ಕುಬೇರನಿಂದ ಕುರುಬನಾದ...ಕುರಿ ಸಂತತಿ ರಕ್ಷಣೆಗೆ ಬದುಕು ಮೀಸಲು

ಟೀಮ್​​ ವೈ.ಎಸ್​​.

0

ವೆಬ್‍ಸೈಟ್ ಹ್ಯಾಕರ್ ಆಗಿದ್ದವರೊಬ್ಬರು ಕುರುಬನಾದ ಕಥೆ ಇದು. ಭಾರತದ ದುಬಾರಿ ಉತ್ಪನ್ನವೊಂದನ್ನು ಉಳಿಸಿ ಬೆಳೆಸಲು ಸರ್ವಸ್ವವನ್ನೂ ತ್ಯಾಗ ಮಾಡಿ ಕುರಿ ಸಾಕಣೆಗಿಳಿದ ಬಾಬರ್ ಅಫ್ಜಲ್ ಅವರ ಯಶೋಗಾಥೆ.

ಕೂದಲೆಳೆ ಅಂತರದಲ್ಲಿ ಪಾರು...

ಜಮ್ಮುಕಾಶ್ಮೀರದ ಲೇಹ್‍ನಲ್ಲಿ ನಡೆದ ಭಯಾನಕ ಘಟನೆ ಇದು. ಅಲ್ಲಿ ಪಶ್ಮಿನಾ ಜಾತಿಯ ಮೇಕೆಗಳ ಹಿಂಡಿನ ಮೇಲೆ ಹಿಮಕರಡಿಗಳು ದಾಳಿ ಮಾಡಿದ್ವು. ಆ ಜಾಗ ಬಾಬರ್ ಇದ್ದ ಸ್ಥಳದಿಂದ 60-70 ಕಿಲೋ ಮೀಟರ್ ದೂರದಲ್ಲಿತ್ತು. ಬಾಬರ್ ಆ ಜಾಗ ತಲುಪಲು ಇನ್ನೂ ಒಂದೂವರೆ ಮೈಲಿ ಇದೆ ಎನ್ನುವಷ್ಟರಲ್ಲಿ ಕತ್ತಲಾಗಿತ್ತು. ಚಿರತೆ ದಾಳಿ ತಪ್ಪಿಸಿಕೊಳ್ಳಲು ಜೇಬಿನಲ್ಲಿದ್ದ ಚಾಕು ಬಿಟ್ರೆ ಬಾಬರ್ ಬಳಿ ಇನ್ಯಾವುದೇ ಆಯುಧವಿರ್ಲಿಲ್ಲ. ಓಡಿ ಓಡಿ ಸುಸ್ತಾಗಿದ್ದ ಬಾಬರ್ ಅಲ್ಲೇ ಪ್ರಜ್ಞೆತಪ್ಪಿ ಬಿದ್ರು. ಆಗ ಅವರ ನೆರವಿಗೆ ಬಂದವರು ಅಲ್ಲೇ ಕುರಿಕಾಯುತ್ತಿದ್ದ ಕುರಿಗಾಹಿಗಳು. ಅವತ್ತಷ್ಟೇ ಅವರ ಮೇಕೆಗಳ ಹಿಂಡು ಹಿಮಕರಡಿ ದಾಳಿಗೆ ಬಲಿಯಾಗಿ ಹೋಗಿತ್ತು. ಕುರಿಕಾಯುವವರೇ ಬಾಬರ್ ಅವರನ್ನ ದೆಹಲಿ ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸಿದ್ರು.

ಮನುಕುಲಕ್ಕೆ ತಿಳಿದಿರುವ ಅತ್ಯುತ್ತಮ ಬಟ್ಟೆ...

ಬಾಬರ್ ಅಫ್ಜಲ್ ಕಾಶ್ಮೀರ್‍ಇಂಕ್ ಎಂಬ ಬಟ್ಟೆ ಉದ್ಯಮವೊಂದನ್ನು ಆರಂಭಿಸಿದ್ದಾರೆ. ಈ ಪಯಣ ಬಗೆಬಗೆಯ ದಾರದ ಎಳೆಗಳೊಂದಿಗೆ ಹೆಣೆದುಕೊಂಡಿದೆ ಎನ್ನುತ್ತಾರೆ ಅವರು. ಪಶ್ಮಿನಾ ಕುರಿಗಳ ಉಣ್ಣೆಯಿಂದ ಮಾಡಿದ ಬಟ್ಟೆಗಳು ವಿಶ್ವದಾದ್ಯಂತ ಜನಪ್ರಿಯತೆ ಪಡೆದಿವೆ. ಶತಶತಮಾನಗಳಿಂದಲೂ ದೇಶದ ಗೌರವ ಹೆಚ್ಚಿಸಿದ ಉಣ್ಣೆ ಇದು. ಆದ್ರೆ ಹಮಾವಾನ ವೈಪರೀತ್ಯ ಹಾಗೂ ಭಯೋತ್ಪಾದನೆಯಿಂದ ನಲುಗಿದ ಕಣಿವೆ ರಾಜ್ಯದಲ್ಲಿ ಪಶ್ಮಿನಾ ಕುರಿಗಳ ಸಂತತಿಯೇ ವಿನಾಶದ ಅಂಚಿನಲ್ಲಿದೆ. ಬಾಬರ್ ತಮ್ಮ ಕಾರ್ಪೊರೇಟ್ ವೃತ್ತಯನ್ನು ಬಿಟ್ಟು ಕುರಿಗಾಹಿಯಾಗಲು ಕಾರಣ ಅವುಗಳ ರಕ್ಷಣೆ. ಪಶ್ಮಿನಾ ಅನ್ನೋದು ಪರ್ಶಿಯನ್ ಶಬ್ಧ. ಪಶ್ಮ್ ಎಂದ್ರೆ ಉಣ್ಣೆ ಎಂದರ್ಥ. ನೈಜ ಪಶ್ಮಿನಾ ಉಣ್ಣೆ ಹಿಮಾಲಯದ ಚಂಗ್‍ತಂಗಿ ಪ್ರದೇಶದ ಕುರಿಗಳಿಂದ ಸಿಗುತ್ತದೆ. ದೇಶದ ನೈಜ ಹಾಗೂ ಅತ್ಯಂತ ಐಷಾರಾಮಿ ಉತ್ಪನ್ನ ಇದು.

ಕುರುಬನಾಗಲು ಸಿಲಿಕಾನ್ ವ್ಯಾಲಿ ಜೀವನಶೈಲಿಗೆ ಗುಡ್‍ಬೈ..

ಬಾಬರ್ ಒಬ್ಬ ಹ್ಯಾಕರ್ ಆಗಿದ್ದವರು. ತಿಂಗಳಿಗೆ 18-25 ಸಾವಿರ ಅಮೆರಿಕನ್ ಡಾಲರ್ ದುಡಿಮೆ ಇತ್ತು. ಖರ್ಚೇ ಇಲ್ಲದೆ ಜಗತ್ತು ಸುತ್ತುವ ಅವಕಾಶವಿತ್ತು. ಕಣಿವೆ ರಾಜ್ಯ ಕಾಶ್ಮೀರ ಅವರ ತವರು. ಭಾರತ, ಅಮೆರಿಕ, ಬ್ರಿಟನ್ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಬಾಬರ್ ಕೆಲಸ ಮಾಡಿದ್ದಾರೆ. ಕೈತುಂಬಾ ಸಂಬಳ ಇದ್ದಿದ್ರಿಂದ ಶ್ರೀಮಂತ ಬದುಕು ಅವರದ್ದಾಗಿತ್ತು. ಆದ್ರೆ ಅದೆಲ್ಲವನ್ನೂ ತ್ಯಜಿಸಿ ಪಶ್ಮಿನಾ ಕುರಿಗಳ ಸಂತತಿ ರಕ್ಷಣೆಗಾಗಿ ಬಾಬರ್ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. 2009ರಿಂದ ಅವರು ಕುರಿಗಳ ಸಾಕಣೆಯಲ್ಲಿ ತೊಡಗಿದ್ದಾರೆ. ಕಾಶ್ಮೀರಕ್ಕೆ ಭಯೋತ್ಪಾದನೆಗಿಂತಲೂ ದೊಡ್ಡ ಪ್ರಾಣಾಂತಿಕ ಬೆದರಿಕೆ ಹವಾಮಾನ ಬದಲಾವಣೆ ಅನ್ನೋದು ಅವರ ಅಭಿಪ್ರಾಯ.

ಹವಾಮಾನ ಬದಲಾವಣೆ ಭಯೋತ್ಪಾದನೆಗಿಂತ ಕೆಟ್ಟದ್ದು...

2009ರಲ್ಲಿ ಬರಗಾಲದಿಂದಾಗಿ ಚಂಗ್‍ತಂಗ್‍ನ ಸರೋವರ ಬತ್ತಿ ಹೋಗಿತ್ತು. 2010ರಲ್ಲಿ ಭಾರೀ ನೆರೆ ಆ ಪ್ರದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. 2012ರಲ್ಲಿ ಬರ ಮತ್ತು ಹಿಮದ ಮಳೆಯಿಂದಾಗಿ 25,000 ಪಶ್ಮಿನಾ ಕುರಿಗಳು ಮೃತಪಟ್ಟಿದ್ವು. 2014ರಲ್ಲಿ ಬಂದ ಭಾರೀ ಪ್ರವಾಹದಿಂದ ಕಾಶ್ಮೀರ ಸಂಪೂರ್ಣ ನಲುಗಿ ಹೋಗಿದೆ. ಪಶ್ಮಿನಾ ಕುರಿಗಳ ಸಾಕಣೆಯನ್ನೇ ಅವಲಂಬಿಸಿದ್ದ ಸಮುದಾಯ ತುತ್ತು ಅನ್ನಕ್ಕೂ ಪರದಾಡುವಂಥ ಸ್ಥಿತಿ ಬಂದಿದೆ. ರಾಜಕೀಯ ಅರಾಜಕತೆ, ಉಣ್ಣೆ ಯಂತ್ರಗಳು ಹಾಗೂ ನಕಲಿ ಉಣ್ಣೆ ತಯಾರಿಕೆದಾರರ ಪೈಪೋಟಿಯನ್ನು ಎದುರಿಸಲಾಗದೆ ಕುರಿಗಾಹಿಗಳು ಕಂಗಾಲಾಗಿದ್ದಾರೆ.

ಕಾಶ್ಮೀರ..ಕ್ಯಾಶ್‍ಮಿಯರ್ ಮತ್ತು ಪಶ್ಮಿನಾ...

14ನೇ ಶತಮಾನದ ಕವಿ ಸೈಯದ್ ಅಲಿ ಹಮದಾನಿ ಕಾಶ್ಮೀರಕ್ಕೆ ಹಿಮಾಲಯದ ಉಣ್ಣೆಯನ್ನು ಪರಿಚಯಿಸಿದ್ರು. ಆಗ ಕ್ಯಾಶ್‍ಮಿಯರ್ ಎಂಬ ಪದ ಜನ್ಮ ತಳೆದಿತ್ತು. ಕಾಶ್ಮೀರದಲ್ಲೇ ನೇಯ್ಗೆ ಉದ್ಯಮ ಆರಂಭಿಸಲು ಅವರು ನೆರವಾದ್ರು. ಈಜಿಪ್ಟ್​​ನಲ್ಲಿ 18ನೇ ಶತಮಾನದಲ್ಲಿ ನೆಪೋಲಿಯನ್ ಬೋನಾಪಾರ್ಟೆ ಪಶ್ಮಿನಾ ಕುರಿಗಳನ್ನು ಪ್ಯಾರಿಸ್‍ಗೆ ತಂದಿದ್ದ. ಕೆಲವೇ ವರ್ಷಗಳಲ್ಲಿ ಫ್ರಾನ್ಸ್​​​ನಲ್ಲೂ ಇವು ಜನಪ್ರಿಯವಾದ್ವು. ನೆಪೋಲಿಯನ್‍ನ ಪತ್ನಿ ಎಂಪ್ರೆಸ್ ಜೋಸೆಫಿನ್ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ಪಶ್ಮಿನಾ ಮಾದರಿಯ ಶಾಲ್ ಧರಿಸಲಾರಂಭಿಸಿದ್ಲು. ಆಗಿನಿಂದ ರಾಜಕೀಯ ಹಾಗೂ ಧಾರ್ಮಿಕ ಆಚರಣೆಗಳಲ್ಲಿ ಈ ಶಾಲ್‍ಗಳು ಮಹತ್ವ ಪಡೆದಿದ್ವು. ಇದೊಂದು ಐಷಾರಾಮಿ ಫ್ಯಾಷನ್ ಟ್ರೆಂಡ್ ಆಗಿಯೂ ಬದಲಾಯ್ತು. ಆದ್ರೆ ಶಾಲ್‍ಗಳ ತಯಾರಿಕೆಗೆ ಅಧಿಕ ವೆಚ್ಚವಾಗ್ತಾ ಇತ್ತು, ಸಮಯ ಕೂಡ ಬೇಕಾಗುತ್ತಿತ್ತು.

ಬಾಬರ್ ಕುರಿ ಸಾಕಣೆಗೆ ಮುಂದಾದಾಗ ಲಡಾಕ್, ಬಸೋಹ್ಲಿ ಮತ್ತು ಕಾಶ್ಮೀರದ ಜನ ಈ ಉದ್ಯೋಗದಿಂದ ಜನ ಹಿಂದೆ ಸರಿಯುತ್ತಿರುವುದು ಅವರ ಗಮನಕ್ಕೆ ಬಂತು. 18,000 ಅಡಿ ಎತ್ತರದಲ್ಲಿ, ಮೈನಸ್ 30 ಡಿಗ್ರಿಗಿಂತಲೂ ಕಡಿಮೆ ತಾಪಮಾನದಲ್ಲಿ ಕುರಿಗಳನ್ನು ಸಾಕುವುದು ನಿಜಕ್ಕೂ ಸವಾಲಾಗಿತ್ತು. ತಮ್ಮ ಸಮುದಾಯದ ಕಸುಬನ್ನು ಉಳಿಸಿ ಇದನ್ನೊಂದು ಉದ್ಯಮವನ್ನಾಗಿ ಪರಿವರ್ತಿಸಬೇಕೆಂದು ಬಾಬರ್ ಪಣತೊಟ್ರು.

50,000 ಕುರಿಗಾಹಿಗಳು...3,00,000 ಕುಶಲಕರ್ಮಿಗಳು...2,00,000 ಪಶ್ಮಿನಾ ಕುರಿಗಳು

ಕಶ್ಮೀರ್‍ಇಂಕ್ ಹೆಸರಲ್ಲಿ ಪಶ್ಮಿನಾ ಗೋಟ್ ಪ್ರಾಜೆಕ್ಟ್ ನಡೀತಾ ಇದೆ. 50,000 ಕುರಿಗಾಹಿಗಳು, 3,00,000 ಕುಶಲಕರ್ಮಿಗಳು ಮತ್ತು 2,00,000 ಪಶ್ಮಿನಾ ಕುರಿಗಳನ್ನು ಕಾಪಾಡುವುದು ಬಾಬರ್ ಅವರ ಉದ್ದೇಶ. ಕುರಿಗಳ ಸಂತತಿ ಉಳಿಸಲು ಮೊದಲ ಆದ್ಯತೆ. ಮಾರುಕಟ್ಟೆ ಪ್ರವೇಶಿಸುತ್ತಿರುವ ನಕಲಿ ಉಣ್ಣೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಬಾಬರ್ ಮಾಡ್ತಿದ್ದಾರೆ.

ಮಧ್ಯವರ್ತಿಗಳಿಗೆ ಕತ್ತರಿ...

ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಹಾಕಿರುವ ಬಾಬರ್ ಖರೀದಿದಾರರ ಜೊತೆ ಸಮುದಾಯದವರಿಗೆ ನೇರ ಸಂಪರ್ಕ ಏರ್ಪಡಿಸಿದ್ದಾರೆ. ಹರಾಜಿನಲ್ಲಿ ಪಾಲ್ಗೊಂಡು ಅವರು ಉಣ್ಣೆಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು. ನೂರು ದೇಶಗಳಲ್ಲಿ ಪಶ್ಮಿನಾ ಉಣ್ಣೆಯ ಶುದ್ಧತೆ ಬಗ್ಗೆ ಜಾಗೃತಿ ಮೂಡಿಸ್ತಿದ್ದಾರೆ. ವಿಶ್ವದಾದ್ಯಂತ ಇರುವ ನೇಯ್ಗೆ ಉದ್ಯಮದ ಜೊತೆ ಕುರಿಗಾಹಿಗಳು ಮತ್ತು ಕುಶಲಕರ್ಮಿಗಳ ನೇರ ಸಂಪರ್ಕಕ್ಕೂ ವ್ಯವಸ್ಥೆ ಮಾಡಲಾಗಿದೆ. ಬಾಬರ್ ಅವರಿಗೆ ಪೈಪೋಟಿ ಒಡ್ಡಲು ಪಶ್ಮಿನಾ ಟ್ರೇಡರ್ಸ್ ಎಂಬ ಸಂಸ್ಥೆಯೊಂದು ಹುಟ್ಟಿಕೊಂಡಿದೆ. ಆದ್ರೆ ಇದ್ಯಾವುದಕ್ಕೂ ಬಾಬರ್ ಜಗ್ಗಿಲ್ಲ. ಜಮ್ಮು-ಕಾಶ್ಮೀರದ ಸಿಎಂ, ಗವರ್ನರ್ ಹಾಗೂ ಭಾರತದ ರಾಷ್ಟ್ರಪತಿಗಳ ಬೆಂಬಲವೂ ಅವರಿಗಿದೆ.

ಇತರ ಬೆದರಿಕೆ...

ಚೀನಾ ಕೂಡ ಬಾಬರ್ ಅವರಿಗೆ ಭಾರೀ ಪೈಪೋಟಿ ಒಡ್ತಾ ಇದೆ. ಪಶ್ಮಿನಾ ನೇಯ್ಗೆ ಯಂತ್ರ ಮತ್ತು ಮಗ್ಗಗಳನ್ನು ಆರಂಭಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚೀನಾದ ಉತ್ಪನ್ನಗಳು ಶೇಕಡಾ 70ರಷ್ಟು ಬೇಡಿಕೆಯನ್ನೇ ಕಬಳಿಸಿವೆ. ಜೊತೆಗೆ ಭಾರತದ ಪಶ್ಮಿನಾ ಉಣ್ಣೆ ಚೀನಾಗಿಂತ ತೆಳ್ಳಗಿರೋದು ಕೂಡ ಒಂದು ರೀತಿಯಲ್ಲಿ ಹಿನ್ನಡೆಯಾಗಿದೆ.

ವಿಮೋಚನೆ...

ಈ ಪಯಣ ನಿಜಕ್ಕೂ ಕಠಿಣ ಎನ್ನುತ್ತಾರೆ ಬಾಬರ್. ಆದ್ರೆ ಅವರ ಪರಿಶ್ರಮ ಫಲಕೊಟ್ಟಿದೆ. ತಮ್ಮ ಉಳಿತಾಯದ ಹಣದಿಂದ್ಲೇ ಅವರು ಉದ್ಯಮವನ್ನು ಮುನ್ನಡೆಸಿದ್ದು ವಿಶೇಷ. ಸಂಸ್ಥೆಗೆ ಬಂಡವಾಳ ಹಾಕಲು ಕೆಲ ಹೂಡಿಕೆದಾರರು ಆಸಕ್ತಿ ತೋರಿದ್ದಾರೆ. ಒಂದು ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಆರ್ಡರ್ ಈಗಾಗ್ಲೇ ಕಂಪನಿಗೆ ಸಿಕ್ಕಿದೆ. ಅದರ ಸಹಿ ಇರುವ ಪಶ್ಮಿನಾ ಶಾಲ್‍ಗಳು 2 ಲಕ್ಷ ಡಾಲರ್‍ಗೆ ಮಾರಾಟವಾಗ್ತಿವೆ. ಭಾರತ ಹಾಗೂ 20 ದೇಶಗಳಲ್ಲಿ ರಿಟೇಲ್ ಪಾಲುದಾರರಿಗಾಗಿ ಬಾಬರ್ ಹುಡುಕಾಟ ನಡೆಸಿದ್ದಾರೆ.

ಭವಿಷ್ಯ...

ಕಶ್ಮೀರ್ ಇಂಕ್‍ನ ಭವಿಷ್ಯದ ಬಗ್ಗೆ ಬಾಬರ್ ಅಫ್ಜಲ್ ಅವರಿಗೆ ಆತಂಕವಿಲ್ಲ. ಇಡೀ ವಿಶ್ವವೇ ತೆರೆದ ಬಾಹುಗಳಿಂದ ಉತ್ಪನ್ನಗಳನ್ನು ಸ್ವಾಗತಿಸ್ತಿರೋದು ಅವರಿಕೆ ಖುಷಿ ತಂದಿದೆ. ಇನ್ನು ರಾಜ ರಾಣಿಯರು ಕೂಡ ಈ ಶಾಲ್‍ಗಳನ್ನು ವಂಶಪಾರಂಪರ್ಯವಾಗಿ ಕಾಪಾಡಿಕೊಳ್ತಿರೋದು ವಿಶೇಷ. ಐಷಾರಾಮಿ, ಫ್ಯಾಷನ್ ಹಾಗೂ ಪರಂಪರೆಯ ಪ್ರತೀಕ ಇದು.

Related Stories