ಕಾಲು ಇಲ್ಲದೇ ಇದ್ರೂ ಫುಟ್ಬಾಲ್ ಆಟ ನಿಂತಿಲ್ಲ- ರೊನಾಲ್ಡೊರನ್ನು ಭೇಟಿಯಾಗಲು ಸಿದ್ಧವಾಗಿದ್ದಾರೆ ಅಬ್ದುಲ್ಲಾ..!

ಟೀಮ್​ ವೈ.ಎಸ್. ಕನ್ನಡ

0

ಕೆಲವರಿಗೆ ಎಲ್ಲಾ ಇದ್ರೂ ಸಾಧನೆ ಮಾಡುವ ಮನಸ್ಸಿರುವುದಿಲ್ಲ. ಛಲ ಅನ್ನೋದು ಹತ್ತಿರಕ್ಕೂ ಸುಳಿಯೋದಿಲ್ಲ. ಆದ್ರೆ ಇನ್ನು ಕೆಲವರಿಗೆ ಹಠವೇ ಉಸಿರು. ಸಾಧನೆ ಒಂದೇ ಕನಸು. ಈತನ ಹೆಸರು ಮೊಹಮ್ಮದ್ ಅಬ್ದುಲ್ಲಾ. 7 ವರ್ಷದ ಬಾಲಕನಿದ್ದಾಗಲೇ ರೈಲು ಅಪಘಾತವೊಂದರಲ್ಲಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದ. ಅದಾಗಿ 15 ವರ್ಷವಾಗಿದೆ. 22 ವರ್ಷ ವಯಸ್ಸಿನ ಅಬ್ದುಲ್ಲಾ ಈಗ ಬಾಂಗ್ಲಾದೇಶದಲ್ಲಿ ಸಖತ್ ಹೆಸರುವಾಸಿಯಾಗಿದ್ದಾನೆ. ಎರಡೂ ಕಾಲುಗಳಿಲ್ಲದೇ ಇದ್ರೂ ಅಬ್ದುಲ್ಲಾ ಇವತ್ತು ಛಲ ಮತ್ತು ಹಠದಿಂದಲೇ ಅದ್ಭುತ ಫುಟ್ಬಾಲರ್ ಆಗಿದ್ದಾನೆ. ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಬಾಂಗ್ಲಾದೇಶ ತಂಡವನ್ನು ಪ್ರತಿನಿಧಿಸುವ ಕನಸು ಕಾಣುತ್ತಿದ್ದಾನೆ. ಅಷ್ಟೇ ಅಲ್ಲ ತನ್ನ ರೋಲ್ ಮಾಡೆಲ್ ಪೋರ್ಚುಗಲ್​ನ ಗೋಲ್ ಮೆಷಿನ್ ಕ್ರಿಶ್ಚಿಯಾನೋ ರೊನಾಲ್ಡೊರನ್ನು ಭೇಟಿಯಾಗುವ ಕನಸು ಕೂಡ ನನಸಾಗುವ ಸಮಯ ಬಂದಿದೆ.

ವಿಧಿ ಅಬ್ದುಲ್ಲಾ ಬಾಳಿನಲ್ಲಿ ಸಾಕಷ್ಟು ಆಟವಾಡಿತ್ತು. ಕಾಲುಗಳನ್ನು ಕಳೆದುಕೊಂಡ ಬೆನ್ನಲ್ಲೇ ಅಮ್ಮನ ಪ್ರೀತಿಯನ್ನು ಕೂಡ ಕಳೆದುಕೊಂಡವನು ಅಬ್ದುಲ್ಲಾ. ಅಪ್ಪ ಮತ್ತು ಮಲತಾಯಿ ಜೊತೆಗೆ ಬೆಳೆದ್ರು. ಆದ್ರೆ ಕುಟುಂಬದಲ್ಲಿ ಅಬ್ದುಲ್ಲಾಗೆ ಅವಮಾನ ಒಂದೇ ಎದುರಾಗಿತ್ತು. ಹೀಗಾಗಿ ಮನೆ ಬಿಟ್ಟು ಓಡುವ ನಿರ್ಧಾರ ಮಾಡಿದ. ಆರಂಭದಲ್ಲಿ ಭಿಕ್ಷೆ ಬೇಡಿ ಜೀವನ ಕಳೆದ. ಆದ್ರೆ ನಂತರ ಅಜ್ಜಿಯ ಜೊತೆ ಬದುಕಲು ಆರಂಭಿಸಿದ.

ಇದನ್ನು ಓದಿ: ಒಲಿಂಪಿಯನ್​ಗಳಿಗೆ ತರಬೇತಿ ಕೊಟ್ಟ ಗುರುವಿನ ದಯನೀಯ ಸ್ಥಿತಿ

ಅಬ್ದುಲ್ಲಾ 2001ರಲ್ಲಿ ರೈಲು ಪ್ರಯಾಣದ ವೇಳೆ ಅಪಘಾತಕ್ಕೆ ಒಳಗಾಗಿ ತನ್ನ ಎರಡು ಕಾಲುಗಳನ್ನು ಕಳೆದುಕೊಂಡಿದ್ದರು. ಬಾಂಗ್ಲಾದಲ್ಲಿರುವ ಅಪರಜಯೋ ಬಾಂಗ್ಲಾ ಅನ್ನೋ ಎನ್​ಜಿಒ ಒಂದರ ಸಹಾಯದೊಂದಿಗೆ ಔಷಧಗಳನ್ನು ಪಡೆದ್ರು. ಅಲ್ಲೇ ವ್ಹೀಲ್​ಚೇರ್ ಮೂಲಕ ಚಲಿಸುವುದನ್ನು ಕಲಿತ್ರು. ಆದ್ರೆ ಅಬ್ದುಲ್ಲಾ ಇಷ್ಟಕ್ಕೆ ಸುಮ್ಮನಾಗಲಿಲ್ಲ. ಕಾಲೇ ಇಲ್ದೇ ಇದ್ರೂ, ವ್ಹೀಲ್​ಚೇರ್​ನ ಸಹಾಯವಿಲ್ಲದೆ ನಡೆದಾಡುವ ಪ್ರಯತ್ನ ಮಾಡಿದ್ರು.

“ ನಾನು ಮೊದಲಿಗೆ ನನ್ನ ಕೈಗಳಿಂದ ಆಡುತ್ತಿದ್ದೆ. ಆದ್ರೆ ಕೆಲವು ಮಕ್ಕಳು ನನಗೆ ಕಾಲಿನಲ್ಲಿ ಆಡುವಂತೆ ಪ್ರೇರೇಪಿಸಿದ್ರು. ನನ್ನ ಕಾಲುಗಳು ತುಂಡಾಗಿದ್ದರೂ ನಾನು ನಿಧಾನವಾಗಿ ಆ ಪ್ರಯತ್ನವನ್ನು ಪಟ್ಟೆ. ಚಿಕ್ಕ ಕಾಲುಗಳು ಮ್ಯಾಜಿಕ್ ಮಾಡಲು ಆರಂಭಿಸಿದವು ”
- ಅಬ್ದುಲ್ಲಾ, ವಿಕಲ ಚೇತನ ಫುಟ್ಬಾಲ್ ಆಟಗಾರ

ತನ್ನ ಚಿಕ್ಕ ಕಾಲುಗಳಲ್ಲಿ ಅಬ್ದುಲ್ಲಾ ಫುಟ್ಬಾಲ್ ಆಟವನ್ನು ಆಡಿ ದೇಶದ ಗಮನ ಸೆಳೆದ್ರು. ಈಗ ಅಬ್ದುಲ್ಲಾ ಅಂದ್ರೆ ಬಾಂಗ್ಲಾದೇಶದ ಎಲ್ಲಾ ಜನರಿಗೂ ಗೊತ್ತಿದೆ. ಅಬ್ದುಲ್ಲಾ ಫುಟ್ಬಾಲ್ ಆಟದ ಜೊತೆಗೆ ಬಂದರು ಒಂದರಲ್ಲಿ ಕೂಲಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಅಬ್ದುಲ್ಲಾ ತನ್ನ ಹೊಟ್ಟೆ ಹೊರೆಯಲು ಕೆಲಸ ಮಾಡಿದ್ರೆ, ತನ್ನ ಕನಸಿನ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋರನ್ನು ಭೇಟಿಯಾಗುವ ಕನಸನ್ನು ನನಸು ಮಾಡಿಕೊಳ್ಳಲು ಫುಟ್ಬಾಲ್ ಆಡುತ್ತಿದ್ದಾರೆ. ಒಟ್ಟಿನಲ್ಲಿ ಅಬ್ದುಲ್ಲಾ ಸಾಹಸ ಎಲ್ಲರಿಗೂ ಸ್ಪೂರ್ತಿ. ನನ್ನಿಂದ ಏನು ಆಗಲ್ಲ ಅನ್ನುವವರು ಅಬ್ದುಲ್ಲಾ ಕಥೆ ಕೇಳಿದ ಮೇಲೆ ಬದಲಾಗೋದಿಕ್ಕೆ ಸಾಕಷ್ಟು ಮಾರ್ಗಗಳಿವೆ ಅನ್ನೋದನ್ನ ತಿಳಿದುಕೊಳ್ಳಬೇಕಿದೆ.

ಇದನ್ನು ಓದಿ:

1. ಅಂದು ಕ್ಯಾಶಿಯರ್, ಇಂದು ಜೆಟ್​ ಏರ್​ವೇಸ್​ ಮಾಲೀಕ 

2. ಕಾಡು ಬೆಳೆಸಿ ನಾಡು ಉಳಿಸಿದ "ಜಾಧವ್"​​

3. ಪೂಜೆ ಮಾಡೋದು ಮಾತ್ರ ನಿಮ್ಮ ಕೆಲಸ- ವಸ್ತು ತಂದುಕೊಡುವುದು ನಮ್ಮ ಕೆಲಸ..!