ಬಾಡಿಗೆ ಮನೆ ಸಮಸ್ಯೆಗೆ ಪರಿಹಾರ “ನೆಸ್ಟ್​​​ಅವೇ” !

ಗಿರಿ

0

ದೆಹಲಿಯ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುವ ಅಜಯ್‍ಗೆ ಅದೇ ಕಂಪೆನಿಯ ಬೆಂಗಳೂರು ಶಾಖೆಗೆ ವರ್ಗಾವಣೆಯಾಗುತ್ತೆ. ಏಕಾಏಕಿ ವರ್ಗಾವಣೆಯಾಗಿದ್ದಕ್ಕೆ ಅಜಯ್ ಬೇಸರವೇನು ಪಡಲಿಲ್ಲ. ಆದರೆ, ಚಿಂತೆ ಎದುರಾಗಿದ್ದು ಗುರುತು, ಪರಿಚಯವಿಲ್ಲದ ಬೆಂಗಳೂರಿನಲ್ಲಿ ಎಲ್ಲಿ ವಾಸಿಸುವುದು? ಮನೆ ಹೇಗೆ ಹುಡುಕುವುದು? ಎಂಬ ಬಗ್ಗೆ. ಆದರೆ ಈಗ ಇದಕ್ಕೆಲ್ಲಾ ಚಿಂತಿಸಬೇಕಿಲ್ಲ. ಹೀಗೆ ಬೇರೆ ಊರುಗಳಿಂದ ಬೆಂಗಳೂರಿನಲ್ಲಿ ನೆಲೆಸಲು ಬರುವವರ ವಾಸದ ಸಮಸ್ಯೆಯನ್ನು ನೀಗಿಸಲು ಒಂದು ಸಂಸ್ಥೆ ಹುಟ್ಟಿಕೊಂಡಿದೆ. ಬ್ಯಾಚ್ಯುಲರ್‍ಗಳಿಗಾಗಿಯೇ ಸೃಷ್ಟಿಯಾಗಿರುವ ಈ ಸಂಸ್ಥೆ ಯಾವುದೇ ಶ್ರಮವಿಲ್ಲದೆ, ಹೆಚ್ಚಿನ ಮುಂಗಡ ಹಣ ಪಡೆಯದೆ ನಿಮಗೆ ಇರಲು ಮನೆ ಹುಡುಕಿಕೊಡುತ್ತದೆ. ಅದೇ “ನೆಸ್ಟ್​​​ಅವೇ” ಸಂಸ್ಥೆ !

ಅಮರೇಂದ್ರ ಸಾಹು, ಸ್ಮೃತಿ ಪಾರಿದಾ, ದೀಪಕ್ ಧರ್ ಮತ್ತು ಜಿತೇಂದ್ರ ಜಗದೇವ ಎಂಬ ನಾಲ್ವರು ಹುಟ್ಟು ಹಾಕಿರುವ ನೆಸ್ಟ್​​ಅವೇ ಈಗಾಗಲೆ ಬೆಂಗಳೂರು, ಗುರಗಾಂವ್, ನೋಯಿಡಾ, ಪುಣೆ ಹಾಗೂ ಹೈದರಾಬಾದ್‍ಗಳಿಗೆ ಬರುವ ಹೊಸಬರಿಗೆ ಮನೆ ಹುಡುಕಿಕೊಡುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಅಲ್ಲದೆ ನೆಸ್ಟ್​​​ಅವೇ ಸಂಸ್ಥೆ ದೇಶದ ಮೊಟ್ಟಮೊದಲ ಮತ್ತು ದೊಡ್ಡ ಹೋಂ ರೆಂಟಲ್ ನೆಟ್‍ವರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬಾಡಿಗೆದಾರರು ಖುಷ್, ಮನೆ ಮಾಲೀಕರು ಖುಷ್:

ಕಳೆದ ಒಂದು ವರ್ಷದ ಹಿಂದೆ ಆರಂಭವಾದ ಸಂಸ್ಥೆ ಈಗಾಗಲೆ 3 ಸಾವಿರಕ್ಕೂ ಹೆಚ್ಚಿನವರಿಗೆ ಮನೆಗಳನ್ನು ಹುಡುಕಕೊಟ್ಟ ಕೀರ್ತಿ ನೆಸ್ಟ್​​​ಅವೇಗೆ ಸಂದುತ್ತದೆ. ಮೊದಲು ಸ್ಥಳೀಯ ಮನೆ ಹುಡುಕಿಕೊಡುವ ಬ್ರೋಕರ್‍ಗಳ ಮೂಲಕ ಖಾಲಿ ಮನೆಗಳನ್ನು ಪತ್ತೆ ಮಾಡಲಾಗುತ್ತದೆ. ಆನಂತರ ಮನೆ ಮಾಲೀಕರೊಂದಿಗೆ ಮಾತುಕತೆ ನಡೆಸಿ ಎಷ್ಟು ಬಾಡಿಗೆ ನಿಗದಿ ಮಾಡಲಾಗಿದೆ ಎಂಬ ಮಾಹಿತಿ ಪಡೆಯಲಾಗುತ್ತದೆ. ಇನ್ನು ಬಾಡಿಗೆ ಮನೆ ಬೇಕೆನ್ನುವವರು ನೆಸ್ಟ್​​ಅವೇ ಸಂಸ್ಥೆಯ ವೆಬ್‍ಸೈಟ್ www.nestaway.com ಅಥವಾ ಮೊಬೈಲ್ ಸಂಖ್ಯೆ 7676760000ಗೆ ಕರೆ ಮಾಡಿ ಹೆಸರು ರಿಜಿಸ್ಟರ್ ಮಾಡಿಕೊಳ್ಳಬೇಕಿದೆ. ಮನೆ ಯಾವ ಬಡಾವಣೆಯಲ್ಲಿರಬೇಕು, ಎಷ್ಟು ಬಾಡಿಗೆ ಇರಬೇಕು? ಏನೆಲ್ಲಾ ವ್ಯವಸ್ಥೆಗಳಿರಬೇಕು ಎಂಬ ಮಾಹಿತಿ ನೀಡಿದರೆ ಅದಕ್ಕೆ ತಕ್ಕ ಹಾಗೆ ಮನೆ ಹುಡುಕಲಾಗುತ್ತದೆ. ಇನ್ನು, ಮನೆ ಮಾಲೀಕರು 18 ಸಾವಿರ ಬಾಡಿಗೆಯನ್ನು ನಿಗದಿ ಮಾಡಿದ್ದರೆ. ಅದಕ್ಕೆ ತಕ್ಕ ಹಾಗೆ ನಾಲ್ಕು ಬ್ಯಾಚುಲರ್‍ಗಳನ್ನು ಆ ಮನೆಗೆ ಬಾಡಿಗೆದಾರರಾಗಿ ಕಳುಹಿಸಲಾಗುತ್ತದೆ. ಪ್ರತಿಯೊಬ್ಬರಿಂದ ತಲಾ 6 ಸಾವಿರ ಬಾಡಿಗೆ ಪಡೆಯಲಾಗುತ್ತದೆ ಮತ್ತು 3 ತಿಂಗಳ ಭದ್ರತಾ ಠೇವಣಿ ಪಡೆಯಲಾಗುತ್ತದೆ. ಆ ಹಣದಲ್ಲಿ ಶೇ, 12.5ರಷ್ಟು ಸೇವಾ ಶುಲ್ಕ ಪಡೆದು ಉಳಿದ ಹಣವನ್ನು ಮನೆ ಮಾಲೀಕರಿಗೆ ನೀಡಲಾಗುತ್ತದೆ. ಹೀಗಾಗಿ ಮನೆ ಮಾಲೀಕರಿಗೆ ನಿಗದಿಗಿಂತ ಹೆಚ್ಚು ಹಣ ಬಂದರೆ, ಬಾಡಿಗೆದಾರರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಮನೆ ಸಿಕ್ಕಂತಾಗುತ್ತದೆ. ಇದರಿಂದ ಬಾಡಿಗೆದಾರರು ಕೂಡ ಖುಷ್, ಮನೆ ಮಾಲೀಕರು ಕೂಡ ಖುಷ್.

ಪಾರದರ್ಶಕತೆ

ಸಂಸ್ಥೆಯ ಕಾರ್ಯ ವೈಖರಿ ಬಗ್ಗೆ ಮಾತನಾಡಿರುವ ನೆಸ್ಟ್​​​ಅವೇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮರೇಂದ್ರ ಸಾಹು, “ಮನೆ ಮಾಲೀಕರ ಮತ್ತು ಬಾಡಿಗೆದಾರರ ಹಿತ ಕಾಪಾಡುವುದೇ ಸಂಸ್ಥೆಯ ಮೊದಲ ಉದ್ದೇಶ. ಬಾಡಿಗೆದಾರರಿಗೆ ಮನೆ ಕೊಡಿಸುವುದು, ಮನೆ ಮಾಲೀಕರಿಗೆ ಬಾಡಿಗೆದಾರರ ಮಾಹಿತಿ ನೀಡುವುದು ಹೀಗೆ ಎಲ್ಲವನ್ನೂ ಪಾರದರ್ಶಕವಾಗಿ ಮಾಡಲಾಗುತ್ತದೆ. ಈಗಾಗಲೆ 5 ನಗರಗಳಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಅದನ್ನು ಮತ್ತಷ್ಟು ನಗರಗಳಿಗೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ” ಎಂದು ಹೇಳುತ್ತಾರೆ.

ಎಲ್ಲಾ ರೀತಿಯ ಸೌಲಭ್ಯ ಲಭ್ಯ

ಬಾಡಿಗೆದಾರರು ಕೇವಲ ಮನೆ ಮಾತ್ರ ಸಾಕು ಎಂದರೆ ನೆಸ್ಟ್​​​ಅವೇ ಬೇರೆ ಯಾವುದೇ ಸೌಲಭ್ಯ ನೀಡುವುದಿಲ್ಲ. ಬದಲಿಗೆ ಮನೆಯಲ್ಲಿ ಫರ್ನೀಚರ್, ಟಿವಿ, ಇಂಟರ್‍ನೆಟ್ ಹೀಗೆ ಮತ್ತಿತರ ವಸ್ತುಗಳು ಇರಬೇಕು ಎಂದು ಬಾಡಿಗೆದಾರರು ಬಯಸಿದರೆ ಅವುಗಳನ್ನು ನೆಸ್ಟ್​​​ಅವೇ ಒದಗಿಸಲು ರೆಡಿ. ಅವುಗಳ ಬಳಕೆಗಾಗಿ ಬಾಡಿಗೆದಾರರು ಹೆಚ್ಚಿನ ಹಣ ನೀಡಬೇಕಾಗುತ್ತದೆ. ಇನ್ನು, ನೆಸ್ಟ್​​ಅವೇ ಸಂಸ್ಥೆ ಬಾಡಿಗೆ ಮನೆಗೆ ಒದಗಿಸುವ ಹೆಚ್ಚುವರು ಸಾಮಗ್ರಿಗಳಿಗೆಲ್ಲಾ ವಿಮೆಯನ್ನು ಮಾಡಿಸಿರುತ್ತದೆ. ಒಂದು ವೇಳೆ ಸಾಮಗ್ರಿಗಳು ಹಾಳಾದರೆ ಆ ಹಣವನ್ನು ವಿಮಾ ಮೂಲಕ ಪಡೆಯುತ್ತದೆ.

ಬಾಡಿಗೆದಾರರ ಜವಾಬ್ದಾರಿ ನೆಸ್ಟ್​​ಅವೇಯದ್ದು:

ಒಂದು ವೇಳೆ ಬಾಡಿಗೆದಾರರು ಗಲಾಟೆ ಮಾಡುವುದಾಗಲಿ, ಮನೆ ಮಾಲೀಕರಿಗೆ ಕಿರಿಕಿರಿಯುಂಟಾದರೆ ಬಾಡಿಗೆದಾರರನ್ನು ಸಂಭಾಳಿಸುವ ಉಸಾಬರಿಯೂ ನೆಸ್ಟ್​​​ಅವೇ ಹೊತ್ತುಕೊಳ್ಳುತ್ತದೆ. ಅಲ್ಲದೆ, ಬಾಡಿಗೆದಾರರು ಬಾಡಿಗೆ ನೀಡದೇ ಇದ್ದರೂ ಆ ಹಣವನ್ನು ಸಂಸ್ಥೆ ಮಾಲೀಕರಿಗೆ ನೀಡುತ್ತದೆ. ಒಂದು ವೇಳೆ ಬಾಡಿಗೆದಾರರು ಕನಿಷ್ಠ 6 ತಿಂಗಳಗಿಂತ ಮೊದಲೇ ಮನೆ ಖಾಲಿ ಮಾಡಿದರೆ ಅವರು ನೀಡಿರುವ ಭದ್ರತಾ ಠೇವಣಿಯಲ್ಲಿ 2 ತಿಂಗಳ ಭದ್ರತಾ ಠೇವಣಿ ಮೊತ್ತವನ್ನು ಮನೆ ಮಾಲೀಕರಿಗೆ ನೀಡಲಾಗುತ್ತದೆ. ಆಮೂಲಕ ಮನೆ ಮಾಲೀಕರ ಹಿತ ಕಾಪಾಡಲಾಗುತ್ತದೆ.

Related Stories