ನಾವು ಕಂಡಂತಿಲ್ಲ ಈ ಜಗತ್ತು...ಕವಿತಾ ಗುಪ್ತಾರ ಅಂಗೈಯಲ್ಲಿ ಪ್ರಪಂಚ..!

ಟೀಮ್ ವೈ.ಎಸ್.

0

ಜಗತ್ತು ಹೇಗಿದೆ ಅನ್ನೋ ಬಗ್ಗೆ ನಮಗಿರೋ ಕಲ್ಪನೆ ಸೀಮಿತವಾದದ್ದು. ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಬರುವ ಸುದ್ದಿಗಳನ್ನು ನೋಡಿ ನಾವು ಇಡೀ ವಿಶ್ವದ ಚಿತ್ರಣವನ್ನು ಕಲ್ಪಿಸಿಕೊಳ್ಳುತ್ತೇವೆ. ಆದರೆ ಜಗತ್ತು ಇನ್ನೂ ವಿಭಿನ್ನವಾಗಿದೆ. ಪ್ರತಿ ನಗರ, ಅಲ್ಲಿನ ನಿವಾಸಿಗಳು, ಆ ನಗರದ ಹೃದಯ ಬಡಿತ, ಜನರ ಜೀವನ ಶೈಲಿ, ಸಂಸ್ಕೃತಿ ಎಲ್ಲವೂ ವಿಶಿಷ್ಟ ಮತ್ತು ವಿಭಿನ್ನ. ಕವಿತಾ ಗುಪ್ತಾ ಈ ಎಲ್ಲ ಚಿತ್ರಣವನ್ನ ಜನರ ಮುಂದಿಡುವ ಪ್ರಯತ್ನ ಮಾಡುತ್ತಿದ್ದಾರೆ. ಜಾಗತಿಕ ಮಟ್ಟದ ಬೃಹತ್ ಕಂಪನಿಗಳಲ್ಲಿ ಕೆಲಸ ಮಾಡಿರುವ ಕವಿತಾ ಈಗ ತಮ್ಮೆಲ್ಲ ಸಮಯವನ್ನೂ ಇದೇ ಕಾರ್ಯಕ್ಕೆ ಮೀಸಲಿಟ್ಟಿದ್ದಾರೆ. ಪ್ರಪಂಚದ ಮೂಲೆ ಮೂಲೆಯನ್ನೂ ಸುತ್ತಿ ಬಂದಿದ್ದಾರೆ. ಜನರನ್ನು ಇನ್ನೂ ತಲುಪಿರದ ಜಾಗತಿಕ ಸ್ಥಳೀಯ ವೃತ್ತಾಂತವನ್ನು ವಿವರವಾಗಿ ತಿಳಿಸುತ್ತಿದ್ದಾರೆ.

ದೆಹಲಿಯ ಮಾರ್ವಾಡಿ ಕುಟುಂಬದಲ್ಲಿ ಜನಿಸಿದ ಕವಿತಾ ಗುಪ್ತಾ, ರಾಷ್ಟ್ರ ರಾಜಧಾನಿಯಲ್ಲೇ ಆರಂಭಿಕ ಶಿಕ್ಷಣ ಮುಗಿಸಿದರು. ಪೋಷಕರು ಕವಿತಾ ಅವರ ಆಸೆಗೆ ಎಂದೂ ಅಡ್ಡಿಯಾಗಲಿಲ್ಲ. ಅವರಿಚ್ಛೆಯಂತೆ ವಿದೇಶದಲ್ಲೇ ಉನ್ನತ ವಿದ್ಯಾಭ್ಯಾಸ ಮಾಡಿಸಿದ್ದಾರೆ. ಇಡೀ ಕುಟುಂಬದಲ್ಲೇ ಫಾರಿನ್‍ನಲ್ಲಿ ಶಿಕ್ಷಣ ಪಡೆದವರೆಂದರೆ ಕವಿತಾ ಮಾತ್ರ. ಸೇಂಟ್ ಕ್ಸೇವಿಯರ್‍ನಲ್ಲಿ ಪದವಿ ಪಡೆದ ಕವಿತಾ, ಎಂಜಿನಿಯರಿಂಗ್ ಜೊತೆಗೆ 2003ರಲ್ಲಿ ಲ್ಯಾಬ್ ಫೆಲೋಶಿಪ್ ಕೂಡ ಪಡೆದರು. 2004ರಲ್ಲಿ ಮೆಕ್‍ಕಿನ್ಸಿ ಕಂಪನಿಯಲ್ಲಿ ಸಲಹೆಗಾರರಾಗಿ ಸೇರಿಕೊಂಡ ಕವಿತಾ ವೃತ್ತಿ ಜೀವನಕ್ಕೂ ನಾಂದಿ ಹಾಡಿದರು. ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾನಿಲಯದಲ್ಲಿ ಮಾಸ್ಟರ್ಸ್ ಮುಗಿಸಿದ ಕವಿತಾ ಗುಪ್ತಾ ಅವರಿಗೆ ವಿಶ್ವ ಬ್ಯಾಂಕ್‍ನಲ್ಲಿ ಸೇವೆ ಸಲ್ಲಿಸುವ ಸದವಕಾಶ ಒದಗಿ ಬಂತು. ಬ್ಯಾಂಕಿಂಗ್ ಹಾಗೂ ಹಣಕಾಸು ವಿಭಾಗದಲ್ಲಿ ಸುಮಾರು 5 ವರ್ಷಗಳ ಕಾಲ ಕವಿತಾ ಕೆಲಸ ಮಾಡಿದರು. ಹೊಸದೇನಾದರೂ ಮಾಡಬೇಕೆಂಬ ಹಂಬಲದಲ್ಲಿದ್ದ 2012ರಲ್ಲಿ ಮುಂಬೈಗೆ ವಾಪಸ್ಸಾದರು. ಅಲ್ಲಿ ಅವರು ಸೇರಿದ್ದು ಸಿನಿ ದುನಿಯಾಕ್ಕೆ. ಅನುರಾಗ್ ಕಶ್ಯಪ್ ಫಿಲ್ಮ್ಸ್ನಲ್ಲಿ ಸಿಎಫ್‍ಓ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅದೇ ವರ್ಷ ಕವಿತಾ ಗುಪ್ತಾ ಅವರ ಕನಸು ಕೂಡ ಕೈಗೂಡಿತ್ತು. ಸಿನಿ ರೂಸ್ಟ್ ಕ್ಯಾಪಿಟಲ್ ಅಡ್ವೈಸರಿ ಎಂಬ ಸಂಸ್ಥೆಯೊಂದನ್ನು ಕವಿತಾ ಆರಂಭಿಸಿದರು.

ಇಡೀ ವಿಶ್ವವನ್ನೇ ಸುತ್ತಿದ್ದ ಕವಿತಾ ಅವರಿಗೆ ಆ ಪ್ರಯಾಣವೇ ಒಂದು ಅನುಭವಗಳ ಮೂಟೆ. ಅವರ ಮನಸ್ಸಿನ ಮೇಲೂ ಗಾಢ ಪರಿಣಾಮ ಉಂಟಾಗಿತ್ತು. ಪ್ರವಾಸಿಗರಿಗೆ ಯಾವುದೇ ನಗರದ ನೈಜ ಚಿತ್ರಣ ನೋಡಲು ಸಾಧ್ಯವಾಗೋದಿಲ್ಲ ಅನ್ನೋದು ಕವಿತಾ ಅವರ ಅಭಿಪ್ರಾಯ. ಆಫ್ರಿಕಾ ಎಂದಾಕ್ಷಣ ಮಹಾಮಾರಿ ಏಡ್ಸ್ ಬಗ್ಗೆ ಜನರು ಮಾತನಾಡಿಕೊಳ್ತಾರೆ. ಆದ್ರೆ ಆಫ್ರಿಕಾ ದೇಶ ಜನರ ಗಮನ ಸೆಳೆಯುವುದೇ ಇಲ್ಲ ಎನ್ನುತ್ತಾರೆ ಕವಿತಾ. ಒಂದು ರಾಷ್ಟ್ರದ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳದೇ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡುವ ಉದ್ಯಮಿಗಳ ಬಗೆಗೂ ಕವಿತಾ ಅಚ್ಚರಿ ವ್ಯಕ್ತಪಡಿಸುತ್ತಾರೆ. ಉಕ್ರೇನ್, ಟ್ಯುನಿಶಿಯಾ, ಈಜಿಪ್ಟ್ನಂತಹ ದೇಶಗಳ ಬಗ್ಗೆ ಇನ್ನಷ್ಟು ಮತ್ತಷ್ಟು ಮಾಹಿತಿಯನ್ನು ಒದಗಿಸಬೇಕು. ಅಲ್ಲಿ ನಡೆಯುವ ಘಟನೆಗಳೇ ಕಥೆಗಳಾಗುತ್ತವೆ ಅನ್ನೋದು ಕವಿತಾ ಅವರ ಮನದ ಮಾತು. ಜಾಗತಿಕ ಮಟ್ಟದಲ್ಲಿ ಸ್ಥಳೀಯ ಘಟನೆಗಳು ಸುದ್ದಿಯಾಗುವ ವರೆಗೆ ಗಮನಸೆಳೆಯುವುದೇ ಇಲ್ಲ. ಪ್ರತಿಯೊಂದು ರಾಷ್ಟ್ರದ ಪ್ರತಿಯೊಂದು ನಗರದಲ್ಲೂ ಅದ್ವಿತೀಯ ಘಟನೆಗಳು ನಡೆಯುತ್ತಿರುತ್ತವೆ ಎನ್ನುತ್ತಾರೆ ಕವಿತಾ.

ಬರೀ ಒಬ್ಬ ಪ್ರವಾಸಿಗಳಂತಲ್ಲದೆ ಪ್ರತಿ ಹಳ್ಳಿ ಹಾಗೂ ನಗರದ ಹೃದಯ ಬಡಿತವನ್ನು ಕವಿತಾ ಗುಪ್ತಾ ಆಲಿಸಿದ್ದಾರೆ. ಅಲ್ಲಿನ ಜನಜೀವನ, ರಾಜಕೀಯ ಎಲ್ಲವನ್ನೂ ಅರಿತುಕೊಂಡಿದ್ದಾರೆ. ಅದನ್ನೆಲ್ಲ ಜಗತ್ತಿಗೇ ಸಾರಿ ಹೇಳಲು `ವಿ ಮೈಂಡ್' ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಕೈರೋದಲ್ಲಿ ಇಬ್ಬರು ಸ್ನೇಹಿತೆಯರು ಕೂಡ ಕವಿತಾ ಅವರ ಜೊತೆ ಕೈಜೋಡಿಸಿದ್ದಾರೆ. ಪ್ರಾಚೀ ಹಾಗೂ ಫರ್ಹಾ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಲು ಆತ್ಮವಿಶ್ವಾಸ ತುಂಬಿದ್ದಾರೆ. ಜೀವನದಲ್ಲಿ ರಿಸ್ಕ್ ತೆಗೆದುಕೊಂಡಲ್ಲಿ ಮಾತ್ರ ಗುರಿ ಮುಟ್ಟಲು ಸಾಧ್ಯ ಅನ್ನೋದು ಕವಿತಾ ಗುಪ್ತಾರ ಬ್ಯುಸಿನೆಸ್ ಮಂತ್ರ. ಪ್ರತಿ ಬಾರಿ ಯಶಸ್ಸು ಸಿಗದೇ ಇದ್ದರೂ ಪ್ರಯತ್ನ ಕೈಬಿಡಬಾರದು ಎನ್ನುತ್ತಾರೆ ಕವಿತಾ ಗುಪ್ತಾ. ಸದ್ಯ ಅಮೆರಿಕದಲ್ಲಿ ನೆಲೆಸಿರುವ ಕವಿತಾ ಗುಪ್ತಾ ಮಹಿಳೆಯರ ಸುರಕ್ಷತೆ ಬಗ್ಗೆಯೂ ವಿಶ್ವದ ಗಮನ ಸೆಳೆದಿದ್ದಾರೆ. ಜಗತ್ತಿನ ಬಹುತೇಕ ಎಲ್ಲ ಕಡೆಗಳಲ್ಲೂ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಮಹಿಳೆಯರಿಗೆ ಸೂಕ್ತ ರಕ್ಷಣೆ ಸಿಗುತ್ತಿಲ್ಲ ಅನ್ನೋದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಕೀನ್ಯಾದಂಥ ಪುಟ್ಟ ರಾಷ್ಟ್ರ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಅದೆಷ್ಟು ಮುಂದಿದೆ ಅನ್ನೋದನ್ನೂ ಕವಿತಾ ವರ್ಣಿಸಿದ್ದಾರೆ. ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನೂ ನೈರೋಬಿ ಸದುಪಯೋಗಪಡಿಸಿಕೊಳ್ಳುತ್ತಿದೆ. ಅಲ್ಲಿನ ಟ್ಯಾಕ್ಸಿಗಳಲ್ಲೆಲ್ಲ ಡೊಂಗಲ್ಸ್ ಹಾಗೂ ಹಾಟ್‍ಸ್ಪಾಟ್‍ಗಳನ್ನ ಹಾಕಲಾಗಿದೆ. ಹಾಗಾಗಿ ಜನರು ಟ್ರಾಫಿಕ್ ಜಾಮ್‍ನಲ್ಲಿ ಸಿಲುಕಿದ್ದಾಗ ಟ್ಯಾಕ್ಸಿಯಲ್ಲೇ ಕುಳಿತು ಕೆಲಸ ಮಾಡಬಹುದು. ಇಂತಹ ಹೊಸ ಹೊಸ ಆವಿಷ್ಕಾರಗಳಿಂದ ಪುಟ್ಟ ರಾಷ್ಟ್ರಗಳು ಕೂಡ ಅಭಿವೃದ್ಧಿಯಲ್ಲಿ ಮುಂದಿವೆ ಅನ್ನೋದನ್ನು ಕವಿತಾ ಗುಪ್ತಾ ಸಾರಿ ಹೇಳಿದ್ದಾರೆ. ಅದೇನೇ ಆದರೂ ಕೇವಲ ಒಬ್ಬ ಪ್ರವಾಸಿಗಳಂತೆ ದೇಶ ಸುತ್ತದೇ ಅಲ್ಲಿನ ಸಮಸ್ಯೆಗಳು ಹಾಗೂ ವಿಶೇಷತೆಗಳನ್ನೆಲ್ಲ ಜನರ ಮುಂದಿಡುತ್ತಿರುವ ಕವಿತಾ ಅವರನ್ನು ಮೆಚ್ಚಲೇಬೇಕು.