ಕ್ಯಾನ್ಸರ್ ಗೆದ್ದ ಕಲಾವಿದೆ...ಬಣ್ಣದಲ್ಲೇ ಅರಳಿತು ಬದುಕು..!

ಟೀಮ್ ವೈ.ಎಸ್.

ಕ್ಯಾನ್ಸರ್ ಗೆದ್ದ ಕಲಾವಿದೆ...ಬಣ್ಣದಲ್ಲೇ ಅರಳಿತು ಬದುಕು..!

Monday October 05, 2015,

3 min Read

ಕಲೆ ಅನ್ನೋದು ಮನದ ಭಾವನೆಗಳನ್ನು ಬಿಡಿಸಿ ಹೇಳುವ ಸಾಧನ. ಜಗತ್ತನ್ನೇ ಪರಿವರ್ತಿಸಬಲ್ಲ ಶಕ್ತಿ ಕಲೆಗಿದೆ. ಸಪ್ತ ವರ್ಣಗಳ ಮಿಲನ ಜನರ ವ್ಯಕ್ತಿತ್ವದ ಮೇಲೂ ಗಾಢ ಪರಿಣಾಮ ಬೀರುತ್ತದೆ. ಕಲೆಗೆ ಕ್ಯಾನ್ಸರ್‍ನಂಥ ಮಹಾಮಾರಿಯನ್ನೇ ಗೆಲ್ಲುವ ಶಕ್ತಿಯಿದೆ. ಎಂಥ ಪರಿಸ್ಥಿತಿಯನ್ನಾದರೂ ಎದುರಿಸಬಲ್ಲ ಛಾತಿ, ಆತ್ಮವಿಶ್ವಾಸವನ್ನು ಮೂಡಿಸುವಲ್ಲಿ ಕಲೆಯ ಪಾತ್ರ ನಿಜಕ್ಕೂ ಮಹತ್ವದ್ದು. ಕ್ಯಾನ್ಸರ್ ಅನ್ನೇ ಗೆದ್ದ ಖ್ಯಾತ ಕಲಾವಿದೆ ಶೆರಿಲ್ ಬ್ರಗಾಂಜಾ ಅವರ ಬದುಕಂತೂ ವರ್ಣಮಯ. ಬ್ರಗಾಂಜಾ ಅವರು ಹುಟ್ಟಿದ್ದು ಮುಂಬೈನಲ್ಲಿ. ಆದ್ರೆ ಬೆಳೆದಿದ್ದೆಲ್ಲ ಪಾಕಿಸ್ತಾನದ ಲಾಹೋರ್‍ನಲ್ಲಿ. ಶೆರಿಲ್ ತಂದೆ ಹೋಟೆಲ್ ನಡೆಸುತ್ತಿದ್ದರು. ಭಾರತ - ಪಾಕಿಸ್ತಾನ ಇಬ್ಭಾಗವಾದ ಸಂದರ್ಭದಲ್ಲಿ ನಡೆದ ಭಾರೀ ಹಿಂಸಾಚಾರಕ್ಕೂ ಈ ಕುಟುಂಬ ಸಾಕ್ಷಿಯಾಗಿದೆ. ಬಾಲ್ಯದಿಂದಲೇ ಬ್ರಗಾಂಜಾ ಅವರಿಗೆ ಕಲೆಯಲ್ಲಿ ಅತೀವ ಆಸಕ್ತಿಯಿತ್ತು. ಆದರೆ ಅದನ್ನು ವ್ಯಕ್ತಪಡಿಸಲಾಗದೆ ಮುಜುಗರ ಅನುಭವಿಸುತ್ತಿದ್ದರು. ಈ ಸಂದರ್ಭದಲ್ಲಿ ಹುಟ್ಟು ಕಲಾವಿದೆಯ ನೆರವಿಗೆ ಬಂದವರು ಅವರ ಸಹೋದರ. 1960ರಲ್ಲಿ ಬ್ರಗಾಂಝಾ ಉನ್ನತ ವಿದ್ಯಾಭ್ಯಾಸಕ್ಕಾಗಿ ಲಂಡನ್‍ಗೆ ಹಾರಿದರು. ಅಲ್ಲಿಂದ ಅವರ ಬದುಕು ಸಂಪೂರ್ಣ ಬದಲಾಗಿತ್ತು. 1966ರಲ್ಲಿ ಬ್ರಗಾಂಝಾ ಅವರ ಬದುಕಿನ ಪಯಣ ಕೆನಡಾದಲ್ಲಿ ಸಾಗಿತ್ತು. ಕೆನಡಾದ ಮೊಂಟ್ರಿಯಲ್ ನಗರಕ್ಕೆ ಬಂದಿಳಿದ ಅವರು, ಅಲ್ಲಿನ ಸಂಸ್ಕೃತಿ, ಜೀವನ ಶೈಲಿಯಿಂದ ಪ್ರಭಾವಿತರಾದರು. ಅವರ ಕಲೆಗೂ ಹೊಸ ಆಯಾಮ ಸಿಕ್ಕಿತ್ತು.

ಶೆರಿಲ್ ಬ್ರಗಾಂಜಾ ಚಿತ್ರ

ಶೆರಿಲ್ ಬ್ರಗಾಂಜಾ ಚಿತ್ರ


ಅದ್ಭುತ ಪೈಂಟರ್..!

ಬ್ರಗಾಂಝಾ ಅವರದ್ದು ಪೇಂಟಿಂಗ್‍ನಲ್ಲಿ ನುರಿತ ಹಸ್ತ. ಕೈಯಲ್ಲಿ ಕುಂಚ ಹಿಡಿದರು ಅಂದ್ರೆ ಎಂಥ ಸನ್ನಿವೇಶವನ್ನಾದರೂ ಅದ್ಭುತವಾಗಿ ಚಿತ್ರಿಸಬಲ್ಲ ಅಪ್ರತಿಮ ಕಲಾವಿದೆ. ಭಾರತೀಯರಾಗಿದ್ದುದರಿಂದ ಬಣ್ಣಗಳ ಆಯ್ಕೆಯೂ ಇಲ್ಲಿನಂತೆಯೇ ಇತ್ತು. ಕೆಂಪು, ಹಸಿರಿನಂಥ ಗಾಢ ಬಣ್ಣಗಳು ಬ್ರಗಾಂಜಾ ಅವರ ಚಿತ್ರಗಳಲ್ಲಿರುತ್ತಿತ್ತು. ಆದ್ರೆ ಮೊಂಟ್ರಿಯಲ್ ನಗರದ ಕಲಾವಿದರು ಮೃದುವಾದ ಬಣ್ಣಗಳನ್ನು ಬಳಸುತ್ತಿದ್ದುದರಿಂದ ಬ್ರಗಾಂಜಾ ಅವರ ಶೈಲಿ ಹೊಂದಾಣಿಕೆಯಾಗುವುದಿಲ್ಲ ಎಂಬ ಮಾತಿತ್ತು. ಆದ್ರೆ ಬ್ರಗಾಂಜಾ ಅವರ ಕುಂಚಗಳು ನಿಜಕ್ಕೂ ಕಮಾಲ್ ಮಾಡಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ಬ್ರಗಾಂಜಾ ಅವರ ಭಾರತೀಯ ಶೈಲಿಯ ಪೇಂಟಿಂಗ್‍ಗೆ ಮೊಂಟ್ರಿಯಲ್ ನಗರ ಬೆರಗಾಗಿಹೋಯ್ತು. ವರ್ಷಗಳು ಕಳೆದಂತೆಲ್ಲ ಬ್ರಗಾಂಜಾ ಅವರು ಕೆನಡಾದ ಮೊಂಟ್ರಿಯಲ್ ನಗರದ ಭಾಗವೇ ಆಗಿಹೋಗಿದ್ದಾರೆ. 2008ರಲ್ಲಿ ಮೊಂಟ್ರಿಯಲ್ ವುಮನ್ ಆಫ್ ದಿ ಇಯರ್ ಪ್ರಶಸ್ತಿ ಕೂಡ ಅವರಿಗೆ ಲಭಿಸಿದೆ. ಅಲ್ಲಿನ ಸರ್ಕಾರ ತಮ್ಮನ್ನ ಗುರುತಿಸಿ ಪ್ರೋತ್ಸಾಹಿಸಿದ್ದನ್ನು ಬ್ರಗಾಂಜಾ ನೆನಪಿಸಿಕೊಳ್ಳುತ್ತಾರೆ.

ಹೀಗೆ ಕಲಾವಿದೆಯಾಗಿ ಯಶಸ್ಸಿನ ಉತ್ತುಂಗದಲ್ಲಿದ್ದರೂ ಅವರ ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿಯೇ ಬೀಸಿತ್ತು. ಪತಿಯಿಂದ ವಿಚ್ಛೇದನ ಪಡೆದ ಅವರು ಆಘಾತಕ್ಕೊಳಗಾಗಿದ್ರು. ಅದರಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಕ್ಯಾನ್ಸರ್ ಮಾರಿ ವಕ್ಕರಿಸಿಕೊಂಡಿತ್ತು. ಆದ್ರೆ ಅದೆಲ್ಲವನ್ನ ಆತ್ಮವಿಶ್ವಾಸದಿಂದ್ಲೇ ಎದುರಿಸಿ ಗೆದ್ದ ಛಲಗಾತಿ ಶೆರಿಲ್ ಬ್ರಗಾಂಜಾ. ಈಗ ಬರೀ ತಾಯಿ ಮಾತ್ರವಲ್ಲ ಅತ್ತೆ ಕೂಡ ಹೌದು. ಕ್ಯಾನ್ಸರ್‍ನಿಂದಲೂ ಪಾರಾಗಿ ಬಂದ ಅವರು ಮತ್ತೆ ಬಣ್ಣಗಳಿಂದ್ಲೇ ಬದುಕನ್ನು ತುಂಬಿಕೊಟ್ಟಿದ್ದಾರೆ. ಬ್ರಗಾಂಜಾ ಕೇವಲ ಕಲಾವಿದೆ ಮಾತ್ರವಲ್ಲ. ಕವಯತ್ರಿ, ಲೇಖಕಿ ಜೊತೆಗೆ ಕಾರ್ಯಕರ್ತೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಮೊನೆಟ್, ಚಾಗಲ್, ಪಿಕಾಸೋ, ಫ್ರಿಡಾ ಖಾಲೋರಂತರ ಅಪ್ರತಿಮ ಕಲಾವಿದರಿಂದ ಬ್ರಗಾಂಜಾ ಪ್ರಭಾವಿತರಾರಿದ್ದಾರೆ. ಅವರ ಕಲಾನೈಪುಣ್ಯ, ಬಣ್ಣಗಳೊಂದಿಗೆ ಆಟವಾಡಿ ಭಾವನೆಗಳನ್ನ ಹೊರಸೂಸುವ ಕ್ರಮ ಇವರ ಮನಗೆದ್ದಿತ್ತು. ಅವರಿಂದಲೇ ಪ್ರೇರಣೆ ಪಡೆದ ಬ್ರಗಾಂಜಾ ಈಗ ಕೆನಡಾದಲ್ಲೇ ನೆಲೆ ನಿಂತಿದ್ದಾರೆ. ಅಲ್ಲೇ ಭಾರತದ ಸಂಸ್ಕೃತಿಯನ್ನ ಕಲೆಯ ಮೂಲಕ ಪಸರಿಸುತ್ತಿದ್ದಾರೆ.

image


ವೈಯಕ್ತಿಕ ಬದುಕಿನಲ್ಲಾದ ಏಳು ಬೀಳುಗಳ ಬಗ್ಗೆಯೂ ಬ್ರಗಾಂಜಾ ಮುಕ್ತವಾಗಿ ಮಾತನಾಡುತ್ತಾರೆ. ಆ ದಿನಗಳು ಅದೆಷ್ಟು ಕಠಿಣವಾಗಿದ್ದವು ಅನ್ನೋದನ್ನೂ ಬಿಚ್ಚಿಟ್ಟಿದ್ದಾರೆ. ವಿಚ್ಛೇದನ ತಮ್ಮನ್ನ ಇನ್ನಷ್ಟು ದೃಢ ಚಿತ್ತಳನ್ನಾಗಿ ಮಾಡಿತ್ತು. ಆದರೆ ಕ್ಯಾನ್ಸರ್‍ನೊಂದಿಗಿನ ಹೋರಾಟ ನಿಜಕ್ಕೂ ಕಷ್ಟಕರ ಎನ್ನುತ್ತಾರೆ. ವಿಶೇಷ ಅಂದ್ರೆ ಮಹಿಳೆಯೇ ಬ್ರಗಾಂಜಾ ಅವರ ಚಿತ್ರಗಳ ಪ್ರಮುಖ ವಿಷಯ ವಸ್ತು. ಯಾಕಂದ್ರೆ ಓರ್ವ ಮಹಿಳೆಯಾಗಿ ತಾವು ಎಲ್ಲರ ಕಷ್ಟಗಳನ್ನ ಅರ್ಥಮಾಡಿಕೊಂಡು ಅದಕ್ಕೆ ಸ್ಪಂದಿಸಬಲ್ಲೆ. ಜೊತೆಗೆ ಅವರ ಸಂತಸದಲ್ಲೂ ಭಾಗಿಯಾಗಬಲ್ಲೆ ಅನ್ನೋದು ಬ್ರಗಾಂಜಾ ವರ ಅಭಿಪ್ರಾಯ. ಬ್ರಗಾಂಜಾ ಅವರ ಕಣ್ಣಿಗೆ ಬಿದ್ದದ್ದೆಲ್ಲವೂ ಕುಂಚದಲ್ಲಿ ಅರಳಿದೆ. ಅವರು ಕೇಳಿದ್ದೆಲ್ಲವೂ ಬಣ್ಣಗಳ ರೂಪ ಪಡೆದಿದೆ. ಮುಸ್ಸಂಜೆಯ ವಾಕ್‍ನಿಂದ ಹಿಡಿದು ಎಲ್ಲ ಕ್ಷಣಗಳು ಕಲರ್‍ಫುಲ್ಲಾಗಿ ಮೂಡಿ ಬಂದಿವೆ. ಮಹಿಳೆಯರ ನೋವು, ಅವರು ಎದುರಿಸುತ್ತಿರುವ ಸಂಕಷ್ಟ, ಅದನ್ನ ನಿಭಾಯಿಸುತ್ತಿರುವ ಪರಿ, ಸಹನಶೀಲತೆ ಎಲ್ಲವೂ ಚಿತ್ರಗಳ ವಿಷಯ ವಸ್ತುಗಳಾಗಿವೆ. ಕ್ಯಾನ್ಸರ್ ಪೀಡಿತರಾಗಿದ್ದ ಸಂದರ್ಭದಲ್ಲಿ ತಾವು ಅನುಭವಿಸಿದ ಯಾತನೆಯನ್ನು ಸಹ ಬ್ರಗಾಂಜಾ ಕ್ಯಾನ್‍ವಾಸ್ ಮೇಲೆ ಕೆತ್ತಿದ್ದಾರೆ. ಮಹಿಳೆಯರೇ ಇವರ ಅತ್ಯಮೂಲ್ಯ ಚಿತ್ರಗಳಿಗೆ ಸ್ಪೂರ್ತಿ.

ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ಸಹ ಬ್ರಗಾಂಜಾ ಚಿತ್ರಿಸಿದ್ದಾರೆ. ಕಾಮಾಂಧರ ಕೈಗೆ ಸಿಕ್ಕು ಅಮಾಯಕ ಹೆಣ್ಣು ಮಗಳು ನರಳಿದ ಪರಿಯನ್ನ, ಆಕೆಯ ಬದುಕು ಕಮರಿ ಹೋಗಿದ್ದನ್ನ ಜಗತ್ತಿಗೆ ತಿಳಿಸಿಕೊಟ್ಟಿದ್ದಾರೆ. ಇದರ ಜೊತೆಗೆ ಇಂಥಹ ವಿಕೃತಿಗಳನ್ನು ತಡೆಯುವ ಅಗತ್ಯದ ಬಗೆಗೂ ಸಂದೇಶ ಸಾರಿದ್ದಾರೆ. ಸಾಮಾಜಿಕ ಕಳಕಳಿಯನ್ನೂ ಮೆರೆಯುತ್ತಿರುವ ಈ ಅಪ್ರತಿಮ ಕಲಾವಿದೆಗೆ ನಮ್ಮದೊಂದು ಸಲಾಂ.