ಓದಿದ್ದು ಇಂಜಿನಿಯರಿಂಗ್- `ಪ್ರಿಯಾ'ವಾಗಿದ್ದು ಫ್ಯಾಷನ್ ಲೋಕ

ಟೀಮ್ ವೈ.ಎಸ್.

0

ಚೆನ್ನಾಗಿ ಕಾಣಬೇಕು ಅನ್ನೋ ಆಸೆ ಯಾರಿಗಿರೋದಿಲ್ಲ ಹೇಳಿ. ಅದರಲ್ಲೂ ಮಹಿಳೆಯರಿಗಂತೂ ಸೌಂದರ್ಯ ಅನ್ನೋದೇ ಮುಕುಟವಿದ್ದಂತೆ. ಆದ್ರೆ ಅದು ಎಲ್ಲರಿಗೂ ಒಲಿದಿರೋದಿಲ್ಲ. ಅಂಥವವರ ಪಾಲಿಗೆ ಆಶಾಕಿರಣ ಪ್ರಿಯಾ ವಾಘ್. ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಆಗಿದ್ರೂ ಫ್ಯಾಷನ್ ಲೋಕದಲ್ಲಿ ಪ್ರಿಯಾ ಹೊಸ ಸಂಚಲನವನ್ನೇ ಸೃಷ್ಟಿಸಿದ್ದಾರೆ. ಮವೆನ್‍ಚಿಕ್ ಎಂಬ ಇ ಕಾಮರ್ಸ್ ಹಾಗೂ ಫ್ಯಾಷನ್ ಅಡ್ವೈಸರಿ ವೆಬ್‍ಸೈಟ್ ಒಂದನ್ನ ಆರಂಭಿಸಿದ್ದಾರೆ. ಸುಂದರವಾಗಿ ಕಾಣಬೇಕು ಅನ್ನೋ ಕನಸು ಹೊತ್ತವರಿಗೆಲ್ಲ ಮೇಕ್‍ಓವರ್ ಮಂತ್ರವನ್ನು ಹೇಳಿಕೊಡುತ್ತಿದ್ದಾರೆ. ಕಾರ್ಪೊರೇಟ್ ಜಗತ್ತಿನ ಮಹಿಳೆಯರಿಂದ ಹಿಡಿದು, ವಿದ್ಯಾರ್ಥಿನಿಯರು, ಬ್ಯಾಂಕ್ ಉದ್ಯೋಗಿಗಳು, ಗೃಹಿಣಿಯರು, ಬಡವರು, ಶ್ರೀಮಂತರು, ಮಧ್ಯಮವರ್ಗದವರು ಹೀಗೆ ಎಲ್ಲರಿಗೂ ಇಲ್ಲಿ ಮೇಕ್‍ಓವರ್ ಬಗ್ಗೆ ಆನ್‍ಲೈನ್‍ನಲ್ಲೇ ಸಲಹೆ ಸೂಚನೆಗಳನ್ನ ಕೊಡಲಾಗುತ್ತಿದೆ.

ವೃತ್ತಿ ಜೀವನ ಮೇಕ್ ಓವರ್..!

ಅಸಲಿಗೆ ಪ್ರಿಯಾ ವಾಘ್‍ರ ವೃತ್ತಿ ಜೀವನಕ್ಕೇ ಮೇಕ್ ಓವರ್ ಸಿಕ್ಕಿದೆ ಅನ್ನೋದ್ರಲ್ಲಿ ಅನುಮಾನವಿಲ್ಲ. ಫ್ಯಾಷನ್ ಲೋಕದ ರಾಜಧಾನಿ ಮುಂಬೈನಲ್ಲಿ ಹುಟ್ಟಿ ಬೆಳೆದಿದ್ದ ಪ್ರಿಯಾ ಅವರಿಗೆ ಮೊದಲಿನಿಂದ್ಲೂ ಫ್ಯಾಷನ್ ಬಗ್ಗೆ ಆಸಕ್ತಿಯಿತ್ತು. ಉದ್ದವಿರಲಿ, ಗಿಡ್ಡಕ್ಕಿರಲಿ, ದಪ್ಪಗಿರಲಿ, ಸಣ್ಣಗಿರಲಿ, ಯುವತಿರಾಗಿರಲಿ ಅಥವಾ ಮುದುಕಿಯರೇ ಆಗಿರಲಿ ಅವರವರ ವ್ಯಕ್ತಿತ್ವಕ್ಕೆ ಫ್ಯಾಷನ್ ಮೆರುಗು ಬೇಕು. ಇದರಿಂದ ಚೆನ್ನಾಗಿ ಕಾಣಿಸುವುದರ ಜೊತೆಗೆ ಆತ್ಮವಿಶ್ವಾಸ ಕೂಡ ಮೂಡುತ್ತದೆ ಅನ್ನೋದು ಪ್ರಿಯಾ ಅವರ ಅಭಿಪ್ರಾಯ. ಸೌಂದರ್ಯ ಅನ್ನೋದು ನಾವು ಧರಿಸೋ ಬಟ್ಟೆಯಲ್ಲಿ ಇರೋದಿಲ್ಲ. ಅದನ್ನ ಹೇಗೆ ಧರಿಸಿದ್ದೇವೆ ಅನ್ನೋದರ ಮೇಲಿರುತ್ತೆ ಅಂತಾ ಪ್ರಿಯಾ ಫ್ಯಾಷನ್ ಮಂತ್ರ ಪಠಿಸುತ್ತಾರೆ. 6 ವರ್ಷಗಳ ಕಾಲ ಮಾರ್ಕೆಟಿಂಗ್ ಹಾಗೂ ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡಿದ್ದ ಪ್ರಿಯಾ ಅವರಿಗೆ ಆ ವೃತ್ತಿಯಲ್ಲಿ ಆನಂದವಿರಲಿಲ್ಲ. ಮನಸ್ಸು ಬದಲಾವಣೆಯನ್ನು ಬಯಸಿತ್ತು. 2009ರಲ್ಲಿ ವಿವಾಹವಾದ ಪ್ರಿಯಾ, ಮತ್ತೆರಡು ವರ್ಷ ಕಳೆಯುವಷ್ಟರಲ್ಲಿ ಮುದ್ದು ಮಗುವಿನ ತಾಯಿಯಾದರು.

ಪತ್ನಿಗೆ ವೃತ್ತಿಯಲ್ಲಿ ಅಷ್ಟೇನೂ ಆಸಕ್ತಿಯಿಲ್ಲ ಅನ್ನೋದನ್ನ ಪ್ರಿಯಾ ಅವರ ಪತಿ ಬಾಲಚಂದ್ರ ಕೆ ವಾಘ್ ಅರಿತಿದ್ರು. ದಿನಪತ್ರಿಕೆಯಲ್ಲಿ ಬಂದಿದ್ದ ಜಾಹೀರಾತೊಂದನ್ನ ನೋಡಿ, ಪ್ರಿಯಾರನ್ನ ಮೇಕ್‍ಓವರ್ ತರಬೇತಿ ಪಡೆಯಲು ಪ್ರೋತ್ಸಾಹಿಸಿದರು. ಅಲ್ಲಿಂದ ಪ್ರಿಯಾರ ಬದುಕಲ್ಲಿ ಫ್ಯಾಷನ್ ಹವಾ ಜೊತೆಗೆ ಹೊಸ ಗಾಳಿ ಬೀಸಿತ್ತು. ತರಬೇತಿ ಬಳಿಕ ಸ್ವಂತ ಉದ್ಯಮಕ್ಕೆ ಕೈಹಾಕಿದ ಪ್ರಿಯಾ ವಾಘ್, ಮವೆನ್‍ಚಿಕ್ ಎಂಬ ವೆಬ್‍ಸೈಟ್ ಆರಂಭಿಸಿದರು. ಮನೆ , ಕುಟುಂಬ, ವೃತ್ತಿ ಎಲ್ಲವನ್ನೂ ನಿಭಾಯಿಸುತ್ತಿರುವ ಮಹಿಳೆಯರಲ್ಲಿ ಪ್ರಿಯಾ ಅವರ ಈ ವೆಬ್‍ಸೈಟ್ ಇನ್ನಷ್ಟು ಆತ್ಮವಿಶ್ವಾಸ ಹುಟ್ಟುಹಾಕುವ ಕೆಲಸ ಮಾಡುತ್ತಿದೆ. ಭಾರತದಲ್ಲಿ ಮವೆನ್‍ಚಿಕ್‍ನ 30ಕ್ಕೂ ಹೆಚ್ಚು ಸಲಹೆಗಾರರಿದ್ದಾರೆ. ಅತಿ ಕಡಿಮೆ ವೆಚ್ಚದಲ್ಲಿ ಮವೆನ್‍ಚಿಕ್ ವೆಬ್‍ಸೈಟ್‍ನಲ್ಲಿ ಇಮೇಜ್ ಮೇಕ್ ಓವರ್ ಬಗ್ಗೆ ಅಮೂಲ್ಯ ಸಲಹೆಗಳನ್ನ ನೀಡಲಾಗುತ್ತಿದೆ.

ಸಿಂಗಾಪುರದಲ್ಲಿರುವ ತಮ್ಮ ಸಹೋದರನಿಂದಲೂ ಪ್ರಿಯಾ ಸ್ಪೂರ್ತಿ ಪಡೆದಿದ್ದಾರೆ. ಪ್ರಿಯಾರ ಸಹೋದರ ಕೈತುಂಬಾ ಸಂಬಳವಿದ್ದ ಕೆಲಸ ಬಿಟ್ಟು ಸಂಚಾರ ವಿಭಾಗದಲ್ಲಿ ಇ ಕಾಮರ್ಸ್ ಸೇವೆಯನ್ನು ನೀಡುತ್ತಿದ್ದಾರೆ. ಇನ್ನು ಪ್ರಿಯಾ ಅವರ ಪತಿ ಬಾಲಚಂದ್ರ ಕೂಡ ತಮ್ಮ ಕೆಲಸವನ್ನು ಬಿಟ್ಟು ಮವೆನ್‍ಚಿಕ್ ಭಾಗವಾಗಿದ್ದಾರೆ. ಕಂಪನಿಯ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವ ಉದ್ಯೋಗ ಅದ್ಭುತ ಅನುಭವ ಎಂದು ಬಣ್ಣಿಸುವ ಪ್ರಿಯಾ, ಪರಿಶ್ರಮವಿದ್ರೆ ಯಾವುದೂ ಅಸಾಧ್ಯವಲ್ಲ ಎನ್ನುತ್ತಾರೆ. ಪ್ರಿಯಾ ಅವರ ಮೇಕ್‍ಓವರ್ ಸಲಹೆಗಳು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ. ಪುರುಷರಿಗೂ ಅಂದವಾಗಿ ಕಾಣೋದು ಹೇಗೆ ಅನ್ನೋ ಬಗ್ಗೆ ಟಿಪ್ಸ್ ಸಿಗ್ತಾ ಇದೆ. ಸುಂದರವಾಗಿಲ್ಲ ಅನ್ನೋ ಕಾರಣಕ್ಕೆ ಆತ್ಮಾಭಿಮಾನ, ಆತ್ಮವಿಶ್ವಾಸ, ನಂಬಿಕೆಯನ್ನೇ ಕಳೆದುಕೊಂಡವರಲ್ಲಿ ಮವೆನ್‍ಚಿಕ್ ಹೊಸ ಚೈತನ್ಯ ಮೂಡಿಸುತ್ತಿದೆ. ನಿಮಗೂ ಲಾವಣ್ಯವತಿಯಾಗಿ ಕಾಣುವ ಆಸೆಯಿದ್ರೆ ಮವೆನ್‍ಚಿಕ್ ವೆಬ್‍ಸೈಟ್‍ಗೆ ಒಂದು ವಿಸಿಟ್ ಮಾಡೋದನ್ನು ಮರೆಯಬೇಡಿ.