ಅಂತರಾಷ್ಟ್ರೀಯ ಯೋಗ ದಿನ : ಆಸನಗಳನ್ನು ಮಾಡುವ ಮುನ್ನ ಸಾಧಕರಿಗಿದು ತಿಳಿದಿರಲಿ…

ಟೀಮ್ ವೈ.ಎಸ್.ಕನ್ನಡ 

1

ಯೋಗ ಒಂದು ಸಾಧನೆ. ನಿಮ್ಮ ಮನಸ್ಸು ಮತ್ತು ಶರೀರವನ್ನು ಆರೋಗ್ಯವಾಗಿಡಬಲ್ಲ ಮದ್ದು. ಒತ್ತಡವನ್ನು ಕಡಿಮೆ ಮಾಡುತ್ತೆ. ಜೀವಕ್ಕೇ ಅಪಾಯ ತಂದೊಡ್ಡುವ ಮಾರಕ ಖಾಯಿಲೆಗಳನ್ನೂ ದೂರ ಮಾಡುತ್ತೆ. ಕೂದಲು ಉದುರುವ ಸಮಸ್ಯೆಯಿಂದ ಹಿಡಿದು ಎಲ್ಲದಕ್ಕೂ ಯೋಗದಲ್ಲಿ ಪರಿಹಾರವಿದೆ. ಆದ್ರೆ ಕೆಲವರು ಯೋಗದ ಪರಿಣಾಮದಿಂದ ಸಂತುಷ್ಟರಾಗುವುದಿಲ್ಲ, ಇದಕ್ಕೆ ಕಾರಣ ಸರಿಯಾದ ರೀತಿಯಲ್ಲಿ ಆಸನಗಳನ್ನು ಮಾಡದಿರುವುದು. ಅಂತರಾಷ್ಟ್ರೀಯ ಯೋಗದಿನದ ಹಿನ್ನೆಲೆಯಲ್ಲಿ ನಿಮ್ಮ ಆತ್ಮ ಮತ್ತು ದೇಹ ಎರಡನ್ನೂ ಆರೋಗ್ಯವಾಗಿಡಬಲ್ಲ ಯೋಗಾಸನ ಯಾವ ರೀತಿ ಇರಬೇಕು ಅನ್ನೋದನ್ನು ನೋಡೋಣ.

ಒತ್ತಾಯಪೂರ್ವಕವಾಗಿ ಮಾಡುವುದು ಸಹಜ ಯೋಗವಲ್ಲ. ಇದರಿಂದ ನಿಮ್ಮ ಮಾಂಸಖಂಡ ಮತ್ತು ಮೂಳೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಉದಾಹರಣೆಗೆ ಉತ್ತನಾಸನ ಮಾಡುವ ಸಂದರ್ಭದಲ್ಲಿ ನೆಲವನ್ನು ಸ್ಪರ್ಷಿಸಲು ಸಾಧ್ಯವಾಗದೇ ಇದ್ದಲ್ಲಿ ಬಲವಂತವಾಗಿ ದೇಹಕ್ಕೆ ನೋವು ಮಾಡಿಕೊಳ್ಳಬೇಡಿ. ನಿಧಾನವಾಗಿ ತಂತಾನೇ ಅದು ನಿಮ್ಮಿಂದ ಸಾಧ್ಯವಾಗುತ್ತದೆ. ನಿಮ್ಮ ಅಂತರಾತ್ಮ ಮತ್ತು ಚೈತನ್ಯದ ಮೇಲೆ ಗಮನ ಕೇಂದ್ರೀಕರಿಸಲು ಇಚ್ಛಿಸಿದ ಸಂದರ್ಭದಲ್ಲಿ ಕೆಲವೊಂದು ಸುಗಂಧದ್ರವ್ಯಗಳು ನಿಮ್ಮನ್ನು ವಿಚಲಿತರನ್ನಾಗಿ ಮಾಡುವ ಸಾಧ್ಯತೆ ಇದೆ.

ಸಿಮೆಂಟ್ ಅಥವಾ ಗ್ರಾನೈಟ್ ನೆಲದ ಮೇಲೆ ಮಲಗಿ ಅಥವಾ ಕುಳಿತು ಯೋಗಾಸನ ಮಾಡಬೇಡಿ. ಒರಟಾದ ನೆಲ ನಿಮ್ಮ ದೇಹಕ್ಕೆ ನೋವು ಮಾಡಬಹುದು. ಕಾರ್ಪೆಟ್, ಬ್ಲಾಂಕೆಟ್ ಅಥವಾ ಮ್ಯಾಟ್ ಮೇಲೆ ಯೋಗ ಮಾಡಿ. ಅವಸರ ಅವಸರವಾಗಿ ಮಾಡುವುದು ಸರಿಯಾದ ಯೋಗಕ್ರಿಯೆ ಅಲ್ಲ. ಆಸನಗಳನ್ನು ಬದಲಾಯಿಸುವ ಸಂದರ್ಭದಲ್ಲಿ ದೇಹ ಮತ್ತು ಮನಸ್ಸಿಗೆ ಕೊಂಚ ರಿಲ್ಯಾಕ್ಸ್ ಆಗಲು ಅವಕಾಶ ನೀಡಿ. ನಿಧಾನವಾಗಿ ಆಸನಗಳನ್ನು ಮಾಡಿ.

ಯೋಗಾಸನ ಮುಗಿಸಿದ ಮರುಕ್ಷಣವೇ ಭಾರ ಎತ್ತುವುದು ಅಥವಾ ಇನ್ಯಾವುದೇ ರೀತಿಯ ಕಠಿಣ ಕಸರತ್ತುಗಳನ್ನು ಮಾಡಬೇಡಿ. ಇದರಿಂದ ನಿಮ್ಮ ದೇಹಕ್ಕೆ ತೊಂದರೆಯಾಗಬಹುದು. ಯೋಗ ಮಾಡುವ ಸಮಯದಲ್ಲಿ ಕೆಮ್ಮು ಬಂದಲ್ಲಿ, ಉಸಿರಾಡಬೇಕು ಎನಿಸಿದಲ್ಲಿ, ಮೂತ್ರ ವಿಸರ್ಜನೆ ಮತ್ತು ಮಲ ವಿಸರ್ಜನೆ ಮಾಡಬೇಕು ಎನಿಸಿದರೆ ಅದನ್ನು ತಡೆಯಬೇಡಿ. ಅದೆಲ್ಲಾ ಕ್ರಿಯೆಯನ್ನು ಮುಗಿಸಿದ ಮೇಲೆ ಯೋಗಾಸನ ಆರಂಭಿಸಿ.

ನಿರ್ದಿಷ್ಟವಾದ ಆಸನವನ್ನು ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ನಿಖರತೆ ಇರಲಿ. ಪ್ರತಿ ಆಸನದಿಂದ್ಲೂ ನಿಮ್ಮ ದೇಹಕ್ಕೆ ಪ್ರಯೋಜನವಿದೆ. ಅದನ್ನು ಅನುಭವಿಸಿ, ದೇಹದಲ್ಲಾಗುವ ಬದಲಾವಣೆಯನ್ನು ಗಮನಿಸಿ. ಊಟ ಮಾಡಿದ ತಕ್ಷಣ ಅಥವಾ ತಿಂಡಿ ತಿಂದ ತಕ್ಷಣ ಯೋಗಾಸನ ಮಾಡುವುದು ಸೂಕ್ತವಲ್ಲ. ಕನಿಷ್ಟ 2-3 ಗಂಟೆಗಳ ಅಂತರ ಕಾಯ್ದುಕೊಳ್ಳಿ. ಆಹಾರ ಸೇವಿಸಿದ ತಕ್ಷಣ ಯೋಗಾಸನ ಮಾಡಿದ್ರೆ, ಸ್ಟ್ರೆಚ್ಚಿಂಗ್ ಹಾಗೂ ಬೆಂಡಿಂಗ್ ಮಾಡಿದಾಗ ವಾಂತಿಯಾಗಬಹುದು, ವಾಕರಿಕೆ ಉಂಟಾಗಬಹುದು.

ಎಲ್ಲಾ ಯೋಗಕ್ರಿಯೆಗಳು ಮುಗಿದ ನಂತರ 2-5 ನಿಮಿಷಗಳ ಕಾಲ ಶವಾಸನದಲ್ಲಿ ಮಲಗಿ. ನಿಮ್ಮ ದೇಹಕ್ಕೆ ಸಂಪೂರ್ಣ ವಿಶ್ರಾಂತಿ ನೀಡಿ. ಯೋಗ ಮಾಡಿದ ತಕ್ಷಣವೇ ನೀರು ಕುಡಿಯಬೇಡಿ. ಅರ್ಧಗಂಟೆ ಬಿಟ್ಟು ನೀರು ಕುಡಿಯುವುದು ಸೂಕ್ತ. ಆಸನಗಳನ್ನು ಮಾಡುವ ಸಂದರ್ಭದಲ್ಲಿ ಅಸಮತೋಲನ ಉಂಟಾಗುವುದು ಸಹಜ, ಮತ್ತೆ ನಿಧಾನವಾಗಿ ಪ್ರಯತ್ನಿಸಿ.

"ಮನಿ" ಮಾಸ್ಟರ್ ಅಶ್ವಿನಿ 

ಅಚ್ಚರಿ ಆದರೂ ಇದು ಸತ್ಯ- ಹಳ್ಳಿಗಳಿಗಿಂತ ನಗರ ಪ್ರದೇಶದಲ್ಲೇ ಬಾಲ್ಯ ವಿವಾಹದ ಸಂಖ್ಯೆ ಹೆಚ್ಚು..!