ರುಚಿ-ಶುಚಿಗೆ ಮತ್ತೊಂದು ಹೆಸರು `ದಿ ಫ್ಲೋರ್ ವರ್ಕ್ಸ್​​​​​​​': ಮೀತಾ ಮಖೇಚಾರ ಪರಾಕ್ರಮದ ಫಲ ಈ ರೆಸ್ಟೋರೆಂಟ್

ಟೀಮ್​​ ವೈ.ಎಸ್​​. ಕನ್ನಡ

0

ನಿಮ್ಮ ಕನಸಿನ ರೆಸ್ಟೋರೆಂಟ್ ಆರಂಭಕ್ಕಾಗಿ ದಾಖಲೆಗಳಿಗೆ ಸಹಿ ಹಾಕುವ ಸಮಯ, ಬಂಡವಾಳ ಇಲ್ಲ ಅನ್ನೋ ಕಾರಣಕ್ಕೆ ನಿಮ್ಮ ಪಾಲುದಾರ ಅದೇ ಸಮಯಕ್ಕೆ ಕೈಕೊಟ್ರೆ? ಉದ್ಯಮದಿಂದ್ಲೇ ಹಿಂದೆ ಸರಿದ್ರೆ? ಅಂತಹ ಪರಿಸ್ಥಿತಿಯಲ್ಲಿ ಬಿಕ್ಕಿ ಬಿಕ್ಕಿ ಅಳಬೇಕು ಎನಿಸುತ್ತೆ ಅಲ್ವಾ? ನಿಮ್ಮ ಕನಸಿಗೆ ಕೊಳ್ಳಿ ಇಡ್ತೀರಾ ಅಲ್ವಾ? ಆದ್ರೆ ಪುಣೆ ನಿವಾಸಿ 43 ವರ್ಷದ ಮೀತಾ ಮಖೇಚಾ ಇದ್ಯಾವುದನ್ನೂ ಮಾಡಲಿಲ್ಲ. ಆರಂಭಿಕ ಆಘಾತದಿಂದ ಚೇತರಿಸಿಕೊಂಡು, ಸವಾಲುಗಳನ್ನು ಎದುರಿಸಲು ಸಜ್ಜಾದ್ರು. ಮುಂದೇನು ಅನ್ನೋ ಬಗ್ಗೆ ಚೆನ್ನಾಗಿ ಆಲೋಚನೆ ಮಾಡಿದ ಮೀತಾ ಬ್ಯಾಂಕ್‍ನಿಂದ ಸಾಲ ಪಡೆದ್ರು. ಸ್ನೇಹಿತರು ಹಾಗೂ ಕುಟುಂಬದವರಿಂದ ಹಣ ಪಡೆದು ತಮ್ಮ ಕನಸಿನ ರೆಸ್ಟೋರೆಂಟ್ `ದಿ ಫ್ಲೋರ್ ವರ್ಕ್ಸ್​​​ ' ಅನ್ನು ಆರಂಭಿಸಿದ್ರು.

ಮೀತಾ ಹುಟ್ಟಿ ಬೆಳೆದಿದ್ದು ಪುಣೆಯಲ್ಲಿ. ಮದುವೆಯ ಬಳಿಕ ತಿನಿಸುಗಳ ಬಗ್ಗೆ ಅವರ ಪ್ರೀತಿ ಮತ್ತಷ್ಟು ಹೆಚ್ಚಾಗಿತ್ತು. ಮೀತಾ ಅವರ ಪತಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕೆಲಸ ಮಾಡ್ತಾ ಇದ್ರು. ಹಾಗಾಗಿ ಮೀತಾ ಕೂಡ ಸ್ಯಾನ್‍ಪ್ರಾನ್ಸಿಸ್ಕೋದಲ್ಲಿ 18 ತಿಂಗಳ ಬಾಣಸಿಗ ತರಬೇತಿ ಕೋರ್ಸ್ ಮಾಡಿದ್ರು. ಮೀತಾ ಅವರಲ್ಲಿದ್ದ ಅಡುಗೆಯ ಕಲೆಗೆ ಈ ಕೋರ್ಸ್ ಕನ್ನಡಿ ಹಿಡಿದಿತ್ತು. ಬಾಣಸಿಗ ತರಬೇತಿ ಪಡೆದ ಬಳಿಕ 4.5 ವರ್ಷಗಳ ಕಾಲ ಮೀತಾ ಅಲ್ಲೇ ಕೆಲಸ ಮಾಡಿದ್ದಾರೆ. `ಲೆಸ್ ಫೋಲಿ',`ಫಿಫ್ತ್ ಫ್ಲೋರ್'ನಂತಹ ಜನಪ್ರಿಯ ರೆಸ್ಟೋರೆಂಟ್‍ಗಳಲ್ಲಿ ಕೆಲಸ ಮಾಡಿದ್ದ ಮೀತಾ ಮೈಖೆಲ್ ರೆಚ್ಯುಟಿ ಅವರ ಬಳಿ ಚಾಕಲೇಟ್ ತಯಾರಿಕೆಯನ್ನೂ ಕಲಿತಿದ್ದರು.

ಭಾರತಕ್ಕೆ ಮರಳಿದ ಮೀತಾ ಇಲ್ಲಿನ ಖ್ಯಾತ ರೆಸ್ಟೋರೆಂಟ್‍ಗಳನ್ನು ಸಂಪರ್ಕಿಸಿದ್ರು. `ಮಲಕಾ ಸ್ಪೈಸ್', ಪುಣೆಯ `ಪೋಸ್ಟ್-91', ಮುಂಬೈನ `ಮಿಯಾ ಕ್ಯುಸಿನಾ' ಸೇರಿದಂತೆ ಹಲವು ರೆಸ್ಟೋರೆಂಟ್‍ಗಳಿಗೆ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಲಾರಂಭಿಸಿದ್ರು. 2010ರ ವೇಳೆಗೆ ಕನ್ಸಲ್ಟನ್ಸಿ ಅಸೈನ್‍ಮೆಂಟ್‍ಗಳ ಬದಲು ತಮ್ಮ ವೈಯಕ್ತಿಕ ಕೆಲಸದತ್ತ ಮೀತಾ ಗಮನಹರಿಸಲಾರಂಭಿಸಿದ್ರು. ತಾವೇ ಯಾಕೆ ಹೋಟೆಲ್ ತೆರೆಯಬಾರದು ಅನ್ನೋ ಆಲೋಚನೆಯೂ ಅವರಿಗೆ ಬಂದಿತ್ತು. ಸುಮಾರು ಒಂದೂವರೆ ವರ್ಷಗಳ ಹುಡುಕಾಟದ ಬಳಿಕ ಕಲ್ಯಾಣಿ ನಗರದಲ್ಲಿ ಅವರ ಉದ್ಯಮಕ್ಕೆ ಸೂಕ್ತವಾದ ಜಾಗ ಸಿಕ್ಕಿತ್ತು. ದೊಡ್ಡ ಹೊರಾಂಗಣ ಹಾಗೂ ಒಳಾಂಗಣ ಎರಡನ್ನೂ ಹೊಂದಿರುವ ಅದ್ಭುತ ಸ್ಥಳ ಅದು. ಮೀತಾ ಮತ್ತವರ ಸ್ನೇಹಿತೆ ಜೊತೆಯಾಗಿ ಉದ್ಯಮಕ್ಕೆ ಕೈಹಾಕಿದ್ರು. ಆಕೆ ಹಣಕಾಸು ವಿಭಾಗದ ಹೊಣೆ ಹೊತ್ತುಕೊಂಡ್ರೆ, ಉಳಿದಿದ್ದನ್ನೆಲ್ಲ ಮೀತಾ ನೋಡಿಕೊಳ್ಳುವುದೆಂದು ಒಪ್ಪಂದವಾಗಿತ್ತು. ಆದ್ರೆ ಅಂದುಕೊಂಡಂತೆ ಆಗಲೇ ಇಲ್ಲ. ಕೊನೆ ಕ್ಷಣದಲ್ಲಿ ಮೀತಾ ಅವರ ಸ್ನೇಹಿತೆ ನಿರ್ಧಾರ ಬದಲಿಸಿದ್ರು. ಹಾಗಾಗಿ ಮೀತಾ ತಮ್ಮ ಕನಸಿನ ಕೆಫೆ ಹಾಗೂ ಯುರೋಪ್‍ನ ತಿನಿಸುಗಳ ಬೇಕರಿಯನ್ನು ಒಂಟಿಯಾಗೇ ಮುನ್ನಡೆಸಲು ತೀರ್ಮಾನಿಸಿದ್ರು.

ಕೊನೆ ಕ್ಷಣದಲ್ಲಾದ ಆಘಾತ, ರೆಸ್ಟೋರೆಂಟ್ ಕಾರ್ಯಾಚರಣೆಗೆ ಹಣದ ಕೊರತೆ ಹೀಗೆ ಒಂದರ ಹಿಂದೊಂದು ಸಮಸ್ಯೆ ಮೀತಾ ಅವರಿಗೆ ಎದುರಾಗಿತ್ತು. ತಮ್ಮ ರೆಸ್ಟೋರೆಂಟ್‍ನ ಯಶಸ್ಸಿಗಾಗಿ ಸಿಬ್ಬಂದಿಗಳು ಅಪಾರ ಪರಿಶ್ರಮಪಟ್ಟಿದ್ದಾರೆ ಎನ್ನುತ್ತಾರೆ ಮೀತಾ. ಒಮ್ಮೆ ಇವರ ರೆಸ್ಟೋರೆಂಟ್‍ಗೆ ಬಂದ ಗ್ರಾಹಕರ ಪೈಕಿ ಶೇ. 60ರಷ್ಟು ಮಂದಿ ಮತ್ತೆ ಮತ್ತೆ ಬರ್ತಾ ಇದ್ರು. ಕೆಲವರಿಗೆ `ದಿ ಫ್ಲೋರ್ ವರ್ಕ್ಸ್​​'ನ ತಿನಿಸುಗಳು ಸಪ್ಪೆ ಅನ್ನಿಸಿದ್ರಿಂದ ಬರುತ್ತಿರಲಿಲ್ಲ. ಆದ್ರೆ ತಿನಿಸುಗಳ ಗುಣಮಟ್ಟ ಹಾಗೂ ರುಚಿಯ ಬಗ್ಗೆ ಮೀತಾ ರಾಜಿ ಮಾಡಿಕೊಂಡಿಲ್ಲ. ಉಪ್ಪು ಹಾಗೂ ಮೆಣಸು ಯುರೋಪಿಯನ್ ತಿನಿಸುಗಳ ಬಹುಮುಖ್ಯ ಪದಾರ್ಥ. ಅಲ್ಲಿನ ಟೇಸ್ಟ್‍ಗೆ ತಕ್ಕಂತಹ ಆಹಾರವನ್ನೇ ಇಲ್ಲೂ ತಯಾರಿಸಲಾಗ್ತಿದೆ.

ನೀವು ಮಾಡ್ತಾ ಇರೋ ಉದ್ಯಮ ಎಲ್ಲರಿಗೂ ಇಷ್ಟವಾಗಬೇಕೆಂದೇನಿಲ್ಲ, ಹಾಗೆ ನಿರೀಕ್ಷಿಸುವುದು ಕೂಡ ತಪ್ಪು ಎನ್ನುತ್ತಾರೆ ಮೀತಾ. ಅವರ ರೆಸ್ಟೋರೆಂಟ್‍ಗೆ ಬರುವ ಕೆಲವು ಗ್ರಾಹಕರು ಭಾರತೀಯ ತಿನಿಸುಗಳನ್ನೇ ನಿರೀಕ್ಷಿಸ್ತಾರೆ. ಅವರಿಗೆ ಯುರೋಪಿಯನ್ ಆಹಾರದ ಬಗ್ಗೆ ಮನವರಿಕೆ ಮಾಡಿಕೊಡೋದು ದೊಡ್ಡ ಸವಾಲು. ತಿನಿಸುಗಳ ಬಗ್ಗೆ ಅವರಿಗಿದ್ದ ಬದ್ಧತೆ ಮೀತಾ ಅವರ ಉದ್ಯಮವನ್ನು ಹಂತ ಹಂತವಾಗಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದೆ. ಎಲ್ಲರ ಸಲಹೆಯನ್ನೂ ಸ್ವಾಗತಿಸುವುದು ಮೀತಾ ಅವರಲ್ಲಿರುವ ದೊಡ್ಡ ಗುಣ. ಮೊದಲು ಪಿಟಾ ಬ್ರೆಡ್, ಸ್ಯಾಂಡ್‍ವಿಚ್, ಸೂಪ್ ಮತ್ತು ಸಲಾಡ್‍ಗಳನ್ನು ಮಾರಾಟ ಮಾಡುವ ಬೇಕರಿ ನಡೆಸಲು ಮೀತಾ ತೀರ್ಮಾನಿಸಿದ್ರು. ನೀವೊಬ್ಬ ಬಾಣಸಿಗರಾಗಿರೋದ್ರಿಂದ ಹೋಟೆಲ್ ನಡೆಸಬಹುದಲ್ಲ ಅನ್ನೋ ಅಭಿಪ್ರಾಯ ಎಲ್ಲೆಡೆ ಕೇಳಿಬಂದಿತ್ತು. ಮೊದಲು ಒಂದೊಂದೇ ತಿನಿಸುಗಳನ್ನು ಮೀತಾ ಪರಿಚಯಿಸಿದ್ರು, ಗ್ರಾಹಕರ ಒತ್ತಾಯದ ಮೇರೆಗೆ ರೆಸ್ಟೋರೆಂಟ್ ಆರಂಭಿಸುವ ನಿರ್ಧಾರಕ್ಕೆ ಬಂದ್ರು.

ಒಮ್ಮೆ ಮೀತಾ ಅವರ ಪೋಷಕರು ಲಂಡನ್‍ನಲ್ಲಿ ಲೆಮನ್ ರಾಸ್ಬೆರಿ ಕೇಕ್ ತಿಂದಿದ್ರಂತೆ. ಅದನ್ನು ಮಾಡಿಕೊಡುವಂತೆ ಕೇಳಿದ್ರು. ಮೀತಾ ಸವಾಲಾಗಿ ಸ್ವೀಕರಿಸಿ, ಲೆಮನ್ ರಾಸ್ಬೆರಿ ಕೇಕನ್ನು ಅದ್ಭುತವಾಗಿ ತಯಾರಿಸಿದ್ರು. ಈಗ `ದಿ ಫ್ಲೋರ್ ವರ್ಕ್ಸ್​​​ ' ರೆಸ್ಟೋರೆಂಟ್‍ನ ಮೆನುವಿನಲ್ಲಿ ಲೆಮನ್ ರಾಸ್ಬೆರಿ ಕೇಕ್‍ಗೆ ಖಾಯಂ ಜಾಗ ಸಿಕ್ಕಿದೆ. ಮೀತಾ ಅವರಿಗೆ ಪ್ರಾಣಿಗಳೆಂದ್ರೆ ಸಿಕ್ಕಾಪಟ್ಟೆ ಇಷ್ಟ. ಪುಣೆಯ ಸಾಕುಪ್ರಾಣಿಗಳ ಸಂಘಟನೆಗಳೊಂದಿಗೆ ಮೀತಾ ಸಂಪರ್ಕ ಹೊಂದಿದ್ದಾರೆ. ಹಾಗಾಗಿ `ದಿ ಫ್ಲೋರ್ ವರ್ಕ್ಸ್​​​ ' ಪ್ರಾಣಿ ಪ್ರಿಯ ರೆಸ್ಟೋರೆಂಟ್ ಕೂಡ ಹೌದು. ನಾಯಿಗಳು ಪ್ರೀತಿಯ ಸಂಕೇತ, ಮನೆಯವರೆಲ್ಲ ಇಡೀ ದಿನ ಕೆಲಸದಲ್ಲಿ ಬ್ಯುಸಿಯಾಗಿರೋದ್ರಿಂದ ನಾಯಿಗಳಿಗೆ ಒಂಟಿತನ ಕಾಡುತ್ತೆ ಅನ್ನೋದು ಮೀತಾ ಅವರ ಕಳಕಳಿ. ಹಾಗಾಗಿ ತಮ್ಮ ಸಾಕು ನಾಯಿ ಹಾಗೂ ಬೆಕ್ಕುಗಳೊಂದಿಗೆ ರೆಸ್ಟೋರೆಂಟ್‍ಗೆ ಬರಲು ಗ್ರಾಹಕರಿಗೆ ಮೀತಾ ಅವಕಾಶ ಕಲ್ಪಿಸಿದ್ದಾರೆ. ಟೇಬಲ್ ಕಾಲಿಗೆ ನಾಯಿಗಳನ್ನು ಕಟ್ಟಿ ಹಾಕಿ, ಮಾಲೀಕರು ತಮ್ಮ ತಿನಿಸುಗಳನ್ನು ಸವಿಯಬಹುದು.

ಸಾಮಾಜಿಕ ಜಾಲತಾಣಗಳಲ್ಲಿ ಮೀತಾ ಅವರ ರೆಸ್ಟೋರೆಂಟ್ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಒಂದು ವರ್ಷದಿಂದೀಚೆಗೆ ಮೀತಾ ತಾವು ಪಡೆದ ಸಾಲವನ್ನೆಲ್ಲ ಹಿಂದಿರುಗಿಸುತ್ತಿದ್ದಾರೆ. ಡಿಸೆಂಬರ್‍ನಲ್ಲಿ ಪುಣೆಯ ವಾನೋವ್ರಿಯಲ್ಲಿ `ದಿ ಫ್ಲೋರ್ ವರ್ಕ್ಸ್​​​'ನ ಮತ್ತೊಂದು ಶಾಖೆ ಆರಂಭವಾಗಲಿದೆ. ಜೊತೆಗೆ ಅಲ್ಲಲ್ಲಿ ಬೇಕರಿಗಳನ್ನು ಆರಂಭಿಸುವ ಯೋಜನೆಯನ್ನೂ ಮೀತಾ ಹಾಕಿಕೊಂಡಿದ್ದಾರೆ. ಸದ್ಯ 6-8 ಬೇಕರಿಗಳಿಗೆ ಬೇಕಾಗುವಷ್ಟು ಉತ್ಪಾದನಾ ಸಾಮರ್ಥ್ಯವನ್ನು `ದಿ ಫ್ಲೋರ್ ವರ್ಕ್ಸ್​​​​​ ' ಹೊಂದಿದೆ. ಪಾಲುದಾರಿಕೆಯ ನೆರವಿನಿಂದ ಉದ್ಯಮವನ್ನು ಇನ್ನಷ್ಟು ವಿಸ್ತರಿಸಲು ಮೀತಾ ಮುಂದಾಗಿದ್ದಾರೆ.

ಲೇಖಕರು: ಇಂದ್ರಜಿತ್​​ ಡಿ ಚೌಧರಿ
ಅನುವಾದಕರು: ಭಾರತಿ ಭಟ್​​​​​​

Related Stories