ಯಾವುದಕ್ಕೂ ಜಗ್ಗಲ್ಲ ಈ ಬಸ್ ಡ್ರೈವರ್..!

ಉಷಾ ಹರೀಶ್​​​

0

ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಯಾವ ಕೆಲಸ ಮಾಡಿದ್ರೂ ಅವಳನ್ನು ಏನೋ ಒಂಥರಾ ನೋಡುವುದು ಹಿಂದಿನಿಂದಲೂ ಬೆಳೆದು ಬಂದಿದೆ. ಆದರೆ ಅದಕ್ಕೆ ವಿರುದ್ಧ ಎನ್ನುವಂತೆ ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸುವ ಛಲ ಮಹಿಳೆಗೆ ರಕ್ತಗತವಾಗಿ ಬಂದಿರುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆ 33 ವರ್ಷದ ಬೆಳಗಾವಿ ಮೂಲದ ಪ್ರೇಮಾ ರಾಮಪ್ಪ ನಡಬಟ್ಟಿ .

ಹೌದು ಕಳೆದ ಐದು ವರ್ಷಗಳಿಂದ ಬೆಂಗಳೂರಿಗರ ಜೀವನಾಡಿ ಬಿಎಂಟಿಸಿಯಲ್ಲಿ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರೇಮಾ ರಾಮಪ್ಪ ನಡಬಟ್ಟಿ ಎಲ್ಲ ಮಹಿಳೆಯರಿಗೂ ಒಂದು ರೀತಿಯಲ್ಲಿ ಸ್ಪೂರ್ತಿಯಂತಲೇ ಹೇಳಬಹುದು. ಚಿಕ್ಕವಯಸ್ಸಿಗೆ ಗಂಡನನ್ನು ಕಳೆದುಕೊಂಡ ಪ್ರೇಮಾ ಅವರ ಹೆಗಲ ಮೇಲೆ ಬಿದ್ದಿದ್ದು ಅವರ ಕುಟುಂಬ ನಿರ್ವಹಣೆಯೆಂಬ ನೊಗ ಮತ್ತು ಮಕ್ಕಳ ಜವಾಬ್ದಾರಿ.

ಕಾಲೇಜು ದಿನಗಳಲ್ಲಿ ಕಲಿತದ್ದು ಜೀವನಕ್ಕೆ ಉಪಯೋಗ

ಪ್ರೇಮಾ ಮೊದಲಿನಿಂದಲೂ ಸ್ವಲ್ಪ ಡಿಫರೆಂಟ್. ಶಾಲಾ ದಿನಗಳಲ್ಲೇ ಬೈಕ್ ಓಡಿಸುವುದನ್ನು ರೂಢಿಸಿಕೊಂಡಿದ್ದ ಅವರು ಕಾಲೇಜಿಗೆ ಬರುವುದರೊಳಗೆ ಲಾರಿ ಬಸ್ಸು ಚಲಾಯಿಸುವುದನ್ನು ನೀರು ಕುಡಿದಷ್ಟೇ ಸುಲಭವಾಗಿ ಕಲಿತುಬಿಟ್ಟರು. ಅದು ಸುಮ್ಮನೆ ಕ್ರೇಜ್​​ಗಾಗಿ ಎಂದರೆ ನೀವು ನಂಬಲೇಬೇಕು. ಬಿಎಂಟಿಸಿಯಲ್ಲಿ ಡ್ರೈವರ್ ಕೆಲಸ ಸಿಕ್ಕಾಗ ಹಿಂದೆ ಮುಂದೆ ನೋಡದ ಪ್ರೇಮಾ ಕೆಲಸಕ್ಕೆ ಹೋಗಲು ತಯಾರಿ ನಡೆಸಿಯೇ ಬಿಟ್ಟರು. ಆ ಮೂಲಕ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲೊಂದು ಇತಿಹಾಸ ನಿರ್ಮಿಸಲು ಸಿದ್ದರಾದರು.

2011ರಿಂದ ಬಸ್ ಡ್ರೈವಿಂಗ್

ಸುಮ್ಮನೆ ಕ್ರೇಜ್ಹ್​​ಗಾಗಿ ಬಸ್ ಡ್ರೈವಿಂಗ್ ಕಲಿತ ಪ್ರೇಮಾ ಅವರಿಗೆ ಮುಂದೆ ಅದೇ ಜೀವನ ನಿರ್ವಹಣೆಗೆ ಅನಿವಾರ್ಯವಾಗುತ್ತದೆ ಎಂಬ ಅರಿವು ಇರಲಿಲ್ಲವೇನೋ. 2011ರಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಚಾಲಕಿಯಾಗಿ ಸೇವೆಗೆ ಸೇರಿಕೊಂಡ ಪ್ರೇಮಾ ಇಲ್ಲಿಯವರೆಗೂ ಎಲ್ಲಿಯೂ ನಿಲ್ಲದೇ ಸಾಗುತ್ತಿದ್ದಾರೆ. ಸದ್ಯ ಇವರು ಬಿಎಂಟಿಸಿಯ ಏಕೈಕ ಮಹಿಳಾ ಬಸ್ ಚಾಲಕಿ.

ಸಂಚಾರ ದಟ್ಟಣೆ ನಡುವೆ ಸಮರ್ಥವಾಗಿ ಕಾರ್ಯ ನಿರ್ವಹಣೆ

ಗೋಕಾಕ್ ತಾಲೂಕಿನ ಪ್ರೇಮಾ ಅವರು ಭಂಡ ಧೈರ್ಯ ಮಾಡಿ ಡ್ರೈವಿಂಗ್ ಕೆಲಸಕ್ಕೆನೋ ಸೇರಿಕೊಂಡರು ಆದರೆ ಬೆಂಗಳೂರು ಎಂಬ ಮಯಾನಗರಿಯಲ್ಲಿ ಮಹಿಳೆಯರು ದ್ವಿಚಕ್ರವಾಹನವನ್ನು ಓಡಿಸಲು ತಿಣುಕಾಡಬೇಕಾದಂತಹ ಟ್ರಾಫಿಕ್ ಇರುತ್ತದೆ ಅಂತಹದ್ರಲ್ಲಿ ಬಸ್ ಎಂದರೆ ಕಷ್ಟವೇ ಸರಿ. ಆಗಿದ್ದಾಗಲಿ ಎಂದು ತೀರ್ಮಾನಿಸಿದ ಪ್ರೇಮಾ ಸ್ಟೇರಿಂಗ್ ಹಿಡಿದು ಕುಳಿತೆ ಬಿಟ್ಟರು. ಸಂಚಾರ ದಟ್ಟಣೆಯ ನಡುವೆಯೂ ವಿವಿಧ ಮಾರ್ಗಗಳಲ್ಲಿ ವಾಹನ ಚಲಾಯಿಸಿ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ನಿತ್ಯ ಬೆಳಗ್ಗೆ 7ರಿಂದ ಮಧ್ಯಾಹ್ನ 2 ಗಂಟೆ ತನಕ ಕಾರ್ಯನಿರ್ವಹಿಸುವ ಪ್ರೇಮಾ, ಬಿಎಂಟಿಸಿಯ ಡ್ರೈವರ್ ಕಂ ಕಂಡಕ್ಟರ್ ಆಗಿದ್ದಾರೆ.

ತಾನು ಬಸ್ ಚಾಲಕಿಯಾಗಬೇಕೆಂದು ಎಂದೂ ಅಂದುಕೊಂಡಿರದ ಪ್ರೇಮಾ ಅವರಿಗೆ ಪರಿಸ್ಥಿತಿ ಅನಿವಾರ್ಯತೆ ಈ ಕೆಲಸಕ್ಕೆ ಬರುವಂತೆ ಮಾಡಿತು. ಪತಿಯ ಅಕಾಲಿಕ ಸಾವು ಹಾಗೂ ಬೆಳೆಯುತ್ತಿದ್ದ ಮಗನ ಭವಿಷ್ಯದ ದೃಷ್ಟಿಯಿಂದ ಉದ್ಯೋಗ ಅರಿಸಿ ಈ ಕ್ಷೇತ್ರಕ್ಕೆ ಬಂದವರು ಪ್ರೇಮಾ. ಸಾಕಷ್ಟು ಕಡೆ ಕೆಲಸ ಹುಡುಕಿ ಬೇಸತ್ತು ಕೊನೆಗೆ ಬಿಎಂಟಿಸಿಗೆ ಸೇರ್ಪಡೆ ಆದರು. ಜಯನಗರದ 9ನೇ ಬ್ಲಾಕ್​​ನಿಂದ ಮೆಜೆಸ್ಟಿಕ್​​ಗೆ ತಲುಪುವ ಮಾರ್ಗ ಸಂಖ್ಯೆ 18, ಮೆಜೆಸ್ಟಿಕ್​​ನಿಂದ ಕೋರಮಂಗಲಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಸಂಖ್ಯೆ 171 ಸೇರಿದಂತೆ ವಿವಿಧ ಮಾರ್ಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಇವರದ್ದಾಗಿದೆ. ನಾನು ಕಾರ್ಯನಿರ್ವಹಿಸುವ ಅವಧಿಯಲ್ಲಿ ಹೆಚ್ಚಿನ ಸಮಯ ವಿಪರೀತ ದಟ್ಟಣೆ ಇರುತ್ತದೆ. ಆದರೆ ಇದುವರೆಗೂ ಯಾವುದೇ ಆತಂಕ ಆಗದ ರೀತಿ ಕಾರ್ಯನಿರ್ವಹಿಸಿದ್ದೇನೆ ಎನ್ನುತ್ತಾರೆ ಪ್ರೇಮಾ. 2013ರಲ್ಲಿ ಬಿಎಂಟಿಸಿ ಚಾಲಕರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ದಿಟ್ಟತನ ತೋರಿ ಮುಷ್ಕರದಲ್ಲಿ ಪಾಲ್ಗೊಳ್ಳದೆ ಬಸ್ ಚಲಾಯಿಸಿದ ಪ್ರೇಮಾ ಅವರಿಗೆ 10 ಸಾವಿರ ರೂ. ಪೋತ್ಸಾಹ ಧನ ನೀಡಲಾಗಿತ್ತು.

‘‘ಮಗನ ಓದು, ಮನೆ ಬಾಡಿಗೆ ಇತ್ಯಾದಿಗಳಿಗೆ ಹಣ ಬೇಕಲ್ಲ. ಯಾರ ಬಳಿಯೂ ಕೈಚಾಚಲ್ಲ. ಓಟಿ ಮಾಡಿ ಸಂಪಾದಿಸ್ತೇನೆ ಪುರುಷರಿಗಿಂತ ಮಹಿಳೆಯರು ಯಾವುದರಲ್ಲೂ ಕಡಿಮೆಯಿಲ್ಲ ಎಂಬದನ್ನು ನಾನು ತೋರಿಸಿಕೊಟ್ಟಿದ್ದೇನೆ. ಸುಮಾರು ಒಂದು ಲಕ್ಷಕ್ಕೂ ಅಕ ಮಂದಿ ನೌಕರರ ಪೈಕಿ ನಾನೊಬ್ಬಾಕೇನೇ ಲೇಡಿ ಡ್ರೈವರ್. ನನ್ನನ್ನು ನೋಡಿದ 100 ಮಂದಿ ಯುವತಿಯರು ಡ್ರೈವರ್ ಕೆಲಸ ಮಾಡೋಕೆ ರೆಡಿಯಿದ್ದಾರೆ. ಕೆಲಸ ಯಾವುದಾದರೇನು ಶ್ರದ್ಧೆ, ಆಸಕ್ತಿಯಿರಬೇಕಷ್ಟೇ’’

-ಪ್ರೇಮಾ ರಾಮಪ್ಪ ನಡಬಟ್ಟಿ, ಬಿಎಂಟಿಸಿ ಬಸ್ ಡ್ರೈವರ್