ಪರೀಕ್ಷಾ ತರಬೇತಿಗಾಗಿ ನಿಮ್ಮ ಜೇಬುಗಳು ಖಾಲಿಯಾಗುತ್ತಿವೆಯೇ? ಉಚಿತ ತರಬೇತಿ ನೀಡುತ್ತಿದೆ ಇಂದೋರ್​​ನ Pyoopel.com

ಟೀಮ್​​ ವೈ.ಎಸ್​​.

0

ಬಿಟೆಕ್ ಪದವೀಧರ ಪ್ರಶಾಂತ್ ದೇಶ್‌ವಾಲ್‌ಗೆ ಬಿಟ್ಟಿ ಊಟದಂಥದ್ದು ಪ್ರಪಂಚದಲ್ಲಿ ಬೇರೆ ಏನೂ ಸಿಗಲು ಸಾಧ್ಯವಿಲ್ಲ ಎಂಬ ಮಾತಿನಲ್ಲಿ ಅಗಾಧ ವಿಶ್ವಾಸ. ಪ್ರಶಾಂತ್ ಬ್ಯಾಂಕಿಂಗ್ ಕೆರಿಯರ್‌ನಲ್ಲಿ ಮುಂದುವರೆಯಲು ತೀರ್ಮಾನಿಸಿ ಐಬಿಪಿಎಸ್ ಪರೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದಾಗ ಪರೀಕ್ಷಾ ತಯಾರಿಗಾಗಿ ಎಷ್ಟು ಬೇಕೋ ಅಷ್ಟು ಹಣ ಖರ್ಚು ಮಾಡಲು ಮಾನಸಿಕವಾಗಿ ನಿರ್ಧರಿಸಿದ್ದರು. ಉತ್ತರಪ್ರದೇಶದ ಸಣ್ಣಹಳ್ಳಿ ಬಿಜ್ನೋರ್‌ನಲ್ಲಿ ವಾಸಿಸುತ್ತಿದ್ದ ಪ್ರಶಾಂತ್‌ಗೆ ಕೋಚಿಂಗ್ ಇನ್ಸ್ಟಿಟ್ಯೂಶನ್‌ಗಳಾಗಲಿ, ಸರಿಯಾದ ತರಬೇತುದಾರರಾಗಲಿ ಸಿಗುವುದು ಅಸಾಧ್ಯವಿತ್ತು. ಹೀಗಾಗಿ ವೆಬ್‌ಸೈಟ್‌ಗಳ ಮೊರೆ ಹೋದ ಪ್ರಶಾಂತ್‌ಗೆ Pyoopel.com ವೆಬ್ ಸೈಟ್ ಲಭ್ಯವಾಯಿತು.

ಇದೊಂದು ಆನ್‌ಲೈನ್ ಪರೀಕ್ಷೆ ಮತ್ತು ಕೋಚಿಂಗ್ ಪೋರ್ಟಾಲ್ ಆಗಿತ್ತು.ಈ ವೆಬ್ ಸೈಟ್ ಮುಖಾಂತರ ಪ್ರಶಾಂತ್‌ಗೆ ಉಚಿತವಾಗಿ ಕೋಚಿಂಗ್ ದೊರಕುವಂತಾಯ್ತು. Pyoopel.comನಲ್ಲಿ ಆನ್‌ಲೈನ್ ಮೂಲಕ ಉಚಿತ ವೀಡಿಯೋ ಕೋಚಿಂಗ್ ಸಾಧ್ಯ. ಜೊತೆಗೆ ಇಲ್ಲಿ ಪಠ್ಯಕ್ರಮದ ವಿಷಯಗಳೂ ಸಹ ವಿಸ್ತಾರವಾಗಿದೆ.

8 ಉಚಿತ ಪರೀಕ್ಷಾ ಕೋರ್ಸ್‌ಗಳ ಮೂಲಕ ಈ ವೆಬ್‌ಸೈಟ್ 5000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ. ಈ ಮೂಲಕ ವಿದ್ಯಾರ್ಥಿ ಹಣವನ್ನು ಪಾವತಿಸದೇ ಉಚಿತ ಪರೀಕ್ಷೆಗಳನ್ನು ನಡೆಸುತ್ತಿದೆ. ಇದರಿಂದ ಉಚಿತ ಪರೀಕ್ಷೆಗಳನ್ನು ನಡೆಸುತ್ತೇವೆಂದು ಹೇಳಿಕೊಂಡು ಪರೀಕ್ಷೆ ನಡೆಸಿದ ಬಳಿಕ ಹಣ ಕೀಳುವ ವೆಬ್‌ಸೈಟ್‌ಗಳ ಕೆಂಗಣ್ಣಿಗೂ ಗುರಿಯಾಗಿದೆ. ಈ ದೃಷ್ಟಿಯಲ್ಲಿ ನೋಡಿದರೆ ನಿಜಕ್ಕೂ ಇದು ಬೃಹತ್ ಮುಕ್ತ ಆನ್‌ಲೈನ್ ಪಠ್ಯಕ್ರಮ ಎಂದೇ ಹೇಳಬಹುದಾಗಿದೆ.

Pyoopel.com ಸಂಸ್ಥಾಪಕರು
Pyoopel.com ಸಂಸ್ಥಾಪಕರು

Pyoopel.com ಹುಟ್ಟಿಕೊಂಡ ಕಥೆ..!

ಕೋಚಿಂಗ್ ಉದ್ಯಮದಲ್ಲಿ ಭಾರತ ಇನ್ನೂ ಸಾಕಷ್ಟು ಹಿಂದುಳಿದಿದ್ದು ಇದೊಂದು ಅಸಂಘಟಿತ ವಲಯವಾಗಿದೆ ಎನ್ನುತ್ತಾರೆ, Pyoopelನ ಸಹ ಸಂಸ್ಥಾಪಕ ಭರತ್ ಪಟೋಡಿ. ಶುಲ್ಕ ಪದ್ಧತಿಯಲ್ಲಿ ಸರಿಯಾದ ರೀತಿಯನ್ನು ಪಾಲಿಸದಿದ್ದರೂ ಕೋಚಿಂಗ್‌ಗೆ ಅತಿಯಾದ ಶುಲ್ಕವನ್ನು ಪಾವತಿಸಬೇಕಾದ ಪರಿಸ್ಥಿತಿ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾದರೂ ಉಚಿತವಾಗಿ ಕೋಚಿಂಗ್ ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ ಎನ್ನುತ್ತಾರೆ ಭರತ್ ಪಟೋಡಿ.

ಪ್ರಸ್ತುತ, Pyoopel.com 150 ಮಂದಿ ಉಪನ್ಯಾಸಕರಿದ್ದು, 8 ಪ್ರಾಥಮಿಕ ಪರೀಕ್ಷಾ ಕೋರ್ಸ್‌ಗಳನ್ನು ಹೊಂದಿದೆ. ಈ ತಂಡ 1000ಕ್ಕೂ ಹೆಚ್ಚು ಪ್ರಶ್ನೆಗಳನ್ನು ತಯಾರಿಸುತ್ತದೆ. ಈ ಪ್ರಶ್ನೆಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾಗಿರುತ್ತದೆ ಎನ್ನುತ್ತಾರೆ ಭರತ್. ಆಕಾಂಕ್ಷಿಗಳಿಗೆ ವಿಮರ್ಶೆ ನಡೆಸಲು ಅವಕಾಶ ನೀಡುವುದರಿಂದ ಕಲಿಕಾ ಅನುಭವ ಸಂಪೂರ್ಣ ಅನುಭವವಾಗುತ್ತದೆ.

www.pyoopel.comಗೆ ಲಾಗಿನ್ ಆಗುವ ವಿದ್ಯಾರ್ಥಿಗೆ ಐಬಿಪಿಎಸ್, ಸಿಎಟಿ, ಸಿಮ್ಯಾಟ್, ಕ್ಲ್ಯಾಟ್, ಜಿಆರ್‌ಇ, ಎಸ್ಎಸ್‌ಸಿ, ಎನ್‌ಡಿಎ ಮತ್ತು ಸಿಡಿಎಸ್‌ ಪರೀಕ್ಷೆಗಳಿಗೆ ಉಚಿತ ಕೋಚಿಂಗ್ ಲಭ್ಯವಿದೆ.

ಈ ತಂಡ ವಿಶ್ಲೇಷಣಾತ್ಮಕ ವಿಧಾನಗಳನ್ನು ಅನುಸರಿಸುತ್ತಿದೆ. ಉದಾಹರಣೆಗೆ, 15 ಉಪನ್ಯಾಸಗಳಾದ ಬಳಿಕ ಸ್ವಯಂಪ್ರೇರಿತರಾಗಿ ಇನ್ನಷ್ಟು ಉಪನ್ಯಾಸಗಳನ್ನು ಕೇಳುವ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು. ಇದು ಪ್ರಪಂಚದ ಎಲ್ಲಾ ಆನ್‌ಲೈನ್ ಕೋಚಿಂಗ್ ಪೋರ್ಟಲ್‌ಗಳು ಎದುರಿಸುತ್ತಿರುವ ಸವಾಲು. ಹೀಗಾಗಿ ಪ್ರತಿದಿನವೂ ವಿಷಯಗಳ ಬೋಧನೆಯ ಸುಧಾರಣೆ ಬಗ್ಗೆ ಚಿಂತಿಸುತ್ತಿರುತ್ತೇವೆ. ಈ ಪಠ್ಯಗಳು ಕ್ರಮಬದ್ಧವಾಗಿದೆ. ಥಿಯರಿ ಉಪನ್ಯಾಸಗಳು 7 ನಿಮಿಷಗಳ ಕಾಲ ಇದ್ದು 15 ನಿಮಿಷ ಅಭ್ಯಾಸ ಅವಧಿ ಹೊಂದಿದೆ ಎನ್ನುತ್ತಾರೆ Pyoopel.com ಸಹ ಸಂಸ್ಥಾಪಕಿ ಸ್ವಾತಿ ಚೌಧರಿ. ಕ್ರೌಡ್ ಫಂಡಿಂಗ್ ಮುಖಾಂತರ ಉತ್ತಮ ಸ್ಟುಡಿಯೋ ಸಹಾಯ ಪಡೆಯುವ ಉದ್ದೇಶವಿದ್ದು, ಇದರಿಂದ ನಮ್ಮ ಹೆಚ್ಚು ಆಕರ್ಷಕವಾಗಿ ಮಾಡಲು ಚಿಂತಿಸುತ್ತಿದ್ದೇವೆ. ಕ್ರೌಡ್ ಫಂಡಿಂಗ್ ಟ್ರೆಂಡ್ ಸದ್ಯಕ್ಕೆ ಇಂಡಿಗೋಗೋ.ಕಾಮ್ ನಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಈ ಮೂಲಕ ಶೀಘ್ರದಲ್ಲಿಯೇ ನಾವು ನಮ್ಮ ಹೂಡಿಕೆ ಶೇ. 80ರಷ್ಟು ಏರಿಕೆ ಕಾಣಬಹುದು ಎನ್ನುತ್ತಾರೆ ಸ್ವಾತಿ ಚೌಧರಿ.

Pyoopel.comನ ನಿರ್ಣಾಯಕ ಘಟ್ಟ

ದೆಹಲಿಯ ಎಫ್ಎಂಎಸ್‌ನ ವಿದ್ಯಾರ್ಥಿಯಾಗಿದ್ದ ಭರತ್ ವಿದ್ಯಾಭ್ಯಾಸ ಮುಗಿದ ತಕ್ಷಣವೇ ಉದ್ಯಮ ಕ್ಷೇತ್ರಕ್ಕೆ ಕಾಲಿರಿಸಿದರು. ಈ ವೇಳೆಗಾಗಲೇ ಸ್ವಾತಿ ಚೌಧರಿ ಮುಂಬೈನ ಐಬಿಎಸ್‌ನಲ್ಲಿ ಎಂಬಿಎ ಮುಗಿಸಿ 2 ವರ್ಷಗಳ ಕಾಲ ಐಸಿಐಸಿಐ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಬಳಿಕ ಜೊತೆಗೂಡಿದ ಈ ಜೋಡಿ 2014ರ ಡಿಸೆಂಬರ್‌ನಲ್ಲಿ ಇಂದೋರ್‌ನಲ್ಲಿ ಪ್ಯೂಪಲ್ ಆರಂಭಿಸುವ ಮೂಲಕ ಆನ್‌ಲೈನ್ ಕೋಚಿಂಗ್ ಉದ್ಯಮ ಕ್ಷೇತ್ರದಲ್ಲಿ ಮೊದಲ ಹೆಜ್ಜೆ ಇರಿಸಿದರು. ಕ್ರೌಡ್ ಫಂಡಿಂಗ್ ಶಿಬಿರಗಳನ್ನು ಏರ್ಪಡಿಸಿ ಪ್ರಾಯೋಜಕರನ್ನು ಪಡೆದು ಹಣ ಸಂಗ್ರಹಣೆ ಮಾಡಿದರು. ಭರತ್ ಪಟೋಡಿಯ ಇಂದೋರ್‌ನ ಮನೆಯ ಸಣ್ಣ ಕೊಠಡಿಯೇ Pyoopel.comನ ಕಚೇರಿಯಾಯಿತು.

ಹೆಸರಾಂತ ಕೋಚಿಂಗ್ ಸಂಸ್ಥೆಯಲ್ಲಿ ಸಿಎಟಿ ಪರೀಕ್ಷೆಗಾಗಿ ಕೋಚಿಂಗ್ ತೆಗೆದುಕೊಳ್ಳುವಾಗ ಶುಲ್ಕ ಕಟ್ಟಲು ಸಹಾಯವಾಗಲಿ ಎಂದು ಅರೆಕಾಲಿಕವಾಗಿ ಉಪನ್ಯಾಸಗಳನ್ನು ನಾನೂ ಸಹ ಮಾಡುತ್ತಿದ್ದೆ. ಇದೇ ವೇಳೆ ಸ್ವಾತಿಯ ಭೇಟಿಯಾಯಿತು. ಕೋಚಿಂಗ್‌ಗಾಗಿ ವಿದ್ಯಾರ್ಥಿಗಳು ಹೆಚ್ಚು ಹಣವನ್ನು ವ್ಯಯಿಸಬೇಕೆಂದು ನಾನು ಮತ್ತು ಸ್ವಾತಿ ಅಂದುಕೊಂಡೆವು. ಈ ಹಣವನ್ನು ಉಳಿಸಲು ನಾವು ಪ್ರಯತ್ನಪಡಬೇಕೆಂದುಕೊಂಡೆವು ಎನ್ನುತ್ತಾರೆ Pyoopel.com ಸಂಸ್ಥಾಪಕ ಭರತ್. ಸ್ವಾತಿ ಜೊತೆಗೂಡಿ ಭರತ್ ಕೆಲವು ಪುಸ್ತಕಗಳನ್ನೂ ಸಹ ಬರೆದಿದ್ದಾರೆ.

ಈ ಸಂಸ್ಥೆಯನ್ನು ಅವರು ಹೇಗೆ ಮುನ್ನಡೆಸಬೇಕೆಂದಿದ್ದಾರೆ?

ಈಗಾಗಲೇ ನಾವು ಕೆಲವು ವಿಶ್ವವಿದ್ಯಾನಿಲಯಗಳು ಹಾಗೂ ಶಿಕ್ಷಣಸಂಸ್ಥೆಗಳಿಗೆ ನಮ್ಮ ಕೋರ್ಸ್​ಗಳ ಪ್ರಾಯೋಜಕತ್ವ ವಹಿಸಿಕೊಳ್ಳಲು ಕೇಳಿದ್ದೇವೆ. ಉದಾಹರಣೆಗೆ ಮ್ಯಾನೇಜ್‌ಮೆಂಟ್ ಕಾಲೇಜುಗಳು ಸಿಮ್ಯಾಟ್‌ನಂತಹ ಪರೀಕ್ಷೆಗಳಿಗೆ ಕೋಚಿಂಗ್‌ನ ಪ್ರಾಯೋಜಕತ್ವ ವಹಿಸಿಕೊಳ್ಳುವುದು ಅರ್ಥಪೂರ್ಣವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ, ಹೆಚ್ಚುವರಿ ಶುಲ್ಕ ಪಾವತಿಸದೇ ಇರುವಂತಾಗುವುದರ ಪ್ರಾಮುಖ್ಯತೆಯನ್ನು ವಿಶ್ವವಿದ್ಯಾನಿಲಯಗಳಿಗೆ ಮನವರಿಕೆ ಮಾಡಿಕೊಡುವುದು ಸಹ ಮುಂದಿನ ಉದ್ದೇಶವಾಗಿದೆ. Pyoopel.com ಶೀಘ್ರದಲ್ಲಿಯೇ ಜಾಹೀರಾತುಗಳು ಮತ್ತು ಪ್ರಾಯೋಜಕರ ಮುಖಾಂತರ ಹೆಚ್ಚು ಹಣ ಗಳಿಸುತ್ತದೆ ಎನ್ನುತ್ತಾರೆ ಭರತ್ ಪಟೋಡಿ.

ಮಾರುಕಟ್ಟೆ ಎಷ್ಟು ದೊಡ್ಡದಾಗಿದೆ?

ಐಬಿಪಿಎಸ್ ಪರೀಕ್ಷೆ ತೆಗೆದುಕೊಳ್ಳಲು 8 ಲಕ್ಷ ಮಂದಿ ವಿದ್ಯಾರ್ಥಿಗಳು ಸಿದ್ಧರಾಗಿದ್ದಾರೆ. ಸಿಎಟಿ ಪರೀಕ್ಷೆ ತೆಗೆದುಕೊಳ್ಳಲು ಸುಮಾರು 2 ಲಕ್ಷ ಮಂದಿ ವಿದ್ಯಾರ್ಥಿಗಳು ಸಿದ್ಧರಾಗಿದ್ದಾರೆ. Pyoopel.com ಈಗಾಗಲೇ ಮಾರುಕಟ್ಟೆಯಲ್ಲಿ ಕಾರ್ಯನಿರತವಾಗಿದೆ. ಈ ವರ್ಷಾಂತ್ಯದೊಳಗೆ ಎಸ್ಎಟಿ ಮತ್ತು ಜಿಮ್ಯಾಟ್ ಪರೀಕ್ಷೆಗಳಿಗೂ ಉಚಿತ ಕೋಚಿಂಗ್ ನೀಡುವ ಗುರಿ ಇದೆ. ಈ ಮೂಲಕ 10 ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕೋಚಿಂಗ್ ನೀಡುವ ಉದ್ದೇಶ ಹೊಂದಿದೆ.

ಪ್ಯೂಪಲ್ ಈ ವರ್ಷಾಂತ್ಯದೊಳಗೆ 20,000 ವಿದ್ಯಾರ್ಥಿಗಳನ್ನು ಸಂಪಾದಿಸುವ ಗುರಿ ಹೊಂದಿದೆ ಎನ್ನುತ್ತಾರೆ ಸ್ವಾತಿ.

ಇವರು ಮಾರ್ಗದರ್ಶಕರನ್ನು ಹೊಂದಿದ್ದಾರೆಯೇ?

ನಿಜವಾಗಿಯೂ ಇಲ್ಲ. ಇದರಿಂದ ಆರಂಭದ ದಿನಗಳಲ್ಲಿ ನಾವು ಅನೇಕ ಕಷ್ಟಕರ ಸಂದರ್ಭಗಳನ್ನು ಎದುರಿಸಬೇಕಾಯಿತು. ನಮ್ಮ ಆರಂಭದ ದಿನಗಳೇ ನಮ್ಮ ಪಾಠಗಳಾದವು ಎನ್ನುತ್ತಾರೆ ಭರತ್. ವಿದ್ಯಾರ್ಥಿಗಳಿಂದ ಹರಿದುಬಂದ ಪ್ರಶಂಸೆಗಳು ಮತ್ತು ವಿದ್ಯಾರ್ಥಿಗಳಿಗಾಗಿ ಕೆಲಸ ಮಾಡಲು ಮುಂದೆ ಬಂದ ಸ್ವಯಂಸೇವಕರೇ ನಮ್ಮ ಸ್ಪೂರ್ತಿ. ಅಂಥ ಒಬ್ಬ ಸ್ವಯಂಸೇವಕ ವಿದ್ಯಾರ್ಥಿ ಡಿಪಿಎಸ್ ರಾಯಪುರದ 17 ವರ್ಷದ ವಿದ್ಯಾರ್ಥಿ ಅಕ್ಷತ್ ತ್ರಿಪಾಠಿ. ಆನ್‌ಲೈನ್‌ ಸಹಾಯಕ್ಕಾಗಿ ಆಕಸ್ಮಿಕವಾಗಿ Pyoopel.com ವೆಬ್‌ಸೈಟ್‌ಗೆ ಬಂದೆ, ಯಾವಾಗ ಅವರು ಪ್ರತಿ ಟೆಸ್ಟ್ ಕೋರ್ಸ್‌ಗಳನ್ನು ಉಚಿತವಾಗಿ ನಡೆಸುತ್ತಾರೆಂದು ತಿಳಿದಾಗ ನಾನೂ ಕೂಡ ಅವರೊಂದಿಗೆ ಸೇರಲು ಬಯಸಿದೆ ಎನ್ನುತ್ತಾರೆ ಅಕ್ಷತ್ ತ್ರಿಪಾಠಿ. ಇದು ವಿದ್ಯಾರ್ಥಿ ಸಮುದಾಯಕ್ಕೆ ನಿಜಕ್ಕೂ ಉಪಯುಕ್ತ ವೆಬ್‌ಸೈಟ್. ಪ್ರಸ್ತುತ ವಿದ್ಯಾರ್ಥಿಗಳಿಗಾಗಿ ಎಸ್ಎಟಿ ವಿಷಯವನ್ನು ಸಿದ್ಧಪಡಿಸುತ್ತಿದ್ದೇನೆ ಎನ್ನುತ್ತಾರೆ ಅಕ್ಷತ್ ತ್ರಿಪಾಟಿ.

ವಿದ್ಯಾರ್ಥಿ ಸಮುದಾಯದಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆಯನ್ನೇ ಇಟ್ಟಿದೆ Pyoopel.com, 2 ಸಂಸ್ಥಾಪಕರು, ಒಬ್ಬ ಸ್ವಯಂಸೇವಕ ಹಾಗೂ ಒಂದು ನಿಕಾನ್ ಕ್ಯಾಮೆರಾ ದೊಡ್ಡ ಆರಂಭಕ್ಕೆ ಕಾರಣವಾಯ್ತು. ಬಹುಶಃ ಇನ್ನೂ ಹೆಚ್ಚಿನ ಸ್ವಯಂಸೇವಕರು ಮತ್ತು ಪ್ರಾಯೋಜಕರು ಇವರೊಂದಿಗೆ ಸೇರಲು ಕಾತುರರಾಗಿದ್ದಾರೆ.

Related Stories