1 ಕೋಟಿಗೂ ಅಧಿಕ ಗಿಡ ನೆಟ್ಟ ಸಾಧಕ- ಯುವಕರಿಗೆ ಮಾದರಿಯಾದ ತೆಲಂಗಾಣದ ರಾಮಯ್ಯ

ಟೀಮ್​ ವೈ.ಎಸ್.ಕನ್ನಡ

1

ಸುತ್ತಲಿನ ಜನ ಮತ್ತು ಸಮಾಜ ಇವರನ್ನು ಬಾಯಿಗೆ ಬಂದಂತೆ ಅಣಕಿಸಿದ್ದರು. ಪ್ರತಿ ದಿನ ಗಿಡಗಳನ್ನು, ಸಸಿಗಳನ್ನು ಮತ್ತು ಸಸಿಗಳನ್ನು ಬೆಳೆಸಬಲ್ಲ ಬೀಜಗಳನ್ನು ಕೈ ಯಲ್ಲಿ ಹಿಡಿಯುತ್ತಾ ಸಾಗುತ್ತಿದ್ದರೆ, ಕಂಡಕಂಡವರೆಲ್ಲ ಬಾಯಿಗೆ ಬಂದಂತೆ ಮಾತನಾಡಿದ್ದರು. ಸೈಕಲ್​ನಲ್ಲೇ ಈ ವ್ಯಕ್ತಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗುತ್ತಿದ್ದರು. ಸರಳವಾಗಿ, ವಿನಮ್ರವಾಗಿ ಯಾರು ಏನೇ ಹೇಳಿದ್ರೂ ಮರು ಮಾತನಾಡುತ್ತಿರಲಿಲ್ಲ. ಆದ್ರೆ ಈಗ ಈ ಸಾಧಕ ಭಾರತದ ನಾಲ್ಕನೇ ಶ್ರೇಷ್ಠ ನಾಗರೀಕ ಪ್ರಶಸ್ತಿ ಪದ್ಮಶ್ರೀ ಗೌರವ ಪಡೆದುಕೊಂಡಿದ್ದಾರೆ. ಭಾರತ ರತ್ನ, ಪದ್ಮ ವಿಭೂಷಣ, ಪದ್ಮಭೂಷಣ ಗೌರವಗಳ ನಂತರ ಭಾರತದ ಶ್ರೇಷ್ಠ ಗೌರವ ಪಡೆದ ಸಾಧನೆ ಮಾಡಿದ್ದಾರೆ.

ಇದು ತೆಲಂಗಾಣ ರಾಜ್ಯದ ಕಮ್ಮಮ್ ಜಿಲ್ಲೆಯ ರೆಡ್ಡಿಪಲ್ಲೆಯ ರಾಮಯ್ಯ ದರಿಪಲ್ಲಿಯವರ ಸ್ಫೂರ್ತಿದಾಯಕ ಕಥೆ. ರಾಮಯ್ಯ ಎಲ್ಲೇ ಹೋದ್ರು ತನ್ನ ಜೊತೆಗೆ ಗಿಡಮರಗಳ ಬೀಜಗಳನ್ನು ಮತ್ತು ಸಸಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ನೂರಾರು ಕಿಲೋಮೀಟರ್​ಗಳ ಪ್ರಯಾಣ ಮಾಡಿ, ಖಾಲಿ ಜಾಗದಲ್ಲಿ ಗಿಡಗಳನ್ನು ನೆಟ್ಟು ಬರುತ್ತಿದ್ದರು. ಅಷ್ಟೇ ಅಲ್ಲ ಮುಂದಿನ ಪೀಳಿಗೆ ಸುಖವಾಗಿರಲಿ ಅಂತ ಮರಗಳನ್ನು ಬೆಳಸುವ ಕಾರ್ಯಗಳನ್ನು ಕೂಡ ಮಾಡುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಇದೇ ಕೆಲಸವನ್ನು ಮಾಡಿಕೊಂಡು ಬರುತ್ತಿರುವ ರಾಮಯ್ಯ ಲಕ್ಷಾಂತರ ಮರಗಳನ್ನು ನೆಟ್ಟಿದ್ದಾರೆ.

“ ಕಳೆದ ಕೆಲವು ವರ್ಷಗಳಲ್ಲಿ ನಾನೆಷ್ಟು ಮರಗಳನ್ನು ನೆಟ್ಟಿದ್ದೇನೆ ಅನ್ನುವುದು ನನಗೆ ನೆನಪಿಲ್ಲ. ನನಗೆ ಇನ್ನೊಬ್ಬರಿಗೆ ಹೇಳಿ ಕೊಡುವುದರಲ್ಲಿ ನಂಬಿಕೆ ಇಲ್ಲ. ಮಾಡಿ ತೋರಿಸುವುದರಲ್ಲಿ ಮಾತ್ರ ಬಲವಾದ ನಂಬಿಕೆ ಇದೆ.”
- ರಾಮಯ್ಯ, ಪದ್ಮಶ್ರೀ ಗೌರವ ವಿಜೇತರು

ರಾಮಯ್ಯ ಬಹುಷಃ ಸರಿಸುಮಾರು 1 ಕೋಟಿಗಿಂತಲೂ ಅಧಿಕ ಮರಗಳನ್ನು ಬೆಳೆಸಿದ್ದಾರೆ. ಒಂದು ಲೆಕ್ಕಾಚಾರದ ಪ್ರಕಾರ ರಾಮಯ್ಯ ತೆಲಂಗಾಣ ರಾಜ್ಯದ ಪ್ರತೀ ಮೂವರು ಪ್ರಜೆಗಳಿಗೆ 1 ಮರದಂತೆ ಸಸಿಗಳನ್ನು ನೆಟ್ಟಿದ್ದಾರೆ ಅಂದ್ರೆ ಅದು ದೊಡ್ಡ ಸಾಧನೆ ಅಲ್ಲದೆ ಮತ್ತೇನು..?

70 ವರ್ಷ ವಯಸ್ಸಿನ ರಾಮಯ್ಯರನ್ನು ಹಲವು ಹೆಸರುಗಳಿಂದ ಕರೆಯುತ್ತಿದ್ದಾರೆ. "ಮರಗಳ ರಾಮಯ್ಯ" ಮತ್ತು "ವನಜೀವಿ ರಾಮಯ್ಯ" ಅಂದ್ರೆ ರೆಡ್ಡಿಪಲ್ಲೆ ಗ್ರಾಮದಲ್ಲಿ ದೊಡ್ಡ ಹೆಸರು.

“ಸಸಿಗಳನ್ನು ನೆಡುವುದು ಅಥವಾ ಬೀಜ ಬಿತ್ತುವುದು ನನ್ನ ಹವ್ಯಾಸ ಮಾತ್ರವಲ್ಲ. ಇದು ನನಗೆ ಇಷ್ಟವಾಗಿರುವ ಕೆಲಸ. ನನ್ನ ಊರಿನ ಸುತ್ತಮುತ್ತ ಸ್ವಲ್ಪ ಖಾಲಿ ಜಾಗ ಸಿಕ್ಕಿದ್ರೂ ಸಾಕು ನಾನು ಅಲ್ಲಿ ಸಸಿ ನೆಡಲು ಮನಸ್ಸು ಮಾಡುತ್ತೇನೆ. ಅಷ್ಟೇ ಅಲ್ಲ ನಾನು ನೆಟ್ಟ ಸಸಿ ಬೆಳೆದು ದೊಡ್ಡದಾಗುವಂತೆಯೂ ನೋಡಿಕೊಳ್ಳುತ್ತೇನೆ. ನಾನು ನೆಟ್ಟ ಗಿಡಗಳ ಪೈಕಿ ಒಂದು ಸಸಿ ಸತ್ರೂ ಕೂಡ ನನಗೆ ನನ್ನ ಜೀವವೇ ಕಳೆದು ಹೋದಂತೆ ಅನಿಸುತ್ತದೆ. ”
- ರಾಮಯ್ಯ, ಪದ್ಮಶ್ರೀ ಗೌರವ ವಿಜೇತರು

ರೆಡ್ಡಿಪಲ್ಲೆಯಲ್ಲಿರುವ ರಾಮಯ್ಯರ ಡಬಲ್ ಬೆಡ್​ರೂಮ್ ಮನೆಯ ಸುತ್ತಲೂ ಪರಿಸರಕ್ಕೆ ಸಂಬಂಧ ಪಟ್ಟ ಸ್ಲೋಗನ್​ಗಳು ಮತ್ತು ಬ್ಯಾನರ್​ಗಳಿವೆ. ಈ ಮೂಲಕ ಉಳಿದವರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುತ್ತಿದ್ದಾರೆ. ರಾಮಯ್ಯರ ಈ ಕೆಲಸ ಬಗ್ಗೆ ಹಲವರು ಮನಸ್ಸಿಗೆ ನೋವಾಗುವಂತಹ ಮಾತುಗಳನ್ನು ಆಡಿದ್ದಾರೆ. ಆದ್ರೆ ರಾಮಯ್ಯ ಇದಕ್ಕೆಲ್ಲಾ ತಲ ಕೆಡಿಸಿಕೊಂಡಿಲ್ಲ. ಖಾಲಿ ಜಾಗಕ್ಕೆ ಸೈಕಲ್ ಮೂಲಕ ತೆರಳಿ ಅಲ್ಲಿ ಸಸಿ ನೆಟ್ಟು ಬರುತ್ತಾರೆ. ಅಷ್ಟೇ ಅಲ್ಲ ಮುಂದೊಂದು ದಿನ ಖಾಲಿ ಜಾಗದಲ್ಲಿ ಹಲವು ಮರಗಳು ಬೆಳೆಯುತ್ತವೆ ಅನ್ನೋ ನಂಬಿಕೆಯನ್ನು ರಾಮಯ್ಯ ಇಟ್ಟುಕೊಂಡಿದ್ದಾರೆ. ಮರಗಳನ್ನು ಉಳಿಸಿ, ಅವುಗಳು ಜೀವ ಉಳಿಸುತ್ತವೆ ಅನ್ನೋದನ್ನ ರಾಮಯ್ಯ ಪ್ರತಿಯೊಬ್ಬರಿಗೂ ಹೇಳುತ್ತಾರೆ.

ಇದನ್ನು ಓದಿ: ಕಾಫಿ ಪುಡಿ, ಟೀ ಪೌಡರ್​ ಖಾಲಿ ಆದ್ರೆ ಚಿಂತೆ ಬೇಡ- ಹಾಲಿನ ಜೊತೆಗೆ ಅಗತ್ಯವಸ್ತುಗಳು ಕೂಡ ಬಂದೇ ಬರುತ್ತದೆ..!

ರಾಮಯ್ಯ ತನ್ನ ಮೂರು ಎಕರೆ ಆಸ್ತಿಯನ್ನು ಮಾರಿ, ಗಿಡಗಳ ಬೀಜಗಳನ್ನು ಖರೀದಿ ಮಾಡಿದ್ದಾರೆ. ಬರ್ತ್ ಡೇ ಮತ್ತು ಮದುವೆ ವಾರ್ಷಿಕೋತ್ಸವಗಳಿಗೆ ಅಥವಾ ಇನ್ಯಾವುದೇ ಸಮಾರಂಭಗಳಿಗೆ ರಾಮಯ್ಯ ಹೋದರೆ ಸಸಿಗಳನ್ನು ಉಡುಗೊರೆ ನೀಡಿ ಬರುತ್ತಾರೆ. ರಾಮಯ್ಯ ಕೇವಲ 10ನೇ ತರಗತಿ ತನಕ ವ್ಯಾಸಂಕ ಮಾಡಿದ್ದರೂ, ಹಲವು ಪುಸ್ತಕಗಳನ್ನು ಓದುವ ಹವ್ಯಾಸ ಇಟ್ಟುಕೊಂಡಿದ್ದಾರೆ. ಪರಿಸರ ಮತ್ತು ಮರಗಳ ಬಗ್ಗೆ ಓದಿದ ಲೇಖನಗಳ ಕ್ಲಿಪ್ಪಿಂಗ್​ಗಳನ್ನು ಕೂಡ ರಾಮಯ್ಯ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ.

ಪದ್ಮಶ್ರೀ ಗೌರವದಿಂದ ರಾಮಯ್ಯ ಗೌರವ ಹೆಚ್ಚಾಗಿದೆ. ಆದ್ರೆ ರಾಮಯ್ಯ ಅವರೇ ಹೇಳುವಂತೆ ಈ ಶ್ರೇಷ್ಠ ಗೌರವ ಅವರ ಮೇಲೆ ಹೆಚ್ಚು ಜವಾಬ್ದಾರಿಗಳನ್ನು ಹೇರಿದೆ. ನನ್ನ ಕೆಲಸದಿಂದ ಜನರು ಸ್ಫೂರ್ತಿಗೊಂಡರೆ ಅದು ನನಗೆ ಕೊಟ್ಟ ಶ್ರೇಷ್ಠ ಗೌರವ ಅನ್ನೋದನ್ನ ರಾಮಯ್ಯ ಹೇಳುತ್ತಾರೆ. ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ರಾಮಯ್ಯ ನಿಜಕ್ಕೂ ಯುವ ಜನಾಂಗಕ್ಕೆ ಮಾದರಿ ವ್ಯಕ್ತಿ ಅನ್ನುವುದರಲ್ಲಿ ಅನುಮಾನವೇ ಇಲ್ಲ.

ಇದನ್ನು ಓದಿ:

1. ಭಾರತಕ್ಕೆ ವಿಶ್ವಕಪ್​ ಗೆದ್ದು ಕೊಟ್ಟ ಸಾಧಕ- ದೃಷ್ಠಿ ವಿಕಲಚೇತನರ ಕ್ರಿಕೆಟ್​ನಲ್ಲಿ ಶೇಖರ್​ "ನಾಯಕ"

2. ಎಂಜಿನಿಯರಿಂಗ್​ಗೆ ಬೈಬೈ- ಕುದುರೆ ಸವಾರಿಗೆ ಹಾಯ್ ಹಾಯ್​- ಹವ್ಯಾಸವೇ ಫುಲ್‍ ಟೈಂ ಜಾಬ್ ಆದ ಕಥೆ..!

3. ಹಾಲೆಂಡ್​ ವಿಜ್ಞಾನಿಗಳ ಅನ್ವೇಷಣೆ- ಸಮುದ್ರವನ್ನು ಕ್ಲೀನ್​ ಮಾಡುತ್ತೆ ಈ ಸ್ಪೆಷಲ್​ "ಶಾರ್ಕ್​"

Related Stories