ಮಂಗಳ ಗ್ರಹದಲ್ಲಿ ಆಲೂ ಬೆಳೆ- ವಿಜ್ಞಾನಿಗಳ ಸಂಶೋಧನೆಯಿಂದ ಹುಟ್ಟಿಕೊಂಡ ಹೊಸ ಕನಸು

ಟೀಮ್​ ವೈ.ಎಸ್​. ಕನ್ನಡ

ಮಂಗಳ ಗ್ರಹದಲ್ಲಿ ಆಲೂ ಬೆಳೆ- ವಿಜ್ಞಾನಿಗಳ ಸಂಶೋಧನೆಯಿಂದ ಹುಟ್ಟಿಕೊಂಡ ಹೊಸ ಕನಸು

Sunday December 25, 2016,

2 min Read

ಕೋಟ್ಯಂತರ ಗ್ರಹಗಳ ಪೈಕಿ ಭೂಮಿ ಮಾತ್ರ ಜೀವಿಗಳಿಗೆ ಆವಾಸಸ್ಥಾನವಾಗಿದೆ. ಆದರೆ ಭೂಮಿ ಕೂಡ ಇನ್ನೆಷ್ಟು ವರ್ಷಗಳ ಕಾಲ ಮನುಷ್ಯರಿಗೆ, ಪ್ರಾಣಿ, ಪಕ್ಷಿ, ಮರ- ಗಿಡಗಳಿಗೆ ಜೀವ ನೀಡಬಹುದು? ದಿನೇ ದಿನೇ ಹೆಚ್ಚುತ್ತಿರುವ ಮಾಲಿನ್ಯ ಮತ್ತು ಬರಿದಾಗುತ್ತಿರುವ ಭುವಿಯೊಡಲಿನಿಂದಾಗಿ ಭೂಮಿಯನ್ನು ಹಿಂಡಿ - ಹಿಪ್ಪೆ ಮಾಡಲಾಗುತ್ತಿದೆ. ಈ ಮಾಲಿನ್ಯ ಹೀಗೇ ಮುಂದುವರಿದಲ್ಲಿ ಭೂಮಿ ಕೂಡ ಜೀವಗಳಿಗೆ ಮಾರಕವಾಗುವ ಎಲ್ಲ ಸಾಧ್ಯತೆಗಳೂ ಇವೆ. ಹೀಗಾಗಿಯೇ ನಾವು ಬೇರೆ ಗ್ರಹಗಳಲ್ಲೂ ಜೀವಿಸಬಹುದಾ? ಭೂಮಿಯಲ್ಲಿರುವಂತೆಯೇ ಬೇರೆ ಯಾವ ಗ್ರಹದಲ್ಲಿ ಜೀವಸಂಕುಲ ಹುಟ್ಟಿ, ಬೆಳೆಯುವ ನಿಸರ್ಗ ಸಂಪತ್ತಿದೆ? ಎಂಬುದರ ಕುರಿತು ಕಳೆದ ಹಲವು ವರ್ಷಗಳಿಂದ ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತಿವೆ. ಅದರ ಅಂಗವಾಗಿಯೇ ಅಮೆರಿಕಾದ ನಾಸಾ ಮಂಗಳ ಗ್ರಹವನ್ನು ಸ್ಟಡಿ ಮಾಡುತ್ತಿದೆ. ಅಕಸ್ಮಾತ್ ಮಾನವ ಮಂಗಳ ಗ್ರಹಕ್ಕೆ ಹೋದರೆ, ಅಲ್ಲಿ ತಿನ್ನುವುದೇನು ಅನ್ನೋ ಪ್ರಶ್ನೆಗೆ ತಾನೇ ಉತ್ತರ ಹುಡುಕುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ತರಕಾರಿಗಳನ್ನೇನಾದರೂ ಬೆಳೆಯಬಹುದಾ ಎಂದು ಪರಿಶೀಲನೆ ನಡೆಸುತ್ತಿದೆ.

image


ಈ ಸಂಶೋಧನೆಯ ಅಂಗವಾಗಿ ನಾಸಾ ಪೆರು ದೇಶದ ಪಾಂಪಾಸ್ ಡೆ ಲ ಜೋಯಾ ಪ್ರದೇಶದ ಮಂಗಳ ಗ್ರಹವನ್ನೇ ಹೋಲುವ ಕೆಂಪು ಮರುಭೂಮಿಯಲ್ಲಿ ಆಲೂಗಡ್ಡೆ ಬೆಳೆಯಲು ನಿರ್ಧರಿಸಿದೆ. ಹೀಗಾಘಿಯೇ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಬೆಳೆಯುವ ಬರೊಬ್ಬರಿ 65 ಆಲೂಗಡ್ಡೆ ತಳಿಗಳನ್ನು ತಂದು ಈ ಮರುಭೂಮಿಯಲ್ಲಿ ಬೆಳೆಯಲು ಸಿದ್ಧತೆ ನಡೆಸಿದೆ. ಎಲ್ಲವೂ ಅಂದುಕೊಂಡಂತೆಯೇ ಆದರೆ ಇನ್ನು ಕೆಲವೇ ವರ್ಷಗಳಲ್ಲಿ ಮಂಗಳ ಗ್ರಹವನ್ನು ತಲುಪುವ ಮಾನವ, ಅಲ್ಲಿಯೇ ಆಲೂಗಡ್ಡೆ ಬೆಳೆದು ಫ್ರೈಸ್, ಚಿಪ್ಸ್ ಮತ್ತು ಆಲೂ ಪಲ್ಯ ತಿನ್ನಬಹುದು!

ಇದನ್ನು ಓದಿ: ಪೇವರ್ಲ್ಡ್​ ಎಂಪೋಸ್: ಸಣ್ಣ ವ್ಯಾಪಾರಿಗಳಿಗೆ ಅನುಕೂಲಕರ ಸಾಧನ

ಸಂಶೋಧನೆಗೆ ಸಿನಿಮಾನೇ ಸ್ಫೂರ್ತಿ!

ವಿಶೇಷ ಅಂದರೆ ಈ ಸಂಶೋಧನೆಗೆ ಹಾಲಿವುಡ್ ಬ್ಲಾಕ್‍ಬಸ್ಟರ್ ಸಿನಿಮಾ ‘ದಿ ಮಾರ್ಷಿಯನ್’ ಕಾರಣ. ಆಶ್ಚರ್ಯವಾದರೂ ಇದನ್ನು ನೀವು ನಂಬಲೇಬೇಕು. ಈ ಚಿತ್ರದಲ್ಲಿ ಮಂಗಳ ಗ್ರಹಕ್ಕೆ ಹೋಗುವ ಚಿತ್ರದ ನಾಯಕ ಮ್ಯಾಟ್ ಡೇಮನ್, ವಾಪಸ್ ಬರಲಾರದೆ ಅಲ್ಲಿಯೇ ಸಿಕ್ಕಿಹಾಕಿಕೊಂಡುಬಿಡುತ್ತಾನೆ. ಕ್ರಮೇಣ ತಿನ್ನಲು ಏನೂ ಸಿಗದೇ ಪರಿತಪಿಸುವಂತಾದಾಗ ಐಡಿಯಾ ಮಾಡುವ ಮ್ಯಾಟ್ ಡೇಮನ್ ಆಲೂಗಡ್ಡೆ ಗಿಡವನ್ನು ನೆಟ್ಟು, ಬೆಳೆಸುತ್ತಾನೆ. ಅದರಿಂದ ಸ್ಫೂರ್ತಿ ಪಡೆದು ನಾಸಾ ಈ ಸಂಶೋಧನೆಗೆ ಕೈ ಹಾಕಿದೆ.

image


ಸಂಶೋಧನೆಗೆ ಆಲೂಗಡ್ಡೆಯೇ ಯಾಕೆ?

ಹೌದು, ಸಾವಿರಾರು ಬಗೆಯ ಸೊಪ್ಪು, ತರಕಾರಿ, ಹಣ್ಣುಗಳಿವೆ. ಆದರೆ ಆಲೂಗಡ್ಡೆಯೇ ಯಾಕೆ ಬೇಕು ಅಂತ ಎಲ್ಲರಲ್ಲೂ ಪ್ರಶ್ನೆ ಮೂಡಬಹುದು. ಅದಕ್ಕೆ ಉತ್ತರ, ಚಳಿ, ಮಳೆ, ಬಿಸಿಲುಗಳೆನ್ನದೆ ಎಂಥ ವಾತಾವರಣದಲ್ಲೂ ಹೆಚ್ಚು ನೀರು, ಗೊಬ್ಬರಗಳ ಅವಶ್ಯಕತೆಗಳಿಲ್ಲದೆ ಬೆಳೆಯುವ ಕ್ಷಮತೆ ಆಲೂಗಡ್ಡೆಗಿದೆ. ಅಲ್ಲದೇ ಆಲೂಗಡ್ಡೆಯಲ್ಲಿ ಕಾರ್ಬೊಹೈಡ್ರೇಟ್ಸ್, ಪ್ರೋಟೀನ್, ವಿಟಮಿನ್ ಸಿ, ಕಬ್ಬಿಣದ ಅಂಶ ಮತ್ತು ಜಿಂಕ್ ಅಂಶಗಳು ಹೇರಳವಾಗಿವೆ. ಅಲ್ಲದೇ ಈ ಆಲೂಗಡ್ಡೆಯನ್ನು ಬ್ಯಾಟರಿ ಚಾರ್ಜ್ ಮಾಡಲೂ ಬಳಸಲಾಗುತ್ತದೆ. ಹೀಗಾಗಿಯೇ ಆಲೂಗಡ್ಡೆಯೇ ಸಂಶೋಧನೆಗೆ ಆಲೂಗಡ್ಡೆಯೇ ಉತ್ತಮವೆಂದು ಆಯ್ಕೆ ಮಾಡಿಕೊಳ್ಳಲಾಗಿದೆ. ಹೀಗಾಗಿಯೇ ಪೆರುವಿನ ಈ ಮರಳುಗಾಡಿನಿಂದ ಬರೊಬ್ಬರಿ 1300 ಟನ್‍ನಷ್ಟು ಮರಳನ್ನು ಲೀಮಾದಲ್ಲಿರುವ ಅಂತಾರಾಷ್ಟ್ರೀಯ ಆಲೂ ಕೇಂದ್ರಕ್ಕೆ ರವಾನಿಸಿ, ಅಲ್ಲಿ ಮಂಗಳ ಗ್ರಹಕ್ಕೆ ಹೋಲುವ ಬೇರೆ ಬೇರೆ ರೀತಿಯ ವಾತಾವರಣ ಸೃಷ್ಟಿಸಿ ಆಲೂ ಕೃಷಿ ಮಾಡುವ ಐಡಿಯಾ ಅವರದು.

ಮಂಗಳ ಗ್ರಹದಲ್ಲಿ ಮೈನಸ್ 84 ಡಿಗ್ರೀ ಫಾರೆನ್‍ಹೀಟ್ ಇದ್ದು ಅದು ಕೆಲವೊಮ್ಮೆ ಮೈನಸ್ 284 ಡಿಗ್ರೀ ಫಾರೆನ್‍ಹೀಟ್‍ವರೆಗೂ ಇಳಿಯುತ್ತದೆ. ಹಾಗೇ ಅಲ್ಲಿ ರೇಡಿಯೇಷನ್ ತುಂಬ ಹೆಚ್ಚು. ಜೊತೆಗೆ ಭೂಮಿಗೆ ಹೋಲಿಸಿದರೆ ಶೇಕಡಾ 60ರಷ್ಟು ಗುರುತ್ವಾಕಾರ್ಷಣ ಬಲ ಕಡಿಮೆ. ಮತ್ತು ವಾತಾವರಣದಲ್ಲಿ ಶೇಕಡಾ 96ರಷ್ಟು ಕಾರ್ಬನ್ ಡೈಆಕ್ಸೈಡ್ ಇದ್ದು, ಆಮ್ಲಜನಕ ತುಂಬ ಕಡಿಮೆಯಿದೆ. ಇಂತಹ ವಿಪರೀತ ವಾತಾವರಣದಲ್ಲಿ ಆಲೂಗಡ್ಡೆ ಬೆಳೆಯಬಹುದಾ? ಅದಕ್ಕೆ ಇನ್ನು ಕೆಲವೇ ದಿನಗಳಲ್ಲಿ ಉತ್ತರ ದೊರೆಯಲಿದೆ.

ಮಂಗಳಕ್ಕೆ ಮಾನವ ಯಾವಾಗ?

2012ರಲ್ಲಿ ನಾಸಾದವರು ಮಂಗಳ ಗ್ರಹಕ್ಕೆ ಕ್ಯೂರಿಯಾಸಿಟಿ ಎಂಬ ರೋಬೋಟ್‍ಅನ್ನು ಕಳುಹಿಸಿದ್ದಾರೆ. ಈಗ ಆಲೂಗಡ್ಡೆ ಮೇಲಿನ ಸಂಶೋಧನೆ ಯಶಸ್ವಿಯಾಗುತ್ತಲೇ, ಇನ್ನು ಹತ್ತು ವರ್ಷಗಳಲ್ಲಿ ಮಾನವ ಸಮೇತ ಉಪಗ್ರಹವನ್ನು ಮಂಗಳ ಗ್ರಹಕ್ಕೆ ಕಳುಹಿಸುವ ಐಡಿಯಾಯಿದೆ. 

ಇದನ್ನು ಓದಿ:

1. ವಾರ್ಧಾದದಿಂದ ಕಂಗೆಟ್ಟವರಿಗೆ ಹಳೆ ವಿದ್ಯಾರ್ಥಿಗಳ ನೆರವು- ಚೆನ್ನೈ ನಗರವನ್ನು ಉಳಿಸಿಕೊಳ್ಳಲು ಹೋರಾಟ

2. ನಿಮಗಿಷ್ಟವಿರುವ ಕೆಲಸ ಮಾಡಿ- ಕೈ ತುಂಬಾ ಸಂಬಳ ಪಡೆಯಿರಿ

3. ಶಾಪವನ್ನೇ ವರವಾಗಿ ಬದಲಿಸಿಕೊಂಡ ಗಟ್ಟಿಗಿತ್ತಿ..!