ನೀರಲ್ಲಿ ಬಿದ್ದ ಮೊಬೈಲ್ ರಿಪೇರಿ ಬಲು ಈಸಿ..

ಟೀಂ ವೈ.ಎಸ್.ಕನ್ನಡ 

ನೀರಲ್ಲಿ ಬಿದ್ದ ಮೊಬೈಲ್ ರಿಪೇರಿ ಬಲು ಈಸಿ..

Saturday October 15, 2016,

2 min Read

ಬ್ರಿಟನ್​ನ ಒಲಿವರ್ ಮರ್ಫಿಗೆ ಈಗ 22 ವರ್ಷ. ಮೊದಲಿನಿಂದ್ಲೂ ಮೊಬೈಲ್ ರಿಪೇರಿ ಮಾಡಿ ಒಲಿವರ್ ಹಣ ಸಂಪಾದಿಸುತ್ತಿದ್ರು. ಒಡೆದ ಫೋನ್​ಗಳನ್ನೆಲ್ಲ ಖರೀದಿಸಿ ಅದನ್ನು ರಿಪೇರಿ ಮಾಡಿ ಮಾರಾಟ ಮಾಡುತ್ತಿದ್ದರು. ಈ ಕೆಲಸದಲ್ಲಿರುವ ಅವಕಾಶ ಮತ್ತು ಮೌಲ್ಯವನ್ನು ಅರ್ಥಮಾಡಿಕೊಂಡ ಒಲಿವರ್ ಇದರಲ್ಲೇ ಹೊಸ ಹೊಸ ಸಂಶೋಧನೆ ಮಾಡಿದ್ರು. ಇದೀಗ ನೀರು ಅಥವಾ ಇತರ ಯಾವುದೇ ದ್ರವದಲ್ಲಿ ಬಿದ್ದ ಮೊಬೈಲ್ಗಳನ್ನು ದುರಸ್ಥಿ ಮಾಡಬಲ್ಲ ಚತುರ ವ್ಯವಸ್ಥೆಯೊಂದನ್ನು ಕಂಡುಹಿಡಿದಿದ್ದಾರೆ.

image


''13 ವರ್ಷದವನಿದ್ದಾಗ್ಲೇ ನಾನು ಫೋನ್ಗಳನ್ನು ರಿಪೇರಿ ಮಾಡುತ್ತಿದ್ದೆ. 'eBAY'ನಿಂದ ಇಂತಹ ಕೆಟ್ಟುಹೋದ ಫೋನ್ಗಳನ್ನು ಖರೀದಿಸಿ ಅವನ್ನೆಲ್ಲ ದುರಸ್ತಿ ಮಾಡಿ ಮಾರುತ್ತಿದ್ದೆ. 4 ವರ್ಷಗಳ ಕಾಲ ಇದೇ ಕೆಲಸ ಮಾಡಿದ್ದೇನೆ'' ಎನ್ನುತ್ತಾರೆ ಒಲಿವರ್. ಮೊಬೈಲ್ ಯಾವುದಾದ್ರೂ ದ್ರವ ಪದಾರ್ಥದಲ್ಲಿ ಬಿದ್ರೆ ಕೆಟ್ಟು ಹೋಗುತ್ತದೆ. ಆದ್ರೆ ಮೊಬೈಲ್ ಹಾಳಾಗಲು ಕಾರಣ ದ್ರವವಲ್ಲ, ಅದರಲ್ಲಿರುವ ಖನಿಜಾಂಶಗಳು. ಅವು ಫೋನ್​ನ ಬಿಡಿಭಾಗಗಳಲ್ಲಿ ಕುಳಿತುಬಿಡುತ್ತವೆ ಎಂಬುದನ್ನು ಅರಿತ ಒಲಿವರ್ 'ರಿವೈವಿಯಾ ಫೋನ್' ಎಂಬ ಉತ್ಪನ್ನವೊಂದನ್ನು ಬಿಡುಗಡೆ ಮಾಡಿದ್ರು. ಇದು ಮೊಬೈಲ್​ನ ಬಿಡಿಭಾಗಗಳಲ್ಲಿ ಕುಳಿತಿರುವ ಖನಿಜಾಂಶಗಳನ್ನು ಹೊರಹಾಕುತ್ತದೆ.

ಕಷ್ಟಪಟ್ಟು ಕೂಡಿಟ್ಟಿದ್ದ 400 ಡಾಲರ್ ಹಣವನ್ನೇ ತೊಡಗಿಸಿ ಒಲಿವರ್ ಈ ಹೊಸ ಉದ್ಯಮವನ್ನು ಶುರು ಮಾಡಿದ್ರು. ಈಗ ಅಪಾರ ಯಶಸ್ಸು ಗಳಿಸಿದ್ದಾರೆ. `ರಿವೈವಿಯಾ ಫೋನ್' ಉತ್ಪನ್ನವನ್ನು ಬಿಡುಗಡೆ ಮಾಡಿ ಒಂದು ವರ್ಷದೊಳಗೆ ಒಲಿವರ್ ಅದನ್ನು ವಿದೇಶಗಳಲ್ಲೂ ಪರಿಚಯಿಸಿದ್ದಾರೆ. ಸ್ಪೇನ್, ಉತ್ತರ ಅಮೆರಿಕ, ಸ್ವಿಡ್ಜರ್ಲೆಂಡ್, ಸ್ಕಾಂಡಿನೇವಿಯಾ ಮತ್ತು ಜಪಾನ್​ನಲ್ಲಿ ಒಲಿವರ್ ಸೃಷ್ಟಿಸಿರುವ ಬ್ರಾಂಡ್​ಗೆ ಬಹುಬೇಡಿಕೆ ಇದೆ. ಅಷ್ಟೇ ಅಲ್ಲ ಸ್ಪ್ಲಾಶ್ ಎಂಬ ಹೊಸ ಉತ್ಪನ್ನವೊಂದನ್ನು ಕೂಡ ಒಲಿವರ್ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಇದು ಸ್ಮಾರ್ಟ್​ಫೋನ್​ಗಳಿಗೆ ನೀರು ನಿರೋಧಕ ಅಗೋಚರ ಲೇಪನ. ಸ್ಪ್ಲಾಶ್ ಇದ್ರೆ ನೀರಿನಲ್ಲಿ ಬಿದ್ರೂ ನಿಮ್ಮ ಸ್ಮಾರ್ಟ್​ಫೋನ್​ ಕೆಟ್ಟು ಹೋಗುವುದಿಲ್ಲ.

`ರಿವೈವಿಯಾ ಫೋನ್'ಗೆ ಉತ್ತಮ ಭವಿಷ್ಯವಿದೆ ಅನ್ನೋದಂತೂ ಸುಳ್ಳಲ್ಲ. ``ರಿವೈವಿಯಾ ಫೋನ್ ಎಲ್ಲರ ಮನೆಮಾತಾಗಬೇಕು ಅನ್ನೋದೇ ನನ್ನ ಆಸೆ. ಫೋನ್ ಕೆಟ್ಟುಹೋದ್ರೆ, ಒಡೆದು ಹೋದ್ರೆ ಎಲ್ಲರೂ ಮೊದಲು ರಿವೈವಿಯಾ ಫೋನ್ ವೆಬ್​ಸೈಟ್​ಗೆ ವಿಸಿಟ್ ಮಾಡ್ತಾರೆ. ಜಾಗತಿಕ ಮಟ್ಟದಲ್ಲಿ ಬ್ರಾಂಡ್ ನೇಮ್ ಕ್ರಿಯೇಟ್ ಮಾಡಬೇಕು ಎಂಬ ಹೆಬ್ಬಯಕೆ ನನ್ನದು. ಎಷ್ಟು ಸಾಧ್ಯವೋ ಅಷ್ಟು ದೇಶಗಳು ಈ ಸೌಲಭ್ಯದ ಪ್ರಯೋಜನ ಪಡೆಯುವಂತಾಗಬೇಕು'' ಎನ್ನುತ್ತಾರೆ ಒಲಿವರ್. ಇಷ್ಟು ಚಿಕ್ಕ ವಯಸ್ಸಿನಲ್ಲೇ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಹೊಸ ಪರಿಹಾರವನ್ನು ಸಂಶೋಧಿಸಿದ ಒಲಿವರ್ ನಿಜಕ್ಕೂ ಗ್ರೇಟ್. 

ಇದನ್ನೂ ಓದಿ...

ಅಮ್ಮನದ್ದೇ ಕೈರುಚಿ- ಅನಾರೋಗ್ಯದ ಬಗ್ಗೆಯೂ ಬೇಡ ಭೀತಿ

ಭಾರತದ ರಸ್ತೆಗಳಿಗೆ ಹೊಸ ಪ್ಲಾನ್- ರಿಪೇರಿ ಇಲ್ಲದ ರೋಡ್​ಗಳಿಗೆ ಬ್ಲೂ ಪ್ರಿಂಟ್​