10 ಲಕ್ಷದಿಂದ ಕೋಟಿ ಸಂಪಾದಿಸಿದ 20ರ ಯುವತಿ- ಕಾಲೇಜು ವಿದ್ಯಾರ್ಥಿನಿಯ ಯಶೋಗಾಥೆ

ಟೀಮ್​​ ವೈ.ಎಸ್​​.ಕನ್ನಡ

10 ಲಕ್ಷದಿಂದ ಕೋಟಿ ಸಂಪಾದಿಸಿದ 20ರ ಯುವತಿ- ಕಾಲೇಜು ವಿದ್ಯಾರ್ಥಿನಿಯ ಯಶೋಗಾಥೆ

Thursday November 26, 2015,

3 min Read

ಬ್ಯುಸಿನೆಸ್‍ಗೆ ಕೈಹಾಕಿದ್ದೀವಿ ಅಂದ್ರೆ ಅದು ಯಶಸ್ವಿಯಾಗಲು ವರ್ಷಗಟ್ಟಲೆ ಸಮಯ ಬೇಕು. ವಿದ್ಯಾಭ್ಯಾಸ ಮುಗಿಸಿ ಒಂದೆರಡು ವರ್ಷ ಕೆಲಸದ ಅನುಭವ ಆದ್ಮೇಲೆ ಉದ್ಯಮ ರಂಗಕ್ಕಿಳಿಯುವವರ ಸಂಖ್ಯೆಯೇ ಹೆಚ್ಚು. ಆದ್ರೆ 10 ವರ್ಷ ಕಷ್ಟಪಟ್ರೂ ತಲುಪಲಾಗದ ಗುರಿಯನ್ನು ಕಾಲೇಜು ವಿದ್ಯಾರ್ಥಿನಿಯೊಬ್ಳು ಅಲ್ಪ ಸಮಯದಲ್ಲೇ ಸಾಧಿಸಿ ತೋರಿಸಿದ್ದಾಳೆ. ಆಗಿನ್ನೂ ಆಕೆಗೆ 20 ವರ್ಷ. ಆಗ್ಲೇ ಸೌಂದರ್ಯವರ್ಧಕಗಳ ಉದ್ಯಮಕ್ಕೆ ಎಂಟ್ರಿ ಕೊಟ್ಟಿದ್ದ ಆಕೆ `ಕಲ್ಲೋಸ್' ಅನ್ನು ಆರಂಭಿಸಿದ್ದಳು. ಈಗ ಕಲ್ಲೋಸ್ 6 ರಾಜ್ಯಗಳಲ್ಲಿ 100ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ.

ಅದ್ಭುತ ಉದ್ಯಮಿ ಪ್ರಿಯಾಂಕಾ ಅಗರ್ವಾಲ್...

ಪ್ರಿಯಾಂಕಾ ಅಗರ್ವಾಲ್ ವೈಯಕ್ತಿಕ ಕಾಳಜಿ ವಿಭಾಗವನ್ನೇ ಉದ್ಯಮಕ್ಕೆ ಪ್ರೇರಣೆಯಾಗಿ ಆಯ್ದುಕೊಂಡಿದ್ದು ನಿಜಕ್ಕೂ ಆಕಸ್ಮಿಕ. ಎಲ್ಲಾ ಸವಾಲುಗಳನ್ನು ಏಕಾಂಗಿಯಾಗಿ ಎದುರಿಸಿ ತಾವೊಬ್ಬ ಯಶಸ್ವಿ ಉದ್ಯಮಿಯಾಗುತ್ತೇನೆಂಬ ಕಲ್ಪನೆಯೂ ಅವರಿಗಿರಲಿಲ್ಲ. ಇತಿಹಾಸ, ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ ಪ್ರಿಯಾಂಕಾ ಅವರ ನೆಚ್ಚಿನ ವಿಷಯಗಳು. ಕ್ರೀಡೆ ಹಾಗೂ ನೃತ್ಯದ ಬಗೆಗೂ ಅವರಿಗೆ ಅಪಾರ ಒಲವಿತ್ತು. ಅವಕಾಶ ಅನ್ನೋದು ಬಂದು ಬಾಗಿಲು ತಟ್ಟಿದಾಗ ಅದಕ್ಕುತ್ತರಿಸುವವರೇ ನಿಜವಾದ ನಾಯಕರು ಅನ್ನೋ ಮಾತಿದೆ. ಕಾಲೇಜು ದಿನಗಳಲ್ಲಿ ಪ್ರಿಯಾಂಕಾ ಬಿಡುವಿನ ವೇಳೆಯಲ್ಲೆಲ್ಲಾ ತಮ್ಮ ತಂದೆಯ ಕಚೇರಿಗೆ ಹೋಗ್ತಾ ಇದ್ರು. ಆಗ್ಲೇ ಸ್ವಂತ ಉದ್ಯಮದ ಆಲೋಚನೆ ಅವರಿಗೆ ಬಂದಿತ್ತು. ಆದ್ರೆ ವೈಯಕ್ತಿಕ ಕಾಳಜಿ ವಿಭಾಗದಲ್ಲೇನೂ ಆಸಕ್ತಿ ಇರಲಿಲ್ಲ. ಬದಲಾಗಿ ಸಲೂನ್ ತೆರೆಯುವ ಯೋಜನೆಯನ್ನು ಪ್ರಿಯಾಂಕಾ ಹಾಕಿಕೊಂಡಿದ್ರು. ಇದಕ್ಕಾಗಿ ಕೋರ್ಸ್ ಒಂದನ್ನು ಕೂಡ ಮಾಡಿದ್ರು. ಆದ್ರೆ ಅದರಲ್ಯಾಕೋ ಮನಸ್ಸಿಗೆ ತೃಪ್ತಿ ಸಿಗಲಿಲ್ಲ ಎನ್ನುತ್ತಾರೆ ಪ್ರಿಯಾಂಕಾ. ಹಾಗಂತ ಅವರೇನು ಕೈಕಟ್ಟಿ ಕೂರಲಿಲ್ಲ. ಬೇರೆ ಯಾವ ಉದ್ಯಮ ಆರಂಭಿಸಬಹುದು ಅನ್ನೋ ಬಗ್ಗೆ ಸಂಶೋಧನೆ ಮಾಡಿದ್ರು. ಕೆಲ ತಿಂಗಳುಗಳ ನಂತರ ಈ ವಿಚಾರವನ್ನು ತಂದೆಯ ಜೊತೆಗೆ ಚರ್ಚಿಸಿದಾಗ ಅವರು, ವೈಯಕ್ತಿಕ ಕಾಳಜಿ ವಿಭಾಗ ಆಯ್ದುಕೊಳ್ಳುವಂತೆ ಸಲಹೆ ಕೊಟ್ಟಿದ್ರು. ಆದ್ರೆ ಇದನ್ನು ಕೇಳಿ ಮೊದಲು ನಕ್ಕುಬಿಟ್ಟಿದ್ದರು ಪ್ರಿಯಾಂಕಾ. ಸೌಂದರ್ಯವರ್ಧಕಗಳ ಉದ್ಯಮಕ್ಕೆ ಕೈಹಾಕಿದಾಗ ಆ ಪ್ರಕ್ರಿಯೆ ಹಾಗೂ ಮಾರುಕಟ್ಟೆಯ ಬಗ್ಗೆ ಪ್ರಿಯಾಂಕಾಗೆ ಏನೂ ತಿಳಿದಿರಲಿಲ್ಲ. ಅದಕ್ಕಾಗಿ ಬಿಬಿಎ ಅಥವಾ ಎಂಬಿಎ ಪದವಿಯನ್ನೇನು ಪಡೆಯಲಿಲ್ಲ. ತಂದೆಯ ಕಚೇರಿಯಲ್ಲಿ ಮಗಳು ಟೈಮ್‍ಪಾಸ್ ಮಾಡ್ತಿದ್ದಾಳೆ ಅಂದುಕೊಂಡವರೇ ಹೆಚ್ಚು.

image


ಯಾವುದೂ ನಿಮ್ಮ ಪರ ಇಲ್ಲದಾಗ...

ಒಂದುಕಡೆ ಕಾಲೇಜು ವಿದ್ಯಾಭ್ಯಾಸ, ಇನ್ನೊಂದುಕಡೆ ಉದ್ಯಮ. ಇವೆರಡರ ಮಧ್ಯೆ ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡೋದು ಅನ್ನೋ ಗೊಂದಲವೂ ಪ್ರಿಯಾಂಕಾ ಅವರಿಗಿತ್ತು. ಓದು ಮುಂದುವರಿಸುವುದನ್ನು ಬಿಟ್ಟು, ಕಂಪನಿ ಆರಂಭಿಸಲು ಮುಂದಾದ ಅವರ ನಿರ್ಧಾರವನ್ನು ಹತ್ತಾರು ಜನ ಖಂಡಿಸಿದ್ರು. ಹಾಗಾಗಿ ಕಲ್ಲೋಸ್ ಲಾಂಚ್ ಅನ್ನೇ ಪ್ರಿಯಾಂಕಾ ಒಂದು ವರ್ಷ ಮುಂದೂಡಿದ್ರು. ಒಂದು ವ್ಯವಸ್ಥಿತ ತಂಡವನ್ನು ಕಟ್ಟಿ, ಉತ್ಪಾದನೆ ಆರಂಬಿಸಿ ಎಲ್ಲವನ್ನೂ ಒಂದು ಹಂತಕ್ಕೆ ತರಲು ವರ್ಷವೇ ಬೇಕಾಯ್ತು. ಅಷ್ಟರಲ್ಲಿ ಸುತ್ತಮುತ್ತಲ ಜನರು ಪ್ರಿಯಾಂಕಾ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನ ಮಾಡಿದ್ದು ಸುಳ್ಳಲ್ಲ. ಲಿಂಗ ತಾರತಮ್ಯದಿಂದಾಗಿ ಒಬ್ಬ ಮಹಿಳೆ ಜಗತ್ತಿನೆದುರು ತನ್ನನ್ನು ತಾನು ಸಾಬೀತುಪಡಿಸುವುದು ನಿಜಕ್ಕೂ ಸವಾಲಿನ ಕೆಲಸ ಎನ್ನುತ್ತಾರೆ ಪ್ರಿಯಾಂಕಾ. ಯವತಿಯರು ಮದುವೆಗೂ ಮುನ್ನ ಟೈಮ್ ಪಾಸ್‍ಗಾಗಿ ಇದನ್ನೆಲ್ಲ ಮಾಡ್ತಾರೆ ಅನ್ನೋ ಭಾವನೆ ಹೆಚ್ಚಿನ ಜನರಲ್ಲಿದೆ. ನಾವು ಕೆಲಸದಲ್ಲಿ ಬೆಸ್ಟ್ ಅನ್ನೋದು ಖಚಿತವಾಗುವವರೆಗೆ ಅಂದುಕೊಂಡಿದ್ದನ್ನು ಸಾಧಿಸಲು ಅಸಾಧ್ಯ ಅನ್ನೋದು ಪ್ರಿಯಾಂಕಾರ ಅಭಿಪ್ರಾಯ. ಎಲ್ಲರ ಟೀಕೆ ಟಿಪ್ಪಣಿಗಳನ್ನು ಆಲಿಸಿ, ಅದಕ್ಕುತ್ತರಿಸದೇ ನಮ್ಮ ಪಾಡಿಗೆ ನಾವು ಕೆಲಸ ಮಾಡಿಕೊಂಡಿರೋದು ಉತ್ತಮ ಎನ್ನುತ್ತಾರೆ ಅವರು. ಬೇರೆಯವರೆದುರು ನಿಮ್ಮ ಸಾಮಥ್ರ್ಯವನ್ನು ಸಾಬೀತುಪಡಿಸುವುದಕ್ಕಿಂತ ನಮ್ಮ ಆತ್ಮತೃಪ್ತಿಗೆ ಏನು ಬೇಕೋ ಅದನ್ನು ಮಾಡಬೇಕು. ಆಗ ತನ್ನಿಂತಾನೇ ಬೆಂಬಲ ಹಾಗೂ ಪ್ರೋತ್ಸಾಹ ನಿಮ್ಮನ್ನು ಅರಸಿ ಬರುತ್ತದೆ ಅನ್ನೋದು ಪ್ರಿಯಾಂಕಾ ಅವರ ಅನುಭವದ ಮಾತು.

ಚಂಡಮಾರುತದ ಕೊನೆಯಲ್ಲಿ ಮಳೆಬಿಲ್ಲು...

ಆರಂಭದಲ್ಲಿ ಬೆಟ್ಟದಂತಹ ಸವಾಲುಗಳು ಎದುರಾಗಿದ್ದು ನಿಜ. ಆದ್ರೆ ಪ್ರಯತ್ನ ಹಾಗೂ ತಪ್ಪುಗಳನ್ನು ಮಾಡುತ್ತಲೇ ಪ್ರಿಯಾಂಕಾ ಅಗರ್ವಾಲ್ ಅವನ್ನೆಲ್ಲ ಮೆಟ್ಟಿ ನಿಂತ್ರು. ತಮ್ಮ ತಂದೆಯ ಆಹಾರ ಉದ್ಯಮದಲ್ಲಿ ಕೆಲಸ ಮಾಡ್ತಿದ್ದ ತಂಡದವರನ್ನೂ ಬಳಸಿಕೊಂಡು ಕಾರ್ಯಾರಂಭ ಮಾಡಿದ್ರು. ಮೊದಮೊದಲು ಎಲ್ಲವೂ ನಿಧಾನವಾಗಿ ನಡೆದಿತ್ತು. ದಾಸ್ತಾನು ಮಾಡಿರುವ ಸೌಂದರ್ಯವರ್ಧಕಗಳನ್ನು ಮಾರಾಟ ಮಾಡುವ ಹೊಣೆಗಾರಿಕೆ ಪ್ರಿಯಾಂಕಾ ಅವರ ಮೇಲಿತ್ತು. ಇಲ್ಲವಾದಲ್ಲಿ ತಮ್ಮನ್ನು ನಂಬಿ ತಂದೆ ಹೂಡಿಕೆ ಮಾಡಿದ 10 ಲಕ್ಷ ರೂಪಾಯಿ ನೀರಿನಲ್ಲಿ ಹೋಮ ಮಾಡಿದಂತಾಗಬಹುದು ಅನ್ನೋದು ಅವರ ಆತಂಕ. ಹಾಗಾಗಿ ನಾಲ್ವರು ಸಿಬ್ಬಂದಿಯನ್ನು ನೇಮಿಸಿಕೊಂಡು ಸ್ವಂತ ತಂಡವನ್ನು ಕಟ್ಟಿದ್ರು. ಟೈರ್2 ಮತ್ತು ಟೈರ್ 3 ನಗರಗಳತ್ತ ಹೆಚ್ಚು ಗಮನಹರಿಸಿದ್ರು. ಎಲ್ಲಾ ಕಡೆ ಸ್ವಂತ ಮಳಿಗೆಗಳನ್ನು ತೆರೆಯಲಾಯ್ತು.

image


ಮಳೆಬಿಲ್ಲಿನ ತುದಿಯಲ್ಲಿ ಬಂಗಾರ...

ತಂದೆಯ ಬೆಂಬಲದಿಂದಾಗಿ ಉತ್ಪಾದನೆಯ ಮೊದಲ ಹಂತದಲ್ಲಿ ಪ್ರಿಯಾಂಕಾಗೆ ಹೂಡಿಕೆ ಮಾಡಿದ ಹಣವೆಲ್ಲ ಮರಳಿ ಸಿಕ್ಕಿತ್ತು. ಕೆಲ ತಿಂಗಳುಗಳಲ್ಲೇ ಸಂಸ್ಥೆ 1 ಕೋಟಿ ಮೌಲ್ಯದ ವಹಿವಾಟು ನಡೆಸಿದ್ದು ವಿಶೇಷ. ಕೆಲವರ ಪಾಲಿಗೆ ಇದೇನೂ ದೊಡ್ಡ ವಿಚಾರ ಎನಿಸದೇ ಇರಬಹುದು, ಆದ್ರೆ ನಮ್ಮ ಪಾಲಿಗೆ ಆಹ್ಲಾದಕರ ಸಂಗತಿಯಾಗಿತ್ತು ಅಂತಾ ಪ್ರಿಯಾಂಕಾ ಖುಷಿಯಿಂದ ಹೇಳಿಕೊಳ್ತಾರೆ. ಸ್ವಂತ ಉತ್ಪನ್ನಗಳ ಜೊತೆಗೆ ಡಾಬರ್, ಪಿ&ಜಿ, ಎಚ್‍ಯುಎಲ್‍ನ ಉತ್ಪನ್ನಗಳು ಕೂಡ ಇಲ್ಲಿ ಲಭ್ಯವಿವೆ. ಪೂರೈಕೆ ಸರಣಿ, ವಿತರಣೆ ಹಾಗೂ ಉತ್ಪನ್ನಗಳನ್ನು ಸರಿಯಾಗಿ ನಿರ್ವಹಿಸಿದ್ರೆ ಉದ್ಯಮದಲ್ಲಿ ಯಶಸ್ಸು ಸುಲಭ ಅನ್ನೋ ಪಾಠವನ್ನು ಪ್ರಿಯಾಂಕಾ ಸ್ವ ಅನುಭವದಿಂದ ಕಲಿತಿದ್ದಾರೆ. ಇದೀಗ ಪ್ರಿಯಾಂಕಾ ಎಂಬಿಎ ಮಾಡ್ತಿದ್ದಾರೆ. ಜೊತೆಗೂ ಉದ್ಯಮದಲ್ಲೂ ಎಷ್ಟು ಪಳಗಿದ್ದಾರೆಂದ್ರೆ ಅವರಿಗೆ ತಜ್ಞರ ಸಲಹೆಯ ಅಗತ್ಯವಿಲ್ಲ. ಚಿಕ್ಕ ವಯಸ್ಸಿನಲ್ಲೇ ನೀವೊಂದು ತಂಡದ ನಾಯಕಿಯಾಗಿ, ಸಂಸ್ಥೆಯ ಮುಖ್ಯಸ್ಥೆಯಾಗಿದ್ದಾಗ ಎಲ್ಲರ ಗೌರವ ಸಂಪಾದಿಸುವುದು ಅತಿ ಮುಖ್ಯ ಎನ್ನುತ್ತಾರೆ ಅವರು. ಸಹನೆಯಿಂದ, ಸಿಬ್ಬಂದಿಯ ಕರ್ತವ್ಯ ನಿಷ್ಠೆಯನ್ನು ಶ್ಲಾಘಿಸುತ್ತ, ಅಗತ್ಯ ಬಿದ್ದಾಗಲೆಲ್ಲ ಪರಸ್ಪರ ಮಾತುಕತೆ ನಡೆಸುವ ಮೂಲಕ ಪ್ರಿಯಾಂಕಾ ಅಗರ್ವಾಲ್ ತಮ್ಮ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹೆಚ್ಚಾಗಿ ಉದ್ಯಮಗಳತ್ತ ಮುಖಮಾಡ್ತಿರೋದು ತಮಗೂ ಪ್ರೇರಣೆಯಾಗಿದೆ ಎನ್ನುತ್ತಾರೆ ಪ್ರಿಯಾಂಕಾ. ಸ್ವಾವಲಂಬಿಗಳಾಗುವತ್ತ ಮಹಿಳೆಯರು ದಿಟ್ಟ ಹೆಜ್ಜೆ ಇಟ್ಟಿರೋದು ನಿಜಕ್ಕೂ ಸ್ವಾಗತಾರ್ಹ.

ಲೇಖಕರು: ಬಿಂಜಾಲ್​​ ಷಾ

ಅನುವಾದಕರು: ಭಾರತಿ ಭಟ್​​​​​​