ರೈತರ ಆತ್ಮಹತ್ಯೆ ತಡೆಗೆ ಜಲಜಾಗೃತಿ ಅಭಿಯಾನ : 17 ನದಿಗಳಿಗೆ ಮರುಜೀವ ಕೊಟ್ಟ ಮುಂಬೈ ಯುವಕರು   

ಟೀಮ್ ವೈ.ಎಸ್.ಕನ್ನಡ 

0

ಜಲ ಜಾಗೃತಿ ಅಭಿಯಾನ ಆರಂಭವಾಗಿದ್ದು 2013ರಲ್ಲಿ. ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನದ ಅಡಿಯಲ್ಲಿ ಇದನ್ನು ಆರಂಭಿಸಲಾಯ್ತು. ಅಂದಿನಿಂದ್ಲೂ ರೈತರು ಹಾಗೂ ಸ್ವಯಂ ಸೇವಕರು ರಾಜ್ಯದಲ್ಲಿ ತಲೆದೋರಿರುವ ನೀರಿನ ಸಮಸ್ಯೆ ನೀಗಿಸಲು ಶ್ರಮಿಸುತ್ತಿದ್ದಾರೆ. ಅದರಲ್ಲೂ ಲಾತುರ್ ಹಾಗೂ ಮರಾಠ್ವಾಡಾ ಬಗ್ಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ವಿಶೇಷ ಅಂದ್ರೆ ಕೇವಲ 3 ವರ್ಷಗಳಲ್ಲಿ ಜಲಜಾಗೃತಿ ಅಭಿಯಾನದ ಮೂಲಕ 3 ರಾಜ್ಯಗಳ 17 ನದಿಗಳ ಪುನಶ್ಚೇತನ ಮಾಡಲಾಗಿದೆ.

2016ರ ಆರಂಭದಲ್ಲಿ ಮಹಾರಾಷ್ಟ್ರ ಸರ್ಕಾರ ಅಧಿಕೃತವಾಗಿ ಬರಗಾಲ ತಲೆದೋರಿದೆ ಎಂದು ಪ್ರಕಟಿಸಿತ್ತು. ಯಾಕಂದ್ರೆ ರಾಜ್ಯದ 28,000 ಹಳ್ಳಿಗಳು ನೀರಿಲ್ಲದೆ ಬಣಗುಡ್ತಾ ಇದ್ವು. 2015ರಲ್ಲಿ 2000ಕ್ಕೂ ಹೆಚ್ಚು ರೈತರು ಇಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 2015ರಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ನಡೆದಿದ್ದು ಕೂಡ ಮಹಾರಾಷ್ಟ್ರದಲ್ಲಿ. ಅದರಲ್ಲೂ ಲಾತುರ್ನಲ್ಲಿ ಭೀಕರ ಬರಗಾಲ ಉಂಟಾಗಿದ್ರಿಂದ ಮತ್ತಷ್ಟು ಅನ್ನದಾತರು ಸಾವಿನ ಮನೆ ಸೇರುವಂತಾಯ್ತು. ಜಲಸಂಪನ್ಮೂಲಗಳ ಬಳಿ ಜನರು ಗುಂಪುಗುಂಪಾಗಿ ಸೇರದಂತೆ ಸರ್ಕಾರ ನಿರ್ಬಂಧ ಹೇರಿದ್ದರಿಂದ ಪರಿಸ್ಥಿತಿ ಇನ್ನೂ ಬಿಗಡಾಯಿಸಿತ್ತು. ವಾರಕ್ಕೊಮ್ಮೆ ಮಾತ್ರ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾರಂಭಿಸುತ್ತಿದ್ದಂತೆ ಗಲಭೆಗೂ ನಾಂದಿಯಾಯ್ತು.

ಮರಾಠ್ವಾಡ ಹಾಗೂ ಲಾತುರ್ ಕೃಷಿ ಶ್ರೀಮಂತ ಪ್ರದೇಶಗಳು. ಆದ್ರೆ ಬರ್ತಾ ಬರ್ತಾ ರೈತರ ಕೃಷಿ ವಿಧಾನವೇ ಬದಲಾಯ್ತು. ಹೆಚ್ಚು ಹಣ ಬರುವಂತಹ ಅಂದ್ರೆ ಕಬ್ಬು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾರಂಭಿಸಿದ್ರು. ಕಬ್ಬು ಬೆಳೆಯಲು 2,200 ಮಿಲಿ ಮೀಟರ್ ಮಳೆಯ ಅಗತ್ಯವಿದೆ. ಆದ್ರೆ ಮಹಾರಾಷ್ಟ್ರದಲ್ಲಿ ಕೇವಲ 600-700 ಮಿಲಿ ಮೀಟರ್ ಮಳೆಯಾಗ್ತಿದೆ. ಹಾಗಾಗಿ ನೀರಿನ ಕೊರತೆ ನೀಗಿಸಿಕೊಳ್ಳಲು ರೈತರು ಉಳಿದ ನೀರಿನ ಮೂಲಗಳನ್ನು ಬಳಸಿಕೊಳ್ಳಲಾರಂಭಿಸಿದ್ರು. ಬೋರ್ವೆಲ್ಗಳನ್ನು ಕೊರೆಸಿದ್ರಿಂದ ಭೂಮಿಯ ಆಳದಲ್ಲಿದ್ದ ನೀರು ಕೂಡ ಬತ್ತಿಹೋಯ್ತು. ರೈತರಿಗೆ ದಿಕ್ಕೇ ತೋಚದಂತಾಯ್ತು. ಇದೇ ಕಾರಣಕ್ಕೆ ಅನ್ನದಾತರು ಆತ್ಮಹತ್ಯೆ ನಿರ್ಧಾರಕ್ಕೆ ಬಂದ್ರು.

ಪರಿಹಾರ ಏನು?

ರೈತರ ಸರಣಿ ಆತ್ಮಹತ್ಯೆಗೆ ಬ್ರೇಕ್ ಹಾಕಲೇಬೇಕೆಂದು ಮುಂಬೈನ ಯುವಜನತೆ ಪಣತೊಟ್ಟರು. ಜಲಜಾಗೃತಿ ಅಭಿಯಾನದ ಅಡಿ ಅವರು ಅಲ್ಲಿನ ಸಮಸ್ಯೆ ಏನು ಅನ್ನೋದನ್ನೆಲ್ಲ ಆಳವಾಗಿ ತಿಳಿದುಕೊಳ್ಳಲು ಲಾತುರ್ಗೆ ಭೇಟಿ ನೀಡಿದ್ರು. ಸಂಪೂರ್ಣ ಒಣಗಿ ಹೋಗಿರುವ ನೀರಿನ ಮೂಲಗಳನ್ನೆಲ್ಲ ಪುನಶ್ಚೇತನಗೊಳಿಸಲು ಪಣತೊಟ್ಟರು. ಯೋಜನೆ ತ್ವರಿತ ಯಶಸ್ಸು ಪಡೆಯಲಿಲ್ಲ, ಆದ್ರೂ ವಿಶ್ವಾಸವಿಟ್ಟು ಅವರು ಪ್ರಯತ್ನ ಮುಂದುವರಿಸಿದ್ರು. ಈ ಯೋಜನೆ ಈಗ ಬೃಹತ್ ಸ್ವರೂಪ ಪಡೆದುಕೊಂಡಿದೆ. ನೀರಿನ ಪುನಶ್ಚೇತನದ ನಿರೀಕ್ಷೆಯಲ್ಲಿರುವ ಇತರ ಹಳ್ಳಿಗಳಿಗೂ ಲಾತುರ್ ಮಾದರಿಯಾಗಿದೆ.

ಇದನ್ನು ಸಾಧಿಸಿದ್ದು ಹೇಗೆ?

ಇದು ನಾಲ್ಕು ಹಂತದ ಯೋಜನೆ : ಮರುಸ್ಥಾಪನೆ, ಮರುಬಳಕೆ, ಮರುಬಳಕೆ, ಕಡಿಮೆ ಬಳಕೆ - ಇವನ್ನು ಅನುಸರಿಸಿದ್ರೆ ಯಶಸ್ಸು ಅತ್ಯಂತ ಸುಲಭ.ಅಷ್ಟೇ ಅಲ್ಲ ಸ್ವಯಂಸೇವಕರು ಹಳೆಯ ಕೃಷಿ ಮಾದರಿಯನ್ನೇ ಅನುಸರಿಸುವಂತೆ ಸಲಹೆ ನೀಡಿದ್ದಾರೆ. ಕಡಿಮೆ ನೀರು ಬಳಸಿ, ಸರಳವಾಗಿ ಪರಿಣಾಮಕಾರಿಯಾಗಿ ರೈತರು ಬೆಳೆ ಬೆಳೆಯಬಹುದು. ನೀರಿನ ಸಂರಕ್ಷಣೆ ಕೌಶಲ್ಯಗಳ ಬಗ್ಗೆ ಕೂಡ ಗ್ರಾಮಸ್ಥರಿಗೆ ತರಬೇತಿ ನೀಡಲಾಗಿದೆ. ನೀರಿನ ಮೂಲಗಳ ಮರುಸ್ಥಾಪನೆ, ಗಿಡ ನೆಡುವುದು ಇವರ ಗುರಿ. ಜೊತೆಗೆ ನೀರಿನ ಪ್ರಸರಣ ಹಾಗೂ ಸಾವಯವ ಕೃಷಿಯ ಬಗ್ಗೆ ರೈತರಲ್ಲಿ ಆಸಕ್ತಿ ಮೂಡಿಸಲು ಈ ಯುವಕರು ಸರ್ವಪ್ರಯತ್ನ ಮಾಡಿದ್ದಾರೆ.

ಕಳೆದ ತಿಂಗಳು ಜಲಜಾಗೃತಿ ಅಭಿಯಾನದ ಸಂಸ್ಥಾಪಕರಾದ ಶ್ರೀ ರವಿಶಂಕರ್ ಗುರೂಜಿ ಕೂಡ ಇಲ್ಲಿಗೆ ಭೇಟಿ ನೀಡಿದ್ರು. ``ರಜಾ ತೆಗೆದುಕೊಳ್ಳುವ ಬದಲು ರೈತರ ಜೊತೆಗೆ ಕಾಲ ಕಳೆಯಿರಿ. ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ಭಾರತ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಈ ಹಿಂದೆ ಕೂಡ ಎದುರಿಸಿದೆ. ಆದ್ರೆ ಇಷ್ಟೊಂದು ರೈತರು ಸಾವಿನ ಮನೆಗೆ ಸೇರಿರಲಿಲ್ಲ. ಅವರು ದೇವರಲ್ಲಿ ನಂಬಿಕೆ ಕಳೆದುಕೊಂಡಿದ್ದಾರೆ ಇಲ್ಲವೇ ಸಮಾಜದಲ್ಲಿ ಅವರಿಗೆ ಪ್ರೀತಿ ವಿಶ್ವಾಸ ಸಿಗುತ್ತಿಲ್ಲ. ಎಲ್ಲಿ ಪ್ರೀತಿ, ವಿಶ್ವಾಸ ಇರುತ್ತದೆಯೋ ಅಲ್ಲಿ ಎಲ್ಲ ಸಮಸ್ಯೆಗಳೂ ಬಗೆಹರಿಯುತ್ತವೆ'' ಅಂತಾ ಗುರೂಜಿ ಹಿತನುಡಿಗಳನ್ನು ಹೇಳಿದ್ರು.

ನಾವು ನಮ್ಮ ದಿನನಿತ್ಯದ ನಗರದ ಬದುಕಿನಲ್ಲಿ ರೈತರ ಕಷ್ಟಗಳನ್ನು ಮರೆತೇಬಿಡುತ್ತೇವೆ. ಹಾಗಾಗಿಯೇ ಜಲಜಾಗೃತಿ ಅಭಿಯಾನದ ಮೂಲಕ ಈ ಯುವಕರು ಜನಜಾಗೃತಿ ಮೂಡಿಸುತ್ತಿದ್ದಾರೆ. ಇನ್ನು ಕೆಲವು ಸ್ವಯಂಸೇವಕರು ರೈತರ ಸೇವೆಯಲ್ಲಿ ತೊಡಗಿದ್ದಾರೆ, ಎಲ್ಲೆಡೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಸ್ವಯಂಸೇವಕರ ಪರಾನುಭೂತಿ ಅನ್ನದಾತರಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದಲ್ಲಿ ಬದಲಾವಣೆ ತರಬಲ್ಲ, ಒಂದು ಮರ ನೆಡುವ ಮೂಲಕ ಈ ಕಾರ್ಯವನ್ನು ಆರಂಭಿಸಿ. ವ್ಯಕ್ತಿಗೊಂದು ಮರ ಎಂಬ ಗುರಿಯನ್ನು ತಲುಪಲು ಎಲ್ಲರೂ ಪ್ರಯತ್ನಿಸೋಣ. 

ಇದನ್ನೂ ಓದಿ...

ಅಂತರ್ಜಾಲವನ್ನು ಭಾರತೀಕರಣಗೊಳಿಸಲು ಏನು ಮಾಡಬೇಕು? 

ಭಾರತದ ಆರ್ಥಿಕತೆ....ಅಂದು..ಇಂದು 


Related Stories

Stories by YourStory Kannada