ಮ್ಯಾಕರೂನ್‌ಗಳನ್ನು ಮಾಡುವ ಮೂಲಕ ಮುಂಬೈನ ಪೇಸ್ಟ್ರಿ ಉದ್ಯಮ ಜಗತ್ತನ್ನೇ ಬದಲಿಸಿದ್ದು ಓರ್ವ ಮಹಿಳೆ ಎಂದರೆ ನೀವು ನಂಬಲೇಬೇಕು. ಆ ಮಹಿಳೆಯೇ ಪೂಜಾ ಧಿಂಗ್ರಾ. ಪೂಜಾ ಧಿಂಗ್ರಾ ಮೊದಲು ಅಡುಗೆ ಮನೆಗೆ ಕಾಲಿಟ್ಟಿದ್ದು ತನ್ನ 6ನೇ ವಯಸ್ಸಿನಲ್ಲಿ. ಆಗ ಅವರ ಆಂಟಿ ಪೂಜಾರಿಗೆ ಬ್ರೌನಿಗಳನ್ನು ಮಾಡುವುದನ್ನು ಹೇಳಿಕೊಟ್ಟಿದ್ದರು. ಇದರಲ್ಲಿ ಆಸಕ್ತಿ ಕಂಡುಕೊಂಡ ಪೂಜಾ, ಕುಟುಂಬಸ್ಥರು ಮತ್ತು ಸ್ನೇಹಿತರಿಗಾಗಿ ಅಡುಗೆ ಮಾಡುತ್ತಿದ್ದರು. ಪ್ರತಿ ವಾರಾಂತ್ಯದಲ್ಲೂ ಗುಡ್ಡೀಸ್‌ಗಳನ್ನು ಮಾಡುತ್ತಿದ್ದ ಪೂಜಾ ಅದನ್ನು ಶಾಲೆಗೆ ತೆಗೆದುಕೊಂಡು ಹೋಗಿ ಹಂಚುತ್ತಿದ್ದದ್ದನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ಸದ್ಯಕ್ಕೆ ಪೂಜಾ, ಪ್ರಖ್ಯಾತ ಪೆಟಿಸ್ಸೆರಿ ಸರಣಿಯ ಮಾಲೀಕರು. ಪೂಜಾರ ಮೊದಲ ಪುಸ್ತಕದ ಬಿಗ್ ಬುಕ್ ಆಫ್ ಟ್ರೀಟ್ಸ್ ಗೆ ವರ್ಲ್ಡ್ ಗೌರ್ಮ್ಯಾಂಡ್ ಕುಕ್ ಬುಕ್ ಅವಾರ್ಡ್‌ನಲ್ಲಿ ದ್ವಿತೀಯ ಬಹುಮಾನ ಲಭಿಸಿದೆ. ಅಲ್ಲದೇ ಪೂಜಾ ಸ್ಟುಡಿಯೋ 15 ಎಂಬ ಪಾಕಶಾಲೆಯನ್ನೂ ನಡೆಸುತ್ತಿದ್ದು ಈ ಶಾಲೆಯಲ್ಲಿ ಭಾರತದ ಹಲವು ಭಾಗಗಳ ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
ಅತ್ಯುತ್ತಮ ಮೂಲಗಳಿಂದ ಕಲಿಕೆ
ಮೊದಲು ಬಾಂಬೆ ಸ್ಕಾಟಿಶ್ ಸ್ಕೂಲ್‌ಗೆ ದಾಖಲಾದ ಪೂಜಾ ನಂತರ ಜೈ ಹಿಂದ್ ಕಾಲೇಜ್‌ನಲ್ಲಿ 2 ವರ್ಷ ವಿದ್ಯಾಭ್ಯಾಸ ಮುಗಿಸಿದರು. ಮೊದಲು ಲಾ ಓದಬೇಕೆಂಬ ಬಯಕೆಯಿಂದ ಲಾ ಸ್ಕೂಲ್‌ಗೆ ಸೇರಿದ ಪೂಜಾ ಎರಡೇ ವಾರಗಳಲ್ಲಿ ಓದಿಗೆ ಟಾಟಾ ಹೇಳಿದರು. ಕಾನೂನಿಗೂ ತಮಗೂ ಸರಿಹೋಗುವುದಿಲ್ಲ ಎಂದು ಅರಿತ ಅವರು ಸ್ವಿಟ್ಜರ್ ಲೆಂಡ್‌ನ ಕೇಸರ್ ರಿಟ್ಸ್ ಕಾಲೇಜಿನಲ್ಲಿ ಹಾಸ್ಪಿಟಾಲಿಟಿ ಮ್ಯಾನೇಜ್ ಮೆಂಟ್ ಕೋರ್ಸ್‌ಗೆ ದಾಖಲಾದರು. ಸ್ವಿಟ್ಜರ್ಲೆಂಡ್‌ನಲ್ಲಿ ಓದುತ್ತಿದ್ದ ವೇಳೆಯಲ್ಲಿ ತಮ್ಮ ಆಸಕ್ತಿಯ ಕ್ಷೇತ್ರವನ್ನು ಸರಿಯಾಗಿ ಗುರುತಿಸಿಕೊಂಡರು. ಹೀಗಾಗಿ ಅವರು ಪ್ಯಾರಿಸ್‌ನ ಲೇ ಕಾರ್ಡನ್ ಬ್ಲ್ಯು ಕಾಲೇಜಿಗೆ ದಾಖಲಾಗಿ ಫ್ರೆಂಚ್ ಪೇಸ್ಟ್ರಿ ವಿಚಾರದಲ್ಲಿ ಡಿಪ್ಲೋಮಾ ಪದವೀಧರರಾದರು.
ಮ್ಯಾಕರೂನ್ ಆರಂಭವಾದದ್ದು ಹೇಗೆ?
ಪ್ಯಾರಿಸ್‌ನಲ್ಲಿ ಓದುತ್ತಿದ್ದ ವೇಳೆಯಲ್ಲೇ ಪೂಜ್ಯಾಟೋ ಎಂಬ ಪೇಸ್ಟ್ರಿಯಂತಹ ತಿನಿಸನ್ನು ಆಸ್ವಾದಿಸುವ ಅವಕಾಶ ಪೂಜಾಗೆ ದೊರೆಯಿತು. ಈ ಪೂಜ್ಯಾಟೋ ಭಾರತದಲ್ಲಿ ದೊರೆಯುತ್ತಿರಲಿಲ್ಲ. ಪ್ಯಾರಿಸ್‌ಗಿಂತ ಮೊದಲು ತಾವೆಲ್ಲೂ ಮ್ಯಾಕರೂನ್‌ಗಳ ರುಚಿಯನ್ನು ಸವಿದಿರಲಿಲ್ಲ. ಇಂಥದ್ದನ್ನು ಭಾರತದಲ್ಲೇಕೆ ಮಾಡುವುದಿಲ್ಲ ಎಂಬ ವಿಚಾರ ಪೂಜಾರವರಿಗೆ ಆಶ್ಚರ್ಯಕರ ಸಂಗತಿಯಾಗಿತ್ತು. ಹೀಗಾಗಿ ಭಾರತಕ್ಕೆ ಹಿಂದಿರುಗಿದ ಬಳಿಕ ಮ್ಯಾಕರೂನ್‌ಗಳ ರುಚಿಯನ್ನು ಭಾರತೀಯರಿಗೆ ತೋರಿಸುವ ಯೋಜನೆ ಹಾಕಿಕೊಂಡೆ ಎನ್ನುತ್ತಾರೆ ಪೂಜಾ. ಭಾರತಕ್ಕೆ ಹಿಂತಿರುಗಿದ ಬಳಿಕ ಪೂಜಾ ಮನೆಯಲ್ಲಿಯೇ ಸಾಕಷ್ಟು ಅಡುಗೆ ಪ್ರಯೋಗಗಳನ್ನು ನಡೆಸಿದರು. ತಮ್ಮ ಪಾಕಶಾಲೆಯ ಸ್ನೇಹಿತರೊಂದಿಗೆ ಸೇರಿ ತಾವು ಕಂಡು ಹಿಡಿದುಕೊಂಡ ರೆಸಿಪಿಯಲ್ಲಿ ಪರಿಣಿತಿ ಸಾಧಿಸಿಕೊಂಡರು. ಇದೆಲ್ಲದರ ಫಲವಾಗಿ ಮುಂಬೈ ಈಗ ವಿಶ್ವದಲ್ಲೇ ಅತ್ಯಂತ ಮ್ಯಾಕರೋನ್ಸ್ ಗಳನ್ನು ತಯಾರಿಸುವ ಪ್ರದೇಶವಾಗಿ ಗುರುತಿಸಲ್ಪಟ್ಟಿದೆ.
ಆರಂಭ ಅಷ್ಟು ಸುಲಭದ್ದೇನಾಗಿರಲಿಲ್ಲ
ತಮ್ಮ ಜ್ಞಾನ ಹಾಗೂ ಧೈರ್ಯವನ್ನೇ ಬಂಡವಾಳವಾಗಿಸಿಕೊಂಡು ಉದ್ಯಮ ಪಯಣವನ್ನು ಆರಂಭಿಸುವಾಗ ಪೂಜಾಗೆ ಕೇವಲ 23 ವರ್ಷ. ಪುರುಷ ಪ್ರಧಾನ ಉದ್ಯಮ ಪ್ರಪಂಚದಲ್ಲಿ ಚಿಕ್ಕ ಹುಡುಗಿಯೊಬ್ಬಳು ಉದ್ಯಮ ಆರಂಭಿಸುವುದು ಅಷ್ಟೇನೂ ಸರಳ ವಿಚಾರವಾಗಿರಲಿಲ್ಲ. ವಿತರಕರು ಅಥವಾ ರಿಯಲ್ ಎಸ್ಟೇಟ್ ಏಜೆಂಟ್‌ಗಳನ್ನು ಹುಡುಕುವುದು ಅತ್ಯಂತ ಕಷ್ಟಕರವಾದ ಕೆಲಸವಾಗಿತ್ತು. ವರ್ಷಗಳುರುಳಿದಂತೆ ದಿನದಿಂದ ದಿನಕ್ಕೆ ಉದ್ಯಮ ಜಗತ್ತಿನ ಸವಾಲುಗಳು ಬದಲಾಗುತ್ತಾ ಹೋದವು. ಆದರೆ ಅಂಜಿಕೆಗಳನ್ನು ಮೆಟ್ಟಿನಿಂತು ಉದ್ಯಮ ಜಗತ್ತಿನಲ್ಲಿ ಕಾಲೂರಿದ ಪೂಜಾರ ಲೆ 15 ಸಂಸ್ಥೆ ಮುಂಬೈನಲ್ಲಿ ಈಗ 4 ಶಾಖೆಗಳನ್ನು ಹೊಂದಿದೆ. ಶೀಘ್ರದಲ್ಲೇ 6 ಶಾಖೆಗಳಿಗೆ ಲೆ 15 ಅನ್ನು ವಿಸ್ತರಿಸಲಾಗುವುದು ಎನ್ನುತ್ತಾರೆ ಪೂಜಾ. ಕಲಿಯುತ್ತಲೇ ಮುಂದೆ ಸಾಗಬೇಕು ಹಾಗೂ ಸವಾಲುಗಳನ್ನು ಬಂದ ಹಾಗೆ ಸ್ವೀಕರಿಸಬೇಕು ಎಂಬುದು ಪೂಜಾರ ಬಿಸಿನೆಸ್ ಮಂತ್ರ.
ಭಾರತದಲ್ಲಿ ಮಹಿಳಾ ಉದ್ಯಮಿ ಎದುರಿಸುವ ಸವಾಲು
ಮಹಿಳೆಯಾಗಿ ಭಾರತದಲ್ಲಿ ಉದ್ಯಮವನ್ನು ನಡೆಸುವುದು ಈ ಯುವ ಉದ್ಯಮಿಗೆ ಸಿಹಿಕಹಿ ಅನುಭವಗಳನ್ನು ನೀಡಿದೆ. ಚಿಕ್ಕ ಹಾಗೂ ದೊಡ್ಡ ಮಾರುಕಟ್ಟೆಯಲ್ಲಿ ಸಂಶೋಧನೆ ಹಾಗೂ ಹೊಸ ಯೋಜನೆಗಳ ಮೇಲೆ ಸಾಕಷ್ಟು ಬೆಳಕು ಚೆಲ್ಲಲು ಸಾಧ್ಯ. ವ್ಯಯಿಸಬಹುದಾದ ಆದಾಯದ ವೃದ್ಧಿಯೂ ಉದ್ಯಮಿಗೆ ಲಾಭದಾಯಕ ಅಂಶ ಎನ್ನುತ್ತಾರೆ ಪೂಜಾ
ಉದ್ಯಮಿಯಾಗುವುದು ಒಂದು ವಿಚಾರವಾದರೆ, ಮಹಿಳಾ ಉದ್ಯಮಿಯಾಗುವುದು ಮತ್ತೊಂದು ವಿಚಾರ. ಪರಿಸ್ಥಿತಿಯ ಅನುಕೂಲ ಹಾಗೂ ಅನಾನುಕೂಲ ಎರಡೂ ಸಾಧ್ಯತೆಗಳನ್ನೂ ನೋಡಬೇಕಾಗಿರುತ್ತದೆ. ಯಾವುದೇ ಉದ್ಯಮವಿರಲಿ, ಒಮ್ಮೆ ನೆಲೆಯೂರಬೇಕೆಂದರೆ ಅಲ್ಲಿ ಸವಾಲುಗಳಿದ್ದೇ ಇರುತ್ತವೆ. ಮಹಿಳೆಯಾಗಿರುವುದರಿಂದ ನಾನು ಉತ್ತಮ ಹಾಗೂ ಅರ್ಥಗರ್ಭಿತ ನಾಯಕತ್ವ ವಹಿಸಲು ಸಾಧ್ಯ ಎಂದು ನಂಬಿರುವುದಾಗಿ ಪೂಜಾ ಹೇಳಿಕೊಳ್ಳುತ್ತಾರೆ.
ಜಾಗತಿಕ ಪ್ರಭಾವ
ಲೆ 15ರ ಮ್ಯಾಕರೂನ್ಸ್ ಮತ್ತು ಪೇಸ್ಟ್ರಿಗಳು ಮುಂಬೈ ಜನತೆಯ ಮನಗೆದ್ದಿದೆ. ತಮ್ಮ ಬಿಡುವಿರದ ವೇಳೆಯಲ್ಲೂ ಪೂಜಾ ವಿಶ್ವದಾದ್ಯಂತ ಪ್ರವಾಸ ಮಾಡಲು ಉತ್ಸುಕರಾಗಿರುತ್ತಾರೆ. ಪ್ರವಾಸಗಳೂ ಕೂಡ ಪೂಜಾರನ್ನು ಕೆಲಸದಲ್ಲಿ ಮತ್ತಷ್ಟು ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತದೆ. ಜಪಾನ್‌ಗೆ ಹೋದ ಪ್ರವಾಸದಿಂದ ಗ್ರೀನ್ ಟೀಯ ವಿವಿಧ ಪುಡಿಗಳ ಸಂಗ್ರಹ ಹೆಚ್ಚಾಯಿತು ಹಾಗೂ ನ್ಯೂಯಾರ್ಕ್ ಪ್ರವಾಸದಿಂದ ಲೆ 15ನಲ್ಲಿ ಚೀಸ್ ಕೇಕ್ ವೀಕ್ ಮಾಡಲು ಪ್ರೇರೇಪಣೆ ದೊರೆಯಿತು ಎನ್ನುವ ಪೂಜಾ ತಮ್ಮ ಮುಂದಿನ ಪ್ರವಾಸಕ್ಕೆ ಎದುರು ನೋಡುತ್ತಿದ್ದಾರೆ.
ಬಾಲಿವುಡ್‌ನ ಅಧಿಕೃತ ಬೇಕರಿ ಲೆ15ನ ಒಡತಿಯಾಗಿ, ಭಾರತದ ಪ್ರಖ್ಯಾತ ಪೇಸ್ಟ್ರಿ ಚೆಫ್ ಆಗಿ ಪೂಜಾ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ವೈಯಕ್ತಿಕವಾಗಿ ಹಾಗೂ ವೃತ್ತಿಯಲ್ಲಿ ತಮ್ಮದೇ ಆದ ಗುರಿಯನ್ನು ಹೊಂದಿರುವ ಪೂಜಾ ಈ ವರ್ಷದಲ್ಲಿ ಮಾಡಲೇಬೇಕೆಂದಿರುವ 2 ಕಾರ್ಯಗಳೆಂದರೆ ಹಾಫ್ ಮ್ಯಾರಥಾನ್‌ನಲ್ಲಿ ಓಡುವುದು ಮತ್ತು ಜಪಾನ್ ಪ್ರವಾಸ ಮಾಡುವುದು. ಇದಲ್ಲದೇ ಈ ವರ್ಷಾಂತ್ಯದೊಳಗೆ 2 ಪುಸ್ತಕಗಳನ್ನು ಬರೆದುಮುಗಿಸುವ ಗುರಿಯೂ ಅವರ ಮುಂದಿದೆ.
Related Stories
March 14, 2017
March 14, 2017
March 14, 2017
March 14, 2017
March 14, 2017
March 14, 2017
Stories by YourStory Kannada