ಗ್ರಾಹಕರ ಕೈಗೆಟುಕುವ ದರದಲ್ಲಿ ಸಗಟು ಉತ್ಪನ್ನಗಳನ್ನು ತಲುಪಿಸುತ್ತಿದೆ ಬೆಂಗಳೂರು ಮೂಲದ ಟ್ವಿಕ್‌ಸ್ಟರ್

ಟೀಮ್​ ವೈ.ಎಸ್​.

0

ಇ- ಕಾಮರ್ಸ್ ಭಾರತದಲ್ಲಿ ಹಿಂದೆಂದೂ ಇಲ್ಲದಷ್ಟು ದೊಡ್ಡ ಮಟ್ಟದ ಅವಕಾಶಗಳನ್ನು ಗ್ರಾಹಕರಿಗೆ ಸೃಷ್ಟಿಸಿದೆ. ಇದು ಸಣ್ಣ ಹಾಗೂ ಮಧ್ಯಮ ಸಗಟು ವ್ಯಾಪಾರಿಗಳಿಗೆ ಒಳ್ಳೆಯ ಅವಕಾಶ ಸೃಷ್ಟಿಸುವ ಜೊತೆಗೆ ಭೌಗೋಳಿಕವಾಗಿಯೂ ಉತ್ಪನ್ನಗಳ ಸುಲಭ ಸಾಗಾಣಿಕೆಗೆ ಸೌಕರ್ಯ ಒದಗಿಸಿದೆ.

31 ವರ್ಷದ ನಮ್ರತಾ ಸೋನಿ ಅಮೆರಿಕದ ವೆಲ್ಸ್​​ಫರ್ಗೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ಇ-ಕಾಮರ್ಸ್ ಟ್ರೆಂಡ್ ವೇಗವಾಗಿ ಹಬ್ಬುತ್ತಿರುವುದನ್ನು ಗಮನಿಸಿದ್ದರು. ನಮ್ರತಾರ ಸ್ನೇಹಿತೆ ಹಾಗೂ ಸಹೋದ್ಯೋಗಿ ಪ್ರಿಯಾ ರಾಮಕೃಷ್ಣನ್ ಸಹ ಬದಲಾಗುತ್ತಿರುವ ಈ ಮಾರುಕಟ್ಟೆ ವಿದ್ಯಮಾನವನ್ನು ಗಮನಿಸಿದ್ದರು. ನಮ್ರತಾ ಭಾರತಕ್ಕೆ ಮರಳಿ ಸಣ್ಣ ಭಾರತೀಯ ಕಿರಾಣಿ ಅಂಗಡಿಗಳ ಮಾಲಿಕರ ಒಂದು ಪ್ಲಾಟ್‌ಫಾರಂ ಸಿದ್ಧಪಡಿಸುವ ಯೋಜನೆ ಹೆಣೆದರು. ಇಲ್ಲಿ ಸಣ್ಣ ಸಣ್ಣ ಚಿಲ್ಲರೆ ವ್ಯಾಪಾರಿಗಳಿಗೆ ಆಧುನಿಕ ಸಗಟು ವ್ಯಾಪಾರ ಸ್ಪರ್ಧೆಯಲ್ಲಿ ಪೈಪೋಟಿ ನಡೆಸುವ ಸಾಮರ್ಥ್ಯ ಇಲ್ಲದೇ ಇದ್ದಿದ್ದು ಈ ಯೋಜನೆ ಆರಂಭಿಸಲು ಕಾರಣವಾಗಿತ್ತು.

ನಮ್ರತಾ ತಮ್ಮ ಟ್ವಿಕ್‌ಸ್ಟರ್ ಇ-ಕಾಮರ್ಸ್ ಸಂಸ್ಥೆಯನ್ನು ಆರಂಭಿಸಿದ್ದೇ ಭಾರತೀಯ ಸಣ್ಣ ಹಾಗೂ ಮಧ್ಯಮ ವರ್ಗದ ಕಿರಾಣಿ ವ್ಯಾಪಾರಿಗಳಿಗಾಗಿ. ಆನ್‌ಲೈನ್ ಮಾರಾಟದಲ್ಲಿಯೂ ಸುಲಭ, ಸರಳ ಹಾಗೂ ಕೈಗೆಟುಕುವ ದರದಲ್ಲಿ ವಹಿವಾಟು ನಡೆಸುವ ಬಿಸಿನೆಸ್ ಮಾದರಿಯನ್ನು ನಮ್ರತಾ ಸೃಷ್ಟಿ ಮಾಡಿದರು.

ಪೂರ್ಣ ಪ್ರಮಾಣದ ಪೂರೈಕೆ:

ಟ್ವಿಕ್‌ಸ್ಟರ್ ತನ್ನ ಸರ್ವಾಂಗೀಣ ಯೋಜನೆಯಂತೆ 360 ಡಿಗ್ರಿ ಪ್ಲಾನ್ ಜಾರಿಗೊಳಿಸಿತು. ಇದರಿಂದ ಇ-ಕಾಮರ್ಸ್ ಕ್ಷೇತ್ರದಲ್ಲಿ ಸುಲಭ ಪ್ರವೇಶ ದೊರೆಯುವುದರೊಂದಿಗೆ ಬೆಳವಣಿಗೆ ಹಾಗೂ ವಿಸ್ತಾರಕ್ಕೆ ಬೇಕಿದ್ದ ಅಗತ್ಯ ವ್ಯಾಪಾರಿ ಟೂಲ್ ಸಹ ಸಿಕ್ಕಿತು. ಇದು ಸಣ್ಣ ಅಂಗಡಿಗಳ ಮಾಲಿಕರಿಗೆ ಹಾಗೂ ಆನ್‌ಲೈನ್ ವಹಿವಾಟು ನಡೆಸುವ ಗ್ರಾಹಕರಿಗೆ ಸಂಪೂರ್ಣ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿತು. ಆನ್‌ಲೈನ್ ಮಾರುಕಟ್ಟೆಯ ನಿರ್ವಹಣೆಗೆ ಅಗತ್ಯವಿರುವ ವ್ಯಾಪಾರಿ ಮೈತ್ರಿಗಳು, ಲಾಜಿಸ್ಟಿಕ್ ನಿರ್ವಹಣೆ, ತಂತ್ರಜ್ಞಾನ ಹಾಗೂ ಫೀಲ್ಡ್ ಆಪರೇಶನ್ಸ್‌ ಗಳತ್ತ ಸಂಸ್ಥೆ ಸಂಪೂರ್ಣ ಗಮನ ನೀಡಿತು.

ಮಾರುಕಟ್ಟೆಯಲ್ಲಿ ಮ್ಯಾಗ್ನೆಟೋ, ಶಾಫಿಫೈ, ಪ್ರೆಸ್ಟಾ ಶಾಪ್‌ಗಳಂತಹ ಬೇರೆ ಉದ್ಯಮಗಳೂ ಟ್ವಿಕ್‌ಸ್ಟರ್‌ಗಿಂತ ಮುಂಚೆಯೇ ಕಾರ್ಯಾಚರಣೆ ನಡೆಸುತ್ತಿದ್ದವು. ನಮ್ರತಾ ಹೇಳುವಂತೆ ಟ್ವಿಕ್ ಸ್ಟರ್ ವಿಭಿನ್ನ ಆಲೋಚನೆಯೊಂದಿಗೆ ಸುಲಭ ದರ ವಿಂಗಡಣೆಯ ಮಾದರಿ ಅನುಸರಿಸಿತು. ಹೀಗಾಗಿ ಪ್ರಸಿದ್ಧ ಇ-ಕಾಮರ್ಸ್ ಸಂಸ್ಥೆಗಳಿಗೂ ಕೊಂಚ ಮಟ್ಟಿನ ಹಿನ್ನಡೆಯಾಯಿತು. ಭಾರತದಲ್ಲಿ ತಿಂಗಳ ಅನ್ವಯ ಚಂದಾದಾರಿಕೆಯ ಯೋಜನೆ ಚಾಲ್ತಿಯಲ್ಲಿತ್ತು. ಪ್ರತಿ ತಿಂಗಳ ಆರಂಭದಲ್ಲಿ ಗ್ರಾಹಕರು ತಮಗೆ ಅನುಕೂಲವಾದ ಪ್ಯಾಕೇಜ್‌ಗೆ ಸಬ್‌ಸ್ಕ್ರೈಬ್ ಆಗಿ ಇ-ಕಾಮರ್ಸ್ ವಹಿವಾಟು ನಡೆಸಬಹುದಿತ್ತು. ಆದರೆ ಈ ಯೋಜನೆಯಲ್ಲಿ ಎಲ್ಲವೂ ಕಡಿಮೆ ದರದಲ್ಲಿ ಲಭ್ಯವಿರುತ್ತಿರಲಿಲ್ಲ. ಇದರಿಂದ ವಾರ್ಷಿಕ 60ರಿಂದ 84 ಸಾವಿರದಷ್ಟು ವ್ಯಯವಾಗುತ್ತಿತ್ತು. ಈ ಮಾದರಿ ಜೊತೆ ಸಣ್ಣ ಹಾಗೂ ಮಧ್ಯಮ ವರ್ಗದ ಚಿಲ್ಲರೆ ವ್ಯಾಪಾರಿಗಳು ಪೈಪೋಟಿ ನಡೆಸಲು ಸಾಧ್ಯವಿರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ ನಮ್ರತಾ.

ಟ್ವಿಕ್‌ಸ್ಟರ್ ಮೂರು ವಿಭಿನ್ನ ಮಾದರಿಯ ದರ ನೀತಿಯನ್ನು ಗ್ರಾಹಕರಿಗೆ ಪರಿಚಯಿಸಿತು. ಇದರ ಬೇಸಿಕ್ ಯೋಜನೆ ಟ್ವಿಕ್‌ಸ್ಟರ್ ಗೋ-ನಲ್ಲಿ ಯಾರಾದರೂ ಯಾವುದೇ ತಿಂಗಳ ಚಂದಾದಾರಿಕೆಯ ಗೋಜಿಲ್ಲದೇ ಸುಲಭ,ಸುಲಲಿತ ಆನ್‌ಲೈನ್ ಅಕೌಂಟ್ ಸೃಷ್ಟಿಸಬಹುದು. ಇಲ್ಲಿ ಬಳಕೆದಾರರು ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ವಿಶೇಷ ಹಾಗೂ ಪರಿಣಿತ ಸೇವೆಗಳು, ಸಹಾಯ ಮತ್ತು ಅವಶ್ಯಕತೆಗಳಿಗೆ ಮಾತ್ರ ಪಾವತಿ ಮಾಡಬಹುದೇ ವಿನಃ ಬಲವಂತವಾಗಿ ಖರೀದಿಸಲೇಬೇಕಾದ ತಿಂಗಳ ಚಂದಾದಾರಿಕೆಯ ರಗಳೆ ಇಲ್ಲ ಎಂದು ತಮ್ಮ ಸಂಸ್ಥೆಯ ಯೋಜನೆಯನ್ನು ವಿವರಿಸಿದ್ದಾರೆ ನಮ್ರತಾ.

ಟ್ವಿಕ್‌ಸ್ಟರ್ ಪ್ರಾಧಾನಿತ ಯೋಜನೆ ಸಹ ಹೊಂದಿದ್ದು, ಸಣ್ಣ, ಒಮ್ಮೆ ಮಾತ್ರ ವಿನಿಯೋಗಿಸಬಹುದಾದ ಪಾವತಿ ಇದರಲ್ಲಿದೆ. ವಾರ್ಷಿಕ ನಿರ್ವಹಣಾ ವೆಚ್ಚ ಸಂಸ್ಥೆಯ ಶೇಖರಣಾ ವ್ಯವಸ್ಥೆ ಇನ್ನಿತರ ಮೌಲ್ಯಾಧಾರಿತ ಸೌಕರ್ಯಕ್ಕೆ ವಿನಿಯೋಗವಾಗಲಿದ್ದು ಗ್ರಾಹಕರ ಪ್ರತಿದಿನದ ಕಾರ್ಯಾಚರಣೆಗೆ ಕಿಂಚಿತ್ತೂ ತೊಡಕಾಗಲಾರದು.

2013ರ ಡಿಸೆಂಬರ್‌ನಲ್ಲಿ ನಮ್ರತಾ ಟ್ವಿಕ್‌ಸ್ಟರ್ ಸಂಸ್ಥೆಯ ಯೋಜನೆಯನ್ನು ಅಭಿವೃದ್ಧಿಪಡಿಸತೊಡಗಿದರು. ಮೇ 2014ರಲ್ಲಿ ಇದರ ಪ್ರಥಮ ಪ್ರಯೋಗ ಲಾಂಚ್ ಆಯಿತು. ಅಲ್ಲಿಂದ ಶುರುವಾದ ಅವರ ಉದ್ಯಮ ಯಾನದಲ್ಲಿ ನಮ್ರತಾ ವ್ಯಾವಹಾರಿಕ ನೀತಿಯನ್ನು ಸಂಪೂರ್ಣವಾಗಿ ಅರಿತಿದ್ದಾರೆ. ಮೇ 2015ರಲ್ಲಿ ಇ-ಕಾಮರ್ಸ್ ತಂತ್ರಜ್ಞಾನದಲ್ಲಿ ವ್ಯವಹರಿಸುವ ಅಂತಿಮ ದರನೀತಿ ಸಿದ್ಧಪಡಿಸಿಕೊಂಡ ಅವರ ಸಂಸ್ಥೆ ಅಲ್ಲಿಂದ ಈಚೆಗೆ ದರ ಬದಲಾವಣೆ ಒಳಗೊಂಡಂತೆ, ಸಣ್ಣ ಅಂಗಡಿಗಳ ಮಾಲಿಕರು ಹಾಗೂ ಆನ್‌ಲೈನ್ ಸ್ಟೋರ್ ಗ್ರಾಹಕರ ಅಗತ್ಯತೆಗಳನ್ನು ಅರ್ಥಮಾಡಿಕೊಂಡು ನಿಧಾನವಾಗಿ ಒಂದೊಂದೇ ಹೆಜ್ಜೆ ಮುಂದಿಡುತ್ತಿದೆ.

ಸದ್ಯ ನಾವು ಕೆಲವು ಲಾಜಿಸ್ಟಿಕ್ ಕಂಪನಿಗಳು, ಪೇಮೆಂಟ್ ಗೇಟ್‌ವೇ ಹಾಗೂ ಇನ್‌ಸ್ಟಾಮೋಜೋ ನಂತಹ ಕೆಲವು ಯುನಿಕಾಮರ್ಸ್ ಪ್ಲಾಟ್‌ಫಾರಂ ಹೊಂದಿರುವ ಮಾರುಕಟ್ಟೆ ಸಹಭಾಗಿಗಳ ಜೊತೆ ವ್ಯವಹಾರ ಇಟ್ಟುಕೊಂಡಿದ್ದೇವೆ ಎಂದು ಸಂಸ್ಥೆಯ ಕಾರ್ಯಾಚರಣೆ ಬಗ್ಗೆ ತಿಳಿಸಿದ್ದಾರೆ ನಮ್ರತಾ.

ಸವಾಲುಗಳು..

ಸಂಸ್ಥೆಯನ್ನು ನಮ್ರತಾ ಸ್ಥಾಪಿಸಿದ್ದು ಅವರ ಉಳಿತಾಯದ ಮೂಲಬಂಡವಾಳದಿಂದ. ಪ್ರಾಥಮಿಕ ಹಂತದಲ್ಲಿ ಪ್ರಿಯಾ ಸಹ ಸಂಸ್ಥೆಯಲ್ಲಿ ಹೂಡಿಕೆ ಮಾಡಿದರು. ಆದರೆ ಬಂಡವಾಳ ಹೂಡಿಕೆ ಅವರಿಗೆ ದೊಡ್ಡ ಸವಾಲಾಗಿರಲಿಲ್ಲ. ಬದಲಿಗೆ ನಮ್ರತಾ ತಿಳಿಸಿರುವಂತೆ ಸರಿಯಾದ ಮುಖ್ಯ ತಾಂತ್ರಿಕ ಅಧಿಕಾರಿ ನೇಮಕ ಹಾಗೂ ಸಮರ್ಥ ಕೆಲಸಗಾರರನ್ನು ಹುಡುಕಿ ಅವರಿಂದ ಸಂಸ್ಥೆಗೆ ಬೇಕಿದ್ದ ಕೌಶಲ್ಯಗಳನ್ನು ಪಡೆದುಕೊಳ್ಳುವುದು ನಿಜವಾದ ಹಾಗೂ ದೊಡ್ಡ ಸವಾಲಾಗಿತ್ತು. ಬಹಳಷ್ಟು ಹುಡುಕಾಟದ ನಂತರ ಅವರಿಗೆ ವಿನಯ್ ಸೈನಿ ಪರಿಚಯವಾಯಿತು. ಸೈನಿ, ಟ್ವಿಕ್‌ಸ್ಟರ್‌ನ ಸಹಸಂಸ್ಥಾಪಕರು ಹಾಗೂ ಸಿಟಿಓ(ಮುಖ್ಯ ತಾಂತ್ರಿಕ ಅಧಿಕಾರಿ) . ನಮ್ರತಾ ವಿವಿಧ ರಾಜ್ಯಗಳ ವಿವಿಧ ಸಂಸ್ಕೃತಿಯ ಜನರೊಂದಿಗೆ ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಆದರೂ ಒಪ್ಪಿಕೊಂಡ ಕಾಲಮಿತಿಯಲ್ಲಿ ಕೆಲಸ ಮುಗಿಸದ ಸಂಸ್ಥೆ ಹಾಗೂ ಉದ್ಯೋಗಿಗಳ ವರ್ತನೆಯಿಂದ ಬೇಸತ್ತಿದ್ದರು. ಹೀಗಾಗಿ ಟ್ವಿಕ್‌ ಸ್ಟರ್, ಭಾರತೀಯ ವಾತಾವರಣದಲ್ಲೂ ಒಪ್ಪಿಕೊಂಡ ಸಮಯದಲ್ಲೇ ತನ್ನ ಕೆಲಸ ಮುಗಿಸಬೇಕು ಅನ್ನುವ ಕಟ್ಟುನಿಟ್ಟಿನ ಯೋಜನೆ ನಮ್ರತಾರದ್ದಾಗಿತ್ತು. ಇಂದು 8 ಜನರ ತಂಡವಿರುವ ಟ್ವಿಕ್‌ಸ್ಟರ್ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಮುಂದಿನ 6 ತಿಂಗಳಿನಲ್ಲಿ ತಂಡವನ್ನು ವಿಸ್ತರಿಸಿ ನಿರಂತರವಾಗಿ ಯೋಜನೆಗಳನ್ನು ಅಭಿವೃದ್ಧಿಪಡಿಸಿ ಬಂಡವಾಳ ಹೂಡಿಕೆ ಹೆಚ್ಚಿಸುವುದು ಇದರ ಗುರಿ. ದೆಹಲಿ, ಜೈಪುರ, ಹರಿದ್ವಾರ, ಬೆಂಗಳೂರು ಮತ್ತು ಮೈಸೂರು ಸದ್ಯ ಟ್ವಿಕ್‌ಸ್ಟರ್​​ನ ಮುಖ್ಯ ಗುರಿಯಾಗಿದೆ. ಶೀಘ್ರದಲ್ಲೇ ಉಳಿದ ಮುಖ್ಯನಗರಗಳಲ್ಲಿ ಶಾಖೆಗಳನ್ನು ವಿಸ್ತರಿಸುವ ಯೋಜನೆ ಹೊಂದಿದೆ.

ಟ್ವಿಕ್‌ಸ್ಟರ್‌ನ ಗ್ರಾಹಕ ಉತ್ಪನ್ನಗಳಲ್ಲಿ ಮುಖ್ಯವಾಗಿ ಕಲಾತ್ಮಕ ವಸ್ತುಗಳು, ಜವಳಿ ಉತ್ಪನ್ನಗಳು ಹಾಗೂ ಸಗಟು ಗೃಹೋಪಯೋಗಿ ವಸ್ತುಗಳ ಜೊತೆ ಕರಕುಶಲವಸ್ತುಗಳ ಪಟ್ಟಿ ಇದೆ. ಟ್ವಿಕ್‌ಸ್ಟರ್‌ನಲ್ಲಿ ಕಲಾವಿದರಿಗೆ ಅನುಕೂಲವಾಗುವಂತೆ ಆರ್ಟ್‌ಸ್ಪೇಸ್ ಪ್ರಾರಂಭಿಸಿದ್ದು, ಮುಂದಿನ ವರ್ಷ ಈ ಎಲ್ಲಾ ವಿಭಾಗಗಳಲ್ಲೂ ಸಂಪೂರ್ಣ ಗಮನ ಹರಿಸಲು ಸಿದ್ಧವಿದೆ.

ಇ-ಕಾಮರ್ಸ್‌ನ ಬೂಮ್

ಇತ್ತೀಚಿನ ಪಿಡಬ್ಲ್ಯುಸಿ ವರದಿ ಪ್ರಕಾರ ಭಾರತದಲ್ಲಿ ಇ-ಕಾಮರ್ಸ್ ಉದ್ಯಮ ಶೇ.34ರಷ್ಟು ಪ್ರಗತಿ ಹೊಂದಿದೆ. 2009ರಿಂದ ಇಲ್ಲಿಯವರೆಗೆ ಸುಮಾರು16.4 ಬಿಲಿಯನ್ ಡಾಲರ್ ವಹಿವಾಟು ನಡೆಸಿದೆ. ಪ್ರಸ್ತುತ ಇ- ಟ್ರಾವೆಲ್ ಶೇ.70ರಷ್ಟು ಇ-ಕಾಮರ್ಸ್ ಮಾರುಕಟ್ಟೆಯ ಷೇರುಗಳನ್ನು ಆಕ್ರಮಿಸಿಕೊಂಡಿದೆ. ಕಳೆದ 5 ವರ್ಷಗಳಲ್ಲಿ ಆನ್‌ಲೈನ್ ಸಗಟು ಮಾರಾಟ ಹಾಗೂ ಆನ್‌ಲೈನ್ ವಹಿವಾಟು ಅತ್ಯಂತ ವೇಗವಾಗಿ ದಾಪುಗಾಲಿಡುತ್ತಿದ್ದು ಶೇ.56ರಷ್ಟು ಪ್ರಗತಿ ಸಾಧಿಸಿದೆ.

ತನ್ನ ಹೂಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಟ್ವಿಕ್‌ಸ್ಟರ್‌ನಂತಹ ಆನ್‌ಲೈನ್ ಮಾರಾಟದ ಸಂಸ್ಥೆಗಳು ಆಫ್‌ಲೈನ್ ಸಗಟು ವ್ಯಾಪಾರಿಗಳಿಗೆ ಅತೀ ದೊಡ್ಡ ಅವಕಾಶ ತೆರೆದಿಟ್ಟಿದೆ. ಆನ್‌ಲೈನ್ ಸ್ಟೋರ್‌ನಲ್ಲಿ ಸಹಕಾರ ಹಾಗೂ ಸೇವೆಗಳನ್ನು ಒದಗಿಸುವ ಮೂಲಕ ಈ ಉದ್ಯಮ ಸಣ್ಣ, ಮಧ್ಯಮ ವ್ಯಾಪಾರಿಗಳಿಗೆ ಮಾರಾಟದ ಹೊಸ ಆಯಾಮ ಕಲ್ಪಿಸಿದೆ. ಸುಲಭ ಮಾದರಿಯ ದರದ ವಿಂಗಡಣೆ ಆನ್‌ಲೈನ್ ಸಗಟು ಮಾರುಕಟ್ಟೆಯಲ್ಲಿ ಟ್ವಿಕ್‌ಸ್ಟರ್ ಸಂಸ್ಥೆಗೆ ಪ್ರತ್ಯೇಕ ಸ್ಥಾನ ಒದಗಿಸಿಕೊಟ್ಟಿದೆ. ಟ್ವಿಕ್‌ಸ್ಟರ್‌ನಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಕೆಲವು ಕಲಾತ್ಮಕ ಕೃತಿಗಳ ಮಾರಾಟಗಾರರು, ಕಿಲಿಶಾಪ್ ಹಾಗೂ ಕ್ಯಾಂಡಿಶೆಲ್ವ್‌ ಆಸಕ್ತರಾಗಿದ್ದಾರೆ. ಈ ನಿಟ್ಟಿನಲ್ಲಿ ಕ್ರಮೇಣ ಟ್ವಿಕ್‌ಸ್ಟರ್ ತನ್ನ ನೆಲೆಯನ್ನು ಭದ್ರಗೊಳಿಸತೊಡಗಿದೆ.