ದೇಶಕ್ಕಾಗಿ ಆಡಿದ ಕರ್ನಾಟಕದ ಇಬ್ಬರು ಕ್ರಿಕೆಟ್ ದಿಗ್ಗಜರು

0

1. ರಾಹುಲ್ ದ್ರಾವಿಡ್: ಕ್ರಿಕೆಟ್​​ನ ಕಲಾವಿದ

ರಾಹುಲ್ ದ್ರಾವಿಡ್ ದೇಶಕ್ಕಾಗಿ ಕ್ರಿಕೆಟ್ ಆಡಿದ ಕರ್ನಾಟಕದ ಆಟಗಾರ ಮತ್ತು ಭಾರತ ತಂಡದ ನಾಯಕರಾಗಿಯೂ ಕೂಡ ಯಶಸ್ವಿ ಆಗಿದ್ದವರು. ರಾಹುಲ್ ದ್ರಾವಿಡ್ ಅವರ ನಿಜವಾದ ಹೆಸರು ರಾಹುಲ್ ಶರದ್ ದ್ರಾವಿಡ್. ರಾಹುಲ್ ಜನವರಿ 11, 1973 ರಂದು ಮಧ್ಯಪ್ರದೇಶದ ಇಂದೋರ್ ನಲ್ಲಿ ಜನಿಸಿದರು. ರಾಹುಲ್ ಮಧ್ಯಪ್ರದೇಶದ ಮೂಲದವರಾದರೂ ಕೂಡ ಅಚ್ಚ ಕನ್ನಡಿಗರು . ಏಪ್ರಿಲ್ 3, 1996 ರಂದು ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯ ಆಡುವುದರ ಮೂಲಕ ಭಾರತ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಜೂನ್ 20, 1996 ರಂದು ಇಂಗ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದರು. ಟೆಸ್ಟ್ ಕ್ರಿಕೆಟ್ ನಲ್ಲಿ 10,000 ಕ್ಕೂ ಹೆಚ್ಚು ರನ್ ಗಳಿಸುವುದರಲ್ಲಿ ರಾಹುಲ್ ಮೂರನೆಯ ಭಾರತೀಯ ಆಟಗಾರ. ಸಚಿನ್ ಮತ್ತು ಸುನಿಲ್ ಗವಾಸ್ಕರ್ ಮೊದಲ ಎರಡು ಸ್ಥಾನದಲ್ಲಿದ್ದಾರೆ.

ರಾಹುಲ್ ಅವರು ತಮ್ಮ 12 ನೇ ವಯಸಿನಲ್ಲಿಯೇ ಕ್ರಿಕೆಟ್ ಆಡಲು ಆರಂಭಿಸಿದರು. ಕರ್ನಾಟಕದ ಪರವಾಗಿ ಅಂಡರ್ 19 ಪಂದ್ಯಗಳನ್ನು ಆಡಿದ್ದರೇ ಶಾಲೆಯ ಪರವಾಗಿ ಆಡಿದ ಮೊದಲ ಪಂದ್ಯದಲ್ಲೇ ರಾಹುಲ್ ಶತಕ ಭಾರಿಸಿದ್ದರು ಮತ್ತು ವಿಕೆಟ್ ಕೀಪಿಂಗ್ ಕೂಡ ಮಾಡುತ್ತಿದ್ದರು. ನಂತರ ಇವರ ಪ್ರತಿಭೆ ಗುರುತಿಸಿ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿತ್ತು. ತಮ್ಮ ವಿಕೆಟ್ ಕಳೆದುಕೂಲದೆ ಬಹಳ ಎಚ್ಚರವಾಗಿ ಆಡುವ ಇವರ ರೀತಿಯನ್ನು ನೋಡಿ ವಾಲ್(ಗೋಡೆ) ಎಂದು ಎಲ್ಲರೂ ಬಣ್ಣನೆ ಮಾಡಿದ್ದರು. 2005 ರಲ್ಲಿ ಭಾರತ ತಂಡಕ್ಕೆ ನಾಯಕರಾಗಿ ಇವರನ್ನು ಆಯ್ಕೆ ಮಾಡಲಾಯಿತು. ನಾಯಕರಾಗಿ ಶ್ರೀಲಂಕಾ ವಿರುದ್ಧದ ಸರಣಿಯನ್ನು ಜಯಿಸಿದರು.

ಅಂತಾರಾಷ್ಟೀಯ ಕ್ರಿಕೆಟ್ ಅಲ್ಲದೆ ರಾಹುಲ್ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಬೆಂಗಳೂರು ಪರವಾಗಿ ಆಡಿದ್ದಾರೆ. ಸಚಿನ್ ನಂತರ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಧಿಕ ಶತಕದ ಜೊತೆಯಾಟ ಆಡಿರುವ ಆಟಗಾರ. ಅತಿ ಹೆಚ್ಚು ಬಾಲ್ ಗಳನ್ನು ಎದುರಿಸಿರುವ ಆಟಗಾರ. ಸತತ ಮೂರು ಸರಣಿಗಳಲ್ಲಿ ದ್ವಿಶತಕ ಬಾರಿಸಿರುವ ಎರಡನೇ ಆಟಗಾರ. 7 ಆಗಸ್ಟ್ 2011 ರಂದು ಏಕದಿನ ಕ್ರಿಕೆಟ್ ಗೆ ಮತ್ತು ಮಾರ್ಚ್ 9 2012 ರಂದು ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದರು.

ರಾಹುಲ್ ದ್ರಾವಿಡ್‌ಗೆ 2000 ರಲ್ಲಿ "ವಿಜಡನ್ ಕ್ರಿಕೆಟರ್" ಅಂತ ಗೊರವ ನೀಡಲಾಗಿದೆ. 2004 ರಲ್ಲಿ ವರ್ಷದ ಐಸಿಸಿ ಪ್ಲೆಯರ್ ಹಾಗೂ ವರ್ಷದ ಟೆಸ್ಟ್ ಆಟಗಾರನೆಂದೂ ಸನ್ಮಾನಿಸಲಾಗಿದೆ. 2013 ರಲ್ಲಿ ಪದ್ಮಭೂಷಣ ಪ್ರಶಸ್ತಿ ಕೂಡ ದೊರಕಿದೆ. ಇಷ್ಟೇ ಅಲ್ಲದೆ ರಾಹುಲ್ ಗೆ ಹಲವು ಪ್ರಶಸ್ತಿಗಳು ದೊರಕಿವೆ.

2. ಅನಿಲ್ ಕುಂಬ್ಳೆ:

ಅನಿಲ್ ಕುಂಬ್ಳೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಲೆಗ್ ಸ್ಪಿನ್ನರ್. ಅನಿಲ್ ಅವರ ಗೂಗ್ಲಿ ಬಹಳಷ್ಟು ಪ್ರಸಿದ್ಧಿ ಆಗಿದೆ. ಅನಿಲ್ ಜಂಬೋ ಎಂದು ಖ್ಯಾತಿ ಪಡೆದಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 619 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್ ಪಂದ್ಯವೊಂದರಲ್ಲಿ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅನಿಲ್ ಕುಂಬ್ಳೆ ಅವರ ನಿಜನಾಮ ಅನಿಲ್ ಕೃಷ್ಣಸ್ವಾಮಿ ಕುಂಬ್ಳೆ.

ಅನಿಲ್ 17 ಅಕ್ಟೋಬರ್ 1970 ರಂದು ಬೆಂಗಳೂರಿನಲ್ಲಿ ಜನಿಸಿದರು. ಅನಿಲ್ 25, 1990 ರಂದು ಶ್ರೀಲಂಕಾ ವಿರುದ್ಧದ ಪಂದ್ಯದ ಮೂಲಕ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಅದೇ ವರ್ಷ ಟೆಸ್ಟ್ ಕ್ರಿಕೆಟ್ ಗೂ ಕೂಡ ಪಾದಾರ್ಪಣೆ ಮಾಡಿದರು. 1992 ರಲ್ಲಿ ಭಾರತ ಇಂಗ್ಲೆಂಡ್ ಪ್ರವಾಸ ಬೆಳೆಸಿದ್ದಾಗ ಆ ಸರಣಿಯ ಎರಡನೇ ಪಂದ್ಯದಲ್ಲಿ 8 ವಿಕೆಟ್ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದರು. ಕೇವಲ 10 ಪಂದ್ಯಗಳಲ್ಲೇ 50 ವಿಕೆಟ್ ಪಡೆದಿದ್ದಾರೆ. ನವೆಂಬರ್ 23, 1993 ರಲ್ಲಿ ವೆಸ್ಟ್ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕೇವಲ 12 ರನ್ ನೀಡಿ 6 ವಿಕೆಟ್ ಪಡೆದು ಶ್ರೇಷ್ಟ ಸಾಧನೆ ಮಾಡಿದರು. ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಆಟಗಾರನು ಹೌದು. ವಿಶ್ವದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರಲ್ಲಿ ಮೂರನೆಯ ಸ್ಥಾನ ಪಡೆದಿದ್ದಾರೆ. ಸ್ಪಿನ್ ಬೌಲಿಂಗ್‌ನಲ್ಲಿಯೂ ಅತಿ ವೇಗವಾಗಿ ಬೌಲಿಂಗ್ ಮಾಡುವ ಕಲೆಯನ್ನು ಅನಿಲ್ ಕರಗತ ಮಾಡಿಕೊಂಡಿದ್ದಾರೆ. ಜಂಬೋ ಎಂಬ ಅಡ್ಡ ಹೆಸರು ಕೂಡ ಇವರಿಗಿದೆ. 1996 ವಿಶ್ವದ ಶ್ರೇಷ್ಟ ಕ್ರಿಕೆಟಿಗ ಪ್ರಶಸ್ತಿ ಪಡೆದಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರಕಿದೆ. ಇನ್ನೂ ಹಲವು ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಬೆಂಗಳೂರು ಪರವಾಗಿ ಆಡಿದ್ದಾರೆ. ನಂತರ 2008 ರಲ್ಲಿ ಕ್ರಿಕೆಟ್ ವೃತ್ತಿಗೆ ನಿವೃತ್ತಿ ಘೋಷಿಸಿದ್ದರು.