ಟ್ರೆಕ್ಕಿಂಗ್ ಮಾಡುವವರಿಗೆ ಆಲ್ಟಿಟ್ಯೂಡ್ ಸಿಂಡ್ರೋಮ್ !

ಟೀಮ್​ ವೈ.ಎಸ್​.

ಟ್ರೆಕ್ಕಿಂಗ್ ಮಾಡುವವರಿಗೆ ಆಲ್ಟಿಟ್ಯೂಡ್ ಸಿಂಡ್ರೋಮ್ !

Wednesday September 30, 2015,

4 min Read

ಅದು ಇಬ್ಬರು ಟ್ರೆಕ್ಕರ್‍ಗಳು ಸೇರಿಕೊಂಡು ಹುಟ್ಟಿಹಾಕಿದ ಕಂಪನಿ. ಹೆಸರು ಆಲ್ಟಿಟ್ಯೂಡ್ ಸಿಂಡ್ರೋಮ್. ಕಾರ್ಪೋರೇಟ್ ಸಂಸ್ಥೆಗಳಲ್ಲಿನ ತಮ್ಮ ಉದ್ಯೋಗಕ್ಕೆ ಗುಡ್‍ಬೈ ಹೇಳಿದ ಈ ಸಾಹಸಿ ಉದ್ಯಮಿಗಳು, ಜನರಿಗೆ ವಿಶ್ರಾಂತದಾಯಕ, ಅದ್ಭುತ ಟ್ರೆಕ್ಕಿಂಗ್ ಅನುಭವಗಳನ್ನು ನೀಡಲು ಹೊರಟಿದ್ದಾರೆ. ಈ ವರ್ಷಾರಂಭದಲ್ಲಿ ಪ್ರವಾಸೋದ್ಯಮ ಕಂಪನಿ -ಆಲ್ಟಿಟ್ಯೂಡ್ ಸಿಂಡ್ರೋಮ್ ಸ್ಥಾಪಿಸಿದ್ದಾರೆ.

ಆರಂಭದಲ್ಲೇ ಕಂಪನಿಗೆ ಅದ್ಭುತ ಪ್ರತಿಕ್ರಿಯೆ ಲಭ್ಯವಾಗಿದೆ. ಟ್ರೆಕ್ಕಿಂಗ್ ಪ್ರೇಮಿಗಳೂ ಸೇರಿದಂತೆ ಆಸಕ್ತ ಪ್ರವಾಸಿಗರು ಇವರ ಕಂಪನಿಯನ್ನು ಸಂಪರ್ಕಿಸುತ್ತಿದ್ದಾರೆ. ಈ ವರ್ಷದ ಪೂರ್ವಾರ್ಧ ಅಂದರೆ ಮೊದಲ ಆರು ತಿಂಗಳಲ್ಲೇ ಈ ಕಂಪನಿ ಉತ್ತರಾಖಂಡ್‍ನಲ್ಲಿ 6 ಟ್ರೆಕ್ಕಿಂಗ್‍ಗಳನ್ನು ಆಯೋಜಿಸಿತ್ತು. ಮುಂದಿನ ತಿಂಗಳುಗಳಲ್ಲಿ ಭೂತಾನ್, ಉತ್ತರಾಖಂಡ್, ನೇಪಾಳಗಳಲ್ಲಿ ಒಟ್ಟು 7 ಟ್ರೆಕ್ಕಿಂಗ್‍ಗಳನ್ನು ಆಯೋಜಿಸಿದೆ.

ಎಲ್ಲವೂ ಶರುವಾಗಿದ್ದು ಹೆಸರಿನಿಂದ !

image


ಯಾವುದೇ ಸಂಸ್ಥೆಗೆ ಐಡಿಯಾ ಮೊದಲು ಹುಟ್ಟಿಕೊಳ್ಳುತ್ತದೆ. ಆದರೆ, ಇವರಿಗೆ ಮೊದಲು ಹುಟ್ಟಿಕೊಂಡಿದ್ದು ಹೆಸರು. ಕಳೆದ ವರ್ಷ, ಟ್ರೆಕ್ಕರ್, ಬ್ಲಾಗರ್ ಮತ್ತು ಪ್ರೊಮಟಿಸ್ ಎಂಬ ಸಂಸ್ಥೆಯ ಸಹಸಂಸ್ಥಾಪಕರಾಗಿದ್ದ ಸಾಜಿಶ್ ಜಿ.ಪಿ.ಯವರು ತಮ್ಮ ಚಿಕ್ಕ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಆಗ ಅವರಿಗೆ ಆಲ್ಟಿಟ್ಯೂಡ್ ಸಿಂಡ್ರೋಮ್ ಎಂಬ ಹೆಸರು ಹೊಳೆಯಿತು. ಅದು ಅವರ ತಲೆಯನ್ನು ಕೊರೆಯುತ್ತಲೇ ಇತ್ತು. " ಟ್ರೆಕ್ಕಿಂಗ್ ಮತ್ತು ಸಾಹಸ ಪ್ರವಾಸೋದ್ಯಮದಲ್ಲಿ ಏನಾದರೂ ಮಾಡಬೇಕು ಎನ್ನುವ ಆಲೋಚನೆ ಇತ್ತು. ಆದರೆ, ಅದಕ್ಕಾಗಿ ಯಾವುದೇ ಗಂಭೀರ ಪ್ರಯತ್ನ ಮಾಡಿರಲಿಲ್ಲ. ಆದರೆ, ಆ ಒಂದು ಸಂಜೆ ನನಗೆ ಆಲ್ಟಿಟ್ಯೂಡ್ ಸಿಂಡ್ರೋಮ್ ಎಂಬ ಹೆಸರು ಹೊಳೆಯಿತು. ಅದೆಷ್ಟು ಪರಿಣಾಮ ಬೀರಿತ್ತು ಎಂದರೆ, ನಾನು ಆ ಹೆಸರಿನಲ್ಲಿ ಏನಾದರೂ ಮಾಡಲೇಬೇಕು ಅಂತ ಗಂಭೀರವಾಗಿ ಚಿಂತನೆ ನಡೆಸಿದೆ. ನನ್ನ ಸುದೀರ್ಘ ಕನಸು ಈಡೇರುವ ಕಾಲ ಬಂದಿತ್ತು. ನಾನೀಗ ಏನು ಮಾಡುತ್ತಿದ್ದೆನೋ ಅದೇ ಕನಸು ಈಡೇರಿದಂತಾಗಿದೆ." ಎನ್ನುತ್ತಾರೆ ಸಾಜಿಶ್. ಹೆಸರು ಹೊಳೆದ ತಕ್ಷಣವೇ ಆನ್‍ಲೈನ್‍ನಲ್ಲಿ ಡೊಮೈನ್ ಹೆಸರು ಲಭ್ಯವಿದೆಯಾ ಎನ್ನುವುದನ್ನು ಚೆಕ್ ಮಾಡಿದರು. ಅಲ್ಲಿ ಹೆಸರು ದೊರಕಿತ್ತು. ತಕ್ಷಣವೇ ಡೊಮೈನ್ ಬುಕ್ ಮಾಡಿದರು. ಇಷ್ಟೆಲ್ಲಾ ಆದ್ಮೇಲೆ ಹಿಂತಿರುಗಿ ನೋಡುವ ಪ್ರಶ್ನೆಯೇ ಇರಲಿಲ್ಲ.

ಆಲ್ಟಿಟ್ಯೂಡ್ ಸಿಂಡ್ರೋಮ್ ಒಬ್ಬರ ಕೈಯಲ್ಲಾಗೋ ಕೆಲಸವಲ್ಲ. ತಕ್ಷಣವೇ ತಮ್ಮ ಟ್ರೆಕ್ಕಿಂಗ್ ಗೆಳೆಯ, ಕಾಲೇಜಿನ ಸಹಪಾಠಿ ಮತ್ತು ಪ್ರೊಮೆಟಿಸ್‍ನ ಸಹ ಸಂಸ್ಥಾಪಕ ರಣ್‍ದೀಪ್ ಹರಿಯವರನ್ನು ಸಂಪರ್ಕಿಸಿದರು. ಕಾರ್ಪೋರೇಟ್ ನೌಕರರಾಗಿದ್ದ ರಣ್‍ದೀಪ್ ಕೂಡಾ ಸಾಜಿಶ್ ಜೊತೆಗೆ ಹಲವು ಬಾರಿ ಟ್ರೆಕ್ಕಿಂಗ್ ಹೋಗಿದ್ದರು. ಗೆಳೆತನದ ಸವಿ ಅನುಭವಿಸಿದ್ದರು. ಅವರ ಜೊತೆಗೆ ಟ್ರೆಕ್ಕಿಂಗ್ ಹೋಗಿದ್ದ ಬಹುತೇಕ ಮಂದಿ, ಮತ್ತೆ ಯಾವಾಗ ಟ್ರೆಕ್ಕಿಂಗ್ ಹೊರಡುತ್ತೀರಿ ಎನ್ನುವ ಪ್ರಶ್ನೆಗಳನ್ನು ಕೇಳಿದ್ದು ಇವರ ಗಮನಕ್ಕೂ ಬಂದಿತ್ತು. ಸಾಜಿಶ್ ಈ ಐಡಿಯಾದೊಂದಿಗೆ ಸಂಪರ್ಕಿಸಿದಾಗ ನಾನು ಎಲ್ಲಾ ವೃತ್ತಿ ಬಿಟ್ಟು ನಾನು ಖುಷಿ ಪಡುವ ಕ್ಷೇತ್ರದಲ್ಲಿ ಕೆಲಸ ಮಾಡಲು ನಿರ್ಧರಿಸಿದೆ ಎನ್ನುತ್ತಾರೆ ರಣ್‍ದೀಪ್.

image


ಸಂಪಾದನೆಯ ದಾರಿ- ಬದುಕು ಬದಲಾಯಿಸುವ ಅನುಭವ

ಆಲ್ಟಿಟ್ಯೂಡ್ ಸಿಂಡ್ರೋಮ್‍ಗೆ ಬೇರೆಯದ್ದೇ ಆದ ಬ್ಯುಸಿನೆಸ್ ಮಾಡಲ್ ಇದೆ. ಪರ್ವತಗಳ ಪ್ರಾಕೃತಿಕ ಸೊಬಗಿಗೆ ಆದಷ್ಟು ಹೆಚ್ಚು ಜನರನ್ನು ವ್ಯಸನಿಗಳನ್ನಾಗಿ ಮಾಡುವುದೇ ಒನ್ ಪಾಯಿಂಟ್ ಅಜೆಂಡಾ ಎನ್ನುತ್ತಾರೆ ಸಾಜಿಶ್. ಅದೇ ಸಂಪಾದನೆಯ ದಾರಿ ಕೂಡಾ ಹೌದಂತೆ.

ಟ್ರೆಕ್ಕಿಂಗ್ ಎನ್ನುವುದು ನಿಮ್ಮ ಜೀವನದ ಪಟ್ಟಿಯಲ್ಲಿ ಟಿಕ್ ಆಫ್ ಮಾಡುವಂತಹ ವಿಷಯ ಅಲ್ಲ ಅಂತ ಘಂಟಾಘೋಷವಾಗಿ ಹೇಳುವ ಕಂಪನಿ, ಅದನ್ನೇ ತನ್ನ ಧ್ಯೇಯ ವಾಕ್ಯವನ್ನಾಗಿಸಿಕೊಂಡಿದೆ. ಅದೇ ಹಾದಿಯಲ್ಲಿ ಗುರಿ ತಲುಪಲು ಹೊರಟಿದೆ.

ಕಂಪನಿಯ ವಿಶೇಷತೆಗಳು/ಪ್ರತ್ಯೇಕತೆಗಳು

1. ಸುದೀರ್ಘ ಪ್ರಯಾಣದ ವೇಳಾಪಟ್ಟಿ : ಕೆಟ್ಟ ಹವಾಮಾನ, ಪ್ರತಿಕೂಲ ಪರಿಸ್ಥಿತಿ ಮತ್ತು ಅನನುಭವಿ ಟ್ರೆಕ್ಕರ್‍ಗಳ ಜೊತೆ ಹೊಂದಿಕೊಳ್ಳಲು ಸುದೀರ್ಘ ಪ್ರಯಾಣದ ವೇಳಾಪಟ್ಟಿ ರಚಿಸಲಾಗುತ್ತದೆ. "ಅತಿ ನಿಧಾನವಾಗಿ ನಡೆಯುವ ವ್ಯಕ್ತಿಯೂ ಪ್ರಕೃತಿ ಟ್ರೆಕ್ಕಿಂಗ್ ಅನ್ನು ಅನುಭವಿಸಬೇಕು, ಗುರಿ ತಲುಪಬೇಕು. ಬಹುತೇಕ ಜನರು, ತಮ್ಮ ವಯಸ್ಸಿನ ಕಾರಣಕ್ಕೆ ಟ್ರೆಕ್ಕಿಂಗ್ ಹೋಗಲು ಹಿಂಜರಿಯುತ್ತಾರೆ. ಇನ್ನು ಕೆಲವರಿಗೆ ದೈಹಿಕ ಸಾಮರ್ಥ್ಯ ದ ಬಗ್ಗೆ ಹಿಂಜರಿಕೆ ಇರುತ್ತದೆ. ಆದರೆ, ಟ್ರೆಕ್ಕಿಂಗ್ ಎನ್ನುವುದು ಮರಗಳ ಮಧ್ಯೆ ನಡೆಯುವುದು ಅಷ್ಟೇ. ಟ್ರೆಕ್ಕಿಂಗ್ ಹೋಗಲು ಇಚ್ಚಿಸುವ ಯಾರೇ ಆದರೂ ಟ್ರೆಕ್ಕಿಂಗ್ ಮಾಡಬಹುದು" ಎನ್ನುತ್ತಾರೆ ಸಾಜಿಶ್.

2. ಚಿಕ್ಕ ಗುಂಪುಗಳು: "12 ಜನರ ತಂಡವಿದ್ದರೆ, ಅದು ಟ್ರೆಕ್ಕಿಂಗ್‍ಗೆ ಹೇಳಿ ಮಾಡಿಸಿದ ಗುಂಪಾಗಿರುತ್ತದೆ. ನಾವು ಕೆಲವೊಮ್ಮೆ 5 ಜನರ ತಂಡವನ್ನು ಕರೆದೊಯ್ದದ್ದೂ ಇದೆ. 15 ಜನರನ್ನೂ ಕರೆದೊಯ್ದಿದ್ದೇವೆ." ಎನ್ನುತ್ತಾರೆ ಸಾಜಿಶ್. ಸಣ್ಣ ಗುಂಪುಗಳಾದರೆ, ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ ಮತ್ತು ಟ್ರೆಕ್ಕಿಂಗ್‍ನ ನಿಜವಾದ ಅನುಭವ ಪಡೆಯಬಹುದು. (" ಟಾಯ್ಲೆಟ್ ಟೆಂಟ್ ಬಳಿ ಕೊರೆಯುವ ಚಳಿಯಲ್ಲಿ 20-30 ಜನ ಸರದಿ ಸಾಲಿನಲ್ಲಿ ನಿಲ್ಲುವುದನ್ನೋಮ್ಮೆ ಊಹಿಸಿ ನೋಡಿ, ನಿಮಗೆ ಗೊತ್ತಾಗುತ್ತೆ," ಎಂದು ನಗುತ್ತಾರೆ ಸಾಜಿಶ್), ಪರಿಸರದ ಮೇಲಿನ ಒತ್ತಡವನ್ನೂ ಸಣ್ಣ ಗುಂಪುಗಳು ತಗ್ಗಿಸುತ್ತವೆ.

3. ಸಾಂಸ್ಕøತಿಕ ಅನುಭವ: ಬಹುತೇಕ ಟ್ರೆಕ್‍ಗಳನ್ನು ಸ್ಥಳೀಯ ಹಬ್ಬಗಳ ಸಂದರ್ಭದಲ್ಲಿ ಆಯೋಜಿಸಲಾಗುತ್ತದೆ. ಅಥವಾ ಟ್ರೆಕ್ಕಿಂಗ್ ಗಾಗಿಯೇ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದರಿಂದ ಟ್ರೆಕ್ಕರ್‍ಗಳು ಸ್ಥಳೀಯರ ಜೊತೆ ಬೆರೆತು ಆಹಾರ ಮತ್ತು ಸಂಸ್ಕøತಿಯನ್ನು ಹಂಚಿಕೊಳ್ಳಲು ನೆರವಾಗುತ್ತದೆ.

4. ಅತ್ಯುತ್ತಮ ಸಿಬ್ಬಂದಿಯ ಸಾಥ್: ಆಲ್ಟಿಟ್ಯೂಡ್ ಸಿಂಡ್ರೋಮ್, ಹಿಮಾಲಯದ ಬಹುತೇಕ ಪ್ರದೇಶಗಳಲ್ಲಿ ಬೆಂಬಲಿತ ಸಿಬ್ಬಂದಿಯ ಸಹಯೋಗ ಪಡೆದಿದೆ. ಖುದ್ದಾಗಿ ಆರಿಸಿದ, ಗೈಡ್, ಅಡುಗೆಯವರು, ಕೂಲಿಯಾಳುಗಳು, ಟ್ರಿಕ್ಕಿಂಗ್ ವೇಳೆ ಸಾಥ್ ನೀಡುತ್ತಾರೆ. ಸಂಸ್ಥೆ ಈಗ ವಿಶ್ವದಾದ್ಯಂತ ಇಂತಹದ್ದೇ ಪಾಲುದಾರರನ್ನು ಹುಡುಕಾಡತೊಡಗಿದೆ.

5. ಬಹುವಿಧದ ಊಟೋಪಚಾರ : ಎಲ್ಲಾ ಟ್ರೆಕ್ಕಿಂಗ್ ವೇಳೆ ಬಹುವಿಧದ ಖಾದ್ಯಗಳು ಲಭ್ಯ.

ಇಂತಹ ಸಿದ್ಧಾಂತಗಳನ್ನು ಪಾಲಿಸುವುದರಿಂದ ಸಂಸ್ಥೆಗೆ ಆರ್ಥಿಕವಾಗಿ ಪರಿಣಾಮ ಬೀರುತ್ತಿದೆ. ಇದನ್ನು ಆಲ್ಟಿಟ್ಯೂಡ್ ಸಿಂಡ್ರೋಮ್ ಸ್ಥಾಪಕರೂ ಒಪ್ಪಿಕೊಳ್ಳುತ್ತಾರೆ. ತಮ್ಮ ದರಪಟ್ಟಿಯು ಸಾಮಾನ್ಯ ಪ್ರವಾಸಿ ಸಂಸ್ಥೆಗಳಿಗಿಂತ ಕೊಂಚ ಅಧಿಕವಾಗಿದ್ದು, ಹೈ-ಎಂಡ್ ಸಂಸ್ಥೆಗಳಿಗಿಂತ ಕಡಿಮೆಯಾಗಿದೆ ಎನ್ನುತ್ತಾರೆ ಸಂಸ್ಥಾಪಕರು. ಆದರೆ, ನಾವು ನಮ್ಮ ಬಜೆಟ್‍ನಲ್ಲೇ ಪ್ರೀಮಿಯಂ ಸೇವೆಗಳನ್ನು ಒದಗಿಸುತ್ತಿದ್ದೇವೆ ಎನ್ನುತ್ತಾರೆ ಸಾಜಿಶ್. "ಸಧ್ಯಕ್ಕೆ ಒಂದೋ ತೀರಾ ದುಬಾರಿ ಅಥವಾ ತುಂಬಾ ಕಡಿಮೆ ಬೆಲೆಯ ಪ್ಯಾಕೇಜ್‍ಗಳು ಲಭ್ಯ. ಆದರೆ ನಾವು 25-50 ವಯಸ್ಸಿನ ವೃತ್ತಿಪರರಿಗೆ ಅತ್ಯಂತ ಆರಾಮದಾಯಕ ಆದರೆ ಅತ್ಯುತ್ತಮ ಅನುಭವ ಕೊಡುತ್ತಿದ್ದೇವೆ." ಎನ್ನುತ್ತಾರೆ ಸಾಜಿಶ್.

ಅಲ್ಟಿಟ್ಯೂಡ್ ಸಿಂಡ್ರೋಮ್ ಗ್ರಾಹಕರಿಗೆ ಪೂರ್ವ ನಿಗದಿತ, ಗ್ರಾಹಕ ಆಧರಿತ ಟ್ರೆಕ್ಸ್‍ಗಳನ್ನು ಆಯೋಜಿಸುತ್ತಿದೆ. ಖಾಸಗಿ ಸಂಸ್ಥೆಗಳು ಮತ್ತು ಕಾರ್ಪೋರೇಟ್ ಸಂಸ್ಥೆಗಳಿಗೆ ಕೋರಿಕೆ ಮೇರೆಗೆ ವಿಶೇಷ ಟ್ರೆಕ್ಕಿಂಗ್‍ಗಳನ್ನೂ ಆಯೋಜಿಸಲಾಗುತ್ತಿದೆ.

ಪ್ರಚಾರ ಹೇಗೆ ?

ಆಲ್ಟಿಟ್ಯೂಡ್ ಸಿಂಡ್ರೋಮ್ ಸಧ್ಯಕ್ಕೆ ತಮ್ಮ ವೆಬ್‍ಸೈಟ್ ಮತ್ತು ಫೇಸ್‍ಬುಕ್ ಮೂಲಕ ಪ್ರಚಾರ ಮಾಡುತ್ತಿದೆ. ಆದರೆ, ಮೌತ್​​ ಟು ಮೌತ್​​ ಪ್ರಚಾರ ಮತ್ತು ರಿಪೀಟ್ ಬ್ಯುಸಿನೆಸ್‍ಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

ಭವಿಷ್ಯದ ಹಾದಿ

ಸಾಜಿಶ್ ಮತ್ತು ರಣ್‍ದೀಪ್ ಅವರು ಇದೇ ಮಾದರಿಯ ವಹಿವಾಟನ್ನು ವಿದೇಶಗಳಲ್ಲೂ ವಿಸ್ತರಿಸಲು ಚಿಂತನೆ ನಡೆಸಿದ್ದಾರೆ. ಸಧ್ಯಕ್ಕೆ ಅವರು ಹಿಮಾಲಯದ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ. ಹಿಮಾಲಯ ಮತ್ತು ದೇಶದ ನಾನಾ ಕಡೆಗಳಲ್ಲಿ ತಂಡಗಳನ್ನು ರಚಿಸುತ್ತಿರುವ ಸಂಸ್ಥೆ, ಟ್ರೆಕ್ಕಿಂಗ್‍ಗೆ ಸಾಂಸ್ಕೃತಿಕ ಅನುಭವದ ಟಚ್ ನೀಡುವ ಚಿಂತನೆಯಲ್ಲಿದೆ. ಹೊಸ ಪ್ರಯಾಣಕ್ಕೆ ಯೋಗ ಟ್ರೆಕ್ ಎಂದು ಹೆಸರಿಡಲಾಗಿದೆ. ಉತ್ತರಾಖಂಡ್‍ನ ದಯಾರಾ ಬುಗ್ಯಲ್‍ನಲ್ಲಿ ಯೋಗ ಟ್ರೆಕ್ ಆಯೋಜಿಸಲಾಗಿದೆ. "ನಾವು ಬುಟಿಕ್ ಮಾದರಿಯ ವಹಿವಾಟು ನಡೆಸುತ್ತಿದ್ದೇವೆ. ವೈಯಕ್ತಿಕ ಗಮನ ಮತ್ತು ಗ್ರಾಹಕ ಸ್ನೇಹಿ ನಮ್ಮ ಸಂಸ್ಥೆಯ ಪ್ರಮುಖ ಅಂಶಗಳಾಗಿವೆ. ಒಂದೇ ಬಾರಿಗೆ ನಾವು ದೊಡ್ಡ ಮಟ್ಟದಲ್ಲಿ ಶುರು ಮಾಡಿದರೆ, ನಮ್ಮ ಈ ಸಿದ್ಧಾಂತಗಳಿಂದ ವಿಮುಖರಾಗಬೇಕಾದ ಅನಿವಾರ್ಯತೆ ಎದುರಾಗಬಹುದು," ಎಂಬ ಆತಂಕ ಸಾಜಿಶ್ ಅವರದ್ದು.

ಹೂಡಿಕೆ : ಎಲ್ಲಿ ಹೃದಯವಿದೆಯೋ ಅಲ್ಲೇ ಹೂಡಿಕೆ

ಆಲ್ಟಿಟ್ಯೂಡ್ ಸಿಂಡ್ರೋಮ್‍ಗೆ ತಮ್ಮ ಸ್ವಂತ ಜೇಬಿನಿಂದ, ಗೆಳೆಯರ, ಕುಟುಂಬದ ಸದಸ್ಯರ ಕೊಡುಗೆಯಿಂದ ಹೂಡಿಕೆ ಮಾಡಲಾಗಿದೆ. " ನಮ್ಮ ಗೆಳೆಯರು, ಸಂಬಂಧಿಕರು, ಗ್ರಾಹಕರಿಗೆ ನಮ್ಮ ಶ್ರಮದ ಮೇಲೆ ನಂಬಿಕೆ ಇದೆ. ಹೀಗಾಗಿ ನಮ್ಮನ್ನು ನಂಬಿ ಅವರು ಸಹಾಯ ಮಾಡಿರುವುದಕ್ಕೆ ಖುಷಿ ಇದೆ. ಕೆಲವರು ಮುಂದಿನ ದಿನಗಳಲ್ಲಿ ಉಚಿತ ಟ್ರೆಕ್ಕಿಂಗ್ ಅವಕಾಶ ಕಲ್ಪಿಸುವ ಭರವಸೆಯಿಂದ ಹೂಡಿಕೆ ಮಾಡಿದ್ದಾರೆ. ಇನ್ನೂ ಕೆಲವರು ನಮ್ಮ ಐಡಿಯಾ ಮೆಚ್ಚಿ ಹೂಡಿಕೆ ಮಾಡಿದ್ದಾರೆ." ಎನ್ನುತ್ತಾರೆ ಸಾಜಿಶ್.

"ನೋಡೋಣ, ನಾವು ಹೂಡಿಕೆಗೋಸ್ಕರ ಹೂಡಿಕೆ ಪಡೆಯುವುದಿಲ್ಲ. ಮುಂದಿನ ದಿನಗಳಲ್ಲಿ ನಮಗೆ ಬಾಹ್ಯ ಹೂಡಿಕೆಯ ಅವಶ್ಯಕತೆ ಬಿದ್ದಾಗ, ಪ್ರವಾಸೋದ್ಯಮದಲ್ಲಿ ಆಸಕ್ತಿ ಇರುವವರಿಂದ ಬಂಡವಾಳ ಹಾಕಿಸಿಕೊಳ್ಳುತ್ತೇವೆ. ನಾವು ಈಗ ತಾನೇ ಈ ಕ್ಷೇತ್ರದ ಪಟ್ಟುಗಳನ್ನು ಕಲಿಯುತ್ತಿದ್ದೇವೆ. ಒಂದು ವರ್ಷದ ಬಳಿಕ, ನಾವು ಎತ್ತ ಪ್ರಯಾಣ ಮಾಡುತ್ತಿದ್ದೇವೆ ಎನ್ನುವುದನ್ನು ಪರಿಶೀಲಿಸುತ್ತೇವೆ ಎನ್ನುತ್ತಾರೆ" ರಣ್‍ದೀಪ್. "ನಾವು ಉತ್ತರದತ್ತ ಪ್ರಯಾಣಿಸುತ್ತಿದ್ದೇವೆ" ಎಂದು ನಗುತ್ತಾರೆ ಸಾಜಿಶ್.