ನಾವು ಮರೆತ ಒಲಿಂಪಿಕ್ ಹೀರೋಗಳು..

ಟೀಮ್ ವೈ.ಎಸ್.ಕನ್ನಡ 

0

ಒಲಿಂಪಿಕ್ ಅಂದ್ರೇನೇ ಕ್ರೀಡಾಪ್ರೇಮಿಗಳಿಗೆಲ್ಲ ಹಬ್ಬವಿದ್ದಂತೆ. ಈ ಬಾರಿಯ ರಿಯೋ ಒಲಿಂಪಿಕ್ಸ್ ಭಾರತದ ಪಾಲಿಗೂ ಆಶಾಕಿರಣ. ಯಾಕಂದ್ರೆ 118 ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ದೀಪಾ ಕರ್ಮಾಕರ್ ಈಗಾಗ್ಲೇ ವಾಲ್ಟ್ ಫೈನಲ್​ಗೆ ಲಗ್ಗೆ ಇಟ್ಟಿರೋದ್ರಿಂದ ಪದಕದ ಆಸೆ ಚಿಗುರಿದೆ. ಇದೇ ಮೊದಲ ಭಾರಿಗೇನೂ ಭಾರತ ತನ್ನ ಅಥ್ಲೀಟ್​ಗಳ ಬಗ್ಗೆ ಹೆಮ್ಮೆ ಪಡುತ್ತಿಲ್ಲ. ವಿಜೇಂದರ್ ಸಿಂಗ್, ಮೇರಿ ಕೋಮ್, ಸುಶೀಲ್ ಕುಮಾರ್ ಸೇರಿ ಹಲವರು ಈಗಾಗ್ಲೇ ಭಾರತಕ್ಕೆ ಪದಕದ ಗರಿ ಮೂಡಿಸಿದ್ದಾರೆ. ಅದ್ರಲ್ಲೂ ಸಾಮಾಜಿಕ ಜಾಲ ತಾಣಗಳ ಮೂಲಕ ಅಥ್ಲೀಟ್​ಗಳನ್ನು ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ. ಆದ್ರೆ ಈ ವೈಭವವೆಲ್ಲ ಕ್ಷಣಿಕ ಅನ್ನೋದು ಕಹಿ ಸತ್ಯ. ಒಲಿಂಪಿಕ್ಸ್​ನಲ್ಲಿ ಸ್ವರ್ಣಪದಕ ಗೆದ್ರೆ ಅವರನ್ನು ಕೊಂಡಾಡುತ್ತೇವೆ, ಅದ್ಧೂರಿಯಾಗಿ ತವರಿಗೆ ಸ್ವಾಗತಿಸುತ್ತೇವೆ. ದಿನಕಳೆದಂತೆ ಇವೆಲ್ಲವೂ ಮಸುಕಾಗಿಬಿಡುತ್ತದೆ. ಭಾರತದ ಕ್ರೀಡಾಪಟುಗಳ ಪಾಲಿಗೆ ಈ ಗೌರವವೆಲ್ಲವೂ ಕ್ಷಣಿಕ. ಒಬ್ಬ ಕ್ರಿಕೆಟಿಗನಾಗಿ ದಾಖಲೆಗಳ ಶಿಖರ ನಿರ್ಮಿಸಿದ್ರೆ ಸ್ವಲ್ಪ ಕಾಲವಾದರೂ ಎಲ್ಲರ ಮನದಲ್ಲಿ ನಿಮ್ಮ ಸಾಧನೆ ನೆನಪಿನಲ್ಲಿರುತ್ತದೆ, ಬೇರೆ ಯಾವ ಕ್ರೀಡಾಪಟುಗಳಿಗೂ ಇಂತಹ ಗೌರವ ಗಗನ ಕುಸುಮ. ಈಗಾಗ್ಲೇ ದೇಶ ತನ್ನ ಮಹಾನ್ ಕ್ರೀಡಾಪಟುಗಳನ್ನು ಮರೆತೇಬಿಟ್ಟಿದೆ. ರಿಯೋ ಒಲಿಂಪಿಕ್ಸ್​​ನ ಈ ಸಂದರ್ಭದಲ್ಲಿ ಅವರನ್ನೊಮ್ಮೆ ನೆನಪು ಮಾಡಿಕೊಳ್ಳೋಣ.

ಖಶಬ ದಾದಾಸಾಹೇಬ್ ಜಾಧವ್

'ಪಾಕೆಟ್ ಡೈನಮೋ' ಎಂದೇ ಇವರು ಜನಪ್ರಿಯ. ಖಶಬ ದಾದಾಸಾಹೇಬ್ ಜಾಧವ್ ಒಲಿಂಪಿಕ್ಸ್​ನಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ. 1952ರಲ್ಲಿ ಹೆಲ್ಸಿಂಕಿಯಲ್ಲಿ ನಡೆದ ಸಮ್ಮರ್ ಒಲಿಂಪಿಕ್ಸ್​ಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಜಾಧವ್, ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು. ಇವರ ಪ್ರತಿಭೆ ಗುರುತಿಸಿ ತರಬೇತಿ ನೀಡಿದವರು ಇಂಗ್ಲೆಂಡ್​ನ ರೀಸ್ ಗಾರ್ಡ್ನರ್. ಆದ್ರೆ ತವರು ನೆಲ ಮಾತ್ರ ಜಾಧವ್ ಅವರನ್ನು ಮರೆತೇಬಿಟ್ಟಿದೆ. ಕ್ರೀಡಾಲೋಕದಲ್ಲಿ ಅವರಿಗೆ ಹೆಚ್ಚಿನ ಪ್ರೋತ್ಸಾಹ ಸಿಗಲೇ ಇಲ್ಲ. ಸಬ್ಇನ್ಸ್​ಪೆಕ್ಟರ್ ಆಗಿ ಪೊಲೀಸ್ ಇಲಾಖೆ ಸೇರಿದ ಅವರು ಅಸಿಸ್ಟಂಟ್ ಕಮಿಷನರ್ ಆಗಿ ನಿವೃತ್ತಿ ಹೊಂದಿದ್ರು. ವೃದ್ಧಾಪ್ಯದಲ್ಲಿ ಅವರಿಗೆ ನಿವೃತ್ತಿ ವೇತನವನ್ನೂ ನಿರಾಕರಿಸಲಾಗಿತ್ತು. 1984ರಲ್ಲಿ ನಡೆದ ಅಪಘಾತವೊಂದರಲ್ಲಿ ಅವರು ಸಾವನ್ನಪ್ಪಿದ್ರು. ಪದ್ಮ ಪ್ರಶಸ್ತಿಯಿಂದ ವಂಚಿತರಾದ ಏಕೈಕ ಭಾರತೀಯ ಒಲಿಂಪಿಯನ್ ಅಂದ್ರೆ ಖಶಬ ದಾದಾಸಾಹೇಬ್ ಜಾಧವ್. ಭಾರತಕ್ಕೆ ಮೊದಲ ಪದಕ ತಂದುಕೊಟ್ಟವರನ್ನು ಗೌರವಿಸದೇ ಇರುವುದು ಜಾಧವ್ ಮತ್ತವರ ಕುಟುಂಬಕ್ಕೆ ಮಾಡಿದ ಅವಮಾನ.

ಶಂಕರ್ ಲಕ್ಷ್ಮಣ್

ಭಾರತೀಯ ಹಾಕಿ ತಂಡದ ಚಾಣಾಕ್ಷ ಗೋಲ್ ಕೀಪರ್ ಶಂಕರ್ ಲಕ್ಷ್ಮಣ್ ಎಷ್ಟು ಜನರಿಗೆ ನೆನಪಿದ್ದಾರೆ? ಇವರು 1956, 1960, 1964ರಲ್ಲಿ ಒಲಿಂಪಿಕ್ನಲ್ಲಿ ಸ್ಪರ್ಧಿಸಿದ್ದ ಭಾರತ ಹಾಕಿ ತಂಡದ ನಾಯಕರಾಗಿದ್ದರು. 1966ರ ಬ್ಯಾಂಕಾಕ್ ಏಷ್ಯನ್ ಗೇಮ್ಸ್​ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟಿದ್ದಾರೆ. ಆದ್ರೆ ಈ ಸಾಧನೆಯನ್ನು ಬಹುಬೇಗ ದೇಶ ಮರೆತುಬಿಟ್ಟಿತ್ತು. ಸೇನೆ ಸೇರಿದ್ದ ಅವರು ಇಳಿವಯಸ್ಸಿನಲ್ಲಿ ಗ್ಯಾಂಗ್ರಿನ್​ಗೆ ತುತ್ತಾಗಿ ನರಕಯಾತನೆ ಅನುಭವಿಸಿದ್ರು. ಹಣದ ಕೊರತೆಯಿಂದ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ದುರಂತ ಅಂತ್ಯ ಕಂಡ್ರು. ದೇಶಕ್ಕೆ ಗೌರವ ತಂದುಕೊಟ್ಟ ಈ ಮಹಾನ್ ಕ್ರೀಡಾಪಟುವಿಗೆ ಅರ್ಹ ಗೌರವ ಕೊನೆಗೂ ದೊರೆಯಲೇ ಇಲ್ಲ.

ಸೀತಾ ಸಾಹು

ಕೇವಲ 15 ವರ್ಷದವರಿದ್ದಾಗ್ಲೇ ದೇಶಕ್ಕೆ ಹೆಮ್ಮೆ ತಂದುಕೊಟ್ಟವರು ಸೀತಾ ಸಾಹು. 2011ರಲ್ಲಿ ನಡೆದ ಅಥೆನ್ಸ್ ಸ್ಪೆಷಲ್ ಒಲಿಂಪಿಕ್ಸ್​ನಲ್ಲಿ ಸೀತಾ 2 ಕಂಚಿನ ಪದಕಗಳಿಗೆ ಭಾಜನರಾಗಿದ್ರು. 200 ಮೀಟರ್ ಹಾಗೂ 1600 ಮೀಟರ್ ರೇಸ್ನಲ್ಲಿ 3ನೇ ಸ್ಥಾನ ಪಡೆದಿದ್ರು. ಆ ಸಂದರ್ಭದಲ್ಲಿ 1 ಲಕ್ಷ ರೂಪಾಯಿ ಕೊಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದ್ರೆ 5 ವರ್ಷ ಕಳೆದರೂ ಸೀತಾ ಸಾಹು ಅವರಿಗೆ ನಯಾಪೈಸೆ ಸಿಕ್ಕಿಲ್ಲ. ಮಧ್ಯಪ್ರದೇಶದ ಈ ಯುವ ಪ್ರತಿಭೆ ಈಗ ತಾಯಿ ಜೊತೆಗೆ ಗೋಲ್ಗಪ್ಪಾ ಮಾರುತ್ತಿದ್ದಾಳೆ. ದೇಶಕ್ಕೆ ಪದಕ ತಂದುಕೊಟ್ಟ ಪ್ರತಿಭಾವಂತ ಅಥ್ಲೀಟ್ ಇಂತಹ ಸ್ಥಿತಿ ತಲುಪಿರುವುದಕ್ಕೆ ಕ್ರೀಡಾ ಸಚಿವಾಲಯದ ನಿರ್ಲಕ್ಷವೇ ಕಾರಣ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

ಮುರಳಿಕಾಂತ್ ಪೆಟ್ಕರ್

ಪೆಟ್ಕರ್ 1972ರಲ್ಲಿ ನಡೆದ ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 50 ಮೀಟರ್ ಫ್ರೀಸ್ಟೈಲ್ ಸ್ವಿಮ್ಮಿಂಗ್ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದರು. ಪೆಟ್ಕರ್ ಭಾರತೀಯ ಸೇನೆಗೆ ಅಪಾರ ಸೇವೆ ಸಲ್ಲಿಸಿದ್ದಾರೆ. 1965ರ ಭಾರತ-ಪಾಕಿಸ್ತಾನ ನಡುವಣ ಯುದ್ಧದಲ್ಲಿ ಗುಂಡೇಟು ತಿಂದಿದ್ದರು. ಆದ್ರೆ ಅದರಿಂದ ಕುಗ್ಗದೆ ಪರಿಶ್ರಮಪಟ್ಟು ತಮ್ಮ ಕ್ರೀಡಾಸಕ್ತಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದರು. ಆದ್ರೆ ಭಾರತ 1984ರಿಂದೀಚೆಗೆ ದಾಖಲೆಗಳನ್ನು ಪರಿಗಣಿಸಲಾರಂಭಿಸಿದೆ. ಹಾಗಾಗಿ ಮುರಳಿಕಾಂತ್ ಪೆಟ್ಕರ್ ಅವರ ದಾಖಲೆಗಳು ಅಧಿಕೃತವಾಗಿಲ್ಲ, ಅವರ ಹೆಸರು, ಸಾಧನೆ ಎಲ್ಲವನ್ನೂ ದೇಶ ಮರೆತಿದೆ.

ಕರ್ಣಂ ಮಲ್ಲೇಶ್ವರಿ

2000ನೇ ಇಸ್ವಿಯಲ್ಲಿ ಸಿಡ್ನಿಯಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ಇತಿಹಾಸ ನಿರ್ಮಿಸಿದವರು ಕರ್ಣಂ ಮಲ್ಲೇಶ್ವರಿ. ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಇವರು. ಸತತ 9 ವರ್ಷಗಳ ಕಾಲ ನ್ಯಾಶನಲ್ ಚಾಂಪಿಯನ್ ಆಗಿದ್ದ ಮಲ್ಲೇಶ್ವರಿ, ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. 1995ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ, 199ರಲ್ಲಿ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿರುವ ಕರ್ಣಂ ಮಲ್ಲೇಶ್ವರಿ ಅವರನ್ನು ಈಗ ಎಷ್ಟು ಜನ ನೆನಪಿನಲ್ಲಿಟ್ಟುಕೊಂಡಿದ್ದಾರೆ?

ಇದನ್ನೂ ಓದಿ...

ಬೆಂಗಳೂರನ್ನು ಕೈ ಬಿಟ್ಟು ಉದ್ಯಮ ಆರಂಭಿಸಿ- ಸ್ಟಾರ್ಟ್​ಅಪ್​ ಲೋಕದಲ್ಲಿ ಯಶಸ್ಸು ಪಡೆಯಿರಿ

ಸಾರ್ವಜನಿಕ ಸಾರಿಗೆ - ಲೈಂಗಿಕ ಕಿರುಕುಳದ ಮತ್ತೊಂದು ಹಾಟ್​ಸ್ಪಾಟ್!