ಅಮೆರಿಕಾದ ಅಭಿವೃದ್ದಿಗೆ ಪಣ ತೊಟ್ಟ 15ರ ಭಾರತೀಯ ಮೂಲದ ಹುಡುಗಿ..!

ಕೃತಿಕಾ

0

ಮುಂದುವರೆದ ದೇಶ, ವಿಶ್ವದ ದೊಡ್ಡಣ್ಣ ಅಂತಲೇ ಕರೆಸಿಕೊಳ್ಳುವ ಅಮೆರಿಕಾವನ್ನು ಇನ್ನಷ್ಟು ಅಭಿವೃದ್ದಿಪಡಿಸಲು ಭಾರತೀಯ ಮೂಲದ 15 ವರ್ಷದ ಬಾಲಕಿಯೊಬ್ಬಳು ಕೆಲಸ ಮಾಡುತ್ತಿದ್ದಾಳೆ. ಇದೇನಪ್ಪಾ ಮುಂದುವರೆದ ದೇಶದ ಻ಅಭಿವೃದ್ದಿಗೆ ಭಾರತೀಯ ಮೂಲದ ಹುಡುಗಿ ಏನು ತಾನೆ ಮಾಡಲು ಸಾಧ್ಯ ಅಂತೀರಾ. ಈ ಪ್ರಶ್ನೆಗೆ ಆಕೆಯ ಸಾಧನೆಯೇ ಉತ್ತರ ಹೇಳುತ್ತದೆ. ಆಕೆಯ ಹೆಸರು ಶ್ವೇತಾ ಪ್ರಭಾಕರನ್. ಭಾರತೀಯ ಮೂಲದ ಶ್ವೇತಾ ಪ್ರಭಾಕರನ್ ಮೂಲತಃ ತಮಿಳುನಾಡಿನವರು. ಕಂಪ್ಯೂಟರ್ ಎಂಜಿನಿಯರ್​ಗಳಾಗಿರುವ ಶ್ವೇತಾ ಪೋಷಕರು ವರ್ಜಿನಿಯಾದಲ್ಲಿ ವಾಸ ಮಾಡುತ್ತಿದ್ದಾರೆ. ಈ ಹದಿನೈದರ ಬಾಲಕಿ ಶ್ವೇತಾ ಅಮೇರಿಕಾದಲ್ಲಿ ಹೈಸ್ಕೂಲ್ ಓದುತ್ತಿದ್ದಾಳೆ.

ಹದಿನೈದು ವರ್ಷಕ್ಕೇ ತನ್ನ ಪೋಷಕರ ಸಹಕಾರದೊಂದಿಗೆ ಈಕೆ ಎವ್ರಿಬಡೀ ಕೋಡ್ ನವ್ (Everybody code now) ಎಂಬ ಸಂಸ್ಥೆಯನ್ನು ಆರಂಭಿಸಿದ್ದಾಳೆ. ಈ ಸಂಸ್ಥೆಗೆ ಈಕೆಯೇ ಮುಖ್ಯಸ್ಥೆ..! ಇದು ಆದಾಯವನ್ನು ನಿರೀಕ್ಷೆ ಮಾಡದೇ ಶಿಕ್ಷಣ ವ್ಯವಸ್ಥೆಯನ್ನು ಉತ್ತಮಗೊಳಿಸುವ ದೂರದೃಷ್ಟಿಯಿಟ್ಟುಕೊಂಡು ಈ ಸಂಸ್ಥೆಯನ್ನು ಆರಂಭಿಸಲಾಗಿದೆ. ಇಂದಿನ ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ಎಂಜಿನಿಯರ್, ವಿಜ್ಞಾನಿ ಅಥವಾ ಉದ್ಯಮಿಗಳನ್ನಾಗಿ ರೂಪಿಸುವ ದೂರದೃಷ್ಟಿಯನ್ನು ಈ ಸಂಸ್ಥೆ ಹೊಂದಿದೆ. ಈ ಸಂಸ್ಥೆಯ ದೂರದೃಷ್ಟಿಯನ್ನು ಮೆಚ್ಚಿ ಅಮೇರಿಕಾ ಸರ್ಕಾರ ನೀಡುವ ‘ವೈಟ್ ಹೌಸ್ ಚಾಂಪಿಯನ್ ಆಫ್ ಚೇಂಜ್’ ಪ್ರಶಸ್ತಿಯನ್ನು ಶ್ವೇತಾ ಪ್ರಭಾಕರ್ ಆರಂಭಿಸಿರುವ ಸಂಸ್ಥೆಗೆ ನೀಡಲಾಗಿದೆ. ಕೇವಲ ಹದಿನೈದರ ವಯಸ್ಸಿನಲ್ಲೇ ಈ ಪ್ರಶಸ್ತಿಗಳಿಸಿದ ಅಮೇರಿಕಾದ ಮೊದಲ ವಿಧ್ಯಾರ್ಥಿನಿ ಈ ಶ್ವೇತಾ ಫ್ರಭಾಕರ್. ಅಮೆರಿಕವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಕನಸು ಹೊತ್ತಿರುವ ಶ್ವೇತಾ ಬಗ್ಗೆ ಶ್ವೇತಭವನ ಮೆಚ್ಚುಗೆಯ ಮಾತುಗಳನ್ನಾಡಿದೆ. ಇದರ ಜೊತೆಗೆ ಅಮೆರಿಕದ ಭರವಸೆಯ ನಾಯಕಿ ಎಂದು ಸಹ ಕೊಂಡಾಡಿದೆ.

ಅಮೆರಿಕಾದಲ್ಲಿ ಮುಂದಿನ ನಾಲ್ಕು ವರ್ಷಗಳಲ್ಲಿ 40 ಸಾವಿರ ಐಟಿ ಹುದ್ದೆಗಳು ಖಾಲಿಯಾಗಲಿವೆ. ಈ ಹುದ್ದೆಗಳನ್ನು ತುಂಬುವ ಉದ್ದೇಶದಿಂದ ಶ್ವೇತಾ ಪ್ರಭಾಕರನ್ ತನ್ನ ಸಂಸ್ಥೆಯ ಮೂಲಕ ಮಿಷನ್-20 ಎಂಬ ಅಭಿಯಾನ ಆರಂಭಿಸಿದೆ. ತಮ್ಮ ಸಂಸ್ಥೆಯ ಮೂಲಕ ಈಗಾಗಲೇ ಸಾವಿರಾರು ವಿದ್ಯಾರ್ಥಿಗಳಿಗೆ ನುರಿತ ತಜ್ಞರಿಂದ ತರಗತಿಗಳನ್ನು ನಡೆಸುತ್ತಿದ್ದಾರೆ. ಈ ಕಾರ್ಯಕ್ಕೆ ಅಮೆರಿಕ ಸರ್ಕಾರ ಕೂಡ ಸಾಕಷ್ಟು ಹಣಕಾಸಿನ ನೆರವು ನೀಡುತ್ತಿದೆ.

ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ವೃತ್ತಿಪರ ತರಬೇತಿ ನೀಡಿದರೆ ಮಾತ್ರ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದು ಬಲವಾಗಿ ನಂಬಿರುವ ಶ್ವೇತಾ ಅಮೆರಿಕದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆಯಲು ಹೊರಟ್ಟಿದ್ದಾರೆ. ಅಮೆರಿಕನ್ನರಿಗೆ ಶ್ವೇತಾ ಮಾದರಿಯಾಗಿದ್ದಾಳೆ. ಆಕೆ ಭಾರತೀಯ ಮೂಲದದವಳು ಅನ್ನೋದೂ ನಮಗೂ ಹೆಮ್ಮೆಯ ಸಂಗತಿಯಾಗಿದೆ. ಅಮೆರಿಕಾದಲ್ಲಿರುವ ನಿರುದ್ಯೋಗ ಸಮಸ್ಯೆಗೆ ಹೋಲಿಕೆ ಮಾಡಿದದರೆ ನಮ್ಮಲ್ಲಿ ಅದು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ನಮ್ಮ ದೇಶದಲ್ಲೂ ಹೀಗೆ ವ್ಯವಸ್ಥಿತವಾಗಿ ವಿಧ್ಯಾರ್ಥಿಗಳಿಗೆ ತರಭೇತಿ ನೀಡಿ ಅವರನ್ನು ಮುಂದಿನ ದಿನಗಳಿಗೆ ಸಜ್ಜುಗೊಳಿಸಬೇಕಾಗಿದೆ. ಈ ಕೆಲಸಕ್ಕೆ ಶ್ವೇತಾ ಫ್ರಭಾಕರನ್ ಮಾದರಿಯಾಗುತ್ತಾಳೆ.