ವಾರಣಾಸಿ ಸುತ್ತಮುತ್ತಲ ಜನರಿಗೆ ಜೀವನದಾಯಿನಿ ಜಿ.ವಿ.ಮೆಡಿಟೆಕ್

ಟೀಮ್​ ವೈ.ಎಸ್​. ಕನ್ನಡ

ವಾರಣಾಸಿ ಸುತ್ತಮುತ್ತಲ ಜನರಿಗೆ ಜೀವನದಾಯಿನಿ ಜಿ.ವಿ.ಮೆಡಿಟೆಕ್

Sunday December 20, 2015,

3 min Read


ನಗರೀಕರಣ ಹಳ್ಳಿಗಳ ಚಿತ್ರಣವನ್ನು ಬದಲಾಯಿಸಿದೆ. ಉತ್ತಮ ಭವಿಷ್ಯದ ಕನಸು ಕಂಡ ಯುವಕರು ಹಳ್ಳಿಗಳಿಂದ ನಗರಕ್ಕೆ ವಲಸೆ ಹೋಗ್ತಿದ್ದಾರೆ. ಇದರಿಂದಾಗಿ ಹಳ್ಳಿಗಳ ಜನಸಂಖ್ಯೆ ಕ್ಷೀಣಿಸಿದೆ. ಮಹಿಳೆಯರು,ವೃದ್ಧರು ಮತ್ತು ಮಕ್ಕಳು ಮಾತ್ರ ಹಳ್ಳಿಗಳಲ್ಲಿ ಕಾಣ ಸಿಗ್ತಿದ್ದಾರೆ. ಇದರಿಂದಾಗಿ ತುರ್ತು ಪರಿಸ್ಥಿತಿ ವೇಳೆ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲೂ ಜನರಿಲ್ಲದಂತಾಗಿದೆ.

ಗಾಜಿಪುರದ ಬಳಿ ಇರುವ ಒಂದು ಹಳ್ಳಿಯಲ್ಲಿ ಮೀನಾ ಶರ್ಮಾ ಎಂಬ ಗರ್ಭಿಣಿ ನೋವಿನಿಂದ ಬಳಲ್ತಾ ಇದ್ದರು. ಪುಣ್ಯಕ್ಕೆ ಗಾಜಿಪುರದಲ್ಲಿ ಟೆಲಿಮೆಡಿಸನ್ ಲಭ್ಯವಿತ್ತು. ಇದರ ಸಹಾಯದಿಂದ ಮಹಿಳೆಯ ಆರೋಗ್ಯದ ಸ್ಥಿತಿಯನ್ನು ಪರೀಕ್ಷಿಸಲಾಯ್ತು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಎರಡು ಗಂಟೆಯೊಳಗಾಗಿ ವಾರಣಾಸಿಗೆ ಕರೆದೊಯ್ಯಲಾಯ್ತು. ರಸ್ತೆ ಮಧ್ಯೆ ತಾಯಿ ಹಾಗೂ ಸಮಯಕ್ಕೆ ಮೊದಲು ಜನಿಸಿದ ಶಿಶುವಿಗೆ ತೊಂದರೆಯಾಗದಿರಲೆಂದು ರಕ್ತದ ವ್ಯವಸ್ಥೆ ಕೂಡ ಮಾಡಲಾಗಿತ್ತು.

ಜನರ ನೆರವಿಗೆ ನಿಂತ ಜಿ.ವಿ.ಮೆಡಿಟೆಕ್

ವಾರಣಾಸಿ ಹತ್ತಿರ ಗಾಜಿಪುರದಲ್ಲಿ ವಾಸಿಸುವ ಡಾಕ್ಟರ್ ಇಂದು ಸಿಂಗ್ ಒಬ್ಬರು ಪ್ರಸೂತಿ ತಜ್ಞರು. ಕೆಲಸದ ನಿಮಿತ್ತ ಅವರಿಗೆ ವಿಶ್ವದಾದ್ಯಂತ ಸಂಚರಿಸುವ ಅವಕಾಶ ಸಿಗ್ತು. ವೈದ್ಯಕೀಯ ವಿಜ್ಞಾನದ ಇತರ ವೈದ್ಯರನ್ನು ಅವರು ಭೇಟಿಯಾದ್ರು. ಇವೆಲ್ಲ ಅನುಭವ ನಗರಗಳಿಂದ ದೂರ ಇರುವ, ತುರ್ತು ಚಿಕಿತ್ಸಾ ಕೇಂದ್ರಗಳಿಲ್ಲದ ಹಳ್ಳಿ ಜನರ ನೆರವಿಗೆ ಧಾವಿಸಲು ಪ್ರೇರಣೆ ನೀಡ್ತು.

image


1992ರಲ್ಲಿ ಮಾತೃತ್ವ ಹಾಗೂ ಶಿಶು ಪಾಲನಾ ಘಟಕದ ಜೊತೆಗೆ ವಾರಣಾಸಿ ಸುತ್ತಮುತ್ತ ವಾಸಿಸುವ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಡಾಕ್ಟರ್ ಇಂದು ಜಿ.ವಿ.ಮೆಡಿಟೆಕ್ ಸ್ಥಾಪಿಸಿದ್ರು. ಡಾಕ್ಟರ್ ಇಂದು ಹಾಗೂ ಅವರ ಪತಿಯ ತವರು ಇದೇ ಆಗಿರುವ ಕಾರಣ ಗಾಜಿಪುರ್ ಹಾಗೂ ಮಿರ್ಜಾಪುರ್ ಗ್ರಾಮಗಳ ಜನರೊಂದಿಗೆ ಅವರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಹಾಗಾಗಿ ಈ ಎರಡೂ ಪ್ರದೇಶಗಳಲ್ಲಿ ಒಂದೊಂದು ಚಿಕ್ಕ ಚಿಕಿತ್ಸಾ ಕೇಂದ್ರ ಆರಂಭಿಸಿದ್ದಾರೆ. ಅಲ್ಲಿನ ಜನರಿಗೆ ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಚಿಕಿತ್ಸೆ ಸಿಗಲಿ ಎಂಬ ಕಾರಣಕ್ಕೆ ಕೇಂದ್ರಗಳನ್ನು ತೆರೆದಿದ್ದಾರೆ.

ಐಸಿಟಿ ಮತ್ತು ಟೆಲಿಮೆಡಿಸನ್ ಸೌಲಭ್ಯ

ಜಿ.ವಿ.ಮೆಡಿಟೆಕ್ ನಲ್ಲಿ ಐಸಿಟಿ ಮತ್ತು ಟೆಲಿಮೆಡಿಸನ್ ಸೌಲಭ್ಯ ಲಭ್ಯವಿದೆ. ಲೈವ್ ಟೆಲಿಮೆಡಿಸನ್ ಸಹಾಯದಿಂದ ತಯಾರಿಸಿರುವ ಒಂದು ಉಪಕರಣದಿಂದ ಗಾಜಿಪುರ್ ನ ಯಾವುದೇ ರೋಗಿಯ ರಕ್ತದೊತ್ತಡ, ಇಸಿಜಿ ಇತ್ಯಾದಿ ಪರೀಕ್ಷೆಯನ್ನು ವಾರಣಾಸಿಯಲ್ಲಿ ಕುಳಿತು ಮಾಡಬಹುದು. ರೋಗಿಯ ಸ್ಥಿತಿ ಗಂಭೀರವಾಗಿರುವ ವೇಳೆ ಟೆಲಿಮೆಡಿಸನ್ ಸಹಾಯದಿಂದ ಫೋನ್ ಮೂಲಕ ವೈದ್ಯರು ರೋಗಿಗಳ ಜೊತೆ ಸಂವಾದ ನಡೆಸಬಹುದಾಗಿದೆ.

image


ಈ ಎರಡು ಕೇಂದ್ರಗಳಲ್ಲದೇ ಜಿ.ವಿ.ಮೆಡಿಟೆಕ್ 10 ವರ್ಷಗಳಲ್ಲಿ 150ಕ್ಕೂ ಹೆಚ್ಚು ಶಿಬಿರಗಳನ್ನು ನಡೆಸಿದೆ. ಈ ಶಿಬಿರಗಳಿಂದಾಗಿ ಜನರು ನಮಗೆ ಆಪ್ತರಾಗ್ತಾರೆ. ಆಗ ಅವರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ತಾರೆ ಎನ್ನುತ್ತಾರೆ ಡಾಕ್ಟರ್ ಇಂದು. ಗ್ರಾಮೀಣ ಜನತೆ ಈ ಶಿಬಿರಗಳಲ್ಲಿ ಪಾಲ್ಗೊಳ್ಳುವ ವೈದ್ಯರಿಗೆ ಊಟದ ವ್ಯವಸ್ಥೆ ಮಾಡ್ತಾರೆ. ಶಾಲಾ ಮಕ್ಕಳು ಹಾಗೂ ಶಿಕ್ಷಕರು ಸ್ವಯಂ ಸೇವಕರಾಗಿ ಕೆಲಸ ಮಾಡ್ತಾರೆ. ಶಿಬಿರದಲ್ಲಿ 3-4 ಸಾವಿರ ಜನರಿಗೆ ಉಚಿತ ಔಷಧಿ ಹಾಗೂ ಚಿಕಿತ್ಸೆ ನೀಡಲಾಗುತ್ತದೆ. ಇದಲ್ಲದೇ ಜಿ.ವಿ. ಮೆಡಿಟೆಕ್, ಮೊಬೈಲ್ ರೇಲ್ ಆಸ್ಪತ್ರೆ `ಜೀವನ್ ರೇಖಾ ಎಕ್ಸ್ ಪ್ರೆಸ್’ ಕೂಡ ಆರಂಭಿಸಿದೆ. ವಾರದಲ್ಲಿ ಮೂರು ದಿನ ವಾರಣಾಸಿ ಹಾಗೂ ಮತ್ತೆ ಮೂರು ದಿನ ಗಾಜಿಪುರ್ ನಲ್ಲಿ ಈ ಮೊಬೈಲ್ ಆಸ್ಪತ್ರೆ ಕಾರ್ಯನಿರ್ವಹಿಸುತ್ತದೆ. 28 ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 450 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಹಾಗೂ 50 ಮಂದಿಗೆ ಸೀಳು ತುಟಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.

ಭವಿಷ್ಯದ ಸವಾಲುಗಳು

ದುರಂತ ಅಂದ್ರೆ ಹಣದ ಕೊರತೆಯಿಂದ ಈಗಲೂ ಅನೇಕ ಮಂದಿ ಶಸ್ತ್ರಚಿಕಿತ್ಸೆಯಿಂದ ದೂರ ಉಳಿದಿದ್ದಾರೆ. ಈ ನಿಟ್ಟಿನಲ್ಲಿ ವೈದ್ಯರನ್ನು ಪ್ರೇರೇಪಿಸುವುದು ಹಾಗೂ ಹಣದ ವ್ಯವಸ್ಥೆ ಮಾಡುವುದು ಒಂದು ಸವಾಲಿನ ಕೆಲಸ. ಈತರ ಸೇವೆಗಳಿಗೆ ಯುವಕರು ಉತ್ಸುಕರಾಗಿದ್ದಾರೆ. ಆದ್ರೆ ಆರೋಗ್ಯ ವಿಷಯದಲ್ಲಿ ಹಿಂದೆ ಸರಿಯುತ್ತಾರೆ. ಕನಿಷ್ಠ ಮೂರು ವರ್ಷದೊಳಗೆ ಲಾಭಪಡೆಯಲು ಹೂಡಿಕೆದಾರರು ಇಚ್ಛಿಸುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಡಾಕ್ಟರ್ ಇಂದು.

ಈ ಸವಾಲುಗಳ ಹೊರತಾಗಿಯೂ, ಜಿ.ವಿ. ಮಡಿಟೆಕ್ 20 ವರ್ಷಗಳಲ್ಲಿ ವಾರಣಾಸಿಯ ಸುತ್ತ ಮುತ್ತಲ 15 ಜಿಲ್ಲೆ, ಉತ್ತರ ಪ್ರದೇಶದ ಪೂರ್ವ ಕ್ಷೇತ್ರ, ಪಶ್ಚಿಮ ಬಿಹಾರ್ ಹಾಗೂ ಜಾರ್ಖಂಡ್ ನಲ್ಲಿ 65 ವೈದ್ಯರ ಸಹಾಯದಿಂದ 7.1 ಮಿಲಿಯನ್ ರೋಗಿಗಳಿಗೆ ಚಿಕಿತ್ಸೆ ನೀಡಿದೆ. 1 ಮಿಲಿಯನ್ ರೋಗಿಗಳಿಗೆ ಚಿಕಿತ್ಸೆ ನೀಡಿದ ಹೊರತಾಗಿ, 25, 552 ಶಿಶುಗಳ ಜನನ, 32 452 ಶಸ್ತ್ರಚಿಕಿತ್ಸೆ ಮತ್ತು ಸುಮಾರು 64,000 ಔಷಧಿಗಳನ್ನು ಹಂಚಿದೆ.

ಗಾಜಿಪುರ್ ಸುತ್ತಮುತ್ತ ಬೆಳೆಯುತ್ತಿರುವ ಜನಸಂಖ್ಯೆ ಪರಿಗಣಿಸಿ ಅಲ್ಲಿ ಮತ್ತೆ 4 ಕೇಂದ್ರಗಳನ್ನು ತೆರೆಯುವ ಚಿಂತನೆ ನಡೆಸಿದ್ದಾರೆ ಇಂದು. ಮೈಕ್ರೋ ಕ್ಲಿನಿಕ್ ಮೂಲಕ ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮತ್ತು ಶಿಕ್ಷಣ ನೀಡುವ ಜೊತೆಗೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳಲು ಅವಕಾಶ ನೀಡುವುದು ಅವರ ಉದ್ದೇಶವಾಗಿದೆ. ವೈದ್ಯಕೀಯ ಸೌಲಭ್ಯದ ಕೊರತೆ ಅಥವಾ ಅದರ ಅಜ್ಞಾನದಿಂದ ಸಾವು ಬರಬಾರದೆಂಬುದು ನಮ್ಮ ಗುರಿ ಎನ್ನುತ್ತಾರೆ ಡಾಕ್ಟರ್ ಇಂದು.


ಲೇಖಕರು : ನಿಶಾಂತ್ ಗೋಯೆಲ್

ಅನುವಾದಕರು: ರೂಪಾ ಹೆಗಡೆ