ದೇಶದ್ರೋಹದ ಹೆಸರಲ್ಲಿ ನಡೀತಿದ್ಯಾ ದ್ವೇಷ ಬಿತ್ತುವ ಕೆಲಸ? - 'ಆಪ್'​ನ ಆಶುತೋಷ್​ ಆರೋಪ

ಟೀಮ್​ ವೈ.ಎಸ್​.ಕನ್ನಡ 

ದೇಶದ್ರೋಹದ ಹೆಸರಲ್ಲಿ ನಡೀತಿದ್ಯಾ ದ್ವೇಷ ಬಿತ್ತುವ ಕೆಲಸ? - 'ಆಪ್'​ನ ಆಶುತೋಷ್​ ಆರೋಪ

Friday February 26, 2016,

4 min Read

1948ರ ಸಪ್ಟೆಂಬರ್ 11ರಂದು ಗೃಹಸಚಿವರೂ, ಉಪಪ್ರಧಾನಿಯೂ ಆಗಿದ್ದ ವಲ್ಲಭ್ ಭಾಯ್ ಪಟೇಲ್, ಆರ್​ಎಸ್​ಎಸ್​ ಮುಖ್ಯಸ್ಥ ಗುರೂಜಿ ಗೋಲ್ವಾಲ್ಕರ್ ಅವರಿಗೆ ಸುದೀರ್ಘ ಪತ್ರವೊಂದನ್ನು ಬರೆದಿದ್ರು. ಮಹಾತ್ಮ ಗಾಂಧಿ ಅವರ ಹತ್ಯೆ ನಡೆದ ಸಂದರ್ಭದಲ್ಲಿ ಆರ್​ಎಸ್​ಎಸ್​ ಮೇಲೆ ಭಾರತ ಸರ್ಕಾರ ನಿಷೇಧ ಹೇರಿತ್ತು. ನಿಷೇಧ ತೆರವುಗೊಳಿಸುವಂತೆ ಗೋಲ್ವಾಲ್ಕರ್ ಅವರು ಪಟೇಲ್ ಅವರಿಗೆ ಪತ್ರ ಬರೆದಿದ್ರು. ಇದಕ್ಕೆ ಉತ್ತರವಾಗಿ ವಲ್ಲಭ್ ಭಾಯ್ ಪಟೇಲ್ ಬರೆದ ಪತ್ರದ ಸಾರಾಂಶ ಹೀಗಿತ್ತು, ''ಹಿಂದೂಗಳ ಶ್ರೇಯೋಭಿವೃದ್ಧಿಗಾಗಿ ಆರ್ಎಸ್ಎಸ್ ಅಪಾರ ಸೇವೆ ಸಲ್ಲಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ, ಇದನ್ನು ಒಪ್ಪಿಕೊಳ್ಳಲು ಯಾರೂ ಹಿಂದೇಟು ಹಾಕುವುದಿಲ್ಲ. ಆದ್ರೆ ಮುಸಲ್ಮಾನರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ್ರೆ ಇಂತಹ ಪರಿಸ್ಥಿತಿ ಉದ್ಭವವಾಗುತ್ತದೆ. ಹಿಂದೂಗಳಿಗೆ ಸಹಾಯ ಮಾಡುವುದಕ್ಕೂ, ಬಡವರು, ಅಸಹಾಯಕರು, ಮಹಿಳೆಯರನ್ನು ಟಾರ್ಗೆಟ್ ಮಾಡುವುದಕ್ಕೂ ವ್ಯತ್ಯಾಸವಿದೆ. ಇದು ಅಸಹನೀಯವಾದದ್ದು''. ಅಸ್ಥಿರತೆಯ ವಾತಾವರಣ ಸೃಷ್ಟಿಸಿದ್ದಕ್ಕೆ ಪಟೇಲ್, ಆರ್​ಎಸ್​ಎಸ್​ ವಿರುದ್ಧ ಆರೋಪ ಮಾಡಿದ್ರು. ಆರ್​ಎಸ್​ಎಸ್​ ವಿಷವನ್ನು ಹರಡುತ್ತಿದೆ, ಕೋಮುವಾದಿ ಭಾಷಣ ಮಾಡುತ್ತಿದೆ ಎಂದು ಕಿಡಿಕಾರಿದ್ರು. ''ಹಿಂದೂಗಳನ್ನು ರಕ್ಷಿಸಲು ದ್ವೇಷ ಹರಡುವ ಅವಶ್ಯಕತೆ ಏನಿದೆ? ಈ ದ್ವೇಷದ ಅಲೆಯಿಂದಾಗಿಯೇ ದೇಶ ತನ್ನ ತಂದೆಯನ್ನು ಕಳೆದುಕೊಂಡಿದೆ. ಮಹಾತ್ಮಾ ಗಾಂಧಿ ಅವರ ಹತ್ಯೆಯಾಗಿದೆ. ಹಾಗಾಗಿ ಆರ್​ಎಸ್​ಎಸ್​ ಮೇಲೆ ನಿಷೇಧ ಹೇರುವುದು ಕಡ್ಡಾಯ'' ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು.

image


ಆದ್ರೆ ಅದೇ ಪಟೇಲ್ ಅವರ ಆದರ್ಶವನ್ನು ಅಳವಡಿಸಿಕೊಂಡಿರುವುದಾಗಿ ಆರ್​ಎಸ್​ಎಸ್​ ಹೇಳುತ್ತಿರುವುದು ವಿಪರ್ಯಾಸ. ಮೋದಿ ಸರ್ಕಾರ ಕೂಡ ಪಟೇಲ್ ಅವರನ್ನು ತಮ್ಮ ಆದರ್ಶವೆಂದೇ ಬಿಂಬಿಸುತ್ತಿದೆ. ಪಟೇಲ್ ಒಬ್ರು ಕಾಂಗ್ರೆಸ್ಸಿಗರು. ಮಹಾತ್ಮ ಗಾಂಧಿ ಅವರ ನಂಬಿಕಾರ್ಹ ಬೆಂಬಲಿಗರಾಗಿದ್ದರು. ಅಷ್ಟೇ ಅಲ್ಲ ಭಾರತದ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರೂ ಅವರ ಒಡನಾಡಿ. ನೆಹರೂ ಅವರ ವಿರುದ್ಧ ಪಟೇಲ್ ಅವ್ರನ್ನ ಎತ್ತಿಕಟ್ಟಲು ಆರ್​ಎಸ್​ಎಸ್​ ಶತಪ್ರಯತ್ನ ಮಾಡಿತ್ತು. ಪಟೇಲ್ ಅವರು ಪ್ರಧಾನಿಯಾಗಿದ್ರೆ ದೇಶದ ಸ್ಥಿತಿ ವಿಭಿನ್ನವಾಗಿರುತ್ತಿತ್ತು ಎಂದೇ ಸಂಘ ಪರಿವಾರ ವಾದಿಸುತ್ತದೆ. ಕಳೆದ ಕೆಲವು ತಿಂಗಳುಗಳಿಂದ ನೆಹರೂ ಅವರ ಹೆಸರಿಗೆ ಕಳಂಕ ತರುವ ಪ್ರಯತ್ನ ನಡೆಯುತ್ತಿದೆ, ಸದ್ಯ ಭಾರತ ಎದುರಿಸುತ್ತಿರುವ ಸಂಕಷ್ಟಗಳಿಗೆಲ್ಲ ಅವರೇ ಕಾರಣ ಎಂದು ದೂಷಿಸಲಾಗುತ್ತಿದೆ. ಇತಿಹಾಸ ಭಾರತದ ಈ ಕಟ್ಟಾಳುಗಳ ಬಗ್ಗೆ ನಿರ್ಣಯಿಸಲಿದೆ, ಅದೇ ರೀತಿ ಆರ್​ಎಸ್​ಎಸ್​ ಮತ್ತದರ ಅನುಚರರನ್ನು ಕೂಡ ಇತಿಹಾಸ ಕ್ಷಮಿಸುವುದಿಲ್ಲ.

ಇದನ್ನೂ ಓದಿ...

ಏನನ್ನೂ ಮಾಡದೇ ಒಂದೇ ದಿನದಲ್ಲಿ 6 ಕೋಟಿ ಗಳಿಸೋದು ಹೇಗೆ? 

ಪಟೇಲ್ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದಂತಹ ದ್ವೇಷದ ವಾತಾವರಣ ಮತ್ತೆ ನಿರ್ಮಾಣವಾಗಿದೆ. ಕಳೆದ 10 ದಿನಗಳಿಂದ ದೇಶದ ರಾಷ್ಟ್ರೀಯತೆ ಬಗ್ಗೆ ಚರ್ಚೆ ಕಾವೇರಿದೆ. ಜೆಎನ್​ಯುನ ಕೆಲ ವಿದ್ಯಾರ್ಥಿಗಳು ರಾಷ್ಟ್ರ ವಿರೋಧಿ ಘೋಷಣೆ ಕೂಗಿದ್ದು ಮತ್ತು ಜೆಎನ್​ಯುಎಸ್​ಯು ಮುಖ್ಯಸ್ಥ ಕನ್ಹಯ್ಯ ಕುಮಾರ್ ಬಂಧನ ಈ ಪ್ರಚೋದನೆಗೆ ಕಾರಣ. ಎರಡು ರೀತಿಯ ನಿರೂಪಣೆಗಳನ್ನು ಉದ್ದೇಶಪೂರ್ವಕವಾಗಿ ನಿರ್ಮಾಣ ಮಾಡಲಾಗುತ್ತಿದೆ. ಒಂದು ಜೆಎನ್​ಯು ಭಯೋತ್ಪಾದಕ ಸಂಘಟನೆ, ಅದನ್ನು ಮುಚ್ಚಬೇಕು ಅನ್ನೋದು, ಎರಡನೆಯದು ಭಿನ್ನ ಅಭಿಪ್ರಾಯಗಳನ್ನು ಹೊಂದಿದವರನ್ನೆಲ್ಲ ರಾಷ್ಟ್ರ ವಿರೋಧಿ ಎಂದೇ ಬಿಂಬಿಸುವುದು ಮತ್ತು ಎಲ್ಲವನ್ನೂ ಇದರಡಿಯಲ್ಲಿ ಸಮರ್ಥನೆ ಮಾಡಿಕೊಳ್ಳಲಾಗ್ತಿದೆ.

ನಾನು ಕೂಡ ಜೆಎನ್​ಯುನಲ್ಲಿ ಓದಿದ್ದೇನೆ, ಇದು ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲೊಂದು. ಇದು ಉದಾರ ತತ್ವಗಳ ದೇವಸ್ಥಾನ, ನಮ್ಮ ಸಂವಿಧಾನಕ್ಕನುಗುಣವಾಗಿ ಪ್ರತಿ ಆಲೋಚನೆಯ ಬಗೆಗೂ ಮುಕ್ತ ಚರ್ಚೆಗೆ ಪ್ರೋತ್ಸಾಹಿಸುತ್ತದೆ. ಸಾರ್ವಜನಿಕ ಮೆಚ್ಚುಗೆ, ವೀಕ್ಷಣೆ, ಸಿದ್ಧಾಂತಗಳನ್ನು ಒಪ್ಪಿಕೊಂಡಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಉದಾರ ಆಲೋಚನೆಗಳ ಮೂಲಕ ಜೆಎನ್​ಯು , ತೀವ್ರವಾದಿಗಳು ಮತ್ತು ಉಗ್ರ ರಾಷ್ಟ್ರೀಯವಾದಿಗಳಿಗೂ ಅವಕಾಶ ನೀಡಿದೆ. ಪ್ರತ್ಯೇಕ ತಾಯ್ನಾಡಿಗಾಗಿ ಬೇಡಿಕೆ ಇಟ್ಟಿರುವ ಈಶಾನ್ಯ ರಾಜ್ಯದ ಜನತೆ, ಕೆಲ ಕಾಶ್ಮೀರಿ ತೀವ್ರವಾದಿಗಳು ಮತ್ತು ನಕ್ಸಲರು ಇಲ್ಲಿ ನೆಲೆಸಿದ್ದಾರೆ. ಆದ್ರೆ ಜೆಎನ್​ಯು ವಿದ್ಯಾರ್ಥಿಗಳನ್ನು ರಾಷ್ಟ್ರವಿರೋಧಿಗಳೆಂದು ತೀರ್ಮಾನಿಸುವುದು, ಭಾರತೀಯ ಸಂವಿಧಾನ ಮತ್ತು ಜೆಎನ್​ಯು ರಚನೆಯ ಕಲ್ಪನೆಯನ್ನೇ ಅಣಕ ಮಾಡಿದಂತೆ. ನನ್ನ ಅನುಭವದಿಂದ ಹೇಳುವುದಾದ್ರೆ ಇಂತಹ ತೀವ್ರ ಅಂಶಗಳು ಯಾವಾಗಲೂ ಕತ್ತಿಯ ಅಲುಗಿನಂತೆ, ದೊಡ್ಡ ಮಟ್ಟದಲ್ಲಿ ಅದನ್ಯಾರೂ ಸ್ವೀಕರಿಸುವುದಿಲ್ಲ.

ಜೆಎನ್​ಯು ಇಮೇಜ್​ಗೆ ಕಳಂಕ ತರುವ ಪ್ರಯತ್ನ ಏಕೆ ನಡೆಯುತ್ತಿದೆ ಅನ್ನೋದನ್ನು ಅರ್ಥಮಾಡಿಕೊಳ್ಳಬೇಕು. `ದಿ ಬಂಚ್ ಆಫ್ ಥಾಟ್' ಪುಸ್ತಕದಲ್ಲಿ ಗೋಲ್ವಾಲ್ಕರ್​ ಭಾರತಕ್ಕೆ ಮೂರು ಶತ್ರುಗಳಿದ್ದಾರೆ ಎಂದು ಬರೆದಿದ್ದರು - ಮುಸಲ್ಮಾನರು, ಕ್ರಿಶ್ಚಿಯನ್ನರು ಮತ್ತು ಕಮ್ಯೂನಿಸ್ಟ್​ಗಳು ಎಂದು ಉಲ್ಲೇಖಿಸಿದ್ದರು. ಜೆಎನ್​ಯು ಯಾವಾಗಲೂ ಹಿಂದುತ್ವ ಸಿದ್ಧಾಂತದ ಬಗ್ಗೆ ಅಸಹ್ಯಪಟ್ಟುಕೊಂಡಿಲ್ಲ, ಜೆಎನ್​ಯುನಲ್ಲಿ ಆ ಸಿದ್ಧಾಂತ ಬೆಳೆಯಲು ಅವಕಾಶ ಕೊಟ್ಟಿಲ್ಲ. ಇದು ಎಡಪಂಥೀಯ ಸಿದ್ಧಾಂತಗಳ ಬಲವಾದ ಭದ್ರಕೋಟೆ, ಅಲ್ಲಿ ಸಹಜವಾಗಿಯೇ ಎರಡು ಮೂಲಭೂತ ಆಲೋಚನೆಗಳ ನಡುವೆ ಸೈದ್ಧಾಂತಿಕ ದ್ವೇಷವಿದೆ. ಹಿಂದುತ್ವವಾದಿಗಳ ಪ್ರಕಾರ ಜೆಎನ್​ಯು , ಅವರು ಯಾವುದನ್ನು ವಿರೋಧಿಸುತ್ತಾರೋ ಅದರ ಪರ ನಿಲ್ಲುತ್ತದೆ. ಘೋಷಣೆ ಕೂಗಿದ್ರಿಂದ ಅವರ ವಿರುದ್ಧ ಹೊಸದೊಂದು ಅಸ್ತ್ರವೇ ಸಿಕ್ಕಂತಾಗಿದೆ. ಆದ್ರೆ ಉತ್ತಮ ಸಂಸ್ಥೆಯೊಂದನ್ನು ಕಟ್ಟಲು ದಶಕಗಳೇ ಬೇಕು, ಅದರ ಹೆಸರಿಗೆ ಮಸಿ ಬಳಿಯಲು ಒಂದು ಕ್ಷಣ ಸಾಕು ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಜಾಗತಿಕ ಶಿಕ್ಷಣ ವ್ಯವಸ್ಥೆಯಲ್ಲಿ ಜೆಎನ್​ಯು ಸ್ಥಾನ ಗಿಟ್ಟಿಸಿಕೊಂಡಿತ್ತು, ಅದಕ್ಕೆ ಮಸಿ ಬಳಿಯುವ ಪ್ರಯತ್ನ ರಾಷ್ಟ್ರದ ಹಿತಾಸಕ್ತಿಗೆ ಮಾರಕ.

ದೊಡ್ಡ ಪ್ರಶ್ನೆ ಅಂದ್ರೆ ಜೆಎನ್​ಯು ಬೆಂಬಲಕ್ಕೆ ನಿಂತವರನ್ನು ಬಿಂಬಿಸುವ ಪ್ರಯತ್ನ ಮತ್ತು ಕಾಶ್ಮೀರ ಸಮಸ್ಯೆ ಹಾಗೂ ದೇಶದ್ರೋಹದ ಬಗ್ಗೆ ಅಭಿವ್ಯಕ್ತಿ ಸ್ವಾತಂತ್ರ್ಯ. ಕನ್ಹಯ್ಯಾ ವಿರುದ್ಧ ದೇಶದ್ರೋಹದ ಆರೋಪಗಳನ್ನು ಹೊರಿಸಲಾಗಿದೆ. ಆದ್ರೆ ಇದುವರೆಗೂ ಪೊಲೀಸರು ಆತನ ವಿರುದ್ಧ ಸಾಕ್ಷ್ಯವನ್ನು ಕೋರ್ಟ್​ಗೆ ಹಾಜರುಪಡಿಸಿಲ್ಲ, ಆದ್ರೂ ಆತನನ್ನು ವಿಲನ್ ಎಂಬಂತೆ ನೋಡಲಾಗ್ತಿದೆ. ಪರಿಸ್ಥಿತಿ ಎಷ್ಟು ಕೈಮೀರಿತ್ತು ಎಂದ್ರೆ ಕೋರ್ಟ್ ಹಾಲ್​ನಲ್ಲೇ ಆತನ ಮೇಲೆ ಹಲ್ಲೆ ನಡೆದಿದೆ, ಆತನ ಪ್ರಾಣಕ್ಕೆ ಅಪಾಯವಿದೆ. ಇತರ ಸಂಸ್ಥೆಗಳ ವರ್ತನೆ ಇನ್ನೂ ಅಪಾಯಕಾರಿ ಎನಿಸುತ್ತಿದೆ. ಆರೋಪಿಯ ಪರವಾಗಿ ಕೋರ್ಟ್ನಲ್ಲಿ, ಕಾನೂನು ಅಧಿಕಾರಿಗಳಂತೆ ನ್ಯಾಯಕ್ಕಾಗಿ ಹೋರಾಡುವುದು ವಕೀಲರ ಕರ್ತವ್ಯ. ಆದ್ರೆ ವಿಚಾರಣೆ ನಡೆಸದೇ ಕನ್ಹಯ್ಯಾಗೆ ಶಿಕ್ಷೆ ಕೊಡಬೇಕೆಂದು ಅವರು ಬಯಸುತ್ತಿದ್ದಾರೆ. ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ವಿರೋಧಿಸಿದವರ ಮೇಲೆ ಹಲ್ಲೆ ಮಾಡುವ ಮೂಲಕ ಹಿಂಸಾಚಾರಕ್ಕೆ ನಾಂದಿ ಹಾಡಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ರೂ ಪೊಲೀಸರು ಮಾತ್ರ ಮೂಕ ಪ್ರೇಕ್ಷಕರು. ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಪೊಲೀಸರು ರಾಕ್ಷಸ ವಕೀಲರ ಭಯಂಕರ ವರ್ತನೆಗೆ ಅವಕಾಶ ನೀಡಿದ್ದಾರೆ. ಗಲಭೆಗೆ ಕಾರಣರಾದ ವಕೀಲರೆಲ್ಲ ಇವತ್ತಿಗೂ ಮುಕ್ತವಾಗಿ ಓಡಾಡಿಕೊಂಡಿದ್ದಾರೆ.

ಟಿವಿ ಚಾನೆಲ್ಗಳ ಪಾತ್ರ ಕೂಡ ಅತ್ಯಂತ ಶೋಚನೀಯ. ಕೆಲವು ಸಂಪಾದಕರು, ನಿರೂಪಕರು ನೇರ ಪ್ರಸಾರದಲ್ಲಿ ನಡೆದುಕೊಂಡ ರೀತಿ ವಕೀಲರಿಗಿಂತ ಕಮ್ಮಿಯೇನೂ ಇರಲಿಲ್ಲ. ತಟಸ್ಥ ವ್ಯಕ್ತಿ ಇದನ್ನೆಲ್ಲ ಸಹಿಸಿಕೊಂಡು ಸುಮ್ಮನಿರುವುದು ಅಸಾಧ್ಯ ಎಂಬ ಉನ್ಮಾದವನ್ನು ಅವರು ಸೃಷ್ಟಿಸುತ್ತಿದ್ರು. ಕನ್ಹಯ್ಯಾ ವಿರುದ್ಧ ದ್ವೇಷ ಬಿತ್ತುತ್ತಿದ್ರು. ತಮ್ಮ ರಾಷ್ಟ್ರೀಯತೆಯನ್ನು ಮೆರೆಯುವ ಭರದಲ್ಲಿ ಕನ್ಹಯ್ಯಾ ವಿರುದ್ಧ ಕೋಪ ಸೃಷ್ಟಿಸುವಂತಹ ದೃಶ್ಯವನ್ನು ಪದೇ ಪದೇ ಪ್ರಸಾರ ಮಾಡುತ್ತಿದ್ದರು. ಸಮಾಧಾನದ ವಿಚಾರ ಅಂದ್ರೆ ಕೆಲವು ವಾಹಿನಿಗಳು ಈ ಮೋಸವನ್ನು ಪತ್ತೆ ಮಾಡಿವೆ. ವಾಸ್ತವವಾಗಿ ಆ ವಾಹಿನಿಗಳು ಕ್ಷಮೆ ಕೋರಬೇಕು ಮತ್ತು ತಪ್ಪು ತಿದ್ದಿಕೊಳ್ಳಬೇಕು. ಆದ್ರೆ ಹಾಗಾಗಿಲ್ಲ. ಇದು ಅವರ ಕರ್ತವ್ಯ ಲೋಪಕ್ಕೆ ಸಾಕ್ಷಿ. ಅವರು ಕೂಡ ಅಪರಾಧದ ಭಾಗವಾಗಿರಬಹುದು ಎಂದು ಬಲವಂತವಾಗಿ ನನ್ನಂಥವರು ಚಿಂತಿಸಲು ಇದು ಕಾರಣವಾಗಿದೆ.

ಭಾರತ ಒಂದು ಪ್ರಜಾಪ್ರಭುತ್ವ. ಇಲ್ಲಿ ಕಾನೂನಿದೆ. ಯಾರು ರಾಷ್ಟ್ರ ವಿರೋಧಿ ಘೋಷಣೆಗಳನ್ನು ಕೂಗುತ್ತಾರೋ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತದೆ. ಅವರನ್ನು ಬಂಧಿಸಿ, ಸಂವಿಧಾನದಲ್ಲಿ ಉಲ್ಲೇಖವಾಗಿರುವಂತಹ ಶಿಕ್ಷೆ ನೀಡಬೇಕು. ಇದರಲ್ಲಿ ಯಾವುದೇ ಉದಾರತೆ ಬೇಡ, ಆದ್ರೆ ದೇಶಾದ್ಯಂತ ದ್ವೇಷದ ವಾತಾವರಣ ಸೃಷ್ಟಿಸುವ ಮೂಲ ಉದ್ದೇಶ ಇದಾಗಬಾರದು. ವಕೀಲರು ನ್ಯಾಯಾಧೀಶರಾಗಿ ಕಾನೂನನ್ನು ತಮ್ಮ ಕೈಯಲ್ಲಿ ತೆಗೆದುಕೊಳ್ಳುವಂತಿಲ್ಲ, ಕಾರ್ಯಕರ್ತನನ್ನು ಶಾಸಕನೊಬ್ಬ ಥಳಿಸುವಂತಿಲ್ಲ, ವಿರೋಧ ಪಕ್ಷಗಳ ಕಚೇರಿಗಳನ್ನು ಧ್ವಂಸ ಮಾಡುವಂತಿಲ್ಲ, ಪೊಲೀಸರು ನಿಷ್ಕ್ರಿಯರಾಗುವಂತಿಲ್ಲ ಮತ್ತು ತಮ್ಮ ಕರ್ತವ್ಯದಿಂದ ವಿಮುಖರಾಗುವಂತಿಲ್ಲ, ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸುವಂತಿಲ್ಲ, ಸುಪ್ರೀಂ ಕೋರ್ಟ್ ವಿರುದ್ಧವಾಗಿ ಯಾವುದೇ ವ್ಯಾಖ್ಯಾನ ನೀಡುವಂತಿಲ್ಲ. ಇದೆಲ್ಲವೂ ನಡೆದರೆ ಪ್ರಜಾಪ್ರಭುತ್ವದ ಭವಿಷ್ಯ ಅಥವಾ ಭಾರತದ ಭವಿಷ್ಯವನ್ನು ನಾವು ಊಹಿಸಬಹುದು.

ಆ ಪತ್ರದಲ್ಲಿ ಸರ್ದಾರ್ ವಲ್ಲಭ್ ಭಾಯ್ ಪಟೇಲ್, ಗೋಲ್ವಾಲ್ಕರ್​ ಅವರಿಗೆ ಸೂಚಿಸಿದ ಪ್ರವೃತ್ತಿ ಇದು. ಇಂತಹ ದ್ವೇಷವನ್ನು ಸೃಷ್ಟಿಸುವುದು ಸುಲಭ, ಆದ್ರೆ ಇಂತಹದ್ದೇ ದ್ವೇಷ ಗಾಂಧೀಜಿ ಅವರ ಹತ್ಯೆಗೆ ಕಾರಣವಾಗಿತ್ತು ಎಂಬುದನ್ನು ಮರೆಯಬಾರದು. ಅಂತಹ ಮತ್ತೊಂದು ದುರಂತವನ್ನು ಸಹಿಸಲು ನಮ್ಮಿಂದ ಸಾಧ್ಯವಿಲ್ಲ. ದ್ವೇಷ ಬಿತ್ತುವ ಕೆಲಸ ಈ ಕೂಡಲೇ ನಿಲ್ಲಬೇಕು.

ಲೇಖಕರು: ಆಶುತೋಷ್, ಎಎಪಿ ಮುಖಂಡ

ಅನುವಾದಕರು: ಭಾರತಿ ಭಟ್​ 

ಇದನ್ನೂ ಓದಿ...

ರೈಲಿನಲ್ಲಿ ಸಿಗಲಿದೆ ಬಗೆ ಬಗೆಯ ಚಹಾ

ಏಳು ಗುಡ್ಡಗಳನ್ನು ಕಡಿದು ರಸ್ತೆ ನಿರ್ಮಿಸಿದ ‘ಭಾಪ್’ಕರ್