿಮಾನಿಯ ಕಥೆಯಿದು. 2007ರಲ್ಲಿ ಧೋನಿ ಆಟಕ್ಕೆ ಮರಳಾಗಿ ಅವರ ಅಪ್ಪಟ ಅಭಿಮಾನಿಯಾದವ ಪ್ರಣವ್ ಜೈನ್. ತಮ್ಮ ಹತ್ತನೇ ವಯಸ್ಸಿನಲ್ಲೇ ಕ್ರಿಕೆಟಿಗರ ಸಹಿ ಸಂಗ್ರಹಿಸುವ ಕೆಲಸಕ್ಕೆ ಮುಂದಾದ್ರು. ಇಂದು ಇವರು ಸಾವಿರಕ್ಕಿಂತ ಹೆಚ್ಚು ಕ್ರಿಕೆಟಿಗರ ಸಹಿ ಸಂಗ್ರಹಿಸಿದ್ದಾರೆ. ಆದರೆ ಮಹಿ ಕಂಡರೆ ಅದೇನೋ ಹೆಚ್ಚಿನ ಒಲವು.. ಕಳೆದ 8 ವರ್ಷದಿಂದ ಹಲವು ಸಲ ಮಹೇಂದ್ರ ಸಿಂಗ್ ಧೋನಿಯನ್ನು ಇವರು ಬೇಟಿ ಮಾಡಿದ್ದಾರೆ. ಧೋನಿ ಬೆಂಗಳೂರಿಗೆ ಬಂದಾಗೊಮ್ಮೆ ಅವರನ್ನು ಬೇಟಿ ಮಾಡ್ತಾರೆ. ಅವರಿಗೆ ಭಿನ್ನ-ವಿಭಿನ್ನ ಉಡುಗೋರೆಯನ್ನು ನೀಡಿ, ಅವರಿಂದ ಸಹಿ ಪಡೆಯುವುದು ಇವರ ಹವ್ಯಾಸ. ಧೋನಿಗಾಗಿ ಅವರಿಗೆ ಮೆಚ್ಚುಗೆಯಾಗುವಂತಹ ಹಲವು ಕ್ರೀಯಾಶಿಲ ಉಡುಗರೆಯನ್ನು ಇವರು ನೀಡಿದ್ದಾರೆ...

ಆರಂಭ ಐದು ವರ್ಷಗಳಲ್ಲಿ ಧೋನಿ ಬಂದಾಗೊಮ್ಮೆ ಹೋಗಿ ಅವರನ್ನು ಬೇಟಿ ಮಾಡಿದ್ದಾರೆ. ಅವರು ಬೆಂಗಳೂರಿನಲ್ಲಿ ಇದ್ರೆ ಸಾಕೂ ಪ್ರತಿ ದಿನವೂ ಅವರನ್ನು ಕಣ್ತುಂಬಿಕೊಳ್ಳುವುದು ಈತನ ಕಾಯಕ. ಆದರೆ ಇವನ ಅಪ್ಪಟ ಅಭಿಮಾನಕ್ಕೆ ಧೋನಿ ಕೂಡ ಕರಗಿದ್ದಾರೆ. 2013ರಿಂದ ಧೋನಿ ಬೆಂಗಳೂರಿಗೆ ಯಾವಾಗಲೇ ಬರಲಿ ತಮ್ಮ ಅಭಿಮಾನಿಯನ್ನು ಮಾತನಾಡಿಸುತ್ತಾರೆ. ಪ್ರಣವ್​ನ ಹೆಸರಿಡಿದು ಕರೆಯುವಷ್ಟು ಧೋನಿ ಆಪ್ತರಾಗಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಹಿನ್ನೆಲೆ ಬೆಂಗಳೂರಿನಲ್ಲಿದ್ದ ಮಹಿ, ಹೋಟೆಲ್​ಗೆ ಕರೆಯಿಸಿ ಪ್ರಣವ್ ಜೊತೆ 15 ನಿಮಿಷ ಕಳೆದಿದ್ದಾರೆ. ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವುದರ. ಜೊತೆಗೆ ಅವರ ಕ್ರಿಕೆಟ್ ಕಲೆಕ್ಷನ್ ನೋಡಿ ಮಹಿ ಕೂಡ ನಿಬ್ಬೆರಗಾಗಿದ್ದಾರೆ...

ಭಾರತ ದೇಶದಲ್ಲಿ ಇದುವರೆಗೂ 285 ಕ್ರಿಕೆಟಿಗರು ಟೆಸ್ಟ್ ಆಡಿದ್ದಾರೆ. ಆದರೆ ಅದರಲ್ಲಿ 145ಕ್ಕಿಂತ ಹೆಚ್ಚು ಕ್ರಿಕೆಟಿಗರ ಆಟೋಗ್ರಾಫ್ ಪ್ರಣವ್ ಬಳಿಯಿದೆ. ಇದರಲ್ಲಿ ಎಷ್ಟೋ ಜನರು ಈ ಲೋಕದಲಿಲ್ಲ. ಅವರ ಸಹಿಯನ್ನು ಇವರು ಸಂಗ್ರಹಿಸಿದ್ದಾರೆ. ವಿಶ್ವ ಕ್ರಿಕೆಟ್​ನ ಬಹುತೇಕ ಎಲ್ಲ ದಂತಕತೆ ಸಹಿ ಇವರು ಪಡೆದುಕೊಂಡಿದ್ದಾರೆ. ಪ್ರತಿ ಆಟಗಾರನ ಸಹಿಯನ್ನು ಅವರ ಫೋಟೊ ಮೇಲೆ ಪಡೆದಿರುವುದು ಪ್ರಣವ್ ವಿಶೇಷತೆಯಾಗಿದೆ. ಬಿಕಾಂ ಮೊದಲ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿರುವ ಈತನಿಗೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿರುವ ಎಲ್ಲ ಪಧಾದಿಕಾರಿಗಳ ಪರಿಚಯವಿದೆ.

ಈತ ಸಾಮಾನ್ಯ ಕ್ರಿಕೆಟ್ ಫ್ಯಾನ್ ಅಲ್ಲ, ಇವನ ಸಂಗ್ರಹ ನೋಡಿದ್ರೆ ಖಂಡಿತ ಗಿನ್ನೆಸ್ ಬುಕ್ ಆಫ್ ರೆಕಾರ್ಡ್​ಗೆ ಇವರ ಹೆಸರು ಸೇರುತ್ತದೆ. ಹೌದು ಕ್ರಿಕೆಟ್ ಆಡುವ ಎಲ್ಲ ದೇಶದ ಬಹುತೇಕ ಆಟಗಾರರ ಹಸ್ತಾಕ್ಷರ ಇವರ ಬಳಿಯಿದೆ. 

"ಒಟ್ಟು ಸಾವಿರಕ್ಕಿಂತ ಹೆಚ್ಚು ಆಟೋಗ್ರಾಫ್ ನಾನು ಪಡೆದಿದ್ದೇನೆ. 20 ದೊಡ್ಡ ಬ್ಯಾಟುಗಳ ಮೇಲೆ ಆಯಾ ದೇಶದ ಆಟಗಾರರ ಸಹಿಯಿದ್ರೆ. 500 ಸಣ್ಣ ಬ್ಯಾಟುಗಳ ಮೇಲೆ ಒಬ್ಬೊಬ್ಬ ಕ್ರಿಕೆಟಿಗರ ಸಹಿ ಸಂಗ್ರಹಿಸಿದ್ದೇನೆ.. ಜೊತೆಗೆ ರಾಹುಲ್ ದ್ರಾವಿಡ್, ಎಂ.ಎಸ್ ಧೋನಿ, ಕೇವಿನ್ ಪೀಟರ್ಸನ್, ಯುವರಾಜ್ ಸಿಂಗ್, ಗ್ಲೆನ್ ಮೆಗ್ರಾತ್, ನಾಸೀರ್ ಹುಸೈನ್, ಗ್ರೇಮ್ ಸ್ಮಿತ್, ಆ್ಯಡಂ ಗಿಲ್​ಕ್ರಿಸ್ಟ್, ಗ್ರೇಮ್ ಸ್ವಾನ್ ಮತ್ತು ಕ್ರಿಸ್​ಗೇಲ್ ಸೇರಿದಂತೆ ಹಲವು ಕ್ರಿಕೆಟರ್​ಗಳ ಸಹಿಯನ್ನು ಅವರ ಪುಸಕ್ತಗಳ ಮೇಲೆ ಪಡೆದಿದ್ದೇನೆ"
                                           -ಪ್ರಣವ್​​

ನನ್ನ ಬಳಿ 60 ಕ್ಕಿಂತ ಹೆಚ್ಚು ಕ್ರಿಕೆಟಿಗರ ಜರ್ಸಿಯಿದೆ. ಪಾಕಿಸ್ತಾನ ಆಟಗಾರರಿಂದ ಹಿಡಿದು. ಜಿ.ಆರ್ ವಿಶ್ವನಾಥ್, ಅನಿಲ್ ಕುಂಬ್ಳೆ ವೆಂಕಟೇಶ್ ಪ್ರಸಾದ್, ವಿರಾಟ್ ಕೊಹ್ಲಿ, ಆಫ್ರಿಕಾದ ಎಲ್ವರ್ತಿ, ಆಸ್ಟ್ರೇಲಿಯಾದ ಮೆಗ್ರಾತ್, ಹಾಗೂ ಹಲವು ಮಾಜಿ ಕ್ರಿಕೆಟಿಗರ ಜರ್ಸಿಗಳ, ಮತ್ತು ಶ್ವೇಟರ್ಗಳ ಸಂಗ್ರಹಿಸಿದ್ದೇನೆ. ಇದರೊಂದಿಗೆ ಎಂ.ಸ್. ಧೋನಿ, ಕ್ರಿಸ್ಗೇಲ್, ವಿರಾಟ್ ಕೊಹ್ಲಿ ಮುಂತಾದ ಆಂತಾರಾಷ್ಟ್ರೀಯ ಕ್ರಿಕೆಟರ್​ಗಳು ನೀಡಿರುವ ಕ್ಯಾಪ್​ಗಳಿವೆ. 500 ಕ್ಕಿಂತ ಹೆಚ್ಚು ಕ್ರಿಕೆಟರ್​ಗಳ ಜೊತೆ ಪೋಟೊ ತೆಗಿಸಿಕೊಂಡಿದ್ದು ಅವನ್ನು ಜೋಪಾನವಾಗಿ ಇಟ್ಟಿದ್ದೇನೆ. ಕುಮಾರ ಸಂಗಕ್ಕರ, ಸಚಿನ್ ತೆಂಡುಲ್ಕರ್, ವಾಸೀಂ ಅಕ್ರಂ, ಇಂಜಮಾಮ್ ಉಲ್ ಹಕ್, ಜಾವೇದ್ ಮಿಯಾಂದಾದ್, ರಿಕಿ ಪಾಂಟಿಂಗ್, ಮೊಹಿಂದರ್ ಅಮರ್ನಾಥ್, ಕಪಿಲ್ ದೇವ್ ಸೇರಿದಂತೆ ಧರೆಯ ಮೇಲಿರುವ ಬಹುತೇಕ ಸ್ಟಾರ್ ಕ್ರಿಕೆಟಿಗರೊಂದಿಗೆ ಬಹಳ ಪ್ರೀತಿ ಯಿಂದ ಫೋಟೋ ತೆಗೆಸಿಕೊಂಡಿದ್ದು, ಅವನ್ನು ಜೋಪಾನವಾಗಿ ಇಟ್ಟಿದ್ದೇನೆ ಎಂತಾರೆ" ಪ್ರಣವ್.

500 ಕ್ಕಿಂತ ಹೆಚ್ಚು ಕ್ರಿಕೆಟಿಗರಿಂದ, ಅವರವರ ಪೋಟೊ ಮೇಲೆ ಸಹಿ ಸಂಗ್ರಹಿಸಿದ್ದಾರೆ.. ಈ 500 ಪೋಟೋಗಳಲ್ಲಿ ಅಬ್ದುಲ್ ಖಾದೀರ್ ಸಹಿ ಕೂಡ ಇದೆ. ಮುತ್ತಯ್ಯ ಮುರಳಿಧರನ್, ಸಚಿನ್ ತೆಂಡುಲ್ಕರ್, ವಿಂಡೀಸ್ ಫಾಸ್ಟ್ ಬೌಲರ್​ಗಳಾದ ವಾಲ್ಶ್, ಅಂಬ್ರೋಸ್, ಲಂಕಾದ ಅರವಿಂದ ಡಿಸಿಲ್ವಾ, ಅರ್ಜುನ ರಣತುಂಗಾ, ಸನತ್ ಜಯಸೂರ್ಯ, ಭಾರತದ ಸ್ಪಿನ್ ತ್ರಿಮೂರ್ತಿಗಳಾದ, ಈ.ಎಸ್ ಪ್ರಸನ್ನ, ಬಿ.ಎಸ್ ಚಂದ್ರಶೇಖರ್ ಮತ್ತು ಬಿಶನ್ ಸಿಂಗ್ ಬೇಡಿ ಸಹಿಯಿದೆ.

ಹಲವು ಮಾಜಿ ಆಟಗಾರು ಈತನೊಂದಿಗೆ ಮಾತಾಡುತ್ತಾರೆ. ಅವರ ಸಮಯ ಕ್ರಿಕೆಟ್ ರೋಚಕ ಕಥೆಗಳನ್ನು ಈತನೊಂದಿಗೆ ಹಂಚಿಕೊಳ್ತಾರೆ. "ಮಾಜಿ ಕ್ರಿಕೆಟಿಗರಾದ ಫಾರೂಕ್ ಇಂಜಿನಿಯರ್, ಇಎಎಸ್ ಪ್ರಸನ್ನ, ಬಿ.ಎಸ್ ಚಂದ್ರಶೇಖರ್ ಮತ್ತು ಬಿಶನ್ ಸಿಂಗ್ ಬೇಡಿ ನನಗೆ ಆಪ್ತರು. ಅನಿಲ್ ಕುಂಬ್ಳೆ, ಧೋನಿ, ವಿವಿಎಸ್ ಲಕ್ಷ್ಮಣ್ ಮತ್ತು ವೆಂಕಟೇಶ್ ಪ್ರಸಾದ್ ಕೂಡ ನನ್ನ ಹೆಸರಿಡಿದು ಮಾತನಾಡಿಸುತ್ತಾರೆ".

ಇದುವರೆಗೂ ಕ್ರಿಕೆಟ್ ಸಂಬಂಧಿಸಿದ ಈ ಸಂಗ್ರಹಕ್ಕಾಗಿ ಕನಿಷ್ಠ 15 ಲಕ್ಷ ರೂಪಾಯಿ ಇವರು ಖರ್ಚು ಮಾಡಿದ್ದಾರೆ. ತಂದೆ ಚಿನ್ನದ ವ್ಯಾಪಾರಿಯಾಗಿರುವುದರಿಂದ ಇತನ ಈ ಹವ್ಯಾಸಕ್ಕೆ ಪ್ರೊತ್ಸಾಹಿಸುತ್ತಾರೆ. ಆಗಾಗ ಚೆನ್ನೈ ಮತ್ತು ಆಂಧ್ರಪ್ರದೇಶಕ್ಕೆ ಹೋಗಿ ಹಲವು ಕ್ರಿಕೆಟಿಗರನ್ನು ಸಂಪರ್ಕಿಸಿದ್ದಾರೆ.. ಇವರಲ್ಲಿ ಇನ್ನೊಂದು ವಿಶೇಷತೆಯಿದೆ. ವಿಶ್ವದಲ್ಲಿ ಯಾವುದೇ ದೇಶದಲ್ಲಿ ಕ್ರಿಕೆಟ್ ನಡೆಯಲಿ ಅವರಿಗೆ ಬೇಕಾದ ವಸ್ತುವನ್ನು ಪಡೆಯುವಂತಹ ನೆಟ್ವರ್ಕ್ ಇವರಿಗಿದೆ. ಅನೇಕ ಸಲ ತಮ್ಮ ಸಂಬಂಧಿಯಿಂದ ಮತ್ತು ಗೆಳೆಯರಿಂದ ಅವರಿಗೆ ಬೇಕಾದ ವಸ್ತುಗಳನ್ನು ತರಿಸುತ್ತಾರೆ. ಜೊತೆಗೆ ಜಗತ್ತಿನ ವಿವಿದೆಡೆ ಇರುವ ಕ್ರಿಕೆಟ್ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹಿಸುವ ಅನೇಕ ಹವ್ಯಾಸಿಗರ ಪರಿಚಯ ಕೂಡ ಇವರಿಗಿದೆ. ಹಾಗಾಗಿ ಅವರಿಗೆ ಬೇಕಾದ ವಸ್ತುಗಳನ್ನು ಇವರು ಕೊಟ್ಟು ಇವರಿಗೆ ಬೇಕಾದ ವಸ್ತುಗಳನ್ನು ತಾವು ಪಡೆಯುತ್ತಾರೆ..

ಅನೇಕ ಸಲ ಕ್ರಿಕಟಿಗರ ನಾಲ್ಕೈದು ಆಟೋಗ್ರಾಫ್ ಪಡೆದರೆ. ಅದೇ ಪ್ಲೇಯರ್ ಬಳಿ ಹೆಚ್ಚು ಜರ್ಸಿ, ಕ್ಯಾಪ್ ಪಡೆದರೆ ಅದನ್ನು ಅವರ ಗೆಳೆಯರ ಹುಟ್ಟುಹಬ್ಬದಂದು ಅವರಿಷ್ಟದ ಆಟಗಾರರ ವಸ್ತುಗಳನ್ನು ಅವರಿಗೆ ನೀಡಿ ಅವರ, ಹುಟ್ಟುಹಬ್ಬವನ್ನು ಮತ್ತಷ್ಟೂ ಕಲರ್ಫೂಲ್ ಮಾಡ್ತಾರೆ.

"ಆರಂಭದಲ್ಲಿ ಎನ್​ಸಿಎನಲ್ಲಿ ಸಚಿನ್ ಬೇಟಿ ಮಾಡಲು ನನ್ನೊಂದಿಗೆ ಪ್ರಣವ್ ಬಂದಿದ್ದ. ಆಗ ಸಚಿನ್ ಭೇಟಿ ಮಾಡಿ ಅವರೊಂದಿಗೆ ಫೋಟೋ ತೆಗಿಸಿಕೊಂಡ್ವಿ. ಆಗಿನಿಂದ ಪ್ರಣವ್ಗೆ ಕ್ರಿಕೆಟ್ಗರ ಆಟೋಗ್ರಾಫ್, ಜರ್ಸಿ ಸಂಗ್ರಹಿಸುವ ಹವ್ಯಾಸ ರೂಡಿ ಆಯ್ತು. 2007ರಿಂದ ಧೋನಿ ಅಭಿಮಾನಿಯಾಗಿರುವ ಪ್ರಣವ್. ಧೋನಿಗೆ ತುಂಬಾ ಹತ್ತಿರವಾಗಿದ್ದಾರೆ. ಸದ್ಯ ಅವನ ಈ ಕೆಲಸದಿಂದ ಹೆಮ್ಮೆಯಾಗುತ್ತದೆ" ಎನ್ನುತಾರೆ ಅವರ ತಂದೆ ಜಂಬೋ ಜೈನ್.

ಧೋನಿ ವಿಷಯ ಬಂದರೆ ಮಾತ್ರ ಇವರ ಅಭಿಮಾನ ಮತ್ತಷ್ಟೂ ಹೆಚ್ಚಾಗುತ್ತದೆ. ಯಾಕಂದ್ರೆ ಧೋನಿ ಇವರ ಆರಾಧ್ಯ ಧೈವ. ಆಸ್ಟ್ರೇಲಿಯಾದಲ್ಲಿ ಧೋನಿ ಕೊನೆಯ ಟೆಸ್ಟ್ ಆಡಿದ ಪಂದ್ಯದ ಟಿಕೆಟ್ ಕೂಡ ಇವರ ಬಳಿಯಿದೆ. ಜೊತೆಗೆ 2011ರ ವಿಶ್ವಕಪ್ ಫೈನಲ್ ಪಂದ್ಯದ ಟಿಕೇಟ್ ಸಂಗ್ರಹಸಿದ್ದಾರೆ. ವಿಶ್ವಕ್ರಿಕೆಟ್ನಲ್ಲಿ ಯಾವುದೇ ರೋಚಕ ಪಂದ್ಯ ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯಲ್ಲಿ ಆ ಪಂದ್ಯದ ಟಿಕೇಟ್ ಇವರ ಬಳಿಯಿರುತ್ತದೆ. ಅಂತಹದೆ ನೂರಾರು ಟಿಕೆಟ್ ಸಂಗ್ರಹಿಸಿದ್ದಾರೆ..

ಪ್ರಣವ್ ಹವ್ಯಾಸದ ಬಗ್ಗೆ ಯಾರಿಗೂ ತಿಳಿದಿಲ್ಲ. ಆದರೆ ಪ್ರಣವ್ ಸುಮ್-ಸುಮ್ಮನೆ ಸಂಗ್ರಹಿಸಿದ್ದು ಈಗ ಹೊಸ ದಾಖಲೆ ಬರೆಯುವತ್ತ ಮುಖಮಾಡಿದೆ. ಈತನಿಗೆ ಕೇವಲ ಕ್ರಿಕೆಟಿಗರ ಸಹಿ ಸಂಗ್ರಹಿಸುವುದು ಹವ್ಯಾಸವಲ್ಲ. ಮೂಲತಃ ಲೆಗ್ ಸ್ಪಿನರ್ ಆಗಿರುವ ಪ್ರಣವ್, ಎಲ್ಲ ಆಟಗಾರರ ಬಗ್ಗೆ ಯಾರಿಗೂ ತಿಳಿಯದಿರುವಂತಹ ಅನೇಕ ಮಾಹಿತಿಗಳು ಅವರಿಗೆ ಗೊತಿದೆ..

ಕ್ರಿಕೆಟ್ನ ಹಲವು ದಂತಕತೆಗಳು ನಮಗೆ ಗೊತ್ತು. ಆದರೆ ಪ್ರಣವ್ ಯಾರು ಎಂಬುದು ಹಲವು ಕ್ರಿಕೆಟ್ ದಿಗ್ಗಜರಿಗೆ ಇಂದು ತಿಳಿದಿದೆ. ಸದ್ದಿಲ್ಲದೆ ಕ್ರಿಕೆಟ್ ಆಟಗಾರರ ಸಹಿ, ಜರ್ಸಿ ಸಂಗ್ರಹ ಮಾಡುತ್ತಿರುವ ಈ ಹುಡುಗ. ಮುಂದೊಂದು ದಿನ ಗಿನ್ನಿಸ್ ದಾಖಲೆ ಕೂಡ ಬರೆಯುವ ಸಾಧ್ಯತೆಯಿದೆ.

Related Stories