ಕೊಳೆಯಬಲ್ಲ ಹೂವುಗಳಿಗೆ ಬಣ್ಣಗಳಾಗುವ ಸಾರ್ಥಕತೆ: ಮಧುಮಿತಾ ಪುರಿಯವರ ವಿಭಿನ್ನ ಉದ್ಯಮ

ಟೀಮ್​​ ವೈ.ಎಸ್​​.

ಕೊಳೆಯಬಲ್ಲ ಹೂವುಗಳಿಗೆ ಬಣ್ಣಗಳಾಗುವ ಸಾರ್ಥಕತೆ: ಮಧುಮಿತಾ ಪುರಿಯವರ ವಿಭಿನ್ನ ಉದ್ಯಮ

Thursday October 22, 2015,

4 min Read

ಭಾರತ ಹಲವು ಸಂಸ್ಕೃತಿಗಳ ಬೀಡು. ಇಲ್ಲಿನ ದೇವಾಲಯಗಳು ಭಾರತದ ಭವ್ಯ ಸನಾತನ ಪರಂಪರೆಯನ್ನು ಸಾರುತ್ತವೆ. ಪ್ರತೀ ದಿನವೂ ದೇವಾಲಯಗಳಲ್ಲಿ ದೇವರನ್ನು ಸಾಲಂಕೃತವಾಗಿಸಿ ಪೂಜಿಸುತ್ತಾರೆ. ತುಳಸಿಮಾಲೆ, ತಾಜಾ ಹೂವುಗಳನ್ನು ತಂದು ದೇವರಿಗೆ ಅಲಂಕಾರ ಮಾಡಿ ಧನ್ಯತೆ ಅನುಭವಿಸುತ್ತಾರೆ. ಪ್ರತಿ ಮುಂಜಾನೆ ದೇವಾಲಯದ ಅರ್ಚಕರು ಹಿಂದಿನ ದಿನದ ಹೂವುಗಳನ್ನು ತೆಗೆದು ನಿರ್ಮಲ ಮಾಡಿ ನಂತರ ಹೊಸ ಹೂವುಗಳಿಂದ ಅರ್ಚನೆ ನಡೆಸುತ್ತಾರೆ. ಕೆಲವು ದೇವಾಲಯಗಳು ಹಿಂದಿನ ದಿನದ ಹೂವುಗಳನ್ನು ನದಿಗೆ ಹಾಕಲೆಂದೇ ಒಬ್ಬ ಯುವಕನನ್ನು ನೇಮಿಸಿಕೊಂಡಿರುತ್ತವೆ. ಹೀಗೆ ನದಿಗೆ ಹೂವುಗಳನ್ನು ಹಾಕುವುದರಿಂದ ಹೂವುಗಳು ದೂರ ತೇಲಿಹೋಗುತ್ತವೆ ಎಂಬುದು ಅರ್ಚಕರ ಯೋಚನೆ. ಆದರೆ ಈ ಯುವಕನೋ ಪರಮ ಸೋಂಬೇರಿ. ಪ್ರತಿ ದಿನವೂ ತನಗೆ ವಹಿಸಿದ ಕಾರ್ಯ ಮಾಡುವುದು ಬಿಟ್ಟು ಹೂವುಗಳನ್ನು ದೇವಾಲಯದ ಗೋಡೆಯೊಂದರ ಮೂಲೆಗೆ ಸುರಿದು, ವಾರಕ್ಕೊಮ್ಮೆಯೋ, 10 ದಿನಗಳಿಗೊಮ್ಮೆಯೋ ವಿಸರ್ಜಿಸುತ್ತಾನೆ. ಆಗ ಈ ಹೂವುಗಳು ಬಹುತೇಕ ಕೊಳೆಯುವ ಸ್ಥಿತಿಯಲ್ಲಿದ್ದು ಹೂವುಗಳು ನದಿಯ ನೀರಿನ ಅಡಿ ಸೇರಿ, ನೀರು ಕಲುಷಿತಗೊಳ್ಳುತ್ತದೆ.

image


ಹಾಗಾದರೆ ಇದಕ್ಕೆ ಬದಲಿ ವ್ಯವಸ್ಥೆ ಏನು ಎಂದು ಚಿಂತಿಸುತ್ತಿದ್ದ ಮಧುಮಿತಾ ಪುರಿಯವರಿಗೆ ಹೊಳೆದಿದ್ದೇ ಅವಕಾಯಮ್ ಯೋಜನೆ. ಮಧುಮಿತಾ ಹೇಳುವಂತೆ, ದಿನದಿಂದ ದಿನಕ್ಕೆ ಹೂವುಗಳು ಕೊಳೆಯುವುದರಿಂದ ಅದರ ಮಧುರ ಸುವಾಸನೆ ನಾಶವಾಗಿ ಕೊಳಕು ವಾಸನೆ ಆವರಿಸುತ್ತದೆ. ಹೂವುಗಳನ್ನು ವಿಸರ್ಜಿಸುವ ಕೆಲಸಗಾರರಿಗಿರುವುದು ಎರಡು ಆಯ್ಕೆ. ಒಂದು ದುರ್ನಾತವನ್ನು ಸಹಿಸಿಕೊಳ್ಳುವುದು ಅಥವಾ ವಿಸರ್ಜಿಸಿದ ಹೂವುಗಳನ್ನು ಆಯಾ ದಿನವೇ ತೆಗೆದು ಹಾಕಿ ಸ್ವಚ್ಛಗೊಳಿಸುವುದು. ಅವಕಾಯಮ್ ಯೋಜನೆ ಎರಡನೆಯ ಆಯ್ಕೆಯನ್ನೇ ಒಪ್ಪಿಕೊಳ್ಳುತ್ತದೆ. ಏಕೆಂದರೆ ದುರ್ನಾತವನ್ನು ಸಹಿಸಿಕೊಳ್ಳುವುದು ಯಾರಿಗೂ ಸಾಧ್ಯವಿಲ್ಲ. ಸಂಸ್ಕೃತದಲ್ಲಿ ಅವಕಾಯಮ್ ಎಂದರೆ ಹೂವುಗಳ ಸಭೆ ಎಂದರ್ಥ. ವಿಸರ್ಜಿಸಿದ ಹೂವುಗಳನ್ನು ಒಟ್ಟುಗೂಡಿಸಿ, ಅದನ್ನು ನದಿಗೆ ಬಿಡುವ ಬದಲು ಅದನ್ನು ಮರುಬಳಕೆ ಮಾಡಿ ಅದರಿಂದ ರಂಗೋಲಿಗೆ, ಹೋಳಿ ಹಬ್ಬಕ್ಕೆ ಬಳಸಬಹುದಾದ ವರ್ಣಮಯ ಸಾವಯವ ಬಣ್ಣಗಳನ್ನು ಸೃಷ್ಟಿಸಲಾಗುತ್ತದೆ. ಬಣ್ಣಗಳಿಗಾಗಿ ನಾವು ಹುಡುಕುತ್ತಿರುವ ಕಚ್ಛಾವಸ್ತು ಉಚಿತವಾಗಿ ದೊರೆತಂತಾಗುತ್ತದೆ ಎನ್ನುತ್ತಾರೆ ನವದೆಹಲಿಯ ನಿವಾಸಿ ಮಧುಮಿತಾ ಪುರಿ.

ಅವಕಾಯಮ್ ಪ್ರಕ್ರಿಯೆ

ಅವಕಾಯಮ್‌ನ ಪ್ರಕ್ರಿಯೆ ತುಂಬಾ ಸರಳ. ಸಂಗ್ರಹಿಸಿದ ಹೂವುಗಳನ್ನು ಮೊದಲು ತುಂಡಾದ, ಒಣಗಿದ ಮತ್ತು ಪುಡಿಯಾದವುಗಳೆಂದು ಪ್ರತ್ಯೇಕವಾಗಿ ವಿಂಗಡಿಸಲಾಗುತ್ತದೆ. ಹೀಗೆ ಸಂಗ್ರಹಿಸಿದ ಸರಿಸುಮಾರು 100ಕೆಜಿ ಹೂವುಗಳಲ್ಲಿ 1 ಕೆಜಿಯಷ್ಟು ಒಣಗಿದ ದಳಗಳಿರುತ್ತವೆ. ಹೂವಿನ ಪರಿಮಳ ಇಲ್ಲವಾದರೂ, ಸ್ವಾಭಾವಿಕ ಬಣ್ಣ ಉಳಿಯುತ್ತದೆ ಮತ್ತು ವಿಭಿನ್ನ ಬಣ್ಣಗಳಲ್ಲಿ ಹೂವಿನ ಪುಡಿಗಳೂ ಸಿಗುತ್ತವೆ. ಈ ಉತ್ಪನ್ನದ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಂಡ ನಂತರ ಅದರ ಪ್ಯಾಕೇಜಿಂಗ್, ಮಾರ್ಕೆಟಿಂಗ್ ಕಾರ್ಯ ಮಾತ್ರ ಬಾಕಿ ಉಳಿಯುತ್ತದೆ.

2004ರಲ್ಲಿ ಅವಕಾಯಮ್ ಯೋಜನೆಯ ಕೌಶಲ್ಯ ಅಭಿವೃದ್ಧಿ ಆರಂಭವಾಯಿತು. ಬಹಳಷ್ಟು ಪ್ರಯೋಗಗಳ ನಂತರ ಮತ್ತು ಆರ್ಥಿಕವಾಗಿ ಇದನ್ನು ನಿರ್ವಹಿಸಲು ಸಾಧ್ಯ ಎಂಬುದ್ನು ಸರಿಯಾಗಿ ಅರ್ಥ ಮಾಡಿಕೊಂಡ ನಂತರ 2008ರಲ್ಲಿ ಸಹಕಾರಿ ವಿಧಾನದ ರೂಪುರೇಷೆಗಳನ್ನು ನಿರ್ಧರಿಸಲಾಯಿತು. ಈ ಯೋಜನೆಯಲ್ಲಿ ಅನೇಕ ಸಕಾರಾತ್ಮಕ ಅಂಶಗಳಿದ್ದರೂ ಮೊದಲೇ ಏಕೆ ಇದನ್ನು ಯಾರೂ ಅನ್ವೇಷಿಸಲಿಲ್ಲ ಎಂಬುದೇ ಮಧುಮಿತಾರ ಆಶ್ಚರ್ಯಕ್ಕೆ ಕಾರಣವಾದ ವಿಚಾರ. ಉತ್ಪಾದನಾ ಪ್ರಕ್ರಿಯೆ ಮತ್ತು ಇದಕ್ಕೆ ಅಗತ್ಯವಿರುವ ಉಪಕರಣಗಳು ಕಡಿಮೆಬೆಲೆಯಲ್ಲಿ ದೊರೆಯುತ್ತವೆ. ಅಲ್ಲದೇ ಇವು ಪುನರಾವರ್ತಿತ ಮತ್ತು ಸಮರ್ಥನೀಯ ವಿಧಾನವೂ ಆಗಿದೆ. ಇದಕ್ಕೆ ಬೇಕಾದ ಹೂವುಗಳು ವರ್ಷಪೂರ್ತಿ ಸಿಗುತ್ತವೆ. ಅದರಲ್ಲೂ ಕೃಷ್ಮ ಜನ್ಮಾಷ್ಟಮಿ, ಮದುವೆ ಸೀಸನ್‌ಗಳಲ್ಲಿ ಹೆಚ್ಚೇ ಸಿಗುತ್ತವೆ. ಅಂದ್ರೆ ಹೂವುಗಳು ಸಿಗದ ಸಂದರ್ಭಗಳೇ ಇಲ್ಲ ಎನ್ನಬಹುದು.

image


ಪರಿಸರ ಸಚಿವಾಲಯ ನೀತಿ ನಿಯಮಗಳ ಅನ್ವಯವೇ ಮಾರುಕಟ್ಟೆ ರೂಪಿಸಲಾಗಿದೆ. ಹಾಗೆಯೇ ಸರ್ಕಾರಿ ಇಲಾಖೆಗಳಲ್ಲಿ ಮತ್ತು ದಿಲ್ಲಿ ಹಾತ್‌ನಲ್ಲಿ ಮಾರಾಟ ಮಳಿಗೆಗಳನ್ನು ನಿರ್ಮಿಸಲು ದೆಹಲಿ ರಾಜ್ಯ ಪರಿಸರ ಅಭಿವೃದ್ಧಿ ಇಲಾಖೆಯೂ ಬೆಂಬಲ ನೀಡುತ್ತಿದೆ.

ಈ ಯೋಜನೆಯಲ್ಲಿ ಭಾಗಿಯಾಗಿರುವವರು

ಇಂದು ಉತ್ತರದೆಹಲಿಯ ಬೃಹತ್ ಹಾಗೂ ಸಣ್ಣ ದೇವಾಲಯಗಳಲ್ಲಿ ಸುಮಾರು 40 ಮಂದಿ ಬೌದ್ಧಿಕ ಅಸಾಮರ್ಥ್ಯತೆಯಿಂದ ಬಳಲುತ್ತಿರುವ ಯುವಕರು ಈ ಯೋಜನೆಯಲ್ಲಿ ಭಾಗಿಯಾಗಿದ್ದಾರೆ. ಭಾನುವಾರದ ಹೊರತಾಗಿ ಹಲವು ಪಂಚತಾರಾ ಹೋಟೆಲ್‌ಗಳೂ ಸಹ ಈ ಯೋಜನೆಯಲ್ಲಿ ಭಾಗಿಯಾಗಿದ್ದಾರೆ. ಇನ್ನು 45 ಮಂದಿ ಹೋಳಿ ಹಬ್ಬ ಮತ್ತು ರಂಗೋಲಿಗಳಿಗಾಗಿ ತುಂಡಾದ ಹೂವಿನ ದಳಗಳನ್ನು ಬಣ್ಣಗಳಾಗಿ ಬದಲಾಯಿಸುತ್ತಾರೆ. 15 ಮಂದಿ ದೃಷ್ಟಿಹೀನರು ಕೈಗಳಿಂದ ಅಗರಬತ್ತಿಗಳನ್ನು ಈ ಹೂವಿನ ದಳಗಳಿಂದ ಮಾಡುತ್ತಾರೆ.

ಪ್ರಸ್ತುತ ದೆಹಲಿಯ 11 ಹೋಟೆಲ್‌ಗಳು ಮತ್ತು 60 ದೇವಾಲಯಗಳಿಂದ ಹೂವುಗಳನ್ನು ಸಂಗ್ರಹಿಸಲಾಗುತ್ತಿದೆ. ನಮ್ಮೊಂದಿಗೆ ಸೇರಿರುವ ಎನ್‌ಜಿಓಗಳಿಗೆ 250 ದೇವಾಲಯಗಳು ಮತ್ತು 8 ಹೋಟೆಲ್‌ಗಳು ಹೂವುಗಳ ಪೂರೈಕೆ ಮಾಡುತ್ತಿವೆ. ಯೋಜನೆಯ ಪ್ರಥಮಹಂತದಲ್ಲಿ ಒಟ್ಟು 600 ಮಂದಿ ಅಂಗವಿಕಲ ಯುವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದಾದ್ಯಂತ ಅಂಗವೈಕಲ್ಯತೆ ಹೊಂದಿರುವ ಜನರನ್ನು ತಮ್ಮ ಯೋಜನೆಯಲ್ಲಿ ಶೀಘ್ರವೇ ಸೇರಿಸಿಕೊಂಡು ಅವರ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವುದು ಅವಕಾಯಮ್ ಯೋಜನೆಯ ಗುರಿ. ಭಾರತದ ಉದ್ದಗಲಕ್ಕೂ ದೇವಾಲಯಗಳಿವೆ. ತೀರಾ ಹಳ್ಳಿಯ ಪ್ರದೇಶಗಳಲ್ಲೂ ಕೂಡ ದೇವಾಲಯಗಳಲ್ಲಿ ಪುಷ್ಪಾಂಜಲಿ ಕಾರ್ಯಕ್ರಮ ಮಾಮೂಲಿಯಾಗಿ ನಡೆದುಬರುವ ಸಾಂಪ್ರದಾಯಿಕ ಪದ್ಧತಿ. ದೆಹಲಿಯೊಂದರಲ್ಲೇ 6000 ದೇವಾಲಯಗಳಿದ್ದು, ಆ ಎಲ್ಲಾ ದೇವಾಲಯಗಳಿಂದ ಹೂವುಗಳನ್ನು ಸಂಗ್ರಹಿಸುವುದು ಅವಕಾಯಮ್ ಯೋಜನೆಯ ಗುರಿ ಎನ್ನುತ್ತಾರೆ ಮಧುಮಿತಾ ಪುರಿ.

ಗುರಿ ಹಾಗೂ ಗುರುತಿಸಿಕೊಳ್ಳುವಿಕೆ

ಅವಕಾಯಮ್ ಯೋಜನೆ ಅಂಗವಿಕಲರ ಪ್ರತಿಭೆಗೆ ಸೂಕ್ತ ವೇದಿಕೆ ನೀಡುತ್ತಿದೆ. ಈ ಮೂಲಕ ತಮ್ಮ ಯೋಜನೆಯನ್ನು ಸಾಕಾರಗೊಳಿಸಿಕೊಳ್ಳುವುದಷ್ಟೇ ಅಲ್ಲದೇ ಅವರಿಗೆ ಉದ್ಯೋಗವನ್ನೂ ಸಹ ನೀಡುವ ಮೂಲಕ ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಹಾಯ ಮಾಡಿದೆ. ಅವರ ಕೆಲಸಗಳಿಗೆ ಒಂದು ಮೌಲ್ಯ ಒದಗಿಸಿಕೊಟ್ಟಿದೆ. ಅಂಗವಿಕಲತೆ ಹೊಂದಿರುವ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವುದಷ್ಟೇ ಅಲ್ಲದೇ ಸಮಾಜದಲ್ಲಿ ತಾವೂ ಸಮಾನ ಸ್ಥಾನ ಹೊಂದಿದ್ದೇವೆ ಎಂಬ ಭಾವನೆ ಮೂಡುವಂತೆ ಮಾಡುತ್ತದೆ ಅವಕಾಯಮ್.

ಪರಿಸರ ಮತ್ತು ಅರಣ್ಯ ಇಲಾಖೆ, ಅವಕಾಯಮ್ ಯೋಜನೆಯನ್ನು ಪರಿಸರ ಶಿಕ್ಷಣದ ಸಾಧನವಾಗಿ ಬಳಸಿಕೊಳ್ಳುತ್ತಿದೆ. ಮಧುಮಿತಾರ ಕಾರ್ಯವೈಖರಿ ಸಂಯುಕ್ತ ರಾಷ್ಟ್ರಗಳ ಗಮನ ಸೆಳೆದಿದೆ. ಡಿಸೆಂಬರ್ 2013ರಲ್ಲಿ ಮಧುಮಿತಾರಿಗೆ ಏಷಿಯಾ ಹಾಗೂ ಪೆಸಿಫಿಕ್ ರಾಷ್ಟ್ರಗಳ ಉಸ್ತುವಾರಿ ಹೊತ್ತ ಯುನೈಟೆಡ್ ನೇಷನ್‌ನ ಆರ್ಥಿಕ ವಿಭಾಗ ಹಾಗೂ ಸಾಮಾಜಿಕ ಸಮಿತಿ (ಯುಎನ್-ಎಸ್​ಕ್ಯಾಪ್) ವಿಶೇಷ ಸಾಮರ್ಥ್ಯದ ವ್ಯಕ್ತಿಗಳಿಗೆ ಸಕಾರಾತ್ಮಕ ಜೀವನಾವಕಾಶ ನೀಡಿದ ಉದ್ಯಮಿ ಎನ್ನುವ ಪ್ರಶಸ್ತಿಯನ್ನು ಗೌರವಿಸಿತ್ತು.

ಕಾರ್ಯಕ್ಷೇತ್ರ

2014ರಲ್ಲಿ 15,248 ಟನ್ ಹೂವುಗಳನ್ನು ಸಂಗ್ರಹಿಸಲಾಗಿತ್ತು. ಇವುಗಳಿಂದ 5 ಲಕ್ಷ ಅಗರಬತ್ತಿಗಳು ಮತ್ತು 15 ಟನ್ ಬಣ್ಣಗಳನ್ನು ಮಾಡಲಾಗಿತ್ತು. ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು ಮತ್ತು ಕೇರಳದ 1,52,822 ಅಂಗವಿಕಲತೆ ಹೊಂದಿರುವ ಜನರು ಅವಕಾಯಮ್ ಯೋಜನೆಯಡಿ ತರಬೇತಿ ಪಡೆದು ತಮ್ಮ ಕುಟುಂಬಗಳನ್ನು ಸಾಕುತ್ತಿದ್ದಾರೆ.

ಯುಎನ್-ಎಸ್ಕ್ಯಾಪ್ ಪ್ರಶಸ್ತಿ ಪಡೆದ ಬಳಿಕ ಮಧುಮಿತಾರಿಗೆ ನಿಪ್ಪಾನ್ ಫೌಂಡೇಶನ್ ಅವಕಾಯಮ್‌ನ ಬೆಂಬಲ ನೀಡಿದೆ. 2020ರ ವೇಳೆಗೆ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಕಾರ್ಪೋರೇಶನ್‌ನ ಜೊತೆಗೂಡಿ ಉತ್ತರಪ್ರದೇಶ ಮತ್ತು ಬಿಹಾರದ 26,000 ಮಂದಿಗೆ(ಪ್ರಸ್ತುತ ನಿರುದ್ಯೋಗಿಗಳು) ತರಬೇತಿ ನೀಡಿ ಅವರನ್ನು ಸಬಲರನ್ನಾಗಿ ಮಾಡುವ ಗುರಿ ಹೊಂದಿದೆ ಅವಕಾಯಮ್.

image


ಈ ನಿಟ್ಟಿನಲ್ಲಿ ಈಗಾಗಲೇ ವಾರಣಾಸಿಯಲ್ಲಿ ಕಾರ್ಯಾರಂಭ ಮಾಡಲಾಗಿದೆ. ಹೂವುಗಳ ಮರುಬಳಕೆ ಹೊರತುಪಡಿಸಿದಂತೆ ಅವಕಾಯಮ್ ಯೋಜನೆಯಡಿ ತರಬೇತಿ ಪಡೆಯುವವರಿಗೆ ಸಣ್ಣ ಉದ್ಯಮಗಳ ನಿರ್ವಹಣೆ ಬಗ್ಗೆಯೂ ತರಬೇತಿ ನೀಡಲಾಗುತ್ತದೆ. ಸಂಪನ್ಮೂಲ ಮತ್ತು ಜ್ಞಾನ ಕೇಂದ್ರಗಳನ್ನು ನಿರ್ಮಿಸಿ ಆ ಮೂಲಕ ಕೌಶಲ್ಯಾಭಿವೃದ್ಧಿ ಮೂಲಕ ಆದಾಯದ ಉತ್ಪತ್ತಿಯಾಗುವಂತೆ ಮಾಡಿ ಕೆಲಸಗಳನ್ನು ನಿರ್ವಹಿಸಲು ಸಹಾಯವಾಗುವಂತಹ ವ್ಯವಸ್ಥೆ ಮಾಡುವ ಕಾರ್ಯವೂ ಪ್ರಗತಿಯಲ್ಲಿದೆ.

ಇನ್ನು ಹೂವುಗಳು ತುಂಬಾ ಕಾಲ ನೀರಿನ ಮೂಲಗಳನ್ನು ಕಲುಷಿತಗೊಳಿಸಲಾರವು. ಹೀಗಾಗಿ ನದಿಗಳು ನಿರ್ಮಲವಾಗಿರುತ್ತವೆ. ನಮ್ಮ ಮಕ್ಕಳು ನಮ್ಮ ಭೂಮಿಯನ್ನು ಸಂರಕ್ಷಿಸುವ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಅವರಿಗೆ ಆ ಬಗ್ಗೆ ಜಾಗೃತಿ ಮೂಡುತ್ತದೆ ಎಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ ಮಧುಮಿತಾ ಪುರಿ.

ನವದೆಹಲಿಯಲ್ಲಿ ಟ್ರ್ಯಾಶ್ ಟು ಕ್ಯಾಶ್ ಎಂಪ್ಲಾಯ್‌ಮೆಂಟ್ ಸೆಂಟರ್ ಎಂಬ ಮತ್ತೊಂದು ಸಂಘಟನೆಯಿದೆ. ಅದರ ವಿವಿಧ ಉತ್ಪಾದನಾ ಕಾರ್ಯಗಳ ಮೂಲಕ ಅಂಗವೈಕಲ್ಯ ಹೊಂದಿರುವ 137 ಮಂದಿಗೆ ಸಮಾನ ಉದ್ಯೋಗಾವಕಾಶ, ಆದಾಯ ಒದಗಿಸುತ್ತಿದೆ. 1992ರಲ್ಲಿ ಸೊಸೈಟಿ ಫಾರ್ ಚೈಲ್ಡ್ ಡೆವಲಪ್‌ಮೆಂಟ್ ಎಂಬ ಎನ್‌ಜಿಓ ಒಂದನ್ನು ಸಹ ಸ್ಥಾಪಿಸಿರುವ ಮಧುಮಿತಾ ಈ ಮೂಲಕ ಅಂಗವೈಕಲ್ಯತೆ ಹೊಂದಿರುವ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಬಾಲ್ಯದಲ್ಲೇ ಸರಿಯಾದ ಕೌಶಲ್ಯಾಧಾರಿತ ಶಿಕ್ಷಣ ನೀಡದಿದ್ದರೆ ಪ್ರೌಢರಾದ ಮೇಲೆ ಮಕ್ಕಳ ಕೌಶಲ್ಯ ಅಭಿವೃದ್ಧಿ ಮತ್ತು ದುಡಿಯುವ ಕನಸುಗಳು ನನಸಾಗದೇ ಉಳಿದುಬಿಡುತ್ತದೆ ಎಂಬುದನ್ನು ಮಧುಮಿತಾ ಮನಗಂಡಿದ್ದಾರೆ. ಹೇಗೆ ಸಂಪಾದಿಸಬೇಕೆಂಬುದರ ಸರಿಯಾದ ಚಿತ್ರಣ ನಮ್ಮ ಮುಂದಿದ್ದರೆ, ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕೆಂಬ ಅನೇಕ ಮಂದಿ ಬಡವರ ಕನಸು ನನಸಾಗುತ್ತದೆ. ಸರಿಯಾದ ಕೆಲಸವಿದ್ದರೆ ಅವರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಸಾಧ್ಯವಾಗುತ್ತದೆ ಎನ್ನುತ್ತಾ ಮಾತು ಮುಗಿಸಿದರು ಮಧುಮಿತಾ ಪುರಿ.