ಹಬ್ಬದ ಸಂದರ್ಭದಲ್ಲಿ ಖರೀದಿ ಹೇಗೆ..? ಆಫ್​​ಲೈನ್​​, ಆನ್​​​ ಲೈನ್ ವಾರ್..!

ಟೀಮ್​​ ವೈ.ಎಸ್​​. ಕನ್ನಡ

0

ಇದು ಹೇಳಿ ಕೇಳಿ ಈ ವಾಣಿಜ್ಯ ಯುಗ. ಆ್ಯಪ್​​ಗಳ ಮೂಲಕ ತಮಗೆ ಬೇಕಾದ ವಸ್ತುಗಳನ್ನು, ಉತ್ಪನ್ನಗಳನ್ನು ಬುಕ್ ಮಾಡಿ ಮನೆ ಬಾಗಿಲಿಗೆ ತರಿಸುವ ಕಾಲ. ಆದರೆ ಈ ಆನ್​​​ಲೈನ್ ವಾಣಿಜ್ಯದ ಅಬ್ಬರದ ನಡುವೆಯೂ, ಆಫ್ ಲೈನ್ ವ್ಯವಹಾರ ಅಂದರೆ ಅಂಗಡಿಗೆ ಹೋಗಿ ನೇರವಾಗಿ ಖರೀದಿಸುವ ಪ್ರಕ್ರಿಯೆ ಈಗಲೂ ಜೋರಾಗಿದೆ. ಜನರನ್ನು ತನ್ನತ್ತ ಸೆಳೆಯುತ್ತಿದೆ. ಆಕರ್ಷಣೆ ಉಳಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಒಂದು ಮಾತು ನೆನಪಿಡಬೇಕು.. ತಂತ್ರಜ್ಞಾನ ಬದಲಾದಂತೆ , ಆಫ್ ಲೈನ್ ವ್ಯವಹಾರ ಕೂಡ ಸ್ಪರ್ಧೆಯನ್ನು ಎದುರಿಸುತ್ತಿದೆ. ಬಳಕೆದಾರರ ಮನ ಗೆಲ್ಲಲು, ಅಂಗಡಿ ಮಾಲೀಕರು ಕಸರತ್ತು ನಡೆಸುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳ ಮಧ್ಯೆಯೂ ಆಫ್​​ಲೈನ್ ವ್ಯವಹಾರ ಬಿರುಸಿನಿಂದ ಸಾಗುತ್ತಿದೆ.

ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಐಐಎಂ- ಬಿ ಇದರಲ್ಲಿ ಕಲಿತು ಪ್ರಸಕ್ತ ಪ್ರೋಸಸ್ ಇಂಜಿನಿಯರಿಂಗ್ ವಾಲ್ ಮಾರ್ಟ್ ಲ್ಯಾಬ್ಸ್​​​ನ ಕಾರ್ಯತಂತ್ರ ನಿರ್ದೇಶಕರಾಗಿರುವ ಪಿಯೂಶ್ ಕುಮಾರ್ ಒಂದು ಪ್ರಶ್ನೆ ಕೇಳಿದರು. ನಿಮ್ಮಲ್ಲಿ ಎಷ್ಟು ಮಂದಿ ಫ್ಲಿಪ್​​ಕಾರ್ಟ್ ಮತ್ತು ಇತರ ಇ ಸಂಸ್ಥೆಗಳಲ್ಲಿ ಖರೀದಿ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಕೈ ಎತ್ತಿದವರು ಶೇಕಡಾ 80 ಮಂದಿ ಮಾತ್ರ. ಇದೇ ವೇಳೆ ಬಿಗ್ ಬಜಾರ್ ಸೇರಿದಂತೆ ಇತರ ಮಾಲ್​​​ಗೇ ಎಷ್ಟು ಮಂದಿ ಭೇಟಿ ನೀಡಿದ್ದೀರಾ ಎಂದು ಕೇಳಿದಾಗ ಉತ್ತರ ಶೇಕಡಾ ನೂರಾಗಿತ್ತು. ಇಲ್ಲಿ ಅಡಗಿದೆ ಆಫ್​​ಲೈನ್ ವ್ಯವಹಾರದ ಯಶಸ್ಸು ಎಂದು ಪಿಯೂಶ್ ಕುಮಾರ್ ಬಹಿರಂಗಪಡಿಸಿದರು.

ಯುವರ್​ ಸ್ಟೋರಿ ಟೀಮ್​ನಿಂದ ರಿಯಾಲಿಟಿ ಚೆಕ್​..!

ಇದು ವಾಸ್ತವದ ಒಂದು ಮುಖವಾಗಿದ್ದರೂ, ಆನ್ ಲೈನ್ ವ್ಯವಹಾರ ಮಾತ್ರ ದಿನದಿಂದ ದಿನಕ್ಕೆ ಪೈಪೋಟಿ ನೀಡುತ್ತಿದೆ ಎಂಬ ಮಾತನ್ನು ಮಾತ್ರ ತಳ್ಳಿಹಾಕುವಂತಿಲ್ಲ. ಇದರ ಸತ್ಯಾಸತ್ಯೆ ಮತ್ತು ನಿಜವಾಗಿಯೂ ಏನು ನಡೆಯುತ್ತಿದೆ ಎಂಬುದನ್ನು ತಿಳಿಯಲು ಯುವರ್ ಸ್ಟೋರಿ ರಿಯಾಲಿಟಿ ಚೆಕ್ ನಡೆಸಿತು. ಬೆಂಗಳೂರಿನ ವಾಣಿಜ್ಯ ಹಬ್ ಕಮರ್ಷಿಯಲ್ ಸ್ಟ್ರೀಟ್​​ಗೆ ಭೇಟಿ ನೀಡಿತು.

ಈಸ್ಟರ್ನ್ ಸ್ಟೋರ್ ಸಂಸ್ಥೆಯ ಪೈಸನ್ ಈ ರೀತಿ ಹೇಳುತ್ತಾರೆ. ಆನ್​​ಲೈನ್ ವ್ಯವಹಾರದಲ್ಲಿ ಹಲವು ಲೋಪ ದೋಷಗಳಿವೆ. ಅವುಗಳನ್ನು ಪರಿಹರಿಸಬೇಕಾಗಿದೆ. ಬಟ್ಟೆ ಹಾಗೂ ಇನ್ನಿತರ ವಸ್ತುಗಳಿಗೆ ಸಂಬಂಧಿಸಿದಂತೆ, ಅವುಗಳನ್ನು ಮುಟ್ಟಿ ನೋಡಿ, ಧರಿಸಿ ಉಂಟಾಗುವ ಅನುಭವ, ಆನ್ ಲೈನ್ ವ್ಯವಹಾರದಲ್ಲಿ ಸಾಧ್ಯವಿಲ್ಲ. ಇದು ಪೈಸನ್ ಸ್ಪಷ್ಟ ಮಾತು.

ಆನ್ ಲೈನ್ ಮಾರಾಟ ಸಂಸ್ಥೆಗಳು ಜಾಹೀರಾತಿಗಾಗಿಯೇ ನೂರು ಕೋಟಿ ರೂಪಾಯಿ ವೆಚ್ಚ ಮಾಡುತ್ತಿವೆ. ಇದರ ಜೊತೆ ಜೊತೆಗೆ ಬೆಳಕಿಗೆ ಬಾರದ ಹಲವು ವಿಷಯಗಳು ಕೂಡ ಇದೆ ಎನ್ನುತ್ತಾರೆ ಪೈಸನ್.

ಕಳೆದ ಹಲವು ವರ್ಷಗಳಿಂದ ಜೀನ್ಸ್ ಮಾರಾಟದಲ್ಲಿ ನಿರತವಾಗಿರುವ ಪ್ರಶಾಂತ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆನ್ ಲೈನ್ ಮಾರಾಟ ಸಂಸ್ಥೆಗಳಿಂದ ನಮ್ಮ ಮೇಲೆ ಪರಿಣಾಮ ಉಂಟಾಗಿಲ್ಲ. ಜೀನ್ಸ್ ಖರೀದಿ ಮಾಡುವ ಗ್ರಾಹಕ, ಅಂಗಡಿಗೆ ಬಂದು ಅದನ್ನು ಪರಿಶೀಲಿಸಿ ಖರೀದಿ ಮಾಡುತ್ತಾನೆ. ಆನ್ ಲೈನ್​​​ನಲ್ಲಿ ಇದು ಸಾಧ್ಯವಿಲ್ಲ ಎನ್ನುತ್ತಾರೆ ಪ್ರಶಾಂತ್.

ಸುಮನ್ ರಫ್ತು ಸಂಸ್ಥೆಯಲ್ಲಿ ಫ್ಲೋರ್ ಮ್ಯಾನೇಜರ್ ಆಗಿರುವ ಲಕ್ಷ್ಮೀ ನಾರಾಯಣ್ ಮಾತ್ರ ಆನ್ ಲೈನ್ ಮಾರಾಟ ಸಂಸ್ಥೆ ಕುರಿತಂತೆ ತೀವ್ರ ಆಕ್ರೋಶ ಭರಿತರಾಗಿ ಮಾತನಾಡುತ್ತಾರೆ. ಅವುಗಳನ್ನೆಲ್ಲ ನಿಷೇಧಿಸಬೇಕು. ತೋರಿಸುವುದು ಒಂದು, ಮಾರಾಟ ಮಾಡುವುದು ಇನ್ನೊಂದು. ಇದು ಆನ್​​​ಲೈನ್ ಮೋಸ ಎನ್ನುತ್ತಾರೆ ಲಕ್ಷ್ಮೀ ನಾರಾಯಣ್. ಆನ್ ಲೈನ್ ಸಂಸ್ಥೆಗಳ ಭಾರೀ ರಿಯಾಯಿತಿ ಮತ್ತು ಕೊಡುಗೆ ಅಬ್ಬರದಿಂದಾಗಿ ಆಫ್​​ಲೈನ್ ವ್ಯಾಪಾರ ಅಂದರೆ ಚಿಲ್ಲರೆ ವ್ಯಾಪಾರದಲ್ಲಿ ಶೇಕಡಾ 30ರಿಂದ 40 ರಷ್ಟು ಇಳಿಮುಖವಾಗಿದೆ. ಇದು ಲಕ್ಷ್ಮೀ ನಾರಾಯಣ್ ಅವರ ಆಕ್ರೋಶದ ನುಡಿ.

ಆನ್​ಲೈನ್​ ಸವಾಲು ಎದುರಿಸೋದು ಹೇಗೆ..?

ಬದಲಾದ ಪರಿಸ್ಥಿತಿಯಲ್ಲಿ ಆನ್ ಲೈನ್ ಸವಾಲು ಎದುರಿಸಲು ಆಫ್​​ ಲೈನ್ ಮಾರಾಟ ಜಾಲ ಏನೆಲ್ಲಾ ಬದಲಾವಣೆ ಮಾಡಬೇಕು ಎಂಬುದರ ಬಗ್ಗೆ ಚಿಂತಿಸಬೇಕಾದ ಅನಿವಾರ್ಯತೆ ಇದೆ. ಸಂಸ್ಥೆಯಲ್ಲಿ ಪ್ರತೀದಿನ ಶೇಕಡಾ 10ರಿಂದ 35ರಷ್ಟು ವ್ಯಾಪಾರ ವಾಗುತ್ತಿದೆ. ಇದರ ಜೊತೆಗೆ ರೇಟ್ ಫಿಕ್ಸ್ ಮಾಡುವಾಗ ಅದು ದುಬಾರಿಯಾಗದಂತೆ ಎಚ್ಚರ ವಹಿಸುತ್ತೇವೆ. ಬಳಕೆದಾರ ಚರ್ಚೆ ಮಾಡಿ ಕಡಿಮೆ ಮಾಡಲು ಅವಕಾಶ ಲಭಿಸುವ ಹಾಗೆ ನೋಡಿಕೊಳ್ಳುತ್ತೇವೆ. ಇದಲ್ಲದೆ ಕೊಡುಗೆ ಘೋಷಿಸುತ್ತೇವೆ. ಒಂದು ಖರೀದಿಸಿದರೆ ಮತ್ತೊಂದು ಉಚಿತ ಮತ್ತು ಪ್ರತಿ ವಾರ ಹೊಸ ಸ್ಟಾಕ್ ಸೇರ್ಪಡೆ . ಹೀಗೆ ಬಳಕೆದಾರರ ಆಸಕ್ತಿ ಉಳಿಸಿಕೊಳ್ಳುವತ್ತ ಯಶಸ್ವಿಯಾಗುತ್ತೇವೆ ಎನ್ನುವುದು ಲಕ್ಷ್ಮೀ ನಾರಾಯಣ್ ಅವರ ಮಾತು.

ಉದ್ಯಮಿಗಳು, ವ್ಯಾಪಾರಿಗಳು ಏನಂತಾರೆ..?

ಖ್ಯಾತ ಉದ್ಯಮಿ ಹಾಗೂ ಬಿ.ಕೆ. ಎಂಟರ್ ಪ್ರೈಸಸ್ ಮಾಲೀಕರಾಗಿರುವ ರಾಜೇಶ್ ಈ ರೀತಿ ಹೇಳುತ್ತಾರೆ. ಹೌದು ಖಂಡಿತವಾಗಿಯೂ ಆನ್ ಲೈನ್ ವ್ಯವಹಾರದಿಂದಾಗಿ ನಾವು ಪೈಪೋಟಿ ಎದುರಿಸುತ್ತಿದ್ದೇವೆ. ಇದು ಸತ್ಯ. ಇದೇ ವೇಳೆ ಆನ್ ಲೈನ್ ವ್ಯವಹಾರದಲ್ಲಿ ಯಾಕೆ ಕೈ ಜೋಡಿಸಿಲ್ಲ ಎಂಬುದಕ್ಕೆ ಕೂಡ ನನ್ನ ಬಳಿ ಉತ್ತರ ಇದೆ. ಇದರಲ್ಲಿ ಲಾಭದ ಪ್ರಮಾಣ ತೀರಾ ಕಡಿಮೆ. ಅಲ್ಲದೆ ಉತ್ಪನ್ನಗಳನ್ನು ತಿರಸ್ಕರಿಸುವ ಸಾಧ್ಯತೆ ಹೆಚ್ಚು. ಇದು ರಾಜೇಶ್ ಅವರ ವಾದ.

ದೀಪಾವಳಿ ಸೇರಿದಂತೆ ಹಬ್ಬದ ಸಂದರ್ಭದಲ್ಲಿ ಗ್ರಾಹಕರನ್ನು ಆಕರ್ಷಿಸಲು ಯಾವ ಹೊಸ ಯೋಜನೆ ಹಮ್ಮಿಕೊಂಡಿದ್ದೀರಾ ಎಂಬ ಪ್ರಶ್ನೆಗೆ ರಾಜೇಶ್ ಈ ರೀತಿ ಹೇಳುತ್ತಾರೆ. ಬಳಕೆದಾರರಲ್ಲಿ ಜಾಗೃತಿ ಮೂಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾನರ್ ಗಳನ್ನು ಹಾಕುತ್ತೇವೆ. ಅಲ್ಲದೆ ಆಫ್​ಲೈನ್ ವ್ಯವಹಾರದ ಪ್ಲಸ್ ಪಾಯಿಂಟ್ ಏನು ಎಂಬುದನ್ನು ತಿಳಿಸುತ್ತೇವೆ. ಬಳೆಕೆದಾರರು ಏನನ್ನು ಬಯಸುತ್ತಾರೋ ಆ ಉತ್ಪನ್ನಗಳು ದೊರೆಯುವ ವ್ಯವಸ್ಥೆ ಮಾಡಿದ್ದೇವೆ. ಇದು ನಮ್ಮ ಕಾರ್ಯತಂತ್ರ ಎನ್ನುತ್ತಾರೆ ರಾಜೇಶ್.

ಹೆಚ್ಚುತ್ತಿರುವ ಆನ್​​​ಲೈನ್ ಪೈಪೋಟಿ ಬಗ್ಗೆ ಖ್ಯಾತ ಸಿಲ್ಕ್ ಹೌಸ್ ಶೋ ರೂಂ ಸಂಸ್ಥೆಯ ಮಾಲಿಕರಾಗಿರುವ ಮಯೂರ್ ಹರ್ಷ ಈ ರೀತಿ ಹೇಳುತ್ತಾರೆ. ಆನ್ ಲೈನ್ ಮಾಲಿಕರ ಹಾಗೆ ನಾವು ಯಾವುದೇ ರೀತಿಯ ಡಿಸ್ಕೌಂಟ್ ನೀಡಲ್ಲ. ಯಾಕೆಂದರೆ ಸಿಲ್ಕ್ ಗುಣ ಮಟ್ಟ, ಅದನ್ನು ನೋಡಿ ನಿರ್ಧರಿಸಬೇಕು. ಬಾಯಿ ಮಾತಿನ ಪ್ರಚಾರವನ್ನೇ ನಾವು ಅವಲಂಬಿಸಿದ್ದೇವೆ. ಇದು ಮಯೂರ್ ಹರ್ಷ ಅವರ ಮಾತು.

ಇದು ವ್ಯಾಪಾರಿಗಳ ಮಾತು. ಆದರೆ ಇಲ್ಲಿಗೆ ನಾವು ಸುಮ್ಮನಾಗಿಲ್ಲ. ಇನ್ನಷ್ಟು ಮಾಹಿತಿ ಕಲೆ ಹಾಕಲು ನಿರ್ಧರಿಸಿದೆವು. ಹೀಗೆ ಮಾತಿಗೆ ಸಿಕ್ಕಿದವರು ಕೀರ್ತನಾ ಮತ್ತು ರಚಿತಾ. ಬಿಗ್ ಬ್ಯಾಂಗ್ ಸೇಲ್ ಸೇರಿದಂತೆ ಆನ್ ಲೈನ್ ಧಮಾಕಾ ಕುರಿತಂತೆ ಅವರು ಮುಕ್ತ ಅನಿಸಿಕೆ ವ್ಯಕ್ತಪಡಿಸಿದರು. ಆಫ್​​ಲೈನ್ ಮಾರಾಟ ಮಳಿಗೆಯಲ್ಲಿ ಚೌಕಾಸಿ ಮಾಡಬಹುದು. ಆನ್ ಲೈನ್ ವ್ಯಾಪಾರದಲ್ಲಿ ಇದಕ್ಕೆ ಅವಕಾಶ ಇಲ್ಲ. ಅದಕ್ಕಾಗಿ ನಾವು ಆಫ್​​ಲೈನ್ ಮಾರಾಟದ ಮೊರೆ ಹೋಗುತ್ತೇವೆ . ಇದು ರಚಿತಾ ಮಾತು.

ಆನ್ ಲೈನ್ ವ್ಯವಹಾರದಲ್ಲಿ ಚೌಕಾಸಿ ಕನಸಿನ ಮಾತು. ಅಲ್ಲದೆ ಬಟ್ಟೆ ಬರೆಗೆ ಹೇಳುವುದಾದರೆ ಸೂಕ್ತವಾದ ಅಳತೆಯ ಉಡುಪು ಬೇಕಾಗುತ್ತದೆ. ಅದನ್ನು ಟ್ರಯಲ್ ನೋಡಿಯೇ ನಿರ್ಧರಿಸಬೇಕಾಗುತ್ತದೆ. ಇದಕ್ಕಾಗಿ ಆಫ್​​ಲೈನ್ ಮಾರಾಟ ಸರಕು ಕೇಂದ್ರಗಳಿಗೆ ಭೇಟಿ ನೀಡುತ್ತೇನೆ ಎನ್ನುತ್ತಾರೆ ಕೀರ್ತನಾ.

ಚೌಕಾಸಿ ಮತ್ತು ಬಳಕೆದಾರರಿಗೆ ಸೂಕ್ತವಾದ ಉಡುಪು. ಈ ಎರಡು ಅಂಶಗಳಲ್ಲದೆ ಇತರ ಯಾವ ವಿಷಯಗಳು ಬಳಕೆದಾರರನ್ನು ಅಂಗಡಿಗಳತ್ತ ಸೆಳೆಯುತ್ತಿವೆ ಎಂಬುದು ಕೂಡ ಕುತೂಹಲಕಾರಿಯಾಗಿದೆ. ಆಫ್​​​ಲೈನ್ ಮತ್ತು ಆನ್ ಲೈನ್ ಎರಡು ಕೂಡಾ ಪ್ಲಸ್ ಮತ್ತು ಮೈನಸ್ ಅಂಶಗಳನ್ನು ಹೊಂದಿವೆ. ಆಫ್​​ ಲೈನ್ ಅಂದರೆ ಅಂಗಡಿಗಳಲ್ಲಿ ಆಯ್ಕೆಗೆ ಸಾಕಷ್ಟು ಅವಕಾಶಗಳಿವೆ. ಆನ್ ಲೈನ್ ನಲ್ಲಿ ಇದು ಸೀಮಿತ ಅವಕಾಶ ಹೊಂದಿದೆ. ಆನ್ ಲೈನ್ ಮಾರಾಟದಲ್ಲಿ ರಿಯಾಯಿತಿ, ಕೊಡುಗೆ ದೊರೆಯುತ್ತದೆ. ಇದು ಪ್ರೋತ್ಸಾಹಕದಾಯಕವಾಗಿರುತ್ತದೆ. ಈ ಎಲ್ಲ ಒಳ್ಳೆಯ ಅಂಶಗಳನ್ನು ಉಭಯ ಮಾರ್ಕೆಟಿಂಗ್​​ ವ್ಯವಸ್ಥೆ ಅಳವಡಿಸಿಕೊಳ್ಳಬೇಕಾಗಿದೆ ಎನ್ನುತ್ತಾರೆ ಬಳಕೆದಾರರು.

ದೇಶದಲ್ಲಿ ಶೇಕಡಾ 85 ರಷ್ಟು ವ್ಯವಹಾರ ಆಫ್ ಲೈನ್ ಮೂಲಕವೇ ನಡೆಯುತ್ತದೆ. ಉಳಿದವು ಇತರ ವಿಭಾಗಗಳದ್ದು. ಆನ್ ಲೈನ್ ಮಾಡಬೇಕಾ ಅಥವಾ ಆಫ್​​ ಲೈನ್ ಮಾಡಬೇಕಾ ಅಂತಾ ಬಳಕೆದಾರರು ಆತ್ಮಾವಲೋಕನ ಮಾಡುತ್ತಾರೆ. ಇಲೆಕ್ಟ್ರಾನಿಕ್ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆನ್ ಲೈನ್ ಮೂಲಕ ಖರೀದಿಸುತ್ತಾರೆ. ಆದರೆ ಮೊದಲು ಅಂಗಡಿಗೆ ಹೋಗಿ ವಸ್ತುವನ್ನು ಅಥವಾ ಉತ್ಪನ್ನವನ್ನು ಗುರುತಿಸಿದ ಬಳಿಕ ಅದನ್ನು ಖರೀದಿಸಲು ಆನ್ ಲೈನ್ ಮೂಲಕ ಆರ್ಡರ್ ಮಾಡುತ್ತಾರೆ. ಇದು ಇತ್ತೀಚೆಗಿನ ಟ್ರೆಂಡ್.

ಇದನ್ನು ಗಮನಿಸಿದ ಸ್ನ್ಯಾಪ್ ಡೀಲ್ (Snap deal) ಆನ್ ಲೈನ್ ಬಳಕೆದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಮ್ನಿ ಚಾನೆಲ್ ಪ್ಲಾಟ್ ಫಾರ್ಮ್ ನಿರ್ಮಿಸಿದೆ. ಬಳಕೆದಾರರಿಗೆ ವಸ್ತುವಿನ ಅಥವಾ ಉತ್ಪನ್ನದ ನೈಜತೆಯ ಅನುಭವ ನೀಡುವ ಪ್ರಯತ್ನ ಮಾಡುತ್ತಿದೆ. ಶಾಪರ್ಸ್ ಶಾಪ್, ಲುಮಿನೋಸ್ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳು ಸ್ನಾಪ್ ಡೀಲ್ ಜೊತೆ ಕೈ ಜೋಡಿಸಿವೆ. ಒಟ್ಟಿನಲ್ಲಿ ಆನ್ ಲೈನ್ ಮತ್ತು ಆಫ್​​ ಲೈನ್ ಸ್ಪರ್ಧೆ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾಲವೇ ನಿರ್ಧರಿಸಲಿದೆ.

ಲೇಖಕರು: ತರುಷ್​ ಭಲ್ಲಾ ಮತ್ತು ಸಿಂಧೂ ಕಷ್ಯಪ್​
ಅನುವಾದಕರು : ಎಸ್​.ಡಿ.

Related Stories

Stories by YourStory Kannada