ಬೌದ್ಧಿಕ ಸ್ವಾತಂತ್ರ್ಯಗಳ ಹಕ್ಕನ್ನು ಮರುಸ್ಥಾಪಿಸಲು ಭಗೀರಥ ಪ್ರಯತ್ನ..!

ಟೀಮ್​​ ವೈ.ಎಸ್​​.

ಬೌದ್ಧಿಕ ಸ್ವಾತಂತ್ರ್ಯಗಳ ಹಕ್ಕನ್ನು ಮರುಸ್ಥಾಪಿಸಲು ಭಗೀರಥ ಪ್ರಯತ್ನ..!

Monday October 26, 2015,

5 min Read

ಬೆಂಗಳೂರು ಮೂಲದ 39 ವರ್ಷದ ಶಮ್ನದ್ ಬಶೀರ್ ವಿಭಿನ್ನ ವ್ಯಕ್ತಿತ್ವದ ವಕೀಲರು. ಬಡವರಿಗೆ ಕಾನೂನು ಕಲಿಕೆಗಾಗಿ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿಗಾಗಿ ಹೋರಾಡುವ ಮೂಲಕ ಪ್ರಸಿದ್ಧಿಯಾದವರು ಇವರು. ಐಡಿಯಾ(ಐಡಿಐಎ- ಅಂದರೆ ಕಾನೂನು ಶಿಕ್ಷಣದ ಸುಗಮ ಕಲಿಕೆ) ಹಾಗೂ ಪಿ-ಪಿಐಎಲ್(ಸಾರ್ವಜನಿಕ ಹಿತಾಸಕ್ತಿ ಅರ್ಜಿಯಂತಹ ಅಂಶದ ಪ್ರಚಾರ) ಅವರ ಕಾನೂನು ಅಭ್ಯಾಸದ ಮುಖ್ಯ ಗುರಿಯಾಗಿದ್ದವು. ಮೇಕಿಂಗ್ ಇಂಡಿಯಾದ ಇಂದಿನ ದಿನದಲ್ಲಿ ಕಾನೂನು ಶಿಕ್ಷಣ ಹಾಗೂ ಸಮುದಾಯಗಳಲ್ಲಿ ಕಟ್ಟಳೆಗಳ ಬಗ್ಗೆ ಜ್ಞಾನದ ಅರಿವಿರಬೇಕು ಅನ್ನುವುದು ಅವರ ಧೋರಣೆ

ಐಡಿಯಾ ರಾಷ್ಟ್ರಾದ್ಯಂತ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿ ಅವರನ್ನು ಸಮುದಾಯದ ವಕಾಲತ್ತು ವಹಿಸಿಕೊಳ್ಳುವಂತೆ ಜವಾಬ್ದಾರಿ ನೀಡಿ ಮುಖ್ಯವಾಹಿನಿಗೆ ಕರೆತರಲಾಗುತ್ತಿದೆ. 2010ರಲ್ಲಿ ಇಂಥದ್ದೊಂದು ಅಂಶವನ್ನು ಸಮರ್ಪಕವಾಗಿ ಆಲೋಚಿಸಿ ಜಾರಿಗೆ ತರಲಾಯಿತು. ಇದೇ ಐಡಿಯಾ. ಹಿಂದುಳಿದ ಹಾಗೂ ಆರ್ಥಿಕವಾಗಿ ದುರ್ಬಲರಾದ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಲ್ಲಿರುವ ಕಲಿಕೆಯ ಸಾಮರ್ಥ್ಯಕ್ಕೆ ಉತ್ತೇಜನ ನೀಡಿ ಕಾನೂನು ತರಬೇತಿ ನೀಡುವ ಮೂಲಕ ಸಾಮಾಜಿಕ ಅಭಿಯಾನ ಆರಂಭಿಸಿತು ಐಡಿಯಾ. ಜೊತೆಗೆ ಕೆಲವು ಕಾನೂನು ವಿದ್ಯಾಲಯಗಳಲ್ಲಿ ಕಲಿಯುತ್ತಿರುವ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೂ ನೆರವು ನೀಡಿ ಉಜ್ವಲ ಭವಿಷ್ಯ ನೀಡಲಾಗುತ್ತಿದೆ.

image


ಬೇರೆ ಬೇರೆ ವಿದ್ಯಾಸಂಸ್ಥೆಗಳಲ್ಲಿ ಕಲಿತ ಐಡಿಯಾದ ಸ್ವಯಂಸೇವಕರು(ಕಾನೂನು ವಿದ್ಯಾರ್ಥಿಗಳು) ದೇಶಾದ್ಯಂತ ಸಂಚಾರ ಮಾಡಿ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಕಾಲೇಜು ಕಲಿಯಲು ಸಹಾಯ ಮಾಡುತ್ತಿದ್ದಾರೆ. ತಮಗೆ ಒದಗಿದ ತರಬೇತಿಯಂತೆ ಆ ವಿದ್ಯಾರ್ಥಿಗಳಿಗೂ ಉತ್ತಮ ಕಾನೂನು ಜ್ಞಾನ ಒದಗಿಸಲು ಈ ಸ್ವಯಂಸೇವಕರು ಕಾರ್ಯನಿರತರಾಗಿದ್ದಾರೆ. ಜೊತೆಗೆ ಪ್ರವೇಶ ಪರೀಕ್ಷೆಗಳಿಗೆ ಅಗತ್ಯವಿರುವ ಶುಲ್ಕ, ಕಾನೂನು ಕಲಿಕೆಯ ಸಾಮಾನ್ಯ ಪರೀಕ್ಷೆ(ಕ್ಲ್ಯಾಟ್-ಸಿಎಲ್‌ಎಟಿ) ಹಾಗೂ ಅಖಿಲ ಭಾರತ ಕಾನೂನು ಪ್ರವೇಶ ಪರೀಕ್ಷೆ(ಎಐಎಲ್‌ಇಟಿ-ಆಲ್‌ ಇಂಡಿಯಾ ಲಾ ಎಂಟ್ರೆನ್ಸ್ ಟೆಸ್ಟ್) ಮುಂತಾದ ವಿಶೇಷ ಪರೀಕ್ಷೆಗಳಿಗೂ ಅಗತ್ಯವಿರುವ ಬಡ ವಿದ್ಯಾರ್ಥಿಗಳಿಗೆ ಶುಲ್ಕ ನೀಡಲಾಗುತ್ತಿದೆ.

ಐಡಿಯಾದ ಈ ಸೇವಾಹಾದಿಯಲ್ಲಿ ಸ್ವಯಂ ಸೇವಕರು ಸಾಮಾಜಿಕ ಸಬಲೀಕರಣ ಸಾಧಿಸಲು ಮಹತ್ತರ ಶ್ರಮ ವಹಿಸುತ್ತಿದ್ದಾರೆ. ಇಂದು ದೇಶದ ಅತೀ ಮುಖ್ಯ ಕಾನೂನು ಕಲಿಕಾ ಕೇಂದ್ರಗಳಲ್ಲಿರುವ ವಿದ್ಯಾರ್ಥಿಗಳು ಅತ್ಯಂತ ಕೆಳಮಟ್ಟದ ಜೀವನಶೈಲಿಯ ಹಾಗೂ ಹಿಂದುಳಿದ ಸಮುದಾಯಗಳಿಂದ ಬಂದವರು. ಅವರಿಗೆ ಕನಿಷ್ಠ ಸೌಕರ್ಯಗಳೂ ದೊರೆಯುವುದು ಕಷ್ಟವಿತ್ತು. ಆದರೆ ನಮ್ಮ ಐಡಿಯಾ ಆ ಬಡ ವಿದ್ಯಾರ್ಥಿಗಳಿಗೆ ಕಾನೂನು ಕಲಿಕೆಯಂತಹ ಮಹತ್ವದ ಉಡುಗೊರೆ ನೀಡಿತು. ಇಂದು ಭಾರತದ ಕಾನೂನು ಕಲಿಕಾ ಕ್ಷೇತ್ರದಲ್ಲಿ ಇದರಿಂದ ಗುರುತರವಾದ ಬದಲಾವಣೆಗಳಾಗುತ್ತಿವೆ ಎಂದು ಪ್ರೊ.ಶಮ್ನದ್ ಬಶೀರ್ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಪ್ರಮುಖ ರಾಷ್ಟ್ರೀಯ ಕಾನೂನು ಕಲಿಕಾ ವಿವಿಗಳಲ್ಲಿ ಕಳೆದ 3 ವರ್ಷದಲ್ಲಿ ನಮ್ಮ ಸ್ವಯಂಸೇವಕ ಕಾನೂನು ತರಬೇತುದಾರರಿಂದ ಸುಮಾರು 40 ಮಂದಿ ವಿದ್ಯಾರ್ಥಿಗಳು ಪದವಿ ಪಡೆದುಕೊಂಡಿದ್ದಾರೆ. ಕರ್ನಾಟಕ, ಪಶ್ಚಿಮ ಬಂಗಾಳ, ಜಾರ್ಖಂಡ್, ರಾಜಸ್ಥಾನ, ಬಿಹಾರ, ಮಣಿಪುರ ಹಾಗೂ ಮಿಜೋರಾಂ ರಾಜ್ಯಗಳ ಅತ್ಯಂತ ಬಡ ಕುಟುಂಬದ ವಿದ್ಯಾರ್ಥಿಗಳು ಇಂದು ಮುಖ್ಯವಾಹಿನಿಯಲ್ಲಿ ವಕೀಲರಾಗಿ ಗುರುತಿಸಿಕೊಂಡಿದ್ದಾರೆ. ಈ ಮಕ್ಕಳಲ್ಲಿ ರೈತರ ಮಕ್ಕಳು, ಕಲ್ಲುಕೋರೆಯಲ್ಲಿ ಕೆಲಸ ಮಾಡುವ ಕೂಲಿಯವರ ಮಗ, ಅಂಗಡಿಗಳಲ್ಲಿ ಮೂಟೆ ಹೊರುವವರ ಮಕ್ಕಳು, ಮಾಮೂಲಿ ಗುಮಾಸ್ತರ ಮಕ್ಕಳು ಇದ್ದಾರೆ. ಇವರೆಲ್ಲರಿಗೂ ಕಾನೂನು ಕಲಿಯುವುದು ವಾಸ್ತವದಲ್ಲಿ ದುರ್ಬರವಾಗಿತ್ತು. ಹಿಂದುಳಿದ ಸಮುದಾಯಗಳಿಂದ ಅತ್ಯಂತ ಪ್ರತಿಭಾವಂತ ಹಾಗೂ ಸಮರ್ಥ ವಕೀಲರನ್ನು ಹಾಗೂ ನ್ಯಾಯವಾದಿಗಳನ್ನು ತಯಾರಿಸುವುದು ಐಡಿಯಾದ ಗುರಿ. ಇದಕ್ಕಾಗಿ ದೇಶದ ಪ್ರಮುಖ ಕಾನೂನು ಕಲಿಕಾ ವಿವಿಗಳಲ್ಲಿ ನೋಂದಾವಣಿಗೊಳ್ಳುವ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪ್ರಾಯೋಜಕತ್ವ, ವಿದ್ಯಾರ್ಥಿವೇತನ ಹಾಗೂ ಶಿಷ್ಯವೇತನದ ಸೌಕರ್ಯಗಳನ್ನು ಬೇರೆ ಬೇರೆ ಮೂಲಗಳಿಂದ ಕಲ್ಪಿಸಿಕೊಡಲಾಗುತ್ತದೆ.

ಪಿ-ಪಿಐಎಲ್ ಒಂದು ವಿದ್ಯಾರ್ಥಿ ಹಾಗೂ ವಕೀಲರ ಅನೌಪಚಾರಿಕ ಸಂಘಟನೆ. ಇದು ಸಾರ್ವಜನಿಕ ಹಿತಾಸಕ್ತಿಯ ಕೆಲಸಗಳನ್ನು ಮಾಡುವ ಗುರಿ ಹೊಂದಿದೆ. ಐಡಿಯಾದ ಸೇವೆ ಹಾಗೂ ಸೌಕರ್ಯಗಳನ್ನು ಪಡೆದು ಸ್ವಯಂ ಸೇವಕರಾಗಿ ಅಥವಾ ವಕೀಲರಾಗಿರುವವರು ಪಿ-ಪಿಐಎಲ್ ನಲ್ಲಿ ಸಕ್ರಿಯರಾಗಬೇಕು. ಗುಣಾತ್ಮಕ ಹಾಗೂ ಜಾಗೃತಿ ಮೂಡಿಸುವಂತಹ ಸಾಕಷ್ಟು ಕೆಲಸಗಳ ಮೂಲಕ ಸಾರ್ವಜನಿಕರ ಹಕ್ಕುಗಳ ರಕ್ಷಣೆ ಮಾಡಿಸುವುದು, ಸರಳವಾಗಿ ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಮೂಡುವಂತೆ ಮಾಡುವುದೇ ಇದರ ಕೆಲಸ ಎಂದು ಮಾಹಿತಿ ನೀಡಿದ್ದಾರೆ ಪ್ರೊ.ಬಶೀರ್.

ಪಿ-ಪಿಐಎಲ್‌ನ ಕ್ಷೇತ್ರ ವ್ಯಾಪ್ತಿಯಲ್ಲಿ ಇವೆಲ್ಲವೂ ಇದೆ.

1. ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಾಲಯದ ಗಮನಕ್ಕೆ ತರುವುದು.

2. ವಿದೇಶದಲ್ಲಿ ಕೆಲಸಕ್ಕೆಂದು ಹೋಗಿ ನಾಪತ್ತೆಯಾದ ವ್ಯಕ್ತಿಗಳ ಕುಟುಂಬಗಳಿಗೆ ನೆರವು ನೀಡುವುದು, ಆ ವ್ಯಕ್ತಿಗಳ ಪತ್ತೆಗೆ ಗಮನಹರಿಸುವುದು, ಒಂದು ವೇಳೆ ಅವರು ಪತ್ತೆಯಾದರೆ ಅವರು ಅನುಭವಿಸಿದ ತೊಂದರೆಗೆ ಪರಿಹಾರಕ್ಕೆ ಒತ್ತಾಯಿಸುವುದು.

3. ಕ್ಲ್ಯಾಟ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಾಧ್ಯವಾದಷ್ಟು ಸರಳೀಕರಿಸಿ ಭವಿಷ್ಯದ ವಕೀಲರಿಗೆ ಶೈಕ್ಷಣಿಕ ಸಹಾಯ ನೀಡುವುದು.

4. ಅಂತರಾಷ್ಟ್ರೀಯ ಪ್ರಕಾಶಕರು ಯಾವ ಉನ್ನತ ವಿದ್ಯಾಭ್ಯಾಸದ ಸಂಪನ್ಮೂಲಗಳನ್ನು ವಿವರಿಸುವುದು ಕಷ್ಟ ಎಂದು ಬದಿಗೆ ಸರಿಸಿರುತ್ತಾರೋ ಅಂತಹ ವಿಷಯಗಳನ್ನು ಕೈಗೆತ್ತಿಕೊಂಡು ಸರಳೀಕರಿಸಿ ವಿವರಣೆ ನೀಡುವುದು.

ಬೆಂಗಳೂರಿನಲ್ಲಿ ಕಾನೂನು ಪದವಿ ಪಡೆದಿದ್ದ ಬಶೀರ್ ಭಾರತದ ಪ್ರಮುಖ ಐಪಿ ಸಂಸ್ಥೆ(ಇಂಟಲೆಕ್ಚುವಲ್ ಪ್ರಾಪರ್ಟಿ- ಅಂದರೆ ವೈಯಕ್ತಿಕ ಪ್ರತಿಭೆಗಳ ಸ್ವಾತಂತ್ರ್ಯ) ಹೊಂದಿರುವ ಆನಂದ್ ಎಂಡ್ ಆನಂದ್‌ಗೆ ಸೇರಿದರು. ಟೆಲಿ ಸಂಪರ್ಕ ಹಾಗೂ ತಂತ್ರಜ್ಞಾನಗಳ ಕಾನೂನು ಅಭ್ಯಾಸ ನಡೆಸಿದ ಅವರು ಐಎಫ್ಎಲ್ ಆರ್ ಸಂಸ್ಥೆಯ ಪ್ರಮುಖ ಕಾನೂನು ಸಲಹೆಗಾರರೂ ಆಗಿದ್ದರು. ಬಳಿಕ ತಮ್ಮ ಕಾನೂನು ಉನ್ನತ ಪದವಿ ಗಳಿಸಲು ಲಂಡನ್‌ನ ಆಕ್ಸ್‌ ಫರ್ಡ್ ಯೂನಿವರ್ಸಿಟಿಗೆ ತೆರಳಿದರು. ಅಲ್ಲಿ ಅವರು ಬಿಸಿಎಲ್, ಎಂಫಿಲ್, ಡಿಫಿಲ್ ಹಾಗೂ ಟ್ರಸ್ಟ್ ಸ್ಕಾಲರ್ ಫೆಲೋಶಿಪ್ ಪಡೆದುಕೊಂಡರು. ಜೂರಿಡಿಕಲ್ ಸೈನ್ಸ್ ವಿಭಾಗದ ರಾಷ್ಟ್ರೀಯ ವಿವಿಯಲ್ಲಿ(ಡಬ್ಲ್ಯು ಬಿ ಎನ್‌ಯುಜೆಎಸ್) ಮಾನವಸಂಪನ್ಮೂಲ ಅಭಿವೃದ್ಧಿ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕುಗಳ ವಿಷಯದಲ್ಲಿ ಮೊದಲ ಸಚಿವರಾಗಿ ಇತ್ತೀಚಿನವರೆಗೂ ಕಾರ್ಯನಿರ್ವಹಿಸಿದ್ದರು. ಅವರು ಪ್ರಸಿದ್ಧ ಇಂಟಲೆಕ್ಚುವಲ್ ಪ್ರಾಪರ್ಟಿ ಬ್ಲಾಗ್ “ಸ್ಪೈಸಿ ಐಪಿ” ಸಂಸ್ಥಾಪಕರೂ ಆಗಿದ್ದರು. ಈ ಬ್ಲಾಗ್‌ನಲ್ಲಿ ಭಾರತದ ಪ್ರಸಿದ್ಧ ವಕೀಲರುಗಳ ಬೌದ್ಧಿಕ ಹಕ್ಕುಗಳ ಕುರಿತಾದ ವಿವರಣೆಗಳನ್ನು ಬರೆಯಲಾಗುತ್ತಿತ್ತು. ಜೊತೆಗೆ ಇಂಟಲೆಕ್ಚುವಲ್ ಪ್ರಾಪರ್ಟಿಗೆ ಸಂಬಂಧಿಸಿದಂತೆ ಇರುವ ಕಾನೂನನ್ನು ಅಭಿವೃದ್ಧಿಪಡಿಸಿ ಪಾರದರ್ಶಕತೆ ತರಲು ಇದನ್ನು ಬಳಸಲಾಗುತ್ತಿತ್ತು.

ಈ ಸ್ಪೈಸಿ ಐಪಿಯ ಮೂಲಕ ನಾನು ಮಾಡಿದ ಅಭಿಯಾನದಿಂದ ಪ್ರಧಾನಿ ಸಚಿವಾಲಯದ ಕಚೇರಿಯಿಂದಲೂ ಅಮೂಲ್ಯವಾದ ಪೇಟೆಂಟ್‌ಗೆ ಸಂಬಂಧಿಸಿದ ವಿವರವಾದ ದಾಖಲಾತಿಗಳು(ತಂತ್ರಜ್ಞಾನ, ವೈಜ್ಞಾನಿಕ ಸಂಬಂಧಿ ಪೇಟೆಂಟ್) ಸಾರ್ವಜನಿಕರಿಗೆ ಸಿಗುವಂತಾಯಿತು. ಸ್ಪೈಸಿ ಐಪಿ ಕೇವಲ ಭಾರತದಲ್ಲಷ್ಟೇ ಅಲ್ಲದೇ ಅಂತರಾಷ್ಟ್ರೀಯವಾಗಿ ಅತ್ಯಂತ ಪ್ರಸಿದ್ಧಿ ಹೊಂದಿದ ಇಂಟಲೆಕ್ಚುವಲ್ ಪ್ರಾಪರ್ಟಿ ವಿಚಾರಕ್ಕೆ ಸಂಬಂಧಿಸಿದ ಬ್ಲಾಗ್ ಆಗಿದ್ದು ಪ್ರಪಂಚದ 50ಕ್ಕೂ ಹೆಚ್ಚು ಪರಿಣಿತ ಬೌದ್ಧಿಕ ಸ್ವಾತಂತ್ರ್ಯ ಹಕ್ಕುಗಳಿಗಾಗಿ ಹೋರಾಡುತ್ತಿರುವ ವಕೀಲರು ಇದರಲ್ಲಿ ಸಕ್ರಿಯರಾಗಿದ್ದಾರೆ. 2014ರಲ್ಲಿ ಎಂಐಪಿ ಅಂದರೆ ಮ್ಯಾನೇಜಿಂಗ್ ಇಂಟಲೆಕ್ಚುವಲ್ ಪ್ರಾಪರ್ಟಿ. ಈ ಹೆಸರಿನ ವಿಶ್ವದ ಪ್ರಸಿದ್ಧ ಐಪಿ ನಿಯತಕಾಲಿಕೆ ಸ್ಪೈಸಿ ಐಪಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿತು.

2014-15ರಲ್ಲಿ ಇನ್ಫೋಸಿಸ್ ಫೌಂಡೇಶನ್ ನೀಡುವ ಜ್ಯೂರಿ ಪ್ರಶಸ್ತಿಯನ್ನು ಪ್ರೊ.ಅಮರ್ತ್ಯಸೇನ್‌ರಿಂದ ಬಶೀರ್ ಸ್ವೀಕರಿಸಿದ್ದಾರೆ. ಬಶೀರ್ ಇಂಟಲೆಕ್ಚುವಲ್ ಪ್ರಾಪರ್ಟಿ ವಿಷಯಕ್ಕೆ ಸಂಬಂಧಿಸಿದಂತೆ ಕೈಗೊಂಡ ಸಂಶೋಧನೆ ಹಾಗೂ ನಿರಂತರ ಹೋರಾಟಕ್ಕೆ ಈ ಪ್ರಶಸ್ತಿ ಕೊಡಮಾಡಿತ್ತು. ಸಾಮಾಜಿಕ ನ್ಯಾಯ ವ್ಯವಸ್ಥೆಯಲ್ಲಿ ನಿರಂತರವಾಗಿ ಕಾನೂನು ಕಲಿಕೆಯಂತಹ ಮಹತ್ತರ ಸೇವೆಯನ್ನು ಬಡ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನೀಡುತ್ತಿರುವುದೂ ಸಹ ಬಶೀರ್‌ಗೆ ಕೊಡಲು ಇನ್ನೊಂದು ಕಾರಣ.

ವಿಕಲಚೇತನರಿಗೆ ಸಂಬಂಧಿಸಿದ ಕಾಪಿರೈಟ್ ಹಕ್ಕುಗಳ ಸ್ವಾತಂತ್ರ್ಯಕ್ಕಾಗಿಯೂ ಬಶೀರ್ ಧ್ವನಿಯೆತ್ತಿದ್ದರು. ವಿಕಲಚೇತನರು ಸರಳವಾಗಿ ಅರ್ಥಮಾಡಿಕೊಳ್ಳಬಲ್ಲ ಕಲಿಕಾ ಸಾಮಗ್ರಿ ಒದಗಿಸುವಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಸಾಮಾನ್ಯವಾಗಿ ಇದೊಂದು ಸವಾಲಿನ ಸಂಗತಿ. ಆದರೂ ಬಶೀರ್ ಈ ಹೋರಾಟಕ್ಕೆ ಮುಂದಾದರು. ವಿಕಲಚೇತನ(ಮುಖ್ಯವಾಗಿ ಕಣ್ಣಿನ ದೋಷ ಹೊಂದಿದವರು) ವಿದ್ಯಾರ್ಥಿಗಳು ಶೇ.90ರಷ್ಟು ಬೋಧನಾಸಾಮಗ್ರಿಗಳನ್ನು ಓದಲು ವಿಫಲರಾಗುವ ಮುದ್ರಿತ ಪುಸ್ತಕಗಳ ವಿರುದ್ಧ ಬಶೀರ್ ಧ್ವನಿಯೆತ್ತಿದರು.

ಸಾಮಾನ್ಯ ಜನರಿಗೆ ಸರಳವಾಗಿ ಅರ್ಥವಾಗುವಂತೆ ಕಾನೂನಿನ ತಿದ್ದುಪಡಿಗಳನ್ನು ಹಾಗೂ ಕಾಯ್ದೆಗಳನ್ನು ಸರಳೀಕರಿಸಬೇಕು ಹಾಗೂ ಬೌದ್ಧಿಕ ಹಕ್ಕುಗಳ ಸ್ವಾತಂತ್ರ್ಯದ ಮಹತ್ವವನ್ನು ಸಾರ್ವಜನಿಕರಿಗೆ ಅರ್ಥ ಮಾಡಿಸಬೇಕೆಂಬ ಕಳಕಳಿ ಬಶೀರ್‌ಗೆ ಇದೆ. ಜ್ಞಾನಕ್ಕೆ ಸಂಬಂಧಪಟ್ಟಂತೆ ನಿಯಮಾವಳಿಗಳನ್ನು ರೂಪಿಸುವುದು ಇಂದಿನ ಅತೀ ಮುಖ್ಯ ಬದಲಾವಣೆಯಾಗಬೇಕಿದೆ. ಬೌದ್ಧಿಕ ಸ್ವಾತಂತ್ರ್ಯದ ಹಕ್ಕಿನ ವಿಚಾರದಲ್ಲೇ ಹಿಂದುಳಿದ ವರ್ಗಗಳಿಗೂ ಸಮಾನ ಕಲಿಕೆಯ ಸ್ವಾತಂತ್ರ್ಯ ಪ್ರಸ್ತಾಪವೂ ಇದೆ. ಸಾಮಾಜಿಕ ವ್ಯವಸ್ಥೆಯಲ್ಲಿ ತಮ್ಮ ಶೈಕ್ಷಣಿಕ ಹಕ್ಕುಗಳನ್ನು ಪಡೆದುಕೊಳ್ಳುವುದು ಪ್ರತಿಯೊಬ್ಬ ಹಿಂದುಳಿದ ವಿದ್ಯಾರ್ಥಿಗಳ ಆದ್ಯತೆ ಎನ್ನುವುದು ಬಶೀರ್‌ರ ಅಭಿಮತ.

ಪ್ರೊ.ಬಶೀರ್ ತಿರುವನನಂತಪುರಂನಿಂದ 3 ಗಂಟೆಗಳ ಪ್ರಯಾಣದ ಬಳಿಕ ಸೇರಬಹುದಾದ ಕುಲತುಪುಝಾ ಎಂಬಲ್ಲಿ ಶಾಲೆಯೊಂದನ್ನು ನಡೆಸುತ್ತಿದ್ದಾರೆ. ಶಿಕ್ಷಕರ ಮಗನಾದ ಬಶೀರ್ ವಿದ್ಯಾದಾನದಂತಹ ಮಹತ್ತರ ಕೆಲಸದೊಂದಿಗೆ ಸದಾಕಾಲ ಸಂಚರಿಸುತ್ತಾ ಕಾನೂನು ಅರಿವು ಮೂಡಿಸುವ ಪ್ರವೃತ್ತಿಯನ್ನು ಹೊಂದಿದ್ದಾರೆ.

ಜನಗಳನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಸದಾ ಯೋಚಿಸುವ ನನಗೆ ಆತ್ಮಕಥೆಗಳು ಇಷ್ಟವಾಗುತ್ತವೆ. ಅಮೆರಿಕಾದ ದಂತಕಥೆ ಲೌರಾ ಹಿಲನ್ ಬ್ರಾಂಡ್‌ರ ಆತ್ಮಕಥೆ ಸೀ ಬಿಸ್ಕಟ್ ನನ್ನ ನೆಚ್ಚಿನ ಪುಸ್ತಕ ಎಂದು ಶಮ್ನದ್ ಬಶೀರ್ ಹೇಳುತ್ತಾರೆ. ಬೌದ್ಧ ಸಾಹಿತ್ಯದ ಜೊತೆಗೆ ಆಧ್ಯಾತ್ಮಿಕ ಹಾಗೂ ತರ್ಕಶಾಸ್ತ್ರ ಅವರ ಇನ್ನುಳಿದ ಮೆಚ್ಚಿನ ವಿಷಯಗಳು. ಕಾಲೇಜು ಕಲಿಕೆಯ ದಿನಗಳಲ್ಲಿ ಅವರು ಸದಾ ಹಾಕಿ ಹಾಗೂ ಫುಟ್‌ಬಾಲ್ ಆಡುತ್ತಿದ್ದರಂತೆ. ಜೆನ್ ಬುದ್ಧಿಸಂ ಅನ್ನು ಹಿಂಬಾಲಿಸಿದರೂ ಶಮ್ನದ್ ಯೋಜನೆಗಳನ್ನು ರೂಪಿಸುವಲ್ಲಿ ನಂಬಿಕೆಯಿಟ್ಟುಕೊಂಡಿಲ್ಲ. ನೀವೆಷ್ಟೇ ಪೂರ್ವನಿರ್ಧಾರಿತವಾಗಿ ಯೋಜನೆಗಳನ್ನು ರೂಪಿಸಿದರೂ, ನಿಮ್ಮ ಬದುಕು ವಿಭಿನ್ನ ಹಾಗೂ ನಿಮಗೆ ಪರಿಚಯವೇ ಇಲ್ಲದ ಯೋಜನೆಯೊಂದನ್ನು ನಿಮ್ಮ ಮುಂದಿಡುತ್ತದೆ ಎನ್ನುವ ತಾರ್ಕಿಕ ವಾಕ್ಯದೊಂದಿಗೆ ಮಾತು ಮುಗಿಸ್ತಾರೆ ಪ್ರೊ.ಬಶೀರ್.