ಉದ್ಯಮಿಗಳಿಗೆ ವಿತ್ತ ಸಚಿವರ ಅಭಯ..!

ಟೀಮ್​ ವೈ.ಎಸ್​.ಕನ್ನಡ

0

''ಸರ್ಕಾರ ಮುಂದಿನ ತಿಂಗಳು ಮಂಡಿಸಲಿರುವ ಮುಂಗಡಪತ್ರದಲ್ಲಿ ಅನುಕೂಲಕರ ತೆರಿಗೆ ವ್ಯವಸ್ಥೆಯನ್ನು ಘೋಷಣೆ ಮಾಡಲಿದೆ. ಅದರಿಂದ ಭಾರತದಲ್ಲಿ ಇನ್ನಷ್ಟು ಉದ್ಯಮಗಳ ಆರಂಭಕ್ಕೆ ಪ್ರೋತ್ಸಾಹ ಸಿಗಲಿದೆ''. ಇದು 'ಸ್ಟಾರ್ಟ್ಅಪ್ ಇಂಡಿಯಾ, ಸ್ಟ್ಯಾಂಡ್ಅಪ್ ಇಂಡಿಯಾ' ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಉದ್ಯಮಿಗಳಿಗೆ ನೀಡಿದ ಅಭಯ. ಕಾರ್ಯಕ್ರಮದಲ್ಲಿ ಮಾತು ಮುಂದುವರಿಸಿದ ಅರುಣ್ ಜೇಟ್ಲಿ, ''ನಾವು ಉದ್ಯಮ ಸ್ನೇಹಿ ತೆರಿಗೆ ವ್ಯವಸ್ಥೆಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಆದ್ರೆ ಅಧಿಸೂಚನೆ ಜಾರಿ ಮಾಡದೇ ಅವನ್ನೆಲ್ಲ ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ. ಹಾಗಾಗಿ ಶೀಘ್ರದಲ್ಲೇ ಅವು ಜಾರಿಯಾಗಲಿವೆ. ಉಳಿದವುಗಳಿಗೆ ಶಾಸನಾತ್ಮಕ ನಿಬಂಧನೆಗಳ ಅಗತ್ಯವಿದೆ. ಅದು ಕೇವಲ ಹಣಕಾಸು ಮಸೂದೆಯ ಒಂದು ಭಾಗವಾಗಿ ಬರಬಹುದು. ಉದ್ಯಮಗಳಿಗೆ ಅನುಕೂಲಕರ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸುವ ಸಲುವಾಗಿಯೇ ಆಯವ್ಯಯ ಮಂಡನೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ'' ಅಂತಾ ತಿಳಿಸಿದ್ರು.

ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ಅವಶ್ಯಕತೆ ಇದೆ ಎಂಬುದನ್ನೇ ಗಮನದಲ್ಲಿರಿಸಿಕೊಂಡು ಕಳೆದ ವರ್ಷ ಬಜೆಟ್​ ಮಂಡನೆ ಸಂದರ್ಭದಲ್ಲಿ ನಿಧಿಯೊಂದನ್ನು ಮೀಸಲಾಗಿಡಲು ಸೂಚಿಸಲಾಗಿತ್ತು ಎಂದ ಜೇಟ್ಲಿ, ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಸರ್ಕಾರ ಎರಡೂ ಕೂಡ ಉದ್ಯಮಗಳಿಗೆ ಅಗತ್ಯವಾದ ನೆರವನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ,' ಸ್ಟ್ಯಾಂಡ್ಅಪ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ' ಯೋಜನೆಯ ಮೂಲಕ ಕೇಂದ್ರ ಸರ್ಕಾರ ಎಸ್​ಸಿ, ಎಸ್​ಟಿ ಅಂದ್ರೆ ಹಿಂದುಳಿದ ವರ್ಗದವರು ಮತ್ತು ಮಹಿಳೆಯರಿಗೆ ಬ್ಯಾಂಕ್​ಗಳಿಂದ ಸಾಲ ಕೊಡಿಸಲು ಯೋಜನೆ ರೂಪಿಸಿರುವುದಾಗಿ ಜೇಟ್ಲಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ರು.

''ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ 'ಸ್ಟಾರ್ಟ್ಅಪ್ ಇಂಡಿಯಾ, ಸ್ಟ್ಯಾಂಡ್ಅಪ್ ಇಂಡಿಯಾ' ಯೋಜನೆಯ ಘೋಷಣೆ ಮಾಡಿದ್ರು. ಈ ಯೋಜನೆಯನ್ನು ವಿಭಿನ್ನವಾಗಿ ಹಮ್ಮಿಕೊಳ್ಳಲಾಗುತ್ತದೆ. ಎಸ್​ಸಿ, ಎಸ್​ಟಿ ಅಂದ್ರೆ ಹಿಂದುಳಿದ ವರ್ಗಗಳ ಉದ್ಯಮಿಗಳು ಮತ್ತು ಮಹಿಳಾ ಉದ್ಯಮಿಗಳಿಗೆ ಬ್ಯಾಂಕ್​ಗಳ ಮೂಲಕ ಸಾಲ ಕೊಡಿಸಲು ವ್ಯವಸ್ಥೆ ಮಾಡಲಾಗಿದೆ. ಉದ್ಯಮ ಕ್ಷೇತ್ರಕ್ಕೆ ಕಾಲಿಡಲು ಹಿಂದುಳಿದ ವರ್ಗದವರು ಮತ್ತು ಮಹಿಳೆಯರು ಹಿಂದೇಟು ಹಾಕುತ್ತಿದ್ದುದರಿಂದ ಈ ಕ್ರಮ ಕೈಗೊಳ್ಳಲಾಗಿದೆ'' ಅಂತ ಕೂಡ ಜೇಟ್ಲಿ ವಿವರಿಸಿದ್ರು.

ಖಾಸಗಿ ವಲಯವಾಗಿರಲಿ, ಅಥವಾ ಸಾರ್ವಜನಿಕ ವಲಯವಾಗಿರಲಿ ಪ್ರತಿ ಬ್ಯಾಂಕ್​ ಶಾಖೆ ಕೂಡ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರ ಉದ್ಯಮ ಘಟಕಗಳನ್ನು ಒಪ್ಪಿಕೊಳ್ಳಲೇಬೇಕು. ಅಂತಹ ಇಬ್ಬರು ಉದ್ಯಮಿಗಳಿಗೆ ಪ್ರತಿ ಬ್ಯಾಂಕ್ ಶಾಖೆ ಕಂಪನಿಯನ್ನು ಅಥವಾ ವಹಿವಾಟನ್ನು ಆರಂಭಿಸಲು ಹಣಕಾಸಿನ ನೆರವು ನೀಡಲಿದೆ ಅಂತಾ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ. ಮುಂದಿನ 2 ವರ್ಷಗಳಲ್ಲಿ ಹಿಂದುಳಿದ ವರ್ಗ ಮತ್ತು ಮಹಿಳೆಯರ ವಿಭಾಗದ ವ್ಯಾಪಾರ ಅಥವಾ ಉತ್ಪಾದನಾ ಸಂಸ್ಥೆಗಳ ವಹಿವಾಟಿನಿಂದ 300,000 ಹೊಸ ಉದ್ಯಮಿಗಳ ಸೃಷ್ಟಿಯಾಗಲಿದೆ ಅಂತಾ ಸಚಿವ ಅರುಣ್ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.