ಈಶಾನ್ಯ ರಾಜ್ಯಗಳಿಗೆ ಐಟಿ ಕೊಂಡೊಯ್ಯುತ್ತಿರುವ ಉದ್ಯಮಿ

ಟೀಮ್​ ವೈ.ಎಸ್​. ಕನ್ನಡ

0

ಸ್ಟಾರ್ಟಅಪ್ ಪರಿಸರ ವ್ಯವಸ್ಥೆ ನಿರ್ಮಿಸುತ್ತಿರುವ ಹಲವು ಭಾರತೀಯ ನಗರಗಳ ಪೈಕಿ ಗುವಾಹಟಿ ಕೂಡ ಒಂದು. 2004ರಲ್ಲಿ ಸಂಜೀವ್ ಶರ್ಮಾ ಕೈತುಂಬಾ ಸಂಬಳ ದೊರೆಯುತ್ತಿದ್ದ ಕೆಲಸ ಬಿಟ್ಟು ಹೊಸದಾಗಿ ಏನನ್ನಾದ್ರೂ ಮಾಡಬೇಕು ಅಂತ ಹುಡುಕಾಟ ಪ್ರಾರಂಭಿಸಿದರು. ಕಂಪ್ಯೂಟರ್ ಅಪ್ಲಿಕೇಶನ್‍ನಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಅವರು ಜಾಪ್ ಇನ್ಫೋಟೆಕ್ ಲಿಮಿಟೆಡ್‍ನಲ್ಲಿ ಸಾಫ್ಟ್​​ವೇರ್ ಕನ್ಸಲ್ಟಂಟ್‍ಆಗಿ ತಮ್ಮ ವೃತ್ತಿಜೀವನ ಆರಂಭಿಸಿದ್ರು.

ಐಬಿಎಂ ಗ್ಲೋಬಲ್ ಸರ್ವೀಸಸ್‍ನ ಐಬಿಎಂ ಏಸ್‍ನಲ್ಲಿ (ಅಡ್ವಾನ್ಸ್ ಕೆರೀರ್ ಎಜುಕೇಶನ್) ಒಳ್ಳೆಯ ಸಂಬಳ ದೊರೆಯುತ್ತಿದ್ದ ಅದ್ಭುತ ಕೆಲಸವನ್ನು ತೊರೆದ ಸಂಜೀವ್ ಶರ್ಮಾ ವೆಬ್‍ಎಕ್ಸ್ ಎಂಬ ಸ್ಟಾರ್ಟಅಪ್ ಸಂಸ್ಥೆ ಪ್ರಾರಂಭಿಸಿದ್ರು. ಆ ಮೂಲಕ ಮೊದಲು ಅಸ್ಸಾಂನ ಸಿನಿಮಾ ರಂಗದ ಕುರಿತ ದ್ವಿಭಾಷಾ ಪೋರ್ಟಲ್ ರುಪಾಲಿಪರ್ದಾ.ಕಾಮ್ ಶುರು ಮಾಡಿದ್ರು.

ಸಂಜೀವ್ ಶರ್ಮಾ ಅವರ ತಂದೆ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿದ್ದರು. ಹೀಗಾಗಿಯೇ ಅವರ ಕುಟುಂಬ ದೇಶದ ಬೇರೆ ಬೇರೆ ಭಾಗಗಳಲ್ಲಿ ಹೆಚ್ಚಾಗಿ ಓಡಾಡಬೇಕಿತ್ತು. ಅಸ್ಸಾಮ್ ಮೂಲದವರಾದ ಅವರು ನಿವೃತ್ತಿ ನಂತರ ಸೆಟಲ್ ಆಗಲು ಗುವಾಹಟಿಯೇ ಒಳ್ಳೆಯ ಜಾಗವೆಂದುಕೊಂಡಿದ್ದರು. ‘ನಾನು ಅಸ್ಸಾಮ್‍ನ ಹೊರಗಡೆ ನನ್ನ ಉದ್ಯಮ ಆರಂಭಿಸಬೇಕು ಅಂದುಕೊಂಡಿದ್ದೆ. ಆದ್ರೆ ದುರಾದೃಷ್ಟವಶಾತ್ ನನ್ನ ತಂದೆ ಅಕಾಲಿಕ ಮರಣವನ್ನಪಿದ ಕಾರಣ ನಾನು ಅಸ್ಸಾಮ್‍ನಿಂದ ಹೊರಹೋಗಲು ಸಾಧ್ಯವಾಗಲಿಲ್ಲ. ಗುವಾಹಟಿಯಲ್ಲಿ ಸೀಮಿತ ಸಂಪನ್ಮೂಲಗಳಿದ್ದವು. ಆದ್ರೆ ನನಗಿದು ಕರ್ಮಭೂಮಿಯಂತೆ ಕಂಡಿತು. ಹೀಗಾಗಿಯೇ ನಾನು ಇದ್ದ ಸೀಮಿತ ಅವಕಾಶಗಳನ್ನೇ ಅನ್ವೇಷಿಸಲು ಪ್ರಾರಂಭಿಸಿದೆ’ ಅಂತ ಸ್ಮರಿಸಿಕೊಳ್ತಾರೆ ಸಂಜೀವ್ ಶರ್ಮಾ.

ರುಪಾಲಿಪರ್ದಾ.ಕಾಂನಲ್ಲಿ ಅಸ್ಸಾಮೀ ಮನರಂಜನಾ ಉದ್ಯಮದ ಇತಿಹಾಸ, ಪ್ರಸ್ತುತ ವಿದ್ಯಮಾನಗಳು, ಲೇಖನಗಳು, ಕೋಶ, ಸ್ಟಾರ್‍ಗಳ ಸಂದರ್ಶನಗಳು, ಸಿನಿಮಾ ವಿಮರ್ಶೆಗಳು ಮತ್ತು ಅದಕ್ಕೆ ಸಂಬಂಧಿಸಿದ ಆಡಿಯೋ ಮತ್ತು ವೀಡಿಯೋಗಳನ್ನು ಜನರು ನೋಡಬಹುದಾಗಿತ್ತು. ಆಗಿನ ಸಮಯದಲ್ಲಿ ಈ ಪರಿಕಲ್ಪನೆ ಹೊಸತನದಿಂದ ಕೂಡಿತ್ತು. ಅದೇ ಕಾರಣದಿಂದಾಗಿಯೋ ಏನೋ ಸಂಜೀವ್‍ಗೆ ಜನರಿಂದ ನಿರೀಕ್ಷಿಸಿದಷ್ಟು ಉತ್ತಮ ಪ್ರತಿಕ್ರಿಯೆ ದೊರೆಯಲಿಲ್ಲ. ಆದ್ರೂ ಭರವಸೆ ಕಳೆದುಕೊಳ್ಳದೇ ಸಂಜೀವ್ ಆ ವೆಬ್‍ಸೈಟ್‍ಅನ್ನು ಪುನರುಜ್ಜೀವನಗೊಳಿಸಿ ಹೊಸ ರೂಪ ನೀಡಿದ್ರು. ಈಗ ಅದಕ್ಕೆ ಉತ್ತಮ ವೀಕ್ಷಕವೃಂದವಿದೆ. ಸದ್ಯ ಸಂಜೀವ್ ರುಪಾಲಿಪರ್ದಾ.ಕಾಂಅನ್ನು ಆಗ್ನೇಯ ಭಾರತದ ಮೊದಲ ಇಂಟರ್‍ನೆಟ್ ಟಿವಿಯನ್ನಾಗಿ ಮಾಡುವ ಗುರಿ ಹೊಂದಿದ್ದಾರೆ.

2004ರಲ್ಲಿ ಸಂಜೀವ್ ವೆಬ್‍ಎಕ್ಸ್​​ಅನ್ನು ಸ್ಟಾರ್ಟಅಪ್ ಕಂಪನಿಯಂತೆ ಪ್ರಾರಂಭಿಸಿದ್ರು. ನಂತರ 2008ರಲ್ಲಿ ಅವರ ಅಣ್ಣ ಮತ್ತು ತಮ್ಮ ಇಬ್ಬರೂ ಅವರೊಂದಿಗೆ ಕೈಜೋಡಿಸಿದರು. ಕ್ರಮೇಣ ವೆಬ್‍ಎಕ್ಸ್ ಟೆಕ್ನಾಲಜೀಸ್ ಎಂಬ ಖಾಸಗೀ ನಿಯಮಿತ ಕಂಪನಿಯಾಗಿ ಬದಲಾಯ್ತು. ಈಗ ಕಂಪನಿಯಲ್ಲಿ ಸಾಫ್ಟ್​​​ ವೇರ್ ಸರ್ವೀಸಸ್, ಐಟಿ ಇನ್‍ಫ್ರಾಸ್ಟ್ರಕ್ಚರ್ ಮ್ಯಾನೇಜ್ಮೆಂಟ್ ಸರ್ವೀಸಸ್ ಹಾಗೂ ಐಟಿ ಸೇಲ್ಸ್ & ಮಾರ್ಕೆಟಿಂಗ್ ವಿಭಾಗಗಳನ್ನು ನೋಡಿಕೊಳ್ಳಲು ಮೂವರು ಪೂರ್ಣಾವಧಿ ನಿರ್ದೇಶಕರಿದ್ದಾರೆ.

ಈ ಕಂಪನಿ ಎಲ್ಲಾ ಶ್ರೇಣಿಗಳ ಐಟಿ ಸೇವೆಗಳನ್ನು ಒದಗಿಸುತ್ತದೆ. ಉತ್ತಮ ಗುಣಮಟ್ಟದ ತಂತ್ರಜ್ಞಾನಗಳ ಬೆಂಬಲದೊಂದಿಗೆ ಸಿಸ್ಟಮ್ ವಿಶ್ಲೇಷಣೆಯಿಂದ, ಪರಿಹಾರವನ್ನು ಕಾರ್ಯರೂಪಕ್ಕೆ ತರುವವರೆಗೂ ಪರಿಪೂರ್ಣ ಸೇವೆ ನೀಡುತ್ತದೆ. ‘ವೆಬ್‍ಎಕ್ಸ್ ವೃತ್ತಿಪರ ಐಟಿ ಸಮಾಲೋಚನಾ ಕಂಪನಿ. ಯೋಜನೆ, ವಿನ್ಯಾಸ, ಅಭಿವೃದ್ಧಿಪಡಿಸುವುದರಿಂದ ಹಿಡಿದು ಐಟಿ ಇನ್‍ಫ್ರಾಸ್ಟ್ರಕ್ಚರ್ ನಿರ್ವಹಣೆವರೆಗೂ ಸಂಪೂರ್ಣವಾಗಿ ಐಟಿ ಪರಿಹಾರಗಳನ್ನು ಒದಗಿಸುತ್ತೆ. ನಾವು ಬೇಡಿಕೆಗಳ ಬಗ್ಗೆ ತಿಳಿದುಕೊಂಡು, ಅದನ್ನು ಹೇಗೆ ಪೂರೈಸುವುದು ಎಂಬುದನ್ನು ವಿಶ್ಲೇಷಿಸಿ, ನಂತರ ಉತ್ತಮ ರೀತಿಯಲ್ಲಿ ಸಮಸ್ಯೆ ಬಗೆಹರಿಸುತ್ತೇವೆ, ಬೇಡಿಕೆಗಳನ್ನು ಪೂರೈಸುತ್ತೇವೆ.’ ಅಂತಾರೆ ಸಂಜೀವ್ ಶರ್ಮಾ.

ಆರಂಭದಲ್ಲಿ ಎದುರಾದ ವಿಘ್ನಗಳು

ಬೀಜ ಬಂಡವಾಳದ ರೂಪದಲ್ಲಿ ಮೊದಲಿಗೆ ಸಂಜೀವ್ ಬಳಿ ಕೇವಲ 15 ಸಾವಿರ ರೂಪಾಯಿಯಿತ್ತಷ್ಟೇ. ಆದ್ರೆ ಅವರ ಗಟ್ಟಿ ಮನಶಕ್ತಿಯೆದುರು ಆ ದೊಡ್ಡ ಸವಾಲು ಕೂಡ ತಲೆಬಾಗಿಸಿತ್ತು. ಹೀಗಾಗಿಯೇ ಕನಸಿನ ದೋಣಿಯನ್ನು ತೇಲಿಸಲು ಅವರಿಗೆ ಯಾವ ಅಡೆತಡೆಗಳೂ ಕಡಿವಾಣ ಹಾಕಲಿಲ್ಲ. ಸಂಜೀವ್ ಅವರ ಗೆಳೆಯರಿಂದ ಎರಡು ಕಂಪ್ಯೂಟರ್‍ಗಳನ್ನು ಕೇಳಿ ಪಡೆದರು. ಆದ್ರೆ ಕಳಪೆ ಇಂಟರ್‍ನೆಟ್ ಸಂಪರ್ಕ, ಇಂಟರ್‍ನೆಟ್ ಕುರಿತ ಅರಿವಿನ ಕೊರತೆ, ಗುಣಮಟ್ಟ ಮಾನವಸಂಪನ್ಮೂಲದ ಕೊರತೆ, ಹಾಗೂ ಭೌಗೋಳಿಕ ಸಮಸ್ಯೆಗಳು ಸಂಜೀವ್‍ರ ಮುಂದೆ ಬೆಟ್ಟದಂತೆ ನಿಂತವು. ಆದ್ರೆ ಎದೆಗುಂದದೆ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿದ ಸಂಜೀವ್, ಅಸ್ಸಾಮ್ ರಾಜ್ಯ ಸಾರಿಗೆ ಸಂಸ್ಥೆಯ ಮೂಲಕ ಮೊದಲ ಗ್ರಾಹಕರನ್ನು ಹಿಡಿದರು.

ಆಗಿನ್ನೂ ಅಸ್ಸಾಂ ತಂತ್ರಜ್ಞಾನದಲ್ಲಿ ಅಷ್ಟಾಗಿ ಬೆಳವಣಿಗೆ ಹೊಂದಿರಲಿಲ್ಲವಾದ್ದರಿಂದ ಪ್ರಾರಂಭದಲ್ಲಿ ತಂತ್ರಜ್ಞಾನ ಬೆಂಬಲಿತ ವ್ಯವಸ್ಥೆಯ ಕುರಿತು ಸಾರಿಗೆ ಸಂಸ್ಥೆ ಅಧಿಕಾರಿಗಳ ಮನವೊಲಿಸಲು ಸಾಕಷ್ಟು ಶ್ರಮಪಡಬೇಕಾಯ್ತು. ಆದ್ರೆ ಅಸ್ಸಾಂ ರಾಜ್ಯ ಸಾರಿಗೆ ಸಂಸ್ಥೆಗೆ ಹೊಸ ವ್ಯವಸ್ಥಾಪಕ ನಿರ್ದೇಶಕರಾಗಿ ರಮೇಶ್ ಜೈನ್ ಅವರು ಬಂದ ಬಳಿಕ ಸಂಜೀವ್ ಕೆಲಸ ಸರಳವಾಯ್ತು. ಕೆಟ್ಟ ಹಂತದಲ್ಲಿದ್ದ ಎಎಸ್‍ಟಿಸಿ ವ್ಯವಸ್ಥೆಯನ್ನು ಕಂಪ್ಯೂಟರೀಕರಣ ಮಾಡುವ ಯೋಜನೆಯನ್ನು ರಮೇಶ್ ಅವರೂ ಹೊಂದಿದ್ದ ಕಾರಣ, ಸಂಜೀವ್ ಕೆಲಸ ಸಲೀಸಾಯ್ತು.

‘ನಾನು ಅವರಿಗೆ ಆನ್‍ಲೈನ್ ಟಿಕೆಟಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸುವ ಐಡಿಯಾ ಕೊಟ್ಟೆ. ಅವರಿಗೆ ಈ ಕುರಿತು ಇಂಟರೆಸ್ಟ್ ಇದ್ದರೂ, ಐಟಿ ತಜ್ಞರೊಬ್ಬರು ಅದು ಅಸಾಧ್ಯ ಅಂತ ಹೇಳಿದ್ದರು. ಆದ್ರೆ ನಾನದನ್ನು ಸವಾಲಾಗಿ ಸ್ವೀಕರಿಸಿ ಕೇವಲ 15 ದಿನಗಳಲ್ಲಿ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. 64ಕೆಬಿಪಿಎಸ್‍ನಲ್ಲಿ ಸಂಪೂರ್ಣ ವ್ಯವಸ್ಥೆ ಕೆಲಸ ಮಾಡುವಂತೆ ನಿರ್ಮಿಸಲಾಗಿತ್ತು’ ಅಂತಾರೆ ಸಂಜೀವ್ ಶರ್ಮಾ.

ಈ ಯೋಜನೆಯಿಂದ ಅಸ್ಸಾಂ ಸಾರಿಗೆಯಲ್ಲಿ 150 ಜನರಿಗೆ ಉದ್ಯೋಗ ಸೃಷ್ಟಿಯಾಯ್ತು. ಜೊತೆಗೆ ಮೊದಲಿಗಿಂತ ಮೂರು ಪಟ್ಟು ಹೆಚ್ಚು ಆದಾಯ ಹರಿದುಬರತೊಡಗಿತು. 150 ಮಂದಿ ಟಿಕೆಟಿಂಗ್ ಏಜೆಂಟ್‍ಗಳನ್ನು ನೇಮಿಸಿಕೊಂಡು ಆನ್‍ಲೈನ್ ಟಿಕೆಟ್ ಬುಕಿಂಗ್‍ಗೆ ಬಿ2ಬಿ ವೇದಿಕೆ ಕಲ್ಪಿಸಲಾಯ್ತು.

ಇವತ್ತು ವೆಬ್‍ಎಕ್ಸ್ ಆಗ್ನೇಯ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅತಿ ದೊಡ್ಡ ಐಟಿ ಕನ್ಸಲ್ಟಿಂಗ್ ಕಂಪನಿ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಸಂಜೀವ್. ಕಂಪನಿಯಲ್ಲಿ ಸುಮಾರು 42 ಮಂದಿ ಅನುಭವೀ ತಂಡದ ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಕಂಪನಿ ಅಸ್ಸಾಂನ ಹಲವು ಭಾಗಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಜೊತೆಗೆ ಮೇಘಾಲಯ ಮತ್ತು ಅರುಣಾಚಲ ಪ್ರದೇಶಗಳಲ್ಲೂ ತನ್ನ ಶಾಖೆಗಳನ್ನು ವಿಸ್ತರಿಸಿಕೊಂಡಿದೆ. ಕಂಪನಿಯ ಕಾರ್ಪೊರೇಟ್ ಕಚೇರಿ ಗುವಾಹಟಿಯಲ್ಲಿದೆ. ಸಾಫ್ಟ್‍ವೇರ್ ಸೇವೆಗಳು, ಸರ್ಕಾರೀ ಹೊರಗುತ್ತಿಗೆ, ಐಟಿಇನ್‍ಫ್ರಾಸ್ಟ್ರಕ್ಚರ್ ನಿರ್ವಹಣೆ, ವೆಬ್ ಅಪ್ಲಿಕೇಶನ್ ಸೇರಿದಂತೆ 200ಕ್ಕೂ ಹೆಚ್ಚು ಸಣ್ಣ, ಮಧ್ಯಮ ಹಾಗೂ ದೊಡ್ಡ ಕಂಪನಿಗಳು ವೆಬ್‍ಎಕ್ಸ್ ಗ್ರಾಹಕರಾಗಿದ್ದಾರೆ. ಅವರಲ್ಲಿ ಶೇಖಡಾ 80ರಷ್ಟು ಗ್ರಾಹಕರು ಸಣ್ಣ ಕಂಪನಿಗಳೇ ಆಗಿವೆ, 12ರಷ್ಟು ಮಧ್ಯಮ ಉದ್ಯಮಗಳು ಹಾಗೂ ಇನ್ನುಳಿದ 8 ಪ್ರತಿಶತಃ ದೊಡ್ಡ ಉದ್ಯಮಗಳು ವೆಬ್‍ಎಕ್ಸ್ ಸೇವೆ ಪಡೆಯುತ್ತಿವೆ.

ಈಗಲೂ ಕೆಲ ಪ್ರಮುಖ ಸಮಸ್ಯೆಗಳಿವೆ

ಅನುಭವೀ ಮಾನವ ಸಂಪನ್ಮೂಲವಿದ್ದರೂ ವೆಬ್‍ಎಕ್ಸ್​​ಗೆ ಇನ್ನೂ ಹೆಚ್ಚಿನ ಗುಣಮಟ್ಟದ ಮಾನವಸಂಪನ್ಮೂಲ ಇಲ್ಲದಿರುವುದು ದೊಡ್ಡ ತಲೆನೋವಾಗಿದೆ. ಇದರಿಂದ ಕೆಲವೊಮ್ಮೆ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ನೀಡುವಲ್ಲಿ ಹಿನ್ನೆಡೆ ಉಂಟಾಗುತ್ತೆ ಅಂತಾರೆ ಸಂಜೀವ್.

ಅಲ್ಲದೇ ಸ್ಟಾರ್ಟಅಪ್ ಪರಿಸರವೂ ಅಷ್ಟಾಗಿ ಪ್ರೋತ್ಸಾಹಿಸುತ್ತಿಲ್ಲ. ಆ ಭಾಗದ ಸ್ಟಾರ್ಟಅಪ್‍ಗಳಿಗೆ ಬಂಡವಾಳ ಹೂಡಿಕೆ, ಮಾರ್ಗದರ್ಶನ, ಸಲಹೆ ಸೂಚನೆ, ಮಾರುಕಟ್ಟೆ ಹಾಗೂ ಸರ್ಕಾರದಿಂದ ಬೆಂಬಲವೂ ದೊರೆಯುವುದಿಲ್ಲ. ಈ ಹಿನ್ನೆಲೆಯಲ್ಲಿ ಅಸ್ಸಾಂನ ಐಟಿ ವಿಭಾಗ ಕೆಲ ಸ್ಕೀಮ್‍ಗಳನ್ನು ಘೋಷಿಸಿದ್ದರೂ, ಅದರ ಕುರಿತು ಸ್ಪಷ್ಟತೆ ದೊರೆಯುತ್ತಿಲ್ಲ.

ಯಶಸ್ಸಿನ ದಾರಿ

ಇದುವರೆಗೆ ವೆಬ್‍ಎಕ್ಸ್ 200 ಪ್ರಾಜೆಕ್ಟ್​​ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪ್ರಾರಂಭಿಕ ಹಂತದಲ್ಲಿ ಬಹುತೇಕ ಪ್ರಾಜೆಕ್ಟ್​​ಗಳು ವೆಬ್‍ಸೈಟ್ ಸಂಬಂಧಿತ ಕೆಲಸಗಳಾಗಿದ್ದವು. ಆದ್ರೆ 2008ರ ನಂತರ ಅವರು ವೆಬ್ ಅಪ್ಲಿಕೇಶನ್ಸ್ ಕುರಿತು ಹೆಚ್ಚಾಗಿ ಗಮನ ಹರಿಸತೊಡಗಿದರು. 2006ರಲ್ಲೇ ರೈಲ್ವೇಸ್‍ನಲ್ಲಿ ಸಿಎಮ್‍ಎಸ್‍ಅನ್ನು ಅಳವಡಿಸುವ ಮೂಲಕ ಮೊಟ್ಟ ಮೊದಲ ಬಾರಿಗೆ ಆ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದು ನಾವೇ ಅಂತ ಹೆಮ್ಮೆಯಿಂದ ನುಡಿಯುತ್ತಾರೆ ಸಂಜೀವ್ ಶರ್ಮಾ.

‘ನಮ್ಮ ಇತ್ತೀಚಿನ ಪ್ರಶಸ್ತಿ ಪುರಸ್ಕೃತ ಮ್ಯಾನೇಜ್ಮೆಂಟ್ ಇನ್ಫಾರ್ಮೇಷನ್ ಸಿಸ್ಟಮ್‍ಗೆ ಆಗ್ನೇಯ ರೈಲ್ವೇ ವಿಭಾಗದಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ಹೀಗಾಗಿಯೇ ಮುಂದಿನ ದಿನಗಳಲ್ಲಿ ಬೇರೆ ಬೇರೆ ವಿಭಾಗಗಳಲ್ಲೂ ಈ ತಂತ್ರಜ್ಞಾನ ಅಳವಡಿಸುವ ಯೋಜನೆಯಿದೆ. ಪಶ್ಚಿಮ ಮತ್ತು ಮಧ್ಯ ಭಾಗದ ರೈಲ್ವೇಸ್‍ನಿಂದ ಈ ಕುರಿತು ಈಗಾಗಲೇ ಸಮಾಲೋಚನೆಗಳು ನಡೆಯುತ್ತಿವೆ’ ಅಂತ ಮಾಹಿತಿ ನೀಡ್ತಾರೆ ಸಂಜೀವ್.

ಪ್ರಸ್ತುತ ವೆಬ್‍ಎಕ್ಸ್ ಅಸ್ಸಾಂ ಸಾರಿಗೆಯ ಸಿಟಿ ಬಸ್ ಮ್ಯಾನೇಜ್ಮೆಂಟ್ ಇನ್ಫಾರ್ಮೇಶನ್ ಸಿಸ್ಟಮ್, ವೆಬ್ ಬೆಂಬಲಿತ ಉದ್ಯೋಗ ವಿಭಾಗ, ಆಯಿಲ್ ಇಂಡಿಯಾ ಲಿಮಿಟೆಡ್, ಮಕ್ಕಳ ಕಲ್ಯಾಣ ಸಚಿವಾಲಯ, ಸೇರಿದಂತೆ ನಿರ್ಮಾಣ ಕೈಗಾರಿಕೆಯಲ್ಲೂ ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಂದು ಯೋಜನೆಯ ಮೊತ್ತ 25 ರಿಂದ 30 ಲಕ್ಷ ರೂಪಾಯಿಯಾಗಿದ್ದು, ಪ್ರತಿ ಪ್ರಾಜೆಕ್ಟ್‍ನಿಂದ 20 ರಿಂದ 30 ಪ್ರತಿಶತಃ ಇವರಿಗೆ ಲಾಭವಿದೆ.

ಸ್ಟಾರ್ಟಅಪ್‍ಗಳನ್ನು ಬೆಂಬಲಿಸಲು ವೆಬ್‍ಎಕ್ಸ್​​ನ ಅಂಗವಾಗಿ ‘ಸ್ಟಾರ್ಟಅಪ್ ಪವರ್‍ಹೌಸ್’ಅನ್ನು ಪ್ರಾರಂಬಿಸಲಾಗಿದೆ. ಈ ಮೂಲಕ 13 ಅದ್ಭುತ ಐಡಿಯಾಗಳನ್ನು ಪಡೆದಿದ್ದು, ಅವುಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಸ್ಟಾರ್ಟಪ್ ಪವರ್‍ಹೌಸ್‍ನ ಕೇಂದ್ರ ಕಚೇರಿ ಗುವಾಹಟಿಯಲ್ಲಿದ್ದು, 11 ಐಡಿಯಾಗಳು ಗುವಾಹಟಿಯಿಂದ, ತಲಾ ಒಂದೊಂದು ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶಗಳಿಂದ ಬಂದಿವೆ.

ನಮ್ಮ ಬಳಿ ಒಂದು ಅನುಭವೀ ತಂಡವಿದೆ. ಅದರಲ್ಲಿ ವಾಣಿಜ್ಯೋದ್ಯಮ ತಜ್ಞರು, ವಿದ್ವಾಂಸರು ಹಾಗೂ ಉದ್ಯಮಿಗಳಿದ್ದಾರೆ. ಅವರೆಲ್ಲರೂ ಒಳ್ಳೆಯ ಸ್ಟಾರ್ಟಪ್‍ಗೆ ಸುಮಾರು 1 ಕೋಟಿ ರೂಪಾಯಿವರೆಗೆ ಬಂಡವಾಳ ಹೂಡಿಕೆ ಮಾಡಲು ಸಿದ್ಧರಾಗಿದ್ದಾರೆ’ ಅಂತ ತಮ್ಮ ಭವಿಷ್ಯದ ಯೋಜನೆಗಳ ಕುರಿತು ಹೇಳಿಕೊಳ್ಳುತ್ತಾರೆ ಸಂಜೀವ್.

ಇತ್ತೀಚೆಗಷ್ಟೇ ಈ 13 ಸ್ಟಾರ್ಟಅಪ್ ಐಡಿಯಾಗಳಲ್ಲಿ ಒಂದಾದ ಸ್ನ್ಯಾಪ್‍ಸ್ಪೀಕ್.ಕಾಂಅನ್ನು 2015 ನಲ್ಲಿ ಫೋಟೋಗ್ರಾಫ್ಸ್ ಟು ಡಿಜಿಟಲ್ ವಿಲೇಜ್ ಎಂಬ ಥೀಮ್‍ನಲ್ಲಿ ಪ್ರದರ್ಶಿಸಲಾಗಿತ್ತು. ಅಲ್ಲಿ ಸಾವಿರಾರು ಜನರಿಂದ ಭೇಷ್ ಎನಿಸಿಕೊಂಡಿತ್ತು. ಜೊತೆಗೆ ಎಸ್‍ಟಿಪಿಐ ಮೇಕ್ ಇನ್ ಇಂಡಿಯಾ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿತು ಅಂತಾರೆ ಸಂಜೀವ್.

ಮುಂದಿನ ಭವಿಷ್ಯಗಳು

11 ವರ್ಷಗಳ ಹೋರಾಟಗಳ ನಂತರ ಸಂಜೀವ್ ಶರ್ಮಾ ಮತ್ತು ತಂಡ ಸಾಕಷ್ಟು ಅನುಭವ ಮತ್ತು ಧೈರ್ಯವನ್ನು ಕ್ರೋಢೀಕರಿಸಿಕೊಂಡಿದ್ದಾರೆ. ಅವರೀಗ ಬೆಂಗಳೂರು, ಕೊಲ್ಕತ್ತಾ ಮತ್ತು ಪುಣೆಗಳಲ್ಲಿ ಹೊಸ ಅಭಿವೃದ್ಧಿ ಕೇಂದ್ರಗಳನ್ನು ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಹೊಸ ಹೊಸ ಐಡಿಯಾಗಳೊಂದಿಗೆ ಗ್ರಾಮೀಣ ಭಾರತದಲ್ಲೂ ಸ್ಟಾರ್ಟಅಪ್‍ಗಳನ್ನು ಪ್ರಾರಂಭಿಸುವ ಯೋಜನೆ ಹೊಂದಿದ್ದಾರೆ.

ಕಳೆದ ಆರ್ಥಿಕ ವರ್ಷದಲ್ಲಿ ವೆಬ್‍ಎಕ್ಸ್ ಸುಮಾರು 5 ಕೋಟಿ ರೂಪಾಯಿ ಆದಾಯ ಪಡೆದಿತ್ತು. ಅದನ್ನು ಮುಂದಿನ ವರ್ಷದೊಳಗೆ 8 ಕೋಟಿಗೆ ಮುಟ್ಟಿಸುವ ಯೋಜನೆ ಸಂಜೀವ್ ಶರ್ಮಾ ಅವರದು.

ಲೇಖಕರು: ಅಪರಾಜಿತ ಚೌಧರಿ
ಅನುವಾದಕರು: ವಿಶಾಂತ್​​​​​​

Related Stories