ಕತ್ತಲ ರಾಜ್ಯದಲ್ಲೊಂದು ಬೆಳಕಿನ ಊರು..!

ಕೃತಿಕಾ

ಕತ್ತಲ ರಾಜ್ಯದಲ್ಲೊಂದು ಬೆಳಕಿನ ಊರು..!

Wednesday December 02, 2015,

3 min Read

ಈಗ ರಾಜ್ಯಾದಾಧ್ಯಂತ ಕತ್ತಲೆಯದ್ದೇ ಮಾತು. ಲೋಡ್ ಶೆಡ್ಡಿಂಗ್ ನಿಂದಾಗಿ ಕರೆಂಟ್ ಕಣ್ಣಾಮುಚ್ಚಾಲೆ ನಿರಂತರವಾಗಿ ಮುಂದುವರೆಯುತ್ತಲೇ ಇದೆ. ಬೆಂಗಳೂರಿನಂತಾ ಬೆಂಗಳೂರಿನಲ್ಲೇ ಪ್ರತಿ ದಿನ ನಾಲ್ಕೈದು ಗಂಟೆ ಕರೆಂಟ್ ಇರುವುದೇ ಇಲ್ಲ. ಇನ್ನು ಹಳ್ಳಿಗಳಲ್ಲಂತೂ ಪರಿಸ್ಥಿತಿಯನ್ನು ಕೇಳುವಂತೆಯೇ ಇಲ್ಲ. ಕರೆಂಟ್ ಬಂದರೆ ಸಾಕು ಸಂಭ್ರಮಿಸುವ ಸ್ಥಿತಿ ನಿರ್ಮಾಣವಾಗುತ್ತದೆ. ಇನ್ನೇನು ಸಂಭ್ರಮ ಆರಂಭವಾಗುವುದರೊಳಗೆ ಕರೆಂಟ್ ಹೋಗಿರುತ್ತದೆ..! ಇದು ನಮ್ಮ ರಾಜ್ಯದಲ್ಲಿನ ವಿದ್ಯುತ್ ವ್ಯವಸ್ಥೆ. ಇಡೀ ರಾಜ್ಯಕ್ಕೆ ರಾಜ್ಯವೇ ವಿದ್ಯುತ್ ಸಮಸ್ಯೆಯಿಂದ ತತ್ತರಿಸುತ್ತಿದ್ದರೆ ಅದೊಂದು ಹಳ್ಳಿಯಲ್ಲಿ ಮಾತ್ರ ಯಾವಾಗಲೂ ಬೆಳಕಿನ ಚಿಲುಮೆ. ಅಲ್ಲಿ ಕರೆಂಟ್ ಹೋಗುವ ಮಾತೇ ಇಲ್ಲ. ಸಂಜೆಯಾಗುತ್ತಿದ್ದಂತೆ ಆ ಊರಿನ ತುಂಬಾ ಅಕ್ಷರಶಃ ವಿದ್ಯುತದ ಸಂಚಾರ..! ಇಡೀ ಊರಿಗೆ ಊರೇ ಬೆಳಗುತ್ತಿದೆ. ನಾವು ಹೇಳುತ್ತಿರೋದು ರಾಜ್ಯದ ಮೊದಲು ಸೌರ ಗ್ರಾಮದ ಬಗ್ಗೆ. ಹೌದು ಈ ಊರಿನಲ್ಲಿ ಸೌರ ವಿದ್ಯುತ್ ಅಳವಡಿಸಿಕೊಳ್ಳಲಾಗಿದೆ. ಪರಿಣಾಮ ಸಂಜೆಯಾಗುತ್ತಿದ್ದಂತೆ ಊರಿನ ಬೀದಿ ದೀಪಗಳೆಲ್ಲವೂ ಬೆಳಗಲು ಆರಂಭಿಸುತ್ತವೆ. ಬೆಳಗಾಗುತ್ತಿದ್ದಂತೆ ಎಲ್ಲವೂ ತನ್ನಿಂತಾನೇ ಆರಿಹೋಗುತ್ತವೆ.

image


ಇಂತಹದ್ದೊಂದು ಭಾಗ್ಯವಂತ ಹಳ್ಳಿ ಇರೋದು ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕಿನಲ್ಲಿ. ಈ ಊರಿನ ಹೆಸರು ಶುಕ್ರವಾಡಿ. ಹೆಸರಿಗೆ ತಕ್ಕಂತೆ ಈ ಊರಿಗೀಗ ಅಕ್ಷರಶಃ ಶುಕ್ರದೆಸೆ.! ಕಲಬುರ್ಗಿಯಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಶುಕ್ರವಾಡಿಯ ಚಿತ್ರಣ ಈಗ ಸಂಪೂರ್ಣ ಬದಲಾಗಿದೆ. ಈ ಹಿಂದೆ ಕುಗ್ರಾಮವಾಗಿದ್ದ ಈ ಹಳ್ಳಿ ಈಗ ‘ಸೌರ ಬೀದಿ ದೀಪ’ಗಳನ್ನು ಅಳವಡಿಸಿಕೊಂಡ ರಾಜ್ಯದ ಮೊದಲ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು 250 ಮನೆಗಳಿರುವ ಈ ಶುಕ್ರವಾಡಿ ಗ್ರಾಮದಲ್ಲಿ 1,200 ಜನಸಂಖ್ಯೆ ಇದೆ. ಊರಲ್ಲಿ ಒಂದು ಅಂಗನವಾಡಿ ಕೇಂದ್ರ ಹಾಗೂ 1ರಿಂದ 8ನೇ ತರಗತಿವರೆಗೆ ಸರ್ಕಾರಿ ಶಾಲೆ ಇದೆ. ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾಭ್ಯಾಸಕ್ಕೆ ಇಲ್ಲಿನ ವಿದ್ಯಾರ್ಥಿಗಳು ಏಳು ಕಿ.ಮೀ ಅಂತರದಲ್ಲಿರುವ ಆಳಂದಕ್ಕೆ ತೆರಳುತ್ತಾರೆ. ಸೌರ ಬೀದಿ ದೀಪ ಅಳವಡಿಸಿದ್ದರಿಂದ ಇಡೀ ಗ್ರಾಮ ಈಗ ನಿತ್ಯ ಬೆಳದಿಂಗಳಿನಿಂದ ಕೂಡಿರುತ್ತದೆ.

ಈ ಊರಿನಲ್ಲೀಗ ಬೆಳಕಿನದ್ದೇ ಮಾತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಈ ಗ್ರಾಮದಲ್ಲಿ 15 ಲಕ್ಷ ರೂ ವೆಚ್ಚದಲ್ಲಿ 50 ಸೌರ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಬೆಂಗಳೂರಿನ ದೀಪಾ ಸೋಲಾರ್ ಸಿಸ್ಟಮ್ಸ್ ಎಂವ ಸಂಸ್ಥೆ ಈ ಊರಿನಲ್ಲಿ ಈ ಸೌರ ವಿದ್ಯುತ್ ಯೋಜನೆಯನ್ನು ಕಾರ್ಯಗತಗೊಳಿಸಿದೆ. ಇದರಿಂದಾಗಿ ಇಡೀ ಊರಿಗೆ ಊರೇ ಬೆಳಕಿನಿಂದ ಕಂಗೊಳಿಸುತ್ತದೆ. ಅಕ್ಕ ಪಕ್ಕದ ಊರುಗಳು ಲೋಡ್ ಶೆಡ್ಡಿಂಗ್ ನಿಂದಾಗಿ ಕತ್ತಲೆಯಲ್ಲಿ ಮುಳುಗಿದ್ದರೆ ಈ ಊರಿನಲ್ಲಿ ಮಾತ್ರ ರಾತ್ರಿ ವೇಳೆಯಲ್ಲೂ ಸೂರ್ಯ ಕೆಲಸ ಮಾಡುತ್ತಾನೆ, ಅದು ಸೋಲಾರ್ ದೀಪಗಳ ಮೂಲಕ..!

image


ಊರಿನಲ್ಲಿರುವ ಸರ್ಕಾರಿ ಕಟ್ಟಡದ ಮೇಲ್ಭಾಚಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿದ್ದು, ಅದೇ ಕಟ್ಟಡದ ಒಳಗೆ ಸೌರ ವಿಧ್ಯುತ್ ಘಟಕ ಸ್ಥಾಪಿಸಲಾಗಿದೆ. 4ಕಿಲೋ ವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಇಲ್ಲಿ ಉತ್ಪಾದನೆ ಆಗುತ್ತದೆ. ಈ ವಿದ್ಯುತ್ ಘಟಕದ ಮೂಲಕ ಪ್ರತಿ ಸೌರ ವಿದ್ಯುತ್ ಕಂಬಕ್ಕೆ ವಿದ್ಯುತ್ ಸರಬರಾಜು ಆಗುತ್ತದೆ. ಈ ಘಟಕದಲ್ಲಿ ಉತ್ಪಾದನೆಯಾಗುವ ವಿದ್ಯುತ್ತನ್ನು ತಲಾ 20 ವಾಟ್ಸ್ ಲೆಡ್ ಬೀದಿದೀಪಗಳಿಗಾಗಿ ಮಾತ್ರ ಉಪಯೋಗಿಸಲಾಗುತ್ತದೆ. ಈ ಘಟಕದಲ್ಲಿ ಹೆಚ್ಚುವರಿಯಾಗಿ ವಿದ್ಯುತ್ ಉತ್ಪಾದಿಸಲಾಗುವುದಿಲ್ಲ. ಐವತ್ತು ವಿದ್ಯುತ್ ಕಂಬಗಳಿಗೆ ಎಷ್ಟು ಅಗತ್ಯವಿದೆಯೋ ಅಷ್ಟು ಮಾತ್ರ ಉತ್ಫಾದಿಸಲಾಗುತ್ತದೆ.

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಈ ಸೌರ ಗ್ರಾಮ ಯೋಜನೆಗಾಗಿ ನಾವು ಹಿಂದುಳಿದ ಪ್ರದೇಶವಾದ ಕಲಬುರ್ಗಿಯನ್ನು ಆಯ್ಕೆ ಮಾಡಿಕೊಂಡೆವು. ಈ ಶುಕ್ರವಾಡಿ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಈ ಯೋಜನೆಗಾಗಿ ಶುಕ್ರವಾಡಿ ಗ್ರಾಮವನ್ನು ಆಯ್ಕೆ ಮಾಡಿಕೊಂಡೆವು. ಇವತ್ತು ಇಡೀ ಗ್ರಾಮ ರಾತ್ರಿಯಿಡೀ ಬೆಳದಿಂಗಳಿನಂತೆ ಕಾಣುತ್ತದೆ. ವಿದ್ಯುತ್ ಉಳಿಸಿ ಸೌರ ವಿದ್ಯುತ್ ಬಳಕೆ ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆ ಆರಂಭಿಸಿ ಯಶಸ್ಸು ಪಡೆದಿದ್ದೇವೆ. ಮೊದಲ ಹಂತದಲ್ಲಿ ಕೇವಲ ಬೀದಿ ದೀಪಗಳಿಗೆ ಮಾತ್ರ ಸೋಲಾರ್ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮದ ಪ್ರತೀ ಮನೆ ಮನೆಗೂ ಸೌರ ವಿದ್ಯುತ್ ನೀಡುವ ಯೋಜನೆ ಇದೆ. ಈ ಯೋಜನೆಯನ್ನು ರಾಜ್ಯದ ಎಲ್ಲ ಗ್ರಾಮಗಳಿಗೂ ವಿಸ್ತರಿಸುವ ಯೋಜನೆ ಇದೆ ಅಂತಾರೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ಇಲಾಖೆಯ ಎಕ್ಸಿಕ್ಯೂಟೀವ್ ಎಂಜಿಬಿಯರ್ ರಮೇಶ್ ಕುಮಾರ್.

image


ನಮ್ಮ ಊರಿನಲ್ಲಿ ಈ ಸೋಲಾರ್ ವಿದ್ಯುತ್ ಅಳವಡಿಕೆಯಿಂದಾಗಿ ಯಾವಾಗಲೂ ಕರೆಂಟ್ ಇರುತ್ತದೆ. ಮನೆಗಳಲ್ಲಿ ಕರೆಂಟ್ ಇಲ್ಲದಿದ್ದರೂ ಬೀದಿಗಳಲ್ಲಿ ಬೆಳಕು ಇದ್ದೇ ಇರುತ್ತದೆ. ಈ ಸೋಲಾರ್ ದೀಪಗಳನ್ನು ಅಳವಡಿಸಿದ ನಂತರ ನಾವು ನಮ್ಮ ಮನೆ ಮುಂದಿನ ಲೈಟ್ ಗಳನ್ನು ಹಾಕುವುದೇ ಇಲ್ಲ. ಆ ಮೂಲಕ ವಿದ್ಯುತ್ ಉಳಿತಾಯ ಮಾಡುತ್ತಿದ್ದೇವೆ. ಈ ಯೋಜನೆ ಮೂಲಕ ಮನೆಗಳಿಗೂ ವಿದ್ಯುತ್ ನೀಡಿದರೆ ಇನ್ನೂ ಹೆಚ್ಚಿನ ಖುಷಿಯಾಗುತ್ತದೆ. ನಮ್ಮ ಊರು ರಾಜ್ಯದ ಮೊದಲ ಸೌರಗ್ರಾಮ ಅಂತ ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಅಂತಾರೆ ಈ ಊರಿನ ಶಂಕರ ಪಾಟೀಲ.

ಒಂದು ಸರ್ಕಾರಿ ಯೋಜನೆ ಯಶಸ್ವಿಯಾಗೋದು ಅಂದ್ರೆ ಇದೇ ಅಲ್ವಾ. ಇಂತದ್ದೊಂದು ಮಾದರಿ ಕೆಲಸ ಮಾಡಿರುವ ಗ್ರಾಮೀಣಾಭಿವೃದ್ದಿ ಇಲಾಖೆಗೆ ಅಭಿನಂದನಾರ್ಹರು. ಈ ಗ್ರಾಮವನ್ನೇ ಮಾದರಿಯಾಗಿಟ್ಟುಕೊಂಡು ಈ ಯೋಜನೆಯನ್ನ ರಾಜ್ಯದ ಎಲ್ಲ ಹಳ್ಳಿಗಳಿಗೂ ವಿಸ್ತರಿಸಿದರೆ ಇಡೀ ರಾಜ್ಯವೇ ಕತ್ತಲಿನಿಂದ ಮುಕ್ತವಾಗಲಿದೆ.