2016ರಲ್ಲಿ ನೀವೆಷ್ಟು ಫಲವತ್ತಾಗಬಲ್ಲಿರಿ..?

ಟೀಮ್​ ವೈ.ಎಸ್​.

0

ನಿಜಕ್ಕೂ ಇದೊಂದು ಬೃಹತ್ ಸವಾಲು. ನನ್ನ ಮನೆಯವರದ್ದು, ಅದರಲ್ಲೂ ನನ್ನ ಅಜ್ಜಿ ಬಂದಾಗಲೆಲ್ಲ, ದೊಡ್ಡದಾಗಿ ಕಿರುಚಿ ಎಲ್ಲರ ಕಿವಿಗೂ ಬೀಳುವಂತೆ ಕೇಳುವುದು ಒಂದೇ ಪ್ರಶ್ನೆ, ನೀನು ತಾಯಿಯಾಗುವುದು ಯಾವಾಗ ಅಂತಾ. ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊ ಅನ್ನೋದು ಅವರ ಸಲಹೆ, ಅದನ್ನು ಕೇಳಿದಾಗಲೆಲ್ಲ ನಾನು ಸಿಟ್ಟಾಗುತ್ತೇನೆ. ನಮ್ಮಿಬ್ಬರ ಮಧ್ಯೆ ಕಿತ್ತಾಟ ನಡೆಯುತ್ತೆ. ನಿಜವಾದ ಹೆಣ್ತನ, ಉದ್ಯೋಗ, ಆಧುನಿಕತೆ, ಮದುವೆ ಹೀಗೆ ಎಲ್ಲ ವಿಚಾರಗಳ ಮಧ್ಯೆ ನಮ್ಮಿಬ್ಬರ ಮಧ್ಯೆ ಕಾವೇರಿದ ಚರ್ಚೆ ನಡೆಯುತ್ತದೆ. ಮಗು ಆಗುತ್ತಿಲ್ಲ ಎಂದಾದ್ರೆ ನೀನು ಬೇಸರ ಮಾಡಿಕೊಳ್ಳಬೇಡ, ವೈದ್ಯಕೀಯ ಕ್ಷೇತ್ರದಲ್ಲಿ ಅದಕ್ಕೆ ಪರಿಹಾರವಿದೆ ಎನ್ನುತ್ತಾರೆ ಅವರು. ಆಗೆಲ್ಲ ನನಗೇನೂ ಸಂಕೋಚವಿಲ್ಲ, ನಾನು ಆರೋಗ್ಯವಾಗಿ ಚೆನ್ನಾಗಿದ್ದೇನೆ ಎನ್ನುತ್ತೇನೆ. ಆಗ ನನ್ನಜ್ಜಿ ನನ್ನಡೆಗೆ ಕರುಣಾಪೂರಿತ ದೃಷ್ಟಿ ಬೀರುತ್ತಾರೆ. ಪ್ರತಿ ಬಾರಿ ನಾವು ಭೇಟಿಯಾದಾಗ್ಲೂ ಈ ಡ್ರಾಮಾ ಇದ್ದಿದ್ದೇ. ಅಜ್ಜಿ ಕೇಳುವ ಈ ಪ್ರಶ್ನೆ ನನ್ನ ಮನೆಯವರನ್ನೆಲ್ಲ ಒಗ್ಗೂಡಿಸುತ್ತದೆ. ಇಡೀ ಕುಟುಂಬವೇ ತಿಳಿದುಕೊಳ್ಳಲು ಬಯಸುವ ಅತಿ ದೊಡ್ಡ ವಿಷಯ ಇದು.

ನಮ್ಮಲ್ಲಿ ಅದೆಷ್ಟೋ ಕುಟುಂಬಗಳ ಚರ್ಚೆಯ ವಿಚಾರವಾಗಿರುವ ಫಲವತ್ತತೆ ಬಗ್ಗೆ ನಾನು ಮಾತನಾಡುವುದಿಲ್ಲ, ಪ್ರತಿನಿತ್ಯ ನಾವೆಲ್ಲರೂ ಯೋಚಿಸಬೇಕಾದ ವಿಭಿನ್ನ ಫಲವತ್ತತೆ ಬಗ್ಗೆ ಗಮನಹರಿಸುತ್ತೇನೆ. ಅದಕ್ಕೂ ಮುನ್ನ ಇನ್ನೊಂದು ಕಥೆಯನ್ನು ನಾನು ನಿಮಗೆ ಹೇಳಲೇಬೇಕು.

ಈ ಲೇಖನವನ್ನು ಓದುವ ಹೊತ್ತಿಗಾಗ್ಲೇ 2015 'ಯವರ್​​ಸ್ಟೋರಿ' ಪಾಲಿಗೆ ಎಂತಹ ಅಭೂತಪೂರ್ವ ವರ್ಷವಾಗಿತ್ತು ಎಂಬುದು ನಿಮಗೂ ತಿಳಿದಿರುತ್ತೆ. 7 ವರ್ಷಗಳ ಅಸ್ತಿತ್ವದ ಬಳಿಕ ನಾವು ಸಿರೀಸ್-ಎ ಫಂಡಿಂಗ್ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. 23,000 ಮೂಲ ಸುದ್ದಿಗಳನ್ನು ಬರೆದಿದ್ದೇವೆ. 12 ಭಾಷೆಗಳಲ್ಲಿ ಜನರ ಮನೆಮನೆಗೂ ತಲುಪುತ್ತಿರುವ 'ಯುವರ್​ಸ್ಟೋರಿ' 65 ಜನರನ್ನೊಳಗೊಂಡ ಒಂದು ಅದ್ಭುತ ತಂಡ. ಹೊಸ ಹೊಸ ಬ್ರಾಂಡ್​ಗಳ ಜೊತೆ, ಸರ್ಕಾರದ ಸಂಸ್ಥೆಗಳ ಜೊತೆ ನಾವು ಕೈಜೋಡಿಸಿದ್ದೇವೆ. ಒಂದೇ ವರ್ಷದಲ್ಲಿ 'ಯುವರ್​ಸ್ಟೋರಿ' ಹೊಸ ಮೈಲುಗಲ್ಲು ಸ್ಥಾಪಿಸಿದೆ. ಒಂದು ಹಂತದಲ್ಲಿ ನನ್ನ ಹುಚ್ಚು ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಾರಂಭಿಸಿದೆ.

ಪ್ರತಿ ಮೈಲುಗಲ್ಲು, ಪ್ರತಿಯೊಂದು ಯಶಸ್ಸಿನ ಬಳಿಕವೂ ನನ್ನನ್ನು ನೋವು ಮತ್ತು ಏಕಾಂಗಿತನ ಬಾಧಿಸುತ್ತಿದೆ. ಯಾಕಂದ್ರೆ ಬಂಡವಾಳ ಸಂಗ್ರಹ ಅನ್ನೋದು ನನ್ನ ಪ್ರಕಾರ ಹೃದಯ ಮುಟ್ಟುವಂತಹ ಪ್ರಕ್ರಿಯೆ. ಒಂದೇ ರಾತ್ರಿಯಲ್ಲಿ ಸ್ನೇಹಿತರು, ಸಂಬಂಧ ಹಾಗೂ ಅದೆಷ್ಟೋ ಜನರ ವರ್ತನೆ ಬದಲಾಗಿದ್ದನ್ನು ನಾನು ಕಂಡಿದ್ದೇನೆ. ಇದು ನನಗೆ ದುಖಃವನ್ನುಂಟು ಮಾಡಿದೆ. ರಾಷ್ಟ್ರೀಯ ಚರ್ಚೆ ಮತ್ತು ಇತರರನ್ನು ಹೀಯಾಳಿಸುವ ಯುವ ಉದ್ಯಮಿಗಳ ಪಿಸುಗುಡುವಿಕೆ ದಿಕ್ಕುಗೆಡಿಸುತ್ತದೆ. ಇದು ನನ್ನೊಳಗೆ ನಾನು ಮತ್ತೆ ಅಡಗಿಕೊಳ್ಳುವಂತೆ ಮಾಡಿದೆ, ಇಂತಹ ನಿಂದನಾತ್ಮಕ ಪ್ರಪಂಚದಲ್ಲಿ ನಾನು ಬದುಕುವುದು ಹೇಗೆ? ಇದಕ್ಕೆ ನಾನು ಸೂಕ್ತವೇ ಎಂದು ನಾನೇ ಅಚ್ಚರಿಗೊಳ್ಳುತ್ತೇನೆ.

ಹಿಂದೆ ಬೀಳಬಾರದು, ಮುನ್ನುಗ್ಗಲೇಬೇಕು ಅನ್ನೋ ಕಾರಣಕ್ಕೆ ನಾನು 2015ರಲ್ಲಿ ನಿರಂತರವಾಗಿ ಕೆಲಸ ಮಾಡಿದ್ದೇನೆ. ಬಹುತೇಕ ವೀಕೆಂಡ್​ಗಳಲ್ಲಿ, ನಾನು ಕಳೆದ ವರ್ಷ ಸುಮಾರು 64 ಕಾರ್ಯಕ್ರಮಗಳಲ್ಲಿ ಮಾತನಾಡಿದ್ದೇನೆ. ಉದ್ಯಮಕ್ಕೆ ಸಂಬಂಧಪಟ್ಟಂತೆ ಸುಮಾರು 6,000 ಜನರನ್ನು ಭೇಟಿ ಮಾಡಿದ್ದೇನೆ. 6,000 ಇ-ಮೇಲ್​ಗಳಿಗೆ ಪ್ರತಿಕ್ರಿಯಿಸಿದ್ದೇನೆ, ಸುಮಾರು 10,000 ಇ-ಮೇಲ್​ಗಳಿಗೆ ಪ್ರತಿಕ್ರಿಯಿಸಿಲ್ಲ. 10,000 ಜನರ ಇ-ಮೇಲ್​ಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಾಗಿಲ್ಲ ಅನ್ನೋದನ್ನು ಯೋಚಿಸಿದಾಗೆಲ್ಲ ನಾನು ಶೋಚನೀಯ ಸ್ಥಿತಿಗೆ ತಲುಪುತ್ತೇನೆ. ನಿಜಕ್ಕೂ ನಾನು ಜಡಭರಿತಳಾಗಿದ್ದೇನೆ. ಎಲ್ಲರಿಗೂ ಅವಕಾಶ ನೀಡುವ ಪ್ರಯತ್ನ, ಈ ಪ್ರಕ್ರಿಯೆ ಕೆಲವರ ಕೋಪಕ್ಕೆ, ಇನ್ನು ಕೆಲವರ ಅಸಮಾಧಾನ, ಅಸಂತೋಷಕ್ಕೆ ಕಾರಣವಾಗಿರಬಹುದು.

ಕೆಲವರು ಅತೃಪ್ತಿ ವ್ಯಕ್ತಪಡಿಸಿದ್ದಾರೆ, ತಕ್ಷಣಕ್ಕೆ ಪ್ರತಿಕ್ರಿಯಿಸುತ್ತಿಲ್ಲ ಎಂಬ ಕಾರಣಕ್ಕೆ ಬಿಟ್ಟು ಹೋಗಿದ್ದಾರೆ. ಇದು ನನ್ನಲ್ಲಿ ಬೃಹತ್ ನಿರ್ವಾತವನ್ನು ಸೃಷ್ಟಿಸಿದೆ. ತುಂಬ ವರ್ಷಗಳ ನಂತರ ಅಸಹಾಯಕತೆ ನನ್ನನ್ನು ಕಾಡುತ್ತಿದೆ. ತಂಡದ ಕೆಲವು ಸದಸ್ಯರಿಂದ ಹಿಡಿದು, ಕುಟುಂಬ ಸದಸ್ಯರು ಕೂಡ ಅವರೊಂದಿಗೆ ನಾನಿಲ್ಲ ಎಂದು ಭಾವಿಸುತ್ತಿದ್ದಾರೆ. ನನ್ನ ಮನಸ್ಸು ಕೂಡ ನಿರಂತರವಾಗಿ ಸಂಕೇತಗಳನ್ನು ವ್ಯಾಖ್ಯಾನಿಸುತ್ತಿದೆ. ಒಂದು ದಿನ ಯಶಸ್ವಿ ಸಭೆಯ ಬಳಿಕ, ಮಹತ್ವದ ಒಪ್ಪಂದಕ್ಕೆ ಸಹಿ ಬಿದ್ದ ಬಳಿಕ ಎಲ್ಲವೂ ಬರಿದಾಗಿದೆ, ಕುಸಿತಕ್ಕೆ ಸಿದ್ಧವಾಗಿದೆ ಎಂದು ನನಗನಿಸಿತ್ತು. ಅಂದು ನಾನು ಬಿಕ್ಕಿ ಬಿಕ್ಕಿ ಅತ್ತಿದ್ದೆ.

ಏನಾಗುತ್ತಿದೆ? 2015ರ ನನ್ನ ಕಥೆಯನ್ನು ಈ ರೀತಿ ಬರೆಯಬೇಕೆ? ನನ್ನ ಸುತ್ತಮುತ್ತಲಿನವರಿಗೆ ನಾನು ಪ್ರತಿಕ್ರಿಯಿಸುತ್ತಿದ್ದೀನಾ? ಅಥವಾ ನನ್ನ ಕಥೆಗೆ ನಾನೇ ಹೀರೋನಾ? ದಿನದ 24 ಗಂಟೆಗಳು ವರ್ಷದ 365 ದಿನಗಳ ನನ್ನ ಪರಿಶ್ರಮದ ಬಗ್ಗೆ ಹೆಮ್ಮೆಪಡಬೇಕಾ? ಅಥವಾ ನಾನಿದನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಿಸಬಹುದಿತ್ತೇ?

ವರ್ಷದ ಅಂತ್ಯದಲ್ಲಿ ಅಂದ್ರೆ ನವೆಂಬರ್ ವೇಳೆಗೆ, ಸಂದರ್ಭಗಳು ಮತ್ತು ಜನರಿಂದ ನನ್ನನ್ನು ನಾನು ದೂರವಿಟ್ಟಿದ್ದೆ. ನನಗೆ ನಾನು ಇನ್ನಷ್ಟು ಹತ್ತಿರವಾಗಿದ್ದೆ, ನನ್ನೊಳಗೆ ನಾನು ಬದುಕಲಾರಂಭಿಸಿದ್ದೆ, ನನ್ನೊಳಗಿನ ಮಾತುಗಳನ್ನು ಕೇಳುತ್ತ, ಶಾಂತಿ ಮತ್ತು ಉತ್ತರ ಎರಡನ್ನೂ ಕಂಡುಕೊಂಡಿದ್ದೆ. ಇದು ನನ್ನೊಳಗೇ ಇದ್ದ ಪ್ರತಿಬಿಂಬ. 15 ವರ್ಷಗಳ ಹಿಂದೆ, ಕಾಲೇಜು ಓದ್ತಿದ್ದಾಗ ನಾನು ಮನೋವೈದ್ಯರನ್ನು ಭೇಟಿಯಾಗಿದ್ದೆ. ಇಂಥದ್ದೇ ಸರಳ ಹೋಲಿಕೆ ಆಗ ನನಗೆ ನೆರವಾಗಿತ್ತು: ಜಗತ್ತಿನಲ್ಲಿ ಅತಿ ಹೆಚ್ಚು ಫಲವತ್ತಾದ ಭೂಮಿ ಇರುವುದು ಭಾರತದ ಉತ್ತರ ಭಾಗದಲ್ಲಿ. ಇಲ್ಲಿ ಅತ್ಯಂತ ಫಲವತ್ತಾದ ಮೆಕ್ಕಲು ಮಣ್ಣಿದೆ, ಯಾಕಂದ್ರೆ ಅವುಗಳಲ್ಲಿ ಅಪಾರ ಖನಿಜ ಸಂಪತ್ತಿದೆ. ಪ್ರತಿ ಕಟಾವಿನ ನಂತರ ಭೂಮಿ ಇನ್ನಷ್ಟು ಫಲವತ್ತಾಗುತ್ತದೆ. ಯಾಕಂದ್ರೆ ಕೆಲ ಕಾಲ ಸಾಗುವಳಿ ಮಾಡದೇ ಅದನ್ನು ಹಾಗೆಯೇ ಬಿಡಲಾಗುತ್ತದೆ. ಆ ರೀತಿ ಮಾಡದೇ ಇದ್ದಲ್ಲಿ ಭೂಮಿ ಬಂಜರಾಗುವ ಅಪಾಯ ಹೆಚ್ಚು. ಮನುಷ್ಯರ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ನಿಮ್ಮೊಳಗಿರುವ ಭಾವನಾತ್ಮಕ ಹಾಗೂ ಮಾನಸಿಕ ಭೂಮಿಯ ಬಗ್ಗೆ ನೀವು ಕಾಳಜಿ ವಹಿಸದೇ ಇದ್ರೆ, ಅದು ಕೂಡ ಬಂಜರಾಗಿಬಿಡುತ್ತದೆ, ಟೊಳ್ಳಾಗುತ್ತದೆ, ದುಖಃಭರಿತವಾಗುತ್ತದೆ. ದೀರ್ಘ ಕಾಲದ ವರೆಗೆ ನಿಮ್ಮ ಮನಸ್ಸಿನೊಳಗಿರುವ ಭೂಮಿಯನ್ನು ನೀವು ಭೇಟಿ ಮಾಡದೇ ಇದ್ರೆ ನೀವು ಕೂಡ ಕಹಿಯಾಗುತ್ತೀರಾ, ವಿಷಪೂರಿತವಾಗುತ್ತೀರಾ. ನಿಮಗಾಗಿ ನೀವು ಸಮಯ ಕೊಡಿ, ಸ್ವಾರ್ಥಿಗಳಾಗಿ, ನಿಮ್ಮನ್ನು ನೀವೇ ಮುದ್ದಿಸಿಕೊಳ್ಳಿ. ನಿಮ್ಮ ಬಗ್ಗೆ ನೀವೇ ಗಮನಕೊಡದೇ ಇದ್ರೆ ಬೇರೆಯವರ ಬಗ್ಗೆ ಗಮನಹರಿಸಲು ಹೇಗೆ ಸಾಧ್ಯ? ನಿಮ್ಮ ನ್ಯೂನ್ಯತೆಗಳನ್ನೇ ನೀವು ಸರಿಪಡಿಸದೇ ಇದ್ರೆ, ಬೇರೆಯವರ ದೋಷಗಳನ್ನು ಗುರುತಿಸಲು ಹೇಗೆ ಸಾಧ್ಯ?

ಇದನ್ನೆಲ್ಲ ಮಾಡಲು ನಾನು ಮರೆತಿದ್ದೆ. ನಾನೊಂದು ಖಾಲಿ ಚಿಪ್ಪಿನಂತಾಗಿದ್ದೆ, ನನ್ನೊಳಗೆ ನಾನೇ ಮಡಚಿಕೊಳ್ಳುವ ಆತಂಕವಿತ್ತು. ಹಾಗಾಗಿ ಡಿಸೆಂಬರ್ ತಿಂಗಳಿಡೀ ನನ್ನನ್ನು ನಾನು ನಾನು ಪ್ರೀತಿಸುತ್ತ, ಕೇಳಿಸಿಕೊಳ್ಳುತ್ತ, ಒಪ್ಪಿಕೊಳ್ಳುತ್ತ, ರೊಮ್ಯಾನ್ಸ್ ಮಾಡುತ್ತ ಕಳೆದಿದ್ದೇನೆ. ಆದ್ರೆ ಇದು ಸುಲಭವೇನಲ್ಲ. 'ದಿ ಮಿರಾಕಲ್ ಆಫ್ ಮೈಂಡ್​​ಫುಲ್​ನೆಸ್​' ಅನ್ನೋ ಪುಸ್ತಕವನ್ನು ಓದಿದ ನಾನು ಕೆಲ ವಿಚಾರಗಳನ್ನು ಬರೆದಿಟ್ಟುಕೊಂಡಿದ್ದೇನೆ. ನನ್ನನ್ನು ನಾನು ಪ್ರೀತಿಸಿಕೊಳ್ಳಲು ಅದು ನೆರವಾಗಿದೆ. ದಿನವಿಡೀ ಫೋನ್ ಕಾಲ್ ಅಟೆಂಡ್ ಮಾಡುವುದರ ಹೊರತಾಗಿಯೂ ಬೇರೊಂದು ಪ್ರಪಂಚವಿದೆ ಎಂಬುದು ಫೋನ್ ಸ್ವಿಚ್ ಆಫ್ ಮಾಡಿದಾಗ ನನಗೆ ಅರ್ಥವಾಗಿದ್ದು. ಒಬ್ಬಂಟಿಯಾಗಿ, ನನಗೇ ನಾನು ಜೊತೆಯಾಗಿ ಟೀ ಸವಿಯುವುದರಲ್ಲಿರುವ ಆನಂದವೇ ಬೇರೆ. ಈಗ ಪ್ರತಿನಿತ್ಯ ಅದನ್ನು ಮಾಡುತ್ತೇನೆ, ನನ್ನ ಮುದ್ದು ನಾಯಿಗಳೊಂದಿಗೆ ಕುಳಿತು ಚಹಾ ಗುಟುಕರಿಸುತ್ತೇನೆ.

ಎಲ್ಲ ಉದ್ಯಮಿಗಳಿಗೆ ನಾನು ಹೇಳಲು ಬಯಸುವುದು ಏನೆಂದರೆ, ನಾವೆಲ್ಲ ಏನನ್ನೋ ಅರಸಿ ಹೊರಟಿದ್ದೇವೆ, ಅದರ ಪರಿಣಾಮಗಳ ಬಗ್ಗೆ ಯೋಚಿಸುತ್ತ, ಜನರಿಗೆ ಸಹಾಯ ಮಾಡುತ್ತ, ನಮ್ಮನ್ನು ನಾವೇ ಮರೆತಿದ್ದೇವೆ. ಆದ್ರೆ ಈ ವರ್ಷ ವಿಜಯವನ್ನು ಸೆರೆಹಿಡಿಯುವ, ಯಶಸ್ವಿಯಾಗುವ ಯೋಚನೆಗಳ ನಡುವೆಯೂ ನಮ್ಮನ್ನು ನಾವು ಮರೆಯಬಾರದು. ಅದರಿಂದ ಬಂಜರಾಗುವ ಅಪಾಯವೇ ಇರುವುದಿಲ್ಲ. ನಿಮ್ಮ ಬಗ್ಗೆ ನೀವು ಕಾಳಜಿ ತೆಗೆದುಕೊಳ್ಳದೇ ಇದ್ರೆ ಬರಡಾಗುವುದ ಅತ್ಯಂತ ಸುಲಭ. ನಿಮ್ಮೊಳಗಿರುವ ಫಲವತ್ತಾದ ಭೂಮಿಯನ್ನು ಹೊಂದುವುದೇ ಪ್ರಚಂಡ ಶಕ್ತಿ. ನಿಮ್ಮ ಕಥೆಗೆ ನೀವೇ ಹೀರೋ. ನಿಮಗಾಗಿ ಇನ್ಯಾರೋ ಚಮತ್ಕಾರ ಮಾಡಬೇಕೆಂದು ನಿರೀಕ್ಷಿಸಬೇಡಿ. 2016ರಲ್ಲಿ ನಿಮ್ಮ ಫಲವತ್ತಾದ ಭೂಮಿಯನ್ನು ನೀವೇ ನಿರ್ಮಾಣ ಮಾಡಿ. ನಿಮ್ಮ ಬಗ್ಗೆ ಕಾಳಜಿ ವಹಿಸಿ.

ಲೇಖಕರು : ಶ್ರದ್ಧಾ ಶರ್ಮಾ
ಅನುವಾದಕರು : ಭಾರತಿ ಭಟ್​