ಬೇಕಿದ್ರೆ ಬಾಚಿಕೊಳ್ಳಿ, ಇಲ್ಲಾಂದ್ರೆ ಖಾಲಿಯಾಗುತ್ತೆ !

ಟೀಮ್​​ ವೈ.ಎಸ್​​.ಕನ್ನಡ

0

ಅದು ಪಾಕೆಟ್ ಮನಿ ಸಂಗ್ರಹಿಸಲು ಶುರುಹಚ್ಚಿಕೊಂಡ ಕೆಲಸ. ಆದ್ರೆ, ರೆಡಿಯಾಗಿದ್ದು ಮಾತ್ರ ದೊಡ್ಡ ಉದ್ಯಮ ! ಹೌದು ಇದು ಅನುಗ್ಯ ವರ್ಧನ್ ಅವರ ಕಥೆ. ತಮ್ಮ ವೈಯುಕ್ತಿಕ ಖರ್ಚು ನಿಭಾಯಿಸಲೆಂದು ಶುರು ಮಾಡಿದ ವಹಿವಾಟು ಇಂದು ದೊಡ್ಡ ಉದ್ಯಮವಾಗಿ ಬೆಳೆದಿದೆ.

2011ರಲ್ಲಿ ಮದ್ವೆಯಾದ ಬಳಿಕ ರಾಂಚಿಯ ಈ ಹುಡುಗಿ ಬೆಂಗಳೂರಿಗೆ ಶಿಫ್ಟ್ ಆದರು. ಆಗ ತಾನೇ ಅವರು ಪದವಿ ಶಿಕ್ಷಣ ಪೂರ್ತಿಗೊಳಿಸಿದ್ದರು. ಮನೆಯಲ್ಲಿ ಇಡೀ ಒಂದು ವರ್ಷ ಸುಮ್ಮನೆ ಕುಳಿತುಕೊಂಡು ಟೈಂ ಪಾಸ್ ಮಾಡುವುದು ಆಕೆಗೆ ಅತ್ಯಂತ ಕಷ್ಟದ ಕೆಲಸವಾಗಿತ್ತು. ಅದನ್ನಾಕೆ ದ್ವೇಷಿಸುತ್ತಿದ್ದರು. ಸುಮ್ಮನೆ ಕುಳಿತುಕೊಳ್ಳುವ ಬದಲು ಅವರು, ಲಾ ಅಂಡ್ ಕಂಪನಿ ಸೆಕ್ರೆಟರಿ ಕೋರ್ಸ್​ಗೆ ಅರ್ಜಿ ಹಾಕಿದರು.

ಕೋರ್ಸ್​ಗಾಗಿ ಅವರು ಪ್ರತಿದಿನ ಓಡಾಡಬೇಕಾಯಿತು. ಒಬ್ಬರೇ ದುಡಿಯುವ ಕುಟುಂಬಕ್ಕೆ ಈ ಖರ್ಚು ಹೆಚ್ಚಿನ ಹೊರೆಯಾಗಿ ಪರಿಣಮಿಸಿತು.

“ನನ್ನ ಖರ್ಚು ನಿಭಾಯಿಸಲು ನಾನು ಏನನ್ನಾದರೂ ಮಾಡಬೇಕು ಎನ್ನುವ ಆಕಾಂಕ್ಷೆ ನನ್ನನ್ನು ಕಾಡತೊಡಗಿತು. ಈ ಬಗ್ಗೆ ನಾನು ಗಂಭೀರವಾಗಿ ಯೋಚಿಸತೊಡಗಿದೆ. ಈ ನಗರದಲ್ಲಿ ಬದುಕುವುದು ತುಂಬಾ ದುಬಾರಿಯಾಗಿತ್ತು. ಈ ಕಾರಣದಿಂದ ನಾನು ನನ್ನ ಕುಟುಂಬಕ್ಕೆ ನೆರವಾಗಲು ಬಯಸಿದೆ” ಎನ್ನುತ್ತಾರೆ ಅನುಗ್ಯಾ. ಹೀಗಾಗಿ, ಸ್ವತಂತ್ರವಾಗಿ ಮಾರ್ಕೆಟ್ ರೀಸರ್ಚ್ ಆರಂಭಿಸಿದರು.

ಇ ಕಾಮರ್ಸ್ ಬಗ್ಗೆ ಅವರಿಗೆ ತುಂಬಾನೇ ಆಸಕ್ತಿ ಇತ್ತು. ಆನ್​ಲೈನ್​​ನಲ್ಲೇ ಏನಾದರೂ ಆರಂಭಿಸಬೇಕು ಎಂದು ಅವರು ನಿರ್ಧರಿಸಿದರು. ಹೋಲ್​ಸೇಲ್ ಮತ್ತು ಚಿಲ್ಲರೆ ವ್ಯಾಪಾರಿಗಳ ಜೊತೆ ಅವರು ತಮ್ಮ ಪ್ರಾಜೆಕ್ಟ್ ಬಗ್ಗೆ ಹೆಚ್ಚು ಚರ್ಚೆ ನಡೆಸಲಾರಂಭಿಸಿದರು. ಅಂತಿಮವಾಗಿ ಚಿಕ್ಕ ಉದ್ಯಮವೊಂದನ್ನು ಸ್ಥಾಪಿಸಲು ನಿರ್ಧರಿಸಿದರು. ಇ-ಬೇಯ ವಾಚ್​​ಗಳ ಇ-ರಿಟೇಲರ್ ಆಗಿ ರಿಜಿಸ್ಟರ್ ಮಾಡಿಕೊಂಡರು.

ಆರಂಭಿಕ ಬಂಡವಾಳ

ಅನುಗ್ಯಾ ಅವರು ಆರಂಭಿಕ ಬಂಡವಾಳವಾಗಿ ಸುಮಾರು 7 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿದರು. ಈ ಮೂಲಕ ಇ-ರಿಟೇಲಿಂಗ್ ಕ್ಷೇತ್ರಕ್ಕೆ ಧುಮುಕಿದರು. ಈಗ ಅವರು ಗ್ರ್ಯಾಬ್ಇಟ್ಒ ಎಂಬ ಸ್ವತಂತ್ರ ಸಂಸ್ಥೆ ಹುಟ್ಟು ಹಾಕಿದ್ದು, ಫ್ಲಿಫ್​ಕಾರ್ಟ್ ಮತ್ತು ಅಮೇಜಾನ್​​ನಂತಹ ದಿಗ್ಗಜರಿಗೆ ಇ-ರಿಟೇಲ್ ಸೇವೆ ನೀಡುತ್ತಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅವರು ಸಾಧಿಸಿರುವ ಯಶಸ್ಸು ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ.

2013ರ ಜನವರಿಯಲ್ಲಿ ಉದ್ಯಮ ಆರಂಭಿಸಿದ ಅವರು, ಈಗ ಪ್ರತಿ ತಿಂಗಳು 10 ಲಕ್ಷ ರೂಪಾಯಿಗೂ ಹೆಚ್ಚು ವಹಿವಾಟು ನಡೆಸುತ್ತಿದ್ದಾರೆ. ಇಷ್ಟೊಂದು ವಹಿವಾಟು ನಡೆಯುತ್ತದೆ ಎನ್ನುವುದನ್ನು ಅವರು ಕನಸಿನಲ್ಲೂ ಊಹಿಸಿರಲಿಲ್ಲ.

ನಾನು ಬಿಡಿಗಾಸು ಸಂಪಾದಿಸುವ ಉದ್ದೇಶದಿಂದ ಸುಮ್ಮನೇ ಇದನ್ನು ಆರಂಭಿಸಿದೆ. ಆದರೆ, ಬರುಬರುತ್ತಾ ಇದೇ ಪೂರ್ಣಕಾಲಿಕ ಕೆಲಸವಾಗಿ ಲಾಭದಾಯಕ ಉದ್ದಿಮೆಯಾಯಿತು ಎನ್ನುತ್ತಾರೆ ಅನುಗ್ಯಾ. ಈಗ ಅವರು ವಾಚ್ ತಯಾರಿಸುವತ್ತಲೂ ಗಮನ ಹರಿಸತೊಡಗಿದ್ದಾರೆ.

ವಾಚ್​​​ಗಳಿಗೆ ಹೆಚ್ಚಿನ ಡಿಮ್ಯಾಂಡ್ ಇದು ಪ್ರತಿ ದಿನ ಇವರು ಸರಾಸರಿ 500 ವಾಚ್​​ಗಳಿಗೆ ಆರ್ಡರ್ ಪಡೆಯುತ್ತಿದ್ದಾರೆ. ಇ-ಕಾಮರ್ಸ್ ಸೈಟ್​​ಗಳಲ್ಲಿ ವಾಚ್​​ಗಳೇ ಅತ್ಯಧಿಕ ಮಾರಾಟವಾಗುವ ವಸ್ತು ಎನ್ನುತ್ತಾರೆ ಅನುಗ್ಯಾ.

ವಾಣಿಜ್ಯ ಪದವೀಧರರಾಗಿರುವುದು ಅವರಿಗೆ ಉದ್ಯಮದ ಪ್ರಯಾಣದಲ್ಲಿ ಹೆಚ್ಚಿನ ನೆರವು ನೀಡಿದೆ. ಮಹಿಳಾ ಉಡುಪುಗಳ ಮಾರಾಟಕ್ಕೂ ಇವರು ಯತ್ನಿಸಿದ್ದರು. ಆದರೆ ಅದ್ಯಾಕೋ ಇದು ಅವರ ಕೈ ಹಿಡಿಯಲಿಲ್ಲ.

ಸಿಲಿಕಾನ್ ಸಿಟಿಯಲ್ಲಿ ನಾಲ್ಕು ವರ್ಷಗಳು

ಬಿಐಟಿ ಮೆಸ್ರಾದಲ್ಲಿ ಬಿಬಿಎ ಪದವಿ ಪಡೆದಿರುವ ಅನುಗ್ಯಾ ಮುಂದಿನ ಜೂನ್ ವೇಳೆಗೆ ಮೂರು ವರ್ಷಗಳ ಲಾ ಪದವಿಯನ್ನು ಪೂರೈಸಲಿದ್ದಾರೆ. ಅಲ್ಲದೆ ಈ ವರ್ಷಾಂತ್ಯಕ್ಕೆ ಸಿಎಸ್ ಪೂರ್ತಿಗೊಳಿಸಲಿದ್ದಾರೆ.

ಲಾ ಮತ್ತು ಸಿಎಸ್ ಪೂರ್ತಿಗೊಳಿಸಿದ ಬಳಿಕ ಉದ್ಯಮಕ್ಕೆ ಗುಡ್​​ಬೈ ಹೇಳುತ್ತಾರಾ? ಅದು ಸಾಧ್ಯವಿಲ್ಲದ ಕೆಲಸ. ಗ್ರ್ಯಾಬಿಟ್ಒ ಮೇಲೆ ನಾನು ಸಾಕಷ್ಟು ಸಮಯವನ್ನು ಹೂಡಿದ್ದೇನೆ. ಈ ಮಟ್ಟಕ್ಕೆ ಬೆಳೆಯಲು ಸಾಕಷ್ಟು ಶ್ರಮವಹಿಸಿದ್ದೇನೆ. ಈ ಪರಿಸ್ಥಿತಿಯಲ್ಲಿ ನಾನು ಬೇರೇನನ್ನೂ ಮಾಡುವ ಸ್ಥಿತಿಯಲ್ಲಿಲ್ಲ. ಒಂದು ದಿನ ಇದು ಈ ಮಟ್ಟಕ್ಕೆ ಬೆಳೆಯುತ್ತದೆ ಎಂದು ನಾನು ಕನಸಿನಲ್ಲೂ ಕಲ್ಪನೆ ಮಾಡಿರಲಿಲ್ಲ. ಈಗ ಇದು ಮುಂಚೂಣಿ ವಾಚ್ಗಳ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಚಿಲ್ಲರೆ ಮತ್ತು ತಯಾರಿಕೆ ಎರಡಲ್ಲೂ ನಾವು ಮುಂದಿದ್ದೇವೆ ಎನ್ನುತ್ತಾರೆ 26 ವರ್ಷ ವಯಸ್ಸಿನ ಉದ್ಯಮಿ.

ಬಹುವಿಧ ಪ್ರತಿಭಾನ್ವಿತೆ

ಅನುಗ್ಯಾರ ಪತಿ ಸಾಫ್ಟ್​​ವೇರ್ ಎಂಜಿನಿಯರ್. ಹತ್ತು ತಿಂಗಳ ಮಗು ಬೇರೆ ಇದೆ. ಹೀಗೆ ಪತ್ನಿಯಾಗಿ, ತಾಯಿಯಾಗಿ, ಲಾ ಮತ್ತು ಸಿಎಸ್ ವಿದ್ಯಾರ್ಥಿನಿಯಾಗಿ, ಉದ್ಯಮಿಯಾಗಿ ಎಲ್ಲಾ ಕೆಲಸ ಮಾಡುವುದೇ ನನ್ನಲ್ಲಿನ ಅತ್ಯುತ್ತಮ ಪ್ರತಿಭೆಯನ್ನು ಹೊರತರುತ್ತಿದೆ ಎನ್ನುತ್ತಾರೆ ಅನುಗ್ಯಾ.

ಮಗು ಹುಟ್ಟಿದ ಬಳಿಕ ಇದು ನಿಜಕ್ಕೂ ಕಷ್ಟದ ಕೆಲಸ. ಆದರೆ, ನನ್ನ ಪತಿಯ ಬೆಂಬಲದಿಂದಾಗಿ ನಾನು ನನ್ನ ಕನಸುಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗಿದೆ. ಅವರು ಹೆಚ್ಚಾಗಿ ಮನೆಯಿಂದಲೇ ಕೆಲಸ ಮಾಡುತ್ತಾರೆ. ನಾನು ಹೆಚ್ಚಾಗಿ ಮನೆಯಿಂದ ಹೊರ ಹೋಗಿಯೇ ಕೆಲಸ ಮಾಡಬೇಕಾಗುತ್ತದೆ. ಕೆಲವೊಮ್ಮೆ ನಾನು ನನ್ನ ಮೀಟಿಂಗ್ಗಳಿಗೆ ಮಗುವನ್ನೂ ಕರೆದುಕೊಂಡೇ ಹೋಗುತ್ತೇನೆ. ಆದರೆ ನಾನು ನನ್ನ ಬದುಕನ್ನು ತುಂಬಾ ಆಸ್ವಾದಿಸುತ್ತೇನೆ ಎನ್ನುತ್ತಾರೆ ಅನುಗ್ಯಾ.

ಅನುಗ್ಯಾರ ಪೋಷಕರು ಸರ್ಕಾರಿ ನೌಕರರು. ಸಹೋದರಿ ದಂತವೈದ್ಯರು. ಹೀಗಾಗಿ ಇವರ ಕುಟುಂಬಕ್ಕೆ ಉದ್ಯಮ ತುಂಬಾನೇ ಹೊಸದು. ಆದರೂ ಎಲ್ಲರ ಹಾದಿಯಲ್ಲಿ ಹೋಗಲು ಇಚ್ಚಿಸದ ಅನುಗ್ಯಾ ಉದ್ಯಮದಲ್ಲೂ ತನ್ನದೇ ಹಾದಿ ಹುಡುಕಿಕೊಂಡು ಯಶಸ್ಸು ಸಂಪಾದಿಸಿದ್ದಾರೆ.

ನನಗೆ ವ್ಯವಹಾರದಲ್ಲಿ ಮೊದಲಿನಿಂದಲೂ ಆಸಕ್ತಿ ಇತ್ತು. ಹೀಗಾಗಿ ಪದವಿಯಲ್ಲೂ ವಾಣಿಜ್ಯ ವಿಷಯವನ್ನು ಆರಿಸಿಕೊಂಡಿದ್ದೆ ಎನ್ನುತ್ತಾರೆ ಅನುಗ್ಯಾ. ಈಗ ಅವರು ಗ್ಯಾಬ್ಇಟ್ಒ ಗಾಗಿ ಸ್ಟೀಲ್ ವಾಚ್ಗಳನ್ನು ತಯಾರಿಸುತ್ತಿದ್ದಾರೆ. ಶೀಘ್ರವೇ ಅವರು ಅನಾಲಗ್ ವಾಚ್​​ಗಳನ್ನೂ ಪರಿಚಯಿಸಲಿದ್ದಾರೆ.

ನಿಮ್ಮ ಬಳಿ ಹೆಚ್ಚು ವೈವಿಧ್ಯಗಳಿದ್ದಷ್ಟೂ ನಿಮಗೆ ಆರ್ಡರ್​​ಗಳು ಹೆಚ್ಚಾಗುತ್ತವೆ ಎನ್ನುವುದು ಅವರ ಉದ್ಯಮದ ಮಂತ್ರ. ಯಶಸ್ಸಿನ ಸೂತ್ರ.

ಲೇಖಕರು: ಶಾಶ್ವತಿ ಮುಖರ್ಜಿ
ಅನುವಾದಕರು: ಪ್ರೀತಮ್​​

Related Stories