ಪ್ರಪಂಚವನ್ನೇ ಬೆರಗಾಗಿಸೋ ಸಾಮರ್ಥ್ಯ- ಎಬಿಲಿಟಿ ಅನ್ ಲಿಮಿಟೆಡ್ ..!

ಪೂರ್ವಿಕಾ

0

ಎಲ್ಲಾವೂ ಸರಿ ಇದ್ದು, ಯಾವಾಗಾಲಾದ್ರು ಜೀವನದಲ್ಲಿ ಒಂದಿಷ್ಟು ಏರು ಪೇರಾದ್ರೆ ಸಾಕು ನಾವುಗಳು ಎಲ್ಲವೂ ಮುಗಿದೇ ಹೋಯ್ತು... ಜೀವನದಲ್ಲಿ ಇನ್ನು ಏನು ಬಾಕಿ ಉಳಿದಿಲ್ಲ ಅನ್ನೋ ನಿರ್ಧಾರಕ್ಕೆ ಬಂದುಬಿಡುತ್ತೇವೆ.. ಅಷ್ಟೇ ಅಲ್ಲದೆ ನಮ್ಮಿಂದ ಏನು ಮಾಡಲು ಸಾಧ್ಯವಿಲ್ಲ ಅಂತ ಕೈಚೆಲ್ಲಿ ಕುಳಿತುಬಿಡುತ್ತೇವೆ. ಇಂತಹ ಮನೋಭಾವ ಉಳ್ಳವರಿಗೆ ಈ ತಂಡ ನೋಡಿದ್ರೆ ಹುಮ್ಮಸ್ಸು ಉಕ್ಕಿ ಬರುತ್ತೆ. ಬದುಕಿನಲ್ಲಿ ಏನಾದ್ರು ಸಾಧಿಸಬೇಕು ಅನ್ನೋ ಹಂಬಲ ಹೆಚ್ಚಾಗುತ್ತೆ. ಇವರುಗಳ ಸಾಧನೆ ಹಾಗೂ ಇವರು ನೀಡೋ ಕಾರ್ಯಕ್ರಮ ನೋಡಿದ್ರೆ ಎಂತಹವರು ಕೂಡ ಒಮ್ಮೆ ವಾವ್ಹ್ ಅನ್ನದೆ ಇರಲಾರರು..! ಇವರ ಕಾರ್ಯಕ್ರಮ ಹಾಗೂ ಕಸರತ್ತುಗಳನ್ನ ಒಮ್ಮೆ ನೋಡಿದ್ರೆ ಸಾಕು, ಹೀಗೂ ಮಾಡಬಹುದಾ ಅಂತ ಆಶ್ಚರ್ಯ ಪಟ್ಟರು ಅನುಮಾನವಿಲ್ಲ. ನಿಮ್ಮನ್ನಷ್ಟೇ ಅಲ್ಲ ಇವರುಗಳು ವಿಶ್ವದ ಮೂಲೆ ಮೂಲೆಯಲ್ಲಿರೋ ಜನರನ್ನು ಈಗಾಗಲೇ ಬೆರಗು ಮಾಡಿದ್ದಾರೆ.

ಎಬಿಲಿಟಿ ಅನ್ ಲಿಮಿಟೆಡ್ (ಮಿತಿಯಿಲ್ಲದ ಸಾಮರ್ಥ್ಯ)ಇದು ಇಂದು ವಿಭಿನ್ನ ಜಗತ್ತು. ಹೌದು ಸಾಮರ್ಥ್ಯಕ್ಕೆ ಮಿತಿ ಎಲ್ಲಿದೆ..? ಮನಸ್ಸಿದ್ದರೆ ಸಾಮರ್ಥ್ಯಕ್ಕೆ ಯಾವುದೇ ಮಿತಿಯೇ ಇರುವುದಿಲ್ಲ ಅನ್ನೋದನ್ನ ನಿರೂಪಿಸಲು ಹಾಗೂ ವಿಕಲಚೇತನರಿಗಾಗಿ ಹುಟ್ಟಿಕಿಂಡಿರೋ ವಿಶೇಷ ತಂಡವೇ ಎಬಿಲಿಟಿ ಅನ್ ಲಿಮಿಟೆಡ್. ಹೆಸರೇ ಹೇಳುವಂತೆ ಇದೊಂದು ವಿಭಿನ್ನ ಜಗತ್ತು ನಿಜ. ಇದರ ರೂವಾರಿ ಸಯ್ಯದ್ ಅಲ್ಲವುದ್ದೀನ್ ಪಾಷ. ಈ ಹೆಸರು ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಚಿರಪರಿಚಿತ. ವಿಕಲಚೇತನರಿಗೆ ವೀಲ್ಹ್ ಚೇರ್​​ನಲ್ಲೇ ನೃತ್ಯದ ಹಾಗೂ ಸಂಗೀತದ ಮೂಲಕ ಚಿಕಿತ್ಸೆ ನೀಡೋದ್ರಲ್ಲಿ ಪರಿಣಿತ. ಭರತನಾಟ್ಯ, ಕಥಕ್ ನೃತ್ಯದಲ್ಲಿ ಪ್ರಸಿದ್ದಿ ಪಡೆದಿದ್ದಾರೆ ಈ ಸಯ್ಯದ್. ಜಾತಿ ,ವರ್ಣ ಹೀಗೆ ಸಾಕಷ್ಟು ವಿಚಾರಗಳಿಂದ ಸಮಾಜದಲ್ಲಿ ನೊಂದಿರುವವರಿಗೆ ಎಬಿಲಿಟಿ ಅನ್ ಲಿಮಿಟೆಡ್ ಆಶ್ರಯ ತಾಣ.

ಎಲ್ಲಾ ಕಡೆ ಸೂಪರ್​​ ಹಿಟ್​​​..!

ಮೂವತ್ತು ವರ್ಷಗಳ ಹಿಂದೆ ಆರಂಭವಾದ ಎಬಿಲಿಟಿ ಅನ್ ಲಿಮಿಟೆಡ್ ಸಂಸ್ಥೆ ದೇಶದ ಮೂಲೆ ಮೂಲೆ-ಮೂಲೆಗಳಲ್ಲಿ ಕಾರ್ಯಕ್ರಮಗಳಮನ್ನ ನೀಡಿ ಪ್ರಸಿದ್ದಿ ಪಡೆದಿದ್ದಾರೆ. ವಿಕಲಚೇತನರು ಅಂದ್ರೆ ಸಾಕು ಅವರುಗಳಿಗೆ ವೀಲ್ಹ್ ಚೇರ್ ಹಾಗೂ ಊರುಗೋಲುಗಳೇ ಇವರ ಆಸರೆ. ಈ ಆಸರೆ ವಸ್ತುಗಳನ್ನ ಉಪಯೋಗಿಸಿಕೊಂಡು ನೃತ್ಯ ಮಾಡೋ ಪರಿಣಿತರ ತಂಡ ಈ ಎಬಿಲಿಟಿ ಅನ್ ಲಿಮಿಟೆಡ್..! ವೀಲ್ಹ್ ಚೇರ್​​ನಲ್ಲೇ ,ಮಾಡ್ತಾರೆ ಚಮತ್ಕಾರ ಊರುಗೋಲೆ ಇವ್ರ ಸಾಧನ. ಎಸ್, ಇವರುಗಳ ಸ್ಟೇಜ್ ಶೋ ಅನ್ನ ನೋಡಿ ಇಡೀ ರಾಷ್ಟ್ರವೇ ನಿಬ್ಬೆರಗಾಗಿದೆ..! ಎಲ್ಲವೂ ಸರಿಯಾಗಿರುವ ನಾವುಗಳೇ ನೃತ್ಯ ಮಾಡಿ ಎಲ್ಲರನ್ನೂ ಮೆಚ್ಚಿಸೋದು ಕಷ್ಟ. ಆದ್ರೆ ಈ ತಂಡದ ಕಾರ್ಯಕ್ರಮ ನೋಡಿದ್ರೆ ಎಂತವ್ರಿಗೂ ಅಬ್ಬಾ, ಇವ್ರಿಂದ ಇದೆಲ್ಲಾ ಸಾಧ್ಯನಾ ಅಂತ ಅನ್ನಿಸುತ್ತೆ. ವೀಲ್ಹ್ ಚೇರ್ ಮೇಲೆ ಕುಳಿತು ಸುಮಾರು 13ಕ್ಕೂ ಹೆಚ್ಚು ವಿಭಿನ್ನ ರೀತಿಯ ,ಶೈಲಿಯ ನೃತ್ಯವನ್ನ ಮಾಡುತ್ತಾರೆ. ಸುಮಾರು 5ಸಾವಿರ ವರ್ಷ ಹಿಂದಿನಿಂದ ಭಾರತದಲ್ಲಿ ಮಾಡಿಕೊಂಡು ಬರುತ್ತಿದ್ದ ಯೋಗದ ಭಂಗಿಗಳನ್ನ ವೀಲ್ಹ್ ಚೇರ್ ಮೇಲೆ ಕುಳಿತು ಮಾಡುತ್ತಾರೆ. ಅಷ್ಟೇ ಅಲ್ಲದೆ ಭಗವದ್ಗೀತೆ,ರಾಮಾಯಣ,ಭರತನಾಟ್ಯ ಇನ್ನೂ ಅನೇಕ ನೃತ್ಯಗಳನ್ನ ಮಾಡುತ್ತಾರೆ.

ಕೇವಲ ನೃತ್ಯವಷ್ಟೆ ಅಲ್ಲದೆ ಈ ತಂಡದ ಮಕ್ಕಳು ತಮ್ಮ ಶಿಕ್ಷಣ ಹಾಗೂ ಸಂಗೀತ ಅಭ್ಯಾಸವನ್ನು ಬಿಡದೆ ಜೊತೆಯಲ್ಲೇ ಮಾಡುತ್ತಾರೆ. ಅಷ್ಟೇ ಅಲ್ಲದೆ ಕೃಷಿಯಲ್ಲೂ ಪರಿಣಿತಿ ಪಡೆದಿದ್ದಾರೆ. ಸಾಕಷ್ಟು ಸ್ಟೇಜ್ ಶೋ ಗಳನ್ನ ನೀಡಿರೋ ಈ ತಂಡ ಬಂದ ಹಣದಲ್ಲಿ ಸುನಾಮಿ ಸಂತಸ್ತ್ರರಿಗೆ ನೀಡುತ್ತಾರೆ. ಇವ್ರ ಸಾಧನೆಯನ್ನ ನೋಡಿ ರಾಷ್ಟ್ರ ಪ್ರಶಸ್ತಿ ಯನ್ನ ನೀಡಲಾಗಿದೆ. ಅಷ್ಟೇ ಅಲ್ಲದೆ ಗಿನ್ನಿಸ್ ವರ್ಡ್ ರೆಕಾರ್ಡ್ ಹಾಗೂ ಲಿಮ್ಕಾ ರೆಕಾರ್ಡ್ ನಲ್ಲಿ ಈ ತಂಡದ ಹೆಸರು ಇದೆ…

ಇನ್ನೂ ಈ ತಂಡದ ವಿಶೇಷ ನೃತ್ಯ ರೂಪಕಗಳನ್ನೂ ನಡೆಸಿಕೊಡುತ್ತವೆ. ವಿವೇಕಾನಂದರ ಜೀವನ ಪಯಣ ,ಗೋವಿನ ಹಾಡು ಇದರ ಜೊತೆಗೆ ಸೂಪಿ ನೃತ್ಯ ಹಾಗೂ ಮರಾಠಿ ಜನಪದ ನೃತ್ಯ ಈ ತಂಡದ ವಿಶೇಷ ಶೋಗಳು. ಖಾಸಗಿಯಾಗಿ ನೃತ್ಯ ಕಾರ್ಯಕ್ರಮಗಳನ್ನ ನೀಡೋ ಈ ತಂಡವನ್ನ ನೀವು ಕೂಡ ಪ್ರೋತ್ಸಾಹಿಸಿ ನಿಮ್ಮ ಸಮಾರಂಭದ ಕಾರ್ಯಕ್ರಮಗಳಿಗೆ ಇವ್ರಗಳನ್ನ ಆಹ್ವಾನಿಸಬಹುದು. ದೆಹಲಿಯಲ್ಲಿರೋ ಎಬಿಲಿಟಿ ಅನ್ ಲಿಮಿಟೆಡ್ ತಂಡ ವಿಶ್ವದ ಮೂಲೆ ಮೂಲೆಗೂ ಪ್ರಯಾಣ ಬೆಳೆಸಿ ತಮ್ಮ ತಂಡದ ಸಾಧನೆಯಿಂದ ಮತ್ತು ಸಾಹಸದಿಂದ ಪ್ರಸಿದ್ದಿ ಪಡೆಸಿದೆ. ಏನೂ ಇಲ್ಲದವ್ರಿಂದ ಏನೂ ಇಲ್ಲದವ್ರಿಗಾಗಿ ನಡೆಯುತ್ತಿರೋ ಸಹಾಯಕ್ಕೆ ನಾವೆಲ್ಲರೂ ಕೈ ಜೋಡಿಸಲೇ ಬೇಕು. ಅದಕ್ಕಾಗಿ ಒಮ್ಮೆ ಎಬಿಲಿಟಿ ಅನ್ ಲಿಮಿಟೆಡ್ ಡಾಟ್. ಕಾಂಗೆ ಲಾಗ್ ಇನ್ ಆಗಿ.