ಸುಲಭ, ಸುರಕ್ಷಿತ ಹಾಗೂ ಕಡಿಮೆ ವೆಚ್ಚ..!

ಟೀಮ್​​ ವೈ.ಎಸ್​​.ಕನ್ನಡ

ಸುಲಭ, ಸುರಕ್ಷಿತ ಹಾಗೂ ಕಡಿಮೆ ವೆಚ್ಚ..!

Friday November 27, 2015,

3 min Read

ಇವತ್ತು ವಾಹನಗಳಿಂದಾಗಿ ವಾಯು ಮಾಲಿನ್ಯ ಮಿತಿಮೀರಿದೆ. ಶಬ್ದ ಮಾಲಿನ್ಯವೂ ಹೆಚ್ಚುತ್ತಿದೆ. ಎಲ್ಲಕಿಂತ ಹೆಚ್ಚಾಗಿ ಟ್ರಾಫಿಕ್ ಜಾಮ್ ಅನ್ನೋದು ಸರ್ವೇ ಸಾಮಾನ್ಯವಾಗಿದೆ. ಈ ಎಲ್ಲಾ ಸಮಸ್ಯೆಗಳಿಂದ ಪರಿಸರ ಹಾಳಾಗುತ್ತಿದ್ದು, ಅದರ ಜೊತೆಗೆ ಜನರ ಆರೋಗ್ಯವೂ ಹದಗೆಡುತ್ತಿದೆ. ಹೀಗಾಗಿಯೇ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಲಕ್ಷಣಾ ಝಾ ಒಂದು ಸಂಸ್ಥೆಯನ್ನು ಹುಟ್ಟುಹಾಕಿದ್ರು. ಅದೇ ಎಸ್‍ರೈಡ್(sRide).

image


ಕಾರ್‍ಪೂಲ್ ಮಾಡೋದೇ ಎಸ್‍ರೈಡ್ ಕೆಲಸ. ಕಾರ್‍ಪೂಲ್ ಅಂದ್ರೇನು ಅಂತ ನೀವು ಕೇಳಬಹುದು. ಒಂದೇ ಪ್ರದೇಶದ ಬೇರೆ ಬೇರೆ ಕಂಪನಿಗಳಿಗೆ ಕೆಲಸಕ್ಕೆ ಹೋಗುವ ನಾಲ್ಕು ಮಂದಿ, ನಾಲ್ಕು ಬೇರೆ ಬೇರೆ ಕಾರ್‍ಗಳಲ್ಲಿ ಪ್ರಯಾಣಿಸುವ ಬದಲು, ತಮ್ಮವರಲ್ಲೇ ಒಬ್ಬರ ಕಾರಿನಲ್ಲಿ ನಾಲ್ವರೂ ಪ್ರಯಾಣ ಮಾಡುವುದೇ ಕಾರ್‍ಪೂಲ್ ಕಾನ್ಸೆಪ್ಟ್. ಇದೀಗ ಬೆಂಗಳೂರು ಸೇರಿದಂತೆ ಹಲವೆಡೆಗಳಲ್ಲಿ ಐಟಿ ಕಂಪನಿ ಉದ್ಯೋಗಿಗಳು ಕಾರ್‍ಪೂಲಿಂಗ್ ಮಾಡುತ್ತಿದ್ದಾರೆ.

ಲಕ್ಷಣಾ ಹಿನ್ನೆಲೆ

ಲಕ್ಷಣಾ ಅವರಿಗೆ ಐಯಾನ್, ಯೇಟ್ನಾ, ಕ್ರೆಡಿಟ್ ಸ್ಯೂಸ್, ಯುಬಿಎಸ್ ಹಾಗೂ ವೆರಿಜಾನ್‍ನಂತಹ ಪ್ರತಿಷ್ಠಿತ ಫಾರ್ಚ್ಯೂನ್ 500 ಕಂಪನಿಗಳಲ್ಲಿ 15 ವರ್ಷಗಳ ಕಾಲ ಕೆಲಸ ಮಾಡಿದ ಅನುಭವವಿದೆ. ಐಟಿ ಕನ್ಸಲ್ಟೇಷನ್ ಮತ್ತು ಮಾರಾಟ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಲಕ್ಷಣಾ ಅವರಿಗೆ ಹೆಚ್ಚು ಪ್ರಯಾಣ ಮಾಡಬೇಕಾಗಿತ್ತು. ಹೀಗಾಗಿ ಒಬ್ಬರೇ ಹಲವು ತಾಸುಗಳ ಕಾಲ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಕಾರಣ ಟ್ರಾಫಿಕ್ ಜಾಮ್‍ನಲ್ಲಿ ಸಿಲುಕಿ ಪರದಾಡಬೇಕಿತ್ತು. ಆ ಕುರಿತು ಯೋಚಿಸುತ್ತಿರುವಾಗ ಅವರಿಗೆ ಹೊಳೆದಿದ್ದೇ ಈ ಕಾರ್‍ಪೂಲಿಂಗ್. ಇದರ ಬಗ್ಗೆ ಸಮೀಕ್ಷೆ ನಡೆಸಿದ ಲಕ್ಷಣಾ, ಜನರಿಗೂ ಕಾರ್‍ಪೂಲ್ ಮಾಡುವ ಇಚ್ಛೆಯಿದೆ, ಆದ್ರೆ ಒಬ್ಬರು ಮತ್ತೊಬ್ಬರ ನಡುವೆ ಸಹಕಾರವಿಲ್ಲದ ಕಾರಣ ಅವರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ತೀರ್ಮಾನಕ್ಕೆ ಬಂದರು.

‘ಕಾರ್‍ಪೂಲಿಂಗ್ ಕುರಿತು ಕೆಲವು ವೆಬ್‍ಸೈಟ್‍ಗಳಿದ್ದರೂ, ತಂತ್ರಜ್ಞಾನ ಹಳೆಯದಾದ ಕಾರಣ ಯಾರೂ ಹೆಚ್ಚಾಗಿ ಬಳಸುತ್ತಿಲ್ಲ’ ಅಂತಾರೆ ಎಸ್‍ರೈಡ್‍ನ ಸ್ಥಾಪಕಿ ಮತ್ತು ಸಿಇಒ ಲಕ್ಷಣಾ. ಕಾರ್‍ಪೂಲಿಂಗ್ ಅಪ್ಲಿಕೇಶನ್ ಪರಿಣಾಮಕಾರಿ ತಂತ್ರಜ್ಞಾನದ ಮೂಲಕ ದೈನಂದಿನ ಓಡಾಟವನ್ನು ಸುಲಭವಾಗಿಸುತ್ತದೆ, ಸುರಕ್ಷಿತವಾಗಿಸುತ್ತದೆ ಹಾಗೂ ಅಗ್ಗವಾಗಿಸುತ್ತದೆ.

Sರೈಡ್ ಅಪ್ಲಿಕೇಶನ್‍ನ ವೈಶಿಷ್ಟ್ಯತೆಗಳು

ತ್ವರಿತ ಗತಿಯಲ್ಲಿ ಕಾರ್‍ಪೂಲಿಂಗ್ ಸೇವೆ ಒದಗಿಸುವುದು ಎಸ್‍ರೈಡ್ ಅಪ್ಲಿಕೇಶನ್‍ನ ಪ್ರಮುಖ ಉದ್ದೇಶ. ನಾವು ವಾಸಿಸುತ್ತಿರುವ ಪ್ರದೇಶದಲ್ಲೇ ವಾಸವಿರುವ ಹಾಗೂ ನಾವು ಕೆಲಸಕ್ಕೆ ಹೋಗುವ ಸಮೀಪವೇ ಕೆಲಸಕ್ಕೆ ಹೋಗುವಂತಹ ಮಂದಿಯನ್ನು ಅಪ್ಲಿಕೇಶನ್ ಮೂಲಕವೇ ಹುಡುಕಬಹುದಾದ ಕಾರಣ, ಇದರಲ್ಲಿ ಯಾವುದೇ ಖರ್ಚಿಲ್ಲ.

‘ಇದು ವೈಯಕ್ತಿಕ ಬಳಕೆಯ ಸಾಧನವಾಗಿದೆ. ಸಾಮಾಜಿಕ ಸಂಪರ್ಕಗಳ ಮೂಲಕ ಸುರಕ್ಷಿತ ಪ್ರಯಾಣವನ್ನು ಸುಲಭವಾಗಿ ಕಂಡುಕೊಳ್ಳಬಹುದು. ಜನರು ತಮ್ಮ ಸ್ವಂತ ವಾಹನಗಳ ಮೇಲೆ ಅವಲಂಬಿತರಾಗದೇ, ಮತ್ತೊಬ್ಬರೊಂದಿಗೆ ಕೈಜೋಡಿಸಿ, ಸಕ್ರಿಯ ಸಾರಿಗೆ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದೇ ಈ ಪರಿಕಲ್ಪನೆಯ ಒಳಗಿನ ಉದ್ದೇಶ.’ ಅಂತಾರೆ ಲಕ್ಷಣಾ.

ಮೊದಲ ತಲೆಮಾರಿನ ಉದ್ಯಮಿ ಲಕ್ಷಣಾ

ಮೊದಲ ತಲೆಮಾರಿನ ಉದ್ಯಮಿಯಾದ ಲಕ್ಷಣಾ ಹುಟ್ಟಿದ್ದು ದೆಹಲಿಯಲ್ಲಿ. ತಂದೆ ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ದೇಶದ ವಿವಿಧ ಭಾಗಗಳನ್ನು ಸುತ್ತಬೇಕಿತ್ತು. ಹೀಗಾಗಿ ಲಕ್ಷಣಾ ಶಿಕ್ಷಣ ಕೂಡ ನಾನಾ ರಾಜ್ಯಗಳಲ್ಲಿ ನಡೆಯಿತು. ದೆಹಲಿಯ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿ.ಟೆಕ್ ಪೂರ್ಣಗೊಳಿಸಿದ ನಂತರ, ಲಕ್ಷಣಾ ನ್ಯೂ ಯಾರ್ಕ್‍ನ ಕೊಲಂಬಿಯಾ ಬ್ಯುಸಿನೆಸ್ ಶಾಲೆಯಲ್ಲಿ ಫೈನಾನ್ಸ್ ವಿಭಾಗದಲ್ಲಿ ಎಮ್‍ಬಿಎ ಪದವಿ ಪಡೆದರು. ನಂತರ ಕೆಲ ವರ್ಷಗಳ ಕಾಲ ಅವರು ದೆಹಲಿ ಮತ್ತು ಪುಣೆಯಲ್ಲಿ ಕೆಲಸ ಮಾಡಿದರು. ಆ ಸಂದರ್ಭದಲ್ಲಿ ಕೇವಲ 5 ಕಿಲೋಮೀಟರ್ ಪ್ರಯಾಣಿಸಲೂ 30 ರಿಂದ 45 ನಿಮಿಷಗಳು ಬೇಕಾಗುತ್ತಿತ್ತು. ವಾಹನ ದಟ್ಟಣೆಯಿಂದಾಗಿ ಬೇಸತ್ತ ಲಕ್ಷಣಾ ಕಾರ್‍ಪೂಲಿಂಗ್‍ನಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತೆ ಅನ್ನೋದನ್ನ ಕಂಡುಕೊಂಡರು. ಹೊಸಬರ ಪರಿಚಯವಾಗುವ ಹಾಗೂ ಸಾಮಾಜಿಕವಾಗಿ ಹೊಸ ಸಂಪರ್ಕಗಳನ್ನು ಕಲ್ಪಿಸುವುದರಿಂದ ಕಾರ್‍ಪೂಲಿಂಗ್‍ನಿಂದ ತುಂಬಾ ಪ್ರಭಾವಿತರಾದರು.

image


ಸಾಮಾನ್ಯವಾಗಿ ಜನರು ತಮ್ಮ ದೈನಂದಿನ ಜೀವನದ ಜಂಜಾಟದಲ್ಲೇ ಸಂಪೂರ್ಣವಾಗಿ ತೊಡಗಿಕೊಂಡಿರುತ್ತಾರೆ. ಅದು ಬಿಟ್ಟರೆ ತಮ್ಮ ಮೊಬೈಲ್‍ಗಳಲ್ಲಿ ಕಳೆದುಹೋಗಿರ್ತಾರೆ. ಆದ್ರೆ ಕಾರ್‍ಪೂಲಿಂಗ್ ಮಾಡಿದ್ರೆ ಪ್ರಯಾಣಿಸುವಾಗ ಜನರೊಂದಿಗೆ ಬೆರೆಯುವ ಅತ್ಯುತ್ತಮ ಅವಕಾಶ ಸಿಗುತ್ತದೆ.

ಒಂದು ಸಮೀಕ್ಷೆಯ ಬಳಿಕ ಕೆಲವೇ ದಿನಗಳಲ್ಲಿ ಲಕ್ಷಣಾ ಎಸ್‍ರೈಡ್ ಅಪ್ಲಿಕೇಶನ್ ಸಿದ್ಧಪಡಿಸಿಯೇಬಿಟ್ಟರು. ಇದೇ ಏಪ್ರಿಲ್‍ನಲ್ಲಿ ಪುಣೆ ಹಾಗೂ ಹೈದರಾಬಾದ್ ನಗರಗಳಲ್ಲಿ ಎಸ್‍ರೈಡ್‍ಅನ್ನು ಬಿಡುಗಡೆ ಮಾಡಲಾಯಿತು. ಇತ್ತೀಚೆಗಷ್ಟೇ ಚೆನ್ನೈನಲ್ಲೂ ಈ ಅಪ್ಲಿಕೇಶನ್‍ಅನ್ನು ಲಾಂಚ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಹಾಗೂ ಕೊಲ್ಕತ್ತಾಗಳಲ್ಲೂ ಎಸ್‍ರೈಡ್‍ಅನ್ನು ಪರಿಚಯಿಸುವ ಐಡಿಯಾ ಲಕ್ಷಣಾ ಅವರದು.

ಅಂಕಿ ಅಂಶಗಳ ಸಂಪುಟ

ಭಾರತದಲ್ಲಿ 20 ಕೋಟಿ ಮಂದಿ ಕಚೇರಿ ಕೆಲಸಗಾರರಿದ್ದಾರೆ. ಎಲ್ಲರೂ ಕಾರ್‍ಪೂಲಿಂಗ್‍ಅನ್ನು ಬಳಸಬಹುದು.

ನೀವು ಒಮ್ಮೆ ಕಾರ್‍ಪೂಲಿಂಗ್ ಮಾಡಿದರೂ ಸಾಕು, ವರ್ಷಕ್ಕೆ 7 ಮರಗಳನ್ನು ಉಳಿಸಬಹುದು. ಪ್ರತಿ ವಾರ 5 ಬಾರಿ ಕಾರ್‍ಪೂಲಿಂಗ್ ಮಾಡಿದ್ರೆ ವರ್ಷಕ್ಕೆ 35 ಮರಗಳನ್ನು ಉಳಿಸಬಹುದು.

20 ಕೋಟಿ ಮಂದಿ ವಾರಕ್ಕೊಮ್ಮೆ ಕಾರ್‍ಪೂಲಿಂಗ್ ಮಾಡಿದ್ರೆ ಬರೊಬ್ಬರಿ 140 ಕೋಟಿ ಮರಗಳನ್ನು ಉಳಿಸಬಹುದು.

ಪುಣೆಯ ಹಿಂಜೇವಾಡಿಗೆ ಸುಮಾರು 5 ಲಕ್ಷ ಜನ ಪುಣೆಯ ಬೇರೆ ಬೇರೆ ಭಾಗಗಳಿಂದ ಬಂದು ಹೋಗ್ತಾರೆ. ಬೆಳಗ್ಗೆ ಹಾಗೂ ಸಂಜೆಯ 2 ತಾಸುಗಳ ಅವಧಿಯಲ್ಲಿ ಕಡಿಮೆ ಅಂದ್ರೂ 3 ಲಕ್ಷ ಖಾಸಗಿ ಕಾರುಗಳು ಈ ಪ್ರದೇಶದಲ್ಲಿ ಓಡಾಡ್ತವೆ.

ಹೈದರಾಬಾದ್‍ನ ಹೈಟೆಕ್ ಸಿಟಿಯಲ್ಲಿ 3.50 ಲಕ್ಷ ಜನರಿದ್ದಾರೆ. ಅವರಲ್ಲಿ ಶೇಕಡಾ 80 ಪ್ರತಿಶತಃ ಜನರ ಬಳಿ ಸ್ವಂತ ವಾಹನಗಳಿವೆ. ಅವುಗಳಲ್ಲಿ ಬಹುತೇಕ ಕಾರ್‍ಗಳು ಅಂತ ಬೇರೆ ಹೇಳಬೇಕಿಲ್ಲ. ಅರ್ಥಾತ್ ಬರೊಬ್ಬರಿ 2.80 ಲಕ್ಷ ಕಾರುಗಳು ಹೈಟೆಕ್ ಸಿಟಿಯಲ್ಲಿವೆ.

65 ರೂಪಾಯಿಂದ 75 ರೂಪಾಯಿಯವರೆಗೆ ಏರಿಳಿಕೆಯಾಗುವ ಪೆಟ್ರೋಲ್ ಬೆಲೆಯನ್ನೇ ಲೆಕ್ಕ ಹಾಕಿದ್ರೆ, ಪ್ರತಿಯೊಬ್ಬ ಆಫೀಸ್ ಉದ್ಯೋಗಿಯೂ ವಾರ್ಷಿಕವಾಗಿ 75 ಸಾವಿರದಿಂದ 90 ಸಾವಿರ ರೂಪಾಯಿವರೆಗೂ ಮನೆಯಿಂದ ಕೆಲಸಕ್ಕೆ ಓಡಾಡಲು ಖರ್ಚು ಮಾಡ್ತಾನೆ. ಆದ್ರೆ ವಾರಕ್ಕೊಮ್ಮೆ ಅಥವಾ ಎಡು ಬಾರಿ ಕಾರ್‍ಪೂಲಿಂಗ್ ಮಾಡಿದ್ರೆ, 20-30%ನಷ್ಟು ಅರ್ಥಾತ್ 15- 30 ಸಾವಿರ ರೂಪಾಯಿವರೆಗೂ ಖರ್ಚನ್ನು ಕಡಿಮೆ ಮಾಡಬಹುದು.

ಪ್ರತಿ ದಿನ ಪ್ರತಿಯೊಬ್ಬ ಬಳಕೆದಾರನೂ ಎರಡು ಬಾರಿ ಈ ಅಪ್ಲಿಕೇಶನ್‍ಅನ್ನು ಬಳಸಿದ್ರೆ, ತುಂಬಾ ದೊಡ್ಡ ಮಟ್ಟದಲ್ಲಿ ಇದು ಪರಿಣಾಮ ಬೀರಬಲ್ಲದು.

ಸಕ್ರಿಯ ಎಸ್‍ರೈಡ್ ಬಳಕೆದಾರ ಪ್ರತಿ ವಾರ 10 ಬಾರಿ ಅರ್ಥಾತ್ ವಾರ್ಷಿಕವಾಗಿ 520 ಬಾರಿ ಈ ಅಪ್ಲಿಕೇಶನ್‍ಅನ್ನು ಬಳಸುತ್ತಾನೆ. ಇದು ಓಲಾ (ವರ್ಷಕ್ಕೆ ಕೇವಲ 24 ಬಾರಿ ಬಳಕೆ) ಹಾಗೂ ಪ್ರ್ಯಾಕ್ಟೊ (ವರ್ಷಕ್ಕೆ ಕೇವಲ 12 ಬಾರಿ ಬಳಕೆ) ಅಪ್ಲಿಕೇಶನ್‍ಗಳಿಗಿಂತ ಹಲವು ಪಟ್ಟು ಹೆಚ್ಚು.

ಲೇಖಕರು: ಸಾಸ್ವತಿ ಮುಖರ್ಜಿ

ಅನುವಾದಕರು: ವಿಶಾಂತ್​​​