ಪುಸ್ತಕ ಪ್ರೇಮಿಗಳೇ ಸ್ಥಾಪಿಸಿದ ಪ್ರಾದೇಶಿಕ ಭಾಷೆಗಳ ಲೈಬ್ರರಿ

ಟೀಮ್​​ ವೈ.ಎಸ್​​.

0

ಪುಸ್ತಕ ಪ್ರೇಮಿಗಳಾದ ನಿವೇತಾ ಪದ್ಮನಾಭನ್, ರಾಜೇಶ್ ದೇವದಾಸ್ ಮತ್ತು ಪ್ರಸನ್ನ ದೇವದಾಸ್ ಅವರು ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಪುಸ್ತಕಗಳನ್ನು ತುಂಬಾ ಓದುತ್ತಿದ್ದ ಇವರು, ತಮಿಳು ಸಾಹಿತ್ಯದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಭಾಷಾ ಪುಸ್ತಕಗಳ ಬೃಹತ್ ಸಂಗ್ರಹ ಎಲ್ಲಿದೆ ಎಂದು ಇಡೀ ಬೆಂಗಳೂರು ಹುಡುಕಾಡಿದ್ದರು. ಆದರೆ ಅವರಿಗೆ ಅಗತ್ಯವಾಗಿ ಬೇಕಾಗಿದ್ದ ಪುಸ್ತಕಗಳು ಎಲ್ಲಿಯೂ ಸಿಗುತ್ತಿರಲಿಲ್ಲ. “ಕೆಲವೊಂದು ಲೈಬ್ರರಿಗಳಲ್ಲಿ ಪುಸ್ತಕಗಳು ಇದ್ದವು. ಆದರೆ ಜನಸಾಮಾನ್ಯರ ಕೈಗೆ ಎಟಕುವ ದರದಲ್ಲಿ ಅವು ಸಿಗುತ್ತಿರಲಿಲ್ಲ. ಅಲ್ಲದೆ ಸಂಗ್ರಹವೂ ದೊಡ್ಡದಿರಲಿಲ್ಲ,” ಎನ್ನುತ್ತಾರೆ ನಿವೇತಾ.

ಈ ಮೂವರೂ ಕೂಡಾ ತಮಿಳು ಸಾಹಿತ್ಯವನ್ನು ಓದುತ್ತಲೇ ಬೆಳೆದವರು. ತಮಿಳು ಪುಸ್ತಕ ಪ್ರೇಮಿಗಳು ಏನು ಬಯಸುತ್ತಾರೆ ಎನ್ನುವುದರ ಅರಿವೂ ಇವರಿಗೆ ಚೆನ್ನಾಗಿತ್ತು. ಅವರು ಜೊತೆಯಾಗಿ ಕುಳಿತು ಒಂದು ಲೈಬ್ರರಿಯಲ್ಲಿ ಇರಬೇಕಾದ ತಮಿಳು ಲೇಖಕರ ಪಟ್ಟಿ, ಅವರ ಪುಸ್ತಕಗಳ ಪಟ್ಟಿಯನ್ನು ಮಾಡಿದರು. ಈ ಪಟ್ಟಿಯೊಂದಿಗೆ ಹುಟ್ಟಿಕೊಂಡಿದ್ದೇ ಪುಸ್ತಕ. ಸಧ್ಯ ಮೂವರೂ ತಮ್ಮ ಐಟಿ ಉದ್ಯೋಗಗಳನ್ನು ಮುಂದುವರಿಸಿದ್ದಾರೆ. ಅದರಲ್ಲಿ ಬರುವ ಸಂಬಳದಿಂದ ಪುಸ್ತಕಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಸಧ್ಯಕ್ಕೆ ಮನೆಯನ್ನೇ ಲೈಬ್ರರಿ ಮಾಡಿಕೊಂಡಿದ್ದು, ಪುಸ್ತಕಗಳನ್ನು ಅಲ್ಲೇ ಸಂಗ್ರಹಿಸಿ ಇಡುತ್ತಿದ್ದಾರೆ.

ಈ ಡಿಜಿಟಲ್ ಯುಗದಲ್ಲೂ ಸಾಂಸ್ಥಿಕ ಲೈಬ್ರರಿ ಆರಂಭಿಸಿದ್ದು ಯಾಕೆ ಎನ್ನುವುದು ಎಲ್ಲರಿಗೂ ಅಚ್ಚರಿಯಾದೀತು. “1980ರ ದಶಕದಲ್ಲಿ ಬೇಸಿಗೆ ರಜೆಯಲ್ಲಿ ಸಂಪಾದಿಸಿ ಪಾಕೆಟ್ ಮನಿಯನ್ನು ಮಕ್ಕಳು ಚಂಪಕ, ಅಂಗುಲಿಮಾಲಾ, ಚಂದಮಾಮ ಮತ್ತು ಅಮರಚಿತ್ರಕಥೆಗಳನ್ನು ಖರೀದಿಸಲು ಬಳಸುತ್ತಿದ್ರು. 2013ರ ಬಳಿಕ, ಎಲ್ಲರೂ ಡಿಜಿಟಲ್ ಮಾಧ್ಯಮದ ಬಗ್ಗೆ ಮಾತನಾಡುತ್ತಿದ್ದಾರೆ. ಇ-ಬುಕ್ ಗಳೇ ಈಗ ಎಲ್ಲರ ಫೇವರಿಟ್. ಈಗಿನ ಬ್ಯುಸಿ ಯುಗದಲ್ಲಿ ಪುಸ್ತಕಗಳನ್ನು ಖರೀದಿಸಿ ಓದುವಷ್ಟು ತಾಳ್ಮೆ, ಸಮಯ ಯಾರ ಬಳಿಯೂ ಇರುವುದಿಲ್ಲ ಎಂದೆಲ್ಲಾ ಮಾತನಾಡುತ್ತಾರೆ. ಆದರೆ, ನಿಜವೇನೆಂದರೆ, ಪುಸ್ತಕ ಮಾರಾಟ ಮತ್ತು ಪ್ರದರ್ಶನ ಮೇಳಗಳಲ್ಲಿ ವರ್ಷದಿಂದ ವರ್ಷಕ್ಕೆ ಪುಸ್ತಕ ಮಾರಾಟದ ಪ್ರಮಾಣ ಹೆಚ್ಚುತ್ತಲೇ ಇದೆ,” ಎನ್ನುತ್ತಾರೆ ನಿವೇತಾ ಮತ್ತು ತಂಡ.

ಲೈಬ್ರರಿ ಸ್ಥಾಪನೆಯ ಮುಖ್ಯ ಉದ್ದೇಶವೇ ಜನರನ್ನು ಪ್ರಾದೇಶಿಕ ಭಾಷಾ ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸುವುದು. “ಈಗಿನ ದಿನಗಳಲ್ಲಿ, ಜನರು ಉದ್ಯೋಗ ನಿಮಿತ್ತ ತಮ್ಮ ಹುಟ್ಟೂರು ಬಿಟ್ಟು ಬೇರೆ ರಾಜ್ಯಗಳಿಗೆ ಹೋಗಿ ನೆಲೆಸುತ್ತಾರೆ. ಇಂತಹ ಸಂದರ್ಭದಲ್ಲಿ ನಾವು ನಮ್ಮ ಕುಟುಂಬ, ಗೆಳೆಯರು, ಮನೆ ತಿಂಡಿ ಹೀಗೆ ಹಲವು ವಿಚಾರಗಳನ್ನು ಮಿಸ್ ಮಾಡಿಕೊಳ್ಳುತ್ತೇವೆ. ನಮ್ಮ ಭಾಷೆಯಲ್ಲಿನ ಪುಸ್ತಕಗಳನ್ನು ಓದುವುದು ಕೂಡಾ ಈ ಪಟ್ಟಿಯಲ್ಲಿ ಒಂದು,” ಎನ್ನುತ್ತಾರೆ ರಾಜೇಶ್.

ಲೈಬ್ರರಿಯಲ್ಲಿ ಈಗ 100ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಲೈಬ್ರರಿಯಲ್ಲಿ ಲಭ್ಯವಿರುವ ಎಲ್ಲಾ ಪುಸ್ತಕಗಳನ್ನು ವೆಬ್​​​ಸೈಟ್​​ನಲ್ಲಿ ನಿಯಮಿತವಾಗಿ ಅಪ್ಡೇಟ್ ಮಾಡಲಾಗುತ್ತದೆ. “ಸಾರ್ವಜನಿಕ ಸ್ಥಳಗಳಲ್ಲಿ ಲೈಬ್ರರಿ ಆರಂಭಿಸುವುದರಿಂದ ದೊಡ್ಡ ಮೊತ್ತವನ್ನು ಬಾಡಿಗೆ ರೂಪದಲ್ಲಿ ನೀಡಬೇಕಾಗುತ್ತದೆ, ನಿರ್ವಹಣಾ ವೆಚ್ಚವೂ ಹೆಚ್ಚಾಗುತ್ತದೆ. ಮನೆಯಲ್ಲೇ ಸಂಗ್ರಹಿಸುವುದರಿಂದ ಕಡಿಮೆ ದರದಲ್ಲಿ ನಾವು ಸದಸ್ಯರಿಗೆ ಪುಸ್ತಕಗಳನ್ನು ಕೊಡಲು ಸಾಧ್ಯವಾಗುತ್ತಿದೆ,” ಎನ್ನುತ್ತಾರೆ ಪ್ರಸನ್ನ. ತಮ್ಮ ಸಂಗ್ರಹವನ್ನು ಇನ್ನಷ್ಟು ವಿಸ್ತರಿಸುವ ಯೋಚನೆಯಲ್ಲಿರುವ ಈ ತ್ರಿಮೂರ್ತಿಗಳು, ಭಾಷಾ ಸಾಹಿತ್ಯವನ್ನು ಡಿಜಿಟಲೀಕರಿಸುವ ಯೋಜನೆಯನ್ನೂ ರೂಪಿಸುತ್ತಿದ್ದಾರೆ. ಆನ್​​​ಲೈನ್ ಮತ್ತು ಆಫ್​ಲೈನ್ ಲೈಬ್ರರಿಗಳ ಮಧ್ಯೆ ನಡೆಯುತ್ತಿರುವ ಸಮರ, ಇಂತಹ ಆರೋಗ್ಯಕರ ಪೈಪೋಟಿಯಿಂದ ಮತ್ತಷ್ಟು ಕಾಲ ವಿಸ್ತರಿಸಲಿದೆ.

Related Stories

Stories by YourStory Kannada