`ಸ್ಮಾರ್ಟ್' ಸಾಧಕ: ಶಾಲೆ ಬಿಟ್ಟರೂ ಕನಸುಗಳ ಬೆನ್ನೇರಿದ ಸಾಹಸಿ..

ಟೀಮ್​​ ವೈ.ಎಸ್​​.

0

ಅವರೊಬ್ಬ ಕನಸುಗಾರ. ಕನಸುಗಳ ಬೆನ್ನತ್ತಿ ಅತೀ ಚಿಕ್ಕ ವಯಸ್ಸಿನಲ್ಲೇ ಯಶಸ್ಸಿನ ಉತ್ತುಂಗಕ್ಕೆ ತಲುಪಿದ ಧೀರ. ವಿಶ್ವದ ಮೊಟ್ಟ ಮೊದಲ ಆಂಡ್ರಾಯ್ಡ್ ಸ್ಮಾರ್ಟ್ ವಾಚ್ ಆವಿಷ್ಕರಿಸಿದ ಯುವ ಉದ್ಯಮಿ. ಹೌದು ನಾವ್ ಹೇಳ್ತಾ ಇರೋದು ಸಿದ್ಧಾಂತ್ ವತ್ಸ್ ಅವರ ಬಗ್ಗೆ. ಬಿಹಾರದ ಪಾಟ್ನಾ ಮೂಲದ 19ರ ಹರೆಯದ ಈ ಯುವಕನ ಸಾಧನೆಗೆ ವಿಶ್ವದ ದೊಡ್ಡಣ್ಣ ನಿಬ್ಬೆರಗಾಗಿದ್ದಾರೆ. ಖುದ್ದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಸಿದ್ಧಾಂತ್‍ರನ್ನು ಆಹ್ವಾನಿಸಿದ್ದಾರೆ.

ಸಿದ್ಧಾಂತ್ ಅವರಿಗೆ ಬಾಲ್ಯದಿಂದಲೂ ಕನಸುಗಳ ಬೆನ್ನೇರಿ ಹೋಗುವ ಅಭ್ಯಾಸವಿತ್ತು. ಇದಕ್ಕಾಗಿಯೇ ಸಿದ್ಧಾಂತ್ ಹೈಸ್ಕೂಲ್‍ನಲ್ಲಿದ್ದಾಗ 2 ವರ್ಷ ಶಾಲೆಗೆ ಹೋಗುವುದನ್ನೇ ಬಿಟ್ಟಿದ್ರು. ಶಾಲೆ ಬಿಟ್ಟು ಉದ್ಯಮ ಆರಂಭಿಸುವ ಸಿದ್ಧಾಂತ್ ನಿರ್ಧಾರ ಕೇಳಿ ಪೋಷಕರಿಗೆ ಆಘಾತವಾಗಿದ್ದು ನಿಜ. ಆದ್ರೆ ಅದನ್ನೆಲ್ಲ ಮರೆಸಿ ಹೆತ್ತವರು ಹೆಮ್ಮೆಪಡುವಂಥ ಸಾಧನೆಯನ್ನು ಸಿದ್ಧಾಂತ್ ಮಾಡಿದ್ದಾರೆ. ಮಾದರಿ ಯುವ ಉದ್ಯಮಿ ಸಿದ್ಧಾಂತ್ ಅವರ ಸಾಧನೆಯ ಹಾದಿ ಇಲ್ಲಿದೆ.

1. ಅವರೊಬ್ಬ ಕನಸುಗಾರ. ಅವರ ಈ ಲಕ್ಷಣವೇ ಉದ್ಯಮಿಯಾಗಲು ನೆರವಾಗಿದೆ. ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಲು ಸಿದ್ಧಾಂತ್ ವತ್ಸ್ ಹಿಂದೇಟು ಹಾಕಿದವರಲ್ಲ.

2. ಬಾಲಿವುಡ್ ಸಿನಿಮಾದಂತೆ ಕೊನೆಯಲ್ಲಿ ಎಲ್ಲವೂ ಒಳ್ಳೆಯದಾಗುತ್ತೆ ಅನ್ನೋದು ಸಿದ್ಧಾಂತ್ ಅವರ ನಂಬಿಕೆ. ಇಲ್ಲದಿದ್ದಲ್ಲಿ ಅದು ಮುಕ್ತಾಯವಲ್ಲ ಎನ್ನುತ್ತಾರವರು.

3. ಸಿದ್ಧಾಂತ್ ವತ್ಸ್ 8ನೇ ತರಗತಿಯಲ್ಲಿದ್ದಾಗಲೇ ಎನ್‍ಜಿಓ ಆರಂಭಿಸಿದ್ದರು.

4. ನಿಯಮಗಳ ಮಧ್ಯೆ ತಮ್ಮನ್ನ ತಾವೇ ಬಂಧಿಯಾಗಿರಿಸಿಕೊಂಡಿರಲಿಲ್ಲ. ತಮಗನಿಸಿದ್ದನ್ನೆಲ್ಲಾ ಮಾಡಿದ್ದಾರೆ. ನೈತಿಕವಾಗಿ ಅದು ಸರಿ ಅನ್ನೋದು ಸಿದ್ಧಾಂತ್ ವಾದ.

1. ಆ್ಯಂಡ್ರಾಯ್ಡ್ ಸಿಸ್ಟಮ್ಸ್ : 17 ವರ್ಷದವರಿದ್ದಾಗ ಸಿದ್ಧಾಂತ್ ಆಂಡ್ರಾಯ್ಡ್ ಸಿಸ್ಟಮ್ಸ್ ಆರಂಭಿಸಿದ್ರು. ಅಪೂರ್ವ ಸುಕಾಂತ್ ಹಾಗೂ ಇನ್ನಿಬ್ಬರು ಗೆಳೆಯರು ಈ ಸಂದರ್ಭದಲ್ಲಿ ಸಿದ್ಧಾಂತ್ ಅವರಿಗೆ ನೆರವಾಗಿದ್ದಾರೆ. ವಿಶ್ವದ ಮೊದಲ ಆಂಡ್ರಾಯ್ಡ್ ಸ್ಮಾರ್ಟ್ ವಾಚ್ ತಯಾರಿಸಿದ ಸಾಹಸಿ ಸಿದ್ಧಾಂತ್ ವತ್ಸ್. ಈ ವಾಚ್ ಮೂಲಕ ನೀವು ಕರೆ ಮಾಡಬಹುದು, ಇಂಟರ್ನೆಟ್ ಶೋಧಿಸಬಹುದು, ವಾಟ್ಸ್​​ಆ್ಯಪ್ ಬಳಸಬಹುದು, ಹಾಡು ಕೇಳಬಹುದು, ಫೋಟೋ ತೆಗೆಯಬಹುದು. ಸ್ಮಾರ್ಟ್ ಫೋನ್‍ನಲ್ಲಿ ಏನೇನು ಮಾಡಬಹುದೋ ಅದನ್ನೆಲ್ಲಾ ಈ ವಾಚ್‍ನಲ್ಲಿ ಮಾಡಬಹುದು.

ಈ ಸ್ಮಾರ್ಟ್ ವಾಚ್ ತಯಾರಿಕೆಗಾಗಿಯೇ ಸಿದ್ಧಾಂತ್ ಹೈಸ್ಕೂಲ್‍ನಲ್ಲಿದ್ದಾಗ ಶಾಲೆ ಬಿಟ್ಟಿದ್ರು. 2 ವರ್ಷ ಶಿಕ್ಷಣದಿಂದ ದೂರವಿದ್ರು. 2013ರಲ್ಲಿ ಸ್ಮಾರ್ಟ್ ವಾಚನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ರು. ಇದರ ಬೆಲೆ 220 ಡಾಲರ್. 110 ದೇಶಗಳಲ್ಲಿ ಆಂಡ್ರಾಯ್ಡ್ ಸ್ಮಾರ್ಟ್ ವಾಚ್ ಮಾರಾಟವಾಗ್ತಿದೆ.

2. ದಿ ಫಲಕ್ ಫೌಂಡೇಶನ್ : ಫಲಕ್ ಫೌಂಡೇಶನ್ ಸಿದ್ಧಾಂತ್ ಅವರ ತಾಯಿ ಆರಂಭಿಸಿದ ಎನ್‍ಜಿಓ. ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯವನ್ನು ಎನ್‍ಜಿಓ ಮಾಡ್ತಿದೆ. 7ನೇ ತರಗತಿಯಲ್ಲಿದ್ದಾಗ ಸಿದ್ಧಾಂತ್ ಮಕ್ಕಳಿಗೆ ಪಾಠ ಮಾಡ್ತಾ ಇದ್ರು. ಕಂಪ್ಯೂಟರ್, ಗಣಿತ ಹಾಗೂ ಇಂಗ್ಲಿಷ್ ಕಲಿಸ್ತಿದ್ರು. ನಂತರ ಎನ್‍ಜಿಓನ ಭಾಗವಾದ ಸಿದ್ಧಾಂತ್, ಬ್ಲಡ್ ಕ್ಯಾಂಪ್ ಹಾಗೂ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುತ್ತಿದ್ರು.

ಈ ಎನ್‍ಜಿಓ ಮೂಲಕವೇ ಸಿದ್ಧಾಂತ್ ಬೋಧ್‍ಗಯಾದಲ್ಲಿ ಸನ್ಯಾಸಿಗಳ ಅಂತರಾಷ್ಟ್ರೀಯ ವಿಹಾರವೊಂದನ್ನು ಆರಂಭಿಸಿದ್ದಾರೆ. ವರ್ಜಿನಿಯಾ ಹಾಗೂ ಅಮೆರಿಕದೊಂದಿಗೆ ಪಾಲುದಾರಿಕೆ ಮೂಲಕ ಈ ಆಶ್ರಮ ನಿರ್ಮಿಸಲಾಗಿದೆ. ಇದಕ್ಕೆ ಭಾರೀ ಪ್ರಮಾಣದ ವಿದೇಶಿ ಬಂಡವಾಳ ಹರಿದು ಬಂದಿದೆ. ಉದ್ಘಾಟನಾ ಸಮಾರಂಭಕ್ಕೆ ಸಾವಿರಕ್ಕೂ ಅಧಿಕ ಗಣ್ಯರು ಸಾಕ್ಷಿಯಾಗಿದ್ದು ವಿಶೇಷ. ಇದು ಬಿಹಾರದ ಆರ್ಥಿಕ ಪ್ರಗತಿ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಗೆ ನೆರವಾಗಿದೆ.

3. ಸಿದ್ಧಾಂತ್ ಬಿಲ್ ಗೇಟ್ಸ್​​​ರಂತಹ ಘಟಾನುಘಟಿ ಉದ್ಯಮಿಗಳೆದುರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ನೂರಕ್ಕೂ ಹೆಚ್ಚು ಕಾನ್ಫರೆನ್ಸ್​​​ಗಳಲ್ಲಿ ಮಾತನಾಡಿದ್ದಾರೆ.

4. ಭಾರತದ ಪ್ರಧಾನಿ ಕಾರ್ಯಾಲಯ ಸಿದ್ಧಾಂತ್ ಅವರಿಗೆ ಅತ್ಯುತ್ತಮ ಉದ್ಯಮಿ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ಸಿದ್ಧಾಂತ್‍ರನ್ನು ವೈಟ್ ಹೌಸ್‍ಗೆ ಆಹ್ವಾನಿಸಿದ್ದಾರೆ.

ಪ್ರೇರಣೆ : ಒಂದೇ ಕೆಲಸವನ್ನು ದೀರ್ಘಕಾಲದ ವರೆಗೆ ಮಾಡುವುದರಲ್ಲಿ ಸಂತೋಷವಿಲ್ಲ ಎನ್ನುತ್ತಾರೆ ಸಿದ್ಧಾಂತ್. ಕನಸುಗಳ ಬೆನ್ನೇರಿ ಮನಸ್ಸಿಗೆ ಬಂದಿದ್ದನ್ನೆಲ್ಲ ಮಾಡುವುದು ಅವರಿಗಿಷ್ಟ. ಯಾವುದೂ ತಮಗೆ ಪ್ರೇರಣೆಯಾಗೋದಿಲ್ಲ ಅನ್ನೋದು ಅವರ ನೇರ ನುಡಿ.

ಸವಾಲು : ಏನನ್ನಾದ್ರೂ ಮಾಡಲು ಹೊರಟಾಗ ನಮ್ಮ ಧೈರ್ಯಗೆಡಿಸುವ ಸ್ನೇಹಿತರು ಹಾಗೂ ಅಕ್ಕಪಕ್ಕದವರೇ ಭಾರತದಲ್ಲಿ ದೊಡ್ಡ ಸವಾಲು ಎನ್ನುತ್ತಾರೆ ಸಿದ್ಧಾಂತ್. ಕೆಲಸಕ್ಕೆ ಬಾರದ ಸಲಹೆ ಕೊಡ್ತಾರೆ ಅನ್ನೋದು ಅವರ ಕಿಡಿನುಡಿ.

ನಾಯಕತ್ವ ಶೃಂಗಸಭೆ : ವಿವಿಧ ಕ್ಷೇತ್ರಗಳ ಉದ್ಯಮಿಗಳನ್ನು ಒಂದೆಡೆ ಸೇರಿಸಲು ವೇದಿಕೆಯೊಂದನ್ನು ಸ್ಥಾಪಿಸಲು ಸಿದ್ಧಾಂತ್ ಮುಂದಾಗಿದ್ದಾರೆ. ಇತರರಿಗೆ ಪ್ರೇರಣೆಯಾಗಬಲ್ಲ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಿದ್ದಾರೆ. ಶಾಲಾ - ಕಾಲೇಜುಗಳಿಗೂ ಇದನ್ನು ವಿಸ್ತರಿಸುವ ಆಲೋಚನೆ ಅವರಿಗಿದೆ. ಇದನ್ನು ಬಿಟ್ರೆ ಮುಂದೇನು ಮಾಡ್ತೀನಿ ಅನ್ನೋದು ಸಿದ್ಧಾಂತ್ ಅವರಿಗೆ ಗೊತ್ತಿಲ್ವಂತೆ. ಮನಸ್ಸಿಗೆ ಬಂದ ಕೆಲಸವನ್ನು ಮಾಡಿಯೇ ಸಿದ್ಧ ಎನ್ನುತ್ತಾರೆ ಈ ಸಾಹಸಿ ಯುವಕ.

Related Stories