ಹಸಿವಿನ ಬಗ್ಗೆ ಚಿಂತೆ ಬಿಡಿ- 7thಸಿನ್ ​ಫುಡ್​ಟ್ರಕ್​ಗೆ ವಿಸಿಟ್​ ಕೊಡಿ

ಟೀಮ್​ ವೈ.ಎಸ್​. ಕನ್ನಡ

1

ಹಸಿದ ಹೊಟ್ಟೆಗೆ ಅನ್ನ ನೀಡಿದ್ರೆ ಅದು ದೇವರ ಕೆಲಸಕ್ಕಿಂತಲೂ ಶ್ರೇಷ್ಠವಾದದು. ಭಾರತೀಯ ಸಂಸ್ಕೃತಿಯಲ್ಲಿ ಅನ್ನಕ್ಕಿರುವ ಬೆಲೆಯೇ ಅಂತಹದ್ದು. ಹೀಗಾಗಿಯೇ ಇವತ್ತು ಆಹಾರ ನೀಡುವುದನ್ನೇ ಉದ್ಯಮವನ್ನಾಗಿ ಮಾಡಿಕೊಂಡು ಯಶಸ್ಸು ಕಂಡ ಹಲವರಿದ್ದಾರೆ. ಹಸಿದ ಹೊಟ್ಟೆಯನ್ನು ತುಂಬಿಸಿ ಪುಣ್ಯಕಟ್ಟಿಕೊಂಡ ಹಲವರಿದ್ದಾರೆ. ಇವತ್ತು ಆಹಾರೋದ್ಯಮ ವಿವಿಧ ರೀತಿಯಲ್ಲಿ ನಡೆಯುತ್ತದೆ. ಚಿಕ್ಕ ಹೊಟೇಲ್​ನಿಂದ ಹಿಡಿದು, 5ಸ್ಟಾರ್ ಹೊಟೇಲ್ ನಡೆಸುವ ತನಕ ಬೆಳೆದವರೂ ಇದ್ದಾರೆ. ಆದ್ರೆ ಈ ಸ್ಟೋರಿ ಇದೆಲ್ಲಕ್ಕಿಂತ ವಿಭಿನ್ನ. ಇದು ಬೆಂಗಳೂರಿನ ಮಟ್ಟಿಗೆ ಹೊಚ್ಚ ಹೊಸತು.

ಟ್ರಕ್​ನಲ್ಲೇ ಈ ಕಥೆಯ ಆರಂಭ..!

ಅರ್ಚನಾ ಸಿಂಗ್ ಈ ಕಥೆಯ ನಾಯಕಿ. ಇವರ ಫುಡ್ ಸರ್ವೀಸ್​ನ  ಹೆಸರು 7thಸಿನ್. ಆದ್ರೆ ಇದು ಹೊಟೇಲ್ ಅಲ್ಲ. ಬದಲಾಗಿ ಫುಡ್ ಟ್ರಕ್. ಬೆಂಗಳೂರಿನ ಐಟಿ ಹಬ್​ಗಳಲ್ಲಿ ಈ ಫುಡ್ ಟ್ರಕ್ ಹೆಚ್ಚು ಸುದ್ದಿ ಮಾಡಿದೆ. ಈಗಾಗಲೇ ಹಲವು ಗ್ರಾಹಕರನ್ನು ಆಕರ್ಷಿಸಿದೆ. ರುಚಿ ರುಚಿಯಾದ ಆಹಾರ ನೀಡಿದ್ರೆ, ಗ್ರಾಹಕರು ಹತ್ತಿರವಾಗುತ್ತಾರೆ. ಆದ್ರೆ ಈ ಫುಡ್ ಟ್ರಕ್​ನ  ವಿಶೇಷತೇಯೇ ಬೇರೆ. ಇಲ್ಲಿ ಯಾವ ಗಂಡಸರಿಗೂ ಕೆಲಸ ಮಾಡಲು ಅವಕಾಶವಿಲ್ಲ. ಬದಲಾಗಿ ಟ್ರಕ್​ನಲ್ಲಿ ತಯಾರಾಗುವ ತಿಂಡಿ-ತಿನಿಸುಗಳನ್ನು ಹೊಟ್ಟೆ ತುಂಬಾ ತಿನ್ನಬಹುದು. ಯಾಕಂದ್ರೆ ಇದು ಮಹಿಳೆಯರೇ ನಡೆಸುವ ಬ್ಯುಸಿನೆಸ್. ಟ್ರಕ್ ಚಾಲನೆ ಮಾಡುವಲ್ಲಿಂದ ಹಿಡಿದು, ಕಟ್ಟಕಡೆಯ ಕ್ಲೀನಿಂಗ್ ಕೆಲಸದ ತನಕ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿಮುಗಿಸುವುದು ಎಲ್ಲವೂ ಮಹಿಳೆಯರೇ.

ಇದನ್ನು ಓದಿ: ಸಂಬಂಧಗಳಿಗೇಕೆ ಕಟ್ಟಳೆಗಳ ಭಯ- ಗಂಟೆಗಳ ಲೆಕ್ಕದಲ್ಲಿ ಅವಿವಾಹಿತರಿಗೆ ರೂಮ್​ ಲಭ್ಯ..!

ಏಷ್ಯಾದ ಮೊದಲ ಮಹಿಳಾ ಫುಡ್ ಟ್ರಕ್

ಅಂದಹಾಗೇ, 7th ಸಿನ್. ಏಷ್ಯಾದಲ್ಲೇ ಹೊಸ ದಾಖಲೆ ಬರೆದ ಫುಡ್ ಟ್ರಕ್ ಅನ್ನೋದನ್ನ ಇಲ್ಲಿ ಹೇಳಲೇ ಬೇಕು. ಅರ್ಚನಾ ಸಿಂಗ್ ಮಹಿಳೆಯರಿಗೆ ಉದ್ಯೋಗ ನೀಡುವ ಕನಸಿನಲ್ಲಿ ಇದನ್ನು ಆರಂಭಿಸಿದ್ರು. ಹೀಗಾಗಿ ಇಲ್ಲಿ ಎಲ್ಲವೂ ಮಹಿಳೆಯರಿಂದಲೇ ನಡೆಯುತ್ತದೆ. ಬೆಂಗಳೂರಿನ ಬ್ಯೂಸಿ ಟ್ರಾಫಿಕ್​ನಲ್ಲೂ ಈ ಫುಡ್ ಟ್ರಕ್ ಓಡಾಡುತ್ತದೆ. ಮಹಿಳೆಯರು ಇದನ್ನು ಡ್ರೈವ್ ಮಾಡ್ತಾರೆ.

“ಅಸಾಧ್ಯ ಅನ್ನೋದು ಯಾವುದೂ ಇಲ್ಲ. ಆದ್ರೆ ಎಲ್ಲದಕ್ಕೂ ಶ್ರಮ ಮತ್ತು ಹಠ ಇರಬೇಕು. ಅತ್ಯುತ್ತಮ ಆಹಾರದ ಜೊತೆಗೆ ಮಹಿಳೆಯರಿಗೆ ಕೆಲಸ ನೀಡಬೇಕು ಅನ್ನೋ ಕನಸಿತ್ತು. ಈ ಫುಡ್ ಟ್ರಕ್​ನಿಂದ ಅದು ನನಸಾಗಿದೆ. ಕೆಲಸದ ಅನಿವಾರ್ಯತೆ ಇರುವ ಹಲವು ಮಹಿಳೆಯರು ಈ ಫುಡ್​ಟ್ರಕ್ ಕಾನ್ಸೆಪ್ಟ್​ನಿಂದ ಲಾಭ ಪಡೆಯುತ್ತಿದ್ದಾರೆ. ಶಿಕ್ಷಣ ಕಡಿಮೆ ಇರುವ ಮಹಿಳೆಯರು ಕೂಡ ಸ್ವಂತ ಬಲದಿಂದ ನಿಲ್ಲಬೇಕು ಅನ್ನೋದು ನನ್ನ ಕನಸು ”
- ಅರ್ಚನಾ ಸಿಂಗ್, ಫುಡ್​ಟ್ರಕ್ ಸಂಸ್ಥಾಪಕಿ

7th ಸಿನ್ ಹೆಸರಿನ ಹಿಂದಿದೆ ಸೀಕ್ರೆಟ್

ಯಾವುದೇ ಬ್ಯುಸಿನೆಸ್ ಕ್ಲಿಕ್ ಆಗ್ಬೇಕು ಅಂದ್ರೆ ಅದ್ರ ಹೆಸರು ಕೂಡ ವಿಭಿನ್ನವಾಗಿರಬೇಕು. ಅರ್ಚನಾ ಸಿಂಗ್​ರ  ಫುಡ್ ಟ್ರಕ್​ಗೆ 7th ಸಿನ್ ಅನ್ನೋ ಹೆಸರು ಯಾಕಿದೆ ಅಂದ್ರೆ ಅಲ್ಲೂ ವಿಶೇಷತೆ ಕಾಣಿಸುತ್ತದೆ. “ದಿ ಸಿನ್ ಆಫ್ ಗ್ಲುಟೊನಿ ” ಇವ್ರ ಹೆಸರಿನ ಹಿಂದಿರುವ ಸ್ಪೂರ್ತಿ. ಹಸಿದವರಿಗೆ ಆಹಾರ ನೀಡಬೇಕು ಅನ್ನೋ ಕಾನ್ಸೆಪ್ಟ್, ವಿಭಿನ್ನವಾದಾಗ ಹುಟ್ಟಿದ್ದೇ 7th ಸಿನ್. ಈಗ ಈ 7th ಸಿನ್ ಸಖತ್ ಫೇಮಸ್ ಆಗಿದೆ.

ಏನೇನು ಸಿಗುತ್ತೆ..?

ಆನ್​ಲೈನ್ ಬ್ಯುಸಿನೆಸ್​ಗಳ ಬಗ್ಗೆ ನಾವು ಕೇಳಿದ್ದೇವೆ ಮತ್ತು ನೋಡಿದ್ದೇವೆ. ದರ್ಶಿನಿ ಹೊಟೇಲ್​ಗಳಲ್ಲಿ ನೀವು ಆರ್ಡರ್ ಮಾಡಿದ ಫುಡ್ ಸಿಗುತ್ತದೆ. ಹೀಗೇಯೇ ಈ 7th ಸಿನ್ ಫುಡ್ ಟ್ರಕ್​ನಲ್ಲೂ ನೀವು ಬಯಸಿದ ಊಟ ತಿಂಡಿಗಳು ಸ್ಪಾಟ್​ನಲ್ಲೇ ತಯಾರು ಆಗುತ್ತದೆ. ಈ ಫುಡ್ ಟ್ರಕ್​ನಲ್ಲಿ ವಿವಿಧ ಖಾದ್ಯಗಳನ್ನು ತಯಾರು ಮಾಡಿಕೊಡಲಾಗುತ್ತದೆ. ಭಾರತೀಯ ಶೈಲಿ, ಪಾಶ್ಚಾತ್ಯ ಶೈಲಿ, ಚೈನೀಸ್ ಹೀಗೆ ಯಾವುದು ಬೇಕೋ ಅದು ಲಭ್ಯವಿದೆ. ಅಷ್ಟೇ ಅಲ್ಲ ಪ್ರತಿ ದಿನವೂ ಮೆನು ಬದಲಾಗುತ್ತದೆ. ಚಿಕನ್ ಐಟಂಗಳು, ಪಾಸ್ತಾಗಳು, ಇಂಡೋನೇಷಿಯನ್ ಖಾದ್ಯಗಳು, ಶ್ರೀಲಂಕಾದ ಸ್ಪೆಷಲ್​ಗಳು ಹೀಗೆ ಅನೇಕ ವೆರೈಟಿಗಳಿವೆ. ಇದ್ರ ಜೊತೆಗೆ ಐಸ್ಕ್ರೀಂ, ಡೆಸರ್ಟ್ಸ್ ಎಲ್ಲವೂ ಲಭ್ಯವಿದೆ. ಸದ್ಯಕ್ಕೆ 7 ಮಹಿಳೆಯರು ಈ ಫುಡ್​ಟ್ರಕ್​ನ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ.

ವೆಡ್​ನೆಸ್​ ಡೇ ವುಮನ್ಸ್ ಡೇ..!

ಫುಡ್​ಟ್ರಕ್​ನಲ್ಲಿ ಆಫರ್​ಗಳಿಗೇನು ಕೊರತೆ ಇಲ್ಲ. ಇದು ಬ್ಯುಸಿನೆಸ್ ಡೆವಲಪ್​ಮೆಂಟ್​ನ ಒಂದು ಐಡಿಯಾವೂ ಹೌದು. 7th ಸಿನ್ ಫುಡ್​ಟ್ರಕ್​ನಲ್ಲಿ ಮಹಿಳೆಯರಿಗೆ ವಿಶೇಷ ಆಫರ್ ಇದೆ. ಪ್ರತೀ ಬುಧವಾರವನ್ನು 7th ಸಿನ್ ಫುಡ್​ಟ್ರಕ್​ನಲ್ಲಿ ವುಮನ್ಸ್ ಡೇ ಅಂತ ಕರೆಯಲಾಗಿದೆ. ಅಂದು ಮಹಿಳಾ ಗ್ರಾಹಕರಿಗೆ ವಿಶೇಷ ಮೆನು ಜೊತೆಗೆ ರೇಟ್​ಗಳಲ್ಲೂ ಕನ್ಸೆಷನ್ ಇರುತ್ತದೆ.

6 ದಿನ ವ್ಯಾಪಾರ 1 ದಿನ ಚಾರಿಟಿ

ಇವತ್ತು ಆಹಾರೋದ್ಯಮದಲ್ಲಿರುವ ಲಾಭವನ್ನೇ ಹೆಚ್ಚಿನವರು ಟಾರ್ಗೆಟ್ ಮಾಡ್ತಾರೆ. ಆದ್ರೆ 7th ಸಿನ್ ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿಯನ್ನು ಕೂಡ ಮರೆತಿಲ್ಲ. ಅಷ್ಟೇ ಅಲ್ಲ ಸಿಎಸ್ಆರ್ ಕೆಲಸಕ್ಕಾಗಿಯೇ ಒಂದು ದಿನವನ್ನು ಮೀಸಲಿಟ್ಟಿದೆ. ವಾರದ ಆರು ದಿನಗಳಲ್ಲಿ ವ್ಯಾಪಾರ ಮಾಡಿ, ಒಂದು ದಿನ ತಾವೇ ತಯಾರಿಸಿದ ಆಹಾರವನ್ನು ಬಡಬಗ್ಗರಿಗೆ ದಾನ ಮಾಡುತ್ತಾರೆ. ದೇವಸ್ಥಾನ, ಚರ್ಚ್, ಮಸೀದಿ ಅಥವಾ ಯಾವುದಾದರೂ ಒಂದು ಅನಾಥಾಶ್ರಮ, ಎನ್​ಜಿಒಗಳಿಗೆ ತೆರಳಿ ಉಚಿತವಾಗಿ ಆಹಾರ ನೀಡುತ್ತಾರೆ.

“ಬೆಂಗಳೂರಿನ ಜನ ಈಗಾಗಲೇ 7th ಸಿನ್ ಸೇವೆಯನ್ನು ಇಷ್ಟಪಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ನಾವು ಇನ್ನಷ್ಟು ಗ್ರಾಹಕರ ಮನ ಗೆಲ್ಲುವ ವಿಶ್ವಾಸವಿದೆ. ಅಷ್ಟೇ ಅಲ್ಲ ನಮ್ಮ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ಯೋಜನೆಯೂ ಇದೆ. ಸದ್ಯಕ್ಕೆ ಬೆಂಗಳೂರು ನಮ್ಮ ಟಾರ್ಗೆಟ್. ಆದ್ರೆ ಭವಿಷ್ಯದ ಬಗ್ಗೆ ಕನಸು ಮಾತ್ರ ಇದ್ದೇ ಇದೆ.”
- ಅರ್ಚನಾ ಸಿಂಗ್, 7th ಸಿನ್ ಸಂಸ್ಥಾಪಕಿ

ಕಾರ್ಪೋರೇಟ್ ಕೇಟರಿಂಗ್​ನಿಂದ ಉದ್ಯಮ ಆರಂಭಿಸಿದ ಅರ್ಚನಾ ಸಿಂಗ್ ಇವತ್ತು ಏಷ್ಯಾದಲ್ಲೇ ವಿಶಿಷ್ಟ ದಾಖಲೆ ಬರೆದಿದ್ದಾರೆ. ಬೆಂಗಳೂರಿನಲ್ಲಿ ಯಶಸ್ಸು ಕಂಡಿರುವ 7th ಸಿನ್ ಸದ್ಯದಲ್ಲೇ ಚೆನ್ನೈ ಮತ್ತು ಹೈದ್ರಾಬಾದ್​ಗಳಲ್ಲಿ ಕಾರ್ಯಾರಂಭಿಸುವ ನಿರೀಕ್ಷೆ ಇದೆ. ಅರ್ಚನಾ ವಿಶಿಷ್ಟ ಐಡಿಯಾಗಳು ಸಾಮಾಜಿಕ ಜಾಲಾತಾಣಗಳಲ್ಲೂ ಹಾಟ್ ಟಾಪಿಕ್ ಆಗಿದೆ ಅನ್ನೋದನ್ನ ಮರೆಯುವ ಹಾಗಿಲ್ಲ.

ಇದನ್ನು ಓದಿ

1. ಸಿನೆಮಾ ನೋಡೋದಿಕ್ಕೆ ಟೈಮ್​ ಇಲ್ಲ- ಕಿರು ಚಿತ್ರಗಳ ಬಗ್ಗೆ ಬೇಜಾರಿಲ್ಲ..!

2. ಪೂಜೆ ಮಾಡೋದು ಮಾತ್ರ ನಿಮ್ಮ ಕೆಲಸ- ವಸ್ತು ತಂದುಕೊಡುವುದು ನಮ್ಮ ಕೆಲಸ..!

3. ಬೆಂಗಳೂರನ್ನು ಕೈ ಬಿಟ್ಟು ಉದ್ಯಮ ಆರಂಭಿಸಿ- ಸ್ಟಾರ್ಟ್​ಅಪ್​ ಲೋಕದಲ್ಲಿ ಯಶಸ್ಸು ಪಡೆಯಿರಿ

Related Stories