ಮಹಿಳೆ ಏನನ್ನಾದರೂ ಸಾಧಿಸಬಲ್ಲಳು ಎಂಬುದನ್ನ ತೋರಿಸಿಕೊಟ್ಟ ‘ಸೋಲಾರ್ ಅಕ್ಕ’.

ಟೀಮ್​ ವೈ.ಎಸ್​. ಕನ್ನಡ

0

ಜನ ಸಮಸ್ಯೆಗಳಿಗೆ ಹೆದರಿ, ಅವುಗಳ ಜೊತೆ ಹೋರಾಡಲಾಗದೆ ಒದ್ದಾಡ್ತಿರುವುದನ್ನ ನಾವು ದಿನನಿತ್ಯ ನೋಡುತ್ತಲೇ ಇರುತ್ತೇವೆ. ದಿನಕ್ಕೆರಡು ಹೊತ್ತಿನ ಊಟ ಸಂಪಾದಿಸಲು ಅದೆಷ್ಟೋ ಜನರಿಗೆ ಸಾಧ್ಯವಾಗುತ್ತಿಲ್ಲ. ಜೀವನದಲ್ಲಿ ಬರುವ ಕಷ್ಟಗಳಿಗೆ ಹೆದರಿ ಸಮಾಜದಿಂದ ಕಾಲ್ತೆಗೆಯುವವರ ಸಂಖ್ಯೆಯೇ ಹೆಚ್ಚು. ಆದರೆ, ಇಂತಹ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ನಿಂತು, ಯುಕ್ತಿ ಮತ್ತು ಪರಿಶ್ರಮವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನ ಸಾಬೀತು ಪಡಿಸಿದ್ದಾರೆ ಈ ಮಹಿಳೆ. ಜೀವನದಲ್ಲಿ ಕಷ್ಟಪಟ್ಟು ಸಫಲತೆಯನ್ನು ಕಂಡ ಈ ವಿಧವಾ ಮಹಿಳೆ ಹರಿಯುವ ನೀರಿನ ವಿರುದ್ಧ ಈಜಿ ದಡ ಸೇರಬಲ್ಲ ದಿಟ್ಟೆ. ಹೆಸರು ಗುಡಿಯಾ ಅಂತ, ಕಾನ್‍ಪುರ ಜಿಲ್ಲೆಯ ಸುತ್ತಮುತ್ತಲಿನ ಹಲವಾರು ಹಳ್ಳಿಗಳಲ್ಲಿ ಈಕೆ ಸೋಲಾರ್ ಅಕ್ಕ ಅಂತಲೇ ಚಿರಪರಿಚಿತರು. ಇಷ್ಟಕ್ಕೂ ಈಕೆ ಸೋಲಾರ್ ಅಕ್ಕನಾಗಿದ್ದೇ ಒಂದು ರೋಚಕ ಕಥೆ. ಗುಡಿಯಾ ಅವರನ್ನ ಸೋಲಾರ್ ಅಕ್ಕನಾಗಿ ಪರಿವರ್ತಿಸುವ ಮೊದಲು, ಈಕೆ ತನ್ನ ಜೀವನದಲ್ಲಿ ಅತಿ ಹೆಚ್ಚು ಸಂಘರ್ಷಗಳನ್ನು ಅನುಭವಿಸಿದ್ರು. ಅಗಾಧವಾದ ಪರಿಶ್ರಮ ಮತ್ತು ಜನರ ವಾತ್ಸಲ್ಯ ಇಂದು ಈಕೆಯನ್ನ ಒಬ್ಬ ಒಳೆಯ ಸೋಲಾರ್ ಮೆಕ್ಯಾನಿಕ್ ಆಗಿ ರೂಪಿಸಿದೆ.

ಇದನ್ನು ಓದಿ

ಮಂಗಳಮುಖಿಯರ ಮಂದಹಾಸ ಹೆಚ್ಚಿಸಿದ Bro4u.com


ಇಂದಿನ ಸೋಲಾರ್ ಅಕ್ಕ ಒಂದು ಕಾಲದಲ್ಲಿ ಗುಡಿಯಾ ರಾಥೋಡ್ ಆಗಿದ್ದವರು. ಕಾನ್ಪುರದ ವಿಧಾನು ಪ್ರದೇಶದ ಹಡಹಾ ಎಂಬ ಹಳ್ಳಿಯಲ್ಲಿ ವಾಸವಾಗಿದ್ದರು. ವಿವಾಹವಾದ ನಂತರ ಫತೇಪುರದಲ್ಲಿನ ತನ್ನ ಪತಿಯ ಮನೆ ಸೇರಿಕೊಂಡರು. ಗಂಡನ ಮನೆಯಲ್ಲಿ ಅವರ ಜೀವನ ಸುಖಕರವಾಗಿತ್ತು. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು. ಇಂದಿಗೆ ನಾಲ್ಕು ವರ್ಷಗಳ ಹಿಂದೆ ಗುಡಿಯಾರ ಪತಿ ಅಕಾಲ ಮೃತ್ಯುವಿಗೀಡಾದರು. ಅಲ್ಲಿಂದಲೇ ಗುಡಿಯಾರ ಕಡುಕಷ್ಟದ ದಿನಗಳು ಶುರುವಾದವು. ಪತಿಯ ಸಾವಿನ ನಂತರ ಮಾವನ ಮನೆಯಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುವುದು ಗುಡಿಯಾರಿಗೆ ದುಸ್ತರವಾಗಿತ್ತು. ಇದರಿಂದ ಹೊರಬಂದು, ಮಕ್ಕಳ ಭವಿಷ್ಯ ರೂಪಿಸುವುದಕ್ಕಾಗಿ ತನ್ನ ತಾಯಿಯ ಮನೆ ಸೇರಿಕೊಂಡರು. ಹಾಗೆ ಅಮ್ಮನ ಮನೆ ಸೇರಿದವರು ಅಲ್ಲೇನೂ ಸುಮ್ಮನೆ ಕೂರಲಿಲ್ಲ, ಬದಲಿಗೆ ಸ್ವಾವಲಂಬಿಯಾಗಿ ಜೀವಿನ ನಡೆಸಲು ಪಣತೊಟ್ಟರು. ಅಂದು ಮಹಿಳೆ ಮನೆಯಲ್ಲಿ ಸುಮ್ಮನೆ ಕೂತರೆ, ಜೀವನ ನಡೆಸುವುದು ಕಷ್ಟ ಅಂತ ಅರಿತು ಮನೆಯಿಂದ ಹೊರಗೆ ಕಾಲಿಟ್ಟರು ಗುಡಿಯಾ. ಸ್ಥಳೀಯ ಸಾಮಾಜಿಕ ಸಂಸ್ಥೆ “ಶ್ರಮಿಕ ಭಾರತಿ ಸಂಘಟನೆ” ಗೆ ಸೇರಿ ಅದರಲ್ಲಿ ಸಂಪೂರ್ಣವಾಗಿ ತಮ್ಮನ್ನ ತೊಡಗಿಸಿಕೊಂಡರು. ಹಳ್ಳಿಗಳಲ್ಲಿ ಸೋಲಾರ್ ದೀಪ ಅಳವಡಿಸುವ ಸರ್ಕಾರದ ಯೋಜನೆಯ ಜವಾಬ್ದಾರಿಯನ್ನ ಹೊತ್ತಿತ್ತು ಶ್ರಮಿಕ ಭಾರತಿ ಸಂಘಟನೆ. ಈ ಸಂಘಟನೆಗೆ ಸೇರಿದ ಮೇಲೆ ಗುಡಿಯಾ ಸಹ ಆ ಯೋಜನೆಯಲ್ಲಿ ತೊಡಗಿಕೊಂಡರು.

ಆ ದಿನಗಳ ಬಗ್ಗೆ ಗುಡಿಯಾ ಅವರ ಮಾತಿನಲ್ಲೇ ಕೇಳೋದಾದರೆ, “ನಾನು ಶ್ರಮಿಕ ಭಾರತಿ ಸಂಸ್ಥೆಯನ್ನು ಸೇರಿ ಸೋಲಾರ್ ದೀಪವನ್ನು ಅಳವಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ. ಈ ಕೆಲಸ ಮಾಡಲು ಸಾಮಾನ್ಯವಾಗಿ ಗಂಡಸರೇ ಪಾಲ್ಗೊಳ್ಳುತ್ತಾರೆ. ನಾನೂ ಈ ಕೆಲಸದಲ್ಲಿ ಭಾಗವಹಿಸಿ ಮಹಿಳೆಯರು ಗಂಡಸರಿಗಿಂತ ಕಡಿಮೆ ಅಲ್ಲಾ ಎಂಬುದನ್ನು ಸಾಬೀತುಪಡಿಸುವ ಉದ್ದೇಶ ನನ್ನದಾಗಿತ್ತು. ಆದ್ದರಿಂದ ಸೋಲಾರ್ ಲೈಟ್ ಕಾರ್ಯಕ್ರಮದಲ್ಲಿ ನನ್ನನ್ನು ತೊಡಗಿಸಿಕೊಂಡೆ.”

ಮೊದಲಿಗೆ ಗುಡಿಯಾ ಅವರು ಹಳ್ಳಿಹಳ್ಳಿಗಳಿಗೂ ತಿರುಗಿ ಸೋಲಾರ್ ಉತ್ಪನ್ನಗಳಾದ ಲೈಟ್, ಸ್ಟವ್, ಫ್ಯಾನ್ ಮುಂತಾದ ವಸ್ತುಗಳನ್ನು ಮನೆಗಳಿಗೆ ಅಳವಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಹೀಗೆ ನಾಲ್ಕು ವರ್ಷಗಳ ನಿರಂತರ ಓಡಾಟದಿಂದ ಹಳ್ಳಿಗಳಿಗೆ ಸೋಲಾರ್ ಲೈಟ್ ಅಳವಡಿಸುವ ಪ್ರಕ್ರಿಯೆಯಲ್ಲಿ ಯಶಸ್ವಿಯಾದರು. ಹೀಗಾಗಿಯೇ ಆಕೆ ಇಂದು ಎಲ್ಲಾ ಹಳ್ಳಿಗಳಲ್ಲೂ ಸೋಲಾರ್ ಅಕ್ಕ ಅಂತಲೇ ಚಿರಪರಿಚಿತರಾಗಿದ್ದಾರೆ. ಪ್ರಾರಂಭದಲ್ಲಿ ಜನರು ಸೋಲಾರ್ ಅಕ್ಕ ಅಂತ ಕರೆಯುತ್ತಿದ್ದಾಗ ಹಲವು ಬಾರಿ ತನಗೆ ಮುಜುಗರವಾಗಿದ್ದು ಉಂಟು. ಆದರೆ ಈಗ ಆ ಹೆಸರನ್ನೇ ಇಷ್ಟಪಡುತ್ತೇನೆ ಅಂತ ಹೇಳುತ್ತಾರೆ ಗುಡಿಯಾ.

ಗುಡಿಯಾರವರು ತಮ್ಮ ಕರ್ತವ್ಯವನ್ನು ಚಿಕ್ಕದಿರಲಿ, ದೊಡ್ಡದಿರಲಿ ನಿಷ್ಠೆಯಿಂದ ನಿರ್ವಹಿಸುತ್ತಾರೆ ಹಾಗೂ ತಮ್ಮ ಕರ್ತವ್ಯದ ಬಗ್ಗೆ ಅಗಾಧವಾದ ಪ್ರೀತಿಯನ್ನು ಹೊಂದಿದ್ದಾರೆ. ಅದರಿಂದಾಗಿಯೇ ವಿಧಾನು ಪ್ರದೇಶದ ಬನ್‍ಪುರ, ಕಠಾರ, ಉಜಿಯಾರ, ತಿವಾರಿಪುರ ಸೇರಿದಂತೆ ಹಲವು ಹಳ್ಳಿಗಳಲ್ಲಿ ಪದೇ ಪದೇ ಸೋಲಾರ್ ಅಕ್ಕ ಅನ್ನುವ ಪದದ ಬಳಕೆ ಹೆಚ್ಚಾಗಿದೆ.

ಅಲ್ಲಿನ ಜನರ ಅಭಿಪ್ರಾಯದಂತೆ ಹಳ್ಳಿಯಲ್ಲಿ ಲೈಟ್, ಫ್ಯಾನ್ ಇತರ ಯಾವುದೇ ಸೋಲಾರ್‍ನ ವಸ್ತುಗಳು ಕೆಟ್ಟು ಹೋದಲ್ಲಿ, ಒಂದು ಫೋನ್ ಮಾಡಿದ್ರೆ ಸಾಕು, ಸೋಲಾರ್ ಅಕ್ಕ ತಕ್ಷಣ ತನ್ನ ಬ್ಯಾಗಿನಲ್ಲಿ ರಿಪೇರಿಗೆ ಬೇಕಾದ ವಸ್ತುಗಳ ಜೊತೆ ಸ್ಕೂಟಿಯಲ್ಲಿ ಬಂದು ರಿಪೇರಿ ಮಾಡಿಕೊಡುತ್ತಾರೆ.

ಸಮಯ, ಸಂದರ್ಭ, ಸದಾ ಒಂದಲ್ಲಾಒಂದು ಉತ್ತಮವಾದ ಅವಕಾಶಗಳÀನ್ನು ಒದಗಿಸುತ್ತವೆ. ಕೆಲವು ಸಂದರ್ಭಗಳಲ್ಲಿ ನಮ್ಮ ಕಣ್ಣ ಮುಂದೆಯೇ ನಮ್ಮ ಯಶಸ್ಸು ಇರುತ್ತದೆ. ಅದನ್ನ ಗುರುತಿಸಿ, ಒಳ್ಳೆಯ ದಾರಿಯಲ್ಲಿ ಸಾಗಿದರೆ ನಮ್ಮ ಜೀವನ ಸುಖಕರವಾಗಿರುತ್ತದೆ. ಒಂದೊಂದು ಬಾರಿ ಈ ಜೀವನ ಯಾಕೆ ಬೇಕು ಎಂದೆನಿಸುವುದೂ ಉಂಟು. ಆ ಕ್ಷಣ ಮೌನವಹಿಸಿ ನಮ್ಮ ಕಷ್ಟಗಳಿಗೆ ದಾರಿ ಹುಡುಕಿದರೆ ಖಂಡಿತವಾಗಿಯೂ ಸಮಾಧಾನ ಸಿಗುತ್ತದೆ ಹಾಗೂ ಮನಃಶಾಂತಿ ಸಿಗುತ್ತದೆ ಎನ್ನುತ್ತಾರೆ ಗುಡಿಯಾ ರಾಥೋಡ್.

ಸ್ಥಳೀಯರಾದ ಕಲ್ಲೂರ ಅವರು ಹೇಳುವ ಪ್ರಕಾರ, ಸೋಲಾರ್ ಅಕ್ಕ...ಯಾವುದೇ ಗ್ರಾಮದವರು ಸೋಲಾರ್ ಸಂಬಂಧಿತ ತೊಂದರೆಗಳಿಗೆ ಸಂಬಂಧಿಸಿದಂತೆ ಕರೆ ಮಾಡಿದ್ರೆ, ಸಾಕು ಆಕೆ ತಕ್ಷಣವೇ ಸ್ಪಂಧಿಸ್ತಾರೆ ಅಂತ ಶ್ಲಾಘಿಸುತ್ತಾರೆ.

ಒಬ್ಬ ಮಹಿಳೆ ತನ್ನ ಕಾಲ ಮೇಲೆ ತಾನು ನಿಲ್ಲಲು ಪಟ್ಟ ಪರಿಶ್ರಮ, ಹಲವಾರು ಹಳ್ಳಿಗಳಿಗೆ ತಿರುಗಿ ಸೋಲಾರ್ ಲೈಟ್ ಬೆಳಗಿಸುವುದರ ಜೊತೆಗೆ ತÀನ್ನ ಜೀವನವನ್ನೂ ಬೆಳಗಿಸಿಕೊಂಡ ಈಕೆ ಮಾಡಿರುವ ಸಾಧನೆ ಅಸಾಧಾರಣವಾದದ್ದು.

ಲೇಖಕರು: ವೀರ್​ ಪ್ರತಾಪ್​ ಸಿಂಗ್​​
ಅನುವಾದಕರು : ಬಾಲು

ಇದನ್ನು ಓದಿ

1. ಯಾರೇ ಕೂಗಾಡಲಿ...ಇವನ ಸಾಧನೆಗೆ ಕೊನೆಯೇ ಇಲ್ಲ..

2. ಸಾರಾಯಿ ನಿಷೇಧ ಹಾಗೂ ಬಾಲ್ಯ ವಿವಾಹದ ವಿರುದ್ಧ ಹೋರಾಟ...

3. ಜಯದೇವ ಆಸ್ಪತ್ರೆ ಸಾಧನೆ: ಹೃದಯ ನಿಗಾ ಇಡುವ ಯಂತ್ರ ಅಳವಡಿಕೆ..!

Related Stories