ಭವಿಷ್ಯದ ಹೂಡಿಕೆ ತಾಣ ಮಂಗಳೂರು..!

ಟೀಮ್​ ವೈ.ಎಸ್​. ಕನ್ನಡ

ಭವಿಷ್ಯದ ಹೂಡಿಕೆ ತಾಣ ಮಂಗಳೂರು..!

Monday February 01, 2016,

2 min Read

ಕರ್ನಾಟಕ ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಲವು ವೈಶಿಷ್ಠ್ಯಗಳ ತವರೂರು. ಬ್ಯಾಂಕಿಂಗ್ ಕ್ಷೇತ್ರದ ಮೂಲ ನೆಲೆ, ದೇಶದ ಪ್ರತಿಷ್ಠಿತ ರಾಷ್ಟ್ರಿಕೃತ ಬ್ಯಾಂಕ್‍ಗಳು ಜನ್ಮ ತಳೆದದ್ದು ಇದೇ ದಕ್ಷಿಣ ಕನ್ನಡದ ಮಣ್ಣಿನಲ್ಲಿ. ಇದು ಅತ್ಯುನ್ನತ ಶಿಕ್ಷಣ ಗುಣಮಟ್ಟಕ್ಕೆ ಹೆಸರುವಾಸಿಯಾದ ಜಿಲ್ಲೆ. ರಾಜ್ಯದಲ್ಲಿ ಮೊದಲ ದಿನಪತ್ರಿಕೆ ಹುಟ್ಟಿದ್ದು ಮಂಗಳೂರಿನಲ್ಲಿ. ಹೀಗೆ ಹಲವು ವೈಶಿಷ್ಠ್ಯ ವಿಸ್ಮಯಗಳ ತವರು ಎಂದೇ ದಕ್ಷಿಣ ಕನ್ನಡ ಜಿಲ್ಲೆ ಖ್ಯಾತಿ ಪಡೆದಿದೆ.

image


ಮಂಗಳೂರಿನಲ್ಲಿ ಕೈಗಾರಿಕಾ ಚಿತ್ರಣ

ರಾಜ್ಯದಲ್ಲಿ ಸರ್ವ ಋತು ಬಂದರು, ವಿಮಾನ ನಿಲ್ದಾಣ ಮತ್ತು ರೈಲ್ವೇ ನಿಲ್ದಾಣ ಈ ಮೂರು ಸೌಲಭ್ಯ ಹೊಂದಿರುವ ಏಕೈಕ ನಗರ ಮಂಗಳೂರು. ಬ್ರಿಟೀಷರ ಕಾಲದಿಂದಲೂ ಮಂಗಳೂರು ಉದ್ಯಮಗಳಿಗೆ ಹೆಸರುವಾಸಿ. ಇಲ್ಲಿನ ಹೆಂಚು ಕಾರ್ಖಾನೆ ಜಗತ್ತಿನಲ್ಲಿಯೇ ಮನೆಮಾತಾಗಿದೆ. ಸ್ವಾತಂತ್ರ್ಯ ಬಂದ ಬಳಿಕ ಬೃಹತ್ ಕೈಗಾರಿಕೆಗಳು ಮಂಗಳೂರನ್ನು ಹುಡುಕಿಕೊಂಡು ಬಂದವು. ಇಲ್ಲಿ ಜನ್ಮ ತಳೆದವು.

ರಾಜ್ಯದ ಏಕೈಕ ರಸಗೊಬ್ಬರ ಕಾರ್ಖಾನೆ ಮಂಗಳೂರಿನ ಆಸ್ತಿ.

ಅದೇ ರೀತಿ ಮಂಗಳೂರಿನ ತೈಲ ಶುದ್ಧೀಕರಣ ಘಟಕ ಎಂಆರ್‍ಪಿಎಲ್ ಇಡೀ ದೇಶಕ್ಕೆ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುತ್ತಿದೆ. ಅಡುಗೆ ಅನಿಲವನ್ನು ವಿತರಿಸುತ್ತಿದೆ. ಎಂಆರ್‍ಪಿಎಲ್ ಜೊತೆ ಜೊತೆಗೆ ಇತರ ಬೃಹತ್ ಕೈಗಾರಿಕೆಗಳು ರಾಜ್ಯದ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ ಗಣನೀಯ ಕೊಡುಗೆ ನೀಡುತ್ತಿವೆ.

ಭಾರತದ 9ನೇ ಅತೀ ದೊಡ್ಡ ಬಂದರು ನವಮಂಗಳೂರು ಬಂದರು ಆಗಿದೆ. ಸರ್ವಋತು ಬಂದರು ದೇಶದ ಔದ್ಯೋಗಿಕ ಬೇಡಿಕೆಗಳನ್ನು ಈಡೇರಿಸುತ್ತಿದೆ.

ಹೂಡಿಕೆಗೆ ಅತ್ಯುತ್ತಮ ಸ್ಥಳ ಮಂಗಳೂರು

ಮಂಗಳೂರು ಹೂಡಿಕೆಗೆ ಅತ್ಯುತ್ತಮ ಸ್ಥಳ. ಮಂಗಳೂರು ಜಾಗತಿಕ ಹೂಡಿಕೆದರರ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದೆ. ವಿಪುಲ ಹಾಗೂ ಪರಿಣಿತ ಮಾನವ ಸಂಪನ್ಮೂಲ ಮಂಗಳೂರಿನ ಹೆಗ್ಗಳಿಕೆ. ಸಾಕ್ಷರತೆಯಲ್ಲಿ ರಾಜ್ಯದಲ್ಲಿ ಅಗ್ರಸ್ಥಾನದಲ್ಲಿರುವ ಕರಾವಳಿ ಜಿಲ್ಲೆಗಳಲ್ಲಿ ಮಾನವ ಸಂಪನ್ಮೂಲ ಯಾವುದೇ ಸವಾಲನ್ನು ಸ್ವೀಕರಿಸುವ ಮನೋಭಾವ ಹೊಂದಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯ ಜೊತೆ ಜೊತೆಗೆ ಹೊಸ ಆವಿಷ್ಕಾರಗಳು ಜನರ ಚಿಂತನೆಯ ದಿಕ್ಕನ್ನು ಬದಲಾಯಿಸಿದೆ. ಸಾಹಸ ಶೀಲತೆ ಮತ್ತು ಉದ್ಯಮ ಮನೋಭಾವ ಜೊತೆಜೊತೆಯಾಗಿ ಬೆಳೆದಿರುವುದು ಮಂಗಳೂರಿನ ವೈಶಿಷ್ಠ್ಯ.

ವಿಶೇಷ ಆರ್ಥಿಕ ವಲಯ

ಮಂಗಳೂರು ರಸಗೊಬ್ಬರ ಉತ್ಪಾದನಾ ವಲಯದ ತವರೂರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮಂಗಳೂರು ವಿಶೇಷ ಆರ್ಥಿಕ ವಲಯ ಪರಿಕಲ್ಪನೆಯನ್ನು ತನ್ನದಾಗಿಸಿಕೊಂಡಿದೆ. 23 ದೊಡ್ಡ ಮತ್ತು ಮಧ್ಯಮ ಕೈಗಾರಿಕೆಗಳು ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. 5 ತಾಲೂಕುಗಳನ್ನು ದಕ್ಷಿಣ ಕನ್ನಡ ಜಿಲ್ಲೆ ಒಳಗೊಂಡಿದ್ದರೂ ಪ್ರಸಕ್ತ ಮಂಗಳೂರು ಹೊರವಲಯದಲ್ಲಿ ಬೃಹತ್ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ.

ಭತ್ತ, ಅಡಿಕೆ, ಕಬ್ಬು, ತೆಂಗು, ಗೇರು ಕೃಷಿ ಪ್ರಮುಖವಾಗಿದೆ. ಸೇವಾ ವಲಯ ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಬೆಳವಣಿಗೆ ದಾಖಲಿಸುತ್ತಿದ್ದು ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿದೆ.