ಲಂಗು ಲಗಾಮಿಲ್ಲದ ರಾಜಕೀಯ ಭಾಷೆ..!

ಟೀಮ್​ ವೈ ಎಸ್​​

ಲಂಗು ಲಗಾಮಿಲ್ಲದ ರಾಜಕೀಯ ಭಾಷೆ..!

Wednesday December 30, 2015,

4 min Read

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಸಂಸತ್ತಿನಲ್ಲಿ ನಡೆಯುತ್ತಿರುವ ಜಿಎಸ್​ಟಿ ಬಿಕ್ಕಟ್ಟಿನ ಬಗ್ಗೆ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ. ಆದ್ರೆ ಅತ್ಯಂತ ಪ್ರಬುದ್ಧ ರಾಜಕಾರಣಿ ಎನಿಸಿಕೊಂಡಿರುವ ಅರುಣ್ ಜೇಟ್ಲಿ ಅವರ ಬರವಣಿಗೆಯಲ್ಲೂ ಭಾಷೆಯ ಕುಸಿತ ಕಂಡು ಬಂದಿದ್ದು ನಿಜ. ಇನ್ನೊಂದ್ಕಡೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಸಂಭಾಷಣೆಗಳು ತನ್ನ ಮೌಲ್ಯವನ್ನೇ ಕಳೆದುಕೊಳ್ಳುತ್ತಿವೆ. ಚರ್ಚೆಯ ಗುಣಮಟ್ಟವೂ ಕುಸಿದಿದ್ದು, ರಾಜಕಾರಣಿಗಳು ಪರಸ್ಪರ ವಿಮರ್ಷೆ ಬಿಟ್ಟು ನಿಂದನೆಗೆ ಇಳಿಯುತ್ತಿದ್ದಾರೆ. ಅಸಂವಿಧಾನಿಕ ಭಾಷೆ ಮತ್ತು ಭಾವನೆಗಳು ಸರ್ವೇಸಾಮಾನ್ಯವಾಗಿಬಿಟ್ಟಿವೆ. ಸಾಂವಿಧಾನಿಕ ಪದಗಳು ಯಾವುವು, ಯಾವುದು ಅಸಾಂವಿಧಾನಿಕ ಅನ್ನೋದೇ ಅರ್ಥವಾಗದಂತಹ ಗೊಂದಲ ಸೃಷ್ಟಿಯಾಗಿದೆ. ಇದಕ್ಕೆ ಪ್ರಮುಖ ಕಾರಣ ಕ್ರಿಮಿನಲ್​ಗಳು ರಾಜಕೀಯಕ್ಕೆ ಎಂಟ್ರಿಯಾಗ್ತಿರೋದು. ಅಷ್ಟೇ ಅಲ್ಲ ಸರ್ಕಾರ ಮತ್ತು ರಾಜಕೀಯ ಪಕ್ಷಗಳ ಪ್ರಮುಖ ಹುದ್ದೆಗಳನ್ನೂ ಕ್ರಿಮಿನಲ್​​ಗಳು ಅಲಂಕರಿಸುತ್ತಿದ್ದಾರೆ.

image


ಇದಕ್ಕೆ ಆಳವಾದ ವಿಶ್ಲೇಷಣೆ ಮತ್ತು ಆತ್ಮಾವಲೋಕನದ ಅಗತ್ಯವಿದೆ. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಕಾಂಗ್ರೆಸ್​​ ವರಿಷ್ಠರೆಲ್ಲ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದವರು. ಪ್ರಸಿದ್ಧ ಕಾಲೇಜುಗಳಲ್ಲಿ, ಇಂಗ್ಲೆಂಡ್​ನ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ಶಿಕ್ಷಣ ಪಡೆದವರು. ಅವರಿಗೆಲ್ಲ ಸಂಸದೀಯ ಸಂಪ್ರದಾಯಗಳ ಬಗ್ಗೆ ಅರಿವಿತ್ತು, ಇಂಗ್ಲಿಷ್ ಬಗೆಗೂ ಆಳವಾದ ಜ್ಞಾನವಿತ್ತು. ಇಂಗ್ಲಿಷ್ ಭಾಷೆ ಮಾತ್ರವಲ್ಲ ಇಂಗ್ಲಿಷ್ ಸಂಸ್ಕೃತಿಯನ್ನು ಕೂಡ ಚೆನ್ನಾಗಿ ಅರಿತಿದ್ದ ಕೈ ನಾಯಕರು ಆಧುನಿಕತೆಗೆ ನಾಂದಿ ಹಾಡಿದ್ದರು. ವಿದೇಶಿ ಭಾಷೆ ಮತ್ತು ಉಡುಪುಗಳನ್ನು ಭಾರತೀಯ ಪರಿಸರಕ್ಕೆ ಪರಿಚಯಿಸಿದ್ರು. ದೇಶದ ನಾಯಕತ್ವದಲ್ಲಿ ಅತ್ಯಂತ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡ್ರು. ಈ ಸಂಪ್ರದಾಯವನ್ನು ಮುರಿದವರು ಮಹಾತ್ಮ ಗಾಂಧೀಜಿ. ಅವರ ಪ್ರಯತ್ನದಿಂದ ಖಾದಿ ಉಡುಪುಗಳೇ ಫ್ಯಾಷನ್ ಆಗಿ ಬದಲಾಯ್ತು. ಗಾಂಧೀಜಿ ಅವರನ್ನು ತಿರಸ್ಕಾರದಿಂದ ಕಂಡಿದ್ದ ವಿನ್​ಸ್ಟನ್​ ಚರ್ಚಿಲ್, ಅವರನ್ನು ಅರೆನಗ್ನ ಸಂತ ಅಂತಾ ಜರಿದಿದ್ದರು. ವಿನ್​ಸ್ಟನ್​ ಚರ್ಚಿಲ್, ಹುಟ್ಟಾ ಶ್ರೀಮಂತರೇನಲ್ಲ. ಆದ್ರೆ ಪಕ್ಕಾ ಇಂಗ್ಲಿಷ್ ಸಂಪ್ರದಾಯವಾದಿ, ಸದಾ ಕಾಲ ಕೈಯಲ್ಲಿ ಸಿಗಾರ್, ಸಂಜೆಯಾಗ್ತಿದ್ದಂತೆ ಮದ್ಯ ಸೇವನೆ ಅವರಿಗೆ ಪ್ರಿಯವಾಗಿತ್ತು. ಆದ್ರೆ ಗಾಂಧೀಜಿ ಅವರ ವ್ಯಕ್ತಿತ್ವವೇ ವಿಭಿನ್ನ, ಬಹು ಸಂಖ್ಯೆಯಲ್ಲಿ ಜನರನ್ನು ತಲುಪಲು ವಿದೇಶಿ ಭಾಷೆ, ವಿದೇಶಿ ಉಡುಪು ನೆರವಾಗುವುದಿಲ್ಲ ಅನ್ನೋದು ಅವರಿಗೆ ಸ್ಪಷ್ಟವಾಗಿತ್ತು. ಅದಕ್ಕಾಗಿಯೇ ಅವರು ಪರಿಚಯಿಸಿದ ಖಾದಿ ವಸ್ತ್ರಗಳು, ಬಹು ಜನಪ್ರಿಯವೂ ಆಯ್ತು.

ಇನ್ನೊಂದ್ಕಡೆ ನೆಹರು ಬ್ರಿಟಿಷರೆಡೆಗೆ ಆಕರ್ಷಿತರಾಗ್ತಾ ಇದ್ರು. ಇಂಗ್ಲೀಷ್ ಭಾಷೆ ಮೇಲೆ ಅವರಿಗೆ ಹಿಡಿತವಿತ್ತು. ಅದನ್ನು ಪ್ರಚಾರ ಮಾಡಬೇಕೆಂಬ ಇಚ್ಛೆಯೂ ನೆಹರು ಅವರಿಗಿತ್ತು. ಅವರ ಅನುಯಾಯಿಗಳ ಪೈಕಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರೊಬ್ರು ಈ ಬಗ್ಗೆ ಆಸಕ್ತಿ ತೋರಿಸ್ತಾ ಇದ್ರು. ಭಾರತದ ರಾಜಕೀಯ ವರ್ಗದ ಭಾಷೆಯ ತಡೆಗೋಡೆಯನ್ನು ಮೊದಲು ಮುರಿದವರು ರಾಮ್ ಮನೋಹರ್ ಲೋಹಿಯಾ. ಕಾಂಗ್ರೆಸ್ಸಿಸಮ್​​ನ ವಿರೋಧಿ ಅಲೆ ಹಾಗೂ ಹಿಂದುಳಿದ ವರ್ಗಗಳ ರಾಜಕೀಯದ ಮೂಲ ಶಿಲ್ಪಿ ಅಂದ್ರೆ ರಾಮ್ ಮನೋಹರ್ ಲೋಹಿಯಾ. ಅವರ ಪ್ರವೇಶ ಭಾರತದ ರಾಜಕೀಯಕ್ಕೆ ಕೆಳಸ್ತರದವರನ್ನು ಪರಿಚಯಿಸಲು ನಾಂದಿಯಾಯ್ತು. ಅಲ್ಲಿಯವರೆಗೂ ಸಮಾಜದ ಬ್ರಾಹ್ಮಣರೇ ಮುನ್ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷ, ಪ್ರಾಬಲ್ಯದಲ್ಲಿತ್ತು. ಬಹುಸಂಖ್ಯಾತರೇ ಸಮಾಜವನ್ನು ಆಳುವವರು ಎಂಬ ವಾತಾವರಣ ನಿರ್ಮಾಣವಾಗಿತ್ತು ಅಂತಾ ಲೋಹಿಯಾ ಅವರೇ ಹೇಳಿದ್ದಾರೆ. ಆಳುವ ಗಣ್ಯರ ಇಚ್ಛೆಗೆ ವಿರುದ್ಧವಾಗಿ ಪರಿಪೂರ್ಣ ಪ್ರಜಾಪ್ರಭುತ್ವದ ತರ್ಕವನ್ನು ಲೋಹಿಯಾ ಮಂಡಿಸಿದ್ರು. ಆದ್ರೆ ರಾಜಕೀಯದಲ್ಲಿ ಹಿಂದುಳಿದ ವರ್ಗದವರ ಯಶಸ್ಸನ್ನು ನೋಡುವ ಅದೃಷ್ಟ ಅವರಿಗಿರಲಿಲ್ಲ. 90ರ ದಶಕದಲ್ಲಿ ಮಂಡಲ್ ಆಯೋಗದ ಆಗಮನದಿಂದ ಹೊಸ ಬಗೆಯ ವಿಭಿನ್ನ ನಾಯಕತ್ವವೂ ಆರಂಭವಾಯ್ತು.

ಲಾಲೂ, ಮುಲಾಯಂ, ಮಾಯಾವತಿ, ಕಾನ್ಷಿರಾಮ್, ಕಲ್ಯಾಣ್ ಸಿಂಗ್, ಉಮಾ ಭಾರತಿ ಇವರೆಲ್ಲ ಬಾಯಲ್ಲಿ ಬೆಳ್ಳಿ ಚಮಚ ಇಟ್ಕೊಂಡೇ ಹುಟ್ಟಿದವರೇನಲ್ಲ. ಬೀದಿ ಬದಿಯಲ್ಲಿ, ಧೂಳಿನಲ್ಲಿ ಆಟವಾಡುತ್ತಲೇ ಬೆಳೆದವರು. ಆದ್ರೆ ಭಾರತದ ರಾಜಕೀಯದಲ್ಲಿ ಹೊಸ ಭಾಷೆಯನ್ನು ಪರಿಚಯಿಸಿದ್ರು, ಆದ್ರೆ ಅದು ಅಧಿಪತ್ಯ ನಡೆಸುತ್ತಿದ್ದ ಒಂದು ಗುಂಪಿಗೆ ಇಷ್ಟವಾಗಿರಲಿಲ್ಲ. ಲಾಲೂ, ಮುಲಾಯಂ ಮತ್ತು ಮಾಯಾವತಿ ಅವರನ್ನು ಈ ಗುಂಪು ಅಣಕಿಸಿತ್ತು. ಅವರ ಭಾಷೆಯ ಬಗ್ಗೆ ತಿರಸ್ಕಾರ ವ್ಯಕ್ತಪಡಿಸಿತ್ತು. ಈ ನಾಯಕರ ಚರ್ಚೆಯಲ್ಲಿ ಆಧುನಿಕತೆಯಿರಲಿಲ್ಲ. ಅವರಲ್ಲಿ ಬಹುತೇಕರಿಗೆ ಇಂಗ್ಲಿಷ್ ಮಾತನಾಡಲು ಬರುತ್ತಿರಲಿಲ್ಲ. ಆಗ ಜಾತೀಯ ಪಕ್ಷಪಾತವೂ ಹೆಚ್ಚಾಗಿತ್ತು. ಮೇಲ್ಜಾತಿ ಹಾಗೂ ಮೇಲ್ವರ್ಗದವರು ಅವರನ್ನು ತಿರಸ್ಕಾರದ ದೃಷ್ಟಿಯಿಂದ್ಲೇ ನೋಡುತ್ತಿದ್ರು. ಇದರ ಜೊತೆಗೆ ಭ್ರಷ್ಟಾಚಾರ ಮತ್ತು ಅದಕ್ಷತೆಯ ಪಟ್ಟವನ್ನೂ ಕಟ್ಟಲಾಯ್ತು. ಬಹುಸಂಖ್ಯಾತರ ಪ್ರಾಬಲ್ಯ ಒಪ್ಪಿಕೊಳ್ಳದೇ ಅವರಿಗೆ ವಿಧಿಯೇ ಇರಲಿಲ್ಲ. ಸಂವಿಧಾನ ರಚನೆಯ ಸಂದರ್ಭದಲ್ಲಿ, ಮತದಾನದ ಹಕ್ಕು ಗಿಟ್ಟಿಸಿಕೊಳ್ಳಲು ಶಿಕ್ಷಣವನ್ನು ಮಾನದಂಡವಾಗಿ ಮಾಡಬೇಕೆಂದು ಬಹುಸಂಖ್ಯಾತ ಮೇಲ್ವರ್ಗದವರು ಬೇಡಿಕೆ ಇಟ್ಟಿದ್ರು, ಆದ್ರೆ ಅದನ್ನು ಸಾರಾಸಗಟಾಗಿ ತಳ್ಳಿ ಹಾಕಲಾಗಿತ್ತು.

ರಾಜಕೀಯದಲ್ಲಿ ಭಾಷೆಯ ಕುಸಿತಕ್ಕೆ ಕಾರಣಗಳು ಸಾಕಷ್ಟಿವೆ. ಆದ್ರೆ ವಸಾಹತು ನೀತಿ ಬೇರೆ ಭಾಷೆಗಳನ್ನು ಪ್ರವರ್ಧಮಾನಕ್ಕೆ ತಂದಿದೆ ಅನ್ನೋದು ಸುಳ್ಳಲ್ಲ. ಇಂಗ್ಲಿಷ್ ಜಾಗಕ್ಕೆ ದೇಶೀಯ ಭಾಷೆಗಳು ಬಂದಿವೆ. ಇಂಗ್ಲಿಷ್ ಮಾತನಾಡುವ ವರ್ಗಕ್ಕೆ ಈ ಬದಲಾವಣೆ ನಿಜಕ್ಕೂ ಆಘಾತಕಾರಿ. ಎರಡು ಗುಂಪುಗಳ ನಡುವೆ ಜಟಿಲವಾದ ಮುಖಾಮುಖಿ ನಡೆಯುತ್ತಿದೆ. ಸವಾಲುಗಳು ಹಾಗೂ ಹೊಸ ರಾಜಕೀಯ ವರ್ಗದ ಬದಲಾವಣೆಯಿಂದ ಅತ್ಯುಚ್ಛ ವರ್ಗದವರಲ್ಲಿ ನೋವಿತ್ತು. ಇದು ಭಾರತೀಯ ರಾಜಕಾರಣದಲ್ಲಿ ಆಳವಾದ ಗಡಿ ರೇಖೆಗಳನ್ನು ಸೃಷ್ಟಿ ಮಾಡಿದೆ. ಒಂದೇ ರಾಜಕೀಯ ಕ್ಷೇತ್ರದಲ್ಲಿ ಎರಡು ಗುಂಪುಗಳ ಮಧ್ಯೆ ಜಟಾಪಟಿ ನಡೆಯುತ್ತಿತ್ತು. ಶರಣಾಗತಿಗೆ ಯಾರೂ ಸಿದ್ಧರಿರಲಿಲ್ಲ. ಆಗ ಅಲ್ಲಿ ಕೆಲಸ ಮಾಡಿದ್ದು ನಂಬರ್ ಗೇಮ್. ರಾಜಕೀಯ ವ್ಯತ್ಯಾಸ ರಾಜಕೀಯ ದ್ವೇಷವಾಗಿ ಬದಲಾಯ್ತು. ಚರ್ಚೆಯ ಬದಲು ನಿಂದನೆಯೇ ಹೆಚ್ಚಾಯ್ತು.

ಎಎಪಿ ಹೊಸ ಆಯಾಮವೊಂದನ್ನು ಪರಿಚಯಿಸಿದೆ, ಅದು ರಾಜಕೀಯದ ಹೊಸ ಆಟ. ಸಾಂಪ್ರದಾಯಿಕ ರಾಜಕಾರಣಕ್ಕೂ ಇದೊಂದು ಸವಾಲು. ಹೊಸ ವಾಸ್ತವಕ್ಕೆ ಹೊಂದಿಕೊಳ್ಳಲು ಹಳೆ ಆಟಗಾರರು ನಿಜಕ್ಕೂ ಕಷ್ಟಪಡ್ತಿದ್ದಾರೆ. ಈಗಾಗ್ಲೇ ಅಸ್ತಿತ್ವದಲ್ಲಿದ್ದ ಸಂಘರ್ಷದ ಬಗ್ಗೆ ಎಎಪಿ ಒತ್ತಿ ಹೇಳಿದೆ. ಎಎಪಿ ಆಗಮನ ಎಲ್ಲಾ ರಾಜಕೀಯ ಪಕ್ಷಗಳ ಪಾಲಿಗೆ ಕಹಿಯಾಗಿದೆ. ಈಗಾಗ್ಲೇ ಗುರುತಿಸಿಕೊಂಡಿರುವ ರಾಜಕೀಯ ಪಕ್ಷಗಳು, ಗುಂಪುಗಳು ಎಎಪಿಯನ್ನು ವಿಚಿತ್ರವಾಗಿ ನೋಡುತ್ತಿವೆ, ರಾಜಕಾರಣದ ಶಿಶು ಆಪ್ ಬಗ್ಗೆ ಮಾತನಾಡುವುದೂ ಅವರಿಗೆ ಕಷ್ಟವಾಗ್ತಿದೆ. ಪಕ್ಷ ಕಟ್ಟುವ ಮುನ್ನವೇ, ಎಎಪಿ ನಾಯಕತ್ವದ ಬಗ್ಗೆ ಟೀಕೆಗಳು ಕೇಳಿಬಂದಿದ್ವು. ನಮ್ಮನ್ನು ಒಳಚರಂಡಿಯಲ್ಲಿರುವ ಇಲಿಗಳು ಎಂದವರೂ ಇದ್ದಾರೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಮ್ಮನ್ನು ನಕ್ಸಲರೆಂದು ಕರೆದಿದ್ದಾರೆ. ದುರದೃಷ್ಟವಂತರೆಂದು ಜರಿದಿದ್ದಾರೆ. ಪ್ರಧಾನಿ ಕಾರ್ಯಾಲಯದ ಹೊಣೆ ಹೊತ್ತಿರುವ ಅವರಿಗೆ ಇಂತಹ ಭಾಷೆಯ ಪ್ರಯೋಗ ನಿಜಕ್ಕೂ ಶೋಭಿಸುವುದಿಲ್ಲ. ಬಿಜೆಪಿ ನಾಯಕ ಗಿರಿರಾಜ್ ಸಿಂಗ್, ನಮ್ಮನ್ನು ರಾಕ್ಷಸರೆಂದು ಕರೆದ್ರೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಾಧ್ವಿ ಜ್ಯೋತಿ ನಿರಂಜನ್ ನಮ್ಮನ್ನು ಕಿಡಿಗೇಡಿಗಳೆಂದು ಟೀಕಿಸಿದ್ದಾರೆ. ಅಷ್ಟಾದ್ರೂ ಬಿಜೆಪಿ ನಾಯಕರು ಅವರನ್ನು ಎಚ್ಚರಿಸುವ ಪ್ರಯತ್ನವನ್ನೇ ಮಾಡಿಲ್ಲ.

2007ರ ಗುಜರಾತ್ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯುಕ್ತ ಜೆ.ಎಂ.ಲಿಂಗ್ಡೋ ಅವರ ಬಳಿ ಸೋನಿಯಾ ಗಾಂಧಿ ಅವರನ್ನು ನರೇಂದ್ರ ಮೋದಿ ಹೇಗೆ ಸಂಬೋಧಿಸಿದ್ದರು ಅನ್ನೋದು ನನಗಿನ್ನೂ ನೆನಪಿದೆ. ಆದ್ರೆ ಅದನ್ನು ಮತ್ತೆ ನೆನಪಿಸಲು ನಾನು ಇಷ್ಟಪಡುವುದಿಲ್ಲ. ಇನ್ನು ಯಶ್ವಂತ್ ಸಿನ್ಹಾ, ಮನಮೋಹನ್ ಸಿಂಗ್ ಅವರನ್ನು ಶಿಖಂಡಿ ಎಂದು ಕರೆದಿದ್ರು. ಶಿಖಂಡಿ ಎಂದರೆ ಸಾಂಕೇತಿಕವಾಗಿ ಶಕ್ತಿಹೀನ ಎಂದರ್ಥ. ವಾಜಪೇಯಿ ಅವರ ಕ್ಯಾಬಿನೆಟ್​ನಲ್ಲಿ ಪ್ರಮುಖ ಸಚಿವರಾಗಿದ್ದ ಯಶ್ವಂತ್ ಸಿನ್ಹಾ ಅವರ ಬಾಯಲ್ಲಿ ಇಂತಹ ಮಾತುಗಳು ಬಂದಿರುವುದು ವಿಪರ್ಯಾಸ. ಇದೀಗ ಅರವಿಂದ್, ಪ್ರಧಾನಿ ಮೋದಿ ಅವರಿಗೆ ಬಳಸಿದ ಶಬ್ಧ ಅರುಣ್ ಜೇಟ್ಲಿ ಸೇರಿದಂತೆ, ಬಿಜೆಪಿಯ ಹಿರಿಯ ನಾಯಕರ ಕಣ್ಣು ಕುಕ್ಕುತ್ತಿದೆ. ಬೇರೆಯವರನ್ನು ದೂಷಿಸುವ ಮುನ್ನ ಕೇಸರಿ ನಾಯಕರು ಆತ್ಮವಿಮರ್ಷೆ ಮಾಡಿಕೊಳ್ಳಬೇಕು. ಏನನ್ನು ಬೋಧಿಸುತ್ತಾರೋ ಅದನ್ನು ವಾಸ್ತವದಲ್ಲಿ ಮಾಡಿ ತೋರಿಸಬೇಕು. ಈ ವಿವಾದದ ಬಗ್ಗೆ ಎಎಪಿಗೆ ಅರಿವಿದೆ, ನಾವು ಆತ್ಮಾವಲೋಕನ ಮಾಡಿಕೊಂಡು ತಪ್ಪಾಗಿದ್ದಲ್ಲಿ ಅದನ್ನು ಸರಿಪಡಿಸಲು ಕ್ರಮಗಳನ್ನು ಕೈಗೊಳ್ಳಲು ಸಿದ್ಧರಿದ್ದೇವೆ. ಎಎಪಿ ಜನ್ಮ ತಾಳುವ ಮುನ್ನವೇ ಸಂಸದರ ವರ್ತನೆಗಳ ಬಗ್ಗೆ ಕರಡು ಮಾರ್ಗಸೂಚಿಗಳನ್ನೊಳಗೊಂಡ ನೈತಿಕ ಸಮಿತಿಯೊಂದನ್ನು ಸಂಸತ್ತಿನಲ್ಲಿ ನೇಮಿಸಲಾಗಿದೆ. ಆದ್ರೆ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಕಾರಣ ಇಷ್ಟೆ, ಭಾರತದ ರಾಜಕಾರಣ ಬದಲಾಗಿದೆ. ಹಳೆಯ ಪಕ್ಷಗಳಿಗೆ ಐತಿಹಾಸಿಕ ಕಾರಣಗಳು ಭಾರ ಎನಿಸಲಾರಂಭಿಸಿವೆ. ಸುಲಭವಾಗಿ ಬಿಟ್ಟುಕೊಡಲು ಯಾರೂ ಸಿದ್ಧರಿಲ್ಲ. ಇತಿಹಾಸ ಹಾಗೂ ವರ್ತಮಾನದ ಮಿಲನದ ಫಲವೇ ಭಾಷೆಯ ಅಧಃಪತನ. ಆದ್ರೆ ಬದಲಾವಣೆ ಒಳ್ಳೆಯದನ್ನೇ ಮಾಡುತ್ತೆ ಅನ್ನೋ ವಿಶ್ವಾಸ ನನಗಿದೆ.


ಲೇಖಕರು : ಆಶುತೋಷ್​, ಎಎಪಿ ನಾಯಕ

ಅನುವಾದಕರು : ಭಾರತಿ ಭಟ್​